ಹೊಯ್ಸಳ ಬಾಲವನ

ಶ್ರೀಧರ್ ಎಂಬುವ ನವ್ಯ ಸುದತ್ತ ೮ ವರ್ಷಗಳ ಹಿಂದೆಯೆ ಆನ್-ಲೈನ್ ಅಂಗಡಿಯಲ್ಲಿ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆದರು. ಕೆಲವು ಮಕ್ಕಳು ಕನ್ನಡ, ಕರ್ನಾಟಕದ/ಭಾರತದ ಇತಿಹಾಸ, ಹೊಸ ತಂತ್ರಜ್ಞಾನ, ಇತ್ಯಾದಿ ವಿವಿಧ ವಿಷಯಗಳನ್ನು ಕಲಿಯುತ್ತ ಮುನ್ನಡೆದರು.

ಈಗ ನೋಡಿ, ಕೋವಿದ್-೧೯ ಎಂಬ ಮಾರಿ ಎಲ್ಲರನ್ನು ಮನೆಸೆರೆಯಲ್ಲಿ ಬಂಧಿಸಿರುವಾಗ, ಸಾಮಾನ್ಯ ಶಾಲೆಯಲ್ಲಿ ಕಲಿಯಲಾಗದ ಎಲ್ಲ ವಿಷಯಗಳನ್ನು ಹೊಯ್ಸಳ ಬಾಲವನದಲ್ಲಿ ಕಲಿಯುತ್ತಿದ್ದಾರೆ. ಶ್ರೀಧರ್ "ಹೊಯ್" ಎಂದರೆ ನೂರೆಂಟು ಸಳರು ಎದ್ದು ನಿಲ್ಲುತ್ತಾರೆ. ಕೋವಿದ್-೧೯ ಹುಲಿ ಬಾಲ ಮುದುಡಿಕೊಂಡು ಸದ್ದಿಲ್ಲದೆ ಹೊರಗೆ ಬಿದ್ದಿದೆ. ಒಂದು ದಿನ ಕೂಡ ಹೊಯ್ಸಳ ಬಾಲವನ ಶಾಲೆ ಮುಚ್ಚಲಿಲ್ಲ. ಯು.ಎಸ್.ಎ., ಭಾರತ, ಜರ್ಮನಿ ಎಲ್ಲೇ ಇರಲಿ, ತಮ್ಮ ತಮ್ಮ ಮನೆಯಲ್ಲೇ ಈ ಮಕ್ಕಳು ಕಲಿಕೆಯನ್ನು ಎಂದಿಗಿಂತ ಹೆಚ್ಚಾಗಿ ನಿರಂತರವಾಗಿ ಮುಂದುವರೆಸುತ್ತಿದ್ದಾರೆ.

ಕನ್ನಡ ಕಲಿಯಲ್ಲೂ ಉಪಾಧ್ಯಾಯರಾಗಿರುವ ಶ್ರೀಧರ ರಾಜಣ್ಣ, ತಂತ್ರಜ್ಞಾನದ (ಟೆಕ್ನಾಲಜಿ) ಉಪಯೋಗವನ್ನು, ಮೊದಲಿನಿಂದಲೂ, ಪುಸ್ತಕಗಳೇ ಬೇಡ ಅನ್ನುವಷ್ಟರ ಮಟ್ಟಿಗೆ, ಕಲಿಸಲು ಸಮರ್ಥವಾಗಿ ಬಳಸಿಕೊಂಡವರು. ಕೈಯಲ್ಲಿ iPad ಹಿಡಿದು ಓಡಾಡುತ್ತಿದ್ದ ಉಪಾಧ್ಯಾಯ ಶ್ರೀಧರ ಕನ್ನಡ ಕಲಿಯಲ್ಲಿ iPadhyaayaru ಎಂಬ ಅನ್ವರ್ಥ ನಾಮದಿಂದಲೇ ಪ್ರಸಿದ್ಧರಾದವರು. ಮೊನ್ನೆ ತಾನೇ ಅಮೆರಿಕದಾದ್ಯಂತ ಎಲ್ಲ ಕನ್ನಡ ಶಿಕ್ಷಕರಿಗೂ ಈ ಸಮಯದಲ್ಲಿ ತಂತ್ರಜ್ಞಾನವನ್ನು ಬಳಸಿ ಆನ್-ಲೈನ್ ತರಗತಿಗಳನ್ನು ಹೇಗೆ ನಡೆಸಬೇಕು ಎಂದು ತರಬೇತಿ ಕೊಟ್ಟಿದ್ದಾರೆ.

ಮಕ್ಕಳಷ್ಟೇ ಅಲ್ಲ

ಹೊಯ್ಸಳ ಬಾಲವನ ಕೇವಲ ಬಾಲಕರಿಗಷ್ಟೇ ಅಲ್ಲ. ಇಲ್ಲಿ ಎಲ್ಲರೂ ಬಾಲರೆ. ಮಕ್ಕಳಿಗೂ ಪಾಲಕರಿಗೂ ಕಲಿಯಲು ಮತ್ತು ಕಲಿಸಲು ಅವಕಾಶ ಇದೆ. ಕತೆ ಓದಿ ಹೇಳುವುದು; ಹೊಸ ಪುಸ್ತ ಪರಿಚಯ;, ಇತಿಹಾಸ, ದೇವಾಲಯಗಳ ಶಿಲ್ಪಕಲೆ, ಸಾಹಿತ್ಯ, ಕಲೆಗಳ ಚರ್ಚೆ; ಐತಿಹಾಸಿಕ, ಪೌರಾಣಿಕ ವಕ್ತಿಗಳ ಪರಿಚಯ; ಹೀಗೆ. ಗಣ್ಯ ವಕ್ತಿಗಳ ಸಂದರ್ಶನ ಕೂಡ ನಡೆಯುತ್ತದೆ. ಮೊನ್ನೆ ತಾನೇ, ಖ್ಯಾತ ಗಾಯಕ ರಘು ದೀಕ್ಷಿತ ಒಂದು ಕಾರ್ಯಕ್ರಮದಲ್ಲಿ ಬಂದು ಎಲ್ಲರನ್ನು ಸರ್ಪ್ರೈಸ್ ಗೊಳಿಸಿದರು. ರಘು, ಒಂದಲ್ಲ, ಎರಡು ಹಾಡು ಕೂಡ ಹಾಡಿ ಎಲ್ಲರ ಮನ ಗೆದ್ದರು. ಮತ್ತೊಮ್ಮೆ ಟಿ.ಎಸ್. ನಾಗಾಭರಣ ಅವರು ತ.ರಾ.ಸು. ಅವರೊಂದಿಗಿನ ಚಿತ್ರ ಮತ್ತು ಸಾಹಿತ್ಯಕ ಸಂಬಂಧವನ್ನು ವಿವರಿಸುತ್ತ, 'ಆಕಸ್ಮಿಕ' ಚಲನ ಚಿತ್ರದ ನಟ, ನಿರ್ಮಾಪಕ, ನಿರ್ದೇಶಕರ ಹಿಂದಿನ ಕತೆಯನ್ನು ಒಂದು ಗಂಟೆ ಮೀರಿ ಹೇಳಿದರು.

ಡೈನಾಮಿಕ್ ಕಲಿಕೆ

"ಮಾತಾಡು ಮಾತಾಡು ಮಗು", "ಅಕ್ಷರ ಕಾರ್ಖಾನೆ" "ಕೇಳು ಕತೆ", ಇವು ಕೆಲವು ನಿತ್ಯ ಪಾಠಗಳ ಸರಣಿ. ಹನುಮ ಜಯಂತಿ, ಅಕ್ಕಮಹಾದೇವಿ ರಾಜಕುಮಾರರ ಹುಟ್ಟುಹಬ್ಬ, ಶಂಕರ, ರಾಮಾನುಜ, ಮಧ್ವ ಆಚಾರ್ಯ ತ್ರಯರ ಜಯಂತಿ, ಬಸವ ಜಯಂತಿ, ತರಾಸು ಜನ್ಮಶತಾಬ್ದಿ ಇತ್ಯಾದಿ ಸಂದರ್ಭಗಳನ್ನು ಸಮಯೋಚಿತವಾಗಿ ಬಳಸಿಕೊಂಡು ಪಾಠಗಳು ತಯಾರಾಗುತ್ತವೆ. ಶ್ರೀಧರ ರಾಜಣ್ಣ ಚಲನ ಚಿತ್ರ ಮಾಹಿತಿಯ ಚಲಿಸುವ ನಾಲೆಜ್ ಬೇಸ್. ಅನೇಕ ರೀತಿ ಮಜಲುಗಳಲ್ಲಿ ಅಂತಾಕ್ಷರಿ ಕಾರ್ಯಕ್ರಮ ನಡೆಸಲು ಹೆಸರಾದವರು. ಈ ಮಾಹಿತಿಯನ್ನು ಕನ್ನಡ ಕಲಿಸಲು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ.

ಇಲ್ಲಿ ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ, ತರಗತಿಗಳಿಗೆ ಸಮಯದ ಮಿತಿ ಇಲ್ಲ; ಡೈನಾಮಿಕ್ ಆಗಿ ವಿಷಯಗಳ ಅಳವಡಿಕೆ. ಮಕ್ಕಳ ಮಾತುಗಳು ಮುಂದುವರೆಯುತ್ತವೆ. ದಿನದಲ್ಲಿ ಸುಮಾರು ೪ ರಿಂದ ೬ ಗಂಟೆಗಳ ಆನ್ ಲೈನ್ ಸಮಾವೇಶ.

ಹೀಗೆ ಪಾಲಕರು ಮಕ್ಕಳು ಶಿಕ್ಷಕರು ಎಲ್ಲರೂ ಸೇರಿ ನಡೆಸುವ ಈ collaborative ಕಲಿಕೆ ಕ್ರಮಕ್ಕೆ

"ಕೂಡೆ ಸಲಹಲಿ; ಕೂಡೆ ಸವಿಯುತ, *** 
    ಕೂಡೆ ಗಳಿಸುತ ಬಲ ತಿಳಿವುಗಳನು, 
ತಿಳಿವು ಬೆಳಕಿನಲಿ ನಾವ್ ಮೀಯೆ  
    ಇರದಿರಲಿ ತಪ್ಪು ತಿಳುವಳಿಕೆ".

ಎನ್ನುವ ತೈತ್ತಿರೀಯ ಉಪನಿಷತ್ತಿನ ಶಾಂತಿ ಮಂತ್ರ ಔಚಿತ್ಯಪೂರ್ಣವಾದದ್ದು.

ಶಾಂತಿನಿಕೇತನದ ಹೊಸ ಅವತಾರವೆಂಬಂತೆ, ಸಂಪೂರ್ಣ ಅಂತರ್ಜಾಲದಲ್ಲಿ ನಡೆಯುವ ಈ ಕಲನ ಕಲಿಕೆ ಶಾಲೆಗೆ 'ಹೊಯ್ಸಳ ಜಾಲವನ'ಅಥವ 'ಹೊಯ್ಸಳ ಶಾಂತಿವನ' ಅಂತಲೂ ಅನ್ನಬಹುದು.

ಹುಟ್ಟು

ಇದು ಹೇಗೆ "ಹೊಯ್ಸಳ" ಬಾಲವನ ಆಯಿತು? ಶ್ರೀಧರ, ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ ೨೦೧೧ರ ರಾಜ್ಯೋತ್ಸವ ಸಮಾರಂಭದಲ್ಲಿ ಪುಟ್ಟ ಪುಟ್ಟ ಮಕ್ಕಳಿಂದ "ಹೊಯ್ಸಳ ಸಾಮ್ರಾಜ್ಯ" ಅನ್ನುವ ನಾಟಕ ಒಂದನ್ನು ಆಡಿಸಿದರು. ಮಕ್ಕಳು ಆತ್ಮೀಯರಾಗಿ ಒಬ್ಬರಿಗೊಬ್ಬರು ಅಂಟಿಕೊಂಡರು. ನಂತರ ಮಕ್ಕಳೂ ಪಾಲಕರೂ ತಿಂಗಳಿಗೊಮ್ಮೆ ಒಬ್ಬರ ಮನೆಯಲ್ಲಿ ಕೂಡತೊಡಗಿದರು. ಆಟ, ಪಾಠ, ಚರ್ಚೆಗಳು ಒಂದೊಂದಾಗಿ ಪ್ರಾರಂಭವಾದವು. ಮಕ್ಕಳ ಸಂಖ್ಯೆ ಬೆಳೆದಂತೆ, ಅರ್ವೈನ್ ಮಂದಿರ, ಅರೇಂಜ್ ಕೌಂಟಿ ಉದ್ಯಾನ, ಸಮುದ್ರ ತೀರಗಳಲ್ಲಿ ಸಮಾವೇಶಗೊಳ್ಳತೊಡಗಿದರು. ನಂತರ, ಭುಗಿಲ್ ಎಂದು ಆನ್ ಲೈನ್ ಆಗಿ ಅಂತರ್ಜಾಲವನ್ನೇ ಆವರಿಸಿಕೊಂಡಿದೆ ಈ ಹೊಯ್ಸಳ ಬಾಲವನ! ಈಗ, ಹೊಯ್ಸಳ ಬಾಲವನ ಆನ್ ಲೈನ್ ಸೆಷನ್ ಗಳಲ್ಲಿ ನೂರಾರು ಕ್ರಿಯಾಶೀಲ ಬಾಲಕರಿದ್ದರೆ, ಫೇಸ್ ಬುಕ್ ಮತ್ತು ಯೂ-ಟ್ಯೂಬ್ ಗುಂಪುಗಳಲ್ಲಿ ಸಾವಿರಾರು ಹಿಂ-ಬಾಲಕರಿದ್ದಾರೆ.

ಎಲ್ಲರಿಗೂ ಇಲ್ಲಿ ಸ್ವಾಗತ!

ಹೊಯ್ಸಳ ಬಾಲವನದಲ್ಲಿ ಪ್ರತಿದಿನ ಅನೇಕ ಆನ್ ಲೈನ್ ಸೆಷನ್ ಗಳು ನಡೆಯುತ್ತವೆ. ಮಾತುಕತೆಗಳು ಕನ್ನಡ ಮತ್ತು ಇಂಗ್ಲಿಷಿನಲ್ಲಿ ಕೂಡ. ಕನ್ನಡ ಕಲಿಕೆ, ಕರ್ನಾಟಕ ಭಾರತ ಇತಿಹಾಸ, ಪ್ರವಾಸ ಅನುಭವ, ಕಾಮಿಕ್ಸ್, ಗಣಿತ, ಕಂಪ್ಯೂಟರ್ ಕೋಡಿಂಗ್, ಚಲನಚಿತ್ರಗಳು, ಸಂಗೀತ ಅಲ್ಲದೆ ನಿಮಗೆ ಆಸಕ್ತಿ ಇರುವ ಯಾವುದೇ ವಿಷಯವೂ ಇಲ್ಲಿ ಪ್ರಸ್ತುತ. ಕರ್ನಾಟಕ ಸರಕಾರ, ಭಾರತೀಯ ವಿದ್ಯಾಭವನ, ಕೇಂದ್ರೀಯ (೧-೧೦ ತರಗತಿಗಳ ಪಠ್ಯ) ಪುಸ್ತಕಗಳನ್ನು ನುಡಿ ಮತ್ತು ಸಂಸ್ಕೃತಿಗಳ ಕಲಿಕೆಗೆ ಇಲ್ಲಿ ಬಳಸಿಕೊಳ್ಳುತ್ತಿದೆ.

ಇಕೋ, ಹೆಚ್ಚಿನ ಮಾಹಿತಿಗಾಗಿ ಮತ್ತು ಸೇರಿಕೊಳ್ಳಲು ಇಲ್ಲಿವೆ ಕೊಂಡಿಗಳು:

ಯೂ ಟ್ಯೂಬ್: https://www.youtube.com/HoysalaBalavana

ಫೇಸ್ ಬುಕ್ : https://www.facebook.com/groups/hoysalabalavana

ವಾಟ್ಸ್ಯಾಪ್: https://chat.whatsapp.com/Hy5tivxeqcvGavpQ0AU70m

*** ಕೂಡೆ ಸಲಹಲಿ; ಕೂಡೆ ಸವಿಯುತ 🔊


ತಾಗುಲಿ : hoysala balavana, sreedhar rajanna, vishweshwar dixit, Raghu Dixit, T.S. Nagabharana, Kannada Learning

Awesome introduction Vish avare and really no words to appreciate Sridhar’s infinite energy and enthu in conducting various daily programs . He has so much content and knowledge 👏👏👌

ವಿಶ್
ಬಹಳ ಸುಂದರವಾಗಿ ಬರೆದಿರುವ ಶ್ರೀಧರ್ ರವರ ಕನ್ನಡ ಕಲಿಕೆಯ ಸಾದನೆಯ ಸಂದೇಶ. ಇವರ ಚುರುಕಾದ ಕ್ರಿಯಾಶಕ್ತಿ, ಹೊಂದಾಣಿಕೆ ಹಾಗೂ ಮಕ್ಕಳೊಡನೆ ನಡೆಸುವ ಸಂಘಶ್ರ ಹಾಗೂ ಸಬಲೀಕರಣ ತಿಳಿಸುವ ಉದ್ದೇಶದ ಈ ಬರಹ ನಿಜವಾಗಿಯೂ ಶ್ಲಾಘನೀಯ.

ನಾನು ಸ್ವತಃ ೧೫ ವರ್ಷಕ್ಕೂ ಮೀರಿ ನಮ್ಮ Irvine ಕನ್ನಡ ಕಲಿಯ ಶಾಲೆಯಲ್ಲಿ ಒಟ್ಟಾಗಿ ಶ್ರೀಧರ ಒಡನೆ ಕೆಲಸ ಮಾಡಿದ್ದೇನೆ. ಶ್ರೀಧರ ಅವರ ಈ ಸಾಧನೆ ಎರಡು ಮಾತಿನಲ್ಲಿ ಹೇಳುವುದಾದರೆ - ಒಂದು ಹಲಸಿನ ಗಿಡ ರಸವತ್ತಾದ ಹಣ್ಣು ನೀಡಲು ಸುಮಾರು ೬ ವರ್ಷಗಳ ಸತತ ಪೋಷಣೆ ಬೇಕಂತೆ. ಆದರೆ ಕೇವಲ ೬ ವಾರಗಳಲ್ಲೆ ಎಲ್ಲರನ್ನೂ ಒಗ್ಗೂಡಿಸಿ ಈ ಎಲ್ಲ ಸಾಧನೆ ಮಾಡಿರುವ ಶ್ರೀಧರ ರವರಿಗೆ ನನ್ನಿಂದ ಒಂದು ಚಪ್ಪಾಳೆ..

Excellent article and not even a bit of exaggeration about a Balava or Sridhara Rajanna. "aadu muttada soppilla" anno haage, Balavana discusses anything and everything...whether it is religion/technology/movies/travel under the leadership of Sridhara Rajanna. Best wishes to Balavana.