ಕನ್ಸಡಕ್ಕೊಂದು ಸಾಕೇತ ಸಿದ್ಧಾಂತ

ಕನ್ನಡಕ್ಕೊಂದು

ಸಾಕೇತ ಸಿದ್ಧಾಂತ

ಏನಿದು ಸಾಕೇತ ಸಿದ್ಧಾಂತ?‌
ಕನ್ನಡ ಕೇವಲ ಒಂದು ವ್ಯಾವಹಾರಿಕ ಮಾಧ್ಯಮವೋ?‌ ಆಥವ ಅದಕ್ಕಿಂತ ಮಿಗಿಲಾದ ಮೌಲ್ಯ ಏನಾದರೂ ಅದರಲ್ಲಿ ಇದೆಯೆ?ಕನ್ನಡ ಕಲಿಯಲು ಅತ್ಯಂತ ಪರಿಣಾಮಕಾರಿ ವಿಧಾನ ಯಾವುದು?

 


 

ನಡೆ ನುಡಿಗಳ ಸಂಕೀರ್ಣ

ಕನ್ನಡವನ್ನು ಕೇವಲ ವ್ಯಾವಹಾರಿಕ ಮಾಧ್ಯಮ ಎಂದು ಪರಿಗಣಿಸಿ ಕಲಿಯುವುದು ಸಾಧ್ಯ ಆದರೂ ಅದು ಹುರುಳು ಇಲ್ಲದ ಟೊಳ್ಳು ಬಿದಿರಿನಂತೆ.
ಕನ್ನಡ ಸಂಸ್ಕೃತಿ ಇಲ್ಲದ ಕನ್ನಡ ಕಲಿಕೆ ಅರ್ಥಹೀನ.
ಹಾಗೆಯೆ ಕನ್ನಡ ಇಲ್ಲದ ಕನ್ನಡ ಸಂಸ್ಕೃತಿ ಮುಖಕ್ಕೆ ಬಳಿದುಕೊಂಡ ಬಣ್ಣ, ಅಲಂಕಾರ ಅಷ್ಟೆ.

ಹೌದು, ಕನ್ನಡ ಸಂವಹನ ಮಾಧ್ಯಮ, ನಿಜ. ಆದರೆ ಅದು ಕೇವಲ ವ್ಯವಹಾರಕ್ಕೆ ಮೀಸಲು ಆಗಿಲ್ಲ. ನಮ್ಮ ಆಚಾರ, ವಿಚಾರ, ಭಾವ, ನಡೆ, ಮಾನವೀಯ ಮೌಲ್ಯ, ಪರಂಪರೆ, ಸಂಸ್ಕೃತಿಗಳ ಸಂವಹನಕ್ಕೂ ಕನ್ನಡ ಅವಶ್ಯ.

ವಚನಗಳಿಗೆ ತಮ್ಮದೆ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆ ಇದೆ. ಯಕ್ಷಗಾನಕ್ಕೆ ಅದರದೆ ಪರಿಭಾಷೆ ಇದೆ. ;ಬೇಂದ್ರೆಯನ್ನು ಬೇರೆ ಭಾಷೆಗೆ ಒಯ್ಯುವುದು ಅಸಾಧ್ಯ. ಕುಮಾರವ್ಯಾಸನಿಗೆ ಕನ್ನಡದ ಹೊರತು ಬೇರೆ ರೂಪಕವಿಲ್ಲ. ಹಿನ್ನೆಲೆ ಭಾವನೆಗಳ ಸಹಿತ, ಇವುಗಳ ಪರಿಪೂರ್ಣ ಸಂವಹನ ಕನ್ನಡದಿಂದಲೆ ಸಾಧ್ಯ.

ಸಾಕೇತ ಸಿದ್ಧಾಂತ

ಹೀಗೆ ಭಾಷೆ-ಸಂಸ್ಕೃತಿ ಅಥವ ನುಡಿ-ನಡೆಗಳು ಒಂದರ ಮೇಲೆ ಒಂದು ಅವಲಂಬಿಸಿವೆ. ಸಾವಿರ ನೂಲ ಎಳೆಗಳಿಂದ ನೇಯ್ದ ಬಟ್ಟೆಯಂತೆ ಒಂದರಲ್ಲಿ ಒಂದು ಹೆಣೆದುಕೊಂಡಿವೆ.

"ಸಂಸ್ಕೃತಿಯ ನೆಲೆಯಲ್ಲಿ‌ ಭಾಷೆಯನ್ನು ಕಲಿಯುವುದೆ ಪರಿಣಾಮಕಾರಿ ವಿಧಾನ;
ಭಾಷೆಯ ಜೊತೆಗೆ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದೆ ಸಹಜ ಪ್ರಕ್ರಿಯೆ."

ಇದೆ ಸಾಕೇತ ಸಿದ್ಧಾಂತ.

ನಡೆ-ನುಡಿಗಳ ಈ ಸಾಪೇಕ್ಷ ವಾದವನ್ನು ಪುಷ್ಟೀಕರಿಸಿ ಕನ್ನಡ ಸಂಸ್ಕೃತಿಯ ನೆಲೆಯಲ್ಲಿ ಕನ್ನಡ ಕಲಿಯುವುದು ಮತ್ತು ಕನ್ನಡ ನುಡಿಯಲ್ಲಿ ಕನ್ನಡ ಸಂಸ್ಕೃತಿಯನ್ನು ಗಳಿಸುವುದು ಇವು ಅತ್ಯಂತ ಪರಿಣಾಮಕಾರಿ ವಿಧಾನಗಳು ಎನ್ನುವುದಕ್ಕೆ ಎರಡು ಪ್ರಾತ್ಯಕ್ಷಿಕೆಗಳನ್ನು ನೋಡೋಣ.

ಹಿನ್ನೆಲೆ
ಮೊದಲು ಸ್ವಲ್ಪ ಹಿನ್ನೆಲೆ. ೧೯೯೩ರಲ್ಲಿ ಶುರು ಆದ ʼಅರಳು ಮಲ್ಲಿಗೆʼ ಮತ್ತು ೨೦೧೮ರಲ್ಲಿ ಶುರು ಆದ ʼಗೋಕುಲ ಮಕ್ಕಳುʼ ಇವು ಎರಡು, ಕನ್ನಡಿಗರ ಪುಟ್ಟ ಸಾಂಸ್ಕೃತಿಕ ಸಮುದಾಯಗಳು. ಅಂದರೆ ;ಕೆಲವು ಕುಟುಂಬಗಳ ಗುಂಪುಗಳು. ನಿಯತವಾಗಿ ಮನೆಗಳಲ್ಲಿ ಕಲೆತು, ಕನ್ನಡ ನುಡಿಯನ್ನು ಕಲಿಯುವುದಲ್ಲದೆ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಇವುಗಳ ವಿಧಾನ. ಕನ್ನಡ ನಾಡಿನಿಂದ ದೂರ ಇದ್ದರೂ ಒಂದು ಕನ್ನಡ ಪ್ರಪಂಚವನ್ನೆ ಸೃಷ್ಟಿಸಿಕೊಳ್ಳುವ ಪ್ರಯತ್ನ ಇವುಗಳದು.

ಸಂದರ್ಭ - ಕವಿಗೋಷ್ಠಿ
ಮೇ ೨೭-೨೮, ೨೦೨೩. ಕರ್ನಾಟಕ ಸಾಂಸ್ಕೃತಿಕ ಸಂಘ, ದಕ್ಷಿಣ ಕ್ಯಲಿಫೋರ್ನಿಯದ ೫೦ನೆ ಹುಟ್ಟು ಹಬ್ಬ, ಎರಡು ದಿನದ ವಿಜೃಂಭಣೆಯ ಸುವರ್ಣ ಮಹೋತ್ಸವ.‌ ಅದರಲ್ಲಿನ ಒಂದು ಕಾರ್ಯಕ್ರಮ - ಕವಿಗೋಷ್ಠಿ . ಮುಖ್ಯ ಅತಿಥಿ ಕವಿ ಬಿ.ಆರ್. ಲಕ್ಷ್ಮಣರಾವ್‌ ಅವರ ಅಧ್ಯಕ್ಷತೆ; ವಿಶೇಷ ಆಹ್ವಾನಿತ ಅತಿಥಿ ಸಂಜಯ ಹಾವನೂರರ ಉಪಸ್ಥಿತಿ.

ಇಬ್ಬರು ಕವಿಗಳು
ಕವಿಗೋಷ್ಠಿಯಲ್ಲಿ ಸಾಕೇತ ರಾವ್ ಮತ್ತು ಸಿದ್ಧಾಂತ ಕುಮಾರ್‌ ಇಬ್ಬರು ಕವಿಗಳು.

ಸಾಕೇತ ರಾವ್‌ : ೧೦ ವರ್ಷದ ಕನ್ನಡ ಕಲಿಯ ವಿದ್ಯಾರ್ಥಿ. ʼಗೋಕುಲ ಮಕ್ಕಳುʼ ಸಾಂಸ್ಕೃತಿಕ ಗುಂಪಿನ ಸದಸ್ಯ.

ಸಿದ್ಧಾಂತ ಕುಮಾರ್:‌ ಹೈ ಸ್ಕೂಲು ಮುಗಿಸಿ, ಪರ್‌ಡ್ಯೂ ಯುನಿವರ್ಸಿಟಿಯಲ್ಲಿ ಓದುವ ತಯಾರಿಯಲ್ಲಿರುವ, ಅರಳು ಮಲ್ಲಿಗೆ ಸಾಂಸ್ಕೃತಿಕ ಸಮುದಾಯದ ಸದಸ್ಯ ಮತ್ತು ಅನೇಕ ವರ್ಷಗಳಿಂದ ಕನ್ನಡ ಕಲಿಯ ವಿದ್ಯಾರ್ಥಿ.

ಇಬ್ಬರೂ ಸಲೀಸಾಗಿ ಕನ್ನಡ ಓದಲು, ಬರೆಯಲು ಬಲ್ಲರು. ಅಲ್ಲದೆ ತಮ್ಮ ಭಾವನೆಗಳನ್ನು ಸರಳ ಕನ್ನಡದಲ್ಲಿ ಚೊಕ್ಕಾಗಿ ಮನ ಮುಟ್ಟುವಂತೆ ಕವಿತೆಗಳ ರೂಪದಲ್ಲಿ ಅಭಿವ್ಯಕ್ತಗೊಳಿಸಬಲ್ಲರು. ಈಗ ನೋಡಿ, ತಾವೆ ಕೈಯಾರೆ ಬರೆದ ಸ್ವರಚಿತ ಕವನಗಳನ್ನು ತುಂಬಿದ ಸಭೆಯ ಕವಿಗೋಷ್ಠಿಯಲ್ಲಿ ಓದುತ್ತಿದ್ದಾರೆ.

[watch the video above]

ನೀವೂ ಕನ್ನಡ ಕಲಿಸುತ್ತೀದ್ದೀರಾ? ಕಲಿಯುತ್ತಿದ್ದೀರಾ? ಕನ್ನಡ ಕಲಿಯ ಈ ಸಾಕೇತ ಸಿದ್ಧಾಂತವನ್ನು ಅನುಸರಿಸುತ್ತೀದ್ದೀರಾ? ಹಾಗಿದ್ದರೆ ನಿಮ್ಮ ಪ್ರಯತ್ನಗಳಿಗೆ ಫಲ ದೊರೆಯುವುದರಲ್ಲಿ ಸಂದೇಹವಿಲ್ಲ. ಸರಿ, ೨೦೨೩ರ ʼಕನ್ನಡ ಕಲಿ ಕವಿತಾ ಚಾಲೆಂಜ್‌ʼಗೆ ತಯಾರಾಗಿ. ವಿವರಗಳಿಗಾಗಿ ಸಂಪರ್ಕಿಸಿ.

ನಿಮ್ಮವನೇ ಆದ ವಿಶ್ವೇಶ್ವರ ದೀಕ್ಷಿತ

ಕನ್ನಡ ಕಲಿ, ಕನ್ನಡದ ಗುಟ್ಟು
ಕನ್ನಡಕ್ಕೊಂದು ಸಾಕೇತ ಸಿದ್ಧಾಂತ
(ಲೇಖನ: ವಿಶ್ವೇಶ್ವರ ದೀಕ್ಷಿತ)
ಸಂಗೀತ: ಆಕಾಶ ದೀಕ್ಷಿತ
ಬಿತ್ತರಿಕೆ ೧೧ ಕಾಲ ೨೦೨೩, ಸಂಖ್ಯೆ ೦೧: ಬಿಕಾಸ ೧೧-೨೦೨೩-೦೧
Episode 11, Year 2023 No 01 : BIKASA 11-2023-01


Video Link: https://youtu.be/aMPwRHoEc8s
Audio Link: https://podcasters.spotify.com/pod/show/kannadakali/episodes/Saketa-The…

Video Chapters/Sections:

00:00 ಕನ್ನಡದ ಗುಟ್ಟು
00:36 ಕನ್ನಡಕ್ಕೊಂದು ಸಾಕೇತ ಸಿದ್ಧಾಂತ
00:55 ನಡೆ ನುಡಿಗಳ ಸಂಕೀರ್ಣ
01:12 ಸಾಕೇತ ಸಿದ್ಧಾಂತ
03:10 ಹಿನ್ನೆಲೆ
03:53 ಸಂದರ್ಭ - ಕವಿಗೋಷ್ಠಿ
04:27 ಕವಿಗಳು
05:27 ಪ್ರಾತ್ಯಕ್ಷಿಕೆ
08:46 ಕನ್ನಡ ಕಲಿ ಕವಿತಾ ಚಾಲೆಂಜ್
09:‌03 Credits


ತಾಗುಲಿ: Saket Rao, Siddhant Kumar, Theory of Saket, Language, Culture, Gokula MakkaLu, AraLu Mallige, Sanjaya Havanur, B.R. Laxmanarao