ಕಾಲ: ಪ್ರಕಿರಿತ ಪ್ರಜ್ಞಾನ

[ ಕಾಲ ಎಂದರೆ ಸದಾ ಉರುಳುತ್ತಿರುವ, ಮುನ್ನಡೆಯುತ್ತಿರುವ, ಮತ್ತು ಕಳೆಯುತ್ತಿರುವ ಸಮಯ, ಎಲ್ಲವನ್ನೂ ಆವರಿಸಿರುವ ವಿಷ್ಣು, ಎಲ್ಲವನ್ನೂ ಮೀರಿರುವ ಎಲ್ಲಕ್ಕೂ ಮೂಲ ಪರಮಾತ್ಮ ಶಿವ, ಅವ್ಯಕ್ತದಿಂದ ಹೊಡಕರಿಸಿದ ಕೃಷ್ಣ, ಮತ್ತು ಕಪ್ಪು ಎನ್ನುವ ಸಾಮಾನ್ಯ ಅರ್ಥಗಳು. ಶಿವ ಎಂದರೆ ಶುಭ್ರ, ಬಿಳಿ ಕೂಡ.
"ನೀ ಯಾರು ಹೇಳು" ಎಂದು ಅರ್ಜುನ ಕೇಳಿದಾಗ ಕೃಷ್ಣ ಹೇಳಿದ್ದು, " ಕಾಲೋಽಸ್ಮಿ, ಲೋಕಕ್ಷಯಕೃತ್ಪ್ರವೃದ್ಧಃ, ಲೋಕಗಳನಳಿಸುವ ಮಹಾನ್ ಕಾಲ ನಾನು."
ಇವೆಲ್ಲ ಕಡೆಯುತ್ತ, ವರ್ಷಗಳಿಂದ ಆಗಾಗ ಅಸ್ಪಷ್ಟವಾಗಿ ಏಳುತ್ತಿದ್ದ ವಿಚಾರ ತರಂಗಗಳು ಒಂದು ದಿನ ಹರಳುಗಟ್ಟಿದ್ದು ಹೀಗೆ. ಈ ಹರಳುಗಳಲ್ಲಿ ಸ್ಷಷ್ಟತೆ, ಪೂರ್ಣತೆ, ಮತ್ತು ಉತ್ತರಗಳು ಪ್ರತಿಫಲಿಸಕ್ಕಿಲ್ಲ; ಪ್ರಶ್ನಗಳೆಲ್ಲ ವಕ್ರೀಭವಿಸಿ ಮರು ಪ್ರಶ್ನೆಗಳು ಹುಟ್ಟುವವು ಅಷ್ಟೆ.]

 

ಕಾಲ: ಪ್ರಕಿರಿತ ಪ್ರಜ್ಞಾನ

ಫೋಟಾಣ ಕದಿರು, ಗುರಿ ನೆಟ್ಟು,
ಅಣುಗುಣಿಯ ಸೇರಿ ಅನುರಣನ;
ರಸ ಉಕ್ಕಿ ಚದರಿರಲು
ರಾಮ ಪರಿಣಾಮ;
ಕಣಕಣವನಲುಗಿಸುವ
ನೀsssಳ ಪ್ರಶ್ನ ಪ್ರಣಾಮ.

ಪ್ರಕಿರಿತ ಪ್ರಜ್ಞಾನ:
ನೂರು ಬಗೆ ರಂಗ ತರಂಗ,
ರವ ಘನಿಸಿ ವಿಶ್ವ ಕವ-ನ.
ಕಳೆಯುವುದಿಲ್ಲ ಕಾಲ ಅಳಿಯುವುದಿಲ್ಲ;
ಕಾಲಶಕ್ತಿ ಅನುಲೋಮ.
ಕಾಲವಸ್ತುವೇನ್ ಅವಿಕೃತವೆ ?

ಅಲೆ ಅಲೆಗಳಲಿ ಸುರಳಿ ಪದರುಗಳಲಿ
ಹಲ ಆಯಾಮಗಳ ಹೊದರಾಗಿ,
ಹುದುಗಿಯೂ,
ಧುತ್ತೆಂದು ಹೊಡಕರಿಸುವ
ಮತ್ತೊಂದು ಭೂತ?
ಒಂದೊ, ಹಲವೊ?
ಒಳ ಹೊರಗೊ?
ಹೊತ್ತೊ? ಗೊತ್ತೊ?

ಕಾಲ ಅವ್ಯಕ್ತ, ಕೃಷ್ಣ ವ್ಯಕ್ತ; ಕಾಲೆ ಆಕೆ?
ಕಾಲ ಅವಕಾಶಗಳ ಕಲಬೆರಕೆ -
ಮೂರ್ತ ಅಮೂರ್ತ.
ಕಾರ್ಯ ಕಾರಣ ತಿರುವು ಮುರುವು;
ಹಿಂದೆ-ಇಂದು-ಮುಂದೆ
ಅದು-ಇದು : ಎಲ್ಲವೂ ಒಂದೆ.

ಕಾಲ ತಣಿದರೆ ಭವ,
ಕುಣಿದರೆ ತಾಂಡವ;
ಚಿಗುರಿದರೆ ಜನನ,
ಚದರಿದರೆ ಚಲನ;
ನಿಂತರೆ ನಿರ್ವಾಣ.
ಹೇ ಕಾಲ, ನಿನಗೆ ನಮನ!

ಹೇ ಕಾಲ, ನಿನಗೆ ನಮನ!
ಹೇ ಕಾಲ, ನಿನಗೆ ನಮನ!

ನಿಮ್ಮವನೆ ಆದ,
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ August 17, 2022
ಸಂಪರ್ಕ: [email protected]