ಕೃಷ್ಣಮಾಸದ ಪಾರ್ಥನ ಪ್ರಾರ್ಥನೆ‌

ಕೃಷ್ಣಮಾಸದ

ಪಾರ್ಥನ ಪ್ರಾರ್ಥನೆ‌

ಸಂಸ್ಕೃತ ಮೂಲ: ವೇದವ್ಯಾಸ

ಕನ್ನಡಕ್ಕೆ : ವಿಶ್ವೇಶ್ವರ ದೀಕ್ಷಿತ

ಎಲ್ಲರಿಗೂ ಕೃಷ್ಣಮಾಸ ಶುಭ-ಶೋಭೆಗಳನ್ನು ತರಲಿ    
ಶ್ರೀ ಕೃಷ್ಣ ಪರಮಾತ್ಮ ನರನಿಗೆ ಗೀತೋಪದೇಶ ಮಾಡಿದ ತಿಂಗಳು. ಅಂದರೆ, ಗೀತಾ ಜಯಂತಿಯ ತಿಂಗಳು. ಗೀತೆಯನ್ನು ಪಠಿಸುತ್ತ, ಮನನಿಸುತ್ತ, ಅರ್ಜುನನ ನಿಮಿತ್ತ ಮನುಜರಿಗೆ ದೊರಕಿದ ಕೃಷ್ಣ ಎನ್ನುವ ಜ್ಞಾನಾಮೃತವನ್ನು ಸವಿಯುತ್ತ ಕೃಷ್ಣಮಾಸವಿಡಿ ನಲಿಯೋಣ    

ಗೀತೆಯ ೧೧ನೆ ಅಧ್ಯಾಯದಲ್ಲಿ, ವಿಶ್ವರೂಪ ದರ್ಶನದ ನಂತರ, ಬರುವ ಕೆಲವು ಶ್ಲೋಕಗಳು. ಅರ್ಜುನನಿಗೆ ತನ್ನ ಕರ್ತವ್ಯ ಏನು, ಅಂದರೆ, ತಾನು ಮಾಡಬೇಕಾದುದು ಏನು ಮತು ತನ್ನ ಪಾತ್ರ ಏನು; ‌    
ಮುಖ್ಯವಾಗಿ, ಕೃಷ್ಣನ ನೈಜ ಸ್ವರೂಪ ಯಾವುದು, ಕೃಷ್ಣ ಅಂದರೆ ಯಾರು ಎನ್ನುವ ಅರಿವು ಮೂಡಿದಾಗ, ಜ್ಞಾನೋದಯ ಆದಾಗ, ಅರ್ಜುನ ಭಗವಂತನಿಗೆ ಹೇಳಿದ ಮಾತುಗಳು ಇವು.    

ಯಾರೇ ಆಗಲಿ, ತಮ್ಮ ತಪ್ಪಿನ ಅರಿವಾದಾಗ, ಸಂಶಯಗಳು ಅಳಿದು ಮಾರ್ಗದರ್ಶನ ದೊರೆತಾಗ‌, ಮನಸ್ಸಿನಲ್ಲಿ ಏಳುವ ವಿನಮ್ರತೆಯ ಮತ್ತು ಧನ್ಯತೆಯ ಭಾವಗಳನ್ನು ಮನೋಜ್ಞವಾಗಿ ಬಿಂಬಿಸುವ, ಕಣ್ಣಲ್ಲಿ ನೀರು ತರಿಸುವಂಥ ಮಾತುಗಳು ಇವು.

ಸಂಜಯ ಉವಾಚ    
    ಏತಚ್ಛ್ರುತ್ವಾ ವಚನಂ ಕೇಶವಸ್ಯ    
     ಕೃತಾಂಜಲಿರ್ವೇಪಮಾನಃ ಕಿರೀಟೀ    
   ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ    
     ಸಗದ್ಗದಂ ಭೀತಭೀತಃ ಪ್ರಣಮ್ಯ    ೧೧.೩೫

   ಸಂಜಯನು ಹೇಳಿದನು:    
   ಕೇಳಿ ಅರಿಸೂದನನ ಆ ಮಾತುಗಳನು,    
       ಕೈಮುಗಿದು, ಅದಿರುತ್ತ ಗಾಂಡೀವಿ ಆಗ    
   ನಮಿಸಿ ಮಾಧವನಿಗೆ, ಅಳುಕಿನಲ್ಲಿ ಮತ್ತೆ    
       ಹೇಳಿದನು ಮಣಿಯುತ್ತ ನಡುಗು ದನಿಯಲ್ಲಿ:

ಅರ್ಜುನ ಉವಾಚ    
ತ್ವಮಾದಿದೇವಃ ಪುರುಷಃ ಪುರಾಣಃ    
     ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ    
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ    
     ತ್ವಯಾ ತತಂ ವಿಶ್ವಮನಂತರೂಪ         ೧೧.೩೮

    ಅರ್ಜುನನು ಪ್ರಾರ್ಥಿಸಿದನು:    
   ದೇವ ಮೊದಲಿಗನು ನೀ, ಹಳೆಯಾಳು ನೀನು;    
       ಜಗಕೆ ನೆರ, ಮೂಲ, ಕಡು ಆಸರೆಯು ನೀನು;    
   ಪರಮ ನೆಲೆ, ಅರಿಯುವುದು ಅರಿಯುವವ ನೀನು,    
       ವಿಶ್ವವನು ಹೊದಳಿರುವ ರೂಪ ಅಗಣಿತನು.

ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ    
      ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ    
ನಮೋ ನಮಸ್ತೇಽಸ್ತು ಸಹಸ್ರಕೃತ್ವಃ    
       ಪುನಶ್ಚ ಭೂಯೋಽಪಿ ನಮೋ ನಮಸ್ತೇ    ೧೧.೩೯

    ಬೆಂಕಿ, ಯಮ, ಜಲ, ಗಾಳಿ, ಚಂದಿರನು ನೀನು;    
       ಜಗಕೆ ಮುತ್ತಾತ ನೀ, ಹೊಂಬಸಿರ ನೀನು;    
   ಸಾವಿರ ಸರತಿ ಮಣಿವೆ, ಕೈ ಮುಗಿವೆ ನಾನು,    
       ಬಾಗುವೆನು ನಿನಗೆ, ಎರಗುವೆನು ತಿರುತಿರುಗಿ.

ನಮಃ ಪುರಸ್ತಾದಥ ಪೃಷ್ಠತಸ್ತೇ    
     ನಮೋಽಸ್ತು ತೇ ಸರ್ವತ ಏವ ಸರ್ವ    
ಅನಂತವೀರ್ಯಾಮಿತವಿಕ್ರಮಸ್ತ್ವಂ    
     ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ    ೧೧.೪೦

    ನಮಿಸುವೆನು ನಾ ಮುಂದೆ, ನಮಿಸುವೆನು ಹಿಂದೆ,    
       ನಮಿಸುವೆನು ಎಲ್ಲೆಡೆಗೆ, ಓ ಎಲ್ಲ, ನಿನಗೆ.    
   ಕೊನೆ ಇರದ ಕೆಚ್ಚು ನೀ, ಬಲು ಬಲ್ಮೆ ಅದಟು,    
       ಹಬ್ಬಿರುವಿ ಎಲ್ಲವನು; ಇಂತೆಲ್ಲ ನೀನೆ.

ಸಖೇತಿ ಮತ್ವಾ ಪ್ರಸಭಂ ಯದುಕ್ತಂ    
     ಹೇ ಕೃಷ್ಣ ಹೇ ಯಾದವ ಹೇ ಸಖೇತಿ    
ಅಜಾನತಾ ಮಹಿಮಾನಂ ತವೇದಂ    
     ಮಯಾ ಪ್ರಮಾದಾತ್ಪ್ರಣಯೇನ ವಾಽಪಿ        ೧೧.೪೧

    ಮಿತಿಯಿರದೆ, ಮುಂಗಣಿಸಿ, ಬರಿ ಗೆಳೆಯನೆಂದು,    
       ತಿಳಿಯದೆಯೆ, ಒಲವಿನಲಿ, ಗಮನಿಸದೆ ನಾನು    
   "ಹೇ ಗೆಳೆಯ, ಹೇ ಕೃಷ್ಣ, ಯಾದವನೆ" ಎಂದು    
       ಏನನೆಂದೆನೊ ನಿನ್ನ ಹಿರಿಮೆಯನರಿಯದೆ!

ಯಚ್ಚಾವಹಾಸಾರ್ಥಮಸತ್ಕೃತೋಽಸಿ    
     ವಿಹಾರಶಯ್ಯಾಸನಭೋಜನೇಷು    
ಏಕೋಽಥವಾಪ್ಯಚ್ಯುತ ತತ್ಸಮಕ್ಷಂ     
     ತತ್ಕ್ಷಾಮಯೇ ತ್ವಾಮಹಮಪ್ರಮೇಯಂ    ೧೧.೪೨

    ಕುಳಿತಿರಲು, ಮಲಗಿರಲು, ಉಣುತಿರಲು ನಾವು,    
       ಆಟದಲಿ, ಮಾನಿಸದೆ ಉಪಹಾಸಕೆಂದು    
   ಒಬ್ಬನೆಯೆ ಯಾ ಗೆಳೆಯರೊಡಗೂಡಿ ನಾನು    
       ಏನೆ ಅಂದುದನು ನೀ ಕ್ಷಮಿಸು, ಅಳವಿಲನೆ.

ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ    
     ಪ್ರಸಾದಯೇ ತ್ವಾಮಹಮೀಶಮೀಡ್ಯಂ    
ಪಿತೇವ ಪುತ್ರಸ್ಯ ಸಖೇವ ಸಖ್ಯುಃ     
     ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಂ    ೧೧.೪೪

    ಅಂತೆ, ನಿನ್ನೆದುರು ನಾ ಮೈಯೊಡ್ಡಿ ಉದ್ದ ನಮಿಸುವೆನು,    
       ಹಾತೊರೆವೆ ನಿನ್ನ ಕ್ಷಮೆ ದಯೆಗಳಿಗೆ, ಒಲವಿನೊಡೆಯನೆ;    
   ಗೆಳೆಯ ಗೆಳೆಯನನು, ತಂದೆ ಮಗನನು, ಇನಿಯ ಇನಿಯಳನು    
       ಕ್ಷಮಿಸುವಂತೆನ್ನನ್ನು ನೀ ಕ್ಷಮಿಸು, ಎರೆಯನೆ, ಕರುಣಿಸಿ

ಕನ್ನಡ ಕಲಿ, ಬಿತ್ತರಿಕೆ, ಡಿಸೆಂಬರ್‌ ೨೫, ೨೦೨೩    
ಸಂಸ್ಕೃತ ಮೂಲ: ವೇದವ್ಯಾಸ    
ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ

ತಾಗುಲಿ : Bhagavad Gita, vishwaroopa, Arjuna's prayer