ಕನ್ನಡ ಮತ್ತು ವಿಜ್ಞಾನದ ಕಲಿಕೆ

 

ವಿಜ್ಞಾನ ಬರವಣಿಗೆ
ಕನ್ನಡ ಭಾಷೆ ನಿಖರವಾಗಿ ಗಟ್ಟಿಯಾಗಿ ಬೆಳೆಯಬೇಕಾದರೆ ಕನ್ನಡದಲ್ಲಿ ವಿಜ್ಞಾನದ ಕಲಿಕೆ ಅವಶ್ಯವಾಗಿದೆ. ವೈಜ್ಞಾನಿಕ ಮನೋಭಾವವವಿಲ್ಲದೆ ಬರೆದದ್ದೆಲ್ಲ ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದಾದ ಸುಂದರ ಕಲ್ಪನೆ ಅಷ್ಟೆ.  ಕಳೆದ ದಶಕದಲ್ಲಿ ತಂತ್ರಾಂಶಗಳಲ್ಲಿ ಆದ ಬೆಳವಣಿಗೆ,  ವಿಜ್ಞಾನ ಬರವಣಿಗೆ ಸಹಿತ, ಕನ್ನಡ ಬರವಣಿಗೆ ಅನೇಕ ದಿಶೆಯಲ್ಲಿ ಬೆಳೆಯಲು ಅನುಕೂಲ ಕಲ್ಪಿಸಿದೆ. ಅಲ್ಲದೆ, ಬರವಣಿಗೆ ಕೆಲವರಿಗೇ ಮೀಸಲಾಗದೆ, ಸಾಮಾಜಿಕ ಮತ್ತು ಬ್ಲಾಗ್‌ ತಾಣಗಳು ಹುಟ್ಟಿ, ಹಂಚಿಕೊಳ್ಳಲು ಮತ್ತು ಸ್ವಯಂ ಪ್ರಕಾಶನ ಸುಲಭವಾಗಿ, ಎಲ್ಲರಿಗೂ ಹಿಗ್ಗು ಹುರುಪು ತುಂಬಿದೆ. 

ಕನ್ನಡದಲ್ಲಿ ವಿಜ್ಞಾನ ಬರೆಹದ ಸ್ಥಿತಿ
ಆದರೂ,  ವೈಜ್ಞಾನಿಕ ಬರವಣಿಗೆ ಕನ್ನಡದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿದೆ. ಬರೆಯುತ್ತಿರುವುದೆಲ್ಲ ನಿಖರ ನುಡಿಗಟ್ಟುಗಳಿಲ್ಲದೆ ಭಾವಪ್ರಧಾನವಾಗಿದ್ದು  ವೈಜ್ಞಾನಿಕ ಮನೋಭಾವ ಮತ್ತು ಕ್ರಿಯಾಶೀಲತೆಯನ್ನು ಉತ್ತೇಜಿಸಲು ಅಸಮರ್ಥವಾಗಿದೆ.  ಇತ್ತೀಚಿಗೆ ಪ್ರಕಟವಾದ ವೈಜ್ಞಾನಿಕ ಪುಸ್ತಕಗಳು, ಪ್ರಕಟಣ ಯೋಗ್ಯವಾಗಿದ್ದರೂ, ಕಲಿಯು(ಸು)ವವರ ದೃಷ್ಟಿಯಿಂದ ಬರೆದಂತೆ ಇಲ್ಲ. ವಿಷಯ ಮತ್ತು ಕನ್ನಡದಲ್ಲಿ ಆಗಲೇ ಪರಿಣತರಾದವರಿಗೆ ಎಟಕುವಂತಿವೆ.  ಪರಿಣಿತರಾದವರಿಗೆ ಇವು ಬೇಕಿಲ್ಲ!

ವಿಜ್ಞಾನ ಕಲಿಕೆಗೆ ಕೆಲವು ಸೂಚನೆಗಳು
ಮುಖ್ಯವಾಗಿ ವೈಜ್ಞಾನಿಕ ಮನೋಭಾವ ಮನೆಯಲ್ಲೆ ಬೆಳೆಯಬೇಕು, ವಿಜ್ಞಾನದ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲೆ ಆರಂಬಿಸಬೇಕು. ಕಲಿಕೆ ಕೇವಲ ಸಂಗತಿಗಳನ್ನು ಬಾಯಿಪಾಠ ಮಾಡುವುದಾಗಿರದೆ ಪ್ರಾತ್ಯಕ್ಷಿಕೆ, ಪ್ರಯೋಗಗಳನ್ನೊಳಗೊಂಡು ವೈಜ್ಞಾನಿಕ, ತಾರ್ಕಿಕ ವಿಚಾರಗಳನ್ನು ಪ್ರಚೋದಿಸುವಂತಿರಬೇಕು. ಇದು ಕನ್ನಡದಲ್ಲಿ ಆದರೆ ಕನ್ನಡ ಬೆಳೆಯುತ್ತದೆ, ಕನ್ನಡ ವಿಜ್ಞಾನಿಗಳೂ ಬೆಳೆಯುತ್ತಾರೆ. ಕನ್ನಡ ಕಲಿ ತರಗತಿಗಳಲ್ಲೂ ಕೂಡ ಶಿಶು ಹಂತದ ಕಾಗೆ ಗುಬ್ಬಿ, ರಾಜ ರಾಣಿ ಕತೆಗಳಿಂದ ಮುಂದುವರೆದು  ವೈಜ್ಞಾನಿಕ ವಿಷಯಗಳನ್ನು ತಕ್ಕಂತೆ ಅಳವಡಿಸಿಕೊಳ್ಳುವುದು ಸೂಕ್ತ. ಎರಡನೆಯೆದಾಗಿ, ಪಠ್ಯ ಪುಸ್ತಕ ಎಂದರೆ ಅಕ್ಷರಗಳ ಹಾಳೆಗಳು ಎನ್ನುವ ತಿಳುವಳಿಕೆಯನ್ನು ಹಿಗ್ಗಿಸಿಕೊಳ್ಳಬೇಕು. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಆದರೆ, ಒಂದು ವಿಡಿಯೊ ಸಾವಿರ ಚಿತ್ರಗಳಿಗೆ ಸಮ. ಆದ್ದರಿಂದ, ಪಠ್ಯದೊಂದಿಗೆ ದೃಶ್ಯ ಶ್ರವ್ಯ ಗಳೂ ಅಡಕವಾಗಿರುವ, ವಿವರಣೆ ಪ್ರಾತ್ಯಕ್ಷಿಕೆಗಳಿಂದ ಕೂಡಿದ "ಪುಸ್ತಕ"ಗಳನ್ನು, ಕಲಿಕೆಯನ್ನು ಗುರಿಯಾಗಿ ಇಟ್ಟುಕೊಂಡು, ರಚಿಸಬೇಕು. ಇದೆಲ್ಲ ಈಗ ಸಾಧ್ಯ.

ಕನ್ನಡ ಮತ್ತು ವಿಜ್ಞಾನ
ಕನ್ನಡವನ್ನು ಕಡೆಗಣಿಸುವುದು ಮಾತೃಭಾಷೆಗೆ ಮಾಡುತ್ತಿರುವ ಅಪಚಾರ. ಇನ್ನೂ ಹೆಚ್ಚಿನ ದುರಂತ ಎಂದರೆ  ನಮ್ಮ ವೈಜ್ಞಾನಿಕ ಕುತೂಹಲದ, ಕ್ರಿಯಾಶೀಲತೆಯ ಕೊಲೆ!  ಕನ್ನಡ ಮತ್ತು ವಿಜ್ಞಾನ ಒಂದಕ್ಕೊಂದು ಪೂರಕವಾಗಿ ಬೆಳೆದಾಗ, ಕನ್ನಡದಲ್ಲಿ ವಿಜ್ಞಾನದ ಬೋಧನೆ ಮೊದಲ ದಿನದಿಂದಲೆ ಆರಂಭಿಸಿದಾಗ, ಇತರ ವಿಷಯಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಹಾಸು ಹೊಕ್ಕಾದಾಗ ಮಾತ್ರ ಕನ್ನಡಿಗರ ಸಂಪೂರ್ಣ ಅಭ್ಯುದಯವಾಗಲು ಸಾಧ್ಯ. 

ಸುಪ್ರಸಿದ್ಧ ಕನ್ನಡ ವಿಜ್ಞಾನಿ, ಭಾರತ ರತ್ನ ಸಿ.ಎನ್.ಆರ್. ರಾವ ಅವರು ಒಮ್ಮೆ ಶಿಕ್ಷಣ ತಜ್ಞರಿಗೆ ಹೇಳಿದ್ದು :  “ವಿಜ್ಞಾನಿಯಾಗಬೇಕೆನ್ನುವ ಹುಚ್ಚು ಕಡಿಮೆಯಾಗಿರುವುದರಿಂದಲೇ ನಮ್ಮ ದೇಶ ಹಿಂದುಳಿದಿದೆ. ಏಕೆಂದರೆ ನಾವೆಲ್ಲ ಈಗಾಗಲೇ ಇರುವುದನ್ನೇ ಮತ್ತೆ ಮತ್ತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದೇವೆ. ಹೊಸದನ್ನು ರೂಪಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ.”

ಮುಂದುವರೆಯುತ್ತ ರಾವ ಹೇಳುತ್ತಾರೆ, “ವಿಜ್ಞಾನ ಕಲಿಯಲು ಇಂಗ್ಲಿಷೇ ಬೇಕು ಎಂಬುದು ಭ್ರಮೆ. ಕನ್ನಡ ಮಾಧ್ಯಮದಲ್ಲಿಯೂ ಅದ್ಭುತವಾಗಿ ವಿಜ್ಞಾನ ಪಾಠಗಳನ್ನು ಮಾಡಬಹುದು. ಹಾಗೆ ನೋಡಿದರೆ ನಮ್ಮ ಮಾತೃಭಾಷೆಯಲ್ಲಿಯೇ ನಾವು ಕಲಿಯಲು ಶುರು ಮಾಡಬೇಕು. ವಿಷಯದ ಹಿಡಿತ ಚೆನ್ನಾಗಿ ಬಂದಾಗ ಅದನ್ನೇ ಮುಂದೆ ಯಾವ ಭಾಷೆಯಲ್ಲಿಯಾದರೂ ಕಲಿಯಲು ಸಾಧ್ಯ. ಎಳೆಯ ವಯಸ್ಸಿನಲ್ಲಿಯೇ ಬಲವಂತವಾಗಿ ಇಂಗ್ಲಿಷ್ ಹೇರುವ ಮೂಲಕ ನಮ್ಮ ಮಕ್ಕಳ ಕ್ರಿಯಾಶೀಲತೆಯನ್ನು ನಾವು ಕೊಲ್ಲುತ್ತಿದ್ದೇವೆ. ಇದು ತಪ್ಪು”

ಬರಿ ಕನ್ನಡ ಕಲಿತರೆ ಸಾಲದು!
ಇದು ಕೇವಲ ಕಲಿಕೆ ಮಾಧ್ಯಮದ ಸಮಸ್ಯೆ ಅಲ್ಲ. ಕನ್ನಡಿಗರ ಮಾನಸಿಕ ಬೌದ್ಧಿಕ ಬೆಳವಣಿಗೆಯ ಪ್ರಶ್ನೆ. ಇದಕ್ಕೆಲ್ಲ ಮೊದಲು ತಳಹದಿಯಾಗಿ ಒಂದು ಮಟ್ಟಕ್ಕೆ  ವಿಜ್ಞಾನದ ಶಿಕ್ಷಣ ಕನ್ನಡಲ್ಲಿ ಆಗಬೇಕು. ಬರಿ ಕನ್ನಡ ಕಲಿತರಲ್ಲ, ಬರಿ ಇಂಗ್ಲಿಷ್‌ ಕಲಿತರೂ ಅಲ್ಲ;  ಬರಿ ವೈಜ್ಞಾನಿಕ ತಥ್ಯಗಳನ್ನು ಉರು ಹೊಡೆದರಲ್ಲ; ಕನ್ನಡದಲ್ಲಿ ಚಿಂತನೆ ನಡೆಯುಂತಾಗಲಿ, ಚಿಂತನೆ ವೈಜ್ಞಾನಿಕವಾಗಿರಲಿ. ಇದಕ್ಕೆಲ್ಲ ದೃಢವಾದ ಶೈಕ್ಷಣಿಕ ನೀತಿ ಅನುಷ್ಠಾನಕ್ಕೆ ಬರಬೇಕು. ವಿಜ್ಞಾನ ಮನೆ ಮಠಗಳಲ್ಲಿ ತುಂಬಿರಬೇಕು. 

ನಿಮ್ಮವನೇ ಆದ
ವಿಶ್ವೇಶ್ವರ ದೀಕ್ಷಿತ,

ಕನ್ನಡ ಕಲಿ, ಬಿತ್ತರಿಕೆ "ಕನ್ನಡ ಮತ್ತು ವಿಜ್ಞಾನದ ಕಲಿಕೆ", ಜೂನ್‌ ೩೦, ೨೦೨೧
 

ಪೂರಕ ಓದಿಗೆ

  1. ಕಲೆಯ ಕಲಿಕೆ - ಇಂದಿಗೆ ಬೇಕೇ? - ಸಂಧ್ಯಾ ಮಹೇಶ್
  2. ಕನ್ನಡದ ಶ್ರೀಮಂತಿಕೆ ಎಲ್ಲಿದೆ ಮತ್ತು ಅಭಿವೃದ್ಧಿ ಹೇಗೆ?
  3. ಕನ್ನಡದ ಅಭಿವೃದ್ದಿಗೆ ತೊಡಕಾಗಿರುವ ಅಂಶಗಳು - ವಿವೇಕ ಬೆಟ್ಕುಳಿ

ತಾಗುಲಿ : Kannada and science, Vishweshwar Dixit

ಒಳ್ಳೆಯ ವಿಷಯದ ಬಗ್ಗೆ ಸಮರ್ಥವಾಗಿ ಬರೆದಿದ್ದೀರ, ದೀಕ್ಷಿತರೇ 👍👏👍

ಸೃಜನಾತ್ಮಕ ಅಥವಾ ವೈಚಾರಿಕ ಸಾಹಿತ್ಯಕ್ಕೆ ಹೊರತಾದ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ, ಕಲೆ, ನಾಟ್ಯ, ಸಂಗೀತ, ನ್ಯಾಯ, ಅರ್ಥ, ತರ್ಕ, ತತ್ವ, ಗಣಿತ, ವೈದ್ಯ ಹೀಗೆ ಇರುವ ಯಾವ ಶಾಸ್ತ್ರ ಅಥವಾ ತಜ್ಞ ವಿಷಯವನ್ನಾದರೂ ಕನ್ನಡದಲ್ಲಿ ಸಮರ್ಥವಾಗಿ, ಪರಿಣಾಮಕಾರಿಯಾಗಿ ಬರೆಯಲು, ಕಲಿಸಲು, ಕಲಿಯಲು ಸಾಧ್ಯವೆನ್ನುವುದು ಶತಸ್ಸಿದ್ಧ!

ಕೊರತೆಯಿರುವುದು ಅದರಲ್ಲಿನ ನಂಬಿಕೆ, ವಿಶ್ವಾಸ, ಅಭಿಮಾನ, ತಿಳಿವಳಿಕೆ ಮತ್ತು ಕೆಲಸ (ಪುಸ್ತಕಗಳು, ಕಾರ್ಯಕ್ರಮಗಳು, ಯೋಜನೆಗಳು ಇತ್ಯಾದಿ). ಅದು ನಿಜ!

ಹತ್ತನೆ ತರಗತಿಯವರೆಗೆ ಕನ್ನಡದಲ್ಲೇ ಕಲಿತ, ನಂತರ ವಿಜ್ಞಾನ/ತಂತ್ರಜ್ಞಾನ ವಿಭಾಗ/ಉದ್ಯೋಗದಲ್ಲಿ ಮುಂದುವರೆದ, ಕನ್ನಡ ಭಾಷೆ, ಸಾಹಿತ್ಯಗಳ ಕಟ್ಟಾ ಅಭಿಮಾನಿಯಾದ, ಮಧ್ಯವಯಸ್ಕನಾದರೂ ವಿಧ್ಯುಕ್ತವಾಗಿ ಸಂಸ್ಕೃತವನ್ನೇ ಕಲಿಯದ (ನಂತರ ‘ಪರದೇಶಿ’ಯಾಗಿ ಕಲಿತ) ಕನ್ನಡಿಗನಾದ ನಾನು ಹೇಳುತ್ತಿರುವ ಮಾತುಗಳಿವು.