ಶಂಖಣ್ಣನ ಹಣೆಬರಹ

ಚೆನ್ನುಡಿ

ಶಂಖಣ್ಣನ ಹಣೆಬರಹ

ಯಾವ ಮನೆತನದಲ್ಲಿ ಹುಟ್ಟಿದರೇನು? ಏನು ಕಲಿತರೇನು? ಏನು ಮಾಡಿದರೇನು?
ಮುಂದೆ ಏನಾಗುವುದು? ಎಲ್ಲವೂ ಹಣೆಬರಹ ಎಂದುಕೊಳ್ಳುವುದು ಸಾಮಾನ್ಯ. ವಿಶೇಷವಾಗಿ, ನಿರೀಕ್ಷಿಸಿದ್ದು ಆಗದಿದ್ದಾಗ, ಕೆಲವರಿಗೆ ಸಿರಿ, ಸಂಪತ್ತು, ಸೌಲಭ್ಯ, ಖ್ಯಾತಿ, ಹೀಗೆಲ್ಲ, ಪಾತ್ರರಿದ್ದರೂ ಸಿಗದಿದ್ದಾಗ, ಅಥವ ಅಪಾತ್ರರಿದ್ದರೂ ಅನಾಯಾಸವಾಗಿ ಸಿಕ್ಕಾಗ ಅಂದುಕೊಳ್ಳುವುದು ಹಣೆಬರಹ, ದೈವ, ಭಾಗ್ಯ, ಲಕ್ಕು, ಅಂತ! ಇದು ನಿಜವೋ, ಕೇವಲ ಸಮಾಧಾನಕ್ಕೋಸ್ಕರ ಹೇಳಿಕೊಳ್ಳುವ ಮಾತೋ? ಅಂತೂ ಒಂದಾನೊಂದು ಸಂದರ್ಭದಲ್ಲಿ ನಿಮಗೂ ಹೀಗೆ ಅನಿಸಿರಬಹುದು. ಎಲ್ಲವನ್ನೂ ಆದಂತೆ ಒಪ್ಪಿಕೊಂಡು ಕೂಡುವ ಜಾಯಮಾನ ಚಾಣಕ್ಯನದು ಅಲ್ಲ ಆದರೂ ಅವನು ಹೇಳಿದ್ದು ಹೀಗೆ:

ದೇವ ದಾನವರು ಕೂಡಿ ಸಮುದ್ರಮಂಥನ ಮಾಡಿದಾಗ, ಅಮೃತಕ್ಕಿಂತ ಮೊದಲು ನವರತ್ನಗಳು, ಕಲ್ಪವೃಕ್ಷ, ಕಾಮಧೇನು. ಹೊರಬಂದವು; ವಾರುಣಿ ಅಪ್ಸರೆಯರು ಬಂದರು; ಲಕ್ಷ್ಮಿಯೂ ಉದಿಸಿದಳು; ಶಂಖ ಕೂಡ ಹುಟ್ಟಿದ್ದು ಸಮುದ್ರದಲ್ಲೆ. ಅಂದರೆ ಅಕ್ಕ ಲಕ್ಷ್ಮಿಗೂ ಅಣ್ಣ ಶಂಖನಿಗೂ ಸಮುದ್ರರಾಜನೇ ಅಪ್ಪ!


ಚಾಣಕ್ಯ ನೀತಿಯ, ೧೭ನೆ ಅಧ್ಯಾಯದ ಚೆನ್ನುಡಿ ೫:
 

ಪಿತಾ ರತ್ನಾಕರೋ ಯಸ್ಯ, 
   ಲಕ್ಷ್ಮೀರ್ಯಸ್ಯ ಸಹೋದರೀ,
ಶಂಖೋ ಭಿಕ್ಷಾಟನಂ ಕುರ್ಯಾತ್‌ - 
   ಫಲಂ ಭಾಗ್ಯಾನುಸಾರತಃ!

ರತ್ನಗಳ ಆಕರವೆ ಆದ ಸಮುದ್ರರಾಜನೆ ಅಪ್ಪ; ಸಿರಿಯೆ ತಾನಾದ ಲಕ್ಷ್ಮಿಯೆ ತನ್ನ ಅಕ್ಕ. ಆದರೂ, ಈ ಶಂಖಣ್ಣ, "ಭವತಿ, ಬಿಕ್ಷಾಂದೇಹಿ!" ಅಂತ ಮನೆ ಮನೆ ತಿರುಗುತ್ತಾನಲ್ಲ! ಅವನ ಹಣೆಬರಹ!

ಕಡಲರಸನೇ ತನ್ನ ಅಪ್ಪ , 
   ಸಿರಿಯಕ್ಕ ತನ್ನ ಒಡಹುಟ್ಟು ; 
ಆದರೂ ತಿರಿವ ಶಂಖಣ್ಣ !
   ಅವರವರ ಹಣೆಬರಹ ಎಲ್ಲ! 

ಆದರೆ ಇದೇ ಚೆನ್ನುಡಿಯ ಇನ್ನೊಂದು ಪಾಠಾಂತರ ಹೀಗಿದೆ:

ಪಿತಾ ರತ್ನಾಕರೋ ಯಸ್ಯ, 
   ಲಕ್ಷ್ಮೀರ್ಯಸ್ಯ ಸಹೋದರೀ, 
ಶಂಖೋ ಭಿಕ್ಷಾಟನಂ ಕುರ್ಯಾತ್‌ - 
  ನ ದತ್ತಮುಪತಿಷ್ಠತೇ! 

ಕಡಲರಸನೇ ತನ್ನ ಅಪ್ಪ , 
   ಸಿರಿಯಕ್ಕ ತನ್ನ ಒಡಹುಟ್ಟು ;
ಆದರೂ ತಿರಿವ ಶಂಖಣ್ಣ !
   ಕೊಡದೆಯೇ ಪಡೆಯುವುದು ಎಂತು? 

ಇದರಲ್ಲಿ ಕೊನೆಯ ಒಂದು ಸಾಲು ಮಾತ್ರ ಬೇರೆ ಆಗಿದೆ. ಬಹಳ ಅರ್ಥಗರ್ಭಿತವಾಗಿದೆ.

ಮೊದಲನೆ ಚೆನ್ನುಡಿಯಲ್ಲಿ‌, ಎಲ್ಲವೂ ಹಣೆಬರಹ ಎಂದು ಕೈಚಾಚಿ ಕುಳಿತದ್ದಾದರೆ, ಎರಡನೆಯದರಲ್ಲಿ, "ಕೊಡದೆಯೆ ಪಡೆಯುವುದು ಹೇಗೆ?" ಎಂದು ಕೇಳುತ್ತಾನೆ ಚಾಣಕ್ಯ.

ಇಲ್ಲಿ "ಕೊಡದೆಯೇ " ಅಂದರೆ, ಬರಿ ದಾನ ಕೊಡದೆ ಅಂತ ಅಲ್ಲ, ಪಾಪ-ಪುಣ್ಯ ಅಂತ ಪರಲೋಕದ ಚಿಂತೆಯೂ ಅಲ್ಲ. ಇಲ್ಲಿ, ಇಹಲೋಕದಲ್ಲಿ, ನಿಮ್ಮನ್ನು ನೀವು ಅರ್ಪಿಸಿಕೊಳ್ಳದೆ, ಪೂರ್ತಿ ತೊಡಗಿಸಿಕೊಳ್ಳದೆ, invest ಮಾಡದೆ, ಶಕ್ತಿಯನ್ನು ವ್ಯಯಿಸದೆ ಜೀವನದಲ್ಲಿ ಏನೂ ದೊರೆಯುವುದಿಲ್ಲ, ಏನನ್ನೂ ಸಾಧಿಸಲು ಆಗುವುದಿಲ್ಲ. ಬಿತ್ತದೇ ಬೆಳೆ ಬರುವುದು ಉಂಟೆ? No action, No reaction! 

ಅದಕ್ಕೆ, ಹಣೆಬರಹ ಹಣೆಯಲ್ಲೆ ಇರಲಿ. ಬದುಕು ಕೈಯಲ್ಲಿದೆ. ಕೈ ಕೆಸರಾದರೆ ಬಾಯ್‌ ಮೊಸರು! ಇಲ್ಲವಾದರೆ, ಇಂದೋ ನಾಳೆಯೋ, ಶಂಖಣ್ಣನ ಜೊತೆಗೆ ತಿರುಪೆ ಎತ್ತುತ್ತ ತಿರುಗುವುದೆ ಗತಿ.

ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ

ಕನ್ನಡ ಕಲಿ, ಬಿತ್ತರಿಕೆ, 
ಶಂಖಣ್ಣನ ಹಣೆಬರಹ
ಸಂಗೀತ : ಶ್ರೀಮತಿ ವಾಣಿ ಯದುನಂದನ
December 5,2022

0:00     ಪೀಠಿಕೆ
1:38    ಚೆನ್ನುಡಿ ೧ - ಅವರವರ ಹಣೆಬರಹ ಎಲ್ಲ
3:07     ಚೆನ್ನುಡಿ ೨ - ಕೊಡದೆಯೇ ಪಡೆಯುವುದು ಎಂತು?
5:12     Credits

https://youtu.be/V-sZY-x9_qs
https://anchor.fm/kannadakali/episodes/--akhaana-haebaraha-e1roggk


ತಾಗುಲಿ: chennudi, chanakya, samudra manthana, fate, destiny, lakshmi, shankha