ಬೆನಕ ನಮನ

ಗಣೇಶ, ಡೊಂಕು ಕೊಂಬಿನ, ಡೊಳ್ಳು ಹೊಟ್ಟೆಯ, ದೊಡ್ಡ ಮೈಯ, ಒಂದೆ ಕೋರೆಯ, ಇಲಿ ವಾಹನದ, ಬೆನಕ, ಎಲ್ಲರಿಗೂ ಆಯಸ್ಸು ಆರೋಗ್ಯಗಳನ್ನು ನೀಡು; ಸದ್ಬುದ್ಧಿಯನ್ನು  ಕೊಡು; ಅವರ ಪ್ರಯತ್ನಗಳಿಗೆ ಬರುವ ಎಡರುಗಳನ್ನು ಅಳಿಸು;
ಯಶಸ್ಸು ಅವರದಾಗಲಿ. ಎಲ್ಲ ಜನ ಜೀವಿ, ಜೀವ ಜಂತು, ಜೀವಾತ್ಮರುಗಳಿಗೆ ಶಾಂತಿ ಸುಖ ದೊರಕಲಿ. ಎಲ್ಲರಿಗೂ  ಒಳ್ಳೆಯದಾಗಲಿ;
ಮಾನವ್ಯ ಬೆಳೆಯಲಿ; ಮಾನವೀಯತೆ ಬೆಳಗಲಿ!

ಈಗ ಶ್ರೀ ಶಂಕರ ಭಗವತ್ಪಾದರ ಮಾತಿನಲ್ಲಿ[*] ಬೆನಕನಿಗೆ ನಮಿಸೋಣ


ಬೆನಕ ನಮನ

ಹಿಗ್ಗಿನಿಂದ ಕಡುಬು ಹಿಡಿದು ಕಡೆಯ ಬಿಡುತೆ ಒಡನೆ ಕೊಡುವ,
ಉಬ್ಬಿನಿಂದ ತಿಂಗಳೊಡವೆ ಮುಡಿದು ಇಡಿಯ ಜಗವ ಹೊರೆವ,
ಆನೆ  ಮೊಗದ ಅಸುರನಳಿದ, ಒಡೆಯರಿಲ್ಲದವರಿಗೊಡೆಯ,
ಬಗ್ಗಿದವರ ಕೆಡಕು ಕಳೆವ, ಬೆನಕ, ನಿನಗೆ ನಾ ಮಣಿಯುವೆ. [೧]

ಬಗ್ಗದವರಿಗುಗ್ರ ನೀನು, ಹುಟ್ಟು ರವಿಯ ಹೊಳಪಿನವನು;
ಅಸುರ ಸುರರ ಹೊರಳಿ ಮಣಿವ, ಮಣಿಯೆ ತೊಳಲುಗಳನು ಅಳಿವ,
ಸುರರ ಎರೆಯ, ಸಿರಿಯ ಎರೆಯ, ಕರಿಗಳೆರೆಯ, ಗಣಗಳೆರೆಯ,
ಹಿರಿಯ ಎರೆಯ, ಪರಕು ಪರನೆ, ನಿನ್ನ ಮೊರೆಯ ನಾ  ಹೊಗುವೆನು. [೨]

ಇಡಿಯ ಜಗಕೆ ಸೊಗವನೀವ, ಆನೆ-ಅಸುರನನ್ನು ಅಳಿದ,
ದೊಡ್ಡ ಡೊಳ್ಳು ಹೊಟ್ಟೆಯುಳ್ಳ, ಆನೆ ಮೊಗದ, ಅಳಿವು ಇರದ,
ಕ್ಷಮಿಸಿ ತಪ್ಪು ಕರುಣೆ ಎರೆವ, ಗೆಲುವನಿತ್ತು ನಲಿವು ತರುವ,
ಮಣಿಯೆ ಮನಸು ಹಸನುಗೊಳಿಪ, ಹೊಳಪ, ನಿನಗೆ ನಾ ಮಣಿಯುವೆ. [೩]

ಉರಗಗಳನು ಧರಿಸಿ ಮೆರೆವ, ಮದಿತ ಇಭದ ಭೀಮ ಬಲದ,
ಪ್ರಳಯದಲ್ಲಿ ಅಳುಕುಗೊಳಿಪ, ಅಸುರ ಗರುವ ಕರಕುಗೊಳಿಪ,
ಅಳಿವು ಇರದ ನುಡಿಗೆ ನೆಲೆಯೆ, ಗಿರಿಜೆ ಹರರ ಹಿರಿಯ ಮಗನೆ,
ಬಡವನಳಲು ಬಿಡದೆ ಅಳಿವ, ಹಳಬ, ನಿನ್ನ ನಾ ಭಜಿಸುವೆ. [೪]

ಉರುವ ಮೆರುಗು ನಿಗ್ಗಮುಳ್ಳ, ಮರಣ ಮುಗಿಸಿದವನ ಅಣುಗ,
ತಿಳಿವಿನಳವಿನೊಳಗೆ ಸಿಗದ, ತೊಡಕು ಬಿಡಿಸಿ ಎಡರು ಕಳೆವ,
ಯೋಗಿಜನಗಳೆದೆಯ ಒಳಗೆ ನೆಲೆತು ತಿಳಿವು ಬೀರುತಿರುವ,
ಒಂದೆ  ಕೋರೆಯುಳ್ಳ, ಒಬ್ಬ, ಬಿಡದೆ ನಿನ್ನ ನಾ ನೆನೆಯುವೆ [೫]

ಸಂಸ್ಕೃತ ಮೂಲ :ಗಣೇಶ ಪಂಚರತ್ನ, ಆದಿ ಶಂಕರ

ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಂ
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಂ
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಂ [ ೧ ]

ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಂ
ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ [ ೨ ]

ಸಮಸ್ತ ಲೋಕ ಶಂಕರಂ ನಿರಸ್ತ ದೈತ್ಯ ಕುಂಜರಂ
ದರೇತರೋದರಂ ವರಂ ವರೇಭ ವಕ್ತ್ರಮಕ್ಷರಂ
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಂ [ ೩ ]

ಅಕಿಂಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಂ
ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಂ
ಪ್ರಪಂಚ ನಾಶ ಭೀಷಣಂ ಧನಂಜಯಾದಿ ಭೂಷಣಂ
ಕಪೋಲ ದಾನವಾರಣಂ ಭಜೇ ಪುರಾಣ ವಾರಣಂ [ ೪ ]

ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ
ಅಚಿಂತ್ಯ ರೂಪಮಂತಹೀನಮಂತರಾಯ ಕೃಂತನಂ
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇಕಮೇವ ಚಿಂತಯಾಮಿ ಸಂತತಂ [ ೫ ]

------
ನಿಮ್ಮವನೆ ಆದ,
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ, ಬಿತ್ತರಿಕೆ ಅಗಸ್ಟ ೩೧, ೨೦೨೨


ತಾಗುಲಿ :  Shankara, Ganesha, pancharatna