ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

¾ ವಿವೇಕ ಬೆಟ್ಕುಳಿ

[ಮನುಷ್ಯ ಜಾತಿಗೆ ವಿಶಿಷ್ಟವಾದವುಗಳಲ್ಲಿ ಪ್ರೀತಿ ಕೂಡ ಒಂದು. ಪ್ರೀತಿ ಎಂದರೆ ಏನು? ಪ್ರೀತಿ ಒಂದು ಅನುಭವ. ಭೌತಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಸ್ತರಗಳಲ್ಲಿ, ಅವರವರ ಪ್ರೀತಿ ಅವರವರ ಅನುಭವಕ್ಕೆ ಸೀಮಿತ. ಸಾರ್ವತ್ರಿಕವಾಗಿ ಅದು ಹೀಗೇ ಇರಬೇಕು ಎಂದು ಹೇಳಲಾಗುವುದಿಲ್ಲ. ಆದರೂ, ಪ್ರೀತಿಗೂ ಅಪೇಕ್ಷೆಗೂ ನಂಟು ಸಹಜ. ಪ್ರೀತಿಯ ಬಗ್ಗೆ ಅನೇಕ ವಾದಗಳು ಇವೆ. ಅಪೇಕ್ಷೆಯೇ ಪ್ರೀತಿ ಎಂದು ಒಂದು ಸಾಧಿಸಿದರೆ ನಿರಪೇಕ್ಷ ಪ್ರೀತಿಯೇ ಪ್ರೀತಿ ಎನ್ನುತ್ತದೆ ಮತ್ತೊಂದು. ಅಲ್ಲದೆ, "ಪ್ರೀತಿ ಒಂದು ಹುಚ್ಚು ಚಟ" ಎಂದು ಹೇಳುತ್ತಾನೆ ಮಂಕುತಿಮ್ಮ. ನಿಮ್ಮ ಪ್ರೀತಿ ಎಂಥದ್ದು? ನಿಮ್ಮ ಅಪೇಕ್ಷೆಗಳೇನು? ವಿವೇಕ ಬೆಟ್ಕುಳಿ ಅವರ ಈ ಪ್ರೀತಿ ಲೇಖನವನ್ನು ಓದಿ, ಅವರ ದನಿಯಲ್ಲೆ ಕೇಳಿ; ಪ್ರೀತಿಯ ಮೂಲವನ್ನು ಕಂಡುಕೊಳ್ಳಿ - ಸಂ..]

 

ಅನಾದಿ ಕಾಲದಿಂದ ಇಂದಿನವರೆಗೂ ಪ್ರೀತಿ ಎಂಬ ವಿಷಯ ಚಚೆ೯ ಆಗುತ್ತಲೇ ಇರುವುದು. ಮುಂದೆಯೂ ಸಹ ಆಗುತ್ತ ಇರುವುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಹಾಗಾದರೆ ಪ್ರೀತಿ ಎಂದರೇನು? ಈ ಪ್ರಶ್ನೆಗೆ ಹಲವಾರು ಉತ್ತರಗಳು ಇವೆ. ಆದರೆ ಸರಳ ಉತ್ತರ ಎಂದರೆ ಒಂದೇ “ಪ್ರೀತಿ ಎಂದರೆ ಪ್ರೀತಿ” ಅಷ್ಟೆ! ಈ ಬಗ್ಗೆ ಉತ್ತರಿಸುವ ಎಲ್ಲರೂ, ಅವರವರು ನೋಡಿದ, ಅನುಭವಿಸಿದ ಘಟನೆಗಳನ್ನು ಆಧಾರವಾಗಿಟ್ಟುಕೊಂಡೆ ಪ್ರೀತಿಯನ್ನು ವ್ಯಾಖ್ಯಾನಿಸುವರು. ಹೊರತಾಗಿ ಪ್ರೀತಿಗೆ ಸ್ಪಷ್ಟವಾದ ಉತ್ತರ ಎಂಬುದು ಇಲ್ಲ. ಪ್ರೀತಿಯಲ್ಲಿ ವಿವಿಧ ಬಗೆಗಳಿವೆ. ಆದರೆ ಎಲ್ಲ ಬಗೆಯ ಪ್ರೀತಿಯೂ ಅಪೇಕ್ಷೆಯ ಕಾರಣಕ್ಕಾಗಿಯೇ ದುಖ:ದಲ್ಲಿ ಅಂತ್ಯವಾಗುವುದು.

ತಂದೆ-ತಾಯಿ ಮಕ್ಕಳ ಪ್ರೀತಿ 
ಅಪ್ಪ ಅಮ್ಮನಿಗೆ ತನ್ನ ಮಗ/ಮಗಳು ತಾನು ಹೇಳಿದಂತೆ ಕೇಳಬೇಕು ಎನ್ನುವ ಅಪೇಕ್ಷೆ ಇರುವುದು. ಮಕ್ಕಳು ಚಿಕ್ಕವರಿದ್ದಾಗ ದಿನಾಲೂ ಶಾಲೆಗೆ ಹೋಗಿ ಬರಬೇಕು. ಚೆನ್ನಾಗಿ ಓದಬೇಕು. ಉತ್ತಮ ಅಂಕ ತೆಗೆಯಬೇಕೆಂಬ ಅಪೇಕ್ಷೆ. ಮಕ್ಕಳು ದೊಡ್ಡವರಾದಾಗ ಎಲ್ಲಾ ವಿಚಾರವನ್ನು ಚರ್ಚಿಸಬೇಕು, ಕೆಲಸ ಮಾಡಲು ಪ್ರಾರಂಭಿಸಿ ಮೇಲೆ ಸಂಬಳವನ್ನು ತಂದು ನೀಡಬೇಕು. ತಾವು ನೋಡಿದ ವರ/ವಧುವನ್ನೇ ಮದುವೆಯಾಗಬೇಕು. ತಾವು ಹೇಳಿದವರೊಂದಿಗೆ ಗೆಳೆತನ ಇರಬೇಕು. ತಾವು ನಿರ್ಧರಿಸುವ ಕೆಲಸವನ್ನೇ ಮಾಡಬೇಕು. ಮನೆಯಿಂದ ದೂರವಿದ್ದರೆ ದಿನವೂ ಪೋನ್‌ ಮಾಡಬೇಕು. ಒಟ್ಟಾರೆ ಮಕ್ಕಳು ತಮ್ಮ ಇಷ್ಟದಂತೆ ಇರಬೇಕು ಎಂದು ತಂದೆ ತಾಯಿಯರ ಅಪೇಕ್ಷೆಯಾಗಿರುವುದು.

ಮಕ್ಕಳಿಗೋ, ಅಪ್ಪ ಅಮ್ಮ ಸ್ನೇಹಿತರಂತೆ ಇರಬೇಕು. ನನ್ನ ಎಲ್ಲಾ ಕಾರ್ಯಕ್ಕೂ ಸಹಕಾರ ನೀಡಬೇಕು. ಸಂಬಳದ ಬಗ್ಗೆ ಮಾತನಾಡಬಾರದು, ಕೆಲಸದ ಬಗ್ಗೆ ವಿಚಾರಿಸಬಾರದು, ಮದುವೆ ಎಂಬುದರಲ್ಲಿ ನನ್ನ ನಿಧಾ೯ರದಲ್ಲಿ ತಲೆ ಹಾಕಬಾರದು. ಅಪ್ಪ ಅಮ್ಮ ನಾನೇ ಏನೇ ತೀಮಾ೯ನ ಕೈಗೊಂಡರು ನನಗೆ ಸಪೋರ್ಟ ಮಾಡಬೇಕು. ನನಗೆ ಅವರ ಸಲಹೆ ಅಗತ್ಯ, ಮಾರ್ಗದರ್ಶನ ಅಗತ್ಯ ಎಂಬುದು ಮಕ್ಕಳ ಅಪೇಕ್ಷೆಯಾಗಿದೆ.

ಹುಡುಗ ಹುಡುಗಿ ಪ್ರೀತಿ 
ನಾನು ಇಷ್ಟಪಡುವ ಹುಡುಗ/ಹುಡುಗಿ ಯಾವ ಹುಡುಗಿ /ಹುಡುಗರೊಂದಿಗೂ ಮಾತನಾಡಬಾರದು, ಅವನ/ಆಕೆಯ ಬಟ್ಟೆಯ ಬಣ್ಣ, ಹಾಕುವ ಚಪ್ಪಲಿ ಇವುಗಳ ಬಗ್ಗೆ ಹೀಗೆ ಇರಬೇಕೆಂಬ ಅಪೇಕ್ಷೆ. ಆತನ/ಆಕೆಯ ಊಟ, ತಿಂಡಿ, ಇತರೆ ಹವ್ಯಾಸಗಳ ಬಗ್ಗೆ ಒಂದು ಪೂರಕವಾಗಿ ಇಲ್ಲಾ ನಕಾರಾತ್ಮಕವಾದ ಅಪೇಕ್ಷೆ ಪರಸ್ಪರ ಇಬ್ಬರಲ್ಲಿಯೂ ಇರುವುದು. ಅಪೇಕ್ಷೆ ಹೆಚ್ಚಾಗಿ ಅದು ಆಗದೇ ಇದ್ದಾಗ ಬೇಸರ; ಬೇಸರ ಕಳೆಯಲು ಸಿಗರೇಟು, ಸರಾಯಿ, ಅಳು, ದುಖ: ಡಿಪ್ರೆಶನ್ ಇತ್ಯಾದಿ.ಇಬ್ಬರೂ ಪಶ್ಚಾತಾಪ ಪಟ್ಟು ಪುನ: ಸೇರಿದಾಗ ಪಶ್ಚಾತ್ತಾಪ. ನಂತರ, ಪ್ರೀತಿಯ ಹೆಸರಿನಲ್ಲಿ ಸಿನಿಮಾ, ಸುತ್ತಾಟ, ದೈಹಿಕ ಸಂಪರ್ಕ. ಪುನ: ದುಖ: ,ಪಶ್ಚಾತಾಪ...ಇದಕ್ಕೆ ಕೊನೆ ಎಂಬುದು ಇಲ್ಲವಾಗಿದೆ.

ಗಂಡ ಹೆಂಡತಿ ಪ್ರೀತಿ 
ತಾನು ಕೆಲಸ ಮುಗಿಸಿ ಬಂದ ಮೇಲೆ ತನಗೆ ಟೀ ನಿಡಬೇಕು. ಮಾತನಾಡಬೇಕು, ಉತ್ತಮ ಅಡುಗೆ ಮಾಡಿ ಬಡಿಸಬೇಕು, ರಾತ್ರಿ ತನ್ನ ಆಕಾಂಕ್ಷೆಯನ್ನು ಈಡೇರಿಸಬೇಕು, ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಗಂಡಿನದಾದರೆ, ನನ್ನನ್ನು ಬೇರೆ ಬೇರೆ ಕಡೆ ತಿರುಗಾಡಲು ಕರೆದುಕೊಂಡು ಹೋಗಬೇಕು, ಆಭರಣ ಖರೀದಿಸಬೇಕು, ಆಗಾಗ ಉಡುಗೊರೆ ನೀಡಬೇಕು, ಮನೆಗೆ ಹಲವಾರು ರೀತಿಯ ಸಾಮಾನು ತರಬೇಕು, ಜಾಗ ಖರೀದಿಸಬೇಕು, ಮನೆ ಕಟ್ಟಬೇಕು, ಇತ್ಯಾದಿ ಅಪೇಕ್ಷೆಗಳು. ಎಲ್ಲಿ ಹೊಂದಾಣಿಕೆ ಇದೆಯೋ, ಅಥವಾ ಯಾರಾದರೂ ಒಬ್ಬರು ಶರಣಾಗಲು ಇಷ್ಟಪಡುವರೋ ಅಲ್ಲಿ ಎಲ್ಲವೂ ಒಳ್ಳೆಯದು. ಎಲ್ಲಿ ಭಿನ್ನಾಭಿಪ್ರಾಯ ಇದೆಯೋ ಅಲ್ಲಿ ಮೂರನೇ ವ್ಯಕ್ತಿ ಅಂದರೆ ಹಿರಿಯರ ಪ್ರವೇಶ ಬುದ್ದಿಮಾತು, ಕೋರ್ಟ ವಿಚ್ಛೇದನ ಇತ್ಯಾದಿ.

“ಜೀವನದಲ್ಲಿ ಇವೆಲ್ಲ ಇರಬೇಕು, ಅಂದರೆ ಮಾತ್ರ ಜೀವನ ಸಾರ್ಥಕ” ಎಂದು ಪ್ರೀತಿಯ ಸುಳಿಯಲ್ಲಿ ಸಿಕ್ಕವರ ಹೇಳಿಕೆಯಾಗಿರುವುದು. ಪ್ರೀತಿಯಿಂದ ನೊಂದವರು “ಇನ್ನೊಮ್ಮೆ ನಾನು ಪ್ರೀತಿಯ ಹುಚ್ಚಿನಲ್ಲಿ ಬೀಳುವುದಿಲ್ಲ” ಎಂದು ಬಡಬಡಿಸುವರು. ಒಟ್ಟಾರೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಮಕ್ಕಳೆ ಆಗಿರುವರು. ಪ್ರೀತಿಯ ಬಗೆ ಮಾತ್ರ ಬೇರೆ ಬೇರೆ ಆಗಿರಬಹುದು ಆದರೆ ಪ್ರೀತಿ ಇಲ್ಲದ ವ್ಯಕ್ತಿ ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲಾ ಎಂದು ಹೇಳಬಹುದಾಗಿದೆ.

ಅಪೇಕ್ಷೆ ರಹಿತ ಪ್ರೀತಿ ಸಾಧ್ಯವೇ? 
ʼಪ್ರೀತಿ ಎಂದರೇನೇ ಅಪೇಕ್ಷೆʼ ಎಂಬುದು ಒಂದು ವಾದ. ಅಪೇಕ್ಷೆ ರಹಿತವಾದ ಪ್ರೀತಿ ಎಂದರೆ ಅದೊಂದು ಆಧ್ಯಾತ್ಮ ತಪ್ಪಸ್ಸು ಆಗಿರುವುದು. ಆದರೆ ಪ್ರಾಪಂಚಿಕ ಬದುಕಿನಲ್ಲಿ ಬದುಕುವಾಗ ಅಪೇಕ್ಷ ರಹಿತವಾದ ಪ್ರೀತಿಯನ್ನು ಕಲ್ಪಿಸುವುದು ಅಸಾಧ್ಯವಾದ ಮಾತಾಗಿರುವುದು.

ತಂದೆ ತಾಯಿ,ಅಣ್ಣ-ತಮ್ಮ,ಅಕ್ಕ-ತಮ್ಮ ಸಂಭಂದಿಕರುಗಳು, ಸ್ನೇಹಿತರು, ಪ್ರೇಯಸಿ, ಹೆಂಡತಿ,ಮಕ್ಕಳು, ಶಿಕ್ಷಕರು, ಗುರು, ಸಹಪಾಠಿ, ಇವರುಗಳೆಲ್ಲಾ ಒಂದಲ್ಲ ರೀತಿಯಲ್ಲಿ ಪರಸ್ಪರ ಅಪೇಕ್ಷೆಯಿಂದಲ್ಲೇ ಪ್ರೀತಿಯ ಸುಳಿಯಲ್ಲಿ ಸಿಕ್ಕಿರುವರು. ಎಲ್ಲರಿಗೂ ತಾವು ಕಂಡು ಕೊಂಡ ಜೀವನ ಮುಖ್ಯವಾಗಿರುವುದು. ತಾವು ಕಂಡ ಅನುಭವದಲ್ಲಿಯೇ ಎಲ್ಲರ ಜೀವನವನ್ನು ನೋಡಲು ಬಯಸುವರು. ಅದನ್ನೇ ಎಲ್ಲರೂ ಅನುಸರಿಸಬೇಕು ಎಂಬ ಅಪೇಕ್ಷೆ ಇರುವುದು. ಯಾರಿಗೂ ಎದುರಿಗಿನ ವ್ಯಕ್ತಿಯ ಭಾವನೆ ಬಗ್ಗೆ ಬೆಲೆ ಇಲ್ಲ. ಹುದ್ದೆ, ಸಂಪತ್ತು, ಸೌಂದರ್ಯ, ಜ್ಞಾನ, ಇವುಗಳು ಮುಖ್ಯವಾಗಿ ಪ್ರೀತಿಯ ಮೇಲೆ ಪ್ರಭಾವ ಬೀರುವುದನ್ನು ನಾವು ಕಾಣುತ್ತಿರುವೆವು.

ದಾರಿಯಲ್ಲಿ ಹೋಗುವಾಗ ರಸ್ತೆಯಲ್ಲಿರುವ ಬೀದಿ ಮಕ್ಕಳು, ಹುಚ್ಚ, ಕುಡುಕ, ಭಿಕ್ಷೆ ಬೇಡುವ ಮಹಿಳೆ ಬಗ್ಗೆ ನಮಗೆ ಕೇವಲ ಕನಿಕರ ಇರುವುದು ಹೊರತು ನಮ್ಮಿಂದ ಯಾವುದೇ ಸಹಾಯ ಮಾಡುವುದಕ್ಕೆ ಧೈರ್ಯ ಬರುವುದಿಲ್ಲ. ಹೆಚ್ಚೆಂದರೆ ೧೦ ರೂಪಾಯಿ ನೀಡಿ ಅಲ್ಲಿಂದ ಕಾಲನ್ನು ಕೀಳುವೆವು. ಕಾರಣ ಅವರ ಬಗ್ಗೆ ನಮಗೆ ಪ್ರೀತಿ ಇಲ್ಲ. ಅಂದರೆ ಅವರ ಬಗ್ಗೆ ಅಪೇಕ್ಷೆಯೂ ಇಲ್ಲ. ಆದರೆ ಅವರಿಗೆ ಸಹಾಯ ಮಾಡುವ ಬಗ್ಗೆ ಮಾತನಾಡಲು ನಮಗೆ ಇಷ್ಟ. ಅಂದರೆ ನಮಗೆ ಅಪೇಕ್ಷೆ ರಹಿತವಾದ ಪ್ರೀತಿ ಎಂಬುದು ಇಷ್ಟ. ಆದರೆ ಅದನ್ನು ಅನುಸರಿಸಲು ಕಷ್ಟ.

ನಾ ಪ್ರೀತಿಸುವ ಎಲ್ಲಾ ವ್ಯಕ್ತಿಗಳ ಬಗ್ಗೆಯೂ ನನಗೆ ಅಪಾರವಾದ ಅಪೇಕ್ಷೆ ಇರುವುದು. ಆದರೆ ಅವರು ನನ್ನ ಬಗ್ಗೆ ಏನಾದರೂ ಅಪೇಕ್ಷೆ ಇರಿಸಿಕೊಂಡರೆ ಅದು ಕಷ್ಟವಾಗಿ ಪರಿಗಣಿಸುವುದು. ಇದು ಇಂದಿನ ಪ್ರಂಪಚದಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವ ವಿದ್ಯಮಾನವಾಗಿರುವುದು. ನನ್ನ ಮಗ ಮೊದಲಿನಂತೆ ಇಲ್ಲ. ನಮ್ಮ ಅಪ್ಪ ಅಮ್ಮ ಮೊದಲಿನಂತೆ ಇಲ್ಲ. ಮದುವೆಯಾದ ಅಕ್ಕ ಮೊದಲಿನಂತೆ ಇಲ್ಲ, ಮನೆಯಿಂದ ಹೊರಗಡೆ ಇರುವ ಅಣ್ಣ ಮೊದಲಿನಂತೆ ಇಲ್ಲ. ಈ ಎಲ್ಲಾ ಮೊದಲಿನಂತೆ ಇಲ್ಲ ಎಂಬ ಪ್ರಶ್ನೆಗಳು ಬರುವುದು ಯಾಕೆ? ಒಂದು ವ್ಯಕ್ತಿಯ ಬಗ್ಗೆ ಇವರು ಹೀಗೇ ಎಂದು ನಾವು ನಮ್ಮಲ್ಲಿಯೇ ನಿರ್ಧರಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಯಾರೊಬ್ಬರ ಬಗ್ಗೆ ಈ ರೀತಿಯಾದ ಅಪೇಕ್ಷೆ ಇರಿಸಿಕೊಂಡು ಅದು ಆಗದೇ ಇದ್ದಾಗ ದುಖ: ಪಡುವುದು ಯಾಕೆ? ಪ್ರೀತಿ ಎಂಬುದು ಒಂದು ರೀತಿಯಲ್ಲಿ ಕೈಗೆ ಸಿಗದ ವಸ್ತು. ಅದು ತನ್ನದು, ತಾನು ಹೇಳಿದ ಹಾಗೇ ಕೇಳುವುದು ಎಂಬ ಭ್ರಮೆ ಬೇಡ, ಯಾಕೆಂದರೆ ನಾವು ಪ್ರೀತಿಯನ್ನು ಕಾಣುತ್ತಿರುವುದು ಬರೀ ಮನುಷ್ಯ ಜೀವಿಗಳಲ್ಲಿ ಮಾತ್ರ.

ಪ್ರೀತಿಯ ಹುಚ್ಚು ಚಟ

ಮಾತೆವೊಲೊ ಪಿತನವೊಲೊ ಪತಿಯವಲೊ ಸತಿಯವೊಲೊ 
ಭ್ರಾತಸುತಸಖರವೊಲೊ ಪಾತ್ರವೊಂದಕ್ಕೆ ತಾಂ 
ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ 
ಪ್ರೀತಿಯ ಹುಚ್ಚು ಚಟ- ಮಂಕುತಿಮ್ಮ.

(ಮನುಷ್ಯ ತನ್ನದನ್ನು ಪರರಿಗೆ ಕೊಡಲು ಮತ್ತು ಪರರಿಂದ ಏನಾದರೂ ಪಡೆಯಲು ಪ್ರೀತಿ ಪ್ರೇಮಗಳ ಸಹಾಯವನ್ನು ಪಡೆದುಕೊಳ್ಳುತ್ತಾನೆ. ಹಾಗೆ ಹಾಗೆಕೊಡಲು ಅಥವಾ ಪಡೆದುಕೊಳ್ಳಲು ಅವನು ತಾಯಿಯ, ತಂದೆಯ, ಪತಿಯ ಪತ್ನಿಯ,ಸ್ನೇಹಿತನ ಅಣ್ಣ –ತಮ್ಮಂದಿರ ಅಥವಾ ಅಕ್ಕ ತಂಗಿಯರ ಪಾತ್ರವನ್ನು ವಹಿಸುತ್ತಾನೆ(ಳೆ). ಪೀತಿ ತೋರುವುದು ಮನುಷ್ಯನಿಗೊಂದು ಚಟ)

------

ಕನ್ನಡಕಲಿ, ಬಿತ್ತರಿಕೆ, ಫೆಬ್ರುವರಿ ೧೪, ೨೦೨೪ 
ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ? 
ಲೇಖನ ಮತ್ತು ಓದು: ವಿವೇಕ ಬೆಟ್ಕುಳಿ>

ತಾಗುಲಿ Love, Vivek Betkuli

Love without any expectations is the best type of love. Love with expectation becomes a business deal.

ನಿಮ್ಮ ಲೇಖನ ಪರಿಪೂರ್ಣವಾಗಿದೆ. ನಿಸ್ವಾರ್ತ ಪ್ರೀತಿ ಆಧ್ಯಾತ್ಮ ಹೇಳುತ್ತದೆ. ಆದರೆ ಜನ ಸಾಮಾನ್ಯರಲ್ಲಿ ಇದು ಅಸಾಧ್ಯ. ಆದುದರಿಂದ ಸ್ವಾರ್ಥಸಹಿತ ಪ್ರೀತಿ ಸಹಜ ವಾಸ್ತವ.