ಬೆಳಕು ತೋರಿದ ಬದುಕು : ಹೆಲನ್ ಕೆಲರ್

ಬೆಳಕು ತೋರಿದ ಬದುಕು: ಹೆಲನ್ ಕೆಲರ್

ಎಸ್. ಜಿ. ಸೀತಾರಾಮ್

[’ಹೆಲನ್ ಕೆಲರ್’ ಎಂದೊಡನೆ ಕಣ್ಣರಳುವುದು, ಕಿವಿ ನಿಮಿರುವುದು, ಮಾತು ನಿಲ್ಲುವುದು.  ಮಗುವಾಗಿದ್ದಾಗಲೇ ನೋಡುವ, ಕೇಳುವ ಮತ್ತು ಮಾತನಾಡುವ ಮೂರು ಮೂಲ ಚೇತನಗಳನ್ನೇ ತಾನು ಕಳೆದುಕೊಂಡರೂ, ಬೆಳವಣಿಗೆಯ ತೊಡಕುಗಳಿಂದ ಹತಾಶರಾಗಿರುವವರಿಗೆ ಆಶಾದೀಪವಾಗಿಯೂ, ನೊಂದಜೀವಿಗಳಿಗೆ “Helen Healer” ಎಂದಾಗಿಯೂ, ಜಗವೇ ಬೆಕ್ಕಸಬೆರಗಾಗುವಂತೆ, ೮೮ ವರ್ಷಗಳ ಪರ್ಯಂತ ಚಕಚಕಿಸಿದ “ಹೆಲನ್ ಕೆಲರ್‍” ಜನಿಸಿದ್ದು, ಜೂನ್ ೨೭, ೧೮೮೦; ಕಾಲವಾಗಿದ್ದು, ಜೂನ್ ೧, ೧೯೬೮. ಅವಳ ವೈವಿಧ್ಯಮಯ, ಸಾಹಸಪೂರ್ಣ, ವಾತ್ಸಲ್ಯಪೂರಿತ, ಜ್ಞಾನಕೌತೂಹಲಭರಿತ ಜೀವನ ಮತ್ತು ಸಾಧನೆಗಳನ್ನೂ, ಅವಳು ಮಾಡಿದ ಲೋಕಾಧಿಕ ಉಪಕಾರವನ್ನೂ ಸ್ಮರಿಸಲು ನೆರವಾಗುವಂತೆ, ಸಂಕ್ಷಿಪ್ತ ವೃತ್ತಾಂತವೊಂದು ಇಲ್ಲಿದೆ]

Helen Keller Picture

 

ಹೆಲನ್ ಕೆಲರ್‌ಳು ಅಮೇರಿಕಾದ ಅಲಬಾಮಾದಲ್ಲಿ ೧೪೩ ವರ್ಷಗಳ ಹಿಂದೆ ಅನುಕೂಲಸ್ಥ ಕುಟುಂಬವೊಂದರಲ್ಲಿ ಹುಟ್ಟಿ, ಕೇವಲ ಹತ್ತೊಂಬತ್ತು ತಿಂಗಳ ಕೂಸಾಗಿರುವಾಗಲೇ ವಿಷಮ ಕಾಯಿಲೆಯೊಂದಕ್ಕೆ ಈಡಾಗಿ (ಮಿದುಳಿನ ಊತ, ’ಕೆಂಪು’ ಜ್ವರ, ದಡಾರ? ಅದೂ ಆ ಕಾಲದಲ್ಲಿ!), ತನ್ನ ದೃಷ್ಟಿ ಮತ್ತು ಶ್ರವಣ ಶಕ್ತಿಗಳೆರಡನ್ನೂ ಕಳೆದುಕೊಂಡಳು. ಮಾತುಗಳು ಕೇಳಿಸದೆ, ಅವುಗಳೇನೆಂದೇ ಗೊತ್ತಾಗದಾಗ, ಮಾತನಾಡಲು ಪದಗಳು ಅದೆಲ್ಲಿಂದ ಬರಬಲ್ಲುವು? ಹೀಗಾಗಿ, ಅವಳಿಗಿದ್ದ ವಾಕ್‍ಶಕ್ತಿಯೂ ಬಳಕೆಗೇ ಬಾರದೆ ಉಡುಗಿಹೋಯಿತು; ’ಸಂವೇದನೆ’ಯು ಕಳೆದುಹೋಗಿ, ’ವೇದನೆ’ಯು ಉಳಿಯಿತು.

ಗಾರುಡಿ Anne Sullivan
ಹೀಗೆ ಏಳನೆಯ ವಯಸ್ಸಿನವರೆಗೂ ಕೈಸನ್ನೆಗಳು ಮತ್ತು ಹಾವಭಾವಾಭಿನಯಗಳ ಮೂಲಕವೇ ತನ್ನ ಇಂಗಿತವನ್ನು ಹೇಗೋ ಪರದಾಟದಿಂದ ಸೂಚಿಸುತ್ತ ಬಂದ ಅವಳನ್ನು ಮನೆಯಲ್ಲೇ ಓದಿಸಲು ಮತ್ತು ನೋಡಿಕೊಳ್ಳಲು, ಅವಳಿಗಿಂತ ಹದಿನಾಲ್ಕು ವರ್ಷ ದೊಡ್ಡವಳಾಗಿದ್ದು, ದೃಷ್ಟಿಮಾಂದ್ಯವಿದ್ದ Anne Sullivan ಎಂಬ ಯುವತಿಯು ಬಂದು, ಹೆಲನ್‌ಳ ಭವಿಷ್ಯವೇ ಬದಲಾಗುವಂತೆ ’ಗಾರುಡಿ’ ಮಾಡಿಬಿಟ್ಟಳು. ತನ್ನ ಬಾಳಿಗೆ Anneಳು ಬಂದ ದಿನವನ್ನು ಹೆಲನ್‍ಳು “ನನ್ನ ಆತ್ಮದ ಹುಟ್ಟಿದ ಹಬ್ಬ” ಎಂದು ಮುಂದೊಮ್ಮೆ ಬಣ್ಣಿಸಿದಳು!

ಪ್ರತಿಯೊಂದಕ್ಕೂ ಒಂದು ಹೆಸರಿದೆ
ಪದಾರ್ಥಗಳು ಹೇಗಿರುತ್ತವೆಂಬುದನ್ನೇ ಕಾಣದಿದ್ದ ಹೆಲೆನ್‌ಳಿಗೆ, ಅವುಗಳ ಹೆಸರುಗಳೇನು ಎಂದು ತಿಳಿಸುವುದೆಂತು? ಅದಿರಲಿ, ‘love, think, is, in’ ಮುಂತಾದ ’ಪದಾರ್ಥಗಳಲ್ಲದ’ ಪದಗಳ ಅರ್ಥಗಳನ್ನು ತಿಳಿಸಿಕೊಡುವುದಾದರೂ ಹೇಗೆ? ಎಲ್ಲವೂ ಬಲು ಗಂಭೀರ ಸವಾಲುಗಳೇ.  ಆದರೆ, “fingerspelling” (ಕೈಬೆರಳುಗಳಿಂದಲೇ ‘ಮಾತನಾಡುವುದು) ಎಂಬ ವಿಶಿಷ್ಟ ವಿಧಾನದಿಂದಲೂ, ಉಬ್ಬು ಅಕ್ಷರಗಳಿರುವ ಪುಸ್ತಕಗಳ ಮತ್ತು Braille ಲಿಪಿಯ ಮೂಲಕವೂ ಇಂಗ್ಲಿಶ್ ಓದುವುದನ್ನೂ, ಬರೆಯುವುದನ್ನೂ Anneಳು ಉಪಾಯವಾಗಿ ಹೆಲನ್‌ಳ ಮನಸ್ಸಿಗೆ ಹತ್ತಿಸತೊಡಗಿದಳು. ಹೆಜ್ಜೆಗಳ ಸ್ಪಂದನದಿಂದಲೇ ಬಂದುಹೋಗುವವರು ಯಾರೆಂದು ಹೆಲನ್‌ಳು ಪತ್ತೆ ಹಚ್ಚುತ್ತಿದ್ದಳಂತೆ! (ಸಾಹಿತಿಯೊಬ್ಬರ ಮನೆಯ ವಿಶಾಲ ಕೋಣೆಯೊಂದನ್ನು ಪ್ರವೇಶಿಸುತ್ತಿದ್ದಂತೆಯೇ, ಅಲ್ಲಿಯ ಪುಸ್ತಕಗಳ leather ಮತ್ತು print ವಾಸನೆಯಿಂದ, ‘ಇದು ನಿಮ್ಮ ಗ್ರಂಥಾಲಯವೇನು?’ ಎಂದು ಅವಳು ಕೇಳಿ ಬೆಚ್ಚಿಸಿದ್ದಳಂತೆ!). ಹಾಗಾಗಿ ಅವಳ ಸೂಕ್ಷ್ಮ ಸ್ಪರ್ಶಪ್ರಜ್ಞೆಯೂ, ಮೇಲಾಗಿ ಅವಳ ಜ್ಞಾಪಕಶಕ್ತಿ, ಕಲ್ಪನಾಪ್ರತಿಭೆ ಮತ್ತು ಸಂಕಲ್ಪಬಲವೂ ಅವಳ ಕಲಿಕೆಯಲ್ಲಿ ನೆರವಿಗೆ ಕೂಡಿಬಂದುವು.

ಪ್ರಕೃತಿಪ್ರೇಮದಿಂದ ಜ್ಞಾನೋದಯ 
ಹೆಲನ್‌ಳಿಗೆ ಅಗಾಧ ಪ್ರಕೃತಿಪ್ರೇಮ ಇದ್ದುದರಿಂದ, ಅವರ ಹೊಲ-ಮನೆಯ   (’Ivy Green’- ‘US National Monument’, Tuscumbia, Alabama ) ಆವರಣದಲ್ಲಿದ್ದ ಹಸಿರಿನ ಮಡಿಲಲ್ಲೇ ಸಾಕಷ್ಟು ಪಾಠಗಳು ಆಟಗಳಲ್ಲೇ ನಡೆದು, ಬಹಳ ಪ್ರಯೋಜನವಾಯಿತು. ವಾಯುವಿಹಾರ, ಈಜಾಟ, ದೋಣಿ ನಡೆಸಾಟ, ಸೈಕಲ್ ಓಟ, ಸಾಕುನಾಯಿಗಳೊಡನೆ ಮತ್ತು ಮಕ್ಕಳೊಡನೆ ತುಂಟಾಟ ಇವೆಲ್ಲವೂ ಅವಳಿಗೆ ಸಾಮಾನ್ಯವಾಗಿದ್ದುವು. ಒಮ್ಮೆ ಶಿಕ್ಷಕಿ Anneಳು ಹೆಲನ್‍ಳ ಕೈಯನ್ನು ಹರಿಯುತ್ತಿದ್ದ ನೀರಿನಲ್ಲಿ ಆಡಿಸುತ್ತ, “ಇದು ನೀರು!” ಎಂದು ತಿಳಿಸಿದಾಗ, ಹೆಲನ್‍ಳಿಗೆ ಪುಳಕವಾಗಿ, “ಜ್ಞಾನೋದಯ” ಆಯಿತಂತೆ! ಕ್ರಮೇಣ ಅವಳಿಗೆ, ಪ್ರತಿಯೊಂದು ಪದಾರ್ಥಕ್ಕೂ ಹೆಸರಿದೆ, ಹೆಸರುಗಳಿಗೆ ಅರ್ಥವಿದೆ ಎಂದು ಗೊತ್ತಾಗತೊಡಗಿತು, ಮತ್ತು ಒಂದೊಂದು ಹೆಸರನ್ನು ಕೇಳಿದಾಗಲೂ ಅವಳಲ್ಲಿ ಹೊಸ ಆಲೋಚನೆಗಳೂ, ಕುತೂಹಲಗಳೂ ಮೂಡುತ್ತ, ಅವಳು ಜೀವನವನ್ನು “Wonderful! Beautiful!” ಎಂದೇ ಸವಿಯಲು ಕಲಿತಳು.

ಮಾತು ಕಲಿಯಲೇ ಬೇಕು
ಹುರಿದುಂಬುತ್ತಿದ್ದಂತೆ, ಇಂಗ್ಲಿಶ್ ಸಾಹಿತ್ಯದಲ್ಲಿ ಹೆಚ್ಚು-ಹೆಚ್ಚು ಪುಸ್ತಕಗಳನ್ನು ಓದಹತ್ತಿದಳು; ಇಂಗ್ಲಿಶ್‌ ಭಾಷೆಯಲ್ಲಿದ್ದ ಜ್ಞಾನಭಂಡಾರವನ್ನು ಪಡೆಯಬೇಕೆಂದು, ಭೂಗೋಳ, ಚರಿತ್ರೆ, ಸಸ್ಯ-ಪ್ರಾಣಿ ವಿಜ್ಞಾನ, ಎಲ್ಲದರ ಸಾರವನ್ನೂ ಸರಸರನೆ ಹೀರತೊಡಗಿದಳು. ಇದೇ ಭರದಲ್ಲಿ, ಏನೇ  ಕಷ್ಟ ಬರಲಿ, ಮಾತನಾಡುವುದನ್ನು ಮಾತ್ರ ಕಲಿಯಲೇ ಬೇಕೆಂಬ ಹೆಬ್ಬಯಕೆಯು ಅವಳಲ್ಲಿ ಮೊಳೆಯಿತು. ಅವಳ ನಾಲಿಗೆ, ಗಂಟಲು, ಧ್ವನಿ ಎಲ್ಲವೂ ಸರಿಯಾಗಿಯೇ ಇದ್ದು, ಯಾವ ಸದ್ದೂ ಕಿವಿಗೆ ಬೀಳದಿದ್ದುದರಿಂದ ತಾನೇ, ಬಾಯಿಮಾತೂ  ಮುಚ್ಚಿಕೊಂಡಿದ್ದುದು?

ವಾಸ್ತವವಾಗಿ, ಮಗುವಾಗಿದ್ದಾಗಿನ ಆ ಜೋರು ಕಾಯಿಲೆಯ ಮುನ್ನ, ಅವಳು ತೊದಲು ಮಾತುಗಳನ್ನಂತೂ ಆಡುತ್ತಲೇ ಇದ್ದಳು (ಉದಾ: ‘water’ಗೆ ’wa –wa’). ಇದೂ ಅಲ್ಲದೆ, ಅವಳು ಈವರೆಗೂ ಸುಮ್ಮನೆ ಕೈಕಟ್ಟಿಯೇನೂ ಕುಳಿತಿರಲಿಲ್ಲ. ಒಂದು ಕೈಯನ್ನು ಗಂಟಲ ಮೇಲೆ, ಇನ್ನೊಂದು ಕೈಯನ್ನು ತುಟಿಗಳ ಚಲನೆಯ ಮೇಲೆ ಇಟ್ಟುಕೊಂಡು, ಅಳುವುದೋ, ನಗುವುದೋ, ಕೂಗುವುದೋ, ಒಂದಲ್ಲ ಒಂದು ಸಪ್ಪಳವನ್ನು ಮಾಡುತ್ತಲೇ ಇರುತ್ತಿದ್ದಳು; ತಾಯಿಯ ಗಂಟಲ ಮೇಲೂ ಇದೇ ರೀತಿ ಪ್ರಯೋಗ ಮಾಡುತ್ತಿದ್ದಳು, ಮತ್ತು ಹಾಡುವವರ ಗಂಟಲುಗಳ, ಅಥವಾ ಸಂಗೀತ ವಾದ್ಯಗಳ ಮೇಲೆ ಕೈಯಿಟ್ಟು, ನಾದತರಂಗಗಳ ಸ್ಪರ್ಶಸುಖವನ್ನು ಹೊಂದುತ್ತಲೂ ಇದ್ದಳು. ಹೀಗೆ ಪ್ರಯತ್ನಿಸುತ್ತಲೇ ಹತ್ತರ ವಯಸ್ಸನ್ನು ಮುಟ್ಟಿದಾಗ ಹೆಲನ್‌ಳಿಗೆ, ತನ್ನಂಥವರಿಗೆ ಮಾತು ಕಲಿಸುತ್ತಿದ್ದ ಶಾಲೆಯನ್ನು ನಡೆಸುತ್ತಿದ್ದ ‘Sarah Fuller’ ಎಂಬ ತಜ್ಞ, ಸಹೃದಯ ಶಿಕ್ಷಕಿಯ ಪರಿಚಯವು ದೊರಕಿತು. ಹೆಲನ್‌ಳು ಆ ಶಾಲೆಯನ್ನು ಸೇರಿ, Sarahಳ ತುಟಿ, ದವಡೆ, ಕೆನ್ನೆ ಮತ್ತು ಗಂಟಲ ಮೇಲೆ  ಬೆರಳಾಡಿಸುತ್ತ, ಅನುಕರಣೆಯಿಂದ (“Tad-Oma Method”) ಒಂದೇ ಗಂಟೆಯಲ್ಲಿ ಆರು ಮೂಲ ಶಬ್ದಗಳನ್ನು ತನ್ನ ಬಾಯಿಂದ ಹೊರಡಿಸಿಯೇ ಬಿಟ್ಟಳು! “It is warm” ಎಂಬ ತನ್ನ ಚೊಚ್ಚಲ ವಾಕ್ಯವನ್ನು ನುಡಿಯುತ್ತಿದ್ದಂತೆಯೇ, ಅವಳಲ್ಲಿ ವಿದ್ಯುತ್ ಹರಿದಂತಾಗಿ, ಅವಳು ತನ್ನ ಮೂಕತನದಿಂದ ಸಿಡಿದು ಈಚೆ ಬಂದು, ಪಂಜರದಿಂದ ಪಾರಾದ ಹಕ್ಕಿಯಂತೆ ಹಾರಾಡಿದಳು. ಮುಂದೆ ಶಿಕ್ಷಕಿ Anneಳು, ಆಪಾರ ಪ್ರೀತಿ ಮತ್ತು ಪರಿಶ್ರಮದಿಂದ, ಹೆಲನ್‌ಳಿಗೆ ಒಂದೊಂದು ಉಚ್ಚಾರವನ್ನೂ ಗಂಟೆಗಟ್ಟಳೆ ತಿದ್ದಿ-ತಿದ್ದಿ ಕಲಿಸಿಕೊಟ್ಟಳು. ಅದೇ ಸಮಯದಲ್ಲಿ ಹೆಲನ್‌ಳು ತನ್ನಷ್ಟಕ್ಕೆ ತಾನೇ “I am not dumb now” ಎಂದು ಆಗಾಗ್ಗೆ ನುಡಿದುಕೊಂಡು ಹಿಗ್ಗುತ್ತಿದ್ದಳು. ಮಾತಿನ ಶಕ್ತಿಗೆ ಬಲಗೂಡಿಸಿಕೊಳ್ಳಲು, ಪದ್ಯಗಳನ್ನು ಗಟ್ಟಿಯಾಗಿ ಓದುತ್ತಿದ್ದಳು.

ಭಾಷೆ, ಸಾಹಿತ್ಯ, ಗಣಿತ, ಭೂಗೋಲ, ಕಾಲೇಜು
ಅಡೆತಡೆಗಳ ಮೇಲೆ ಹೀಗೆ ಜಿಗಿಜಿಗಿದು ಓಡುತ್ತಿದ್ದ ಹೆಲನ್‌ಳನ್ನು ಇನ್ನು ಹಿಡಿದು ನಿಲ್ಲಿಸುವವರು ಯಾರಿದ್ದರು? ತಾನು ಈ ಮೊದಲೇ ಸ್ವಲ್ಪ ಕಲಿತಿದ್ದ ಫ಼್ರೆಂಚ್ ಭಾಷೆಯಲ್ಲಿ ಈಗ ಮುಂದುವರಿದು ಅವಳು ಫ಼್ರೆಂಚ್‌ನ ಪ್ರಸಿದ್ಧ ಲೇಖಕರ ಪುಸ್ತಕಗಳನ್ನು ಓದಲು ಶುರುವಿಟ್ಟುಕೊಂಡಳು. ಲ್ಯಾಟಿನ್ ಕಲಿತು, ಅದರ ಸಾಹಿತ್ಯದ ರುಚಿಯನ್ನೂ ಹತ್ತಿಸಿಕೊಂಡಳು. ಹದಿನಾಲ್ಕನೆಯ ವಯಸ್ಸಿನಲ್ಲಿ, New York Cityಯ “Special School for the Deaf” ಶಾಲೆಯಲ್ಲಿ, Arithmetic, Geography, French ಜೊತೆಗೆ, German ಭಾಷೆಯನ್ನೂ ತೆಗೆದುಕೊಂಡು, ಅದರ ಓದಿನಲ್ಲಿ ಬೇಗಬೇಗನೆ ಮುನ್ನಡೆದಳು. ಆಗ Harvard ವಿಶ್ವವಿದ್ಯಾಲಯಕ್ಕೆ, ಪುರುಷರಿಗಷ್ಟೇ ಪ್ರವೇಶವಿದ್ದುದರಿಂದ, ಅದರ ಉನ್ನತ ಗುಣಮಟ್ಟದ ಶಿಕ್ಷಣವು ಸ್ತ್ರೀಯರಿಗೂ ಲಭ್ಯವಾಗುವಂತೆ ಮಾಡಲು, Radcliffe College ಎಂಬ ’ಹಾರ್ವರ್ಡ್ ಸಹವಿದ್ಯಾಲಯ’ವಿದ್ದು, ಅದರ ಪ್ರವೇಶಕ್ಕೆ ತಯಾರಾಗಲು ‘Cambridge School for Young Ladies’ ಎಂಬ ಶಾಲೆಯಿದ್ದಿತು. ಸುಪ್ರತಿಷ್ಠಿತ Harvardನಿಂದಲೇ BA ಗಳಿಸುವ ಹೊಂಗನಸನ್ನು ಹೊತ್ತಿದ್ದ ಹೆಲನ್‌ಳು ತನ್ನ ಹದಿನಾರನೆಯ ವಯಸ್ಸಿನಲ್ಲಿ ಈ ’ವಸತಿಸಹಿತ’ ಶಾಲೆಯನ್ನು ಸೇರಿ, ಅದರ ಪ್ರಥಮ ವರ್ಷದಲ್ಲಿ Advanced German ಮತ್ತು English ಭಾಷೆಗಳಲ್ಲಿ “Honours” ಪಡೆದಳು; Greek ಭಾಷೆ ಮತ್ತು Roman History ಓದಿದಳು. ತರಗತಿಗಳಲ್ಲಿ notes ಮಾಡಿಕೊಳ್ಳುವುದು ಕಷ್ಟವಾಗಿ, ತನ್ನ ಎಲ್ಲ ಬರವಣಿಗೆಯನ್ನೂ type ಮಾಡಿಕೊಂಡಳು (ತನ್ನ ಭಾಷಣಗಳಿಗೆ “Braille writer”, ಪತ್ರಗಳಿಗೆ ಮಾಮೂಲು typewriter ಬಳಸಿ ಚೂರೂ ತಪ್ಪಿಲ್ಲದಂತೆ ಅವಳು ಅಚ್ಚುಮಾಡಿಕೊಳ್ಳುತ್ತಿದ್ದಳು[Video1]. ಆದರೆ ಭಾಷೆಗಳಲ್ಲಿ ಅಷ್ಟು ಅಭಿರುಚಿಯಿದ್ದವಳಿಗೆ, ಗಣಿತವನ್ನು ಕಂಡರೆ ಅಷ್ಟಕ್ಕಷ್ಟೇ, ಮತ್ತು ಅದನ್ನು ಅಲ್ಲಿದ್ದ ‘American Braille’ ಮೂಲಕ ಕಲಿಯಲು ಅವಳಿಗೆ ಸುಲಭವಾಗಿರಲಿಲ್ಲ. ಆದರೂ, ಆ ಶಾಲೆಯ ತನ್ನ ದ್ವಿತೀಯ ವರ್ಷದಲ್ಲಿ ‘Science, Mathematics and Stars’ ವಿಷಯಗಳನ್ನು ಆರಿಸಿಕೊಂಡು ಉತ್ತೀರ್ಣಳಾಗಿ, ಕಡೆಗೂ ತನ್ನ ಆದರ್ಶವಾಗಿದ್ದ Radcliffe College ಪ್ರವೇಶಿಸಿದಳು. ಆದರೆ, ಆ ಕಾಲೇಜ್‍ನ ಕೆಲಸದೊತ್ತಡವು ಅವಳ ವಿರಾಮದ ಕ್ರಮಕ್ಕೆ ಭಾರವಾಯಿತು, ಮತ್ತು ಗಣಿತದ ಕಲಿಕೆಗೆ ‘fingerspelling’ ವಿಧಾನವು ಹೊಂದಲಿಲ್ಲ. ಆದರೂ ಎದೆಗುಂದದೆ, ಅಲ್ಲಿ ಎರಡು ವರ್ಷಗಳು ವ್ಯಾಸಂಗ ಮಾಡಿ, ಹೆಲನ್‍ಳು “Distinction” ಸಹಿತ ತನ್ನ ೨೪ನೆಯ ವಯಸ್ಸಿನಲ್ಲಿ ಅಮೇರಿಕಾದ “first deaf-blind ’BA’ graduate” ಆಗಿ ದಾಖಲೆ ಬರೆದಳು! (160 ಅಗಿದ್ದ ಅವಳ IQ ಅಂಕವನ್ನು “exceptionally gifted” ಎನ್ನುವರು). ಇದಿಷ್ಟು ಅವಳ ಮೊತ್ತಮೊದಲ ರಚನೆಯಾದ ‘The Story of My Life’ ಎಂಬ ಮನೋಹರ ’ಮೊದಲ ಹಂತದ ಆತ್ಮಕಥೆ’ಯ ಸಾರಾಂಶವು.

ನಿಸ್ವಾರ್ಥ ಸೇವೆ
ಈ ಮಹತ್ತ್ವದ ಮೈಲಿಗಲ್ಲನ್ನು ದಾಟುತ್ತಿದ್ದಂತೆಯೇ, ಯುವತಿ ಹೆಲನ್‌ ಎತ್ತರೆತ್ತರ ಬೆಳೆಯುತ್ತ ಹೋದಳು. “American Foundation for the Blind” ಎಂಬ ಸಂಸ್ಥೆಗೆ ೪೪ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದಳು; ಆ ಸೇವಾವಧಿಯಲ್ಲಿ, ತನ್ನ ಕಾರ್ಯದರ್ಶಿ ‘Polly Thompson’ ಸಂಗಡ, USA ದೇಶವನ್ನಲ್ಲದೆ, ಎಲ್ಲ ಭೂಖಂಡಗಳ ದೇಶದೇಶಗಳನ್ನು ಸುತ್ತಿ-ಸುತ್ತಿ, ಕಣ್ಣು-ಕಿವಿ ಹೋಗಿರುವವರ ಸಮಸ್ಯೆಗಳನ್ನಲ್ಲದೆ, ಇಡೀ ವಿಕಲಾಂಗ ಸಮುದಾಯದ, ಅನಾಥರ, ನಿರಾಶ್ರಿತರ, ಶ್ರಮಿಕರ, ಬಡ ಮಕ್ಕಳ, ಸ್ತ್ರೀಯರ ಮತ್ತಿತರ ಅಶಕ್ತ ವರ್ಗಗಳ ಹಕ್ಕು-ಗುರಿ-ಹಿತಕ್ಕಾಗಿ ’ದನಿ ಎತ್ತಿದಳು’, ಆ ನಿಮಿತ್ತ ಎಲ್ಲೆಡೆ ಸಹಾಯನಿಧಿಯನ್ನು ಸಂಗ್ರಹಿಸಿದಳು. ಲೋಕವಿಶ್ರುತ ‘ಸಾರ್ವಜನಿಕ ಉಪನ್ಯಾಸಕಿ’ಯಾಗಿ, ಪ್ರಗತಿಪರ ಚಿಂತಕಿಯಾಗಿ, ಸಮಾನ-ನ್ಯಾಯಯುತ ಸಮಾಜಕ್ಕಾಗಿ, ನಾಗರಿಕ ಸ್ವಾತಂತ್ರ್ಯಗಳಿಗಾಗಿ, ವಿಶ್ವಶಾಂತಿಗಾಗಿ ಜನತೆಯ ಒಳಗಣ್ಣು-ಒಳಕಿವಿ ತೆರೆಸಲು ಬಿರುಸಿನ ಪ್ರಚಾರ ಮಾಡಿದಳು; ಪ್ರಮುಖ ಚಳುವಳಿಗಳ, ಸಂಸ್ಥೆಗಳ ಉಗಮಕ್ಕೆ ಕಾರಣಳಾದಳು. ಪ್ರಬಲ ಲೇಖಕಿಯಾಗಿ ವಿಧವಿಧ ವಿಚಾರಗಳಲ್ಲಿ ಹತ್ತಾರು ಪುಸ್ತಕಗಳನ್ನೂ, ನೂರಾರು ಭಾಷಣಗಳನ್ನೂ, ಪ್ರಬಂಧಗಳನ್ನೂ ಬರೆದಳು. ಅವಳು ೧೯೫೫ರಲ್ಲಿ, ತನ್ನ ೭೫ನೆಯ ವಯಸ್ಸಿನಲ್ಲಿ, ಭಾರತದ ಪ್ರಮುಖ ನಗರಗಳಿಗೂ ಭೇಟಿಯಿತ್ತಳು[Video2, Video3]. ಮಹಾತ್ಮ ಗಾಂಧೀಯವರ ಜೀವನ ಮತ್ತು ಧ್ಯೇಯಾದರ್ಶಗಳನ್ನು ಕುರಿತೂ, ಒಂದು ಪ್ರೌಢ ಲೇಖನವನ್ನು ಬರೆದಳು.
  
Telephone ಸಾಧನವನ್ನು ಸೃಷ್ಟಿಸಿದ Graham Bell, ಕಿವಿಕೇಳಿಸದಿದ್ದ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ನಿಪುಣನಾಗಿದ್ದು, ಹೆಲನ್‌ಳ ಗುರು Anneಳ ನೇಮಕದಲ್ಲಿ ನೆರವಾಗಿದ್ದನು.  ಹೆಲನ್‌ಳು ಅವನ ನಿಕಟವರ್ತಿಯಾಗಿ, ತನ್ನ ’The Story of My Life’ ಪುಸ್ತಕವನ್ನು ಅವನ ಹೆಸರಿಗೇ ಮುಡಿಪಾಗಿಸಿದಳು. (Bell ಮಹಾಶಯನ ತಾಯಿಗೂ, ಹೆಂಡತಿಗೂ ಕಿವುಡಿತ್ತು; ಅವನ ಅಜ್ಜ, ತಂದೆ ಮತ್ತು ಚಿಕ್ಕಪ್ಪ ’public speaking’ ಕಲಿಸುವ ವೃತ್ತಿಯಲ್ಲಿದ್ದರು; ಹೀಗಾಗಿ ಅವನು ಶಬ್ದವಿಜ್ಞಾನವನ್ನು ಸಂಶೋಧಿಸಿ, telephone ಅಲ್ಲದೆ, ಕೇಳುವಿಕೆಯ ಶಕ್ತಿಯನ್ನು ಅಳೆಯುವ ‘audiometer’ ಉಪಕರಣವನ್ನು ತಯಾರಿಸಲೂ ಪ್ರೇರಿತನಾದನು). Charlie Chaplin ಕೂಡ ಹೆಲನ್‌ಳ ಬಳಗದಲ್ಲಿದ್ದನು, ಮತ್ತು ತನ್ನ ಕಾಲದಲ್ಲಿ ಆಡಳಿತದಲ್ಲಿದ್ದ ಅಮೇರಿಕಾದ ಹತ್ತು-ಹನ್ನೆರಡು ರಾಷ್ಟ್ರಾಧ್ಯಕ್ಷರನ್ನು ಅವಳು ಭೇಟಿಯಾಗಿದ್ದಳು. ಹೆಲನ್‌ಳ ಅಭಿಮಾನಿಯಾಗಿದ್ದ  ಮೇರು ಸಾಹಿತಿ Mark Twain, ಅವಳು ಹಾರ್ವರ್ಡ್‌ನಲ್ಲಿ ಓದಲು ಧಣಿಯೊಬ್ಬನಿಂದ ನೆರವನ್ನು ಒದಗಿಸಿದ್ದನು; ಅಲ್ಲದೆ, Anneಳು ಹೆಲನ್‌ಳಿಗೆ ‘ಮರುಜೀವ’ ಕೊಟ್ಟ ’ಪವಾಡ’ದಿಂದ ಆಶ್ಚರ್ಯಚಕಿತನಾಗಿ, ಅವನು Anneಳನ್ನು “The Miracle Worker” ಎಂದು ಕೊಂಡಾಡಿದ್ದನು. ಮುಂದಕ್ಕೆ, “The Miracle Worker” ಎಂಬ ಶೀರ್ಷಿಕೆಯಲ್ಲೇ, ಹೆಲನ್ ಮತ್ತು Anne “ಬಾಳ ಸಂಗಾತಿ”ಗಳಾದ ಸೊಬಗನ್ನು, ಸೋಜಿಗವನ್ನು ಜಗತ್ತಿಗೆ ತೋರ್ಪಡಿಸಲು, ಮೂರು ವಿಶೇಷ ಚಲಚ್ಚಿತ್ರಗಳು ತೆರೆಕಂಡುವು; ಇವುಗಳಿಗೆ ಆಧಾರವಾಗಿದ್ದ ಹೆಲನ್‌ಳ ”The Story of My Life”, ಅನೇಕ ಜನಪ್ರಿಯ ನಾಟಕಗಳಿಗೂ, ೨೦೦೬ರಲ್ಲಿ ಬಾಲಿವುಡ್‍ನ ‘Black’ ಎಂಬ ಚಲಚ್ಚಿತ್ರಕ್ಕೂ ವಸ್ತುವಾಯಿತು. ತನ್ನ ೮೪ನೆಯ ವಯಸ್ಸಿನಲ್ಲಿ ಹೆಲನ್‌ಳು USA ದೇಶದ ಅತ್ಯುನ್ನತ   Presidential Medal of Honour ಪ್ರಶಸ್ತಿಗೆ ಪಾತ್ರಳಾದಳು, ಮತ್ತು ವಿಖ್ಯಾತ TIME Magazine ಅವಳನ್ನು “೨೦ನೆಯ ಶತಮಾನದ ೧೦೦ ಅತ್ಯಂತ ಮಹತ್ತ್ವದ ವ್ಯಕ್ತಿಗಳಲ್ಲೊಬ್ಬಳು” ಎಂದು ಗೌರವಿಸಿತು. ಈ ಧೀರೋದಾತ್ತ ಮಹಿಳೆಯ ಸಾಹಸಗಾಥೆಯ ಮುಖ್ಯ ಘಟನೆಗಳನ್ನು ಬಿಂಬಿಸುವ ಬೃಹತ್ ವರ್ಣಚಿತ್ರವೊಂದನ್ನು ಕೇರಳದ ಚಿತ್ರಕಲಾವಿದರು ಇವಳ ನೆನಪಿಗೆ ಕಾಣಿಕೆಯಾಗಿಸಿ, ಅದರಿಂದ ದೃಷ್ಟಿಹೀನರ ಕ್ಷೇಮನಿಧಿಗಾಗಿ ಹಣಗೂಡಿಸಿದರು. 

Anne ಮರೆಯಾದಳು
ಬಾಲಕಿ ಹೆಲನ್‍ಳಿಗೆ ಹೊಸ ’ಉಸಿರು’ ನೀಡಿ, ಅವಳನ್ನು ’ಆಲಿಸಿ-ಪಾಲಿಸಿ-ಲಾಲಿಸಿ’ದ್ದ Anneಳು, 1936ರಲ್ಲಿ ಹೆಲನ್‌ಳ ಕೈಹಿಡಿದೇ ಕೊನೆಯುಸಿರೆಳೆದಳು. ಅರ್ಧ ಶತಮಾನಾದ್ಯಂತ ’ಕಣ್ಣು-ಕಿವಿ ಜೋಡಿ ಮಾದರಿ’ ಬೆಸೆದುಕೊಂಡಿದ್ದ ಈ ‘ಅಪೂರ್ವ ಗುರು-ಶಿಷ್ಯೆ ಬಾಂಧವ್ಯ’ವನ್ನು ಬಿಂಬಿಸುವ ಒಂದು ಆಕರ್ಷಕ ಛಾಯಾಚಿತ್ರವನ್ನು Graham Bell ಮಹಾಶಯನೇ ತೆಗೆದಿದ್ದಾನೆ, ಮತ್ತು ಈ ‘ಜನುಮದ ಜೋಡಿ’ಯ ಕಂಚಿನ ಪ್ರತಿಮೆಯೊಂದು ಅಮೇರಿಕಾದ Tewksbury ನಗರದಲ್ಲಿ ಕಂಗೊಳಿಸುತ್ತಿದೆ.

ಕೊನೆಯ ದಿನಗಳು
ಇಂತು ಅದಮ್ಯ ಚೈತನ್ಯದ ಮೂರ್ತಿಯಾಗಿ, ಭೂಗೋಳವನ್ನು ’ಬಣ್ಣದ ಬುಗುರಿಯಂತೆ’ ತಿರುಗಿದ್ದ ಹೆಲನ್‌ಳು, ೮೧ನೆಯ ವಯಸ್ಸಿನಲ್ಲಿ ‘ಪಾರ್ಶ್ವ-ಆಘಾತ’ಗಳಿಗೆ ಗುರಿಯಾಗಿ, ಮನೆಯಲ್ಲೇ ಉಳಿದುಕೊಳ್ಳುವಂತಾದಳು. ತನ್ನ 88ನೆಯ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳಿರುವಾಗ, ನಿದ್ದೆಯಲ್ಲೇ ದೇಹ ತ್ಯಜಿಸಿದಳು. ಮುಖ್ಯ ಜ್ಞಾನೇಂದ್ರಿಯಗಳಿಂದಲೇ ವಂಚಿತಳಾಗಿದ್ದ ಹುಡುಗಿಯು, ಕೇವಲ ಮನೋಬಲದ ದೆಸೆಯಿಂದ “ಜ್ಞಾನಿ”ಯಾಗಿ, ಸಕಲಾಂಗ, ಸಶಕ್ತ ಜನರೂ ಅವಳನ್ನು “disabled” ಎನ್ನುವ ಬದಲಿಗೆ, ‘this ablest’ ಎಂದು ತಲೆದೂಗುವಂತೆ ಸಂಪನ್ನಳಾಗಿ, ಮಾನವ ಸಾಧ್ಯತೆಗಳ, ಆಶಯಗಳ ಎಲ್ಲೆಗಳನ್ನು ಹಿಂದೂಡಿ, ಇತಿಹಾಸದ ನಕ್ಷತ್ರಪುಂಜದಲ್ಲಿ ವಿರಾಜಮಾನಳಾದಳು.  

ಹೆಲನ್ ಕೆಲನ್‍ರಂಥವರು ಹುಟ್ಟುವುದು ಸಾಯುವುದಕ್ಕಲ್ಲ,  ಅಪ್ರತಿಮ ಸೇವೆ- ಸಾಧನೆಗಳಿಂದ ಅಮರರಾಗುವುದಕ್ಕಾಗಿ!

ಮಾತಾಯಿ ಹೆಲನ್ ಕೆಲರ್ ಬಾರೇ! ಕಾರಿರುಳ ಜಗಕೆ ಹೊಂಬೆಳಕ ತೋರೇ!

 


Reference: https://www.youtube.com/@IamHelenKeller

[Video1] Helen Keller in her office (1919-54), https://www.youtube.com/watch?v=Pqb9B8EIY-c
[Video2] Helen Keller photo album (India visit-1955), https://www.youtube.com/watch?v=FeWBg63TMDo
[Video3] Helen Keller visits India,  https://youtu.be/5xNulmM9c-k
[Video4] Helen Keller speaks out, https://www.youtube.com/watch?v=8ch_H8pt9M8
 


ಕನ್ನಡ ಕಲಿ ಬಿತ್ತರಿಕೆ, ಜುಲೈ ೨೨, ೨೦೨೩

ಬೆಳಕು ತೋರಿದ ಬದುಕು : ಹೆಲನ್ ಕೆಲರ್
ಬರೆಹ: ಎಸ್. ಜಿ. ಸೀತಾರಾಮ್
ಓದು  : ಶ್ರುತಿ ಅರವಿಂದ

ಚಿತ್ರಗಳು: ಅಂತರ್ಜಾಲ ಕೃಪೆ

Beḷaku Tōrida Baduku
Helen‌ Kelar 
Author: Es. Ji. Sītārām, Maisūru 
Reader: Rājēśvari ec‌. rāv‌, Arvain‌