ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ ಸಾಕೇತ ಸಿದ್ಧಾಂತ, ಒಂದು ಸಂದೇಶ

[ಮೊನ್ನೆ ತಾನೆ ಕನ್ನಡ ಕಲಿಯ ಬಿತ್ತರಿಕೆ ಬಿಕಾಸ ೧೧-೨೦೨೩-೦೧ರಲ್ಲಿ ನಿಮಗೆ ಪರಿಚಯಿಸಿದ ಸಾಕೇತ ಸಿದ್ದಾಂತಕ್ಕೆ ಸ್ಪಂದಿಸಿ ಒಂದು ಸಂದೇಶವನ್ನು, ಲಲಿತ ಪ್ರಬಂಧವನ್ನು ಅನ್ನಿ, ಕಳಿಸಿದ್ದಾರೆ ರೂಪ ಮಂಜುನಾಥ. ಕರ್ನಾಟಕ ಸಾಂಸ್ಕೃತಿಕ ಸಂಘದ ಸುವರ್ಣ ಮಹೋತ್ಸವ‌ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ, ಕವನ ಓದಿದ ಮಕ್ಕಳ ಬಗ್ಗೆ, ಅವರನ್ನು ಬೆಳೆಸಿದ ತಾಯಿ ತಂದೆಯರ ಬಗ್ಗೆ, ಅರಳು ಮಲ್ಲಿಗೆ ಮತ್ತು ಗೋಕುಲ ಮಕ್ಕಳು ಎನ್ನುವ ಪುಟ್ಟ ಕನ್ನಡ ಸಾಂಸ್ಕೃತಿಕ ಸಮುದಾಯಗಳ ಬಗ್ಗೆ, ಹಾಗೂ ಸಾಕೇತ ಸಿದ್ಧಾಂತರ ಕವನಗಳನ್ನು ಪ್ರಕಟಿಸಿದ ಕನ್ನಡ ಕೂಟದ ಸ್ಮರಣ ಸಂಚಿಕೆಯ ಬಗ್ಗೆ,  ತಮ್ಮ ಅನಿಸಿಕೆಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ]

ರೂಪ ಮಂಜುನಾಥ

ಕಲೆ ಹಾಗೂ ಸಾಹಿತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ, ಹಾಸನ ಜಿಲ್ಲೆಯ ಹೊಳೆ ನರಸೀಪುರದ ರೂಪ ಮಂಜುನಾಥ ಅವರು, ಬಹುಮುಖ ಪ್ರತಿಭೆ ಎಂಬ ಗೌರವಕ್ಕೆ ಪಾತ್ರರಾದ ಲೇಖಕಿ, ಕವಯಿತ್ರಿ, ಚಿತ್ರಕಲಾವಿದೆ, ಮತ್ತು ಗಮಕ ಸಂಗೀತಗಳನ್ನು ಕಲಿತವರು. ಯೋಗ, ಧ್ಯಾನ, ಚಾರಣ, ಪ್ರವಾಸ, ಆರೋಗ್ಯಪಾಕಶಾಸ್ತ್ರಗಳಲ್ಲಿ ಇವರಿಗೆ ಅಪಾರ ಆಸಕ್ತಿ. ಈಗಾಗಲೆ ವಚನಾರ್ಪಣೆ, ಭಾವ-ಚಿತ್ತಾರ, ಮತ್ತು ಸ್ವಲ್ಪ ನಗೀ ಪ್ಲೀಸ್ ಎನ್ನುವ ಇವರ ಮೂರು ಪುಸ್ತಕಗಳು ಪ್ರಕಟವಾಗಿವೆ. ಇನ್ನೆರಡು ಪುಸ್ತಕಗಳು‌ ಬಿಡುಗಡೆಯ ಹಂತದಲ್ಲಿವೆ. 


ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ
ಸಾಕೇತ ಸಿದ್ಧಾಂತ

ಒಂದು ಸಂದೇಶ
ಬರೆಹ ಮತ್ತು ಓದು: ರೂಪ ಮಂಜುನಾಥ

 


ಮೊನ್ನೆಯ ದಿನ ವಿಶ್ವೇಶ್ವರ್ ಸರ್ ರವರು ಸಸಾಸ ಪರಿವಾರದಲ್ಲಿ ಸಂದೇಶಿಸಿದ್ದ ಈ ಕನ್ನಡಕ್ಕೊಂದು ಸಾಕೇತ ಸಿದ್ದಾಂತ ತಲೆಬರಹವನ್ನು ಓದಿ, ಏನಪ್ಪಾ ಇದೂ, ಸಿದ್ದಾಂತ ವೇದಾಂತ ಅಂತ ಏನೇನೋ ದೊಡ್ಡ ಪದಗಳ್ನ ಬಳ್ಸಿದಾರೆ. ನಾನೋ ಸಂಧಿ ಸಮಾಸ ಕೂಡಾ ಮರೆತು ಬಲು ಮೋಸ ಆಗ್ಬಿಟ್ಟಿದ್ದೀನಿ. ಇನ್ನು ಷಟ್ಪದಿ, ಛಂದಸ್ಸೂ, ಮಾತ್ರೆ, ಗಣ ಎಲ್ಲಾ ಗಂಟ್ ಕಟ್ಟಿಕೊಂಡು ನನ್ ಮಂಡೆಗೆ ಟಾಟಾ ಹೇಳಿ ಬರಬಾರದ ಜಾಗಕ್ಕೆ ಯಾತ್ರೆ ಹೊರಟ್ಹೋಗಿವೆ. ನನ್ ಬುರುಡೆಗೆ ಅರ್ಥವಾಗದ ಯಾವುದೋ ನನಗೆ ತಿಳಿಯದ ಕನ್ನಡ ವ್ಯಾಕರಣದ ಕಬ್ಬಿಣದ ಕಡಲೆಯಂತಹ ಕಠಿಣಾತಿಕಠಿಣ ವಿಷಯವೇ ಒಳಗಿರಬೇಕು. ನನಗೂ ಇದಕ್ಕೂ ಭಾಳ ದೂರ, ಯಾಕ್ ಬೇಕು? ಬಡವಾ ನೀನ್ ಮಡುಗ್ದಂಗಿರು, ಅನ್ನುವಂತೆ ಆ ವಿಡಿಯೋ ತುಣುಕನ್ನು ತೆರೆಯದೇ ಸುಮ್ಮನಾಗಿಬಿಟ್ಟೆ.

ಆದರೂ, ನನ್ನ ಪರಿಮಿತಿಯಲ್ಲಿ ಏನಾದರೂ ಸಾಧ್ಯವಾದರೆ, ಕಲಿಯುವ ತುಡಿತವಿದೆಯಲ್ಲಾ, ಅದು ನನ್ನನ್ನು ನಡುರಾತ್ರಿಯ ಹೊತ್ತಿನಲ್ಲಿ ನಿದ್ದೆ ಕೊಡದೇ ತಿವಿದು, ”ಕಳ್ಕೊಳ್ಳೋದೇನಿದೇ?ಏನಿರಬಹುದೂಂತ ನೋಡಬಹುದಲ್ಲಾ!”ಎಂದು ಮೂದಲಿಸಿದಾಗ, ಗೊಣಗಿಕೊಂಡೇ ಅದರತ್ತ ಗಮನಹರಿಸಿದೆ. ಮೂರು ನಿಮಿಷಗಳು ಕಳೆಯುವುದರಲ್ಲಿ ಮುನ್ನುಡಿ ಕೇಳಿ ಪಕ್ಕಾ ಫಿಕ್ಸ್ ಆಗಿಬಿಟ್ಟೆ, ಇದ್ಯಾವುದೋ ನನ್ನ ಬೌಂಡರಿಗೆ ಬಾರದ ವಿಷಯಾಂತ! ಆದರೂ, ವಿಡಿಯೋ ಅಲ್ಲಿಗೇ ತುಂಡರಿಸಲು ಸೋಂಭೇರಿತನದಿಂದಾಗ ವಿಮನಸ್ಕಳಾಗಿಯೇ ಕೇಳುತ್ತಾ ಸುಮ್ಮನಿದ್ದೆ. ಆಲಸ್ಯಮ್ ಅಮೃತಮ್ ವಿಷಮ್ ಅಂತ ಹಿರಿಯರು ಹೇಳಿದ್ದರೂ ಕೆಲವೊಮ್ಮೆ ಆಲಸ್ಯವು ಹೇಳಲಾರದಂಥ ಅಚಾನಕ್ ತಿರುವುಗಳನ್ನು ಕೊಡುವುದು ಎಂದು ಆ ಸಮಯದಲ್ಲಿ ಮನವರಿಕೆಯಾಯಿತು.

ವಿಷಯವನ್ನು, ಸಾಮಾನ್ಯಳಾದ ನನ್ನಂಥವಳಿಗೆ ಅರ್ಥವಾಗಲು ಬಲು ಕಷ್ಟವೇನೋ ಅನ್ನುವಂತೆ ಕನ್ನಡದ ವ್ಯಾಪ್ತಿ, ಕವಿಗಳ ಪೀಠಿಕೆ ಹಾಕಿ, ಟ್ವಿಸ್ಟ್ ಮಾಡೀ ಮಾಡೀ ಕೊನೆಗೂ ಸರ್ ಸರಳರೇಖೆಯನ್ನು ಎಳೆದಿದ್ದರು. ಸಾಕೇತಸಿದ್ದಾಂತದ ವಿವರಣೆ ನನ್ನಗರ್ಥವಾಗುವಷ್ಟರ ಮಟ್ಟಿಗೆ ಸರಳವಾಗುತ್ತಾ ಹೋಯಿತು. ಮುಂದಿನದೆಲ್ಲವೂ ಸರಾಗ! ಮುಗ್ಧ ಮನಸುಗಳ ಸಾಕ್ಷಾತ್ಕಾರ! 

ಹೊರನಾಡಿನಲ್ಲಿ ಕನ್ನಡ ಕುಟುಂಬಗಳು ಕನ್ನಡನಾಡಿನ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಈಗಿನ ಯುವಪೀಳಿಗೆಗೆ ಪರಿಚಯಿಸುವುದಕ್ಕಾಗಿ ಕಟ್ಟಿಕೊಂಡ ಸಮುದಾಯಗಳು ಆ ನಿಟ್ಟಿನತ್ತ ಅವರುಗಳು ದುಡಿಯುತ್ತಿರುವುದು, ಹಾಗೇ ಪೋಷಕರು ತಮ್ಮ ಮಕ್ಕಳ ಕನ್ನಡಭಾಷೆಯ ಕಲಿಕೆಗೆ ಹಾಗು ಬಳಕೆಗೆ ಶ್ರಮಿಸುತ್ತಿರುವುದನ್ನು ಕೇಳಿ ಅವರ ಬಗ್ಗೆ ಹೆಮ್ಮೆ ಹಾಗೂ ಗೌರವಾದರಗಳೂ ಮೂಡಿತು. ”ಕನ್ನಡ ನಾಡಿನಿಂದ ದೂ…ರವಿದ್ದರೂ ಒಂದು ಕನ್ನಡ ಪ್ರಪಂಚವನ್ನೇ ಸೃಷ್ಟಿಸಿಕೊಳ್ಳುವ ಪ್ರಯತ್ನ”, ಮಾಡುತ್ತಿರುವ ಈ ಕನ್ನಡ ಪ್ರೇಮಿಗಳಿಗೆ ಭಾಷೆಯ ಬಗ್ಗೆ ಇರುವ ತುಡಿತ ಕಂಡು ಹೃದಯ ತುಂಬಿ ಬಂದಿತು. 

ಕರ್ನಾಟಕ ಸಾಂಸ್ಕೃತಿಕ ಸಂಘದ ಸುವರ್ಣ ಸಂಭ್ರಮೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಆ ಎರಡು ಪುಟಾಣಿಗಳು ಸಾಕೇತ ಸಿದ್ದಾಂತರು ಸ್ವತಃ ಕನ್ನಡ ಲಿಪಿಯಲ್ಲಿ ಬರೆದುಕೊಂಡು ಬಂದು ಪ್ರಸ್ತುತ ಪಡಿಸಿದ ಸ್ವರಚಿತ ಕವನಗಳನ್ನ ಕೇಳಿದಾಗ, ತಿಳಿಯದಂತೆಯೇ ಭಾವೋದ್ವೇಗದಿಂದ ಕಣ್ಣು ತುಂಬಿದವು. ಸುಗ್ಗಿಯೆಂದರೆ, ಏನು ಸ್ವಿಗ್ಗಿಯೇ? ಎನ್ನುವಂತೆ ಬೆಂಗಳೂರಿನ ಈಗಿನ ಪೀಳಿಗೆ ಬೆಳೆಯುತ್ತಿರಬೇಕಾದರೆ, ಸುಗ್ಗಿ ಹಬ್ಬ, ಉಗಾದಿ ಹಬ್ಬಗಳ ವಿಶೇಷವನ್ನು ತನ್ನ ಬಾಲಭಾಷೆಯಲ್ಲಿ, ತಾನು ತಿಳಿದುಕೊಂಡಷ್ಟನ್ನೂ ಯಾವ ಲೋಪವಿಲ್ಲದೆಯೇ ಮುದ್ದುಮುದ್ದಾಗಿ ವಾಚಿಸಿದ ಸಾಕೇತನ ಕನ್ನಡ ಸಂಸ್ಕೃತಿಯ ತಿಳುಹನ್ನು ಕಂಡು ಮೂಕಳಾದೆ. ಇನ್ನು ನ್ಯೂಟ್ರಲ್ ಫ್ಯಾಮಿಲಿಗಳಲ್ಲಿ ಬೆಳೆದ ಮಕ್ಕಳು ಅಜ್ಜಿ, ಅಜ್ಜನ ಬೆೊಚ್ಚು ಬಾಯಿಯ ಸಿಹಿಮುತ್ತು, ಅಜ್ಜಿ ಹೇಳುವ ನೀತಿ ಹಾಗೂ ಪುರಾಣದ ಕತೆಗಳು, ಆರೋಗ್ಯಪೂರ್ಣ ರುಚಿಯಾದ ತಿಂಡಿತೀರ್ಥಗಳು, ಸದಾ ಮನೆಯಲ್ಲೇ ಇದ್ದು ಭದ್ರತೆಯ ಭಾವನೆ ಕೊಡುವ, ಅನುಭವದ ಮಾತುಗಳಿಂದ ಬದುಕಿಗೆ ಬೆಳಕಾಗುವ ಇಂಥ ಹಿರಿಯ ಜೀವಗಳಿಂದ ವಂಚಿತರು. ಸಿದ್ದಾಂತ ನಿಜಕ್ಕೂ ಅಜ್ಜಿಯ ತೋಳಿನಲ್ಲಿ ಬೆಳೆದ ಅದೃಷ್ಟವಂತ. ಅಜ್ಜಿಗಾಗಿ ಅವನಿಗಿರುವ ಪ್ರೀತಿ ಕವನವಾಗಿ ಹರಿದಿದೆ. ಒಂದೊಂದು ಸಾಲಿನಲ್ಲಿಯೂ ಅಜ್ಜಿಯ ಮಮತೆ ಮೊಮ್ಮಗನನ್ನು ಹೇಗೆ ಆವರಿಸಿಕೊಂಡಿದೆ ಎಂಬುದನ್ನು ಸಾರಿ ಹೇಳುತ್ತದೆ.

 ಇನ್ನು ಈ ಸಂಭ್ರಮದ ಸ್ಮರಣ ಸಂಚಿಕೆಯತ್ತ ಕಣ್ಣಾಡಿಸಿದಾಗಲೂ, ಕನ್ನಡ ಹಾಗೂ ಕರುನಾಡಿನ ವಿಚಾರವಾಗಿ ಪುಟಾಣಿ ಮಕ್ಕಳ ಚಿತ್ರಕಲೆಯನ್ನು ನೋಡಿ ಬಲು ಸಂತಸಪಟ್ಟೆ. ಕನ್ನಡನಾಡಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಆ ಪುಟಾಣಿಗಳಿಗೆ ಸಾಕಷ್ಟು ಅರಿವಿರುವುದನ್ನು ಆ ಚಿತ್ರಗಳು ಪುಷ್ಟೀಕರಿಸುತ್ತವೆ. 

ಅರಳು ಮಲ್ಲಿಗೆ ಹಾಗೂ ಗೋಕುಲ ಮಕ್ಕಳು ಎರಡೂ ಸಮುದಾಯದ ಪೋಷಕರಿಗೂ ಹಾಗೂ ಕನ್ನಡ ಕಲಿಗಳಿಗೂ ನನ್ನೊಲುಮೆಯ ಅಭಿನಂದನೆಗಳು.

 
ಎಲ್ಲೇ ಇರಲಿ, ಹೇಗೇ ಇರಲಿ, ಹಚ್ಚೇವು ಕನ್ನಡದ ದೀಪ ಎಂದು ಕನ್ನಡದ ಕಂಪನ್ನು ಅಮೆರಿಕದ ನೆಲದಲ್ಲೂ ಬೀರುತ್ತಾ, ತಾವಿರುವ ಪರಿಸರದಲ್ಲಿ ಕನ್ನಡದ ಸಿರಿಗಂಧವನ್ನು ತಮ್ಮವರಿಗೂ ಪೂಸುತ್ತಿರುವ ಎಲ್ಲ ಅಮೆರಿಕನ್ನಡಾಭಿಮಾನಿಗಳಿಗೂ ಶುಭಕಾಮನೆಗಳು ಹಾಗೂ ವಂದನೆಗಳು. 

ರೂಪ ಮಂಜುನಾಥ
ಹೊಳೆನರಸೀಪುರ

-------------
ಕನ್ನಡ ಕಲಿ, ಬಿತ್ತರಿಕೆ June 24, 2023
ಸಂಪರ್ಕ: [email protected]

 


ತಾಗುಲಿ: Roopa Manjunatha, Saket Rao, Siddhant Kumar, Theory of Saket, Language, Culture, Gokula MakkaLu, AraLu Mallige,