ಕನ್ನಡದ ಗುಟ್ಟು
ಉಗಾದಿಯೂ ಯುಗಾದಿಯೆ?
ನಾನೇಕೆ ಉಗಾದಿಯ ಶುಭಾಶಯ ಹೇಳಬಹುದು (ಬಿತ್ತರಿಕೆ)
ವಿಶ್ವೇಶ್ವರ ದೀಕ್ಷಿತ
ಹಿನ್ನೋಟ
ಕಳೆದ ವರ್ಷ ಇದೇ ಸಮಯ. ವಸಂತನ ಆಗಮನ. ಕಚಗುಳಿಸುವ ಕಳ್ಳ ಹೆಜ್ಜೆಯ ಗಾಳಿ. ಮರ ಗಿಡ ಬಳ್ಳಿಗಳು ಚಿಗುರಿ ತೊಂಗುವ ತಾನನ. ಕೋಗಿಲೆಗಳ ಗಾಯನ. ಮೈ ಚಳಿಯನ್ನು ಕೊಡಹಿದ ಜನ ಮನ. ಎಲ್ಲೆಲ್ಲೂ ಯುಗಾದಿಯ, ಕೆಲವರಿಗೆ ಉಗಾದಿಯ, ಸಡಗರ. ಅಂತರ್ಜಾಲದಲ್ಲಿ ಶುಭಾಶಯಗಳ ಹರಿದಾಟ.
ಆಗ, 'ಬಂತು ಯಿಲ್ಲದ ಯುಗಾದಿ ', ಎಂದರೆ ಯ್ ಇಲ್ಲದ ಯುಗಾದಿ, ಅದೆ ಉಗಾದಿ, ಎನ್ನುವ ಬಿತ್ತರಿಕೆಯಲ್ಲಿ "ನಾನು ಉಗಾದಿಯ ಶುಭಾಶಯ ಏಕೆ ಹೇಳುವುದಿಲ್ಲ" ಎಂದು ತುಸು ವಿನೋದದಿಂದ ಸಮರ್ಥಿಸಿಕೊಂಡಿದ್ದೆ. ಅದಕ್ಕೆ ನಾಲ್ಕು ರೀತಿಯ ಕಾರಣಗಳನ್ನು ಕೊಟ್ಟಿದ್ದೆ:
೧. ಪದಹುಟ್ಟು (etymological) ಕಾರಣ - ಯುಗ + ಆದಿ ಸೇರಿ ಯುಗಾದಿ;
೨. ಕನ್ನಡ ನಾಲಗೆ ಹೊರಳುವ ರೀತಿ;
೩. ತದ್ಭವ ನಿಯಮಗಳು; ಮತ್ತು
೪. expert witness - ಕವಿ ಬಳಕೆ.
ಭಾಷಾ ವಿಜ್ಞಾನ ಮತ್ತು ವ್ಯಾಕರಣಗಳ ದೃಷ್ಟಿಯಿಂದ ಈ ವಾದ ಸರಿ ಇರಬಹುದು. ಆದರೆ, ವ್ಯಾವಹಾರಿಕವಾಗಿ ಬಳಕೆಯಲ್ಲಿರುವ, ಅಂದರೆ ಜೀವಂತವಾಗಿರುವ, dead ಅಲ್ಲದ, ಭಾಷೆ ಒಂದನ್ನು ವ್ಯಾಕರಣದ ಮಿತಿಯಲ್ಲಿ ಹಿಡಿದು ಇಡಲು ಸಾಧ್ಯವೇ? ಯಾವುದು ಸಾಧು? ಯಾವುದು ಅಸಾಧು?
ಅಂದು, ಎಲ್ಲರಿಗೂ ಯುಗಾದಿಯ ಶುಭಾಶಯಗಳನ್ನು ಬಯಸುತ್ತ, ಒಂದು ಕಿವಿ ಮಾತನ್ನೂ ಸೇರಿಸಿದ್ದೆ:
ಉಗಿಯುವುದತಿ ಸಹಜ, ಉಗಿಸಿಕೊಳ್ಳುವುದಸಹ್ಯ;
ಉಗಿದು ಮಾರುಗಿಸಿಕೊಳ್ಳುವುದು ಸಾಮಾನ್ಯ.
ಉಗಿಯದೆಯುಗಿಸಿಕೊಳ್ಳದೆಯೆ ಬಾಳುವಾ ಕಲೆಯ
ಜಗಿಜಗಿದು ನುಂಗಿ ಅರಗಿಸಿಕೊ ತಮ್ಮ.
ಆದರೂ, ಕೆಲವರು ತಮ್ಮ ಉಗಾದಿಯ ಶುಭಾಶಯಗಳನ್ನು ನನಗೆ ಉಗಿದುಗಿದು ಹೇಳಿದರು. ಆದ್ದರಿಂದ, ಮತ್ತೆ ಆ ವರ್ಷಧಾರೆಯಿಂದ ತಪ್ಪಿಸಿಕೊಳ್ಳಲು, "ನಾನೇಕೆ ಉಗಾದಿಯ ಶುಭಾಶಯ ಹೇಳಬಹುದು" ಎಂದೇ ಈ ಹೊಸ ವರ್ಷವನ್ನು ಆರಂಭಿಸುತ್ತಿದ್ದೇನೆ.
ಸಹಜ ಮತ್ತು ಕೃತ್ರಿಮ ಭಾಷೆಗಳು
ಭಾಷೆಗಳಲ್ಲಿ ಎರಡು ತರಹ. ಒಂದು ಸಹಜ, ಸ್ವಾಭಾವಿಕ, ಅವಶ್ಯಕತೆಗೆ ತಕ್ಕಂತೆ ತಾನಾಗಿಯೆ ಹುಟ್ಟಿದ್ದು, ತಾನಾಗಿಯೆ ಬೆಳೆದದ್ದು. ಭಾಷೆ ಮೊದಲು ( ಮುಂದೆ), ವ್ಯಾಕರಣ ನಂತರ (ಹಿಂದೆ). ಇಲ್ಲಿ ಯಾರೂ ಕುಳಿತುಕೊಂಡು ನಿಯಮಗಳನ್ನು ರಚಿಸಿ ಭಾಷೆಯನ್ನು ಬಳಕೆಗೆ ತರಲಿಲ್ಲ. ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ಚೀನಿಯ ಎಲ್ಲ ಸಹಜ ಭಾಷೆಗಳು.
ಎರಡನೆಯದು ಕೃತ್ರಿಮ ಭಾಷೆ. ಅಂದರೆ ಒಂದು ವಿಶೇಷ ಉಪಯೋಗಕ್ಕಾಗಿ, ನಿಯಮಗಳನ್ನು ರಚಿಸಿ, ಭಾಷೆಯನ್ನು ಹುಟ್ಟಿಸಿ, ಸಕ್ರಿಯವಾಗಿ ಪೋಷಿಸುತ್ತ ಹೋಗುವುದು. ಗಣಕ ಭಾಷೆಗಳನ್ನು ಉದಾಹರಣೆಯಾಗಿ ಕೊಡಬಹುದು. Lisp, Smalltalk, Fortran, C, C++, SQL, Cobol, python, html, php ಹೀಗೆ.
ಸಹಜ ಮತ್ತು ಕೃತ್ರಿಮ ಈ ಭಾಷೆಗಳ ನಡುವೆ Esperanto ಭಾಷೆಯನ್ನು ಸೇರಿಸಬಹುದು. ಯುರೋ-ಭಾರತೀಯ ಭಾಷೆಗಳ ಆಧಾರದ ಮೇಲೆ ಹುಟ್ಟು ಹಾಕಿದ ಈ ಭಾಷೆ ಪ್ರಪಂಚದ ತುಂಬ ಹರಡಿದೆ.
ಬೆಂಗಳೂರಿನ ಪ್ರಸಿದ್ಧ ಕಂಪ್ಯೂಟರ್ ಪ್ರೋಗ್ರಾಮರ್ ಗಳು ಇದಕ್ಕೆ ಅಪವಾದ ಎನ್ನಬಹುದೇನೋ! ಆದರೆ, ಗಣಕ ಭಾಷೆಗಳನ್ನು ಜನರು ಆಡುವುದಿಲ್ಲ. ಗಣಕ ಭಾಷೆಗಳು ಗಣಕ ಯಂತ್ರಗಳ ನಡತೆಯನ್ನು ನಿರ್ದೇಶಿಸಲು ಉಪಯುಕ್ತವಾಗಿವೆ. BNF ಎನ್ನುವ ಶಿಷ್ಟ ರೂಪದಲ್ಲಿ ಇವುಗಳ ವ್ಯಾಕರಣವನ್ನು ನಮೂದಿಸಬಹುದು. ಒಂದೊಂದು ಭಾಷೆಯೂ ಒಂದೊಂದು ಉದ್ದೇಶಕ್ಕೆ ನಿರ್ಮಿತ ಆದದ್ದು ಅಥವಾ ಬಳಕೆ ಆದದ್ದು.
Lisp - Artificial Intelligence ಅಪ್ಲಿಕೆಗಳಿಗೆ
Fortran - Scientific ಅಪ್ಲಿಕೆಗಳಿಗೆ
Cobol - Business ಅಪ್ಲಿಕೆಗಳಿಗೆ
SQL - Database ಅಪ್ಲಿಕೆಗಳಿಗೆ
Php, HTML - ಅಂತರ್ಜಾಲ ಅಪ್ಲಿಕೆಗಳಿಗೆ
ಅವಶ್ಯಕತೆ ಬದಲಾದಂತೆ ಮತ್ತು ಬೆಳೆದಂತೆ ಭಾಷೆಯೂ ಬದಲಾಗುವುದು. ಕೃತ್ರಿಮ ಭಾಷೆಯೊಂದು ಬೆಳೆಯಲು, ಬದಲಾಗಲು ಮೊದಲು ಅದರ ವ್ಯಾಕರಣ ಬದಲಾಗಬೇಕು. C ಇಂದ C++ ಗೆ ಹೋದಂತೆ.
ಹೊಸ ಪದಗಳು ಹುಟ್ಟಿ, ಯಾ ಇತರ ಭಾಷೆಗಳಿಂದ ಆಮದಿಸಿಕೊಂಡು, ಭಾಷೆಯ ಶಬ್ದ ಭಂಡಾರ ಹೆಚ್ಚಬಹುದು. ಅದಕ್ಕೆ ವ್ಯಾಕರಣ ಬದಲಾಗಬೇಕಿಲ್ಲ. ಉದಾಹರಣೆಗೆ,
ನಾಳೆಯಿಂದ ನಗರದಲ್ಲಿ ರೈಲು ಸ್ಥಗಿತವಾಗುವುದು
ನಾಳೆಯಿಂದ ಊರಲ್ಲಿ ಉಗಿಬಂಡಿಗಳ ಓಡಾಟ ನಿಲ್ಲಿಸಲಾಗುವುದು.
ಇಲ್ಲಿ ವ್ಯಾಕರಣ ಒಂದೆ; ಆದ್ದರಿಂದ ಭಾಷೆ ಒಂದೆ.
ಹಳತಿನಿಂದ ಹೊಸದು : ಸಹಜ ನಿಯಮ
ಹಳಗನ್ನಡ ಮತ್ತು ಹೊಸಗನ್ನಡಗಳನ್ನು ನೋಡಿ: ಪಳಗನ್ನಡದ ಪಕಾರ ಹೊಸಗನ್ನಡದಲ್ಲಿ ಹಕಾರ ಆಗಿದೆ. ಱೞ ಕುಳ ಕ್ಷಳಗಳು ಬರಿ ಳಕಾರ ಆಗಿವೆ. ಅಕ್ಕಂಗಳ್ ಅಕ್ಕಂದಿರು ಆಗಿದ್ದಾರೆ. ಇಲ್ಲಿದೆ ಸ್ವಾರಸ್ಯ: ಗೆಲ್ಲುತ್ತಾನೆ, ಗೆಲ್ಲುತ್ತಾಳೆ, ಗೆಲ್ಲುತ್ತದೆ, ಗೆಲ್ಲುವರು, ಗೆಲ್ಲುವವು, ಗೆದ್ದರು, ಗೆದ್ದಳು , ಗೆದ್ದಿತು ಗೆದ್ದವು, ಗೆಲ್ಲುವನು, ಗೆಲ್ಲುವಳು, ಗೆಲ್ಲುವುದು ಹೀಗೆ ಲಿಂಗ ವಚನ ಕಾಲ ಯಾವುದರ ಭೇದವೂ ಇಲ್ಲದೆ ಹಳಗನ್ನಡದಲ್ಲಿ ಎಲ್ಲವೂ ಗೆಲ್ಗುಂ ಗೆಲ್ಗುಂ ಗೆಲ್ಗುಂ! ಹಳಗನ್ನಡವೇ ಸುಲಭ ಏನೋ!
ಯುಗಾದಿ-ಉಗಾದಿ ಉಚ್ಚಾರ ಬರವಣಿಗೆಗಳಲ್ಲಿ ಬೇರೆ ಆದರೂ ಜನರ ಮಾತಿನಲ್ಲಿ ಅರ್ಥ ಒಂದೇ. ಅದರಂತೆ ಬರವಣಿಗೆ ಉಚ್ಚಾರ ಒಂದೇ ಆದರೂ ಅರ್ಥ ಬದಲಾಗಬಹುದು. ಉದಾಹರಣೆಗೆ ಇಲ್ ಪದ, ಮೂಲದಲ್ಲಿ, ಧನಾತ್ಮಕವಾಗಿ ಇರು ಎಂದು ಇದ್ದುದು ಈಗ ಇಲ್ಲ ಎಂದು ಋಣಾತ್ಮಕ ಆಗಿದೆ. ಹೀಗೆ, ಇಂದಿನ ಪಂಡಿತ ಕೊಂಕು ಮಾತಿನಲ್ಲಿ ಪೆದ್ದ ಆಗಿದ್ದು ಮುಂದೆ ನಿಜವಾಗಿಯೂ ಪೆದ್ದ ಆಗಬಹುದು.
ಹೀಗೆ ಸೂಕ್ಷ್ಮ ವ್ಯತ್ಯಾಸಗಳಿದ್ದರೂ ಹಳಗನ್ನಡ ಹೊಸಗನ್ನಡ ಎರಡೂ ಕನ್ನಡ. ಇಂಥ ಬದಲಾವಣೆ ಕಾಲ ಕಳೆದಂತೆ ಉಂಟಾದದ್ದು, ಜನರ ನಾಲಗೆಯಿಂದ; ವ್ಯಾಕರಣ ಪುಸ್ತಕಗಳಿಂದ ಅಲ್ಲ.
ಉಗಾದಿಯ ಹುಟ್ಟು
ತೆಲುಗಿನಲ್ಲಿ ಉಗಾದಿ ಇದೆ. ಅದರಿಂದ ಕನ್ನಡಕ್ಕೆ ಬಂದಿರಬಹುದು; ಅನೇಕ ಕನ್ನಡಿಗರ ಮಾತಿನಲ್ಲಿ ಯುಗಾದಿ ಉಗಾದಿ ಆಗಿ ತದ್ಭವಿಸಿದೆ ಅಥವ ಈ ಅಂತರ್ಜಾಲ ಯುಗದಲ್ಲಿ ಕ್ಷಿಪ್ರವಾಗಿ ತದ್ಭವಿಸುತ್ತಿದೆ. ಇದೆಲ್ಲ ಸ್ವತಃಸಿದ್ಧ.
ಆದರೂ, ಈ ಉಗಾದಿ ಪದಕ್ಕೆ, ಅರ್ಥಗಳನ್ನು ಸ್ವಲ್ಪ ಹಿಗ್ಗಿಸಿ ನಂಬಬಹುದು ಎನ್ನಿಸುವಂಥ, ನುಡಿಹುಟ್ಟಿನ (etymological)ಗಾಳಿ ಗೋಪುರ ಹೀಗೆ ಕಟ್ಟಬಹುದು:
ಮೊದಲೆಯದಾಗಿ,
ಉಖ (ಸಂ ) ಸಂಸ್ಕೃತದಲ್ಲಿ ಕುದಿಸುವ ಪಾತ್ರೆ ಎಂದು ಅರ್ಥ. ಉಖ್ಯ ಎಂದರೆ ಕುದಿಸಿದ ಅಕ್ಕಿ, ಅನ್ನ ಎಂದು. (ಇದಕ್ಕೆ ಸಂಬಂಧಿಸಿದ ಉಕ್, ಉಕ್ಕು, ಉಕ್ಕರಿಸು ಪದಗಳು ಕನ್ನಡದಲ್ಲಿ ಇವೆ.)
ಉಗ, ಉಗಿ ಎಂದರೆ ನೀರು ಕಾಯ್ದಾಗ ಮತ್ತು ಕುದಿಸಿದಾಗ ಬರುವ ಹೆಬೆ.
ಉಖ + ಆದಿ ಸೇರಿ -> ಉಖಾದಿ -> ಅದರಿಂದ ಉಕಾದಿ -> ಉಗಾದಿ
ಯುಗಾದಿ ಎಂದರೆ, ಇನ್ನೇನು ಬೇಸಿಗೆ ಮತ್ತು ಮಳೆ ಬಂದು ಹೆಬೆ ಏಳುವುದು ಶುರು. ಆಹಾ , ಬೇಸಿಗೆಯ ಸುಡು ಬಿಸಿಲಿನ ದಿನ, ನೆಲವೇ ಕುದಿಸುವ ಪಾತ್ರೆಯಂತಾಗಿ, ಸಾಯಂಕಾಲದ ಮಳೆ ಕಾಯ್ದ ರಸ್ತೆಯ ಮೇಲೆ ರಪರಪನೆ ಬಿದ್ದಾಗ, ಹೆಬೆ ಎದ್ದು, ದೂಳಿನ ಕಂಪನ್ನು ಮೂಗು ಹಿಗ್ಗಿಸುತ್ತ ಸವಿಯಲು ಕಾಯದವರು ಯಾರಿದ್ದಾರೆ! ಆ ದಿನದ ಆಗಮನವನ್ನು ಸಾರುವುದೇ ಉಗಾದಿ!
ಎರಡನೆಯದಾಗಿ, ಉಘ (ಸಂ ) ಎಂದರೆ ಸಂಸ್ಕೃತದಲ್ಲಿ ಜಲಪ್ಲಾವನ (deluge). ಉಘಾದಿ -> ಯಿಂದ ಉಗಾದಿ, ಮುಂಬರುವ ಮಳೆಗಾಲದ ಸೂಚನೆ ಎಂದುಕೊಳ್ಳಬಹುದು.
ಸರಿ ತಪ್ಪು
ಯುಗಾದಿ-ಉಗಾದಿ ಇದರಲ್ಲಿ ಸರಿ ತಪ್ಪು, ಒಳ್ಳೆಯದು ಕೆಟ್ಟದ್ದು, ಮೇಲು ಕೀಳು, ಎಂದಿಲ್ಲ. ರೂಢಿಯಲ್ಲಿ ಯಾವುದು ಇದೆಯೋ, ಜನರ ನಾಲಗೆಯಲ್ಲಿ ಯಾವುದು ಇದೆಯೋ ಅದು ಸರಿ. ಯಾವುದರಿಂದ ಇಂಗಿತ ಅರ್ಥ ಸಂವಹನ ಆಗುವುದೋ ಅದು ಸರಿ. ಉಗಾದಿ ಜನಪದದಲ್ಲಿ ಇದೆ. ಇಂದಿನ ಟಿವಿ ಅಂತರ್ಜಾಲ ಯುಗದಲ್ಲಿ ತಿಳಿದೋ ತಿಳಿಯದೆಯೋ ಅದು ಚುರುಕಾಗಿ ಹಬ್ಬುತ್ತ ಇದೆ. ಎಂದಿಗಿಂತ ಲೋಕಮಾನ್ಯತೆಯನ್ನು ಪಡೆದುಕೊಳ್ಳುತ್ತಿದೆ.
ಆದ್ದರಿಂದ, ದೊಡ್ಡ ಆದ್ದರಿಂದ, ಉಗಾದಿಯ ಶುಭಾಶಯ ಹೇಳಬಹುದು.
ಎಲ್ಲರಿಗೂ ಯುಗಾದಿಯ, ಸರಿ, ಉಗಾದಿಯ ಶುಭಾಶಯಗಳು!
ನಿಮ್ಮವನೆ ಆದ,
ವಿಶ್ವೇಶ್ವರ ದೀಕ್ಷಿತ
ಸಂಗೀತ : ಆಕಾಶ ದೀಕ್ಷಿತ
ಕನ್ನಡ ಕಲಿ, ಕನ್ನಡದ ಗುಟ್ಟು
ಬಿತ್ತರಿಕೆ ೦೮, ಕಾಲ ೨೦೨೧, ಸಂಖ್ಯೆ ೦೩
ಬಿಕಾಸ ೦೮-೨೦೨೧-೦೩
© Vishweshwar Dixit 2021; Secret of Kannada : Ugadi-Yugadi Episode 8, Year 2021 No. 03 March 2021
ಪೂರಕ ಓದಿಗೆ:
ತಾಗುಲಿ : yugadi, ugadi, Vishweshwar Dixit