ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಭಜ ಗೋವಿಂದಂ
(ಮೋಹಮುದ್ಗರ)
ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ
ಕಂತು ೧: ನುಡಿ ೧ – ೧೩,
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು
ಕಂತು ೨: ನುಡಿ ೧೪ – ೨೭ : ಚತುರ್ದಶ ಮಂಜರಿಕಾ
ಕಂತು ೩: ನುಡಿ ೨೮ – ೩೧ : ಉಪಸಂಹಾರ
ಮೋಹಮುದ್ಗರ ಭಜ ಗೋವಿಂದಂ ಮೂಲ: ಆದಿ ಶಂಕರ |
ಮರುಳಿಗೆ ಮದ್ದು ನೆನೆ ಗೋವಿಂದನ ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ |
|
ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ; ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನ ಹಿ ನ ಹಿ ರಕ್ಷತಿ ಡುಕೃಂಕರಣೇ. |
೧ |
ನೆನೆ ಗೋವಿಂದನ, ನೆನೆ ಗೋವಿಂದನ, ಗೋವಿಂದನ ನೆನೆ ನೀ ಮರುಳಮತಿ; ಕೊನೆಯಲಿ ಬಂದಿರೆ ನಿಗದಿತ ಕಾಲವು ಉಳಿಸದು ನಿನ್ನನು ಈ ಹೊರ ತಿಳಿವು. |
ಮೂಢ ಜಹೀಹಿ ಧನಾಗಮತೃಷ್ಣಾಂ ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ; ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಂ. |
೨ |
ಸಿರಿಯನು ಗಳಿಸುವ ದಾಹವನಿಂಗಿಸು; ಒಳ್ಳಿತ್ತಿಳಿವಿಂ ಮನವನು ತಣಿಸು; ದುಡಿತದಿ ದೊರೆತುದೆ ನಿಜ ಫಲ ಎನ್ನುತ ಮನವನು ಮೋಜಿಸು ನೀ ಅದರಲ್ಲೆ. |
ನಾರೀಸ್ತನಭರನಾಭೀದೇಶಂ ದೃಷ್ಟ್ವಾ ಮಾ ಗಾ ಮೋಹಾವೇಶಂ; ಏತನ್‌ಮಾಂಸವಸಾದಿವಿಕಾರಂ ಮನಸಿ ವಿಚಿಂತಯ ವಾರಂ ವಾರಂ. |
೩ |
ಹೆಣ್ಣಿನ ಮೊಲೆ ಹೊಕ್ಕುಳ ಸುಳಿ ನೋಡಲು ಸೆಳೆಯುವ ಮೋಹದಿ ನೀ ಬೀಳದಿರು; ಮಾಂಸದ ಮುದ್ದೆಯು, ಜಿಡ್ಡಿನ ಗುಡ್ಡೆಯು ಎನ್ನುವುದನು ನೆನೆ ನೀ ತಿರುತಿರುಗಿ. |
ನಲಿನೀದಲಗತಜಲಮತಿತರಲಂ, ತದ್ವಜ್ಜೀವಿತಮತಿಶಯಚಪಲಂ; ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ ಲೋಕಂ ಶೋಕಹತಂ ಚ ಸಮಸ್ತಂ. |
೪ |
ಕಮಲೆಲೆ ಮೇಲಿನ ನೀರಿನ ತೆರದಲಿ ಚಣಿಕವು ಬಾಳುವೆ, ಅಸ್ಥಿರ ಇರವು. ಅಳಲಿನ ಎಣ್ಣೆಯ ಹೊಯ್ದಿಹ ಜಗವನು ಸುಡುತಿವೆ ರೋಗಾಹಂಕಾರಗಳು. |
ಯಾವದ್ವಿತ್ತೋಪಾರ್ಜನಸಕ್ತಃ ತಾವನ್ನಿಜಪರಿವಾರೋ ರಕ್ತಃ; ಪಶ್ಚಾಜ್ಜೀವತಿ ಜರ್ಜರದೇಹೇ ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ. |
೫ |
ಜೀವಿತ ಗಳಿಸುವ ಬಲವಿರುವನ್ನಕ ಎಲ್ಲರು ನೆಂಟರು, ಊರೇ ಬಳಗ. ಕುಂದಿದ ಮುದಿ ಕಾಯವ ನೀ ಹೊಂದಲು ಮನೆಯೊಳಗಾರೂ ಕೇಳಲು ಇಲ್ಲ! |
ಯಾವತ್ ಪವನೋ ನಿವಸತಿ ದೇಹೇ ತಾವತ್ ಪೃಚ್ಛತಿ ಕುಶಲಂ ಗೇಹೇ; ಗತವತಿ ವಾಯೌ ಘೇಹಾಪಾಯೇ ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ. |
೬ |
ಒಡಲೊಳು ಹರಣವು ಹರಿಯುವವರೆಗೂ "ಕುಶಲವೆ?" ಎನುವರು ಮನೆಯಲ್ಲೆಲ್ಲ. ಹರಣವು ತೆರಳಲು ಕೊಳೆಯುವ ಕಾಯಕೆ ಹೆದರುವಳೊಲವಿನ ಮಡದಿಯು ಕೂಡ. |
ಬಾಲಸ್ತಾವತ್ ಕ್ರೀಡಾಸಕ್ತಃ, ತರುಣಸ್ತಾವತ್ ತರುಣೀಸಕ್ತಃ, ವೃದ್ಧಸ್ತಾವಚ್ಚಿಂತಾಸಕ್ತಃ; ಪರಮೇ ಬ್ರಹ್ಮಣಿ ಕೋಽಪಿ ನ ಸಕ್ತಃ. |
೭ |
ಹುಡುಗಗೆ ಪರಿಪರಿ ಆಟದ ಚಿಂತನೆ, ತರುಣಿಯ ಚಿಂತನೆ ತರುಣನಿಗಿರಲು ಮುದುಕಗೆ ಇಲ್ಲದ ಚಿಂತೆಯ ಚಿಂತನೆ; ಯಾರಿಗು ಇಲ್ಲವೊ ಪರಮದ ಪರಿವೆ! |
ಕಾ ತೇ ಕಾಂತಾ? ಕಸ್ತೇ ಪುತ್ರಃ? ಸಂಸಾರೋಽಯಮತೀವ ವಿಚಿತ್ರಃ! ಕಸ್ಯ ತ್ವಂ? ಕಃ ಕುತ ಆಯಾತಃ? ತತ್ತ್ವಂ ಚಿಂತಯ ತದಿಹ ಭ್ರಾತಃ. |
೮ |
ಮಡದಿಯು ಯಾವಳು? ಯಾರೀ ಮಕ್ಕಳು? ವಿಚಿತ್ರವಲ್ಲವೆ ಈ ಸಂಸಾರ! ಬಂದುದು ಎಲ್ಲಿಂದಾರಿಗೆ ಸೇರಿಹೆ? ಯೋಚಿಸು, ಗೆಳೆಯನೆ, ನೀನಿದನೆಲ್ಲ. |
ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲತತ್ವಂ, ನಿಶ್ಚಲತತ್ವೇ ಜೀವನ್ಮುಕ್ತಿಃ. |
೯ |
ಸಜ್ಜನ ಸಂಗದಿ ಬೆಸುಗೆಯು ಕರಗಲು, ಹರಿವುದು ಮರುಳಿನ ದಪ್ಪನ ಪೊರೆಯು ಒಡನೆಯೆ ಕಾಣುವಿ ಅಲುಗದ ನೆಲೆಯನು : ಬದುಕಲೆ ಬಿಡುಗಡೆ ಆ ನೆಲೆಯಿಂದೆ. |
ವಯಸಿ ಗತೇ ಕಃ ಕಾಮವಿಕಾರಃ? ಶುಷ್ಕೇ ನೀರೇ ಕಃ ಕಾಸಾರಃ? ಕ್ಷೀಣೇ ವಿತ್ತೇ ಕಃ ಪರಿವಾರಃ? ಜ್ಞಾತೇ ತತ್ತ್ವೇ ಕಃ ಸಂಸಾರಃ? |
೧೦ |
ಹರೆಯವು ಇಳಿದಿರೆ ಕಾಮನ ಆಟವೆ? ನೀರೇ ಒಣಗಿರೆ ಎಲ್ಲಿಯ ಕೊಳವು? ಸಿರಿತನ ಸವೆಯಲು ಬಂಧುಗಳುಳಿವರೆ? ತಿಳಿಯಮೆ ಅಳಿಯಲು ಬಾಳಿನ ಗೋಳೆ? |
ಮಾ ಕುರು ಧನ ಜನ ಯೌವನ ಗರ್ವಂ; ಹರತಿ ನಿಮೇಷಾತ್ಕಾಲಃ ಸರ್ವಂ. ಮಾಯಾಮಯಮಿದಮಖಿಲಂ ಹಿತ್ವಾ, ಬ್ರಹ್ಮಪದಂ ತ್ವಂ ಪ್ರವಿಶ, ವಿದಿತ್ವಾ. |
೧೧ |
ಕಿಂಕರ ವಯ ಸಿರಿ ಇವೆ ಎನೆ ಬಿಂಕವೆ? ನಿಮಿಷದಿ ಕಾಲವು ಅಳಿಯುವುದವನು. ಚಣಿಕವು ಮಾಯೆಯ ಜಗವಿದು ಎಂದರಿ; ಬ್ರಹ್ಮವನರಿ, ನೀ ಹೊಗು ಅದರಲ್ಲಿ. |
ದಿನಯಾಮಿನ್ಯೌ, ಸಾಯಂ ಪ್ರಾತಃ, ಶಿಶಿರವಸಂತೌ ಪುನರಾಯಾತಃ; ಕಾಲಃ ಕ್ರೀಡತಿ ಗಚ್ಛತ್ಯಾಯುಃ; ತದಪಿ ನ ಮುಂಚತ್ಯಾಶಾವಾಯುಃ. |
೧೨ |
ಹಗಲೂ ಇರುಳೂ ಬೈಗೂ ಬೆಳಗೂ ಋತುಗಳು ತಿಥಿಗಳು ಬರುವವು ಮತ್ತೆ. ಕಾಲದ ಆಟದಿ ಸಮೆದರು ಜೀವನ ಇಳಿಯದು ಎನಿತೂ ಬಯಕೆಯ ರಭಸ. |
ಕಾ ತೇ ಕಾಂತಾ? ಧನಗತಚಿಂತಾ? ವಾತುಲ ಕಿಂ, ತವ ನಾಸ್ತಿ ನಿಯಂತಾ? ತ್ರಿಜಗತಿ, ಸಜ್ಜನಸಂಗತಿರೇಕಾ ಭವತಿ ಭವಾರ್ಣವತರಣೇ ನೌಕಾ. |
೧೩ |
ಮಡದಿಯ, ಮಕ್ಕಳ, ದುಡ್ಡಿನ ಚಿಂತೆಯೆ? ಕದಡಿದ ಮನ, ನಿನಗೊಡೆಯನು ಯಾರು? ಮೂಜಗದಲು ಒಳ್ಳೆಯರೊಡನಾಟವೆ ಬಾಳಿನ ಕಡಲನು ದಾಟಲು ನಾವೆ. |
ಬಿತ್ತರಿಕೆ, ಫೆಬ್ರುವರಿ ೧೦, ೨೦೨೫
ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಮೋಹಮುದ್ಗರ
( ಅಥವಾ, ಭಜ ಗೋವಿಂದಂ,.)
ಕಂತು ೧: ನುಡಿ ೧ ರಿಂದ ೧೩
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು.
ನೆನೆ ಗೋವಿಂದನ
ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ
ಸಂಪರ್ಕ.: ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್ :
ನಾನು, ಸಪ್ನಾ ಗೂಗ್ಲೇ.