ಭಾಷೆ, ಲಿಪಿ, ಮತ್ತು ಕಲಿಕೆ – ಒಂದು ವಿಶ್ಲೇಷಣೆ

ಭಾಷೆ, ಲಿಪಿ, ಮತ್ತು ಕಲಿಕೆ – ಒಂದು ವಿಶ್ಲೇಷಣೆ

*** ಶೃತಿ ಅರವಿಂದ

[ಭಾಷೆ ಅಂದರೇನು? ಮಾತಾಡುವುದೊ? ಬರೆಯುವುದೊ? ನುಡಿಯೊ? ಲಿಪಿಯೊ? ಪದ ವಾಕ್ಯಗಳೋ? ಅರ್ಥವೋ? ಇವಾವೂ ಅಲ್ಲದ ಅಮೂರ್ತ ಸಂವಹನವೋ?  
ಇಬ್ಬರ ನಡುವೆ ಭಾಷೆ ಬೇಕು. ಗಣಿತ, ವಿಜ್ಞಾನ, ಕಲೆ – ಯಾವುದಕ್ಕೂ ಭಾಷೆ ಬೇಕು. ಆಲೋಚಿಸಲೂ ಭಾಷೆ ಬೇಕು! ಅಂತೂ ಇದು ಮನುಷ್ಯನ ಬದುಕಿಗೆ, ಬಾಳಿಗೆ, ಉನ್ನತಿಗೆ ಅವಶ್ಯವಾದದ್ದು. ಹಾಗಾದರೆ ಭಾಷೆಯನ್ನು ಕಲಿಯುವುದು ಹೇಗೆ? ಒಂದು ಭಾಷೆಯನ್ನು ಕಲಿಯಲು ಮಾಧ್ಯಮವಾಗಿ ಇನ್ನೊಂದು ಭಾಷೆ ಅಗತ್ಯವೆ? ಸೂಕ್ತವಾದ ಮಾಧ್ಯಮ ಭಾಷೆ ಯಾವುದು?  
ಈ ಎಲ್ಲವನ್ನೂ ಈ ಲೇಖನದಲ್ಲಿ ಒಂದೊಂದಾಗಿ ಬಿಡಿಸಿ ತೋರಿಸಿದ್ದಾರೆ ಶೃತಿ ಅರವಿಂದ.  ಇವರು ಇಲ್ಲಿ ಹೇಳುತ್ತಿರುವುದು ಬರಿ ಊಹಾಪೋಹೆ ಎಂದು ನೀವು ಭಾವಿಸಿದರೆ ಖಂಡಿತ ತಪ್ಪು. ಭಾಷೆ ಲಿಪಿಗಳ ಕಲಿಕೆ, ಕಲಿಸುವಿಕೆಗಳಲ್ಲಿ ತಮ್ಮನ್ನು ತಾವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಹುಟ್ಟಿದಂದಿನಿಂದ ತಮ್ಮ ಮಗನ ಮೇಲೆ ಪ್ರಯೋಗಿಸಿದ್ದಾರೆ. ತಾಯೆ ಮೊದಲ ವಿಜ್ಷಾನಿ;

 

ನಮ್ಮಲ್ಲಿ ಅನೇಕರು 'ಭಾಷೆ' ಮತ್ತು 'ಲಿಪಿ' - ಈ ಎರಡರ ಪರಿಭಾಷೆಗಳ ಮಧ್ಯೆ ಗೊಂದಲ ಮಾಡಿಕೊಂಡಿದ್ದಾರೆ. ಸ್ಪಷ್ಟವಾಗಿ ಯೋಚಿಸಿ ನೋಡಿದರೆ, ಭಾಷೆಯೇ ಬೇರೆ, ಲಿಪಿಯೇ ಬೇರೆ. ಇವೆರಡರ ಕಲಿಕೆಯನ್ನು ಒಂದನ್ನೊಂದು ಅವಲಂಬಿಸದೆ ಬೇರೆ ಬೇರೆಯಾಗಿ ನಡೆಸಬಹುದು. ಒಬ್ಬರು ಭಾಷೆಯನ್ನು ಮಾತ್ರ ಕಲಿತು ಲಿಪಿಯನ್ನು ಕಲಿಯದೇ ಇರಬಹುದು.  ಇನ್ನೊಬ್ಬರು ಲಿಪಿಯನ್ನು ಮಾತ್ರ ಕಲಿತು ಭಾಷೆ ಕಲಿಯದೇ ಇರಬಹುದು. ಒಂದೇ ಲಿಪಿಯನ್ನು ಅನೇಕ ಭಾಷೆಗಳಿಗೆ ಬಳಸಬಹುದು, ಮತ್ತು ಕೆಲವು ಭಾಷೆಗಳಿಗೆ ಲಿಪಿಯೇ ಇಲ್ಲ.

ಹಾಗಿದ್ದರೆ ಭಾಷೆ ಎಂದರೇನು? ಮಾತನಾಡುವುದು, ಕೇಳಿ ಅರ್ಥ ಮಾಡಿಕೊಳ್ಳುವುದು. ಲಿಪಿ ಎಂದರೆ ಬರೆಯುವುದು, ಓದುವುದು, ಬರೆದಿದ್ದನ್ನು ಉಚ್ಚರಿಸುವುದು, ಉಚ್ಚರಿಸಿದ್ದನ್ನು ಬರೆಯುವುದು.


ಭಾಷೆ       
ಭಾಷೆಯಲ್ಲಿ ಪದಭಂಡಾರ (ಶಬ್ದಕೋಶ), ವಾಕ್ಯ ನಿರ್ಮಾಣ, ವ್ಯಾಕರಣ ರಚನೆ ಮತ್ತು ನಿಯಮಗಳು, ಸಾಂದರ್ಭಿಕ ಅರ್ಥಗಳು, ಇತ್ಯಾದಿ ಹಂತಗಳು.

ತಮಾಷೆ ಎಂದರೆ ಇವೆಲ್ಲ ನನ್ನ ಗಮನಕ್ಕೆ ಬಂದಿದ್ದು ನಾನು computer science ಅಂದರೆ ಗಣಕಯಂತ್ರ ವಿಜ್ಞಾನ ಓದಿದಾಗ. Compiler design ಅನ್ನೋ ಭಾಗದಲ್ಲಿ ವಿವರಿಸುವಂತೆ, ಯಾವುದೇ ಭಾಷೆಯನ್ನೂ ಅರ್ಥೈಸುವ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಹಂತಗಳು ಇವೆ.  ಅವೇನೆಂದರೆ lexical analyzer, syntax analyzer, semantic analyzer ಇತ್ಯಾದಿ. ಅಂದರೆ ಮೊದಲಿಗೆ ಪ್ರತಿ ಶಬ್ದವನ್ನು ಗುರುತಿಸಿ, ಅರ್ಥೈಸುವುದು. ನಂತರ ವಾಕ್ಯದ ನಿರ್ಮಾಣ ಸರಿ ಇದೆಯೇ (ವ್ಯಾಕರಣದ ಪ್ರಕಾರ) ಎಂದು ನೋಡಿ, ವಾಕ್ಯವನ್ನು ಅರ್ಥೈಸುವುದು. ತದನಂತರ ವಾಕ್ಯಗಳು ಒಂದಕ್ಕೊಂದು ಸಂಬಂಧವಿದೆಯೇ ನೋಡಿ, ಒಟ್ಟಾರೆ ಚರ್ಚಿಸುತ್ತಿರುವ ವಿಷಯವನ್ನು ಗ್ರಹಿಸುವುದು. ಇಷ್ಟೆಲ್ಲಾ ಅಲ್ಲದೆ ಮನುಷ್ಯರು ಆಡುವ ಭಾಷೆಗಳಲ್ಲಿ pragmatic/contextual ಅಂದರೆ ಸಾಂದರ್ಭಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಬದಲಾಗುವ ಅರ್ಥಗಳಲ್ಲದೆ, ದೇಶ - ಕಾಲಗಳ ತಕ್ಕಂತೆ ವೈವಿಧ್ಯಮಯವಾದ ಗಾದೆ, ನಾಣ್ನುಡಿ, ಆಡುಭಾಷೆ, ಇತ್ಯಾದಿ ಕೂಡ ಇವೆ.

ಸಣ್ಣ ಮಕ್ಕಳೂ ಕೂಡ ಇವೇ ಮೇಲ್ಕಂಡ ಹಂತಗಳನ್ನು ಹಾದು ಭಾಷೆಯನ್ನು ಕಲಿಯುತ್ತಾರೆ, ಆದರೆ ಮಕ್ಕಳು ಇದೆಲ್ಲವನ್ನು ಯೋಚಿಸಿ ತಿಳಿದು ಮಾಡುವುದಿಲ್ಲ ಎಂದಷ್ಟೇ ವ್ಯತ್ಯಾಸ. ನಾವು (ಪ್ರೌಢರು) ತಿಳಿದು ಅರಿತು ಮಾಡಬಹುದು.

ಅದೇ ಗಣಕ ಯಂತ್ರಗಳನ್ನು ಅಧ್ಯಯನ ಮಾಡಿದಾಗ ತಿಳಿಯಿತು, ಒಂದು ವಾಕ್ಯವನ್ನು ಅರ್ಥ ಮಾಡಿಕೊಳ್ಳುವ ಯಂತ್ರ ನಿರ್ಮಿಸುವುದು ಎಷ್ಟೋ ಸುಲಭ, ಅದೇ ರೀತಿಯ ವಾಕ್ಯಗಳನ್ನು ಸೃಷ್ಟಿಸಲು ಆ ಯಂತ್ರವನ್ನು ಆದೇಶಿಸುವುದು ಅಸಾಧ್ಯ ಕಷ್ಟ. ಅತಿ ಸರಳವಾದ ಗಣಕಯಂತ್ರ-ಭಾಷೆ (programming language)ಯನ್ನು ಗ್ರಹಿಸ ಬಲ್ಲದೆ ಹೊರತು ಬರೆಯಲು ಆಗುವುದಿಲ್ಲ. ಇನ್ನು ಅತ್ಯಂತ ಸಂಕೀರ್ಣವಾದ ಮನುಷ್ಯರ ಆಡುಭಾಷೆ(natural language)ಯನ್ನು ಬರೆಯುವುದು ಹಾಗಿರಲಿ, ಪೂರ್ಣ ಗ್ರಹಿಸುವ ಯಂತ್ರ ಇನ್ನೂ ನಿರ್ಮಾಣವಾಗಿಲ್ಲ.

ಆ ಯಂತ್ರದ ಕೈಯಲ್ಲೇ ಆಗದಷ್ಟು ಕಠಿಣ ಕೆಲಸವನ್ನು ಮಾಡುವ ಮಾನವ ಮೆದುಳಿನ ಸಾಮರ್ಥ್ಯವನ್ನು ನಾವು ಕೀಳಾಗಿ ಕಾಣಲಾಗುವುದೇ?

ಲಿಪಿ       
ಲಿಪಿಗಳಲ್ಲಿ ನಾನು ತಿಳಿದ ಮಟ್ಟಿಗೆ ಎರಡು ವಿಧಗಳು. ಮೊದಲನೆಯದು ಉಚ್ಚರಿಸುವ ಹಾಗೆ ತದ್ರೂಪಾಗಿ ಬರವಣಿಗೆ, ಮತ್ತು ಒಂದು ಬರವಣಿಗೆಗೆ ಒಂದೇ ಉಚ್ಚಾರಣೆ ಇರುವ ಲಿಪಿ, ಇಂಥ ಲಿಪಿಯನ್ನು ಧ್ವನಿ-ನಿರೂಪಕ ಲಿಪಿ (phonetic script) ಎನ್ನುತ್ತಾರೆ. ಎರಡನೆಯದು ಬರೆದ ಮೇಲೂ ಹೇಗೆ ಉಚ್ಚರಿಸಬೇಕೆಂದು ಪ್ರತ್ಯೇಕವಾಗಿ ತಿಳಿಯಬೇಕಾದ ಅವಶ್ಯಕತೆ ಇರುವ ಲಿಪಿ (non-phonetic script). ಈ ಬಗೆಯ ಲಿಪಿಯಲ್ಲಿ ಒಂದು ಪದದ ಉಚ್ಚಾರಣೆ, ಇದು ಯಾವ ಭಾಷೆ ಎನ್ನುವುದನ್ನು ಅವಲಂಬಿಸಿರುತ್ತದೆ.  ಉದಾಹರಣೆಗೆ Latin ಲಿಪಿಯ ಉಚ್ಚಾರಣೆ, Latin ಭಾಷೆಯ ಸಂದರ್ಭದಲ್ಲಿ ಬೇರೆ ಉಚ್ಚಾರಣೆ, ಆಂಗ್ಲ ಭಾಷೆಯ ಸಂದರ್ಭದಲ್ಲಿ ಬೇರೆ, Spanish ಭಾಷೆಯ ಸಂದರ್ಭದಲ್ಲಿ ಮತ್ತೊಂದು ಬೇರೆಯ ಉಚ್ಚಾರಣೆ.  ಅಲ್ಲದೆ ಆಂಗ್ಲ ಭಾಷೆ ತಿಳಿದವರಿಗೂ ಒಂದು ಹೊಸ ಆಂಗ್ಲ ಪದ ಕಂಡರೆ, ಅದನ್ನು ಹೇಗೆ ಉಚ್ಚರಿಸ ಬೇಕು ಎಂದು ಯಾರಾದರೂ ತಿಳಿಸಿ ಕೊಡಬೇಕಾದೀತು!  ಇದೊಂದು ಹೆಚ್ಚಳ ಶ್ರಮ.

ಭಾಷೆ ಕಲಿಕೆಯಲ್ಲಿ ಹಂತಗಳು ಇರುವ ಹಾಗೆಯೇ ಲಿಪಿ ಕಲಿಕೆಯಲ್ಲಿ ಕೂಡ ಹಂತಗಳು ಇವೆ. ಅವು ಏನೆಂದರೆ ರೇಖೆಗಳನ್ನು ವಿಧ ವಿಧವಾಗಿ ಜೋಡಿಸಿ ಅಕ್ಷರ ಮಾಡುವುದು, ಮೂಲಾಕ್ಷರಗಳು, ನಂತರ, ಸಂಯುಕ್ತಾಕ್ಷರಗಳು. ಕೊನೆಗೆ ಧ್ವನಿ-ನಿರೂಪಕ ಲಿಪಿ ಅಲ್ಲದಿದ್ದಲ್ಲಿ (non-phonetic script) ಉಚ್ಚಾರಣೆ ಮತ್ತು 'spelling' ಕಲಿಯುವುದು.

ಈ non-phonetic ಲಿಪಿಗಳ ಬಗ್ಗೆ ನನಗೆ ಹೆಚ್ಚು ಹೇಳುವ ಇಚ್ಛೆಯಿಲ್ಲ. ಪುಣ್ಯಕ್ಕೆ ನಮ್ಮ ಭಾರತೀಯ ಮೂಲದ ಹೆಚ್ಚುವರಿ ಲಿಪಿಗಳು ಧ್ವನಿ-ನಿರೂಪಕ ಆಗಿವೆ. ಆದ್ದರಿಂದ ಅವುಗಳ ಮೇಲೆಯೇ ಗಮನ ಹರಿಸೋಣ.   ಒಂದು ಭಾರತೀಯ ಲಿಪಿಯಿಂದ ಇನ್ನದೊಂದು ಭಾರತೀಯ ಲಿಪಿ ಕಲಿಯುವುದು ಅತಿ ಸುಲಭ. ಏಕೆಂದರೆ ಅಕ್ಷರಗಳಲ್ಲಿ ಹೆಚ್ಚು ಕಡಿಮೆ one-to-one mapping, ಅಂದರೆ ಈ ಭಾಷೆಯ ಪ್ರತಿ ಅಕ್ಷರಕ್ಕೂ ಆ ಭಾಷೆಯಲ್ಲಿ ನಿಖರವಾಗಿ ಒಂದೇ ಅಕ್ಷರ ಇರುತ್ತದೆ. ಅದೇ Latin ಲಿಪಿಯ ಮೂಲಕ ಕನ್ನಡ ಅಥವಾ ದೇವನಾಗರಿ ಲಿಪಿ ಕಲಿಯಲು ಹೊರಟರೆ ಅಬ್ಬಬ್ಬಾ! ಏನು ಪರಿಶ್ರಮ! ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ.


ಎರಡು ಹೆಜ್ಜೆಗಳು       
ಭಾಷೆ ಕಲಿಕೆಯಲ್ಲಿ ಮೊದಲ ಹೆಜ್ಜೆ ಕೇಳಿ ಅರ್ಥೈಸಿಕೊಳ್ಳುವುದು, ಎರಡನೇ ಹೆಜ್ಜೆ ಮಾತನಾಡುವುದು. ಹಾಗೆಯೇ ಲಿಪಿ ಕಲಿಕೆಯಲ್ಲಿ ಮೊದಲ ಹೆಜ್ಜೆ ಓದಿ ಉಚ್ಚರಿಸುವುದು, ಎರಡನೇ ಹೆಜ್ಜೆ ಉಚ್ಚರಿಸಿದ್ದನ್ನು ಬರೆಯುವುದು. 

ಸರಿ, "ಓದಲಿಕ್ಕೆ ಬರುತ್ತೆ ಅಂದ ಮಾತ್ರಕ್ಕೆ ಇನ್ನು ಸ್ವಲ್ಪವೇ ಶ್ರಮ ಪಟ್ಟು ಬರೆಯುವುದೂ ಕಲಿತುಬಿಡಬಹುದು" ಎನ್ನೋ ಊಹೆ ಸ್ವಲ್ಪ ಅತಿಶಯೋಕ್ತಿ.  ಹೇಗೆಂದರೆ ಒಂದು ಮುಖ ಗುರುತು ಹಿಡಿಯಲು ಎಷ್ಟು ಶ್ರಮ ಬೇಕು?  ಹೆಚ್ಚೇನಿಲ್ಲ. ಸರಿ, ೫೦ ಮುಖಗಳನ್ನು ಗುರುತು ಇಟ್ಟುಕೊಂಡು ಯಾವುದೇ ಕ್ರಮದಲ್ಲಿ ಬಂದರೂ ಗುರುತು ಹಿಡಿ ಎಂದರೆ ಸ್ವಲ್ಪ ತರಬೇತಿ, ಅಭ್ಯಾಸಗಳ ನಂತರ ಮಾಡಬಹುದು. ಅದೇ ಈ ಮುಖಗಳ ಚಿತ್ರ ಬಿಡಿಸು ಎಂದರೆ..? ಎಲ್ಲರಿಗೂ ಚಿತ್ರ ಬಿಡಿಸಲು ಆಗಬೇಕಲ್ಲ! ಆ ಪ್ರತಿಯೊಂದು ಮುಖದಲ್ಲೂ ಇರುವ ಸಣ್ಣ ಸಣ್ಣ ಗೆರೆಗಳನ್ನೂ, ಬಳುಕು ರೇಖೆಗಳನ್ನೂ ಅಷ್ಟೇ ಚೆನ್ನಾಗಿ ಅನುಕರಿಸಬೇಕು, ಮರು-ಸೃಷ್ಟಿಸಬೇಕು. ಅಷ್ಟು ಸುಲಭವಲ್ಲ. ಇದಕ್ಕೆ ಇನ್ನಷ್ಟು ಅಭ್ಯಾಸ, ಮನಸ್ಥೈರ್ಯ, ಧೃಢಸಂಕಲ್ಪ ಬೇಡವೇ!

ಅಂತೆಯೇ ಭಾಷೆಯನ್ನು ಕೇಳಿ ಅರ್ಥೈಸಿಕೊಳ್ಳುವುದಕ್ಕೂ ಅದೇ ಭಾಷೆಯಲ್ಲಿ ಮಾತನಾಡುವುದಕ್ಕೂ ಇದೇ ರೀತಿಯ ಶ್ರಮ ಹೆಚ್ಚಳ.  ನಾವು ನಮ್ಮ ಸುತ್ತ ಮುತ್ತಲಿನ ಅನಿವಾಸಿ  ಭಾರತೀಯ ಮಕ್ಕಳನ್ನು ನೋಡಿದರೆ ಇದು ಹೌದೆನಿಸುತ್ತದೆ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನು ಅರ್ಥೈಸ ಬಲ್ಲರು, ಆದರೆ ಅದರಲ್ಲಿ ಮಾತನಾಡಲಾರರು. ಏಕೆಂದರೆ ಪೋಷಕರು ಇಂಥ ಮಕ್ಕಳೊಂದಿಗೆ ಉದ್ದೇಶಿಸಿ ಏಕಮುಖವಾಗಿ ಮಾತೃಭಾಷೆಯಲ್ಲಿ ಮಾತನಾಡುತ್ತಾರೆಯೇ ಹೊರತು, ಪ್ರತ್ಯೇಕವಾಗಿ ಅದನ್ನು ಮಾತನಾಡುವುದನ್ನು ಒತ್ತಿ ಅಭ್ಯಾಸ ಮಾಡಿಸಲಿಲ್ಲವೇ..? ಈ ಎರಡನೇ ಹೆಜ್ಜೆಗೆ ಅವಶ್ಯಕವಾದ ಹೆಚ್ಚಳ ಶ್ರಮಕ್ಕೆ ಗಮನ ಕೊಡಲಿಲ್ಲ ಎನ್ನಿಸುತ್ತದೆ.


ಮಧ್ಯಸ್ಥ ಭಾಷೆ       
ನನ್ನ ಕಳೆದ ಲೇಖನದಲ್ಲಿ (ಭಾಷೆಯ ಕಲಿಕೆ) ಹೇಳಿದ್ದೆ, ಒಂದು ಮಗು ಮೊದಲ ಬಾರಿಗೆ ಒಂದು ಭಾಷೆಯನ್ನು ಬೇರೆ ಯಾವುದೇ ಆಧಾರವಿಲ್ಲದೆ ಕಲಿಯುವಾಗ random bombardment ರೀತಿಯಲ್ಲಿ ಕಲಿಯುವುದು ಒಳ್ಳೆಯದು ಎಂದು.  ಆದರೆ ಈ ಪ್ರಸ್ತುತ ವಿಧಾನ ನಾವುಗಳು, ದೊಡ್ಡವರು ಅಂದರೆ ಪ್ರಾಪ್ತ ವಯಸ್ಕರು ಅಥವಾ ಪ್ರೌಢರು, ಈಗಾಗಲೇ ಒಂದೋ ಎರಡೂ ಭಾಷೆ ಚೆನ್ನಾಗಿ ಕಲಿತು ಸಲೀಸಾಗಿ ಸಂವಾದಿಸುವಷ್ಟು ಇದ್ದಾಗ, ಜಾಗೃತಿಯಿಂದ (consciously) ಸ್ವಂತ ಆಯ್ಕೆಯಿಂದ ಅತ್ಯುತ್ತಮ ಮತ್ತು ಸೂಕ್ತ ಸಾಧನಗಳನ್ನು ಬಳಸಿ ಇದ್ದಿದ್ದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಯೋಜನವಾಗುವಂತೆ ಕ್ರಮಬದ್ಧವಾಗಿ ಹೊಸ ಭಾಷೆಯನ್ನೂ ಕಲಿಯಬೇಕಾದರೆ (methodical approach for optimal output), ಈ ಹಾದಿ ವಾಸಿ ಎನಿಸುತ್ತದೆ.

ನನ್ನ ಮಗ ಬೆಳೆಯುತ್ತಿದ್ದಾಗ ಕನ್ನಡ ಕಲಿಯುತ್ತಿದ್ದು ಹಳೆಯ ರೀತಿಯಲ್ಲಿಯೇ ಆದರೂ ಅವನು ಸ್ವಲ್ಪ ದೊಡ್ಡವನಾದಾಗ ತನ್ನ ಮೂರನೇ ಭಾಷೆ ಕಲಿಯಲು ಈ ಹೊಸ ವಿಧಾನ ಉಪಯೋಗಿಸುತ್ತಿದ್ದೇವೆ. ಏಕೆಂದರೆ ಆಯ್ಕೆ ಮಾಡುವ ಸ್ವಾತಂತ್ರ್ಯ ಈಗ ಇದೆ.

ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವಾಗ ಪ್ರತಿ ಪದವನ್ನು ಅನುವಾದಿಸಿ ಅದೇ ಕ್ರಮದಲ್ಲಿ ಜೋಡಿಸಿ ಬಿಟ್ಟರೆ ಸಾಕೆ?  ಉದಾಹರಣೆಗೆ ಹಿಂದಿ, ಕನ್ನಡ, ಆಂಗ್ಲ ಭಾಷೆಗಳನ್ನು ನೋಡೋಣ.  ಅನುವಾದಿಸಿದ ಪದಗಳನ್ನು ಸ್ವಲ್ಪ ಸ್ಥಳಾಂತರ ಗೊಳಿಸಿ, ಬೇರೆ ಕ್ರಮದಲ್ಲಿ ಜೋಡಿಸ ಬೇಕಾಗುತ್ತದೆ. ಹೀಗಾದಾಗ, ಎರಡು ಭಾರತೀಯ ಭಾಷೆಗಳ ಮಧ್ಯೆ ಅಷ್ಟು ಪದಗಳ ಮರು ಜೋಡಣೆ ಮಾಡ ಬೇಕಿಲ್ಲ. ಅದೇ ಆಂಗ್ಲ ಭಾಷೆಯಿಂದ ಅನುವಾದಿಸಿದಾಗ, ಪದಗಳನ್ನು ಸಿಕ್ಕಾಪಟ್ಟೆ ಅದಲು-ಬದಲು ಮಾಡಬೇಕಾದೀತು. ಅಷ್ಟೇ ಅಲ್ಲ, ಎಷ್ಟೊಂದು ಪದಗಳಿಗೆ ಒಂದೇ ಪದ ಅನುವಾದ ಆಗಬಹುದು. ಉದಾಹರಣೆಗೆ, ವಿಭಕ್ತಿ ಪ್ರತ್ಯಯಗಳು ಕನ್ನಡದಲ್ಲೂ ಇವೆ, ಸಂಸ್ಕೃತದಲ್ಲೂ ಇವೆ, ಹಿಂದಿಯಲ್ಲೂ ಇವೆ. ಆದರೆ ಅದನ್ನೇ ಆಂಗ್ಲಕ್ಕೆ ಅನುವಾದಿಸಿದಾಗ, ಪ್ರತಿಯೊಂದು ಪ್ರತ್ಯಯಕ್ಕೂ ಒಂದು ಹೊಸ ಪದ ಹಾಕಬೇಕಾಗಬಹುದು (preposition). ಹಿಂದಿಗೂ, ಕನ್ನಡಕ್ಕೂ ಅಲ್ಪ ಸ್ವಲ್ಪ ವ್ಯಾಕರಣ ವ್ಯತ್ಯಾಸ ಇರಬಹುದು, ಆದರೆ ಆಂಗ್ಲದೊಂದಿಗೆ ಇರುವಷ್ಟು ಖಂಡಿತ ಇಲ್ಲ. ಕನ್ನಡದಲ್ಲಿ ಇರೋ ಎಲ್ಲ ವಿಭಕ್ತಿ ಪ್ರತ್ಯಯಗಳೂ ಹಿಂದಿಯಲ್ಲಿ ಇಲ್ಲ, ಹಾಗೆಯೇ ಸಂಸ್ಕೃತದಲ್ಲಿ ಇರೋ ಎಲ್ಲ ಪ್ರತ್ಯಯಗಳೂ ಕನ್ನಡದಲ್ಲೂ ಇಲ್ಲ. ಆದರೂ ಇದ್ದಿದ್ದರಲ್ಲಿ ಸಾಮಾನ್ಯತೆ (overlap) ಹೆಚ್ಚು.

ಆದ್ದರಿಂದ ನೀವು ಒಂದು ಹೊಸ ಭಾಷೆ ಕಲಿಯಲು ಹೊರಟಾಗ ಮಧ್ಯಸ್ಥ ಭಾಷೆಯ ವ್ಯಾಕರಣ ಹೊಸ ಭಾಷೆಯ ವ್ಯಾಕರಣವನ್ನು ಆದಷ್ಟು ಹೋಲಿದರೆ ಕಲಿಯುವುದು ಅಷ್ಟು ಸುಲಭ. ನನ್ನ ಮಗ ಸಂಸ್ಕೃತ ಕಲಿಯಲು ಹೊರಟಾಗ, ಆಂಗ್ಲದ ಮೂಲಕ ಕಲಿಸುವ ಬದಲು ಕನ್ನಡದ ಮೂಲಕ ಕಲಿಯುವುದು ಲೇಸೆಂದು ತಿಳಿಯಿತು. ಇದನ್ನು ತಿಳಿದು ನಾನು ನನ್ನ ಮಗನಿಗೆ ಕನ್ನಡದ ಮೂಲಕ ಸಂಸ್ಕೃತ ಕಲಿಯಲು ಸಹಾಯ ಮಾಡುತ್ತಿದ್ದೇನೆ.

ನನ್ನ ಶಾಲಾ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಸ್ಕೃತ ಕಲಿತಾಗ ಸಂಸ್ಕೃತವನ್ನು ಕನ್ನಡದ ಮೂಲಕ ಬೋಧಿಸಬೇಕು ಎಂಬ ನಿಯಮವೇ ಇತ್ತು.  ಆದರೆ ನನ್ನ ಮಗನ ಈಗಿನ ಸಂಸ್ಕೃತ ಶಿಕ್ಷಕರಿಗೆ ಈ ಸೌಕರ್ಯ ಇಲ್ಲ, ಏಕೆಂದರೆ ಅವರ ಕಕ್ಷೆಯಲ್ಲಿ ಬೇರೆ ಬೇರೆ ಮಕ್ಕಳು ಬೇರೆ ಬೇರೆ ಮಾತೃಭಾಷೆ ಉಳ್ಳವರು. ಹೀಗಾಗಿ ಅವರು ಕೊಂಚ ಆಂಗ್ಲ ಉಪಯೋಗಿಸಿ, ಮಿಕ್ಕಿದ್ದನ್ನು ಆದಷ್ಟು ಮಟ್ಟಿಗೆ ತನ್ಮೂಲಕವೇ ಬೋಧಿಸಲು ಯತ್ನಿಸುತ್ತಾರೆ. ಅಂದರೆ ಸನ್ನೆಗಳ ಮೂಲಕ, ಚಿತ್ರಗಳು, ವಸ್ತು ಪ್ರದರ್ಶನ, ಕಥೆಗಳು, ಹಾವ-ಭಾವ ಮತ್ತು ನಟನೆಗಳಿಂದ.  ಇದು ಶ್ಲಾಘನೀಯ ಪ್ರಯತ್ನ. ಹೀಗೆ ಮಾಡುವುದರಿಂದ ಪರಿಚಿತ ಹಳೆಯ ವ್ಯಾಕರಣದ ಹಂಗೂ ಇರುವುದಿಲ್ಲ, ಅದನ್ನು ಮೀರಿ ಹೊಸ ವ್ಯಾಕರಣ ಗ್ರಹಿಸುವ ಗೋಜೂ ಇಲ್ಲ!

ಇನ್ನೊಂದು ಅನಿಸಿಕೆ

ಸರ್ವೇ ಸಾಮಾನ್ಯವಾಗಿ  ಧ್ವನಿ-ನಿರೂಪಕ ಲಿಪಿ (phonetic script) ಕಲಿಯುವುದು ಅನಾಯಾಸ ಅಲ್ಲವೇ? ಅದರಲ್ಲೂ ಭಾರತೀಯ ಮಕ್ಕಳು ತಾವು ಆಡುವ ಮಾತೃಭಾಷೆಯ ಲಿಪಿಯನ್ನೇ ಮೊದಲು ಕಲಿಯುವುದು ಹೆಚ್ಚು ಅರ್ಥಪೂರ್ಣ.  ಇಂದಿನ ಭಾರತದಲ್ಲಿ ಆಂಗ್ಲ-ಮಾಧ್ಯಮದ ಶಾಲೆಗಳಲ್ಲಿ ಆಂಗ್ಲ ಕಲಿಸುವುದರೊಂದಿಗೆ ವಿದ್ಯಾಭಾಸ ಆರಂಭ ಮಾಡುತ್ತಾರೆ. ಇದು ಏಕೆ ಎಂದು ನನಗೆ ಅರ್ಥವಾಗದು. (ಬ್ರಿಟೀಷರ ದಬ್ಬಾಳಿಕೆಯ ಕೊಡುಗೆಯನ್ನು ನಾವು ಪಿತ್ರಾರ್ಜಿತ ಆಸ್ತಿಯಂತೆ ಕುರುಡಾಗಿ ಪಾಲಿಸುತ್ತಿರುವುದು ಬಿಟ್ಟರೆ ಇನ್ನೇನು ಕಾರಣ ಇರಬಹುದೋ!) ಮಾತನಾಡಲು ಈಗಾಗಲೇ ಗೊತ್ತಿರುವ ಭಾಷೆಯ ಲಿಪಿ ಕಲಿಯುವುದು ಎಷ್ಟು ಸುಲಭ ನೀವೇ ಯೋಚಿಸಿ. ಅದಕ್ಕೆ ಹೋಲಿಸಿದರೆ ಹೊಸ ಆಡುಭಾಷೆಯನ್ನು ಕಲಿತು, ಅದರ ವಿಚಿತ್ರ ಲಿಪಿಯನ್ನೂ ಕಲಿಯುವುದು ಯಾವ ನ್ಯಾಯ ಹೇಳಿ. ಮೊದಲು ತಮ್ಮ ಮಾತೃಭಾಷೆಯಲ್ಲಿ ಸ್ವಲ್ಪ ಹಿಡಿತ ಬಂದ ಮೇಲೆ ಮುಂದಿನ ಹೆಜ್ಜೆಯಾಗಿ ಆಂಗ್ಲ ಕಲಿಯಲಿ, ಬೇಡ ಎನ್ನೊಲ್ಲ.

ಪುಟಾಣಿ ಮೆದುಳು ಕಷ್ಟ ಪಟ್ಟು ಹೊಸ ಭಾಷೆ, ಹೊಸ ಲಿಪಿ ಕಲಿಯುವುದಲ್ಲದೆ, spelling ಗಳನ್ನೂ ಕೂಡ ಅಂತರ್ಗತ ಮಾಡಬೇಕು! (ಕ್ಷಮಿಸಿ, ಈ 'spelling' ಅನ್ನೋದಕ್ಕೆ ಕನ್ನಡದಲ್ಲಿ ಏನು ಅನ್ನುತ್ತಾರೋ ಗೊತ್ತಿಲ್ಲ, ಏಕೆಂದರೆ ಕನ್ನಡದಲ್ಲಿ ಈ ಪರಿಕಲ್ಪನೆಯೇ ಇಲ್ಲವಲ್ಲ!) ಅದೇ ಕನ್ನಡ ಮತ್ತಿತರ  ಧ್ವನಿ-ನಿರೂಪಕ ಲಿಪಿಗಳನ್ನು ಕಲಿತರೆ,  spelling ಕಲಿಯುವ ಗೋಜಿಲ್ಲ, ಉಚ್ಚಾರಣೆ ಪ್ರತ್ಯೇಕವಾಗಿ ಕಲಿಯ ಬೇಕಾಗಿಲ್ಲ. ಹಾಗೂ 'Spelling bee', ಮತ್ತು 'Spellathon' ಎಂಬ ಅರ್ಥಹೀನ ಸ್ಪರ್ಧೆಗಳು ಮಾಯವಾದಾವು!  ಅಲ್ಲದೆ ಗಣಕಯಂತ್ರಗಳು ಇನ್ನೂ ಹೆಚ್ಚು ಸುಲಭವಾಗಿ dictation ಅಂದರೆ ನಾವು ಹೇಳಿದ್ದನ್ನು ತಾನಾಗಿಯೇ ಆರಾಮಾಗಿ ಬರಿಯ ಬಹುದು!

ಇನ್ನೊಂದು ವಿಷಯವೆಂದರೆ ದೊಡ್ಡಕ್ಷರಗಳು (upper case letters) ಎನ್ನುವ ಹೆಚ್ಚುವರಿ ಪರಿಕಲ್ಪನೆ ನಮ್ಮ ಭಾರತೀಯ ಲಿಪಿಗಳಲ್ಲಿ ಇಲ್ಲದ್ದರಿಂದ ಆ ತಲೆನೋವು ಕೂಡ ತಪ್ಪಿತು!

 

ಪೂರಕ ಓದಿಗೆ

  1. ಭಾಷೆಯ ಕಲಿಕೆ - ಶೃತಿ ಅರವಿಂದ
  2. ವಿದೇಶಿ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವ ಬಗೆ : ಆನ್‍ಲೈನ್ - ಆನ್‍ಸೈಟ್
  3. ನಿಮ್ಮ ಮಾತು

-------------      
ಕನ್ನಡ ಕಲಿ, ಬಿತ್ತರಿಕೆ, ಭಾಷೆ, ಲಿಪಿ, ಮತ್ತು ಕಲಿಕೆ – ಒಂದು ವಿಶ್ಲೇಷಣೆ, ಶೃತಿ ಅರವಿಂದ, ಅಗಸ್ಟ ೯, ೨೦೨೧


ತಾಗುಲಿ : Language, Script, and Learning; Shruthi Aravind

ಜೀವವಿಕಸನದ ಭಾಗವಾಗಿ ಆಲೋಚನಾ ಶಕ್ತಿಯುಳ್ಳ ಮಾನವ ಸಂಘ ಜೀವಿಯಾದ.ಸಾಂಘಿಕ ಬದುಕು ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟುಹಾಕಿತು.ಸಾಮಾಜಿಕ ಜೀವನಕ್ಕೆ ಸಂವಹನೆಯೇ ಜೀವಾಳ.ಆವ ಭಾವಗಳ ಅಭಿವ್ಯಕ್ತಿಯಿಂದ ಕೂಡಿದ ಸಂವಹನೆಗೆ ಭಾವೋತ್ಕಟತೆಗಳು ಮಿಳಿತಗೊಂಡು ಕಂಠದಲ್ಲಿ ಧ್ವನಿಯಾಗಿ, ನಾಲಗೆಯ ಮೂಲಕ ಆಡು ಮಾತುಗಳಾದವು !!
ಆಡು ನುಡಿಗಳಿಂದ ಆಡು ಭಾಷೆಗಳು ರೂಪುಗೊಂಡವು .ಮಾನವ ವಿಕಸನಕ್ಕೆ ಸಮಾನಾಂತರವಾಗಿ ಬೆಳೆದ ಈ ಆಡುಭಾಷೆಗಳು ಲಿಪಿಯ ಚೌಕಟ್ಟು ಪಡೆದು ಲಿಪಿಕ ಭಾಷೆಗಳಾದವು.ಮಾನವ ವಿಕಸನದಲ್ಲಿ ಈ ಲಿಪಿಕ ಭಾಷೆಯ ಪಾತ್ರ ಅಪಾರ.ಯಾಕೆಂದರೆ ಭಾಷೆಯ ಮೂಲಕ ಸಂಸ್ಕಾರಗಳು ತಲತಲಾಂತರಗಳಿಗೆ ಸಾಗಿದವು ಹೀಗಾಗಿ ವಿವಿಧ ಸಂಸ್ಕೃತಿಗಳು ರೂಪುಗೊಂಡವು.
ಅನ್ವೇಷಣೆಗಾಗಿ ದೋಣಿ ಏರಿದವರು ತಮ್ಮೊಂದಿಗೆ ಕೊಂಡೊಯ್ದ ಭಾಷೆಗಳನ್ನು ಖಂಡಾಂತರ ಪಸರಿಸಿದರು ಮತ್ತು ಪರಸ್ಪರತೆಯನ್ನು ಹುಟ್ಟುಹಾಕಿದರು …
ಆದ ಕಾರಣ ಸಮಾನಾಂತರದಲ್ಲಿ ಭಾಷೆಗಳೂ ಖಂಡಂತರ ಪ್ರಭಾವಗಳೊಂದಿಗೆ ಬೆಳೆದವು ಸಂಸ್ಕೃತಿಗಳು ಮಿಳಿತವು .

ಲೋಕಪರ್ಯಟನೆಯಿಂದ ಉಂಟಾದ ಆಕ್ರಮಣ ಅತಿಕ್ರಮಣ ಹೋರಾಟ ಜನಾಂಗೀಯ ದಾಳಿಗಳಿಂದ ಬೇಸತ್ತ ಮಾನವ ಶಾಂತಿಯರಸುತ್ತ ಅಂತರ್ಮುಖಿಯಾದ..ಸತ್ಯ ಶೋಧಕರಾದ ಕೆಲವರಿಗೆ ಸತ್ಯದರ್ಶನವಾಯಿತು !! ತಮಗಾದ ಅತೀಂದ್ರಿಯ ಅನುಭವವನ್ನು ಅವರು ಇತರರೊಡನೆ ಹಂಚಿಕೊಂಡಿದ್ದೂ ಈ ಭಾಷಾ ಮಾಧ್ಯಮದಿಂದಲೇ…!ಹೀಗಾಗಿ ಆಯಾ ಪಂಥಗಳು ಮತಗಳು ಧರ್ಮಗಳು ಉಗಮಗೊಂಡವು …ಭಾಷೆಗಳ ಮೂಲಾಧಾರದ ಮೇಲೆಯೇ!!

ಮನಃಶಾಂತಿಗೆ ಧರ್ಮವನ್ನಾಸರಿಸಿದ ಮಾನವ ಜನಾಂಗ ಜ್ಞಾನ ವಿಜ್ಞಾನಗಳಲ್ಲಿ ಅಪಾರ ಪ್ರಗತಿ ಸಾಧಿಸಿತು.ಸಮಾನಾಂತರದಲ್ಲಿ ಜ್ಞಾನದ ಬೆಳಕಿನಡಿ ಊರ್ಜಿತಗೊಂಡ ಕೆಲವು ಭಾಷೆಗಳು ವ್ಯಾಕರಣದ ನಿಶ್ಚಿತತೆಗೊಳಪಟ್ಟು ಉತ್ಕ್ರಷ್ಟ ಮಟ್ಟಕ್ಕೇರಿ ಶಾಸ್ತ್ರೀಯ ಭಾಷೆಗಳಾದವು. ನಮ್ಮ ತಾಯ್ನುಡಿ ಕನ್ನಡವೂ ಆ ಸಾಲಿನಲ್ಲಿರುವ ಶಾಸ್ತ್ರೀಯ ಭಾಷೆ .
ನಾಲ್ಕು ವಾಕ್ಯಗಳಲ್ಲಿ ಭಾಷಾವಿಕಸನದ ಮಾತುಗಳನ್ನು ಸಹಜವಾಗಿ ಬರೆಯಬಹುದಲ್ಲವೇ? ಆದರೆ ಭಾಷೆಯೊಂದು ಈ ಮಟ್ಟ ತಲುಪಲು ಸಂದ ಕಾಲ ಅಗಣಿತ!! ಅದರ ಅಭ್ಯುದಯಕ್ಕೆ ಶ್ರಮಿಸಿದವರು ಅಸಂಖ್ಯಾತ ಮಹಾಮಹಿಮರು .
ಆದರೆ ಪಶ್ಚಿಮದಲ್ಲಾದ ಕ್ಷಿಪ್ರತಮ ವೈಜ್ಞಾನಿಕ ಕ್ರಾಂತಿಯ ಫಲದಿಂದ ಜಗದಗಲ ವಸಾಹತುಶಾಹಿ ವ್ಯವಸ್ಥೆ ಜಾರಿಯಾಯಿತು .ಸಂಪತ್ತು ದೋಚುವುದರೊಂದಿಗೆ ತಮ್ಮ
ಭಾಷೆಯನ್ನು ಬಲವಂತದಿಂದ ಹೇರಿದರು ಈ ವಸಾಹತುಶಾಹಿಗಳು ! ಪ್ರಗತಿಯ ಪರಿಕಲ್ಪನೆಯಲ್ಲಿ ಜನವೆಲ್ಲಾ ಮೋಹಗೊಂಡು ತಬ್ಬಿಕೊಂಡರು ಅವರ ಭಾಷೆಯನ್ನು …!!
ಹೀಗ ಜಗದಗಲ ಪಸರಿಸಿ ಪರಾಕಾಷ್ಠೆ ಕಂಡ ಇಂಗ್ಲೀಷ್ ಜಗದ ಭಾಷೆಯಾಯಿತು .
ನಾವೂ ಅದಕ್ಕೆ ಮೋಹಗೊಂಡವರೇ …ಎಷ್ಟರ ಮಟ್ಟಿಗೆ..!!
ಇಂದು ಅಶನ ವಶನಾರ್ಜನೆಗೆ ಇಂಗ್ಲೀಷ್ ಭಾಷೆ ಅನಿವಾರ್ಯವಾಗಿದೆ ..!!
ಅಬ್ಬಬ್ಬಾ ಇಂದು ಕನ್ನಡ ನಾಡಿನ ಶಾಲೆಗಳಲ್ಲಿ ಕನ್ನಡದ ಖಡ್ಡಾಯತೆಗೆ ವಿರೋಧಿಸಿ ಮಾರುವೇಷದ ಕನ್ನಡಿಗರೇ ನ್ಯಾಲಯದ ಕದ ತಟ್ಟಿ ಮೆಟ್ಟಿ ಗೆದ್ದು ಬೀಗಿದ್ದಾರೆ !!
ನೆನಪಿರಲಿ ಭಾಷೆ ಕೇವಲ ಒಂದು ಮಾಧ್ಯಮ ಮಾತ್ರವಲ್ಲ! ಅದು ಒಂದು ಜನಾಂಗದ ನಾಗರೀಕತೆಯ ಜ್ಞಾನದ / ಸರ್ವಾಂಗೀಣ ಪ್ರಗತಿಯ ಸೂಚ್ಯಂಕ….!
ನಮ್ಮ ಸಂಸ್ಕೃತಿ ನಮ್ಮ ಧರ್ಮಗಳು ಉಳಿಯ ಬೇಕಾದಲ್ಲಿ ನಮಗೆ ನಮ್ಮ ಭಾಷೆ ಉಳಿಯಬೇಕು…!
ಸಣ್ಣ ಉದಾಹರಣೆಯೊಂದು ಸಾಕು ಇದನ್ನು ನಿದರ್ಶಿಸಲು ..
ನಾನೊಂದು ಬಸವ ಧರ್ಮದ ಸಭೆಗೆ ಹೋದಾಗ ಅಲ್ಲೊಂದು ವಿಷಯ ಚರ್ಚೆಗೊಳಪಟ್ಟಿತ್ತು ಸಭಾಸದರಾದ ಸ್ವಾಮೀಜಿಗಳಲ್ಲಿ . ಅದೇನೆಂದರೆ ಇಂದು ಯುವ ಜನಾಂಗ ಹೊಸ ಗುರುಗಳಾದ ಜಗ್ಗಿ ವಾಸುದೇವ ,ಶ್ರೀ ಶ್ರೀ ರವಿಶಂಕರರವರ ಅನುಯಾಯಿಗಳಾಗುತ್ತಿದ್ದಾರೆ ..ಬಸವ ಧರ್ಮದ ಸಭೆ ಸಮಾರಂಭಗಳ ಬಗ್ಗೆ ನಿರ್ಲಕ್ಷ್ಯರಾಗುತ್ತಿದ್ದಾರೆ ಎಂದು .
ಅದು ಇವತ್ತಿನ ದಿನದ ಪ್ರಸ್ತುತ ಸತ್ಯವೂ ಕೂಡ…
ಕಾರಣವೇನು ಗೊತ್ತೇ?
ಆಧ್ಯಾತ್ಮಿಕ ವಿಚಾರಗಳು ಬಹು ಸೂಕ್ಷ್ಮತಮ ವಿಚಾರಗಳು .ವ್ಯಕ್ತಿಯೋರ್ವನ ಹೃದಯ ತಟ್ಟುವ ಮಾತುಗಳಿಂದ ಮಾತ್ರ ಅವು ಮನದಟ್ಟಾಗ ಬಲ್ಲವು.
ಇಂದಿನ ಯುವಜನಾಂಗಕ್ಕೆ ಕನ್ನಡ ರುಚಿಸದ ಮೂರನೆಯ ಭಾಷೆ ಶಾಲೆಯಲ್ಲಿ .ಇಂಗ್ಲೀಷ್ ಅವರ ಹೃದಯ ಮುಟ್ಟುವ ಮೊದಲ ಭಾಷೆ ! ಮೇಲ್ಕಾಣಿಸಿ ಇಬ್ಬರೂ ಗೌರವಾನ್ವಿತರೂ ಯುವ ಜನಾಂಗದಲ್ಲಿ ಪ್ರಚಲಿತರಾಗಿರುವುದು ಯುವಜನಾಂಗದ ಹೃದಯ ತಟ್ಟುವ ಇಂಗ್ಲೀಷ್ ಭಾಷಾ ಪಾಂಡಿತ್ಯದ ಮೂಲಕ.ಇವರು ಯುವಜನರನ್ನು ಸುಲಭವಾಗಿ ತಲುಪಬಲ್ಲವರಾಗಿದ್ದಾರೆ ಇಂಗ್ಲೀಷಿನಲ್ಲಿ!
ಆದರೆ ನಮ್ಮ ಬಸವಧರ್ಮದ ವಿಚಾರಗಳು ನಡುಗನ್ನಡದ ವಚನಗಳಲ್ಲಡಗಿವೆ ಇವುಗಳನ್ನು ಅರಿಕೆ ಮಾಡಿಕೊಡಲು ಆನಂದಿಸಲು ಕನ್ನಡ ಪ್ರಥಮ ಭಾಷೆಯಾಗಿರಲೇಬೇಕು .ಇಲ್ಲವೇ ವಚನಗಳ ಇಂಗ್ಲೀಷ್ ಭಾಷಾಂತರವಾಗಬೇಕು !! ಅದು ರಾಗಿ ಮುದ್ದೆಯನ್ನು ರೆಡಿ ಟು ಈಟ್ ಪ್ಯಾಕೆಟ್ನಲ್ಲಿ ಮಾರಿದಂತೆ ..ಹಾಸ್ಯಾಸ್ಪದ !!ಹೀಗಾಗಿ ಅಮೂಲ್ಯವಾದ ವಚನಸಾಹಿತ್ಯ ಯುವಜನತೆಗೆ ನಿಷ್ಪ್ರಯೋಜಕವೆನಿಸತೊಡಗಿದೆ.
ಕಾರಣ ನಮ್ಮ ಅಮೂಲ್ಯ ಸಂಸ್ಕೃತಿ ಧರ್ಮಗಳ ಉಳಿವಿಗೆ ಕನ್ನಡದ ಉಳಿವೂ ಅನಿವಾರ್ಯ …!! ರಾಜಕೀಯ ಮುಖಂಡರುಗಳ ದೃಢ ನಿರ್ಧಾರಗಳು ಕನ್ನಡದ ಖಡ್ಡಾಯತೆಗೆ ಅನಿವಾರ್ಯ. ಅದು ಯಾವಾಗ ಸಾಧ್ಯವೋ ತಿಳಿಯದು !! ಅಲ್ಲಿಯವರೆಗೆ ಶುದ್ಧ ಕನ್ನಡವನ್ನು ರಕ್ಷಿಸುವುದು ಅಷ್ಟೇ ಮುಖ್ಯ !! ಅದು ನಮ್ಮ ನಿಮ್ಮೆಲ್ಲರ ತುರ್ತು ಕರ್ತವ್ಯ ಕೂಡ.
ಈ ದಿಶೆಯಲ್ಲಿ ಓದು ಜನಮೇಜಯದ ಸಕಲವರ್ಗ ಮಹತ್ಕಾರ್ಯದಲ್ಲಿ ತೊಡಗಿದೆ ಎಂದು ಹೇಳಬಹುದು !!
ಇಲ್ಲಿ ಕುಮಾರವ್ಯಾಸನ ಕೇಳು ಜನಮೇಜಯರುಂಟು ಆದರೂ ಈ ಕೂಟದೊಡೆಯರು ಬಯಸುವದು ಓದುವ ಜನಮೇಜಯರನ್ನು …!
ಕನ್ನಡ ಸಾಹಿತ್ಯ ಸುಂದರ ಹೂತೋಟದಂತೆ ಅಸಂಖ್ಯ ಪರಿಮಳಭರಿತ ಸುಂದರ ಹೂಗಳಂತೆ ಇಲ್ಲಿ ಬಾಳಿಹೋದ ಕವಿಗಳು ಸಾಹಿತಿಗಳು .. ಅಂತೆಯೇ ಬದುಕಿರುವ ಸಾಹಿತ್ಯೋಪಾಸಕರು & ನವಸಾಹಿತಿಗಳು …
ಈ ಓದಿನ ಮನೆಯೊಳಗೆ ಓದುಗರು ಆ ಪರಿಮಳದ ಪಾತ್ರೆಗಳ ಮಕರಂದವ ಸವಿದು ಆಯ್ದು ತಂದು ಇತರ ಓದುಗರಿಗೂ ಕೇಳುಗರಿಗೂ ಉಣಬಡಿಸುತಿಹರು …ಸದಾ ಬೇರೆಯವರ ಓದಿಗೆ ಕಿವಿಯಾಗದೇ ಪ್ರತಿಯೊಬ್ಬರೂ ಓದಿನಲಿ ತೊಡಗಿ ತಾನೂ ಬಂದಿಲ್ಲಿ ಓದುವಂತಾದರೆ ಕನ್ನಡದ ಪುಸ್ತಕಗಳು ಜೀವಂತವಾಗುವವು…ಇದೇ ಈ ಮನೆಯವರ ಒತ್ತಾಸೆ…
ಓದಲಾಗದಿದ್ದರೂ ಸರಿ ಕೇಳುಗರ ಕರೆತಂದು ಕಿವಿಯಾಗಿಸಿರಿ ಈ ಮನೆಗೆ …ಕನ್ನಡವ ಉಳಿಸೋಣ ಬೆಳೆಸೋಣ ಅದರೊಡನೆ ಬೆಳೆಯೋಣ …

ಈ ಮನೆಯ ವ್ಯವಸ್ಥಾಪಕ ವೃಂದಕ್ಕೆ ಹೃದಯಾರ ವಂದನೆಗಳು …ಜೈ ಕರ್ನಾಟಕ Lorem Ipsum