ಕನ್ನಡದ ಗುಟ್ಟು
ನಾನೇಕೆ ಉಗಾದಿಯ ಶುಭಾಶಯ ಹೇಳುವುದಿಲ್ಲ!
ನಸು ಬಿನದ ಬರಹ (ಬಿತ್ತರಿಕೆ)
ವಿಶ್ವೇಶ್ವರ ದೀಕ್ಷಿತ
ಬಂತು ಯಿಲ್ಲದ ಯುಗಾದಿ (ಯ್+ಇಲ್ಲದ)
ಇಂದು ವಾಟ್ಸಾಪ್ ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಲ್ಲಿ ಶುಭಾಶಯ ಕೋರುವ ಮೇಸೇಜುಗಳ ಭರಪೂರ ಹರಿದಾಟ. ಬಂದ ಚಿತ್ರ ಸಂದೇಶಗಳಲ್ಲಿ ಒಂದನ್ನು ಮುಂಜರಿಸಿ ಉಳಿದವನ್ನು ಅಳಿಸಿದರೆ ಆಯ್ತು ಇಂದಿನ ಕೆಲಸ. ಆದರೆ ಒಂದೇ ಒಂದು ತೊಂದರೆ: ಬಂದ ಮೇಸೇಜುಗಳೆಲ್ಲ ಮುಂಜರಿಸಿದ “ಉಗಾದಿ”ಯ ಶುಭಾಶಯಗಳು!
ಉಗಾದಿಯ ಉಗಮ
ಉಗಾದಿ ಎಲ್ಲಿಂದ ಬಂತು? ಉಗಾದಿ ಕನ್ನಡ ಪದವಲ್ಲ. ಕನ್ನಡದಲ್ಲಿ ಉಗಾದಿ = ಉಗಿ+ಆದಿ (ಲೋಪಸಂಧಿ) ಅಥವ ಉಗಿಯುವ ಆದಿ (ಗಮಕ ಸಮಾಸ) ಆಗಬಹುದು.
ಅಂದರೆ ಉಗಿಯುವುದು ಮತ್ತು ಉಗಿಸಿಕೊಳ್ಳುವುದು ಇಂದಿನಿಂದ ಯಥಾಪ್ರಕಾರ ಪುನರಾರಂಭ!
ಈ ದಿನ, ಮೃಷ್ಟಾನ್ನ ಭೋಜನ ಮಾಡಿ, ಸೊಂಪಾಗಿ ತಾಂಬೂಲ ಜಗಿದು, ಎಲ್ಲರಿಗೂ ಉಗಿದುಗಿದು, ನಿಮ್ಮ ಬಾಯಲ್ಲಿ ತಯಾರಾದ, ಶುಭಾಶಯದ ಗಿರ್ಮಿಟ್ಟನ್ನು ಯಥೇಚ್ಛವಾಗಿ ಥೂಂತುರಿಸಲು ಯಾರ ಪರ್ಮಿಟ್ಟೂ ಬೇಕಿಲ್ಲ.
ಎಚ್ಚರಿಕೆ! ಹೀಗೆ ಉಗಿದು ಮಾತಾಡುವುದು ಅಭ್ಯಾಸವಾಗಿ ಬಿಟ್ಟೀತು! ಉಗಿಯುವುದು ಸಹಜ ಎನಿಸಿದರೂ ಉಗಿಸಿಕೊಂಡವರು ಕೆಂಡಾಮಂಡಲವಾಗಿ ತಮ್ಮ ಉಗುಳಿನ ಉಗಿ ಎಬ್ಬಿಸಿ ಬಿಟ್ಟಾರು! ಅದಕ್ಕೇ ನೋಡಿ:
ಉಗಿಯುವುದತಿ ಸಹಜ, ಉಗಿಸಿಕೊಳ್ಳುವುದಸಹ್ಯ;
ಉಗಿದು ಮಾರುಗಿಸಿಕೊಳ್ಳುವುದು ಸಾಮಾನ್ಯ.
ಉಗಿಯದೆಯುಗಿಸಿಕೊಳ್ಳದೆಯೆ ಬಾಳುವಾ ಕಲೆಯ
ಜಗಿಜಗಿದು ನುಂಗಿ ಅರಗಿಸಿಕೊ ತಮ್ಮ.
(ಉಗಿಯುವುದು ಅತಿ ಸಹಜ, ಉಗಿಸಿಕೊಳ್ಳುವುದು ಅಸಹ್ಯ; ಉಗಿದು ಮಾರ್ ಉಗಿಸಿಕೊಳ್ಳುವುದು ಸಾಮಾನ್ಯ.
ಉಗಿಯದೆಯೆ [ಮತ್ತು] ಉಗಿಸಿಕೊಳ್ಳದೆಯೆ ಬಾಳುವ ಆ ಕಲೆಯ[ನ್ನು] ಜಗಿಜಗಿದು ನುಂಗಿ ಅರಗಿಸಿಕೊ, ತಮ್ಮ.)
ಪಾಪ, ಕೆಲವರಿಗೆ ಉಗಾದಿ ಮುಗಿದರೂ ವರುಷ ಇಡೀ ಉಗಿಸಿಕೊಳ್ಳುವುದು ತಪ್ಪದು; ಅದು ತಮ್ಮ ದುರಾದೃಷ್ಟ ಎಂದು ತೆಪ್ಪಗಾದಾರು.
ಎಲ್ಲಿಂದ ಯೇನು?
ಶುದ್ಧ ಸ್ವರಗಳಾದ ಎ ಏಕಾರಗಳು ಕನ್ನಡಿಗರ ಮಾತಿನಲ್ಲಿ ಯೆ(ಯ) ಯೇಕಾರಗಳಾಗಿ ವಿಕಾರಗೊಳ್ಳುವುದು ಸಾಮಾನ್ಯ. ಉದಾಹರಣೆಗೆ ಎಲ್ಲಿ--> ಯೆಲ್ಲಿ(ಯಲ್ಲಿ) , ಏನು --> ಯೇನು. ಅಂದರೆ, ಯುಗಾದಿಯಲ್ಲಿನ 'ಯು' ಅನ್ನು ಶುದ್ಧ ಸ್ವರ 'ಉ' ಕ್ಕೆ ಬದಲಾಯಿಸುವುದು ಕನ್ನಡಿಗರ ಜಾಯಮಾನಕ್ಕೆ ವಿರುದ್ಧ!
ತದ್ಭವ
ತದ್ಭವ ಅಂದರೆ ಬೇರೆ ಭಾಷೆಯಿಂದ, ಮುಖ್ಯವಾಗಿ ಸಂಸ್ಕೃತದಿಂದ, ಎರವಲು ತೆಗೆದುಕೊಂಡ ಪದಗಳು. ಎರವಲು ತೆಗೆದುಕೊಂಡಾಗ ಕೆಲವು ರೂಪಾಂತರ ಆಗುವುದು ಸಹಜ. ಇದಕ್ಕೆ, ಸ್ಪಷ್ಟವಾಗಿ ಇನ್ನೂ ಕಂಡು ಹಿಡಿಯಬೇಕಾದ, ಕನ್ನಡ ಧ್ವನಿ ನಿಯಮಗಳು ಇವೆ. ಸಂಸ್ಕೃತದ ಯುಗಾದಿ ಕನ್ನಡದಲ್ಲಿ ಉಗಾದಿ ಆಗುವುದು ಈ ನಿಯಮಗಳಂತೆಯೂ ಸಮಂಜಸ ಅಲ್ಲ.
ಉದಾಹರಣೆಗೆ:
- ಯುಕ್ತಿ ಕನ್ನಡದಲ್ಲಿ ಯುಕುತಿ ಅಥವ ಜುಕುತಿ ಆಗಬಹುದು. ಜಾಣತನದಿಂದ ಮಾಡಿದರೆ ಯುಕ್ತಿ, ಬರಿ ಮಾತಾಡಿದರೆ ಉಕ್ತಿ.
- ಯುತಿ ಉತಿ ಆಗುವುದಿಲ್ಲ, ಜೊತೆ ಆಗಬಹುದು.
- ಯುದ್ಧ ಮಾಡಬಹುದು; ಜುದ್ದ ಮಾಡಬಹುದು. ಆದರೆ, ಯುದ್ಧ ಉದ್ದ ಆಗುವುದು ಯಾರಿಗೂ ಬೇಡ.
- ಕನ್ನಡದ ಯುವತಿ ಯಾವಾಗಲೂ ಯುವತಿಯೆ. ಅವಳ ಯೌವನ ಅವಳಿಗೇ. ಅವಳ ಅವ್ವನ (ಔವನ) ಪಾಲಿಗೆ ಅಲ್ಲ.
- ಯೋಗಿ ಜೋಗಿ ಆಗಿ ಮನೆಯ ಮುಂದೆ ಭಿಕ್ಷಕ್ಕೆ ಬಂದರೆ ಮುಂದೆ ಓಗಿ ಅನ್ನದಿರಿ.
ಹಿಂದಿಯಲ್ಲಿ ಇದ್ದರೆ ಮುಂದಿಯಲ್ಲೂ ಇರಬೇಕೆ?
"ಹಿಂದಿಯಲ್ಲಿ ಉಗಾದಿ ಇದೆ; ತೆಲುಗಿನಲ್ಲಿ ಉಗಾದಿ ಇದೆ" ಎನ್ನುವುದು ಅತಾರ್ಕಿಕ.
ಹಿಂದಿಯಲ್ಲಿ ಇದ್ದರೆ ಮುಂದಿಯಲ್ಲೂ ಇರಬೇಕು ಎನ್ನುವುದು ಕೇವಲ ಮೊಂಡು ವಾದ. ಪ್ರತಿಯಾಗಿ, ಯುಗಾದಿ ಎಂದು ಹೇಳಿ ಕನ್ನಡ ಅಭಿಮಾನ ಮತ್ತು ಗಟ್ಟಿತನ ಮೆರೆಯಲು ಬೇರೆ ಕಾರಣ ಬೇಕೇ!
ಎಚ್ಚರ!
ಉಗಿ ಪದಕ್ಕೆ ಹೆದರು ಎನ್ನುವ ಅರ್ಥವೂ ಇದೆ. ಚುನಾವಣೆಯ ನಂತರ ಪಟ್ಟ ಏರಿದ ಸರಕಾರ ಉಗಾದಿಯ ಶುಭಾಶಯ ಹೇಳಿದರೆ ಅದು ಮುಂಬರುವ ದಿನಗಳ ಸೂಚನೆ. ಜನತೆ ಎಚ್ಚರದಿಂದಿರುವುದು ಒಳಿತು!
ಜಗಳ ಬೇಡ
ಹೀಗೆಲ್ಲ, ಉಗಾದಿಯ ಶುಭಾಶಯ ಹೇಳುವ ನಿಮ್ಮ ಗೆಳೆಯರೊಂದಿಗೆ ಕೈಕೈ ಮಿಲಾಯಿಸಿ ಜಗಳ ಕಾಯಬೇಡಿ. ಉಕ್ತಿ ಮತ್ತು ಯುಕ್ತಿ ಎರಡನ್ನೂ ಉಪಯೋಗಿಸಿ ಅವರ ಗಮನಕ್ಕೆ ತಂದರೆ ಸಾಕಲ್ಲವೆ?
ಯುಗಾದಿಯ ಶುಭಾಶಯಗಳು!
ಕನ್ನಡಿಗರೆ ಇರಲಿ ಇರದಿರಲಿ, ಯಾರಿಗೂ ಉಗಾದಿಯನ್ನು ಬಯಸಲಾರೆ. ಆದ್ದರಿಂದ, ಕನ್ನಡಿಗರೆ,
ಬೇವು ಕಮ್ಮಿ ಬೆಲ್ಲ ಹೆಚ್ಚಾಗಲಿ,
ಎಲ್ಲರಿಗೂ ಯುಗಾದಿಯ ಸಾಸಿರ ಒಳಿತಾಸೆಗಳು!
ಕುಲವಧು ಚಿತ್ರವನ್ನು ನೆನಪಿಸಿಕೊಳ್ಳುತ್ತ, ಜಿ.ಕೆ. ವೆಂಕಟೇಶ ಅವರ ಸಂಗೀತ ಮತ್ತು ಎಸ್. ಜಾನಕಿ ಅವರ ಕೋಗಿಲೆ ಕಂಠದಲ್ಲಿ, ವರಕವಿಯ ಈ ಮಾತಿನಲ್ಲಿ ರಂಜಿಸೋಣ:
ಯುಗ ಯುಗಾದಿ ಕಳೆದರೂ ಮರಳಿ ಬರುತಿದೆ
ಚಿತ್ರ : ಕುಲವಧು (೧೯೬೩)
ಸಾಹಿತ್ಯ : ದ. ರಾ. ಬೇಂದ್ರೆ
ಸಂಗೀತ : ಜಿ. ಕೆ. ವೆಂಕಟೇಶ
ಗಾಯಕಿ : ಎಸ್. ಜಾನಕಿ
ಈ ಹಾಡನ್ನು ಪೂರ್ತಿಯಾಗಿ http://www.sjanaki.net/ ಜಾಲತಾಣದಲ್ಲಿ ಕೇಳಬಹುದು:
http://www.sjanaki.net/kannada-melodious-solos-vol2
ಸಾಹಿತ್ಯ http://kannada-lyric.blogspot.com ಬ್ಲಾಗ್ ನಲ್ಲಿ ಲಭ್ಯ:
http://kannada-lyric.blogspot.com/2012/10/blog-post_21.html
ನಿಮ್ಮವನೆ ಆದ,
ವಿಶ್ವೇಶ್ವರ ದೀಕ್ಷಿತ
ಪ್ರಾರಂಭಿಕ ಸಂಗೀತ : ಆಕಾಶ
ಕನ್ನಡ ಕಲಿ, ಕನ್ನಡದ ಗುಟ್ಟು
ಬಿತ್ತರಿಕೆ ೨, ಮಾರ್ಚ್ ೨೦೨೦
© Vishweshwar Dixit 2020; Secret of Kannada : Ugadi-Yugadi Episode 2, March 2020
ಪೂರಕ ಓದಿಗೆ:
ತಾಗುಲಿ : Secret of Kannada, Why I do not offer Ugadi greetings, Vishweshwar Dixit