ಸ್ತ್ರೀ ಸಂವೇದನೆ ಮತ್ತು ಸ್ತ್ರೀತ್ವ ವಾದ

[ಸ್ತ್ರೀಯನ್ನು ದೇವತೆ ಎಂದೂ, "ಮಾತೃ ದೇವೋ ಭವ" ಎಂದೂ ಕರೆದ ಸನಾತನ ಧರ್ಮ ಅದೇ ಉಸುರಿನಲ್ಲಿ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದೂ ಗಂಡ ತೀರಿದ ಹೆಣ್ಣು ಮುಂಡೆ ಎಂದೂ ಘೋಷಿಸುತ್ತದೆ. ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಈಗ ವಿದ್ಯಾವಂತರಾಗಿದ್ದಾರೆ, ಸರಿ ಸುಮಾರಾಗಿ ಕೆಲಸ ಮಾಡುತ್ತಿದ್ದಾರೆ, ಆರ್ಥಿಕವಾಗಿ ಸುಧಾರಿಸಿದ್ದಾರೆ. ಆದರೂ, ಕೌಟುಂಬಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಅಸಮಾನಳು, ದೌರ್ಜನ್ಯಪೀಡಿತಳು.‌ ಹೊಣೆ ಹೆಚ್ಚಾಗಿದೆ; ಅದಕ್ಕೆ ತಕ್ಕಂತೆ ನೆಮ್ಮದಿ ಸಿಗುತ್ತಿಲ್ಲ.  ಸ್ತ್ರೀ-ಪುರುಷರ ಅ-ಸಮೀಕರಣಗಳಲ್ಲಿ ತೃತೀಯ ಲಿಂಗವೂ ಸೇರಿ ಸಮಸ್ಯೆಯನ್ನು ತೊಡಕುಗೊಳಿಸಿದೆ. ಇದಕ್ಕೆ ಉತ್ತರ ಎನ್ನುವಂತೆ ಸ್ತ್ರೀತ್ವವಾದ ಮುಂದೆ ಬಂದಿದೆ. ಏನಿದು?  ಇಲ್ಲಿ ಶ್ರೀನಿವಾಸ ಭಟ್ಟರು ಹೇಳುವ, ಸ್ತ್ರೀತ್ವ ಮತ್ತು ಸ್ತ್ರೀ ಸಂವೇದನೆಗಳ ಸಮ್ಮಿಶ್ರಣವೆ ಸುಖ ಶಾಂತಿ ಸಮೃದ್ಧಿಗಳಿಗೆ ಸಮರ್ಪಕ ರಸಾಯನವೆ? ಸಮೀಕರಣ ಸಾಧ್ಯವೆ? ಸಮತ್ವ ಸಾಧುವೆ? - ಸಂ]

ಸ್ತ್ರೀ ಸಂವೇದನೆ ಮತ್ತು ಸ್ತ್ರೀತ್ವ ವಾದ

— ಶ್ರೀನಿವಾಸ ಕೆ. ಭಟ್

"ಸ್ತ್ರೀತತ್ವ" ವಾದಿಗಳ ಸಿಟ್ಟು, ದ್ವೇಷ, ಒಳಗುದಿಗಳನ್ನು ನಿದರ್ಶಿಸಲು ಕೆಳಗಿನ ಎರಡು ಚರಣಗಳು ಸಾಕು

ನನ್ನ ತಾಯೆಂದು, ಬಾಯೆಂದು
ಕೂಡ ಕರೆದು ಮೊಲಹಾಲ ಹೀರಿ ಬೆಳೆದ
ಕೃಷ್ಣ ಸಂತಾನವೇ, ಕಾಣಲಿಲ್ಲ ನಿಮಗೆ
ಮೊಲೆತೊಡೆಗಳ ಹೊರತಾಗಿ ಇನ್ನೊಂದು
ನಸುಗೆಂಪು ಆಸೆಗಳ ಹೊತ್ತ ಹೃದಯವುಂಟೆಂದು

ನಿನ್ನಮ್ಮ, ಅವಳಮ್ಮ ಅವಳಮ್ಮ
ಲಾಗಾಯ್ತಿನಿಂದ ಊದಿದ ಪುಂಗಿ ನೀನೂ
ಊದ ಬೇಡ, ಈಗ ತಾನೇ ಹೆಡೆಯಾಡಿಸುತ್ತಿದ್ದೇನೆ
ಯಾರನ್ನಾದರೂ ಕಚ್ಚಿ ವಿಷವಿಳಿಸಿಕೊಳ್ಳುತ್ತೇನೆ
ನನಗೆ ದಾರಿ ಬಿಡು!

    -  ಸ. ಉಷಾ ಅವರ ‘ಈ ನೆಲದ ಹಾಡು’ ಕವಿತೆಯ ಸಾಲುಗಳು

ಸನಾತನ ಧರ್ಮದಲ್ಲಿ ಸ್ತ್ರೀಯ ಪಾತ್ರ

ಸ್ತ್ರೀಯರನ್ನು ಅಬಲೆ ಎಂದು ಕರೆದು, "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂಬ ಸಂದೇಶವನ್ನು ಕೊಟ್ಟ ನಮ್ಮ ಸನಾತನ ಧರ್ಮ, ಸ್ತ್ರೀಯರನ್ನು ದೇವತೆ ಎಂದೂ ಕರೆದಿದೆ. ಸನಾತನ ಧರ್ಮದಲ್ಲಿ ಹಿರಿಯರ ಬಗ್ಗೆ ಗೌರವ (ಗುರು ಬ್ರಹ್ಮ...), ಸ್ತ್ರೀಯರ ಬಗ್ಗೆ ಗೌರವ (ಯತ್ರ ನಾರ್ಯಸ್ತು ಪೂಜ್ಯಂತೇ..), ತಾಯಿ ತಂದೆ, ಗುರುಗಳಗಳ ಬಗ್ಗೆ ಗೌರವ (ಮಾತ್ರ ದೇವೋ ಭವ,...) ಪ್ರಾಣಿಗಳ ಬಗ್ಗೆ ಅನುಕಂಪ, ಇತ್ಯಾದಿ ಸಜ್ಜನಿಕೆಯ ಗುಣಗಳನ್ನು ನಮ್ಮಲ್ಲಿ ಬೆಳೆಸುತ್ತದೆ. ಭೂಮಿಯನ್ನು ಗೌರವಿಸುತ್ತ, "ವಿಷ್ಣು ಪತ್ನೀ ನಮಸ್ತುಭ್ಯಮ್, ಪಾದ ಸ್ಪರ್ಷಮ್ ಕ್ಷಮಸ್ವ ಮೇ" ಎಂದೂ ಕ್ಷಮೆ ಯಾಚಿಸಿದೆ. ನಮ್ಮ ನದಿಗಳಿಗೆಲ್ಲ ಸ್ತ್ರೀಯರ ಹೆಸರನ್ನೇ ಇಟ್ಟಿದೆ. ಬೆಳಿಗ್ಗೆ ಎದ್ದೊಡನೆ, "ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೇ ಸರಸ್ವತೀ...", ಎಂದು ದೇವಿಯರ ಗುಣಗಾನ ಮಾಡಲು ಹೇಳಿದೆ. ಆದರೆ, ಅದೇ ಸನಾತನ ಧರ್ಮ, "ಹೆಣ್ಣು, ಹೊನ್ನು, ಮಣ್ಣು"ಗಳ ಮೇಲೆ ಆಸೆ ಇಡಬಾರದೆಂದೂ ಎಚ್ಚರಿಸಿದೆ! ನಮ್ಮ ದಾಸ ವರೇಣ್ಯರುಗಳಂತೂ, "ಮಡದಿ, ಮಕ್ಕಳ ಮಮತೆ" ಒಳ್ಳೆಯದಲ್ಲವೆಂದು ಘಂಟಾಘೋಷವಾಗಿ ಸಾರಿದ್ದಾರೆ, ಕೊನೆಗಾಲದಲ್ಲಿ ವಾನಪ್ರಸ್ಥಾಶ್ರಮದಲ್ಲಿ, ಹೆಂಡತಿ ಮಕ್ಕಳನ್ನು ತೊರೆದು ವನಕ್ಕೆ ತೆರಳುವ ಉಪದೇಶ ನೀಡಿದ್ದಾರೆ! ಗಂಡ ತೀರಿದೊಡನೆಯೇ ಅದೇ ಸ್ತ್ರೀ, "ಮುಂಡೆ" ಆಗುತ್ತಾಳಲ್ಲದೇ, "ಸುಮಂಗಲಿ", "ಅಮಂಗಲೆ" ಆಗುತ್ತಾಳೆ. ಅವಳಿಗೆ ಹುಟ್ಟಿದಾಗಲೇ ಬಂದ ಕೂದಲನ್ನು ಬೋಳಿಸುತ್ತಾರೆ, ಬಳೆ ಒಡೆಯುತ್ತಾರೆ, ಕೆಂಪು ಸೀರೆ ಉಡಿಸಿ ಮೂಲೆಗೆ ಸೇರಿಸುತ್ತಾರೆ. ದೇವರ ಪೂಜೆಗೆ ಬಂದರೆ ದೂರ ನಿಲ್ಲಿಸುತ್ತಾರೆ. ಇವೆಲ್ಲವನ್ನೂ ಸಹಿಸಿ ಬದುಕ ಬೇಕಾದ ಹೆಣ್ಣು ಮರು ಮದುವೆ ಆಗುವಂತಿಲ್ಲ, ಆದರೆ ಗಂಡಸಿನ ಹೆಂಡತಿ ಅಕಾಲ ಮರಣಕ್ಕೆ ತುತ್ತಾದರೆ, ವರ್ಷದೊಳಗೆ, ಮರು ಮದುವೆ ಮಾಡಿಸುತ್ತಾರೆ. ಸತಿ ಸಹಗಮನ ಪದ್ಧತಿಯಂತೆ, ಪತಿ ಸಹಗಮನ ಪದ್ಧತಿ ಏಕಿರಲಿಲ್ಲ? ಇವೆಲ್ಲವೂ ಸನಾತನ ಧರ್ಮದ ಪ್ರಕಾರ ಸರಿಯೆಂದು ಹೇಳುತ್ತಿದ್ದ ಕಾಲವಿತ್ತು, ಈಗಲೂ ಇದನ್ನು ಪಾಲಿಸುವರಿರಬಹುದು. ಸಮಯ ಬದಲಾಗುತ್ತಿದೆ, ಧರ್ಮವೂ ಸುಧಾರಿಸುತ್ತಿದೆ. ಆದರೂ ಸ್ತ್ರೀ ಸಂವೇದನೆ ಇನ್ನೂ ಸುಧಾರಿಸಿಲ್ಲ. ಪಾಶ್ಚಾತ್ಯ ದೇಶಗಳಲ್ಲೂ, ಸ್ತ್ರೀಯರ ಮೇಲೆ ಅತ್ಯಾಚಾರ, ಹಿಂಸೆ ನಿರಂತರ ನಿರಂತರವಾಗಿ ನಡೆದಿದೆ. ಒಂದು ಧರ್ಮದಲ್ಲಂತೂ ಸ್ತ್ರೀಯರಿಗೆ ಅವರಿಗೆ ಇಷ್ಟವಾದ ಉಡುಗೆ ತೊಡುಗೆಗಳನ್ನೂ ಧರಿಸುವ ಸ್ವಾತಂತ್ರ್ಯವಿಲ್ಲ. ಇನ್ನೊಂದು ಧರ್ಮದಲ್ಲಿ ಹೆಂಗಸರಿಗೆ ಧರ್ಮ ಗುರುಗಳಾಗುವ ಅಧಿಕಾರವಿಲ್ಲ, ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕಿಲ್ಲ.

ದಾಂಪತ್ಯ ಯಜ್ಞದಲ್ಲಿ ಸ್ತ್ರೀ ಮತ್ತು ಪುರುಷರ ಸಂಬಂಧ

ದಾಂಪತ್ಯ ಯಜ್ಞದಲ್ಲಿ ಪರಸ್ಪರ ಗೌರವ, ಸಹನೆ, ಶಾಂತಿಗಳು ಬಹಳ ಪ್ರಾಮುಖ್ಯ. ಪ್ರೀತಿ, ವಾತ್ಸಲ್ಯಗಳಿಗೂ ಮತ್ತು ಸಂಪತ್ತಿಗೂ ಇರುವ ಸಂಬಂಧ, ಹಾಗೂ ಪರಸ್ಪರ ಭಾವನೆಗಳ ಆಳವಾದ ಅರಿವು ತುಂಬಾ ಪ್ರಾಮುಖ್ಯ. ನನ್ನ ಹಲವಾರು ಸ್ನೇಹಿತರು ಭಾರತದಲ್ಲಿ ವಾಸಿಸುತ್ತಿದ್ದಾಗ ಇದ್ದುದಕ್ಕಿಂತ ಎಷ್ಟೋ ಪಾಲು ಉತ್ತಮವಾದ ಜೀವನಮಟ್ಟವನ್ನು ಇಲ್ಲಿ ಅನುಭವಿಸುತ್ತಿದ್ದರೂ, ಸತಿ, ಪತಿಗಳ, ತಾಯಿ, ತಂದೆಗಳ ಮತ್ತು ಮಕ್ಕಳ ನಡುವಿನ ಸಾಮರಸ್ಯ ಬಹಳ ಕಡಿಮೆಯಾಗಿ ಕಾಣುತ್ತದೆ. ನನ್ನ ಆತ್ಮೀಯ ಸ್ನೇಹಿತರ ವಿವಾಹವು, ಸಾಮರಸ್ಯವಿಲ್ಲದ ಸಂಸಾರದ ಕೊನೆಯ ಹಂತವಾದ, "ವಿವಾಹವಿಚ್ಛೇದನ" ದಲ್ಲಿ ಅಂತ್ಯಗೊಂಡು, ಮಕ್ಕಳು, ಗಂಡ, ಹೆಂಡತಿ ಎಲ್ಲರೂ ಬೆಂದು, ಬಸವಳಿದುದನ್ನು ಎಷ್ಟೋ ಬಾರಿ ನೋಡಿ ವ್ಯಥೆ ಪಟ್ಟಿದ್ದೇನೆ. ಸಿರಿವಂತಿಕೆಗೂ ನೆಮ್ಮದಿಗೂ ಸರಳ ಸಂಬಂಧವಿದೆ ಎಂಬ ಹಳೆಯ ನಂಬಿಕೆ ತಲೆಕೆಳಗಾಗಿ, ಇದು ವಿಲೋಮ ಸಂಬಂಧ ಎಂಬ ಹೊಸ ಅನುಭವವಾಗಿ ಇದರಿಂದ ತಡೆಯಲಾರದ ದುಃಖವಾಗುತ್ತದೆ. ಮೂಲಭೂತ ಅಗತ್ಯಗಳು, ಉಂಡುಟ್ಟು ಮಲಗಲು ಕಡಿಮೆ ಇರದಷ್ಟು ಸಂಪತ್ತು ಇದ್ದರೂ, ಕುಟುಂಬದ ನೆಮ್ಮದಿ ಮುಖ್ಯವೇ ಹೊರತು ವೈಯಕ್ತಿಕ ವಿಜಯ, ಸ್ಪರ್ಧಾತ್ಮಕ ಮನೋಭಾವಗಳು ಎಂದಿಗೂ ಹಿತವಲ್ಲ ಎಂದು ಅರಿಯದೇ ಹಮ್ಮು, ಬಿಮ್ಮುಗಳಿಂದ ಜಗಳಾಡುವುದು ಸರಿಯಲ್ಲ. ನಮ್ಮ ತಾಯಿ, ತಂದೆಯರು ಬೇಕಾದಷ್ಟು ಬಾರಿ ಜಗಳಾಡಿದ್ದನ್ನು ನೋಡಿದ್ದೇವೆ. ಅದರೂ ಅವರು ವಿವಾಹ ವಿಚ್ಛೇದನದ ಹಾದಿ ಹಿಡಿಯಲಿಲ್ಲ. ಸ್ತ್ರೀ ಸಂವೇದನೆಯ ಜತೆಗೆ ಪುರುಷ ಸಂವೇದನೆಯೂ ಅಗತ್ಯ ಎಂದು ನನಗನ್ನಿಸುತ್ತದೆ.

ಸಂತೃಪ್ತ ಜೀವನದ ಸುಲಭ ಸೂತ್ರ

"ನಮ್ಮದು ಸಂತೃಪ್ತ ಜೀವನ", ಈ ಮಾತು ಹೇಳಿರುವರು ಒಬ್ಬ ಕೋಟ್ಯಧೀಶ ಅಲ್ಲ. ದೊಡ್ಡ ಬಂಗಲೆಯಲ್ಲಿ ಬದುಕುತ್ತ, ಐಷಾರಾಮಿ ಕಾರುಗಳಲ್ಲಿ ದೇಶ , ವಿದೇಶಗಳಲ್ಲಿ ತಿರುಗಾಡುವ, ಶ್ರೀಮಂತರಲ್ಲ. "ಕೋಟ ಶಿವರಾಮ ಕಾರಂತ ಪ್ರತಿಷ್ಠಾನ"ದಲ್ಲಿ ಪುರಸ್ಕ್ರತರಾದ, ಮುದ್ರಾಡಿ ಶಾಲೆಯ ಅಧ್ಯಾಪಕರೊಬ್ಬರ (ಆನಂದ ಎಂಬ ಹೆಸರು) ಪ್ರಶಸ್ತಿ ಸ್ವೀಕಾರ ಭಾಷಣದಿಂದ ಆಯ್ದ ನುಡಿ ಮುತ್ತು. ಅವರ ಪತ್ನಿ ಮತ್ತು ಅವರು ಹೈಸ್ಕೂಲಿನಲ್ಲಿ ಶಿಕ್ಷಕರು. ಇಬ್ಬರಿಗೂ ಸಂಸಾರದಲ್ಲಿ ಸಮನಾದ ಜವಾಬ್ದಾರಿ. ಪುಟ್ಟ (ಬ್ಯಾಂಕಿನ ಸಾಲದಿಂದ ಕಟ್ಟಿದ) ಮನೆಯಲ್ಲಿ ವಾಸ. ಇಬ್ಬರು ಮಕ್ಕಳು. ಸಾಹಿತ್ಯಕ್ಕೆ ಬಹಳ ಸೇವೆ ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ. ಸುಮಾರು ಮೂವತ್ತು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಬಹಳ ಬಡತನದಲ್ಲಿ ಬೆಳೆದವರು. ಜೀವನಕ್ಕಾಗಿ ಗಾರೆ ಕೆಲಸ, ಪತ್ರಿಕೆಯನ್ನು ಹಂಚುವ, ಇತರ ಇಂತಹ ಕೆಲಸಗಳಿಂದ ವಿದ್ಯಾಭ್ಯಾಸ ಮುಗಿಸಿದವರು. ಇನ್ನೂ ಮುವ್ವತ್ತೇಳು ವಯಸ್ಸು. ಇವರು "ನಮ್ಮದು ಸಂತೃಪ್ತ ಜೀವನ" ಎಂದು ತೃಪ್ತಿಯಿಂದ ಹೇಳಿದಾಗ, ಅವರ ಮತ್ತು ಅವರ ಕುಟುಂಬದ ಬಗ್ಗೆ ನನಗೆ ಬಹಳ ಆದರ ಮೂಡಿತು. ಈ ಮನೋಭಾವ ಎಲ್ಲರಲ್ಲೂ ಏಕೆ ಬರುತ್ತಿಲ್ಲ ಎಂಬ ವ್ಯಥೆಯೂ ಆಯಿತು. ಅವರಿಗೂ ಅವರ ಕುಟುಂಬಕ್ಕೂ ನನ್ನ ನುಡಿನಮನ. ಇಂತಹ ಸಂತೃಪ್ತ ಕುಟುಂಬಗಳಿಂದ, ಸುಖೀ ಸಮಾಜದ ಸೃಷ್ಟಿ ಆಗುತ್ತದೆ. ಸುಖೀ ಸಮಾಜವೇ ಆದರ್ಶ ರಾಷ್ಟ್ರ(ಯುಟೋಪಿಯ)ದ ಸೃಷ್ಟಿಗೆ ಕಾರಣವಾಗುತ್ತದೆ. ಇದರ ರಹಸ್ಯ ಗಂಡ ಹೆಂಡಿರ ನಡುವಿನ ಪೂರಕ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಅರಿವು, ಪರಸ್ಪರ ಗುಣಗ್ರಹಣ, ಗೌರವ, ಸಹಾನುಭೂತಿ, ಮತ್ತು ತಾಳ್ಮೆ.

ಸ್ತ್ರೀಯರ ಮೇಲಿನ ದೌರ್ಜನ್ಯ

ಅಬಲರನ್ನು ಸಬಲರು ದುರ್ಬಳಕೆ ಮಾಡುವುದು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಸಹಜವಾಗಿ ನಡೆದು ಬಂದಿದೆ. ಲೈಂಗಿಕ ದೌರ್ಜನ್ಯಕ್ಕೂ ಹಲವು ಪ್ರಾಣಿಗಳು ಒಳಗಾಗುವುದನ್ನು ನಾನು ಓದಿದ್ದೇನೆ. ದೈವ ಸೃಷ್ಟಿಯಲ್ಲಿ ಗಂಡಸರಿಗೆ ಗರ್ಭ ಧರಿಸುವ ಅವಕಾಶವಿಲ್ಲ, ಹೆಂಗಸರು ಮಕ್ಕಳನ್ನು ಹೆತ್ತು, ಹೊತ್ತು, ಸ್ತನ ಪಾನ ಮಾಡಿಸಿ ಬೆಳೆಸುವ ಕರ್ತವ್ಯ ಪ್ರಕೃತಿದತ್ತವಾಗಿಯೇ ಬಂದಿದೆ. ನನ್ನ ಅನುಭವದ ಪ್ರಕಾರ ಹೆಂಗಸರಿಗೆ ಸಹಜವಾಗಿಯೇ ತಾಳ್ಮೆ, ಪ್ರೀತಿ, ಅಕ್ಕರೆ ಗಂಡಸರಿಗಿಂತ ಜಾಸ್ತಿ ಇರುತ್ತದೆ. ಆದಿಮಾನವರು ಬೇಟೆಯಾಡಿ ಮಾಂಸವನ್ನು ಮನೆಗೆ ತಂದರೆ, ಹೆಂಗಸರು ಮನೆಯಲ್ಲೆ ಇದ್ದು ಅಡಿಗೆ ಮಾಡಿ ಮಕ್ಕಳನ್ನು ಸಲಹಿ ಬೆಳೆಸುತ್ತಿದ್ದರು. ಕಾಲ ಕಳೆದಂತೆ ಹೆಂಗಸರೂ ಈಗ, ಗಂಡಸರಂತೆ ದುಡಿಯಲು ಪ್ರಾರಂಭಿಸಿದರೂ, ಗರ್ಭ ಧರಿಸಿ ಹೆರುವ ಕೆಲಸ ಅವರಿಂದ ದೂರ ಆಗಲಿಲ್ಲ. ಇದಕ್ಕೆ ಯಾರನ್ನೂ ದೂರುವಂತಿಲ್ಲ. ಇದನ್ನು ಹೊರೆ ಎಂದು ಪರಿಗಣಿಸಬಹುದು ಅಥವಾ ವರ ಎಂದೂ ಆನಂದಿಸಬಹುದು.

ಕುಟುಂಬದಲ್ಲಿ ಸ್ತ್ರೀ ಅಂದು, ಇಂದು

ನಮ್ಮ ತಂದೆ, ತಾಯಿ ನಮ್ಮನ್ನು ಬೆಳೆಸಿದಾಗ, ಆರು ಹೆಣ್ಣು ಮಕ್ಕಳನ್ನು ಸರಿಯಾದ ಸಂಬಂಧ ಹುಡುಕಿ ಮದುವೆ ಮಾಡಿಸುವ ಪ್ರಯತ್ನ ಮೊದಲನೆಯ ಆದ್ಯತೆ ಆದರೆ, ಮೂರು ಗಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಖರ್ಚಿನ ಬಗ್ಗೆ ಚಿಂತೆ ಆಗಿತ್ತು. ಹಾಗಾಗಿ ನಾವು ಹೇಗೋ ಯಾರ‍್ಯಾರ ಸಹಾಯದಿಂದ ಓದಿ ಕೆಲಸ ಮಾಡಿ ನಮ್ಮ ಮನೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ ಪ್ರಯತ್ನದಲ್ಲಿದ್ದರೆ ನಮ್ಮ ಆರು ಜನ ಅಕ್ಕ ತಂಗಿಯರ ಮದುವೆ, ಇತರ ಖರ್ಚುಗಳ ಹೊರೆ ಗಂಡು ಮಕ್ಕಳ ಮೇಲೆ ಬೀಳುತ್ತಿತ್ತು. ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಂತೆಯೇ ವಿದ್ಯೆ, ನೌಕರಿಯ ವ್ಯವಸ್ಥೆ ಅನಿವಾರ್ಯವಾದುದರಿಂದ, ಸಂಸಾರದ ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಬದಲಾವಣೆ ಆಗಿದೆ. ಹೆಣ್ಣು ಮಕ್ಕಳ ಆರ್ಥಿಕ ಪರಿಸ್ಥಿತಿ ಗಂಡು ಮಕ್ಕಳಂತೆಯೇ ಇರುವುದರಿಂದ, ಸಾಮಾಜಿಕ ವ್ಯವಸ್ಥೆ ಬದಲಾಗಿದೆ. ಮದುವೆ ಆಗಿ ಸಂಸಾರ ಬೆಳೆಸುವುದಕ್ಕೆ ಇದ್ದ ಪ್ರಾಶಸ್ತ್ಯ ಕಡಿಮೆ ಆಗಿ ಕುಟುಂಬದ ಆರ್ಥಿಕ ವ್ಯವಸ್ಥೆಯಲ್ಲಿ ಗಂಡ, ಹೆಂಡಿರ ಪಾತ್ರಕ್ಕೆ ಮಹತ್ವ ದೊರೆತಿದೆ. ಇತ್ತೀಚೆಗೆ, "ಎರಡು ಮಕ್ಕಳೂ ಬೇಡ, ಒಂದೇ ಸಾಕು" ಎಂಬ ನಿಲುಮೆ ಬರುತ್ತಿದೆ. ಜೀವನದ ಆರ್ಥಿಕ ಮಟ್ಟ ಏರುತ್ತಿರುವುದರಿಂದ ದೈನಂದಿನ ಕೆಲಸದ ಹೊರೆ ಜಾಸ್ತಿ ಆಗುತ್ತಿದೆ. ಮಕ್ಕಳಿಗೆ ಮೊದಲನೆಯ ವರ್ಷದಿಂದಲೇ ವಿದ್ಯಾಭ್ಯಾಸ ಶುರುವಾಗಿ, ಇದರಿಂದ ದೈನಂದಿನ ಜೀವನದ ಸಂಕೀರ್ಣತೆ ಹೆಚ್ಚುತ್ತಿದೆ. ಸ್ಪರ್ಧಾತ್ಮಕ ಮನೋಭಾವ ಹೆಚ್ಚಿ, ಮಕ್ಕಳ ಮತ್ತು ತಾಯಿತಂದೆಯರ ಮಾನಸಿಕ ಒತ್ತಡ ಜಾಸ್ತಿ ಆಗುತ್ತಿದೆ. ಇದರಿಂದ ಸಂಸಾರದ ನೆಮ್ಮದಿ ಕಡಿಮೆ ಆಗುತ್ತಿದೆ. ಇದಕ್ಕೆಲ್ಲ ಪರಿಹಾರ ಏನು? ಹೆಣ್ಣು ಮತ್ತು ಗಂಡುಗಳಿಗೆ ಪ್ರತ್ಯೇಕ ಜವಾಬ್ದಾರಿಗಳು ಇರಬೇಕೇ? ಅಥವಾ ಸರಿ ಸಮಾನ ಗುರಿ ಮತ್ತು ಜವಾಬ್ದಾರಿಗಳು ಇರಬೇಕೆ? ಎರಡರಿಂದಲ್ಲೂ ಆದರ್ಶ ರಾಜ್ಯ (ಯುಟೋಪಿಯಾ) ಬರಲು ಸಾಧ್ಯವಿಲ್ಲ. ಹಾಗೆಂತ ಹಳೆಯ ಪದ್ಧತಿಯಂತೆ ಸತಿ, ಪತಿಯರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ವಿಭಿನ್ನವಾಗಿರಬೇಕೆ? ಇಬ್ಬರೂ ಸೇರಿ ಸಂಸಾರ ರಥವನ್ನು ಎಳೆಯಬೇಕೆ?

ಕುಟುಂಬದಲ್ಲಿ ನೆಮ್ಮದಿ

ಯಾವುದೇ ವ್ಯವಸ್ಥೆಯಲ್ಲೂ ಪರಸ್ಪರ ಸಹಕಾರ, ಸಹಾಯಗಳಿದ್ದರೆ, ಒಬ್ಬರಿಗೊಬ್ಬರು ಪೂರಕವಾಗಿದ್ದರೆ, ಸಂಸಾರ ರಥ ಸುಖಕರವಾಗಿ ನಡೆಯುತ್ತದೆ. ಇತ್ತೀಚಿನ ದಿನಗಳ ಬೆಳವಣಿಗೆ ನೋಡಿದರೆ, ಈ ಸಮಾನತೆಯ ಸೂತ್ರದಿಂದ ಮದುವೆಯೇ ಬೇಡವೆಂದು ಹೊಸ ಪೀಳಿಗೆ ನಿರ್ಧರಿಸಿದಂತಿದೆ. ನಮ್ಮ ಮಕ್ಕಳ ಸಮಾನ ವಯಸ್ಕರು ನಲವತ್ತು ವಯಸ್ಸು ಕಳೆದರೂ ಮದುವೆ ಬೇಡ ಎನ್ನುತ್ತಿದ್ದಾರೆ! ಅವರ ತಾಯಿ ತಂದೆ ಯರ ಹೋರಾಟ, ತೊಳಲಾಟ, ಘರ್ಷಣೆಗಳನ್ನು ದಿನ ನಿತ್ಯ ನೋಡಿ ಕೌಟಿಂಬಿಕ ಜೀವನದ ಬಗ್ಗೆ ಇರಬೇಕಾದ ಆಸಕ್ತಿಯೇ ನಶಿಸುತ್ತಿದೆ. ದಿನವಿಡೀ ದುಡಿದು ಮನೆಗೆ ಬಂದಾಗ, ಒಂದು ವಾತ್ಸಲ್ಯ, ಪ್ರೀತಿಯ ಸಿಹಿ ನುಡಿ ಕೇಳುವ ಆಸೆ ಗಂಡನಿಗಾಗಲೀ, ಹೆಂಡತಿಗಾಗಲೀ, ಇದ್ದೇ ಇರುತ್ತದೆ. ಆ ನೆಮ್ಮದಿ ಮನೆಯಲ್ಲಿ ಸಿಗದಿದ್ದರೆ, ದಿನವಿಡೀ ದುಡಿದ ಆಯಾಸಕ್ಕೆ, ದಣಿವಿಗೆ ವಿಶ್ರಾಂತಿ ಸಿಗದೆ, ಸಂಸಾರದ ಸುಖ, ಶಾಂತಿ ಕೆಡುತ್ತದೆ.

ಸ್ತ್ರೀಯ ವೈಶಿಷ್ಟ್ಯತೆ

ಇದರಲ್ಲೂ ಕೆಲವು ಕೌಟುಂಬಿಕ ಕರ್ತವ್ಯಗಳು (ಗರ್ಭ ಧಾರಣೆ, ಸ್ತನ ಪಾನ, ಶಿಶು ಪಾಲನೆ ಇತ್ಯಾದಿ) ಹೆಂಗಸರಿಗೇ ದೇವರು ಕೊಟ್ಟ ವರ. ಹಾಗೇ ಹಲವಾರು ದೈಹಿಕ ಕೆಲಸಗಳನ್ನು ಮಾಡಲು ಗಂಡಸರಿಗೆ ಸುಲಭ. ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ವಿಭಜನೆ ಕಡಿಮೆ ಆಗುತ್ತಿದ್ದರೂ, ಪ್ರಕೃತಿದತ್ತವಾದ ವ್ಯತ್ಯಾಸಗಳು (ಮುಟ್ಟಾಗುವುದು - ರಜಸ್ವಲೆ ಆಗುವುದು, ಗರ್ಭ ಧರಿಸಿ ಹಡೆಯುವುದು ಇತ್ಯಾದಿ) ಇದ್ದೇ ಇರುತ್ತವೆ. ಹಾಗೆಂತ ಹೆಂಗಸರು ಮತ್ತು ಗಂಡಸರು ಪ್ರತ್ಯೇಕ ಜವಾಬ್ದಾರಿ ಹೊರಬೇಕೆನ್ನುವ ವಾದ ಸರಿಯಲ್ಲವಾದರೂ, ಅವರವರ ನೆಮ್ಮದಿಯ ಗಡಿಯೊಳಗೇ ಹೆಂಗಸರು ಮತ್ತು ಗಂಡಸರು ಇದ್ದರೆ ಸಂಸಾರದಲ್ಲಿ ನೆಮ್ಮದಿ ಸಿಗುತ್ತದೆ. ಯಾರು ಹೆಚ್ಚು, ಯಾರು ಕಡಿಮೆ ಎಂಬ ತರ್ಕದಿಂದ ಸಂಸಾರದ ನೆಮ್ಮದಿ ಹಾಳಾಗುತ್ತದೆ. ಹಿಂದಿನ ಪೀಳಿಗೆಗಳು ಮಾಡಿದ ಅನ್ಯಾಯ, ಅನಾಚಾರಗಳನ್ನು ನೆನೆದು ದ್ವೇಷ ಸಾಧಿಸುವುದರಿಂದ ಕುಟುಂಬದ ನೆಮ್ಮದಿ ಕೆಡುವುದಲ್ಲದೇ ಬೇರೆ ಉಪಯೋಗವಿಲ್ಲ.

ಅತಿ ಸರ್ವತ್ರ ವರ್ಜಯೇತ್

"ಅತಿ ಸರ್ವತ್ರ ವರ್ಜಯೇತ್" ಎಂಬ ನಿಯಮಾನುಸಾರವಾಗಿ ಯಾವುದೇ ವಾದ ಅಥವಾ ಅಭಿಪ್ರಾಯ ಅತಿರೇಕವಾದಲ್ಲಿ ಅದರಿಂದ ಕೆಡುಕಾಗುತ್ತದೆ. ಇದಕ್ಕೆ ಸ್ತ್ರೀತ್ವ ವಾದವೂ ಹೊರತಲ್ಲ. ಸ್ತ್ರೀಯರನ್ನು ಸಮಾಜದಲ್ಲಿ ಬಹಳ ಹೀನಾಯವಾಗಿ, ಎರಡನೆಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದ್ದ ಕಾಲವೊಂದಿತ್ತು. ಅದು ಪೂರ್ವ ಮತ್ತು ಪಶ್ಚಿಮ ಎರಡೂ  ಸಂಸ್ಕೃತಿಯಲ್ಲಿ ಬೇರು ಬಿಟ್ಟಿತ್ತು. ಆದರೂ ಪೌರ್ವಾತ್ಯ  ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಋಷಿ ಮುನಿಗಳಾಗುವ, ದೇವತೆಗಳಾಗುವ ಅವಕಾಶವೂ ಇರುತ್ತಿತ್ತು. ಸ್ತ್ರೀವಾದಿ ಚಳುವಳಿಗಳು ಮತದಾನದ ಹಕ್ಕು, ಸಾರ್ವಜನಿಕ ಹುದ್ದೆಗಳಿಗೆ ಸ್ಪರ್ಧಿಸುವುದು, ಸೇನೆಯಲ್ಲಿ, ಗಣಿಗಳಲ್ಲಿ, ಸಾರ್ವಜನಿಕ ವಲಯಗಳಲ್ಲಿಕೆಲಸ ಮಾಡುವುದು, ಸಮಾನ ವೇತನ ಗಳಿಸುವುದು, ಆಸ್ತಿಯನ್ನು ಹೊಂದುವುದು, ಶಿಕ್ಷಣವನ್ನು ಪಡೆಯುವುದು, ಒಪ್ಪಂದಗಳನ್ನು ಪ್ರವೇಶಿಸುವುದು, ಮದುವೆಯೊಳಗೆ ಸಮಾನ ಹಕ್ಕುಗಳು ಮತ್ತು ಹೆರಿಗೆ ರಜೆ ಸೇರಿದಂತೆ ಇತರ ಮಹಿಳೆಯರ ಹಕ್ಕುಗಳಿಗಾಗಿ ಪ್ರಚಾರವನ್ನು ಮುಂದುವರೆಸಿವೆ.

ತೃತೀಯ ಲಿಂಗದವರಿಗೂ ಸಮಾನ ಹಕ್ಕು 

ಸ್ತ್ರೀವಾದವು ಎಲ್ಲಾ ಲಿಂಗಗಳಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಹೊಂದುವ ಉದ್ದೇಶ ಹೊಂದಿದೆ . ಇದು ಮಹಿಳೆಯರ ವೈವಿಧ್ಯಮಯ ಹಾಗೂ ವಿಭಿನ್ನ ಅನುಭವಗಳು, ಗುರುತುಗಳು, ಜ್ಞಾನ ಮತ್ತು ಸಾಮರ್ಥ್ಯಗಳನ್ನು ಗೌರವಿಸುತ್ತದೆ. ಎಲ್ಲಾ ಮಹಿಳೆಯರೂ ತಮ್ಮ ಸಂಪೂರ್ಣ ಹಕ್ಕುಗಳನ್ನು ಅರಿತುಕೊಳ್ಳಲು ಮತ್ತು ಸಬಲೀಕರಣಗೊಳಿಸಲು ಶ್ರಮಿಸುತ್ತಿದೆ. ಆದರೆ ಮಹಿಳೆಯರಿಗೇ ವಿಶಿಷ್ಟವಾದ ಗುಣ ಮತ್ತು ಸಾಮರ್ಥ್ಯಗಳು (ಗರ್ಭ ಧಾರಣೆ, ಸ್ತನ್ಯ ಪಾನ, ಶಿಶು ಪಾಲನೆ ಇತ್ಯಾದಿ) ಪುರುಷರಲ್ಲಿ ಇಲ್ಲವೆನ್ನುವುದನ್ನು ಮರೆಯಲಾಗದು. ಇತ್ತೀಚೆಗೆ ತೃತೀಯ ಲಿಂಗದವರಿಗೂ ಸಮಾನ ಹಕ್ಕು ನೀಡಬೇಕೆನ್ನುವ ಚಳುವಳಿ ಬಲವಾಗುತ್ತಿದೆ. ಇದು ಇನ್ನಷ್ಟು ಸಮಸ್ಯೆಯನ್ನು ಜಟಿಲಗೊಳಿಸುತ್ತಿದೆ.

ವಿವಾಹ ವಿಚ್ಛೇದನದಿಂದ ಆಗುವ ಸಮಸ್ಯೆಗಳು

"ವಿವಾಹ ವಿಚ್ಛೇದನ"ದನದಂತಹ ಬರ್ಬರ ಸ್ಥಿತಿ ಇನ್ನೊಂದಿಲ್ಲ, ಗಂಡ ಮತ್ತು ಹೆಂಡತಿ ಇಬ್ಬರಿಗಲ್ಲದೆ, ಮಕ್ಕಳಿಗೂ ಇದೊಂದು ಕಠಿಣ ಶಿಕ್ಷೆ. ಹಲವಾರು ವರ್ಷಗಳ ಅನುಭವ ಮತ್ತು ನೆನಪುಗಳನ್ನು ಮರೆತು ಹೊಸ ಸಂಬಂಧದಲ್ಲಿ ತೊಳಲಾಡುವುದು ಗಂಡ ಹೆಂಡತಿಯರಿಗಿಂತಲೂ ಮಕ್ಕಳಿಗೆ ಅತೀ ದೊಡ್ಡ ಶಿಕ್ಷೆ. ಸದ್ಗುರು ಜಗ್ಗಿ ವಾಸುದೇವರ ಪ್ರಕಾರ, ಮದುವೆ ಎನ್ನುವುದು ಕಡಿಮೆ ಎಂದರೆ ೨೧ ವರ್ಷಗಳ ವಚನ ಬದ್ಧತೆ. ತಮ್ಮಿಬ್ಬರ ಸಂಗದಿಂದ ಜನುಮ ತಾಳಿದ ಮಕ್ಕಳಿಗೆ ೨೧ ವರುಷಗಳ ವರೆಗೆ ಪ್ರೀತಿ, ವಾತ್ಸಲ್ಯ, ದೈಹಿಕ ಹಾಗೂ ಆರ್ಥಿಕ ಮತ್ತು ಮಾನಸಿಕ ಉತ್ತೇಜನ ಕೊಡಲು ಸಾಧ್ಯವಾಗದಿದ್ದಲ್ಲಿ ಆ ಮದುವೆಯ ಬಗ್ಗೆ ಯೋಚನೆ ಮಾಡಬಾರದು. ಇನ್ನು ಹಲವಾರು ವರ್ಷಗಳ ಬಳಿಕ ವಿಚ್ಛೇದನವಾದರೆ ಮಕ್ಕಳ ಮಾನಸಿಕ ತೊಳಲಾಟದ ಮಧ್ಯೆ ಆರ್ಥಿಕ ಹಾಗೂ ದೈಹಿಕ ತೊಳಲಾಟವೂ ಸಮಸ್ಯೆ ಆಗಿ ಪರಿಣಮಿಸುತ್ತದೆ. ತಂದೆ, ತಾಯಿಯರ ನಡುವಿನ ಜಗಳದ ಮಧ್ಯೆ ಬೆಳೆದ ಮಕ್ಕಳಿಗೆ ಮದುವೆ ಎಂಬುದೊಂದು ಜಂಝಾಟವಾಗಿ ಕಾಣುತ್ತದೆ. ಅದರಲ್ಲೂ ಎರಡನೆಯ ಮದುವೆ ಆದರಂತೂ ಈ ಸಂಬಂಧಗಳು ಇನ್ನೂ ಜಿಡುಕಾಗುತ್ತವೆ. ಈ ಕಗ್ಗಂಟನ್ನು ಬಿಡಿಸುವುದೇ ಕಷ್ಟವಾಗಿ ಮಾನಸಿಕ ಖಿನ್ನತೆ ಮತ್ತು ವೈರಾಗ್ಯ ಬರುತ್ತದೆ. ಈ ವಿಚಿತ್ರ ಸಮಸ್ಯೆಗಳನ್ನು ಮಕ್ಕಳಿಗೆ ವಿವರಿಸುವುದೇ ದೊಡ್ಡ ಸಮಸ್ಯೆ ಆಗುವುದಲ್ಲದೇ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನೂ ಸಂಕೀರ್ಣಗೊಳಿಸುತ್ತದೆ. ನನ್ನ ಹಲವಾರು ಅಮೇರಿಕನ್ ಮಿತ್ರರು ಮತ್ತು ಸಹೋದ್ಯೋಗಿಗಳು ನಿವೃತ್ತಿ ಹೊಂದುವುದಕ್ಕೂ ಈ ಆರ್ಥಿಕ ಸಮಸ್ಯೆ ಅಡಚಣೆ ಆಗುವುದಾಗಿ ನಮ್ಮ ಸಂಭಾಷಣೆಯ ಮಧ್ಯೆ ತಿಳಿಸಿದ್ದಾರೆ. ಇನ್ನು ಆರ್ಥಿಕ ವಾಗಿ ಹಿಂದುಳಿದವರಲ್ಲಿ ಈ ಮಕ್ಕಳನ್ನು ಬೆಳೆಸುವ ಭಾರ ಸರಕಾರ ಹಾಗೂ ಸಮಾಜದ ಮೇಲೆ ಬೀಳುತ್ತದೆ. ಇದು ಇನ್ನೂ ಶೋಚನೀಯ ಪರಿಸ್ಥಿತಿ. ಇದರಿಂದ ಸಮಾಜದಲ್ಲಿ ಕೊಲೆ, ಸುಲಿಗೆ, ದರೋಡೆಗಳು ಜಾಸ್ತಿ ಆಗಿ, ಶಾಂತಿ ಕದಡುತ್ತದೆ.

ಸ್ತ್ರೀ ಸಂವೇದನೆ ಮತ್ತು ಸ್ತ್ರೀ ವಾದಗಳ ಮಿಶ್ರಣ - "ಗೃಹಿಣೀ ಗೃಹಮುಚ್ಯತೇ" ಬದಲಿಗೆ "ದಂಪತೀ ಗೃಹಮುಚ್ಯತೇ"

ಇದಕ್ಕೆಲ್ಲ "ಸ್ತ್ರೀತ್ವ"ವೇ ಕಾರಣ ಎಂದು ನಾನು ಪ್ರತಿಪಾದಿಸುವುದಿಲ್ಲ. ಆದರೆ ಸಮಾಜದಲ್ಲಿ ನೆಮ್ಮದಿ ಇರಬೇಕಿದ್ದರೆ, ಸ್ತ್ರೀ ಸಂವೇದನೆ ಜಾಸ್ತಿ ಇದ್ದು ಮತ್ತು ಸ್ತ್ರೀ ವಾದ ಕಡಿಮೆ ಇದ್ದರೆ ಒಳಿತೆಂದು ನನಗನ್ನಿಸುತ್ತದೆ. ಇಬ್ಬರಲ್ಲೂ ತಾಳ್ಮೆ ಬೇಕು, ಜತೆಗೆ ಇಬ್ಬರ  (ಮನೆ ಹಾಗೂ ಆಫ಼ೀಸಿನ) ಕೆಲಸಗಳ ಬಗ್ಗೆಯೂ ಗೌರವ ತೋರಬೇಕು. ಮನೆಯ ಹೊರಗಡೆ ಹೊಲದಲ್ಲಿ, ಆಫ಼ೀಸಿನಲ್ಲಿ ಕೆಲಸ ಮಾಡುವುದೂ, ಮನೆಯ ಒಳಗೆ ಮನೆಗೆಲಸ ಮಾಡಿಕೊಂಡಿರುವುದೂ ಸಮಾನ ಪ್ರಾಮುಖ್ಯತೆ ಪಡೆಯಬೇಕು. "ಗೃಹಿಣೀ ಗೃಹಮುಚ್ಯತೇ" ಬದಲಿಗೆ "ದಂಪತೀ ಗೃಹಮುಚ್ಯತೇ" ಎಂಬ ಧ್ಯೇಯ ವಾಕ್ಯ ಸುಖೀ ಸಂಸಾರದ ಸುಲಭ ಸೂತ್ರವಾಗಿ ಪರಿಣಮಿಸುತ್ತದೆ. ದಾಂಪತ್ಯ ಯಜ್ಞದಲ್ಲಿ ಗಂಡ ಮತ್ತು ಹೆಂಡಿರ ಸಹನೆ, ಶಾಂತಿಗಳು ಬಹಳ ಪ್ರಾಮುಖ್ಯ. ಹಾಗಾಗಿ ೭೫% ಸ್ತ್ರೀ ಸಂವೇದನೆ, ೨೫% ಸ್ತ್ರೀ ವಾದ ಸುಖ ಸಂಸಾರ ಮತ್ತು ಸುಖೀ ಸಮಾಜದ ಸೃಷ್ಟಿಗೆ ಸಹಾಯ ಮಾಡುತ್ತದೆ ಎಂದು ನನ್ನ ಅಭಿಪ್ರಾಯ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಬೇಕು. "ಮನ್ನಿಸು, ಮರೆ, ಮತ್ತು ಮುನ್ನಡೆ" ಎಂಬ ಸೂತ್ರದ ಪ್ರಾಮಾಣಿಕ ಅನುಷ್ಠಾನ ಮಾಡಬೇಕು. ಇದು ಕಷ್ಟಕರವಾದ ಕೆಲಸ, ಆದರೆ ಪ್ರಯತ್ನ ಮಾಡುವುದರಿಂದ ಜಯ ಸಿಗಬಹುದು. ಹಿಂದೆ ನಡೆದುದೆಲ್ಲವನ್ನೂ ಮರೆತು, "ಕ್ಲೀನ್ ಶೀಟ್ approach" ಮಾಡುವುದರಿಂದ ಸಕಾರಾತ್ಮಕ ಫಲಿತಾಂಶ ಸಿಗಬಹುದೇನೋ! ಸನಾತನ ಧರ್ಮದ ಕೆಟ್ಟ ಸಂದೇಶಗಳನ್ನು ಮತ್ತು ಆಚರಣೆಗಳನ್ನು ಮರೆತು, ಒಳ್ಳೆಯ ಸಂದೇಶಗಳನ್ನು ಅರಿತು, ಪಾಲಿಸಿ ಮುನ್ನಡೆಯುವುದರಿಂದ, ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ. ಸುಖೀ ಸಂಸಾರದ, ಹಾಗೂ ಆದರ್ಶ ರಾಜ್ಯದ ಕನಸು ನನಸಾಗುತ್ತದೆ.

ದಾಂಪತ್ಯವೆನ್ನುವ ಯಜ್ಞ

ಹೆಂಡತಿ ಗಂಡನನ್ನು ಸಾರ್ವಜನಿಕವಾಗಿ ಹೀಯಾಳಿಸುವ, ಹಿಂಸಿಸುವ ಹಲವಾರು ಸನ್ನಿವೇಶಗಳನ್ನು ನಾನು ನೋಡಿದ್ದೇನೆ. ಸರಿಯಾದ ಕೆಲಸ ಹುಡುಕಿ, ಸಂಸಾರ ನಡೆಸಲು ಬೇಕಾದಷ್ಟು ಆದಾಯ ತರದಿದ್ದರೆ, ಹೆಂಡತಿ ಗಂಡನನ್ನು ತಿರಸ್ಕಾರದಿಂದ ನೋಡುವುದಲ್ಲದೇ, ಹೀನಾಯವಾಗಿ ಹಿಂಸಿಸುವುದನ್ನು ಹಳ್ಳಿಗಳಲ್ಲೂ, ಪಟ್ಟಣದಲ್ಲೂ, ಇಲ್ಲಿ ಅಮೇರಿಕಾದಲ್ಲೂ ನೋಡಿದ್ದೇನೆ. ಡಾಕ್ಟರ್ ಪತಿಯನ್ನು ಬೇರೆ ಡಾಕ್ಟರುಗಳಿಗೆ ಹೋಲಿಸಿ ಎಲ್ಲರ ಎದುರೇ ಅವಮಾನ ಮಾಡುವುದನ್ನು ನೋಡಿದ್ದೇನೆ. ನಮ್ಮ ಜತೆಗೆ ಕೆಲಸ ಮಾಡುವವರಲ್ಲಿ ಒಬ್ಬರಿಗೆ ಬಡ್ತಿ ಸಿಕ್ಕಿ, ತನ್ನ ಪತಿಗೆ ಬಡ್ತಿ ಸಿಗದಿದ್ದಾಗ ಅವಹೇಳನ ಮಾಡುವುದನ್ನೂ ನೋಡಿದ್ದೇನೆ. ಒಬ್ಬರು ಟೆಸ್ಲ ಕಾರು ತೆಗೆದುಕೊಂಡಾಗ ತನ್ನ ಪತಿ ಹಳೆಯ ಮಾಡೆಲ್ ಕಾರಿನಲ್ಲಿ ತನ್ನನ್ನು ಪಾರ್ಟಗಳಿಗೆ ಕರೆದುಕೊಂದು ಹೋಗುವ ಗಂಡನನ್ನು ತಿರಸ್ಕಾರದಿಂದ ನೋಡುವ ಪತ್ನಿಯರನ್ನು ನೋಡಿದ್ದೇನೆ. ಹೀಗೆ "ಸ್ತ್ರೀತ್ವ" ದಲ್ಲಿ ಕೂಡ ಪುರುಷ ಸಮಾನತೆಯ ಕೊರತೆಯನ್ನು ನಾವು ನಮ್ಮ ದಿನ ಜೀವನದಲ್ಲಿ ನೋಡುತ್ತೇವೆ. ತಿಂಗಳ ಕೊನೆಯಲ್ಲಿ ಸರಿಯಾದ ಸಂಬಳ ತರದಿದ್ದಲ್ಲಿ ಮನೆಯವರು ನಿಮ್ಮನ್ನು ನೋಡುವ ರೀತಿಯೇ ಬೇರೆ. ಹಿಂದಿನ ಕಾಲದಲ್ಲಿ ಗಂಡಸರು ಮಾತ್ರ ಸಂಬಳ ಬರುವ ಕೆಲಸ ಮಾಡುತ್ತಿದ್ದಾಗ, ಹೆಂಗಸರು ಮನೆಗೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾಗ, ಒಂದು ತರಹ ಬಂದಾಗ, ಉದ್ಯೋಗ ಸಂಬಂಧವಾದ ಹೋಲಿಕೆ, ತಿರಸ್ಕಾರ ಇತ್ಯಾದಿ ಜಾಸ್ತಿ ಆಗಿ ವಿವಾಹ ವಿಚ್ಛೇದನದಲ್ಲಿ ಪರಿಸಮಾಪ್ತವಾಗುತ್ತಿದೆ. ನನ್ನ ಹಲವಾರು ಸ್ನೇಹಿತರು ಭಾರತದಲ್ಲಿ ವಾಸಿಸುತ್ತಿದ್ದಾಗ ಇದ್ದಕ್ಕಿಂತ ಎಷ್ಟೋ ಪಾಲು ಉತ್ತಮವಾದ ಜೀವನಮಟ್ಟವನ್ನು ಇಲ್ಲಿ ಅನುಭವಿಸುತ್ತಿದ್ದರೂ, ಸತಿ, ಪತಿಗಳ, ತಾಯಿತಂದೆಗಳ ಮತ್ತು ಮಕ್ಕಳ ನಡುವಿನ ಸಾಮರಸ್ಯ ಬಹಳ ಕಡಿಮೆಯಾಗಿ ಕಾಣುತ್ತದೆ. ನನ್ನ ಆತ್ಮೀಯ ಸ್ನೇಹಿತರ ವಿವಾಹವು, ಸಾಮರಸ್ಯವಿಲ್ಲದ ಸಂಸಾರದ ಕೊನೆಯ ಹಂತವಾದ, "ವಿವಾಹವಿಚ್ಛೇದನ" ದಲ್ಲಿ ಅಂತ್ಯಗೊಂಡು, ಮಕ್ಕಳು, ಗಂಡ, ಹೆಂಡತಿ ಎಲ್ಲರೂ ಬೆಂದು, ಬಸವಳಿದುದನ್ನು ಎಷ್ಟೋ ಬಾರಿ ನೋಡಿ ವ್ಯಥೆ ಪಟ್ಟಿದ್ದೇನೆ. ಸಿರಿವಂತಿಕೆಗೂ ನೆಮ್ಮದಿಗೂ ಸರಳ ಸಂಬಂಧವಿದೆ ಎಂಬ ಹಳೆಯ ನಂಬಿಕೆ ತಲೆಕೆಳಗಾಗಿ, ಇದು ವಿಲೋಮ ಸಂಬಂಧ ಎಂಬ ಹೊಸ ಅನುಭವವಾಗಿ ಇದರಿಂದ ತಡೆಯಲಾರದ ದುಃಖವಾಗುತ್ತದೆ. ಮೂಲಭೂತ ಅಗತ್ಯಗಳು, ಉಂಡುಟ್ಟು ಮಲಗಲು ಕಡಿಮೆ ಇರದಷ್ಟು ಸಂಪತ್ತು ಇದ್ದರೂ, ಕುಟುಂಬದ ನೆಮ್ಮದಿ ಮುಖ್ಯವೇ ಹೊರತು ವೈಯಕ್ತಿಕ ವಿಜಯ, ಸ್ಪರ್ಧಾತ್ಮಕ ಮನೋಭಾವಗಳು ಎಂದಿಗೂ ಹಿತವಲ್ಲ ಎಂದು ಅರಿಯದೇ ಹಮ್ಮು, ಬಿಮ್ಮುಗಳಿಂದ ಜಗಳಾಡುವುದು ಸರಿಯಲ್ಲ. ನಮ್ಮ ತಾಯಿ, ತಂದೆಯರು ಬೇಕಾದಷ್ಟು ಬಾರಿ ಜಗಳಾಡಿದ್ದನ್ನು ನೋಡಿದ್ದೇವೆ. ಅದರೂ ಅವರು ವಿವಾಹ ವಿಚ್ಛೇದನದ ಹಾದಿ ಹಿಡಿಯಲಿಲ್ಲ. ಸ್ತ್ರೀ ಸಂವೇದನೆಯ ಜತೆಗೆ ಪುರುಷ ಸಂವೇದನೆಯೂ ಅಗತ್ಯ ಎಂದು ನನಗನ್ನಿಸುತ್ತದೆ.

ಸನಾತನ ಸಂಸ್ಕ್ರತಿ ದಲ್ಲಿ "ಸ್ತ್ರೀ ಸಂವೇದನೆ" ಮತ್ತು "ಸ್ತ್ರೀತ್ವ" ಎರಡಕ್ಕೂ ಸರಿಸಮಾನವಾದ ಪ್ರಾಶಸ್ತ್ಯ

ನಮ್ಮ ಸನಾತನ ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, "ಸ್ತ್ರೀ ಸಂವೇದನೆ" ಮತ್ತು "ಸ್ತ್ರೀತ್ವ" ಎರಡಕ್ಕೂ ಸರಿಸಮಾನವಾದ ಪ್ರಾಶಸ್ತ್ಯ ಕೊಟ್ಟಿದ್ದರೆಂದು ನನಗನ್ನಿಸುತ್ತದೆ. ಚಂಡಿ, ಚಾಮುಂಡಿ, ದುರ್ಗಿ, ಕಾಳಿ ಯರಿಗೂ ಸರಸ್ವತಿ, ಲಕ್ಶ್ಮಿ, ಪಾರ್ವತಿಯರಿಗೂ ಸಮಾನ ಗೌರವವನ್ನು ಕೊಟ್ಟ ಸಂಸ್ಕೃತಿ ನಮ್ಮದು. ಇತರ ಧರ್ಮಗಳಲ್ಲಿ ಸ್ತ್ರೀಯರಿಗೆ ಕೊಟ್ಟಿರದಂತಹ ವಿಶೇಷ ಪ್ರಾಶಸ್ತ್ಯ ಹಿಂದೂ ಧರ್ಮ ಕೊಟ್ಟಿದೆ. ದ್ರೌಪದಿ ವಸ್ತ್ರಾಪಹರಣ, ಸೀತೆಯ ಅಗ್ನಿ ಪ್ರವೇಶ ಇತ್ಯಾದಿ ಘಟನೆಗಳಿಗೇ ಪ್ರಾಶಸ್ತ್ಯ ಕೊಡುವುದು ಸರಿಯಲ್ಲ. ಸೀತೆಗೂ, ದ್ರೌಪತಿಗೂ ಸಲ್ಲಬೇಕಾದ ಗೌರವ, ಮರ್ಯಾದೆಗಳನ್ನು ನಮ್ಮ ಪುರಾಣಗಳನ್ನು ಕೊಟ್ಟಿದೆ. ಮುನಿಗಳಿಗೆ ಕೊಡುವ ಗೌರವವನ್ನು ಅವರ ಪತ್ನಿಯರಿಗೂ ಕೊಟ್ಟಿದೆ.

ಮಹಿಳೆಯರು ಕೆಲವು ವಿಚಾರಗಳಲ್ಲಿ ಜಿದ್ದಿಗೆ ಬಿದ್ದವರಂತೆ ಪುರುಷರಿಗೆ ಸಮಾನವಾಗುವ ರೀತಿಯಲ್ಲಿ ಮುನ್ನಡೆಯುತ್ತಿರುವರು 

ಕನ್ನಡ ಕಲಿ ಜಾಲತಾಣದ ವೈಚಾರಿಕ ಲೇಖನ[https://kannadakali.com/article/culture/mahile-purusha.html] ಒಂದರಲ್ಲಿ ವಿವೇಕ ಬೆಟ್ಕುಳಿ ಅವರು ಹೇಳುವ ಮಾತುಗಳು ಇವು: 

"ಇತ್ತೀಚೀನ ದಿನಗಳಲ್ಲಿ ಕೆಲವು ಮಹಿಳೆಯರು ಕೆಲವು ವಿಚಾರಗಳಲ್ಲಿ ಜಿದ್ದಿಗೆ ಬಿದ್ದವರಂತೆ ಪುರುಷರಿಗೆ ಸಮಾನವಾಗುವ ರೀತಿಯಲ್ಲಿ ಮುನ್ನಡೆಯುತ್ತಿರುವರು. ಧೂಮಪಾನ, ಮಧ್ಯಪಾನಗಳಲ್ಲಿ ನಗರ ಪ್ರದೇಶದಲ್ಲಿ ಅತಿ ಹೆಚ್ಚು ಶಿಕ್ಷಿತ ಮಹಿಳಾ ಸಮುದಾಯ ಪುರುಷರಿಗೆ ಸಮಾನವಾಗಿ ಮುಂದೆ ಬರುತ್ತಿರುವುದು. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಉದ್ಯೋಗ, ಶಿಕ್ಷಣದ ಕಾರಣಕ್ಕಾಗಿ ಬರುವ ಸಾವಿರಾರು ಮಹಿಳೆಯರು ಮೋಜು ಮಸ್ತಿಯ ಹೆಸರಿನಲ್ಲಿ ಹೆಂಡದ ಹೊಳೆ ಹರಿಯುವ ರೇವ್ ಪಾರ್ಟಿಗಳಲ್ಲಿ, ಪಬ್ ಗಳಲ್ಲಿ, ಕಛೇರಿಯ ಪಾರ್ಟಿಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಧೂಮಪಾನ ಮಧ್ಯಪಾನ ಹಾಗೂ ಡ್ರಗ್ಸ್ ಸೇವನೆಗಳಲ್ಲಿ ತೊಡಗಿರುವುದು ನಿಜಕ್ಕೂ ಆಂತಕದ ಸಂಗತಿ. ಈ ಹವ್ಯಾಸಗಳು ಯಾರಿಗೂ ಒಳ್ಳೆಯದಲ್ಲ. ಜೀವವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಮಹಿಳೆಯರೆ ಈ ಚಟಗಳಿಗೆ ಒಳಗಾದರೆ ತಾಯಿ ಹಾಗೂ ಮಗು ಎರಡಕ್ಕೂ ಅಪಾಯ. ಈ ಸತ್ಯವನ್ನು ಒಪ್ಪಿ ನಿರ್ಧಾರ ಮಾಡುವ ಅಗತ್ಯವಿದೆ."

"ಸಹನೆಗೆ ಇನ್ನೊಂದು ಹೆಸರೇ ಮಹಿಳೆ. ಆ ಕಾರಣದಿಂದಲ್ಲೇ ಹೆಚ್ಚಾಗಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಸಂವೇದನಾ ಶೀಲತೆ ಇರುವುದು ಎಂದರೆ ತಪ್ಪಾಗಲಾರದು. ಮದುವೆಯಾಗಿ ಹೋದ ಗಂಡನ ಮನೆಯಲ್ಲಿ ಒಂದು ಹೆಣ್ಣಾಗಿ ಆ ಮನೆಯ ಮಗಳಾಗಿ ಜೀವನ ಸಾಗಿಸುವುದು ಹಿಂದಿನಿಂದ ನಡೆದು ಬಂದ ಪದ್ದತಿಯಾಗಿದೆ. ಮಹಿಳೆಗೆ ಆ ಸಹನೆ ಇರುವ ಕಾರಣದಿಂದಲ್ಲೇ ಎಷ್ಟೋ ಮದುವೆಯಾದ ಗಂಡಸರು ಸರಿದಾರಿಗೆ ಬಂದು ಜೀವನ ಸಾಗಿಸುತ್ತಿರುವುದನ್ನು ನಾವು ಕಾಣುವೆವು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಯಂತ್ರಗಳ ಬಳಕೆ, ಮಾನಸಿಕ ದ್ವಂದ, ಗಂಡ-ಗಂಡನ ಮನೆಯವರಿಂದ ಸಿಗದ ಅಪೆಕ್ಷೀತ ಪ್ರೀತಿ ಈ ಕಾರಣಗಳಿಂದ ಮಹಿಳೆ ಸಹನತೆಯನ್ನು ಕಳೆದುಕೊಳ್ಳುತ್ತಿರುವಳು. ಅದರ ಪರಿಣಾಮ ನೇರವಾಗಿ ತನ್ನದೇ ಮಕ್ಕಳ ಮೇಲೆ ಆಗುತ್ತಿರುವುದು ಸಹಜ. ಈ ಸಂದರ್ಭದಲ್ಲಿಯೂ ಮಗುವನ್ನು ಸಾಕುವದರ ಬಗ್ಗೆಯೂ ಸಮಾನತೆ ಪ್ರಶ್ನೆ ಬರುತ್ತಿರುವದು. ಕಾರಣ ನೈಸರ್ಗಿಕವಾಗಿ ಮಹಿಳೆಗೆ ಇರುವ ಸಹನತೆ ಗಂಡಸರಲ್ಲಿ ಹೆಚ್ಚಾಗಿ ಇರುವುದಿಲ್ಲ."

"ಇಂದಿನ ಮಕ್ಕಳು ತಾಯಿಯ ಪ್ರೀತಿ, ಅಜ್ಜಿಯ ಮಮತೆಯಿಂದ ದೂರವಾಗುತ್ತಿರುವರು. ನಗರ ಮಹಾನಗರದಲ್ಲಿ ಹೆಚ್ಚಿನ ಮಹಿಳೆಯರನ್ನು ನೋಡಿಕೊಳ್ಳಲು ಹಳ್ಳಿಗಳಿಂದ ಬಂದ ಕೆಲಸದವರು ಇರುವರು. ಚಿಕ್ಕ ಮಕ್ಕಳೊಂದಿಗೆ ಅಗತ್ಯ ಸಮಯವನ್ನು ತಾಯಿಯಾದವಳು ಕಳೆಯುತ್ತಿಲ್ಲ. ಆ ಬಗ್ಗೆ ಚರ್ಚೆ ಆದರೇ ಗಂಡು-ಹೆಣ್ಣಿನ ಸಮಾನತೆಯ ಬಗ್ಗೆ ಚರ್ಚೆ ಆಗುವದು. ಪರಿಣಾಮವಾಗಿ ತಾಯಿಗೆ ತನ್ನ ಮಗೂವನ್ನು ನೋಡಿಕೊಳ್ಳಲು ಟೈಮ ಇಲ್ಲ. ಆದರೆ ಮನೆಯಲ್ಲಿನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಗಂಡ-ಹೆಂಡತಿ ವೇಳೆಯನ್ನು ನಿಗದಿ ಮಾಡಿಕೊಂಡಿರುವುದು ವಿಪರ್ಯಾಸವಾಗಿದೆ. ಮೇಲೆ ತಿಳಿಸಿದ ಮೂರು ಸಂದರ್ಭವನ್ನು ಹೊರತು ಪಡಿಸಿ ಇಂತಹ ಹತ್ತಾರು ವಿಚಾರಗಳಲ್ಲಿ ಸಮಾನತೆ. ಸ್ವಾತಂತ್ಯ ಈ ವಿಚಾರಗಳನ್ನು ಇಟ್ಟು ಸಾಧಕ-ಬಾಧಕಗಳ ಬಗ್ಗೆ ಯೋಚಿಸುವ ಅಗತ್ಯವಿದೆ."

"ಮೂಕಜ್ಜಿಯ ಕನಸುಗಳು" - ಒಂದು ತುಲನಾತ್ಮಕ ವಿಶ್ಲೇಷಣೆ

ಮೂಕಾಂಬಿಕೆಯನ್ನು ಎಳೆಯ ವಯಸ್ಸಿನಲ್ಲಿ ಮೂಕಜ್ಜಿಯಾಗಿ ಮಾಡಿದ ಸಮಾಜ ಅವಳನ್ನು ಅತ್ಯಂತ ಉನ್ನತ ಸ್ಥಾನದಲ್ಲಿಟ್ಟು ಗೌರವಿಸಿದೆ. ಅಂದಿನ ಕಟ್ಟಳೆಗಳನ್ನು, ಸಂಪ್ರದಾಯಗಳನ್ನು ಬದಲಾಯಿಸಿಕೊಂಡು ಅವಳಿಗೂ ಗೌರವಯುತ ಸ್ಥಾನ ಕೊಡಲು ಪ್ರಯತ್ನಿಸಿದೆ. ವಿಧವೆಯರ ಪರಿಸ್ಥಿತಿ ಬದಲಾಗಿದೆ. "ಸ್ತ್ರೀತ್ವ"ದಿಂದ ಪ್ರತೀಕಾರ ಮನೋಭಾವನೆಯ ನಕಾರಾತ್ಮಕ ಸಂಬಂಧಗಳ ಬದಲು, "ಸ್ತೀ ಸಂವೇದನೆ"ಯಿಂದ ಸಕಾರಾತ್ಮಕ ಸಂಬಂಧಗಳನ್ನು ಬೆಳೆಸಲು, ಅಭಿವ್ರದ್ಧಿಗೊಳಿಸಲು ಸಹಾಯ ಮಾಡುತ್ತಿದೆ. ಕಾರಂತರ ಸ್ರಷ್ಟಿ, "ಮೂಕಜ್ಜಿ"ಯ ನಿಷ್ಕಳಂಕ, ನಿರ್ಮಲ, ಮುಗ್ದ ಮಾತುಗಳು, ಯಾವ ಸ್ತ್ರೀತ್ವ ಪ್ರತಿಪಾದಕ ಹೆಣ್ಣಿನ ವಾದಕ್ಕಿಂತಲೂ ಕಡಿಮೆಯಲ್ಲ. " ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಂದೊಂದು ದೇವರನ್ನು ಮಾಡಿಕೊಂಡಿದ್ದಾರೆ, ಅವನೇನು ಮಾಡುತ್ತಿದ್ದಾನೋ, ಯಾರ‍್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ‍್ಯಾರು ನಂಬುವುದಿಲ್ಲಎಂದು ಹುಡುಕಿಕೊಂದು ಹೋಗಲಾರ. ಅವನ ಚಿಂತೆಯೇ ಇಲ್ಲದ ಎಷ್ಟೋ ಪ್ರಾಣಿಗಳಿಲ್ಲವೆ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ. ಅವನನ್ನು ತಿಳಿಯ ಬೇಕಿದ್ದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾಗಿಲ್ಲ. ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ, ನಾವೇ ಅವಕ್ಕೆ ಉತ್ತರ ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟಕಂಡಂತೆ ನಡೆದಾಗ ದೇವರ ಇಷ್ಟ ಎನ್ನುತ್ತೇವೆ, ಅನಿಷ್ಟ ಪ್ರಾಪ್ತವಾದಾಗ ಅವನನ್ನು ಬಯ್ಯುತ್ತೇವೆ. ದೇವರು ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಎಲ್ಲರ ಜತೆ ಬಾಳಿ ಬದುಕುವುದೇ ಪೂಜೆ ಎಂಬ ಬುದ್ಧಿ ಯಾಕೆ ಬರಬಾರದು ನಮಗೆ? ಹೀಗೇ ಸಾಗುತ್ತದೆ ಮೂಕಜ್ಜಿಯ ಚಿಂತನೆ. ಮೂಕಜ್ಜಿ ಸ್ತ್ರೀತ್ವದ ವಾದಕ್ಕೆ ಮಣಿದಿದ್ದರೆ ೮೫ ವರುಷ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿತ್ತೇ? ಸ್ತ್ರೀತ್ವ ವಾದದಿಂದ ಸ್ತ್ರೀಯರ ಮಾನಸಿಕ ನೆಮ್ಮದಿ ಹೆಚ್ಚುತ್ತದೆಯೇ? ಅತಿಯಾದ ಸ್ತ್ರೀತ್ವ ವಾದ ಗಂಡಸರ ಎಲ್ಲ ಚಟುವಟಿಕೆಗಳಲ್ಲಿ ಸಮಾನ ಪಾಲುದಾರಿಕೆಯನ್ನು ತಮ್ಮ ಹಕ್ಕೆಂದು ಪರಿಗಣಿಸುವುದರಿಂದ ಅನರ್ಥಗಳಾಗುವ ಸಂಭವವಿದೆ. ಕೆಲವು ವರ್ಷಗಳ ಹಿಂದೆ ಅಮೇರಿಕದ ಸೈನ್ಯದಲ್ಲಿ, "ಸಮಾನ ಹಕ್ಕ"ನ್ನು ಪ್ರತಿಪಾದಿಸಿ ಅದರಿಂದ ಹಿಂಸೆಗೊಳಗಾದ ವರದಿಯನ್ನು ಓದಿದ್ದ ನೆನಪು. ಹಾಗೆಯೇ, ಗಂಡಸರೂ ಮನೆಯಲ್ಲಿದ್ದು ಚಿಕ್ಕ ಮಕ್ಕಳ ಲಾಲನೆ, ಪಾಲನೆ ಮಾಡಲು ಪಟ್ಟ ಹಿಂಸೆಯನ್ನೂ ಕೇಳಿದ್ದೇನೆ.

ಸಾರಾಂಶ

ಒಟ್ಟಾರೆ ಇವೆಲ್ಲದರ ಸಾರಾಂಶ ಇಷ್ಟೆ, "ಅತಿ ಸರ್ವತ್ರ ವರ್ಜಯೇತ್.” ಉತ್ತಮ ಮಟ್ಟದ "ಹಿತಮಿತ"ವಾದ "ಸ್ತ್ರೀತ್ವ"ದ ಜತೆಗೆ, "ಉತ್ತಮ ಮಟ್ಟ"ದ ಪ್ರಾಮಾಣಿಕವಾದ "ಸ್ತ್ರೀ ಸಂವೇದನೆ" (೭೫% ಸ್ತ್ರೀ ಸಂವೇದನೆ, ೨೫% ಸ್ತ್ರೀತ್ವ ವಾದ) ಸೇರಿದರೆ ಕೌಟುಂಬಿಕ ಸುಖ ಹಾಗೂ ವಿಶ್ವದ ಶಾಂತಿ, ಸಮೃದ್ಧಿಗೆ ಸಹಾಯವಾಗುವುದು. ಚಳವಳಿಗಳಿಂದ, ದ್ವೇಷದಿಂದ, ಪ್ರತೀಕಾರದ ಮನಸ್ಥಿತಿಯಿಂದ ಕೌಟುಂಬಿಕ ಸುಖ ಹಾಗೂ ವಿಶ್ವದ ಶಾಂತಿ, ಸಮ್ರ ದ್ಧಿ ಸಾಧ್ಯವಿಲ್ಲ. ಗಂಡು ಮತ್ತು ಹೆಣ್ಣುಗಳು ಪರಸ್ಪರ ಅರಿತು, ಬೆರೆತು, ಕ್ಷಮಿಸಿ, ಗೌರವಿಸಿ, ಸಕಾರಾತ್ಮಕವಾಗಿ ಸ್ಪಂದಿಸಿ, ನಕಾರಾತ್ಮಕ ಪ್ರತಿಕ್ರಿಯೆಗಳನ್ನು ತಿರಸ್ಕರಿಸಿ, ಪರಸ್ಪರ ಪ್ರೋತ್ಸಾಹಿಸಿ ಮುನ್ನಡೆದರೆ ಸಮಾಜದ ಕಲ್ಯಾಣ ಸುಲಭವಾಗುವುದಲ್ಲದೇ, ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ. ಇದರಿಂದ ನಮ್ಮ ಹಿರಿಯರಿಗೂ, ಮುಂದಿನ ಪೀಳಿಗೆಗೂ, ಸುಖ, ಶಾಂತಿ, ಸಮೃದ್ಧಿಗಳು ದೊರಕುವುದರಲ್ಲಿ ಸಂಶಯವಿಲ್ಲ. ಮನ್ನಿಸು, ಮರೆ, ಮತ್ತು ಮುನ್ನಡೆ (Forget, Forgive and Move Forward.)

ಏನಂತೀರಿ?

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.