ಚಾತಕ - ಕವಿಸಮಯ

ಚೆನ್ನುಡಿ

ಚಾತಕ - ಕವಿಸಮಯ

ಚಾತಕ, Clamator jacobinus, Jacobin cuckoo , pied cuckoo or pied crested cuckoo ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟ, ಒಂದು ಕೋಗಿಲ ಜಾತಿಯ ಪಕ್ಷಿ. ಇದಕ್ಕೆ ಶಾರಂಗ,  ಮಾತಂಗ,  ಸ್ತೋಕಕ ಎಂದು ಕೂಡ ಹೆಸರುಗಳು ಇವೆ.

ಸ್ತೋಕ  ಅಂದರೆ ಕಣ , ಹನಿ. ಮಳೆಯ ಹನಿಗಳನ್ನು ಮಾತ್ರ, ನೇರವಾಗಿ,  ಕುಡಿದು ಬದುಕುವ ಪಕ್ಷಿ ಸ್ತೋಕಕ, ಚಾತಕ . ಅದರಲ್ಲೂ, ಸ್ವಾತಿ ನಕ್ಷತ್ರದ ಮಳೆಗಾಗಿ ಹಾತೊರೆಯುತ್ತ, ಒಂಟಿ ಕಾಲಿನ ಮೇಲೆ, ಬಾಯ್ತೆರೆದು, ವರ್ಷವಿಡೀ ನಿಂತುಕೊಳ್ಳುವ ಪಕ್ಷಿ. ಇದೊಂದು ಕವಿಸಮಯ. ಕವಿ ಕಾಳಿದಾಸ ತನ್ನ ಮೇಘದೂತದಲ್ಲಿ ಯಕ್ಷ-ಯಕ್ಷಿಯರ ಪ್ರೇಮದ ಹಂಬಲಿಕೆಯ ರೂಪಕವಾಗಿ ಇದನ್ನು ಬಳಸಿದ್ದಾನೆ. ಇದು ಇತರ ಕಾವ್ಯಗಳಲ್ಲಿ  ಮುಂದುವೆರೆದು ಜನಜನಿತವಾಗಿದೆ. ಈ ಕವಿಸಮಯದ ಆಧಾರದ ಮೇಲೆ ರಚಿತವಾದ ಮೂರು ಚೆನ್ನುಡಿಗಳು ಹೀಗಿವೆ:


ಚಾತಕ - ಕವಿಸಮಯ

ಮೊದಲನೆಯ ಚೆನ್ನುಡಿ: ಗೆಳತಿ ಚಾತಕಿ - ರೇ ರೇ ಚಾತಕ

ಎಲೆ ಎಲೇ ಗೆಳತಿ ಚಾತಕಿಯೆ, ಚಣವೊಮ್ಮೆ
   ಕಿವಿಗೊಟ್ಟು ನೀ ನನ್ನ ಮಾತೊಂದ ಕೇಳು
ಗಗನದಲಿ ಹಾರುವವು ಮೋಡಗಳು ಬಹಳ
     ಕರಿ ನೀಲಿ ಬಿಳಿ ಬೂದಿ ಹಿರಿ ಕಿರಿದು ತೆರನ
ಮಳೆಗರೆದು ಇಳೆಯನ್ನು ತೋಯಿಸಲು ಕೆಲವು
   ನಗೆ ಮಿಂಚು ಸೂಸಿ ಬರಿ ಗುಡುಗುವವು ಹಲವು
ಕಂಡಕಂಡವರಿಗೆರಗುತ್ತ, ನೀ ಗೆಳತಿ,
   ಮೊರೆ ಇಡುತ ಬೇಡದಿರು, ನಾ ಬಡವಿ, ಎಂದು

ಸಂಸ್ಕೃತ ಮೂಲ: ಭರ್ತೃಹರಿ, ನೀತಿಶತಕ-೪೯

ರೇ ರೇ ಚಾತಕ, ಸಾವಧಾನಮನಸಾ, ಮಿತ್ರ ಕ್ಷಣಂ ಶ್ರೂಯತಾಂ.
   ಅಂಭೋದಾ ಬಹವೋ ಹಿ ಸಂತಿ ಗಗನೇ ಸರ್ವೇಽಪಿ ನೈತಾದೃಶಾಃ ;
ಕೇಚಿದ್ ವೃಷ್ಟಿಭಿರಾರ್ದ್ರಯಂತಿ ವಸುಧಾಂ ಗರ್ಜಂತಿ ಕೇಚಿದ್ ವೃಥಾ ;
   ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ  ಮಾ ಬ್ರೂಹಿ ದೀನಂ ವಚಃ.

ಎರಡನೆಯ ಚೆನ್ನುಡಿ: ಹಕ್ಕಿ ಚಾತಕಕೆ - ಏಕ ಏವ ಖಗ

ಹಕ್ಕಿ ಚಾತಕಕೆ ಬಲು ಹೆಮ್ಮೆ,
   ಮಳೆಯ ನೀರೇ ಬೇಕು ಸೊಗಕೆ;
ಬೇಡುವುದು ಘನರಾಜನನ್ನೆ:
   ಕೀಳ್ಜನಕೆ ಬಾಯ್ತೆರೆಯಲೇಕೆ?

ಸಂಸ್ಕೃತ ಮೂಲ: ಶ್ರೀಧರದಾಸನ ಸದುಕ್ತಿ ಕರ್ಣಾಮೃತ

ಏಕ ಏವ ಖಗೋ ಮಾನೀ 
   ಸುಖಂ ಜೀವತಿ ಚಾತಕಃ;
ಅರ್ಥಿತ್ವಂ  ಯಾತಿ ಶಕ್ತಸ್ಯ
   ನ ನೀಚಮುಪಸರ್ಪತಿ.

ಮೂರನೆಯ ಚೆನ್ನುಡಿ - ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್

ಮೂರು ಯಾ ನಾಲ್ಕು ಹನಿ ನೀರು ನೀಡೆಂದು 
   ಚಾತಕವು ಬಾಯ್ದೆರೆದು ಬೇಡಲಾ ಮುಗಿಲು
ಮಳೆಗರೆದು ತುಂಬಿಸಿತು ಇಡಿಯ ಇಳೆಯನ್ನು:
   ದೊಡ್ಡವರ ಔದಾರ್ಯಕಿದೆಯೆ ಇತಿಮಿತಿಯು!

ಸಂಸ್ಕೃತ ಮೂಲ: ಪೂರ್ವಜಾತಕಾಷ್ಟಕಂ

ಚಾತಕಸ್ತ್ರಿಚತುರಾನ್ ಪಯಃ ಕಣಾನ್ 
   ಯಾಚತೇ ಜಲಧರಂ ಪಿಪಾಸಯಾ;
ಸೋಽಪಿ  ಪೂರಯತಿ ವಿಶ್ವಮಂಭಸಾ :
   ಹಂತ ಹಂತ ಮಹತಾಮುದಾರತಾ!


ತಾಗುಲಿ: chennudi, chataka, kalidasa, bhartrihari, kavi samaya