ಕಾಲಭೈರವ

ಕಾಲಭೈರವ

ಸಂಸ್ಕೃತ ಮೂಲ: ಆದಿ ಶಂಕರ

ಕನ್ನಡಕ್ಕೆ : ವಿಶ್ವೇಶ್ವರ ದೀಕ್ಷಿತ

ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ
 ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಂ
ನಾರದಾದಿಯೋಗಿವೃಂದವಂದಿತಂ ದಿಗಂಬರಂ
 ಕಾಶಿಕಾಪುರಾಧಿನಾಥಕಾಲಭೈರವಂ ಭಜೇ (೧)

    ಇಂದ್ರ ನಮಿಪ ಪುಣ್ಯ ಈವ ಪಾದ ಕಮಲ ನಿನ್ನವಲ್ತೆ?
    ಹಾವುರಾಯ ಜನ್ನಿವಾರ, ಎಂಟು ದಿಕ್ಕು ನಿನ್ನ ಬಟ್ಟೆ!
    ತಿಂಗಳೆಸಕ ಜಡೆಯ ಮುಡಿಯ, ಅಳವು ಇರದ ಕರುಣೆ ಎರೆವ,
    ಕಾಶಿ ಪುರದ ಎರೆಯ ಭಜಿಪೆ ನಿನ್ನ, ಕಾಲ ಭೈರವ. (೧)
 

ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ
 ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಂ
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
 ಕಾಶಿಕಾಪುರಾಧಿನಾಥಕಾಲಭೈರವಂ ಭಜೇ (೨)

    ಬಾಳ ಕಡಲ ಪಾರುಗೊಳಿಪ, ಕೋಟಿ ದಿನಪ ಹೊಳಪಿನವನೆ,
    ಬಯಕೆಗಳನು ಪೂರ್ತಿಗೊಳಿಪ, ಮೂರು ಕಣ್ಣ, ಗರಳಕೊರಳ,
    ತಿಸುಳ ಹಿಡಿದ, ಕಮಲ ಕಣ್ಣ, ಅಳಿವು ಇರದ, ಯಮಗೆ ಯಮನೆ,
    ಕಾಶಿ ಪುರದ ಎರೆಯ, ಭಜಿಪೆ ನಿನ್ನ, ಕಾಲ ಭೈರವ. (೨)
 

ಶೂಲಟಂಕಪಾಶದಂಡಪಾಣಿಮಾದಿಕಾರಣಂ
 ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಂ
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
 ಕಾಶಿಕಾಪುರಾಧಿನಾಥಕಾಲಭೈರವಂ ಭಜೇ (೩)

    ಈಟಿ, ಹಗ್ಗ, ಕೋಲು, ಕೊಡಲಿ ಹಿಡಿದ ನೀನು ಮೊದಲ ನೆರನು;
    ಜಡ್ಡು ಇರದ, ಕಪ್ಪು ಮೈಯ, ಕೊನೆಯು ಇರದ, ಮೊದಲ ದೇವ,
    ಅಳುಕುಗೊಳಿಪ ಅಣ್ಮು ನಿನಗೆ; ತಾಂಡವಾದಿ ನಿನ್ನ ಕುಣಿತ; ಒಡೆಯ,
    ಕಾಶಿ ಪುರದ ಎರೆಯ, ಭಜಿಪೆ ನಿನ್ನ, ಕಾಲ ಭೈರವ. (೩)
 

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
 ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಂ
ನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ
 ಕಾಶಿಕಾಪುರಾಧಿನಾಥಕಾಲಭೈರವಂ ಭಜೇ (೪)

    ಬಿಡುಗೆ ಸೊಗಗಳನ್ನು ಕೊಡುವ, ಮಿಗಿಲು ಚೆಲುವ ಒಳಿತು ಮೈಯ,
    ಭಕುತರಲ್ಲಿ ಒಲುಮೆ ಇರುವ, ನಿತ್ಯ; ಜಗವೆ ನಿನ್ನ ಒಡಲು;
    ಮನಸು ಸೆಳೆವ ಸೊಂಟದಲ್ಲಿ ಇನಿದು ರವದ ಗೆಜ್ಜೆಪಟ್ಟಿ;
    ಕಾಶಿ ಪುರದ ಎರೆಯ, ಭಜಿಪೆ ನಿನ್ನ, ಕಾಲ ಭೈರವ. (೪)
 

ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶನಂ
 ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಂ 
ಸ್ವರ್ಣವರ್ಣಶೇಷಪಾಶಶೋಭಿತಾಂಗಮಂಡಲಂ
 ಕಾಶಿಕಾಪುರಾಧಿನಾಥಕಾಲಭೈರವಂ ಭಜೇ (೫)

    ಧರ್ಮಸೇತುವನ್ನು ಕಾವ, ಧರ್ಮವಲ್ಲದನ್ನು ಅಳಿವ,
    ಕರ್ಮ ಕಟ್ಟು ಕಡಿದು, ಒಡೆಯ, ಒಳಿತು ಸೊಗವನೀವ ದೇವ,
    ಹೊನ್ನ ಬಣ್ಣ ಹಾವ ಹೊದ್ದು ಹೊಳೆಯುತಿರುವ ಚೆಲುವ ಮೈಯ,
    ಕಾಶಿ ಪುರದ ಎರೆಯ, ಭಜಿಪೆ ನಿನ್ನ, ಕಾಲ ಭೈರವ. (೫)
 

ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
 ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ
ಮೃತ್ಯುದರ್ಪನಾಶನಂ ಕರಾಲದಂಷ್ಟ್ರಮೋಕ್ಷಣಂ
 ಕಾಶಿಕಾಪುರಾಧಿನಾಥಕಾಲಭೈರವಂ ಭಜೇ (೬)

    ರನ್ನ ಮೆಟ್ಟ ಬೆಳಕು ಸೂಸಿ ಮನವ ಸೆಳೆವ ಅಡಿಗಳೆರಡು
    ಮೊದಲು-ಮುಗಿವು-ಬೇರೆ ಇರದ ಒಬ್ಬ, ಅಚ್ಚ, ಒಲವ ಕಡವ
    ಸಾವ ಸೊಕ್ಕು ಇಳಿಸಿ ಅಳುಕು ದವಡೆಯಿಂದ ಉಳಿಸುವವನೆ,
    ಕಾಶಿ ಪುರದ ಎರೆಯ, ಭಜಿಪೆ ನಿನ್ನ, ಕಾಲ ಭೈರವ. (೬)
 

ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ
 ದೃಷ್ಟಿಪಾತ್ತನಷ್ಟಪಾಪಜಾಲಮುಗ್ರಶಾಸನಂ
ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ
 ಕಾಶಿಕಾಪುರಾಧಿನಾಥಕಾಲಭೈರವಂ ಭಜೇ (೭)

    ಗಟ್ಟಿ ವಿಕಟ ನಗುವಿನಿಂದ ಬೊಮ್ಮ ಮೊಟ್ಟೆಗಳನು ಒಡೆವ,
    ರುಂಡ ಹಾರ ಹಾಕಿಕೊಂಡ, ನೋಟದಲ್ಲೆ ಕೆಡಕು ಕಳೆವ,
    ಕರಣಗಳನು ಹಿಡಿದ ಯೋಗಿ, ಎಂಟು ಸಿದ್ಧಿಗಳನು ಕೊಡುವ,
    ಕಾಶಿ ಪುರದ ಎರೆಯ, ಭಜಿಪೆ ನಿನ್ನ, ಕಾಲ ಭೈರವ. (೭)
 

ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ
 ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಂ
ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ
 ಕಾಶಿಕಾಪುರಾಧಿನಾಥಕಾಲಭೈರವಂ ಭಜೇ (೮)

    ಜೀವ ರಾಶಿಗಳಿಗೆ ಒಡೆಯ, ಹಿರಿದು ಹೆಸರು ಯಶಸು ತರುವ,
    ಕಾಶಿ ವಾಸಿ, ಜನರ ಒಳಿತು-ಕೆಡಕುಗಳನು ಹಸನುಗೊಳಿಪ,
    ಒಳಿತು ನಡತೆ ತೋರುತಿರುವ, ಹಳಬ, ಜಗದ ಒಡೆಯ, ದೇವ,
    ಕಾಶಿ ಪುರದ ಎರೆಯ, ಭಜಿಪೆ ನಿನ್ನ, ಕಾಲ ಭೈರವ. (೮)

ಕನ್ನಡ ಕಲಿ, ಬಿತ್ತರಿಕೆ, ಮಹಾಶಿವರಾತ್ರಿ, ಫೆಬ್ರುವರಿ ೧೮, ೨೦೨೩
ಆದಿ ಶಂಕರ ವಿರಚಿತ ಕಾಲಭೈರವ
ಕನ್ನಡಕ್ಕೆ - ವಿಶ್ವೇಶ್ವರ ದೀಕ್ಷಿತ
 

ತಾಗುಲಿ : Shankara, SHankaracharya, Adi Shankara, kalabhairava