Novರಾತ್ರಿ ಸರಣಿ: ದಿನ ೧, ಮಿಥ್ಯೆ ೧ : ಕನ್ನಡದ ಹುಟ್ಟು

Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
     - ಡಿ.ಎಸ್.‌ ಕರ್ಕಿ

ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು

Novರಾತ್ರಿ ಸರಣಿ, ದಿನ ೧, ಮಿಥ್ಯೆ೧ : ಕನ್ನಡದ ಹುಟ್ಟು

❌೧. ಸಂಸ್ಕೃತದಿಂದ ಕನ್ನಡ ಹುಟ್ಟಿದೆ

ತಪ್ಪು. ಕನ್ನಡ ಸಂಸ್ಕೃತದಿಂದ ವಿಭಿನ್ನವಾದ ಮತ್ತು ಬೇರೆ ಮೂಲದ ಭಾಷೆ. ಕನ್ನಡ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಒಂದು ಸ್ವತಂತ್ರ ಭಾಷೆ.
ಜನರ ಬೆರೆಕೆ ಮತ್ತು ಪರಸ್ಪರ ವ್ಯವಹಾರಗಳಿಂದ ಭಾಷೆಗಳು ಒಂದರ ಮೇಲೊಂದು ಪ್ರಭಾವ ಬೀರುವುದು ಸಹಜ. ಸಂಸ್ಕೃತ ಮತ್ತು ಪ್ರಾಕೃತ ಎರಡೂ ಕನ್ನಡದ ಮೇಲೆ ಬಹಳ ಪ್ರಭಾವ ಬೀರಿವೆ. ಹಾಗೆಯೆ, ಕನ್ನಡ ಕೂಡ ಸಂಸ್ಕೃತದ ಮೇಲೆ ಪ್ರಭಾವ ಬೀರಿದೆ. ಕನ್ನಡ ಪದಗಳು "ತತ್ಸಮಗೊಂಡು" ಸಂಸ್ಕೃತದಲ್ಲಿ ಸೇರಿವೆ. ಇಂಥ ಅನೇಕ ಪದಗಳನ್ನು ರೆ. ಕಿಟೆಲ್ ತಮ್ಮ ಕೋಶದಲ್ಲಿ ಪಟ್ಟಿ ಮಾಡಿದ್ದಾರೆ.
ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತದ ಛಾಯೆ ಸಾಕಷ್ಟು ಬಿದ್ದಿದೆ. ಕನ್ನಡದ ನಾಲಗೆಗೆ ಒಗ್ಗದೆ ಇದ್ದರೂ, ಕನ್ನಡದಲ್ಲಿ ಸಂಸ್ಕೃತ ವರ್ಣಗಳು ಮತ್ತು ಸಂಸ್ಕೃತ ಮೂಲದ ಪದಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ; ಪೂರ್ತಿ ಕನ್ನಡದಲ್ಲಿ ಬೆರೆತುಕೊಳ್ಳದೆ, ಇಂದಿಗೂ ಸಂಸ್ಕೃತ ವ್ಯಾಕರಣ ನಿಯಮಗಳನ್ನೆ ಅನುಸರಿಸುತ್ತ ಪ್ರತ್ಯೇಕತೆಯನ್ನು, ಕಾಪಾಡಿಕೊಂಡಿವೆ. ಆದ್ದರಿಂದ, ಪುರಾತನವಾದ, ಜ್ಞಾನರಾಶಿಯನ್ನು ಹೊಂದಿರುವ, ಸಂಸ್ಕೃತವನ್ನು ಕನ್ನಡದ ಜನ್ಮದಾತೆ ಎನ್ನುವುದಕ್ಕಿಂತ ಕನ್ನಡದ ದೃಷ್ಟಿಯಿಂದ, ನೆರೆಮನೆಯ ಜಾಣ ಅಜ್ಜಿ ಎನ್ನುವುದು ಉಚಿತ.

ಕನ್ನಡ ಲಿಪಿಯ ಮಿಥ್ಯೆ ೨ನ್ನು ನಾಳೆ ಅರಿತುಕೊಳ್ಳೋಣ
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧, ಅಕ್ಟೋಬರ ೨೩, ೨೦೨೩

 🡄  🡆 ದಿನ ೨, ಮಿಥ್ಯೆ ೨ : ಕನ್ನಡ ಲಿಪಿ