ಗಾಂಧಿ - ಜೀವನ

 

 

ಪೂರಕ ಓದಿಗೆ: ಭಾಗ ೨ - ಗಾಂಧಿ ಸಾಧಿಸಿದ್ದಾದರೂ ಏನು?
 

ಕೆಟಲ್ ಪದದ ಸ್ಪೆಲಿಂಗ್ ಬಾರದು; ಪಕ್ಕದ ಹುಡುಗನಿಂದ ಕಾಪಿ ಹೊಡೆಯುವಂತೆ ಶಿಕ್ಷಕರು ಸನ್ನೆ ಮಾಡುತ್ತಾರೆ; ಆದರೆ ಮೋಹನದಾಸ್ ತನಗೆ ಬಂದಂತೆ ತಪ್ಪಾಗಿ ಬರೆಯುತ್ತಾನೆ. ಈ ಪ್ರಾಮಾಣಿಕ ಮೂರ್ತಿಯ ಮೇಲೆ ಶಿಕ್ಷಕರಿಗೆ ಎಲ್ಲಿಲ್ಲದ ಸಿಟ್ಟು. ಆವರಿಗೇನು ಗೊತ್ತು ಕರಮಚಂದರ ಮಗ ಈ ಮೋಹನದಾಸ ಮುಂದೆ ಮಹಾತ್ಮ ಗಾಂಧಿ ಆಗುತ್ತಾನೆ ಎಂದು! 

ಭಾರತ ದೇಶಕ್ಕೆ ಸ್ವತಂತ್ರವನ್ನು ದೊರಕಿಸಿಕೊಟ್ಟು ರಾಷ್ಟ್ರಪಿತ, ಎಲ್ಲರಿಗೂ ನೈತಿಕ ನೆಲೆಯನ್ನು ತೋರಿಸಿ ಬಾಪು, ಮಕ್ಕಳಿಗೆಲ್ಲ ಪ್ರಿಯನಾಗಿ ಗಾಂಧಿ ತಾತ ಆದವ ಈ ಮೋಹನ. ಗುಜರಾತ ರಾಜ್ಯದ ಪೋರಬಂದರಿನಲ್ಲಿ ಅಕ್ಟೊಬರ್ ೨, ೧೮೬೯ರಂದು ಜನನ. ಲಂಡನ್ನಿನಲ್ಲಿ ವಕೀಲಿಗೆ ಓದು. ಮುಂಬಯಿಯಲ್ಲಿ ವಕೀಲಿ ವೃತ್ತಿ ಆರಂಭ, ಹಲ ಬಗೆಯ ನಿ?ಲ ಪ್ರಯತ್ನ. 

ದಕ್ಷಿಣ ಆಫ್ರಿಕಾಕ್ಕೆ ಕೆಲಸದ ನಿಮಿತ್ತ ಪಯಣ. ಅಲ್ಲಿನ ಸರಕಾರದ ವರ್ಣಭೇದ ನೀತಿಯ ಕಹಿ ಊಟದ ಸ್ವಾಗತ. ಅಲ್ಲಿ ಕಂಡದ್ದು ಭಾರತೀಯರ ರಾಜಕೀಯ ಹಕ್ಕು ಮತ್ತು ಸ್ವಾತಂತ್ರ್ಯಗಳ ದಿಗಿಲುಗೊಳಿಸುವಂತಹ ನಿರಾಕರಣೆ. ಮೂಲ ಹಕ್ಕುಗಳನ್ನು ದೊರಕಿಸಿಕೊಳ್ಳಲು ಚಳುವಳಿ ಆರಂಭ. ಇಪ್ಪತ್ತು ವರುಷ ದಕ್ಷಿಣ ಆಫ್ರಿಕದಲ್ಲಿ ವಾಸ; ಪೋಲಿಸರಿಂದ ಹೊಡೆತ, ಒದೆತ; ಅನೇಕ ಬಾರಿ ಜೈಲು ವಾಸ. ಸತ್ಯ ತಮ್ಮದು ಎಂದು ನಂಬಿ ಛಲ ಬಿಡದ ಗಾಂಧಿ ಅಹಿಂಸಾ ಮಾರ್ಗವನ್ನು ಹಿಡಿದರು. ಸಹನಶೀಲ ಪ್ರತಿರೋಧ (ಪ್ಯಾಸಿವ್ ರಸಿಸ್ಟನ್ಸ್) ಮತ್ತು ಸವಿನಯ ಕಾನೂನು ಭಂಗ (ಸಿವಿಲ್ ದಿಸ್‌ಒಬೀಡಿಯನ್ಸ್) ತತ್ವಗಳನ್ನು ಅಳವಡಿಸಿಕೊಂಡರು. ಈ ತತ್ವಗಳಿಗೆ ಭಗವದ್ಗೀತೆ ಜೈನ ಧರ್ಮಗಳು ನೆಲೆಗಟ್ಟನ್ನು ಒದಗಿಸಿದರೆ, ರಷಿಯದ ಸಾಹಿತಿ ಲಿಯೊ ಟಾಲ್‌ಸ್ಟಾಯ್ ಮತ್ತು ಅಮೆರಿಕನ್ ಸಾಹಿತಿ ಡೇವಿಡ್ ಥೋರೊ ಅವರ ಬರಹಗಳು ಸ್ಫೂರ್ತಿ ನೀಡಿದವು. 

ದಕ್ಷಿಣ ಆಫ್ರಿರಿಕೆಯಲ್ಲಿನ ಕೆಲಸ ಮುಗಿದು, ಮೊದಲ ಮಹಾಯುದ್ಧದ ಸಮಯದಲ್ಲಿ ಗಾಂಧಿ ಭಾರತಕ್ಕೆ ಮರಳಿದರು. ತಮ್ಮ ಸತ್ಯ ಮತ್ತು ಅಹಿಂಸೆಯ ತತ್ವಗಳ ಆಧಾರದ ಮೇಲೆ ಬ್ರಿಟಿ?ರನ್ನು ಪ್ರತಿರೋಧಿಸಿ ಸ್ವತಂತ್ರ ಗಳಿಸುವಂತೆ ಭಾರತೀಯರನ್ನು ಕೇಳಿಕೊಂಡರು. ಬ್ರಿಟಿಷರ ಪರವಾಗಿ ಮೊದಲ ಯುದ್ಧದಲ್ಲಿ ಕಾದುವಂತೆ ವಿನಂತಿಸಿಕೊಂಡರು. ತಾವೆ ಯುದ್ಧಕ್ಕೆ ಅಂಬುಲೆನ್ಸ್‌ಗಳನ್ನು ಜೋಡಿಸಿಕೊಂಡು ರೆಡ್ ಕ್ರಾಸಿನ ತುಂಡೊಂದನ್ನು ನಿಭಾಯಿಸಿದರು. ಯುದ್ಧದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ವರಾಜ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಸತ್ಯಾಗ್ರಹ’ ಮತ್ತು ‘ಅಸಹಕಾರ’ ಚಳುವಳಿ ಪ್ರಾರಂಭಿಸಿದರು. ಉಪವಾಸ ತಮ್ಮನ್ನು ಶುಧ್ಧಿಗೊಳಿಸಲು ಅಷ್ಟೆ ಅಲ್ಲ ಬೇರೆಯವರ ಮನ ಒಲಿಸುವ ಸಾಧನವಾಯ್ತು. ‘ಸ್ವದೇಶಿ’ ಚಳುವಳಿ ಸ್ವಾತಂತ್ರ ಹೋರಾಟದಲ್ಲಿ ಇನ್ನೊಂದು ಪರಿಣಾಮಕಾರಿ ಅಸ್ತ್ರವಾಯ್ತು. ವಿದೇಶಿ ವಸ್ತುಗಳನ್ನು ಬಿಟ್ಟು ಸ್ವದೇಶಿ ವಸ್ತುಗಳನ್ನು ಬಳಸುವುದೆ ಈ ತಂತ್ರ. ಭಾರತೀಯ ಕಚ್ಚಾ ವಸ್ತುಗಳನ್ನೆ ಬಳಸಿ ವಿದೇಶದಲ್ಲಿ ತಯಾರಾಗಿ ಮರಳಿ ಭಾರತಕ್ಕೆ ಬರುತ್ತಿದ್ದ ವಸ್ತುಗಳಲ್ಲಿ ಬಟ್ಟೆ ಮುಖ್ಯವಾಗಿತ್ತು. ಇದಕ್ಕೆ ಉತ್ತರವಾಗಿ ಖಾದಿ ಹುಟ್ಟಿಕೊಂಡಿತು. ಪ್ರತಿ ದಿನ ಎಲ್ಲರು ಖಾದಿ ನೇಯುವಂತೆ ಕೇಳಿಕೊಂಡರು ಗಾಂಧಿ. ಚರಕ ಅವರ ಜೀವನ ಸಂಗಾತಿಯಾಯ್ತು. 

ದಂಡಿ ಯಾತ್ರೆ ಅಥವ ಉಪ್ಪಿನ ಸತ್ಯಾಗ್ರಹ ಜನರನ್ನು ಒಂದುಗೂಡಿಸಿ ಎಬ್ಬಿಸಿತು. ಸರಕಾರಕ್ಕೆ ಕರ ಕೊಡದೆ ಜನರು ತಾವೆ ಸಾಂಕೇತಿಕವಾಗಿ ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಾಡುವುದೆ ಇದರ ಉದ್ದೇಶ. ಸಹಸ್ರಾರು ಜನರು ಗಾಂದಿಯೊಡನೆ ದಂಡಿಯ ಸಮುದ್ರ ತೀರಕ್ಕೆ ನಡೆದುಕೊಂಡು ಹೋಗಿ ಉಪ್ಪನ್ನು ತಯಾರಿಸಿದರು. ನಂತರ ಗಾಂಧಿ ೨೧ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು. 

ಎರಡನೆಯ ಮಹಾಯುದ್ಧ ಪ್ರಾರಂಭ ಆದಾಗ ಭಾರತದ ಬೆಂಬಲ ಬೇಕಾದರೆ, ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿ ಕರಾರು ಹಾಕಿದರು. 

ಬ್ರಿಟಿಷರು ಇದಕ್ಕೆ ಒಪ್ಪಲಿಲ್ಲ. ‘ಭಾರತ ಬಿಟ್ಟು ತೊಲಗಿರಿ’ (ಕ್ವಿಟ್ ಇಂಡಿಯ) ಚಳುವಳಿ ಆರಂಭಿಸಿದರು. ಗಾಂಧಿಗೆ ಮತ್ತೆ ಜೈಲುವಾಸ ಸಿಕ್ಕಿತು. ಅನಾರೋಗ್ಯದ ಕಾರಣ ಎರಡು ವರುಷಗಳ ನಂತರ ಬಿಡುಗಡೆ ಹೊಂದಿದರು. 

ಅಂತೂ ಸ್ವಾತಂತ್ರ್ಯ ಸಿಗುವ ಸಮಯ ಬಂತು. ಗಾಂಧಿ ದೇಶದ ವಿಭಜನೆಯನ್ನು ವಿರೋಧಿಸಿದರು. ವಿಭಜನೆಯಾಯಿತು. ಸ್ವತಂತ್ರ ಬಂತು. ಎಲ್ಲರು ಸಂಭ್ರಮಿಸಿದರೆ ವಿಭಜನೆಯಲ್ಲಿ ಸತ್ತವರ, ಅನಾಥರಾದವರ, ದೇಶಭ್ರಷ್ಟರಾದವರ, ದೇಶದಲ್ಲಿಯೆ ಪರದೇಶಿಗಳಾದವರ ಹೆಸರಿನಲ್ಲಿ ಗಾಂಧಿ ಶೋಕಾಚರಣೆ ಮಾಡಿದರು. ಮುಸ್ಲಿಮರ ಪಕ್ಷಪಾತಿ ಆಗಿ ಅವರನ್ನು ಸಾಂತ್ವನಗೊಳಿಸುತ್ತ ಸ್ವತಂತ್ರ ಭಾರತ ಸರಕಾರವನ್ನು ಹೊರಗಿದ್ದುಕೊಂಡೂ ನಿಯಂತ್ರಿಸುತ್ತಿದ್ದಾರೆ ಎಂದು ದೂಷಿಸಿ, ಹಿಂದು ತೀವ್ರವಾದಿಗಳಲ್ಲಿ ಒಬ್ಬನಾದ ನಾಥೂರಮ್ ಗೋಡ್ಸೆ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದನು. "ಹೇ ರಾಮ್!" ಎಂಬ ಕೊನೆಯ ಮಾತುಗಳೊಂದಿಗೆ ಈ ಮಹಾತ್ಮ ವಿಶ್ವದ ಚರಿತ್ರೆಯಲ್ಲಿ ಬೆಳಗತೊಡಗಿದರು. (ಜನೆವರಿ ೩೦, ೧೯೪೮). ತಮ್ಮ ತತ್ವ, ಆದರ್ಶ, ನಂಬಿಕೆ ಎಲ್ಲವನ್ನು ಸ್ವತಃ ಆಚರಿಸಿ ತೋರಿಸಿದ ಗಾಂಧಿ ಅವರ ಜೀವನವೆ ಅವರ ಸಂದೇಶ ಆಗಿ ಉಳಿಯಿತು. 

ಗಾಂಧಿ ಸಾಧಿಸಿದ್ದಾದರೂ ಏನು? ಗಾಂಧಿಯನ್ನು ಕೆಲವರು ದೇವತೆಯಂತೆ ಪುಜಿಸುವವರಾದರೆ ಇನ್ನು ಹಲವರು ಕ್ಷುಲ್ಲಕ ಕಾರಣಗಳಿಗಾಗಿ ಅವರ ಎಲ್ಲ ತತ್ವಗಳನ್ನು ಅನಾದರಣೆಯಿಂದ ನೋಡುವವರಿದ್ದಾರೆ. ಈ ಇಬ್ಬರೂ ಗಾಂಧಿಯನ್ನು ಅರಿತುಕೊಂಡಿಲ್ಲ. (ಮುಂದುವರೆಯುವುದು) 

ಮೋಜಿನ ಗಾಂಧಿ ಕ್ವಿಝ್ ಇಲ್ಲಿದೆ
http://www.gandhiserve.org/quiz/Mahatma_Quiz.swf 

ಆಧಾರ ಮತ್ತು ಜಾಲತಾಣಗಳು: 
[ಗಾಂಧಿ ಅವರ ಲೇಖನಗಳು, ಚಿತ್ರಗಳು, ಧ್ವನಿ ಮತ್ತು ದೃಶ್ಯ ಮುದ್ರಿಕೆಗಳು ಈ ಆಕರಗಳಲ್ಲಿ ಲಭ್ಯ] 

 1.  ಕನ್ನಡ ವಿಕಿಪೀಡಿಯ http://kn.wikipedia.org/wiki/i/ಮಹಾತ್ಮ ಗಾಂಧಿ 
 2.  ಪ್ರೊ. ಕೃ ಷ್ಣ ಶ್ರೀಪಾದ ದೇಶಪಾಂಡೆ, ಗಾಂಧೀಜಿ ಎಂದೆಂದಿಗೂ ಪ್ರಸ್ತುತ,   ರಾ.ಹ.ದೇ. ಸಾಂಸ್ಕೃತಿಕ ಕೇಂದ್ರ, ಮಾಳಮಡ್ಡಿ, ಧಾರವಾಡ, ೨೦೦೪ 
 3.  ಗೋಪಾಲ ಗೋಡ್ಸೆ, ಗಾಂಧಿ ಹತ್ಯೆ ಮತ್ತು ನಾನು, ೨೦೦೪ 
 4.  ಗಾಂಧಿ ಪರಿಚಯ, ಥಿಂಕ್ ಕ್ವೆಸ್ಟ್, http://library.thinkquest.org/C0125481/gandhienglish/index.html
 5.  ಅಧಿಕೃತ ಮಹಾತ್ಮ ಗಾಂಧಿ ಜಾಲತಾಣ http://www.mahatma.org.in
 6.  ಮಹಾತ್ಮ ಗಾಂಧಿ ಸಂಶೋಧನಾ ಕೇಂದ್ರ, http://www.gandhiserve.org
 7.  ಗಾಂಧಿ ಫೌಂಡೇಶನ್ http://www.gandhifoundation.org
 8.  ಮಹಾತ್ಮ ಗಾಂಧಿ http://mkgandhi.org
 9.  ಗಾಂಧಿ ಫೋಟೋಗಳು http://gandhiservefoundation.org/information/photo_library.html
 10.  ಮಣಿ ಭವನ ಗಾಂಧಿ ಸಂಗ್ರಹಾಲಯ http://www.gandhi-manibhavan.org

ತಾಗುಲಿ :  Gandhi Life, Vishweshwar Dixit

ಏನಂತೀರಿ?

Plain text

 • No HTML tags allowed.
 • Lines and paragraphs break automatically.
 • Web page addresses and email addresses turn into links automatically.