ಉತ್ತರ, ಚಳಿಯಿಂದ ತತ್ತರ

ಸಂಪೂರ್ಣ ಉತ್ತರಭಾರತ ಚಳಿಯಿಂದ ತತ್ತರಿಸಿ ಹೋಗಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಚಳಿಯಿಂದ ಮರಣ ಹೊಂದಿದವರ ಸಂಖ್ಯೆ ೧೨೫ ಕ್ಕೆ ತಲುಪಿರುವುದು. ಜನವರಿ ೧೫ ರವರೆಗೆ ರಾಜ್ಯ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದು. ರೈಲುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಕೆಲವೊಂದು ರೈಲುಗಳು ರದ್ದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿರುವರು.


ಉತ್ತರ, ಚಳಿಯಿಂದ ತತ್ತರ

*** ವಿವೇಕ ಬೆಟ್ಕುಳಿ
ಲಕ್ನೋ : ಸಂಪೂರ್ಣ ಉತ್ತರಭಾರತ ಚಳಿಯಿಂದ ತತ್ತರಿಸಿ ಹೋಗಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಚಳಿಯಿಂದ ಮರಣ ಹೊಂದಿದವರ ಸಂಖ್ಯೆ ೧೨೫ ಕ್ಕೆ ತಲುಪಿರುವುದು. ಜನವರಿ ೧೫ ರವರೆಗೆ ರಾಜ್ಯ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದು. ರೈಲುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಕೆಲವೊಂದು ರೈಲುಗಳು ರದ್ದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿರುವರು.

ಉತ್ತರ ಪ್ರದೇಶ ರಾಜಧಾನಿ ಲಕ್ನೋ ಕಳೆದ ನಾಲ್ಕು ದಿನಗಳಿಂದ ಸೂರ್ಯ ಬಂದಿಲ್ಲ. ಆದರೂ ಲಕ್ನೋದಲ್ಲಿ ಬೀದಿ ಬೀದಿಯಲ್ಲಿ ಮೊಟ್ಟೆ, ಆಮ್ಲೇಟ್ ವ್ಯಾಪಾರ ಬಹು ಜೋರಾಗಿದೆ. ಮುಖ್ಯ ಬೀದಿಯಲ್ಲಿ ಚಳಿಗಾಲಕ್ಕಾಗಿ ಪ್ರಾರಂಭವಾದ ಕಾನಪುರ ಶೂ, ಲುದಿಯಾನ್ ಉಲನ್ ಬಟ್ಟೆಗಳ ಅಂಗಡಿಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿದೆ. ಬೀದಿಗಳಲ್ಲಿ ಓಡಾಡುವ ಹೆಚ್ಚಿನ ಜನರು ಜರ್ಕಿನ, ಶೂ ಧರಿಸಿದವರಾಗಿರುವರು. ಮುಖ್ಯವಾಗಿ ಒಂದು ವ್ಯಕ್ತಿಯ ಮೈಯಲ್ಲಿ ಈಗ ಇರುವ ಬಟ್ಟೆಗಳು ಯಾವ ಸಂದರ್ಭದಲ್ಲಿಯೂ ಇರಲಾರದು ಅನಿಸುತ್ತದೆ. ಬನಿಯನ್, ನಿಕರ್, ಇನರ್ ಥರ್ಮಲ್ (ಚಳಿಗಾಗಿ ಧರಿಸುವ ಟೈಟ್ ೩/೪ ಪ್ಯಾಂಟ್ ಮತ್ತು ಪುಲ್ ಶರ್ಟ್ ) ಅದರ ಮೇಲೆ ಪುಲ್ ಶರ್ಟ್, ಪ್ಯಾಂಟ್, ಅದರ ಮೇಲೆ ಸ್ವೇಟರ್, ಸ್ವೇಟರ ಮೇಲೆ ಜರ್ಕಿನ್. ಕಾಲಲ್ಲಿ ಸಾಕ್ಸ್ ಮತ್ತು ಶೂ, ತಲೆಗೆ ಕಿವಿ ಮುಚ್ಚುವ ಟೋಪಿ, ಮತ್ತು ಮಫ್ಲರ್, ಕೈಗೆ ಹ್ಯಾಂಡ ಗ್ಲೌಸ್ ಇಷ್ಟು ಸಾಮಗ್ರಿಗಳು ಸರಾಸರಿಯಾಗಿ ಮೈಮೇಲೆ ಇದ್ದೇ ಇರುವವು.

ಇನ್ನು, ಮನೆಗಳಲ್ಲಿ ರೂಂ ಹೀಟರ್(ಗ್ಲೋಬರ್) ಕಡ್ಡಾಯ ಆಗಿರುವುದು. ಕಳೆದ ಮೂರು ದಿನಗಳಲ್ಲಿ ಲಕ್ನೋದ ಯಾವ ಅಂಗಡಿಯಲ್ಲಿಯೂ ರೂಂ ಹೀಟರ್ ಸಿಗುತ್ತಿಲ್ಲ. ಗೀಸರ್, ಹೀಟರ್, ರೂಂ ಹೀಟರ್, ಥರ್ಮಾಸ ಪ್ಲಾಸ್ಕ್ ಇವುಗಳು ಹೆಚ್ಚು ವ್ಯಾಪಾರವಾಗುತ್ತಿದೆ ಹೇಳಿದ್ದೇ ಬೆಲೆ ಎಂಬುವಂತೆ ಆಗಿರುವುದು.

ಸಂಜೆ ಹೊತ್ತಿಗೆ ಮೊಟ್ಟೆ ವ್ಯಾಪಾರ ತುಂಬಾ ಜೋರಾಗಿರುವುದು. ೫ ರೂ ಬೇಯಿಸಿದ ಮೊಟ್ಟೆ ಈಗ ೬ ರೂ ಆಗಿರುವುದು. ೧೦ ಇದ್ದ ಆಮ್ಲೇಟ್ ೧೨ ಕ್ಕೆ ಏರಿದೆ. ಬಿಸಿ ಬಿಸಿ ದಾಲ್, ಮತ್ತು ರೋಟಿಯ ವ್ಯಾಪ್ಯಾರ ಜೋರಾಗಿದೆ. ಹೊರೆದ ಶೇಂಗಾ, ಚಿರಮುರಿ ಲಾಡು, ಚಿಕ್ಕಿ, ವಠಾಣಿ, ಇಂತಹ ಬಾಯಾಡಿಸವ ಪದಾರ್ಥಗಳು ಗಲ್ಲಿ ಗಲ್ಲಿಯಲ್ಲಿ ಸಿಗುತ್ತವೆ. ಬನ್ ಮಖನ್ ( ಬ್ರೆಡ್ ನಡುವೆ ಬೆಣ್ಣೆ) ಮತ್ತು ಟೀ, ಬಿಸಿ ಬಿಸಿ ಜಿಲೇಬಿ, ಬ್ರೆಡ್ ಪಕೋಡ್, ಪುರಿ, ತಾಜಾ ಮಾಡಿ ಕೊಡುತ್ತಿರುವುದರಿಂದ ಜನರು ಅಂಗಡಿಗಳ ಮಂದೆ ಸೇರುವರು. ಇಲ್ಲಿ ಚಹಾದಲ್ಲಿ ಶುಂಠಿ ಸೇರಿಸುವುದು ಕಡ್ಡಾಯವಾಗಿದೆ. ಈ ಎಲ್ಲದರ ಮಧ್ಯದಲ್ಲಿ ಉಷ್ಣಾಂಶ ೩ ರ ಆಸು ಪಾಸು ಇರುವಾಗಲು ಆಯ್ಸ್ ಕ್ರೀಮ್ ವ್ಯಾಪಾರ ನಿರಂತರವಾಗಿರುವುದನ್ನು ಕಾಣಬಹುದಾಗಿದೆ.

ರಾಜಧಾನಿಯ ತುಂಬಾ ಇರುವ ಸೈಕಲ್ ರಿಕ್ಷಾದವರು ಮಾತ್ರ ಇಂತಹ ಚಳಿಯಲ್ಲಿಯೂ ಅಲ್ಲಲ್ಲಿ ಪ್ರಾಯಾಣಿಕರಿಗೆ ಕಾದು ಬೆಂಕಿ ಕಾಯಿಸುತ್ತಾ ಕುಳಿತಿರುವರು, ಪ್ರಯಾಣಿಕರನ್ನು ಏರಿಸಿಕೊಂಡು ನಡುಗುತ್ತಾ ಸೈಕಲ್ ತುಳಿಯುವರು, ಕೂಲಿ ಮಾಡುವ ಜನರ ದೈನಂದಿನ ಓಡಾಟ ಇವೆಲ್ಲವೂ ಎಂದಿನಂತೆ ಇವೆ. ಆದರೆ ಈ ಹವಾಮಾನದಲ್ಲಿ ಅವರುಗಳು ಪಡುವ ಕಷ್ಟ ಮಾತ್ರ ಬದುಕಿನ ಇನ್ನೊಂದು ಮುಖವನ್ನು ತೋರಿಸುವುದು. ಒಂದು ದಿನ ಸೈಕಲ್ ತುಳಿಯದಿದ್ದರೆ, ಒಂದು ದಿನ ಕೂಲಿಗೆ ಹೋಗದಿದ್ದರೆ ಆ ದಿನ ಮನೆಯಲ್ಲಿ ತಿನ್ನಲು ಏನು ಇಲ್ಲದ ಸ್ಥಿತಿ. ಬಡವರಿಗೆ ಈ ಅನಿವಾರ್ಯತೆಯೆ ಪ್ರಕೃತಿಯ ವಿಕೋಪಕ್ಕೆ ರಕ್ಷಣೆ ಎನ್ನುವಂತಾಗಿದೆ!

ಒಟ್ಟಾರೆ, ಚಳಿಯ ಈ ಅನುಭವವನ್ನು ಪಡೆಯಲು ಈ ಸಂದರ್ಭದಲ್ಲಿ ಒಮ್ಮೆ ಉತ್ತರ ಭಾರತಕ್ಕೆ ಬರುವುದನ್ನು ಮರೆಯಬೇಡಿ.


ತಾಗುಲಿ : Cold in the North, Vivek Betkuli