ನುಡಿದರೆ ಮುತ್ತಿನ ಹಾರ

ನುಡಿದರೆ ಮುತ್ತಿನ ಹಾರ
communico, ergo sum!

¾ ವಿಶ್ವೇಶ್ವರ ದೀಕ್ಷಿತ

[ಏನು ನುಡಿಯುತ್ತೀರೋ ಅದೇ ನೀವು! ಮಾತಿನ ಮಹತ್ವ ಅಷ್ಟಿದೆ. ಪ್ರಪಂಚದ ವ್ಯವಹಾರಗಳೆಲ್ಲವೂ ಮಾತಿನಿಂದಲೇ. ಮಾತಿನಿಂದಲೆ ಗಳಿಕೆ, ಮಾತಿನಿಂದಲೆ ಉಳಿಕೆ. ಮಾತಿನಿಂದಲೆ ತಿಳಿವು, ಮಾತಿನಿಂದಲೆ ಅಳಿವು. ಇದು ಮಾತಿನ ಮಹತ್ವ. ಹಾಗಾದರೆ, ನಮ್ಮ ನುಡಿ ಹೇಗಿರಬೇಕು? ನುಡಿಗೆ ಲಿಂಗ ಬೇಕೆ? ನುಡಿಯ ನೆಲೆ ಎಲ್ಲಿದೆ? ವಚನ ಸುಭಾಷಿತ ಸ್ಮೃತಿಗಳು ಏನನ್ನುತ್ತವೆ? - ಸಂ.]

 

೧ ನುಡಿ ಅಂದರೆ ಏನು?
ನುಡಿ ಅಂದರೆ ಇಲ್ಲಿ ಕೇವಲ ಮಾತು ಅಲ್ಲ. ಎಲ್ಲ ರೀತಿಯ ಮಾನವ ಸಂಪರ್ಕ ಮತ್ತು ಸಂವಹನಗಳೂ ನುಡಿ.  ಪರಸ್ಪರ ಸಂಪರ್ಕ ಸಂವಹನಗಳೆ ನಮ್ಮ ಅಸ್ತಿತ್ವ. Communico, ergo sum! ಅಂದರೆ, I commucate, therefore I exist. ಇದು ವಿಚಿತ್ರ ಎನಿಸಿದರೂ ಸತ್ಯ.‌  ಆದ್ದರಿಂದ ನುಡಿ ಅಥವ ಮಾತಿನ ಮಹತ್ವವನ್ನು ಇದಕ್ಕಿಂತ ಹೆಚ್ಚಿಗೆ ಒತ್ತಿ ಹೇಳಲು ಸಾಧ್ಯವಿಲ್ಲ.   ವಾಟ್ಸಾಪ್‌, ಇನ್ಸ್ಟಗ್ರಾಂ, ಟ್ವಿಟರ್‌, ಟಿಕ್-ಟಾಕ್, ಯೂ-ತೂಬು, ಮುಖ-ಪುಸ್ತಕ, ಇತ್ಯಾದಿ ಸೋಶಿಯಲ್‌ ಮೀಡಿಯಗಳೆ ನಮ್ಮ ಪ್ರಪಂಚ ಆಗಿವೆ. ಒಂದು ದಿನ, ಒಂದು ಗಂಟೆ ಒಂದು ಸಂದೇಶ ಬರದಿದ್ದರೆ ಏನೋ ಕಸಿವಿಸಿ; ಸುಮ್ಮ ಸುಮ್ಮನೆ ಮೊಬೈಲ್‌ ತೆರೆದು ನೋಡುವ ತುಡಿತ. ಇವೇ ನಮ್ಮನ್ನು ನಿರೂಪಿಸುವ ಸೂತ್ರಗಳಾಗಿವೆ! ಆದ್ದರಿಂದ ಮಾತೇ ನಾನು; ಮಾತೇ ಆತ್ಮ!

೨ ಮಾತಿನಿಂದ ಸರ್ವಸ್ವ

ಲಕ್ಷ್ಮೀರ್ವಸತಿ ಜಿಹ್ವಾಗ್ರೇ, 
       ಜಿಹ್ವಾಗ್ರೇ ಮಿತ್ರಬಾಂಧವಾಃ
ಜಿಹ್ವಾಗ್ರೇ ಬಂಧನಂ ಪ್ರಾಪ್ತಂ, 
       ಜಿಹ್ವಾಗ್ರೇ  ಮರಣಂ ಧ್ರುವಂ!
                            ¾ ಶಾರ್ಙಧರ ಪದ್ಧತಿ

ಮಾತಿನಿಂದ ಸಿರಿ, ಗೆಳೆಯರು, ಬಂಧುಗಳು, ದುಃಖ, ಜೈಲು, ಮತ್ತು ಸಾವು ಕೂಡ. ಇದನ್ನೆ ಕನ್ನಡದಲ್ಲಿ ಹೀಗೆ ಹೇಳಿದ್ದಾನೆ ಸರ್ವಜ್ಞ:

                     ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಹೊಲೆಯು
ಮಾತಿನಿಂ ಸರ್ವ ಸಂಪದವು, ಲೋಕಕ್ಕೆ 
ಮಾತೆ ಮಾಣಿಕ್ಯ ಸರ್ವಜ್ಙ                    

೩ ನುಡಿ ಹೇಗಿರಬೇಕು?

ನುಡಿದರೆ ಮುತ್ತಿನ ಹಾರದಂತಿರಬೇಕು!

ಇದು ಬಸವ ವಚನ.

      ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
    ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!
ನುಡಿಯೊಳಗಾಗಿ ನಡೆಯದಿದ್ದರೆ 
      ಕೂಡಲಸಂಗಮದೇವನೆಂತೊಲಿವನಯ್ಯ ? 

ನುಡಿ ಹೇಗಿರಬೇಕು ಎನ್ನವುದಕ್ಕೆ ಈ ವಚನವೇ ಆದ್ಯ ಉದಾಹರಣೆ!

 ೩.೧ ಮುತ್ತಿನ ಗುಟ್ಟು
ಮುತ್ತೇ ಏಕೆ? ಮುತ್ತು ಸಾಂದ್ರ, ಅಂದರೆ ಮಾತು ಗಟ್ಟಿ ಆಗಿರಬೇಕು; ಒಂದು ಮುತ್ತು ಹುಟ್ಟಬೇಕಾದರೆ ಸಮಯ ಬೇಕು, ಸಾವಧಾನವಾಗಿ ಹರಳುಗಟ್ಟಬೇಕು. ಹಾಗೆಯೆ, ಮಾತು ವಿಚಾರಪೂರ್ವಕ ಬೆಳೆದು ಅರ್ಥಗರ್ಭಿತವಾಗಿ ಹೊರಬರಬೇಕು. ಮುತ್ತು ವಿರಳ; ಸಾವಿರ ಸಿಂಪಿಗಳಲ್ಲಿ ಒಂದು ಮುತ್ತನ್ನು ಹೊಂದಿರಬಹುದು.  ಮಾತು ಕೂಡ ಅನಾವಶ್ಯಕವಾಗಿರಬಾರದು. ಅಂದರೆ ಪದಜಿಪುಣನಾಗಿರಬೇಕು.

೩.೨ ಹಾರದ ಬಂಧ
ಅದೆಲ್ಲ ಸರಿ.  ಹಾರ ಏಕೆ? ಪದಗಳನ್ನು  ಅಸಂಬದ್ಧವಾಗಿ ಅಲ್ಲಲ್ಲಿ ಉಗುಳಿದರೆ ನುಡಿ ಅಲ್ಲ. ಪದಗಳು ಪೋಣಿಸಿದ ಹಾರದಂತೆ ಅರ್ಥ ಮತ್ತು ತರ್ಕ-ವಿಚಾರಗಳ ಸೂತ್ರದಲ್ಲಿ ಬಂಧಿತವಾಗಿರಬೇಕು. ತರ್ಕದ ಬಲ  ಬುದ್ಧಿಯನ್ನು ಗೆಲ್ಲುವಂತಿರಬೇಕು.

೩.೩ ಮಾಣಿಕ್ಯದ ಹೊಳಪು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ಮಾಣಿಕ್ಯ ಶುದ್ಧ ಮತ್ತು ಪ್ರಕಾಶಮಾನ. ಹಾಗೆ ನಾವು ನುಡಿದ ನುಡಿ ಶುದ್ಧ ಜ್ಞಾನದೀಪವಾಗಿರಬೇಕು.  ನಮ್ಮ ಮಾತಿನಲ್ಲಿ ತಿಳಿವಿನ ಹೊಳಹು ಸೂಸುತ್ತಿರಬೇಕು. 

೩.೪ ಸ್ಫಟಿಕದ ಸರಳು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ಸ್ಫುಟವಾದ ಮಾತು ಸ್ಫಟಿಕದಂತೆ. ಶಲಾಕೆ ಅಂದರೆ ನೇರವಾದದ್ದು.  ಸುತ್ತು-ಬಳಸು, ವಕ್ರತೆ ಇಲ್ಲದ್ದು.  ಅನರ್ಥ,  ನಿರರ್ಥ, ಅನ್ಯಾರ್ಥಗಳು ಇಲ್ಲದೆ  ( see dasa kollu article) ನೇರವಾಗಿ ಎದೆ ಮುಟ್ಟುವಂತೆ ಇರಬೇಕು; ಸ್ಫಟಿಕ crystallize ಆಗುವಂತೆ ಇಂಗಿತ ಅರ್ಥ ತಂತಾನೆ ಮನಸ್ಸಿನಲ್ಲಿ ಇಳಿದು ಗಟ್ಟಿಯಾಗಬೇಕು.

೩.೫ ನುಡಿಯ ಲಿಂಗ
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ವಿವರಿಸಲು ಇದು ತುಸು ಕಠಿನವಾದದ್ದು.
ಇಲ್ಲಿ, ಮೆಚ್ಚು ಅಂದರೆ ಒಪ್ಪವಂತಿರಬೇಕು, ಕೇಳುಗ ಮತ್ತು ಮಾತಾಡುವವ ಇಬ್ಬರೂ!; ಆಡಿದ್ದು ಸರಿ ಅಲ್ಲ ಅಂತ ಅನಿಸಿದರೆ ಅದು ಖಂಡಿತ ಸರಿ ಅಲ್ಲ!

ಮೊದಲನೆಯದಾಗಿ, ಸಂಸ್ಕೃತದಲ್ಲಿ ಲಿಂಗ ಅಂದರೆ‌ ಶಬ್ದದ ಧರ್ಮ ಅಥವ ಶಬ್ದತ್ವ; ಅಂದರೆ ಲಿಂಗದಿಂದ ಶಬ್ದಕ್ಕೆ ಅರ್ಥ, ಲಿಂಗದಿಂದ ಶಬ್ದಕ್ಕೆ ಸಾಮರ್ಥ್ಯ; ಲಿಂಗದಿಂದೆ ಶಬ್ದಗಳಲ್ಲಿ ಹೊಂದಾಣಿಕೆ, ಅರ್ಥ ಸಮನ್ವಯ. ಲಿಂಗ ಇಲ್ಲದ ಮಾತು ಕೇವಲ ಧ್ವನಿಸಮೂಹ ಮಾತ್ರ; ಶಬ್ದ ಬರಿ ಸದ್ದು, ಸೊಲ್ಲು ಬರಿ ಗುಲ್ಲು.

ಆದ್ದರಿಂದ ಯಾವ ಮಾತುಗಳಲ್ಲಿ ಅರ್ಥ ತುಂಬಿದೆಯೋ, ಸಾಮರ್ಥ್ಯ ಹುದುಗಿದೆಯೋ,   ಹೊಂದಾಣಿಕೆ ಇದೆಯೊ ಅಂದರೆ ಲಿಂಗ ಸಂಪೂರ್ಣ ಮೆಚ್ಚಿದೆಯೋ, ಅಂತಃಸಾಕ್ಷಿ ಒಪ್ಪಿದೆಯೋ ಆ ಮಾತುಗಳೆ ಆಡಲು ತಕ್ಕವು.

ಎರಡನೆಯದಾಗಿ, ಲಿಂಗ ಅಂದರೆ ಪಂಚ ಕೋಶ ಮೀರಿದ ಪ್ರಜ್ಞಾನ, ಆತ್ಮ; ಲಿಂಗ ಅಂದರೆ ಪರಮಾತ್ಮ.  ಜನತಾ ಜನಾರ್ದನ ಅಂದಂತೆ ಜನತೆಯೆ ದೇವರು.  ಅದಕ್ಕೆ, ಎದುರ ಬಂದವರಲ್ಲಿರುವ ಪರಮಾತ್ಮನಿಗೆ ನಮಸ್ಕಾರ ಮಾಡುವುದು ನಮ್ಮ ಸಂಸ್ಕೃತಿ. ಲಿಂಗವೆ ನಮ್ಮಲ್ಲಿರುವ ಪ್ರಜ್ಞೆ  ಮತ್ತು ಆತ್ಮಸಾಕ್ಷಿ.  

೩.೬ ಲಿಂಗೋದ್ಭವ
ಇದಕ್ಕೆ ಮೆಚ್ಚಿಕೆಯಾಗುವ ನುಡಿಗೆ ಮೂಲ ನಮ್ಮ ವಿಚಾರ ಆಚಾರಗಳು -  ನಡೆ ಬಗೆಗಳೆ ನುಡಿಯ ತಳಹದಿ. ಅಂದರೆ ಮಾತು ನಾಲಗೆಯಲ್ಲಿ ಇಲ್ಲ, ನಮ್ಮ ವಿಚಾರ-ಆಚಾರಗಳಲ್ಲಿ ನೆಲೆಸಿದೆ. ಬಗೆ-ನಡೆ-ನುಡಿ ಹೊಂದಾಣಿಕೆಯೆ ಲಿಂಗ. ಬಗೆ-ನಡೆ-ನುಡಿ ಮೂರರ ಸಂಗಮದಲ್ಲೇ ಲಿಂಗೋದ್ಭವ;‌  ಅರ್ಥದ ಉತ್ಪತ್ತಿ.  ವಿಚಾರಕ್ಕೆ ಹೊಂದದ ನಡೆಗೆ, ನಡೆ ಇಲ್ಲದ ಮಾತಿಗೆ ಬೆಲೆ ಇಲ್ಲ.  ಅದನ್ನು ಜನತೆಯೂ ಮೆಚ್ಚದು, ಜನಾರ್ದನನೂ ಮೆಚ್ಚನು, ನಮ್ಮ ಅಂತರಾತ್ಮವೂ ಮೆಚ್ಚದು. 

ಇರಲಿ, ಆಧ್ಯಾತ್ಮಿಕ‌ ವಿಚಾರಗಳು ಈ ಬಿತ್ತರಿಕೆಗೆ ಮೀರಿದವುಗಳು.  ಸದ್ಯಕ್ಕೆ ಭಾಷೆಯ ವ್ಯಾವಹಾರಿಕ ಮಿತಿಯಲ್ಲಿ, ನಮ್ಮ ಅಂತಃಸಾಕ್ಷಿ ಮತ್ತು ಕೇಳಿಸಿಕೊಂಡ ಜನರು ಒಪ್ಪಿಕೊಳ್ಳುವಂತೆ ನಮ್ಮ ಮಾತುಗಳು ಇರಬೇಕು ಎಂದಿಟ್ಟುಕೊಳ್ಳೋಣ. 

೪ ಮಾತಿಗೇಕೆ ಬಡತನ?
ಮಾತು ಗಟ್ಟಿಯಾಗಿರಬೇಕು ಮತ್ತು ವಿರಳವಾಗಿರಬೇಕು ಅಂದರೆ ಮಾತೇ ಆಡದಿರುವುದಲ್ಲ! ಮಾತಿಗೇಕೆ ಬಡತನ?

      ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ;
    ತಸ್ಮಾತ್ತದೇವ ವಕ್ತವ್ಯಂ; ವಚನೇ ಕಾ ದರಿದ್ರತಾ?    
                               ¾ ಸುಭಾಷಿತ ರತ್ನಭಾಂಡಾಗಾರ

ಪ್ರಿಯವಾದ ಮಾತುಗಳಿಂದ ಎಲ್ಲರಿಗೂ ಸಂತೋಷ. ಆದ್ದರಿಂದ ಪ್ರಿಯವಾದ ಮಾತುಗಳನ್ನೇ ಆಡಬೇಕು. ಮಾತಿಗೇಕೆ ಬಡತನ?

೫ ಹುಸಿ ನುಡಿ ಬೇಡ
ಹಾಗಂತ, ಸುಮ್ಮನೆ ಜನರನ್ನು ಮೆಚ್ಚಿಸುವದಕ್ಕೋಸ್ಕರ‌ ನುಣ್ಣನೆ ಹುಸಿ ನುಡಿಯಬಾರದು

       ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, 
       ನ ಬ್ರೂಯಾತ್ ಸತ್ಯಮಪ್ರಿಯಂ;
    ಪ್ರಿಯಂ ಚ ನಾನೃತಂ ನ ಬ್ರೂಯಾತ್     
ಏಷ ಧರ್ಮಃ ಸನಾತನಃ     
                                   ¾ ಮನುಸ್ಮೃತಿ ೪-೧೩೮
ಸತ್ಯವನ್ನು ನುಡಿಯಬೇಕು, ಪ್ರಿಯವಾದುದನ್ನು ನುಡಿಯಬೇಕು; ಸತ್ಯವಾದರೂ ಅಪ್ರಿಯವಾದುದನ್ನು ನುಡಿಯಬಾರದು. ಅಂತೆ, ಪ್ರಿಯವಾದರೂ‌ ಅಸತ್ಯವನ್ನು ಎಂದೂ ನುಡಿಯಕೂಡದು. ಇದು ಎಂದಿನಿಂದ ನಡೆದು ಬಂದ ನಮ್ಮ ಸಂಪ್ರದಾಯ.

೬.ಸಮಯೌಚಿತ್ಯ
ಮಾತಿಗೆ ಸಮಯದ ಔಚಿತ್ಯ  ಮುಖ್ಯವಾದದ್ದು. ಯಾವುದನ್ನು ಯಾವಾಗ ಹೇಳಬೇಕೋ ಆವಾಗ ಹೇಳಬೇಕು.  ಪರೀಕ್ಷೆ ಆದ ಮೇಲೆ ಉತ್ತರ ಹೊಳೆದಂತೆ ಆಗಬಾರದು. ಪ್ರಶ್ನೋತ್ತರ, ಶುಭಾಶಯ, ಹೊಗಳಿಕೆ, ತೆಗಳಿಕೆ, ಸಂತಾಪ ಸೂಚನೆ ಯಾವುದೇ ಆಗಲಿ ಆಯಾ ಸಮಯದಲ್ಲಿ ಹೇಳಿದರೆ ಅದಕ್ಕೆ ಬೆಲೆ. 

     ಹೊತ್ತಿಗೊದಗಿದ ಮಾತು ಸತ್ತವನು ಎದ್ದು ಬಂದಂತೆ
ಹೊತ್ತಾಗಿ ನುಡಿದ ಮಾತು ಕೈಜಾರಿದ                   
ಮುತ್ತಿನಂತಿಹುದು ಸರ್ವಜ್ಙ                               

ಹೀಗೆ ಕನ್ನಡ ನುಡಿಯಲ್ಲಿ, ಕನ್ನಡಿಗರ ತಿಳಿವಿನಲ್ಲಿ ಮಾತನ್ನು ಮುತ್ತಿಗೆ ಹೋಲಿಸುವ ಉಪಮೆ  ಮತ್ತ ಮತ್ತೆ ಮರುಕಳಿಸುವದರಿಂದ ಮಾತಿನ ಮಹತ್ವವನ್ನು ಅರಿತುಕೊಳ್ಳಬೇಕು. 

೭.ನುಡಿ ಅಂದರೆ ಕಂನುಡಿ
ಒಟ್ಟಿನಲ್ಲಿ, ಉತ್ತಮ ವಿಚಾರ ಮತ್ತು ಉತ್ತಮ ನಡೆಗಳ ತಳಹದಿಯಲ್ಲಿ, ಪ್ರಿಯವಾದ, ಸಮಯೋಚಿತವಾದ, ಶುದ್ಧವಾದ, ನೇರವಾದ, ತರ್ಕಬದ್ಧವಾದ, ವಿಚಾರಪೂರ್ಣವಾದ,  ಒಳರ್ಥ ಹೊರರ್ಥಗಳು ಒಂದಾದ ಅಂದರೆ ಕಪಟತನ ಇಲ್ಲದ, ಗಟ್ಟಿಯಾದ ತಿಳಿವು ತುಂಬಿದ ನುಡಿಗಳು ನಮ್ಮದಾದಾಗ ಲಿಂಗೋದ್ಭವ ಖಚಿತ.  ಅಂದರೆ ನಮ್ಮ ನುಡಿ ಕಂನುಡಿಯಾಗಿರಬೇಕು.

ನಿಮ್ಮವನೆ ಆದ, ವಿಶ್ವೇಶ್ವರ ದೀಕ್ಷಿತ


ಕನ್ನಡ ಕಲಿ, ಕನ್ನಡದ ಗುಟ್ಟು

ನುಡಿದರೆ ಮುತ್ತಿನ ಹಾರ
communico, ergo sum!

ಲೇಖನ: ವಿಶ್ವೇಶ್ವರ ದೀಕ್ಷಿತ
ಸಂಗೀತ: ಆಕಾಶ ದೀಕ್ಷಿತ

ಪಠ್ಯದಿಂದ ಧ್ವನಿಗೆ:  ಗಗನ್‌ ಗೂಗ್ಲೇ ಮತ್ತು ಸಪ್ನಾ ಗೂಗ್ಲೇ  
ಬಿತ್ತರಿಕೆ ೧೪ ಕಾಲ ೨೦೨೪, ಸಂಖ್ಯೆ ೦೨: ಬಿಕಾಸ ೧೪-೨೦೨೪-೦೨
Episode 14, Year 2024 No. 02 : BIKASA 14-2024-02

00:00.0    ಕನ್ನಡದ ಗುಟ್ಟು
00:35.0    ಪೀಠಿಕೆ
01:05.0    ನುಡಿ ಅಂದರೆ ಏನು?
02:04.0    ಮಾತಿನಿಂದ ಸರಸ್ವ
02:04.0    [ಲಕ್ಷ್ಮೀರ್ವಸತಿ]
02:35.0    [ಮಾತಿನಿಂ ನಗೆ]
02:52.0    ನುಡಿ ಹೇಗೆ ಇರಬೇಕು?
02:56.5    [ನುಡಿದರೆ ಮುತ್ತಿನ]
03:30.0    ಮುತ್ತಿನ ಗುಟ್ಟು
04:05.0    ಹಾರದ ಬಂಧ
04:25.0    ಮಾಣಿಕ್ಯದ ಹೊಳಪು
04:44.5    ಸ್ಫಟಿಕದ ಸರಳು
05:14.5    ನುಡಿಯ ಲಿಂಗ
07:35.0    ಮಾತಿಗೇಕೆ ಬಡತನ?
07:43.5    [ಪ್ರಿಯವಾಕ್ಯ ಪ್ರದಾನೇನ]
08:06.0    ಹುಸಿ ನುಡಿ ಬೇಡ
08:11.3    [ಸತ್ಯಂ ಬ್ರೂಯಾತ್]
08:40.0    ಸಮಯೌಚಿತ್ಯ
09:01.8    [ಹೊತ್ತಿಗೊದಗಿದ ಮಾತು]
09:29.5    ನುಡಿ ಅಂದರೆ ಕಂನುಡಿ
09:58.5    ಮನ್ನಣೆ, ಸಂಪರ್ಕ

ತಾಗುಲಿ :  Kannada speech, Basava, vachana