ವಿದೇಶಿ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವ ಬಗೆ : ಆನ್‍ಲೈನ್ - ಆನ್‍ಸೈಟ್

*** ವಿಶ್ವೇಶ್ವರ ದೀಕ್ಷಿತ

 

ಕರೋನ-೧೯ ಪ್ರಭಾವ

ಕರೋನ ಮಾರಿ ಬಡಿದಂದಿನಿಂದ ನಮ್ಮ ಮನೆಯಲ್ಲಿ ನಾವೇ ಬಂಧಿಗಳಾದೆವು. ಆದರೆ ನಮ್ಮ ಕನ್ನಡ ಪ್ರೇಮ ಕುಂದಲಿಲ್ಲ. ಕನ್ನಡ ಕಲಿಕೆ ನಿಲ್ಲಲಿಲ್ಲ. ಕನ್ನಡಿಗರ ಸೃಜನ ಶೀಲತೆಗೆ ಎಣೆ ಇಲ್ಲ.  ಹಲವಾರು ತಂತ್ರಾಂಶಗಳನ್ನು ಬಳಸಿಕೊಂಡು ಕನ್ನಡ ಕಲಿ ಆನ್‍ಲೈನ್ ಆಯಿತು. ಮಕ್ಕಳು, ಉಪಾಧ್ಯಾಯರು, ತಂದೆ ತಾಯಿಗಳು ಈ ಹೊಸ ವಿಧಾನಗಳನ್ನು ಕೂಡಲೇ ಕಲಿತು, ತಕ್ಕಂತೆ ಅಳವಡಿಸಿಕೊಂಡು, ಹೊಸ ಹುಮ್ಮಸ್ಸಿನಿಂದ ಕನ್ನಡ ಅಭ್ಯಾಸ ಮುಂದುವರೆಸಿದರು. ಮೊದಲು ಸ್ವಲ್ಪ ದಿನ ಅಭ್ಯಾಸ ಇಲ್ಲದ್ದರಿಂದ ತೊಂದರೆ ಅನಿಸಿದರೂ ಕೂಡಲೇ ಇದಕ್ಕೆ ಹೊಂದಿಕೊಂಡೆವು .

ಪ್ರಸ್ತುತ ಪ್ರಶ್ನೆ

ಈಗ, ಕನ್ನಡ ಕಲಿಯಲು ನಾಲ್ಕು ಗೋಡೆಗಳ ನಡುವೆಯೆ ಕಲಿಯ ಬೇಕೆ ಅನ್ನುವ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಈ ಸಾಂಪ್ರದಾಯಕ ಆನ್ ಸೈಟ್ ಕಲಿಕೆಗೆ ಪರ್ಯಾಯವಾಗಿರುವುದು ಆನ್ ಲೈನ್ ಕಲಿಕೆ . ಮುಂದುವರೆದು, ಆನ್‍ ಲೈನ್ ಮಾತ್ರ ಏಕೆ ಕಲಿಸಬಾರದು ಎಂದು ಕೇಳಬಹುದು.

ಆನ್‍ಲೈನ್ ಕಲಿಕೆ  ಸ್ತರಗಳು

ಆನ್‍ಸೈಟ್ ಅಂದರೆ ಸಾಂಪ್ರದಾಯಿಕ, ತರಗತಿ(classroom)ಗಳಲ್ಲಿ ಸಮಕ್ಷಮ ಭೇಟಿ ಆಗಿ ಕಲಿಯುವುದು.

ಆನ್‍ಲೈನ್ ಕಲಿಕೆಯಲ್ಲಿ ಅನೇಕ ಸ್ತರಗಳಿವೆ.ಮೊದಲನೆಯದು, ಜಾಲತಾಣಗಳಲ್ಲಿ ಕೂಡಿಟ್ಟ ಮಾಹಿತಿಯನ್ನು ನಿಷ್ಕ್ರಿಯವಾಗಿ ನೋಡುತ್ತ ಹೋಗುವುದು. ಎರಡನೆಯದು, ಇಂಟರ್‍ಆ್ಯಕ್ಟಿವ್ ಆಗಿ ಜಾಲಾಡಿಸುತ್ತ ಸ್ವಯಂಬೋಧನೆಯಲ್ಲಿ ತೊಡಗುವುದು. ಮೂರನೆಯದು ವ್ಹರ್ಚುವಲ್ ತರಗತಿ(classroom)ಗಳಲ್ಲಿ ಭಾಗವಹಿಸುವುದು. ಇಲ್ಲಿ, ಆನ್‍ಲೈನ್ ಕಲಿಕೆ ಎಂದರೆ,   virtual classroom ಎಂದೆ ಅರ್ಥ. ಇದು  ಶಿಕ್ಷಕ ಮತ್ತು ವಿದ್ಯಾರ್ಥಿಗಳು ಒಂದೆಡೆ ಆನ್‍ಸೈಟ್ ಸೇರಿ ಮುಖಾಮುಖಿಯಾಗಿ in person ನಡೆಸುವ ತರಗತಿಯ ಆನ್‍ಲೈನ್ ಪ್ರತ್ಯನುಕರಣೆ (simulation).

ಆತಂಕ

ಸಾಂಪ್ರದಾಯಿಕ ಸಮಕ್ಷಮ ಭೇಟಿಯ ಕಲಿಕೆಯಲ್ಲಿ ಇರುವ ಮಾನವೀಯ ಸಂಪರ್ಕ  ಆನ್ಲೈನ್ ಕಲಿಕೆಯಲ್ಲಿ  ಕಡಮೆ ಎನ್ನವ ಆತಂಕ ಮೊದಲಲ್ಲಿ ಸಹಜ.

ಇಂಥ ಆತಂಕ ಕಾಡುವುದು ವಿಶೇಷವಾಗಿ ನಮಗೆ, ಕಲಿಸುವವರಿಗೆ, ಸಾಂಪ್ರದಾಯಿಕವಾಗಿ ಕಲಿತವರಿಗೆ!  ಇಲ್ಲಿ ಎರಡು ಅಂಶಗಳನ್ನು ಗಮನಿಸುವುದು ಒಳಿತು. ಮೊದಲನೆಯದಾಗಿ, ವಿದೇಶಿ ಮಕ್ಕಳಿಗೆ ಕನ್ನಡ ಕಲಿಕೆ ಅವರ ಮುಖ್ಯ ಪ್ರಾಥಮಿಕ ಶಿಕ್ಷಣವಲ್ಲ.  ಎರಡು ವಾರಕ್ಕೆ ಒಂದು ಗಂಟೆಯ ಕಲಿಕೆ ಮಾತ್ರ. ಎರಡನೆಯದಾಗಿ, ಟಿವಿ, ಐ-ಫೋನ್, ಐ-ಪ್ಯಾಡ್, ವಿಡಿಯೊ ಆಟಗಳಲ್ಲಿ ಹುಟ್ಟಿನಿಂದಲೆ ಮುಳುಗಿ, ಪ್ರಾಥಮಿಕ ಶಾಲೆಯಲ್ಲೆ ಗಣಕ ಯಂತ್ರ, ಯಂತ್ರಮಾನವ (robotics), ಗಣಕ ವಿಧಿ ಭಾಷೆ (programming language)ಗಳನ್ನು ಕಲಿಯುವ ಇಂದಿನ ಮಕ್ಕಳ  ಸಂವೇದನೆ ಬೇರೆಯೆ.  ದೃಶ್ಯ, ಶ್ರವ್ಯ, interactive elements, one-on-one breakroom ಗಳಂಥ ಅನುಕೂಲತೆಗಳನ್ನು ಈಗಿನ ತಂತ್ರಾಂಶಗಳು  ಒಳಗೊಂಡಿದ್ದು, ಆನ್‍ಲೈನಿಂದಾಗಿ ಕಳೆದುಕೊಳ್ಳುವುದು ಏನಿದ್ದರೂ ಅದರ ಪರಿಣಾಮವನ್ನು ಕನಿಷ್ಟಗೊಳಿಸಿವೆ ಅನ್ನಬಹುದು.

ಆನ್‍ಲೈನ್ ಕಲಿಕೆ  ಲಾಭಗಳು

ಆನ್ ಲೈನ್ ಕಲಿಕೆಯಲ್ಲಿ ಕೆಲವು ಹೆಚ್ಚಿನ ಲಾಭಗಳು ಇವೆ. ನಿಮ್ಮ ಸಮಯ ನಿಮ್ಮ ಜಾಗ;  ಮುಖಾಮುಖಿಯಾಗಬಹುದು; one-on-one ಅಥವಾ ಗುಂಪಿನಲ್ಲಿ ಕಲಿಯಬಹುದು;  ಇಂಟರ್ ಆ‍್ಯಕ್ಟಿವ್ ಆಗಿರಬಹುದು;  ಪರೀಕ್ಷೆಗಳನ್ನು ಕೊಡಬಹುದು. ಬೆನ್ನು ಬಗ್ಗಿಸುವ ಪಾಟಿ ಚೀಲ ಹೊತ್ತು ಹೋಗುವ ಗೋಜಂತೂ ಇಲ್ಲ.

ತಂದೆ-ತಾಯಿಗಳಿಗೆ ಡ್ರೈವಿಂಗ್ ಇಲ್ಲ . ಕ್ಲಾಸ್‍ರೂಂ ಹೊರಗಡೆ ಕಾಯುವುದು ಇಲ್ಲ. ಅದೇ  ಸಮಯವನ್ನು ಹೆಚ್ಚಿನ ಕಲಿಕೆಯಲ್ಲಿ ವಿನಿಯೋಗಿಸಬಹುದು.  ತಮ್ಮ ಕೆಲಸ ತಾವು ಮನೆಯಲ್ಲೇ ಮಾಡಿಕೊಳ್ಳಬಹುದು.

ಹೆಚ್ಚಿನ ಖರ್ಚು ಮತ್ತು ವ್ಯವಸ್ಥೆ (logistics) ತೊಂದರೆ ಇಲ್ಲದೆ, ಹೆಚ್ಚು ತರಗತಿಗಳನ್ನು, ಅಂದರೆ ವಾರಕ್ಕೊಮ್ಮೆ, ಮನಸ್ಸಿದ್ದರೆ ದಿನಾಲು ಕೂಡ, ಆನ್‍ಲೈನಲ್ಲಿ ನಡೆಸಬಹುದು.

No Kannada Child Left Behind

ಆನ್‍ಲೈನ ಪಾಠಗಳಲ್ಲಿ ವಿದ್ಯಾರ್ಥಿ-ಉಪಾಧ್ಯಾಯರ ನಡುವಿನ ದೂರ ಲೆಕ್ಕಕ್ಕೆ ಬಾರದು. ಹೆಚ್ಚು ದೂರದಲ್ಲಿರುವ ವಿದ್ಯಾರ್ಥಿಗಳು ಕೂಡ ಕನ್ನಡ ಕಲಿಕೆಯ ಲಾಭ-ಪ್ರಯೋಜನಗಳನ್ನು ಪಡೆಯಬಹುದು. ಇದು ಬಹಳ ಮಹತ್ವವಾದದ್ದು. ಕನ್ನಡದ ವ್ಯಾಪ್ತಿಯನ್ನು ಹೆಚ್ಚಿಸಿ,  No Kannada Child Left Behind ಅನ್ನುವ ನಮ್ಮ ಉದ್ಘೋಷಣೆಯನ್ನು ಅಕ್ಷರಶಃ ಸಾಕಾರಗೊಳಿಸಬಲ್ಲುದು.

ಅವಧಿ ಮತ್ತು ಆವರ್ತನ

ಮನೆ ಮತ್ತು ಕನ್ನಡ ತರಗತಿಗಳನ್ನು ಬಿಟ್ಟು ಕನ್ನಡ ಪರಿಸರ ಇರದ ಹೊರನಾಡಿನಲ್ಲಿ ತರಗತಿಯ ಅವಧಿ (period) ಗಿಂತ ಅದರ ಆವರ್ತನ (frequency) ಮುಖ್ಯವಾಗುತ್ತದೆ. ಅಂದರೆ ವಾರದಲ್ಲಿ ೨ ಗಂಟೆಯ ಒಂದು ಸಮಾವೇಶಕ್ಕಿಂತ ೪೦ ನಿಮಿಷದ ಮೂರು ತರಗತಿಗಳನ್ನು ನಡೆಸುವುದು ಉತ್ತಮ. ಇದರಿಂದ ಕನ್ನಡದ ಅರಿವು ನಿರಂತರವಾಗಿ ಕಲಿಕೆ ಗಟ್ಟಿಗೊಳ್ಳುತ್ತದೆ. ವಿದ್ಯಾರ್ಥಿಗಳು ಚಿಕ್ಕವರಾಗಿದ್ದರೆ, ಗಮನಾವಧಿ (attention span) ಕಡಿಮೆ ಇರುವುದರಿಂದ, ವಾರದಲ್ಲಿ ಅರ್ಧ ಗಂಟೆಯ ನಾಲ್ಕು ತರಗತಿಗಳನ್ನು ಹಮ್ಮಿಕೊಳ್ಳುವುದು ಇನ್ನೂ ಉತ್ತಮ. ಹೀಗೆ,  ಷಾಣ್ಮಾಸಿಕಕ್ಕೆ ಬೇಕಾದ ಎರಡು ಮಾನಗಳ ಅಥವ ತ್ರೈಮಾಸಿಕಕ್ಕೆ ಬೇಕಾದ ಮೂರು ಮಾನಗಳ ಅಗತ್ಯವನ್ನು ಸುಲಭವಾಗಿ ಪೂರೈಸಬಹುದು.

ಇದೆಲ್ಲ, ಯಾವ ಭೌತಿಕ ಕಟ್ಟುಪಾಡುಗಳಿಲ್ಲದೆ, ಆನ್‍ಲೈನ್ ಕಲಿಕೆಯಲ್ಲಿ ಬೇಕಾದಂತೆ ಹೊಂದಿಸಿಕೊಳ್ಳುವುದು ಸುಲಭ!

ವಿದ್ಯಾರ್ಥಿ-ಶಿಕ್ಷಕ ಅನುಪಾತ

ಇನ್ನು, ತರಗತಿಯ ಗಾತ್ರ ಎಷ್ಟಿರಬೇಕು? ಮುಖಾಮುಖಿ ಕಲಿಕೆಯಲ್ಲಿ, ಒಬ್ಬ ಟೀಚರ್‌ಗೆ ೧೨-೧೫ ವಿದ್ಯಾರ್ಥಿಗಳು ಅದರ್ಶ ಅನುಪಾತ ಎಂದು ಒಪ್ಪಲಾಗಿದೆ. ಆನ್‍ಲೈನ್ ಕಲಿಕೆಯಲ್ಲಿ, ಸದ್ಯಕ್ಕೆ, ಉಪಾಧ್ಯಾಯನ ನೋಟ ಸೀಮಿತವಾದ ಕಿಟಕಿಗಳ ಮೂಲಕ ಮಾತ್ರ. ವಿದ್ಯಾರ್ಥಿಗಳ ಭೌತಿಕ ಕೋಣೆ, ವಾತವರಣ, ಮತ್ತು ಉಪಕರಣಗಳು  ಬೇರೆಯಾದ್ದರಿಂದ ಸಂವೇದ್ಯ ಕೂಡ ಬೇರೆ ಆಗಬಹುದು. ಆದ್ದರಿಂದ, ತರಗತಿಯನ್ನು ೫-೮ ಮಕ್ಕಳ ಮಿತಿಯಲ್ಲಿ ನಡಸುವುದು ಉತ್ತಮ. 

ಆಕ್ಷೇಪಣೆ ಏಕೆ?

ಈಗ ಕನ್ನಡಕ್ಕಿಂತ ಅನೇಕ ಪಟ್ಟು ಕಠಿನವಾಗಿರುವ ವಿಷಯಗಳನ್ನು, ಉದಾಹರಣೆಗೆ, ಸಂಗೀತ, ನೃತ್ಯಗಳನ್ನು, ಆನ್‍ಲೈನಲ್ಲಿ ಕಲಿಯುವುದು ಹೆಚ್ಚಾಗಿದೆ, ಜನಪ್ರಿಯವೂ ಆಗಿದೆ. ಇದರಲ್ಲಿ ಯಾವ ಗುರು ಶಿಷ್ಯರಿಗೂ ತೊಂದರೆಯಾಗಿಲ್ಲ, ಕಲಿಕೆಗೂ ಕುಂದು ಆಗಿಲ್ಲ.   ಹೀಗಿರುವಾಗ, ಕನ್ನಡವನ್ನು ಆನ್ಲೈನ್ ಕಲಿಯುವುದು ಕಠಿನ ಅಥವ ಯೋಗ್ಯವಲ್ಲ ಅನ್ನಬಹುದೆ?

ಎಷ್ಟೇ ಆದರೂ ವಿದೇಶಿ ಕನ್ನಡ ಮಕ್ಕಳ ಕನ್ನಡ ಕಲಿಕೆ secondary ಮತ್ತು ಐಚ್ಛಿಕ. ಇಲ್ಲಿ ಕಲಿಯುವವರೆಲ್ಲ ಕರ್ನಾಟಕದಿಂದ ದೂರವಾಗಿ ಅದರ ಹಂಬಲಿಕೆಯಲ್ಲಿರುವ ಕನ್ನಡ ಅಭಿಮಾನಿ ತಾಯಿತಂದೆಯರ ಮಕ್ಕಳು. ಇವರೆಂದೂ ಕರ್ನಾಟಕಕ್ಕೆ ಹೋಗಿ ನೆಲೆಸುವವರಲ್ಲ ಎನ್ನುವುದು ವಾಸ್ತವಿಕ ಸತ್ಯ. ಇಲ್ಲಿ ಕನ್ನಡದ  ವ್ಯಾವಹಾರಿಕ ಅವಶ್ಯಕತೆಯೆ ಇಲ್ಲದಿರುವಾಗ, ಕನ್ನಡ ಕಲಿತು ಕಾವ್ಯ ರಚಿಸುವ  ಉನ್ನತ ನಿರೀಕ್ಷೆ ಇದೆಯೆ?  ಕರ್ನಾಟಕ ಸರಕಾರ ಕನ್ನಡ ಕಲಿತವರಿಗೆ ಮೀಸಲಿಟ್ಟ ಹುದ್ದೆಗಳ ಹಂಬಲ ಇದೆಯೆ?  ಅಮೆರಿಕೆಯಲ್ಲಿ ಇದ್ದು,  ೨೧ನೇ ಶತಮಾನದಲ್ಲಿ, ಆನ್‍ಸೈಟ್ ಕಲಿಕೆಯಲ್ಲೆ ಅನಿರ್ವಚನೀಯ ಲಾಭಗಳಿವೆ ಎನ್ನುವ ಭಾವನಾತ್ಮಕ ನೆಲೆಯಲ್ಲಿ ಸಿಕ್ಕಿ, ಅದರ ಅವಶ್ಯಕತೆ ಮತ್ತು ಲಾಭಗಳನ್ನು ಸ್ಪಷ್ಟವಾಗಿ ಬಿಡಿಸಿ ಹೇಳದೆ ಹಳೆಯ ಮಾದರಿಗಳಿಗೆ ಜೋತು ಬೀಳಬೇಕೆ?

ಮುಂದಿನ ದಾರಿ ಸ್ಪಷ್ಟವಾಗಿದೆ

ಆದ್ದರಿಂದ,  ಮಿತವಾದ ವಿದ್ಯಾರ್ಥಿ- ಶಿಕ್ಷಕ ಅನುಪಾತ ಉಳ್ಳ, ಡೈನಾಮಿಕ, ಇಂಟರ್‍ಆ್ಯಕ್ಟಿವ್, ಲೈವ್ ಆಗಿರುವ  ಕನ್ನಡ ತರಗತಿಗಳನ್ನು ಆನ್ ಲೈನ್ ಮಾತ್ರ ಏಕೆ ನಡೆಸ ಬಾರದು ಎನ್ನುವುದು ಉಚಿತ ಪ್ರಶ್ನೆ.  ಆನ್‍ಲೈನ್ ಕಲಿಕೆಗೆ ಬಲವಾದ ಕಾರಣಗಳಿವೆ. ಇದೇ ಮುಂದಿನ ದಾರಿ ಎನ್ನವುದು ಸ್ಪಷ್ಟವಾಗಿದೆ. ಆದರೆ ಅನುಭವ  ಸೀಮಿತವಾಗಿದೆ.  ಮುಂದಿನ ಹಲವು ವರ್ಷಗಳಲ್ಲಿ ಆನ್‍ಲೈನ್ ಕಲಿಕೆಯ ಅನುಭವ ಗಳಿಸುತ್ತ, ಪರಿಣಾಮಗಳನ್ನು  ಅಳೆಯುತ್ತ, ದತ್ತಾಂಶಗಳನ್ನು ಶೇಖರಿಸುವ ಅವಶ್ಯಕತೆ ಇದೆ.  ಸದ್ಯಕ್ಕೆ ಒಂದು-ಎರಡು-ಮೂರು ತಿಂಗಳಿಗೊಮ್ಮೆ ಸಮಕ್ಷಮ ಭೇಟಿಯಾಗಿ ಆನ್‍ಲೈನ್(ಹೆಚ್ಚು) ಆನ್‍ಸೈಟ್(ಕಡಮೆ) ಎರಡರ ಲಾಭ ಪಡೆಯುವುದರಲ್ಲೆ ಜಾಣ್ಮೆ ಇದೆ.

_______________
ಗಮನಿಸಬೇಕಾದ ಕೆಲವು ಕಲಿಕೆ ತಂತ್ರಾಂಶಗಳು

1. Adobe Captivate       https://www.adobe.com/products/captivateprime.html
2. Articulate 360            https://articulate.com
3. Blackboard Learn     https://www.blackboard.com
4. Docebo                     https://www.docebo.com/lms-elearning-platform-docebo-prices/
5. Elucidat                     https://www.elucidat.com
6. Google Classroom   https://classroom.google.com
7. Lectora Inspire         https://www.trivantis.com/products/inspire-e-learning-software
8. Shift                          https://www.shiftelearning.com
9. Thinkific                    https://www.thinkific.com
10. WizIQ                     https://www.wiziq.com

 


ನಿಮ್ಮ ಮತ (click to vote):  ವಿದೇಶಿ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವುದು ಹೇಗೆ?


ತಾಗುಲಿ : Teaching Kannada to Foreign Kannada Children : Online - Onsite, Vishweshwar Dixit

Vish Dixit: Thank you for summarizing the advantages of Online teaching particularly for Kannada and how far-reaching it can be (From Local Southern California to Texas, Massachusetts, Connecticut, Florida and the UK, Germany). The classes of Hoysala Balavana (HB) have been a working example of the model and looking forward to continue. Good to see the list of tools that can be used and also for highlighting what has been our motto here at HB "No Child Left Behind".
Vish - Thanks for your thoughts and write-up.

Very detail write up Vish avare🙏 It is such a collection of good Kannada words. Also thank you for guidelines on frequency of teaching for kids and benefits listed.