ಭಜ ಗೋವಿಂದಂ - ಕಂತು ೨

ಆದಿ ಶಂಕರ ಮತ್ತು ಶಿಷ್ಯರು ರಚಿಸಿದ

ಭಜ ಗೋವಿಂದಂ - ಕಂತು ೨

(ಮೋಹಮುದ್ಗರ)

ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ

 

ಕಂತು ೧: ನುಡಿ ೧ – ೧೩,
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು

ಕಂತು ೨: ನುಡಿ ೧೪ – ೨೭ : ಚತುರ್ದಶ ಮಂಜರಿಕಾ

ಕಂತು ೩: ನುಡಿ ೨೮ – ೩೧ : ಉಪಸಂಹಾರ

 

 

ಮೋಹಮುದ್ಗರ‌ 
ಭಜ ಗೋವಿಂದಂ 
ಮೂಲ: ಆದಿ ಶಂಕರ

 

 ಮರುಳಿಗೆ ಮದ್ದು 
ನೆನೆ ಗೋವಿಂದನ 
ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ

ಜಟಿಲೋ ಮುಂಡೀ, ಲುಂಚಿತಕೇಶಃ,  
   ಕಾಷಾಯಾಂಬರಬಹುಕೃತವೇಷಃ, 
ಪಶ್ಯನ್ನಪಿ ಚ ನ ಪಶ್ಯತಿ, ಮೂಢಃ. 
   ಉದರನಿಮಿತ್ತಂ ಬಹುಕೃತವೇಷಃ!
೧೪ ಜಡೆಯನು ಬಿಡೆ, ಬೋಳಿಸೆ, ಯಾ ಕಿತ್ತಿರೆ, 
    ಕಾವಿಯ ಬಟ್ಟೆಯ ತೊಟ್ಟಿರೆ ಏನು?  
ಕಂಡರು ಕಾಣದೆ ಇರುವನು ಮರುಳನು.  
    ಹೊಟ್ಟೆಯ ಪಾಡಿಗೆ ಹಲ ಬಗೆ ಸೋಗು!
ಅಂಗಂ ಗಲಿತಂ, ಪಲಿತಂ ಮುಂಡಂ, 
   ದಶನವಿಹೀನಂ ಜಾತಂ ತುಂಡಂ,  
ವೃದ್ಧೋ, ಯಾತಿ ಗೃಹೀತ್ವಾ ದಂಡಂ; 
   ತದಪಿ ನ ಮುಂಚತ್ಯಾಶಾಪಿಂಡಂ.
೧೫ ಇಳಿದಿದೆ ಕಾಯವು, ನೆರೆದಿವೆ ಕೂದಲು,  
    ಬೋಡಾಗಿದೆ ಬಾಯ್ ಹಲ್ಲುಗಳುದುರಿ;  
ಕೈಯಲಿ ಬಡಿಗೆಯು, ಮುದಿ ಜೋಲ್ ನಡಿಗೆಯು;   
    ಆದರು ಒಡೆಯದು ಬಯಕೆಯ ಗಡಿಗೆ.
ಅಗ್ರೇ ವಹ್ನಿಃ, ಪೃಷ್ಠೇಭಾನುಃ, 
    ರಾತ್ರೌ ಚುಬುಕಸಮರ್ಪಿತಜಾನುಃ; 
ಕರತಲಭಿಕ್ಷಸ್ತರುತಲವಾಸಃ;  
   ತದಪಿ ನ ಮುಂಚತ್ಯಾಶಾಪಾಶಃ.
೧೬ ಮುಂಗಡೆ ಬೆಂಕಿಯು, ಹಿಂಗಡೆ ನೇಸರ;  
    ಇರುಳಿಡಿ ಮೊಳಕಾಲ್ ಮೇಗಡೆ ಗದ್ದ; 
ಕರದಲಿ ತಿರುಪೆಯು, ಮರದಡಿ ವಸತಿಯು; 
    ಆದರು ಬಿಗಿವುದು ಬಯಕೆಯ ಹಗ್ಗ.
ಕುರುತೇ ಗಂಗಾಸಾಗರಗಮನಂ, 
   ವ್ರತಪರಿಪಾಲನಮಥವಾ ದಾನಂ; 
ಜ್ಞಾನವಿಹಿನಃ, ಸರ್ವಮತೇನ, 
   ಭಜತಿ ನ ಮುಕ್ತಿಂ, ಜನ್ಮಶತೇನ.
೧೭ ಗಂಗೆಯು ಕಡಲಲಿ ಇಳಿವೆಡೆ ಯಾತ್ರೆಯು, 
    ನೋಂಪಿಯ ಪಾಲನೆ, ಬಿಡುಗೈ ಕೊಡುಗೆ;  
ಆದರು ನೈಜದ ಸರಿ ತಿಳಿವಿರದಿರೆ 
    ನೂರೇಳ್ ಹುಟ್ಟಿಗು ಬಿಡುಗಡೆ ಉಂಟೆ?
ಸುರಮಂದಿರ, ತರುಮೂಲ ನಿವಾಸಃ,  
   ಶಯ್ಯಾ ಭೂತಲಮಜಿನಂ ವಾಸಃ,  
ಸರ್ವ ಪರಿಗ್ರಹ ಭೋಗ ತ್ಯಾಗಃ,  
   ಕಸ್ಯ ಸುಖಂ ನ ಕರೋತಿ ವಿರಾಗಃ?
೧೮ ದೇವರ ಗುಡಿ, ಗಿಡ ಬುಡದಲಿ ಬಿಡದಿಯು;  
    ತೊಗಲಿನ ಉಡುಗೆಯು; ನಿದ್ದೆಯು ನೆಲದಿ -    
ಊಡುವ, ಪಡೆಯುವ ದಾಹವನಿಂತಳಿ.  
    ಬೆಸುಗೆಯು ಕರಗಲು ಒಸರದೆ ಸೊಗವು?
ಯೋಗರತೋ ವಾ ಭೋಗರತೋ ವಾ;  
   ಸಂಗರತೋ ವಾ ಸಂಗವೀಹಿನಃ;  
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ, 
   ನಂದತಿ ನಂದತಿ ನಂದತ್ಯೇವ.
೧೯ ಯೋಗದಿ ಮುಳುಗಿರು, ಭೋಗದಿ ತೊಡಗಿರು, 
    ಸಂಗದಿ ಯಾ ಏಕಾಂತದಿ ರಮಿಸು, 
ಬ್ರಹ್ಮದಿ ಮನವನು ನೆಟ್ಟಿರಲನುಚಣ  
    ನಲಿಯುವ, ನಲಿಯುವ, ನಲಿಯುವ ಅವನೆ.
ಭಗವದ್ ಗೀತಾ ಕಿಂಚಿದಧೀತಾ,  
   ಗಂಗಾ ಜಲಲವಕಣಿಕಾ ಪೀತಾ,  
ಸಕೃದಪಿ ಯೇನ ಮುರಾರಿ ಸಮರ್ಚಾ, 
   ಕ್ರಿಯತೇ ತಸ್ಯ ಯಮೇನ ನ ಚರ್ಚಾ.
೨೦ ಭಗವದ್ಗೀತೆಯನಿಂತುಟು ಕಲಿತಿರೆ,  
    ಗಂಗೆಯ ಹನಿ ಒಂದಾದರು ಸವಿಯೆ,  
ಅಚ್ಯುತನನರ್ಚಿಸೆ ಬಾಳಿನಲೊಮ್ಮೆ 
    ಅವನೊಡ ವಾದಿಸುವನೆ ಜವರಾಯ?
ಪುನರಪಿ ಜನನಂ, ಪುನರಪಿ ಮರಣಂ,  
   ಪುನರಪಿ ಜನನೀಜಠರೇ ಶಯನಂ -  
ಇಹ ಸಂಸಾರೇ ಬಹುದುಸ್ತಾರೇ, 
   ಕೃಪಯಾಽಪಾರೇ, ಪಾಹಿ ಮುರಾರೇ.
೨೧ ಮತ್ತೂ ಹುಟ್ಟುತ, ಮತ್ತೂ ಸಾಯುತ,  
    ಮತ್ತೂ ತಾಯಿಯ ಒಡಲಲಿ ಒರಗು!  
ದಾಟಲು ಕಠಿನವು ಈ ಸಂಸಾರವು, 
    ಅಮಿತ ದಯಾಲುವೆ, ಸಲಹೊ ಮುರಾರೆ!
ರಥ್ಯಾಚರ್ಪಟ ವಿರಚಿತ ಕಂಥಃ,  
   ಪುಣ್ಯಾಪುಣ್ಯ ವಿವರ್ಜಿತ ಪಂಥಃ,  
ಯೋಗೀ ಯೋಗನಿಯೋಜಿತ ಚಿತ್ತೋ,  
   ರಮತೇ ಬಾಲೋನ್ಮತ್ತವದೇವ.
೨೨ ಬಟ್ಟೆಯ ಚಿಂದಿಯ ಕೌದಿಯ ಹೊದ್ದಿರೆ  
    ಕೆಡಕೂ ಒಳಿತೂ ಎರಡನು ತೊರೆದು  
ಮನವನು ಯೋಗದಿ ಮುಳುಗಿಸೆ ಯೋಗಿಯು  
    ಮಗುವೋ ಮತ್ತನೊ ಎನೆ ನಲಿಯುವನು.
ಕಸ್ತ್ವಂ? ಕೋಽಹಂ? ಕುತ ಆಯಾತಃ?  
   ಕಾ ಮೇ ಜನನೀ? ಕೋ ಮೇ ತಾತಃ?  
ಇತಿ ಪರಿಭಾವಯ, ಸರ್ವಮಸಾರಂ,  
   ವಿಶ್ವಂ ತ್ಯಕ್ತ್ವಾ , ಸ್ವಪ್ನವಿಚಾರಂ.
೨೩ "ನೀನಾರ್? ನಾನಾರ್? ಎಲ್ಲಿಂದುದಿಸಿದೆ?   
    ತಾಯಿಯು ನನಗಾರ್? ತಂದೆಯು ಯಾರು?"  
ಯೋಚಿಸು ಈ ತೆರ, ನೀ, ತಿರುಳಿಲ್ಲದ  
    ಕಲ್ಪಿತ ಕನಸಿನ ಜಗವನು ತೊರೆದು.
ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣುಃ,  
   ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ; 
ಭವ ಸಮಚಿತ್ತಃ ಸರ್ವತ್ರ ತ್ವಂ, 
   ವಾಂಛಸ್ಯಚಿರಾದ್ಯದಿ ವಿಷ್ಣುತ್ವಂ.
೨೪ ನನ್ನಲಿ, ನಿನ್ನಲಿ, ಎಲ್ಲೆಡೆ ಇರಲದೆ,  
    ಸುಮ್ಮನೆ ನನ್ನಲಿ ಕೋಪವು ಏಕೆ?  
ಚಿರ ನೆಲೆ ಗಳಿಸಲು ಬಯಸುವುದಾದರೆ 
    ಎಲ್ಲೆಡೆ ಎಂದಿಗು ಸಮಮನನಾಗು.
ಶತ್ರೌ, ಮಿತ್ರೇ, ಪುತ್ರೇ, ಬಂಧೌ 
   ಮಾ ಕುರು ಯತ್ನಂ ವಿಗ್ರಹಸಂಧೌ;  
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ, 
   ಸರ್ವತ್ರೋತ್ಸೃಜ ಭೇದಾಜ್ಞಾನಂ.
೨೫ ಹಗೆಗಳು ಗೆಳೆಯರು ನೆಂಟರು ಸುತರನು  
    ಕೂಡಲು, ಕಾದಲು, ನೀ ಬಯಸದಿರು;  
ಎಲ್ಲೆಡೆ ತನ್ನನೆ ಕಾಣುತ ನೀ ತೊರೆ  
   ಬೇರೆಯದದು ಎನ್ನುವ ತಿಳಿಯಮೆಯ.
ಕಾಮಂ, ಕ್ರೋಧಂ, ಲೋಭಂ, ಮೋಹಂ 
   ತ್ಯಕ್ತ್ವಾಽತ್ಮಾನಂ ಭಾವಯ ಸೋಽಹಂ;  
ಆತ್ಮಜ್ಞಾನ ವಿಹೀನಾ ಮೂಢಾಃ 
   ತೇ ಪಚ್ಯಂತೇ ನರಕನಿಗೂಢಾಃ.
೨೬ ಮುನಿಸನು ಮರುಳನು ಆಸೆಯ ಬಯಕೆಯ 
    ತೊರೆ; ಅರಿತಿರು ಅವನೇ ತಾನೆಂದು. 
ತನ್ನದೆ ನಿಜ ತಿಳಿವಿರದಿಹ ಮರುಳನು  
    ತೊಳಲುವನಳಲಿನ ಸುಳಿಯಲಿ ಸಿಲುಕಿ.
ಗೇಯಂ ಗೀತಾ ನಾಮಸಹಸ್ರಂ,  
   ಧ್ಯೇಯಂ ಶ್ರೀಪತಿ ರೂಪಮಜಸ್ರಂ,  
ನೇಯಂ ಸಜ್ಜನಸಂಗೇ ಚಿತ್ತಂ,  
   ದೇಯಂ ದೀನಜನಾಯ ಚ ವಿತ್ತಂ.
೨೭ ಕಲಿ ಗೀತೆಯ, ಉಲಿ ಸಾಸಿರ ನಾಮವ, 
    ಸಿರಿಪತಿ ರೂಪವನವಿರತ ನೆನೆಸು;  
ತೊಡಗಿಸು ಮನವೊಳ್ಳೆಯರೊಡನಾಟದಿ; 
    ಸಿರಿಯನು ಕೊಡು ಗತಿಯಿಲ ಬಡವರಿಗೆ.

ಬಿತ್ತರಿಕೆ, ಫೆಬ್ರುವರಿ ೨೫, ೨೦೨೫

ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಮೋಹಮುದ್ಗರ
( ಅಥವಾ, ಭಜ   ಗೋವಿಂದಂ,.)

ಕಂತು ೨: ನುಡಿ ೧೪ ರಿಂದ  ೨೭ 
ಹದಿನಾಲ್ಕು ಹೂಗಳ ಗೊಂಚಲು.

ನೆನೆ  ಗೋವಿಂದನ
ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ‌

ಸಂಪರ್ಕ.:  ನಮೋವಿಶ್ ಯ್ಯಾಟ್ ಯಾಹೂ  ಡಾಟ್ ಕಾಮ್ :
ನಾನು, ಸಪ್ನಾ ಗೂಗ್ಲೇ.