ಭಜ ಗೋವಿಂದಂ - ಕನ್ನಡ ಪದ್ಯಾನುವಾದ

ಆದಿ ಶಂಕರ ಮತ್ತು ಶಿಷ್ಯರು ರಚಿಸಿದ

ಭಜ ಗೋವಿಂದಂ

(ಮೋಹಮುದ್ಗರ)

ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ

"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ.

ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ.  ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ.

ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ.  ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು.

ಇದರ ಸರಳ ಕನ್ನಡ ಅನುವಾದ ಇಲ್ಲಿದೆ, ಪದ್ಯರೂಪದಲ್ಲಿ.

ಕಂತು ೧: ನುಡಿ ೧ – ೧೩,
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು

ಕಂತು ೨: ನುಡಿ ೧೪ – ೨೭ : ಚತುರ್ದಶ ಮಂಜರಿಕಾ

ಕಂತು ೩: ನುಡಿ ೨೮ – ೩೧ : ಉಪಸಂಹಾರ

 

ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ: 

ಡುಕೃಂಕರಣೇ: 

ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ. 

ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು:

ಮೂಢಮತೇ : 

ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟುಬಿಡುವುದೂ ಸರಿ ಅಲ್ಲ; ಅನುವಾದ ಅಂದರೆ (ಪದಶಃ ಅಲ್ಲದಿದ್ದರೂ) ಮೂಲಕ್ಕೆ ಆದಷ್ಟು ಬದ್ಧವಾಗಿರಬೇಕು. ಎರಡನೆಯದಾಗಿ, ಮಂದ ಎನ್ನುವುದು ಮೂಢ ಪದಕ್ಕೆ ಅನ್ವರ್ಥ ಪದ ಆದರೂ ಬೇರೆ ಅರ್ಥವೂ (slow, dull, dim...) ಬರಬಹುದು, ಅಲ್ಲದೆ, ಒಂದು ಸಂಸ್ಕೃತ ಪದಕ್ಕೆ ಬದಲಾಗಿ (ಕಾರಣ ಇಲ್ಲದೆ) ಇನ್ನೊಂದು ಸಂಸ್ಕೃತ ಪದ ಹಾಕಿದರೆ ಅದಕ್ಕೆ ಕನ್ನಡ ಅನುವಾದ ಏಕೆ ಅನ್ನಬೇಕು?


ಬಿತ್ತರಿಕೆ, ಫೆಬ್ರುವರಿ-ಮಾರ್ಚ, ೨೦೨೫

ಏನಂತೀರಿ?

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.