ಕನ್ನಡದ ಶ್ರೀಮಂತಿಕೆ ಎಲ್ಲಿದೆ ಮತ್ತು ಅಭಿವೃದ್ಧಿ ಹೇಗೆ?

ಕನ್ನಡದ ಗುಟ್ಟು

ಕನ್ನಡದ ಶ್ರೀಮಂತಿಕೆ ಎಲ್ಲಿದೆ ಮತ್ತು ಅಭಿವೃದ್ಧಿ ಹೇಗೆ?

ವಿಶ್ವೇಶ್ವರ ದೀಕ್ಷಿತ

ಕನ್ನಡದ ಆಸ್ತಿ
ಈ ಸಾರಸ್ವತ ಸಿರಿ ಸಂಪತ್ತು ಎಲ್ಲ ಕನ್ನಡಿಗರ ಆಸ್ತಿ. ವಿಶೇಷ ಎಂದರೆ ಈ ಆಸ್ತಿಗೆ ಪ್ರತಿಯೊಬ್ಬ ಕನ್ನಡಿಗನಿಗೂ ಸಂಪೂರ್ಣ ಹಕ್ಕು; ಅದರಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೂ ಸಂಪೂರ್ಣ ಪಾಲು!

ಆದರೆ, ಪರಿಸ್ಥಿತಿ ಬೇರೆ ಇದೆ ಎನಿಸುತ್ತದೆ: ಸಾಹಿತಿಗೆ ಕಾಲು ಪಾಲು, ಪಠ್ಯ ಶಿಕ್ಷಕರಿಗೆ ಕಾಲು ಪಾಲು, ಉಳಿದುದು ಇಟ್ಟಲ್ಲಿಯೆ ಪೋಲು! ಕನ್ನಡದ ಅಪಾರ ಶಬ್ದ ಭಂಡಾರ ಸಾಹಿತ್ಯಕ್ಕೆ ಮತ್ತು ಹಳೆಯ ಕವಿಗಳ ಕೃತಿಗಳ ಕಲಿಕೆಯಲ್ಲಿ ತೊಡಗಿರುವ ಕೆಲವು ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಿಗೆ ಮಾತ್ರ ಮೀಸಲು. ಸಾಮಾನ್ಯ ಕನ್ನಡಿಗರ ಮಾತುಗಳು ಅಪಾರ ಕನ್ನಡ ಸಂಪತ್ಸಾಗರಕ್ಕೆ ಅಂಟಿಯೂ ಬೇರೆಯೆ ಎಂಬಂತಿರುವ ಕಾರಿ ನೀರು ಮಾತ್ರ!

ಶ್ರೀಮಂತಿಕೆ
ಕೇವಲ ಶಬ್ದಕೋಶದಲ್ಲಿ ಕೋಟಿ ಪದಗಳಿವೆ ಎಂದಾಗಲೀ ಸಾಹಿತ್ಯ ಪುಸ್ತಕ ಮತ್ತು ಪ್ರಶಸ್ತಿಗಳಿಂದಾಗಲೀ ಕನ್ನಡದ ಶ್ರೀಮಂತಿಕೆಯನ್ನು ಅಳೆಯಲಾಗದು. ಭಾಷೆಯ ಬೆಳವಣಿಗೆ ನಿಂತು ಅವಸಾನದ ಅಂಚಿಗೆ ಹತ್ತಿರವಾದಾಗ ಇವೆಲ್ಲ ಗತ ವೈಭವ.

ಏಕಮುಖಿಯಾದ ಸಾಹಿತ್ಯ ಮನರಂಜನೆ ಅಷ್ಟೇ ಅಲ್ಲ, ಅಂಗಡಿ, ಮಾಲು, ಪೋಸ್ಟ್ ಆಫೀಸು, ಬ್ಯಾಂಕು, ಪ್ರಯಾಣ, ಸರಕಾರಿ ವ್ಯವಹಾರಗಳಲ್ಲಿ ಕನ್ನಡ ಹೇಗೆ ಮತ್ತು ಎಷ್ಟರ ಮಟ್ಟಿಗೆ ಮೊದಲ ಭಾಷೆಯಾಗಿ ಬಳಕೆಯಾಗುತ್ತದೋ ಅದು ಕನ್ನಡದ ಶ್ರೀಮಂತಿಕೆಯ ದ್ಯೋತಕ. ಎಂದರೆ, ಶ್ರೀಮಂತಿಕೆ ಪುಸ್ತಕಗಳಲ್ಲಿ ಇಲ್ಲ, ಜನರ ನಾಲಗೆ ಹೃದಯಗಳಲ್ಲಿ ಇದೆ; ಒಂದು ಭಾಷೆ ಶ್ರೀಮಂತ ಎನಿಸಬೇಕಾದರೆ ಮೊದಲು ಜನ ಜೀವನದಲ್ಲಿ ಹಾಸು ಹೊಕ್ಕಾಗಿ ಜೀವಂತವಾಗಿರಬೇಕು.

ಕ್ಷೇತ್ರ ಭಾಷೆಗಳು
ವ್ಯಾವಹಾರಿಕ ಅಥವಾ ಆಡು ಭಾಷೆಯಲ್ಲಿ ಪದಗಳಿಗೆ ಹಲವು ರಂಗಗಳು ಇದ್ದರೂ ಮಾತಿನ ಇಂಗಿತ ಅರ್ಥ ಸುಲಭ ಗ್ರಾಹ್ಯ.

ಸಾಹಿತ್ಯ ಭಾಷೆ (ಗ್ರಾಂಥಿಕ, ಕಾವ್ಯ ) ಯಲ್ಲಿ, ಒಂದೊಂದು ಪದಕ್ಕೂ ಹಲವು ಅರ್ಥಗಳು ಇದ್ದು ಬರಹ ಹಲವು ಮಜಲುಗಳನ್ನು ಹೊಂದಿ, ವಾಚ್ಯಾರ್ಥಕ್ಕಿಂತ ಸೂಚ್ಯಾರ್ಥ ಹೆಚ್ಚು ಮುಖ್ಯವಾಗಿ ಬಿಡುತ್ತದೆ. ಅದು ಏಕೆ ಹಾಗೆ? ಸಾಹಿತ್ಯ ಎಂದರೆ ಹಾಗೆ ಇರಲೇ ಬೇಕೆ? ಆಡು ಭಾಷೆಯಲ್ಲಿ ಸಾಹಿತ್ಯ ಸಾಧ್ಯವಿಲ್ಲವೇ? ಇವೆಲ್ಲ ಸ್ವಾರಸ್ಯಕರ ಪ್ರಶ್ನೆಗಳು ಅಷ್ಟೆ.

ಇನ್ನೊಂದು ದಿಶೆಯಲ್ಲಿ ಆಡಳಿತ ಮತ್ತು ವೈಜ್ಞಾನಿಕ ಭಾಷೆಗಳು ಇವೆ. ಇವುಗಳಲ್ಲಿ ಪದಗಳ ವಾಚ್ಯಾರ್ಥ ಮತ್ತು ಸೂಚ್ಯಾರ್ಥಗಳಲ್ಲಿ ಅಂತರವಿಲ್ಲ. ಇಲ್ಲಿ, ಅರ್ಥವನ್ನು ನಿರ್ದಿಷ್ಟವಾಗಿ, ಮತ್ತು ನಿಖರವಾಗಿ ಸೂಚಿಸಲು ಪಾರಿಭಾಷಿಕ ಪದಗಳು ಬಳಕೆಯಾಗುತ್ತವೆ. ಪಾರಿಭಾಷಿಕ ಪದಗಳು ಒಂದೊಂದು ಕ್ಷೇತ್ರಕ್ಕೂ ವಿಶಿಷ್ಟವಾಗಿ ಬಳಕೆ ಸೀಮಿತವಾಗಿ ಬಿಡುತ್ತದೆ. ಇಲ್ಲಿ ಕೂಡ, ಕ್ಷೇತ್ರ ಭಾಷೆ ಆಡು ಭಾಷೆಗಿಂತ ಭಿನ್ನವಾಗಿರಲೇಬೇಕೆ ಎನ್ನುವುದು ಸ್ವಾರಸ್ಯಕರ ಪ್ರಶ್ನೆ. ಎಲ್ಲಿಯವರೆಗೂ ಸಾಕಷ್ಟು ಜನ ಸಾಮಾನ್ಯರು ಸಾಹಿತ್ಯ, ಆಡಳಿತ, ವಿಜ್ಞಾನ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ, ಶಿಕ್ಷಣ, ನೈಪುಣ್ಯ ಇರಲಿ, ಕನಿಷ್ಠ ಸಾಮಾನ್ಯ ಜ್ಞಾನ ಹೊಂದಿ ಅವರ ಜೀವನದಲ್ಲಿ ಬಳಕೆ ಆಗುವುದಿಲ್ಲವೋ ಅಲ್ಲಿಯವರೆಗೆ ಆ ಭಾಷೆಗಳೆಲ್ಲ ಕೃತ್ರಿಮ ಎನಿಸುತ್ತವೆ.

ಬೀಜದಿಂದ ಮರ
ಭಾಷೆಯ ಪದಗಳು ಬೀಜಗಳು ಇದ್ದಂತೆ. ಒಂದು ಬೀಜ ಬಿತ್ತಿದರೆ ನೂರು ಬೀಜಗಳು ಹುಟ್ಟಬಹುದು. ಹಾಗೆಯೆ, ಬಳಸಿದರೆ ಒಂದು ಪದದಿಂದ ಹತ್ತು ಪದಗಳು ಹುಟ್ಟಬಹುದು. ಒಂದೊಂದು ಪದ ಒಂದೊಂದು ಭಾವವನ್ನು ಮೂಡಿಸುತ್ತದೆ. ಬಳಸದೆ, ಶಬ್ದಗಳನ್ನು ಗಂಟು ಕಟ್ಟಿ ಭಂಡಾರದಲ್ಲಿ ಕೂಡಿ ಹಾಕಿದರೆ ಅವು ಬೆಲೆ ಕಳೆದುಕೊಳ್ಳುವುದು ಖಚಿತ. ಆದರೆ ಶಬ್ದಗಳ ಬಂಡವಾಳವನ್ನು ಹೂಡಿಕೆ ಹಾಕಿದರೆ ಭಾಷೆ ಬೆಳೆಯುವುದು ಸರ್ವ ವಿದಿತ. ವ್ಯವಹಾರ ನಿಂತರೆ ಆಡುಭಾಷೆ ಬಡವಾಗುತ್ತದೆ; ಕನ್ನಡ ಬಡವಾಗುತ್ತದೆ. ಭಾಷೆ ಅಳಿಯದಿರಬಹುದು. ಅಥವಾ, ಪಠ್ಯಪುಸ್ತಕಗಳಲ್ಲಿ ಕಲಿಯುವ ಶಾಸ್ತ್ರೀಯ ಭಾಷೆಯಾಗಿ ಉಳಿಯಬಹುದು.

ಕನ್ನಡ ನಾಡಿನಿಂದ ದೂರವಾಗಿ ಚದುರಿದರೂ ಅನೇಕ ಕನ್ನಡ ಕುಟುಂಬಗಳು ಮನೆಯಲ್ಲಿ ಕನ್ನಡ ಮಾತನಾಡುತ್ತ ಮಾತೃಭಾಷೆಯನ್ನು ಉಳಿಸಿಕೊಂಡಿದ್ದಾರೆ. ಆದರೆ, ಮನೆಯಿಂದ ಹೊರಗೆ ವ್ಯಾವಹಾರಿಕ ಬಳಕೆ ಇಲ್ಲದ್ದರಿಂದ, ಸಾಹಿತ್ಯಕ ಸಂಪರ್ಕ ಇಲ್ಲದ್ದರಿಂದ ಬೆಳವಣಿಗೆ ಕುಂಠಿತವಾಗಿದೆ. ಇಂತಹ ಸನ್ನಿವೇಶದಲ್ಲಿ, ಮುಂದಿನ ಕೆಲ ತಲೆಮಾರುಗಳಲ್ಲಿ ಮಾತೃಭಾಷೆಯ ಅಳಿವು ಗ್ಯಾರಂಟಿ!

ಮೊದಲ ಹೆಜ್ಜೆ
ಎಲ್ಲೇ ಇರಲಿ, ಭಾಷೆ ಉಳಿಯಬೇಕಾದರೆ, ವ್ಯಾವಹಾರಿಕ ಮತ್ತು ಆಡು ಭಾಷೆಗಳನ್ನು ಶ್ರೀಮಂತಗೊಳಿಸುವುದು ಅವಶ್ಯವಾಗಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ

೧. ಮನೆಯಲ್ಲಿ, ವ್ಯವಹಾರದಲ್ಲಿ, ಗೆಳೆಯರೊಂದಿಗೆ, ಅವಕಾಶ ಇದ್ದಲ್ಲೆಲ್ಲ ಕನ್ನಡ ಮೊದಲ ಭಾಷೆ ಆಗಲಿ.
೨. ಕನ್ನಡದಲ್ಲಿ ಇರುವ ಎಲ್ಲ ಪದಗಳನ್ನು ಸಲೀಸಾಗಿ ಬಳಸಬಹುದು;
೩. ಬೇರೆ ಭಾಷೆಯ ಪದಗಳನ್ನು ಮುಜುಗರ ಮಡಿವಂತಿಕೆ ಬಿಟ್ಟು,ಸೂಕ್ತ ಬದಲಾವಣೆಗಳೊಂದಿಗೆ, ಎರವಲು ತೆಗೆದುಕೊಳ್ಳಬೇಕು.
೪. ಮಾತಿನಲ್ಲಿ ನಿಖರತೆ ಇರಲಿ. ನಿರ್ದಿಷ್ಟ ಪದಗಳನ್ನು ನಿರ್ದಿಷ್ಟ ಅರ್ಥದಲ್ಲಿ ಬಳಸುವುದನ್ನು ಪ್ರಯತ್ನಪೂರ್ವಕ ರೂಢಿಸಿಕೊಳ್ಳಬೇಕು.

ಮಕ್ಕಳಿಗೆ ಕನ್ನಡ ಕಲಿಸುವ ತಂದೆ ತಾಯಂದಿರು ಇವನ್ನು ಗಮನಿಸಿ ಪಾಲಿಸಬೇಕು.

ಚೆನ್ನಾಗಿದೆ
ಉದಾಹರಣೆಗೆ, ಎಲ್ಲದಕ್ಕೂ interesting ಎಂದು ಹೇಳಿ ನುಣುಚಿಕೊಳ್ಳುವಂತೆ , 'ಚೆನ್ನಾಗಿದೆ' ಎಂದು ನಮ್ಮ ನುಡಿ ಬಡತನವನ್ನು ಮೆರೆಯದಿರೋಣ. ಮುಂದಿನ ಬಾರಿ, ಹಾರಿಕೆಯ ಉತ್ತರ ಕೊಡುವ ಉದ್ದೇಶ ನಮಗೆ ಇಲ್ಲವಾಗಿದ್ದರೆ, ನಿರ್ದಿಷ್ಟವಾಗಿ ವರ್ಣಿಸಲು ಪ್ರಯತ್ನಿಸೋಣ.

ಕೇವಲ 'ಚೆನ್ನಾಗಿ' ಎನ್ನುವುದಕ್ಕೆ ಬದಲಾಗಿ ಈ ಪದಗಳನ್ನು ಬಳಸಬಹುದು:

  • ಆರೋಗ್ಯವಾಗಿ, ಕ್ಷೇಮವಾಗಿ, ಸೌಖ್ಯವಾಗಿ, ಆರಾಮವಾಗಿ ಇದ್ದೇನೆ;
  • ಎಲ್ಲ ಸೊಗಸಾಗಿ, ಸರಿಯಾಗಿ ನಡೆಯುತ್ತಿದೆ;
  • ನಿಶ್ಚಿಂತನಾಗಿ ಇದ್ದೇನೆ;
  • ಸುಂದರವಾಗಿ, ಚೆಂದವಾಗಿ, ಅಂದವಾಗಿ, ಚೆಲುವಾಗಿ, ರಮ್ಯವಾಗಿ, ಮನೋಹರವಾಗಿ, ಚೇತೋಹಾರಿಯಾಗಿ, ಆಕರ್ಷಕವಾಗಿ ಇದೆ;
  • ಒಪ್ಪವಾಗಿ, ಓರಣವಾಗಿ ಇದೆ;
  • ತೃಪ್ತಿಕರವಾಗಿ, ಸಮರ್ಪಕವಾಗಿ, ಸಮುಚಿತವಾಗಿ, ತಕ್ಕುದಾಗಿ, ಸಂಪೂರ್ಣವಾಗಿ, ಉತ್ತಮವಾಗಿ, ಶ್ರೇಷ್ಠವಾಗಿ ಇದೆ;
  • ನೆಟ್ಟಗಾಗಿ, ನೀಟಾಗಿ, ಹಸನಾಗಿ ಇದೆ;
  • ಸಕ್ರಮವಾಗಿ, ನಿಯತವಾಗಿ, ಸ್ಥಿರವಾಗಿ, ಶಾಂತವಾಗಿ ಇದೆ; ಇತ್ಯಾದಿ.

ಮದುವೆ ಹೇಗಿತ್ತು?
"ಮದುವೆ ಹೇಗಿತ್ತು?" ಎಂದು ಯಾರಾದರೂ ಕೇಳಬಹುದು. "ಚೆನ್ನಾಗಿತ್ತು" ಎಂದು ಹೇಳಿ ಮುಗಿಸದೆ, "ಬಂಧು ಬಾಂಧವರೆಲ್ಲ ಉತ್ಸಾಹದಿಂದ ಭಾಗವಹಿಸಿ ಮೂರು ದಿನ ವಿಜೃಂಭಿಸಿದರು. ಎರಡು ಕುಟುಂಬಗಳು ಅನ್ಯೋನ್ಯವಾಗಿ ಹೊಂದಿಕೊಂಡರು. ವಧು ವರರು ಅಕರ್ಷಕವಾದ ದಿರಿಸು ಒಡವೆಗಳನ್ನು ನೀಟಾಗಿ ಧರಿಸಿದ್ದರು. ಮಂತ್ರ ಉಚ್ಚಾರಣೆ ಸ್ಪಷ್ಟವಾಗಿತ್ತು. ಊಟ ರುಚಿಕರವಾಗಿತ್ತು; ಸಾತ್ವಿಕವೂ ಆರ್ಗಾನಿಕವೂ ಆಗಿತ್ತು" ಎಂದು ಮುಂದುವರೆಸಬಹುದಲ್ಲವೇ?
---------
Richness of Kannada, how to develop

kannada kali, kannadada guttu, bittarike 3, 2020-2, Saptambar 2020

ಕನ್ನಡ ಭಾಷೆಯ ಬೆಳವಣಿಗೆ ಪ್ರಾಮುಖ್ಯತೆ ಅಭಿವೃದ್ಧಿಪ್ರಬಂಧ


ತಾಗುಲಿ : Richness of Kannada, How to develop, vishweshwar dixit