ಕತೆ: ಸೇನಾನಿ

ಕತೆ: ಸೇನಾನಿ

*** ಗೋಪೀನಾಥ ರಾವ್

ಎಲ್ಲರ ಜೀವನದಲ್ಲೂ ಕೆಲವು ಏರುಪೇರುಗಳಾಗುತ್ತವೆ. ನೀವೇನು ತಿಳಿಯದವರಲ್ಲ. ಕೊನೆತನಕ ಹೋರಾಡುತ್ತೇನೆ ಎನ್ನುವವ ಮಾತ್ರ ಸೈನಿಕ. ನಾನು ಗೆಲ್ಲತ್ತೇನೆ ಎನ್ನುವುದು ಬಿಟ್ಟು ಬೇರೇನನ್ನೂ ಚಿಂತಿಸದೆ ಇರುವುದಕ್ಕೆ ಆತನಿಗೆ ಮಾತ್ರ ಸಾಧ್ಯ. ನೀವು ಗೆಲ್ಲುತ್ತೀರಿ.

ಹೋರಾಟವಾದರೂ ಯಾರೊಡನೆ? ಸೇನಾನಿ ಗುರು ಸಾರ್ ಗೆಲ್ಲುತ್ತಾರಾ? ಗೆದ್ದರಾ? ಮಾನವೀಯ ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ನವಿರಾಗಿ ಕತೆ ಹೆಣೆದಿದ್ದಾರೆ ಗೋಪೀನಾಥ ರಾವ್. ಸೇನಾನಿ ಗುರು ಸಾರ್ ಗೆಲ್ಲುತ್ತಾರಾ? ಗೆದ್ದರಾ? ಮುಂದೆ ಓದಿ.

ಗೇಟಿನಲ್ಲಿ ಬೋರ್ಡಿಂಗ್ ಪಾಸ್ ತೋರಿಸಿ ವಿಮಾನದ ಒಳಗೆ ಬಂದರು ಮಂಜು. ಸುತ್ತೆಲ್ಲ ಹೆಚ್ಚಾಗಿ ರಜೆ ಮುಗಿಸಿ ಅಮೆರಿಕಕ್ಕೆ ವಾಪಸ್ ಹೋಗುತ್ತಿರುವ ಪ್ರಯಾಣಿಕರು. ಮೊದಲ ಬಾರಿಗೆ ಉನ್ನತ ವ್ಯಾಸಂಗಕ್ಕೋ ಉದ್ಯೋಗಕ್ಕೋ ಅಮೆರಿಕಕ್ಕೆ ಪ್ರಯಾಣಿಸುವ ಉತ್ಸಾಹದಲ್ಲಿದ್ದ ಯುವಕ ಯುವತಿಯರು. ಮಕ್ಕಳ ಕರೆಯ ಮೇರೆಗೆ ಅಮೆರಿಕಾ ಸುತ್ತಿಬರಲು ಹೊರಟ ಹಿರಿಯ ದಂಪತಿಗಳು. ಮಂಜುವಿನಂತೆಯೇ ಬೆಂಗಳೂರಿನಿಂದ ಹೊರಟು ದುಬೈಯಲ್ಲಿ ವಿಮಾನ ಬದಲಿಸಿದ್ದ ಎಲ್ಲ ಪ್ರಯಾಣಿಕರೂ ಅಮೆರಿಕಾಕ್ಕೆ ಹಾರಲು ಸಿದ್ಧವಾಗಿ ನಿಂತಿದ್ದ ಬೃಹತ್ ವಿಮಾನವನ್ನೇರಿದ್ದರು. ದುಬೈಯಲ್ಲಿ ಇನ್ನಿತರ ಪ್ರಯಾಣಿಕರು ಹತ್ತಿಕೊಂಡಿದ್ದರೂ ಬೆಂಗಳೂರೇ ಅಮೆರಿಕಾಕ್ಕೆ ಹೊರಟಿದೆಯೇನೋ ಅನ್ನಿಸುತ್ತಿತ್ತು. ಇನ್ನೀಗ ಹದಿನೆಂಟು ಗಂಟೆಗಳ ದೀರ್ಘ ಪ್ರಯಾಣ. ಕಾಲುಚಾಚಿ ಕುಳಿತು ಸ್ವಲ್ಪ ನಿದ್ದೆಮಾಡುವ ಬಯಕೆ ಹೊತ್ತು ಮಂಜು ವಿಮಾನದ ಎಮರ್ಜೆನ್ಸಿ ದ್ವಾರದ ಬಳಿಯ ಸೀಟು ಕೇಳಿ ಪಡೆದುಕೊಂಡಿದ್ದರು. ಆರಡಿ ದೇಹದ ಮಂಜುವಿನಂತಹ ಪ್ರಯಾಣಿಕರಿಗೆ ಇಕಾನಮಿಯಲ್ಲಿ ಹದಿನೆಂಟು ಗಂಟೆಗಳ ಪ್ರಯಾಣ ಅಂದರೆ ಹಿಂಸೆ ಬಿಟ್ಟು ಮತ್ತೇನಲ್ಲ. ಮುಂದಿನ ಬಾರಿ ಬಿಸಿನೆಸ್ ಕ್ಲಾಸಿನಲ್ಲಿ ಬರಬೇಕು ಎಂದು ಪ್ರತಿಬಾರಿ ಆಲೋಚಿಸುವುದೇ ಆಯಿತು ಎಂದು ಮಂಜು ಮತ್ತೊಮ್ಮೆ ತನ್ನ ಅದೃಷ್ಟವನ್ನು ತಾನೇ ಹಂಗಿಸಿ ನಕ್ಕು ಕಣ್ಮುಚ್ಚಿಕೊಂಡರು.

ಆಯತಪ್ಪಿ ತನ್ನ ಮೇಲೆಯೇ ಕುಳಿತುಕೊಂಡರೇನೋ ಎನ್ನುವ ಹಾಗೆ ಪಕ್ಕದ ಸೀಟಿನಲ್ಲಿ ಒಬ್ಬರು ಬಂದು ಕುಳಿತಾಗ ಮಂಜು ಕಣ್ಣುಬಿಟ್ಟರು. ನೋಡಿದರೆ ಬೆಂಗಳೂರಿನಿಂದ ತನ್ನೊಂದಿಗೇ ವಿಮಾನದಲ್ಲಿ ಬಂದಿದ್ದ ಹಿರಿಯರು. ಬೆಂಗಳೂರಿನಿಂದ ಬರುವಾಗ ಎರಡು ಸೀಟು ಹಿಂದೆ ಕುಳಿತಿದ್ದವರು ಈ ಬಾರಿ ಭಡ್ತಿ ಪಡೆದು ತನ್ನ ಪಕ್ಕದ ಸೀಟಿಗೆ ಬಂದಿದ್ದರು. ಕುಳಿತುಕೊಳ್ಳುವಾಗ ಬ್ಯಾಲೆನ್ಸ್ ಸ್ವಲ್ಪ ತಪ್ಪಿ ಸೀಟಿನ ಬದಲು ಮಂಜುವಿನ ಮೇಲೆಯೇ ಅರ್ಧ ಭಾರ ಹಾಕಿದ್ದರು. ಮಂಜು ಅವರೆಡೆಗೆ ನೋಡುತ್ತಲೇ ಅಪರಾಧ ಭಾವದಿಂದ "ಸಾರಿ" ಎಂದರು. ಸಾವರಿಸಿಕೊಂಡು ಸರಿಯಾಗಿ ಕುಳಿತುಕೊಳ್ಳುವಾಗ ಪುನಃ ;"ಸಾರಿ" ಅಂದಾಗ "ಪರವಾಗಿಲ್ಲ ಸಾರ್" ಎನ್ನುತ್ತ ಮಂಜು ಕಣ್ಮುಚ್ಚಿಕೊಂಡರು. ಪಕ್ಕದ ಹಿರಿಯರು ಸುಮ್ಮನೆ ಕುಳಿತಿರದೆ ನೆನಪಾದಂತೆ ತನ್ನ ಒಂದೊಂದೇ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಕಿಸೆಯಿಂದ ಏನನ್ನೋ ತೆಗೆದು ಬ್ಯಾಗಿನಲ್ಲಿಟ್ಟರು. ಬ್ಯಾಗಿನಿಂದೇನೋ ತೆಗೆದು ಕಿಸೆಯಲ್ಲಿಟ್ಟುಕೊಂಡರು. ಸರಿಕಾಣದೆ ಪುನಃ ಬ್ಯಾಗಿನಲ್ಲೇ ಹಾಕಿದರು. ಕನ್ನಡಕ ಶರ್ಟಿನ ತುದಿಯಲ್ಲಿ ಒರಸಿ ಪುನಃ ಧರಿಸಿಕೊಂಡರು. ಅವರ ಚಲನವಲನಕ್ಕೆ ಪ್ರತೀ ಬಾರಿಯೂ ಅವರ ಮೊಣಕೈ ಮಂಜುವಿನ ಶರೀರಕ್ಕೆ ತಾಗುತ್ತಿತ್ತು. ಮಂಜು ಕಣ್ಣು ಬಿಟ್ಟಾಗ ಪುನಃ "ಸಾರಿ" ಅನ್ನುತ್ತಿದ್ದರು. ಮಂಜು ತನ್ನ ಸೀಟಿನಲ್ಲಿ ಸಾಧ್ಯವಾದಷ್ಟೂ ಇನ್ನೊಂದು ಪಕ್ಕಕ್ಕೆ ಸರಿದು ಕುಳಿತುಕೊಂಡರು. ಅದನ್ನು ಕಂಡ ಅವರು ಸ್ವಲ್ಪ ಹೊತ್ತು ಸುಮ್ಮನೆ ಕೂತಿದ್ದರು. ಮಂಜು ಮತ್ತೆ ಕಣ್ಣು ಮುಚ್ಚಿಕೊಂಡರು. ಬಲವಂತಕ್ಕೆ ಕಣ್ಣು ಮುಚ್ಚಿಕೊಂಡರೆ ನಿದ್ದೆ ಎಲ್ಲಿಂದ ಬರಬೇಕು! ಪುನಃ ಕಣ್ಣು ಬಿಟ್ಟಾಗ ಅದನ್ನೇ ಕಾಯುತ್ತಿದ್ದವರಂತೆ "ಮೊದಲನೇ ಬಾರಿಗೆ ವಿಮಾನ ಪ್ರಯಾಣ. ಹಾಗೆ ಸ್ವಲ್ಪ ಇರಿಸುಮುರಿಸು. ಕನ್ನಡದವರೇ ಪಕ್ಕದ ಸೀಟಲ್ಲಿ ಸಿಕ್ಕಿದ್ದು ಒಳ್ಳೆಯದಾಯಿತು" ಎಂದು ಸಣ್ಣ ನಗೆ ಸೇರಿಸುತ್ತ ಹೇಳಿದರಾತ. "ಹೆದರಬೇಕಾದ್ದೇನಿಲ್ಲ ಸರ್. ಹಣ ಮತ್ತು ಪಾಸ್ ಪೋರ್ಟ್ ಜೋಪಾನವಾಗಿಟ್ಟುಕೊಳ್ಳಿ ಅಷ್ಟೆ" ಎಂದರು ಮಂಜು. "ಇಲ್ಲಿ ಕಿಸೆಯಲ್ಲಿದೆ" ಎಂದವರು ಮತ್ತೆ "ವಿಮಾನ ಪ್ರಯಾಣ ಸಿನೆಮಾದಲ್ಲೆಲ್ಲ ನೋಡಿದ್ದೇನೆ, ಆದರೆ ಅಮೆರಿಕಾಗೆ ಹೋಗುವುದು ನೋಡಿ, ನಿಮ್ಮಂಥ ಅನುಭವಸ್ಥರೊಂದಿಗೆ ಇದ್ದರೆ ಮತ್ತೆ ಅಲ್ಲಿ ಅನವಶ್ಯ ಚಡಪಡಿಕೆ ತಪ್ಪಿಸಬಹುದಲ್ಲ" ಅಂದರಾತ. ಮಂಜು ಮಂದಹಾಸ ಬೀರಿ ಸುಮ್ಮನಾದರು.

ವಿಮಾನ ಟೇಕಾಫಿಗೆ ಸಿದ್ಧವಾಗುತ್ತಿದ್ದಂತೆ ಹಿರಿಯರು ಪಟ್ಟಿ ಬಿಗಿದುಕೊಳ್ಳಲು ಹೆಣಗಾಡುತ್ತಿದ್ದರು. ಮಂಜು ಅವರ ಪಟ್ಟಿ ಎಳೆದು ಸಿಕ್ಕಿಸಿದರು. "ಥಾಂಕ್ಸ್" ಅಂದರಾತ. ವಿಮಾನ ಮೆಲ್ಲನೆ ಚಲಿಸಲಾರಂಭಿಸಿತು. ಸೀಟನ್ನು ಗಟ್ಟಿ ಹಿಡಿದುಕೊಂಡು "ವಿಮಾನ ನೆಲ ಬಿಡುವಾಗ ಹೇಳಿ" ಎಂದರಾತ. "ಹೆದರಬೇಡಿ. ಕೈ ಬಿಡಿ, ಹಾಗೇನಾಗುವುದಿಲ್ಲ" ಎಂದರು ಮಂಜು. ವಿಮಾನ ಮೇಲ್ಮುಖವಾಗಿ ಹಾರಲು ಉದ್ಯುಕ್ತವಾಗುತ್ತಿದ್ದಂತೆ "ನೋಡಿ, ಈಗ ನೆಲ ಬಿಡುತ್ತಿದೆ" ಎಂದರು ಮಂಜು. ಆತ ಕಣ್ಮುಚ್ಚಿಕೊಂಡರು. ಭಯವೋ ಭಗವಂತನಿಗೆ ಪ್ರಾರ್ಥನೆಯೋ! ವಿಮಾನ ಆಕಾಶಕ್ಕೆ ಏರುತ್ತಿದ್ದಂತೆ "ಕಿಟಿಕಿಯಲ್ಲಿ ಕೆಳಗೆ ಈಗ ಭೂಮಿಯನ್ನು ನೋಡಬಹುದು ನೀವು" ಅಂದರು ಮಂಜು. ಮುಗುಳ್ನಕ್ಕು ಬಗ್ಗಿ ಸ್ವಲ್ಪ ಹೊತ್ತು ನೋಡಿದ ಆತ ಆಮೇಲೆ ಸರಿ ಕೂತು "ನಿಮ್ಮ ಹೆಸರೇ ಕೇಳಲಿಲ್ಲ ನಾನು. ಏನು ಹೆಸರು?" ಅಂದರು."ಮಂಜು" ಅಂದಾಗ "ಬಹುಶಃ ಮಂಜುನಾಥ ಅಂತಿರಬೇಕು. ಶಾರ್ಟಾಗಿ ಮಂಜು ಅಂತ ಕರೆಯುವುದಿರಬೇಕು ಅಲ್ವಾ.. ಅಥವಾ ಕನ್ನಡದಲ್ಲಿ ಮಂಜು ಎಂದರೆ ಹಿಮ.. ಹಾಗೂ ಇರಬಹುದು ಅದೂ ಒಳ್ಳೆಯ ಹೆಸರೇ" ಎಂದರಾತ. ತನ್ನ ಹೆಸರಿಗೆ ಹೀಗೊಂದು ಅರ್ಥ ಮಂಜುವಿಗೆ ಇದುವರೆಗೂ ಹೊಳೆದೇ ಇರಲಿಲ್ಲ! "ನಿಮ್ಮ ಹೆಸರೇನು ಸರ್?" ಅಂದರು ಮಂಜು. " ನನ್ನ ಹೆಸರಿನಲ್ಲಿ ಸ್ವಾರಸ್ಯ ಇದೆ. ಗುರುಪ್ರಸಾದ ಅಂತ ಹೆಸರು. ಎಲ್ಲರೂ ಗುರು ಅನ್ನೋರು. ಉದ್ಯೋಗ ಶಾಲಾ ಮಾಸ್ತರಿಕೆ. ಮಕ್ಕಳು ತಮಾಷೆಗಾಗಿ ಗುರು ಗುರು ಅನ್ನೋರು. ಬೈಕಿನ ಸದ್ದಿನಂತೆ ಗುರ್.. ಗುರ್.. ಗುರ್.. ಅನ್ನೋರು" ನಕ್ಕು ಹೇಳಿದರಾತ. "ನಿವೃತ್ತಿಯಾಗಿ ಹತ್ತು ವರ್ಷ ಆಗಿಹೋಯಿತು. ವಯಸ್ಸಾದಂತೆ ಹಳೇ ವಿದ್ಯಾರ್ಥಿಗಳೂ ಸೇರಿ ಈಗ ಹೆಚ್ಚಿನ ಎಲ್ಲರೂ ಗುರುಸಾರ್ ಅನ್ನುತ್ತಿದ್ದಾರೆ" ಅಂದರಾತ.

"ನಾನೂ ಹಾಗೇ ಅನ್ನುವವನಿದ್ದೆ. ಅಂದ ಹಾಗೆ ಅಮೆರಿಕಾಕ್ಕೆ ಪ್ರಯಾಣದ ಕಾರಣ ಹೇಳಲಿಲ್ಲ ನೀವು" ಎಂದರು ಮಂಜು. "ಜೀವನದಲ್ಲಿ ಹೀಗೊಂದು ದಿನ ಬರುತ್ತೆ ಎಂದು ನಾನು ಕನಸೂ ಕಂಡಿರಲಿಲ್ಲ. ದೊಡ್ಡ ಕತೆ. ನಿಧಾನವಾಗಿ ಹೇಳ್ತೇನೆ " ಅಂದರಾತ. ಇನ್ನು ಸೀಟು ಬೆಲ್ಟ್ ಬಿಚ್ಚಿಕೊಳ್ಳಬಹುದು ಎಂದು ಸೂಚನೆ ಬಂದಾಗ "ಟೇಕಾಫ್ ಮುಗಿಯಿತು, ಬೇಕಿದ್ದರೆ ಬೆಲ್ಟ್ ಬಿಚ್ಚಿ ಆರಾಮವಾಗಿ ಕುಳಿತುಕೊಳ್ಳಿ" ಎಂದರು ಮಂಜು.

"ನೀವೂ ಲಾಸ್ ಎಂಜಿಲೀಸಾ? ಒಬ್ಬರೆಯಾ?" ಅಂದರಾತ.

ಹೌದೆಂಬಂತೆ ತಲೆಯಾಡಿಸಿದ ಮಂಜು. "ನನ್ನ ಮಡದಿ ಮತ್ತು ಮಕ್ಕಳು ಇನ್ನೂ ಎರಡುವಾರ ಅಜ್ಜನ ಮನೆಯಲ್ಲಿ ಕಳೆದು ಮತ್ತೆ ಬರುತ್ತಾರೆ" ಎಂದ ಮಂಜು " ನಿಮಗೆ ಲಾಸ್ ಎಂಜಲೀಸಲ್ಲಿ ಯಾರಿದ್ದಾರೆ? ಮಗನಾ.. ಮಗಳಾ?" ಕೇಳಿದರು.

"ಮಗ. ನನಗೆ ಇರುವುದು ಒಬ್ಬನೇ ಮಗ. ಅವನಿಗೆ ಆರೋಗ್ಯ ಸರಿಯಿಲ್ಲವಂತೆ. ಅವನ ಸ್ನೇಹಿತರೊಬ್ಬರು ಫೋನ್ ಮಾಡಿ ಹೇಳಿದ್ದಾರೆ. ಮಗನೇ ಫೋನ್ ಮಾಡಿದ್ದರೆ ಏನಾಯಿತು ಎಂದೆಲ್ಲ ವಿವರವಾಗಿ ಕೇಳಬಹುದಿತ್ತು. ಫೋನ್ ಮಾಡಿದ ಅವನ ಸ್ನೇಹಿತರೇನೂ ಹೇಳಲಿಲ್ಲ. ಮಗನಿಗೆ ಫೋನ್ ಮಾಡಲೂ ಸಾಧ್ಯವಿರದ ನಿಶ್ಯಕ್ತಿಯೇ? ಅದೂ ಗೊತ್ತಿಲ್ಲ. ಯಾವ ಸ್ಥಿತಿಯಲ್ಲಿದ್ದಾನೆ ಅಂತಲೂ ಗೊತ್ತಿಲ್ಲ. ಅಪ್ಪನ ಹೃದಯ ನೋಡಿ, ಸುದ್ದಿ ಸಿಕ್ಕಿದ ಮೇಲೆ ನನಗೆ ತಡೆಯಲಾಗಲಿಲ್ಲ. ಎಂಬೆಸಿಯಲ್ಲಿ ವಿಸಾ ಕೊಟ್ಟರು. ಟಿಕೆಟು ಮಾಡಿಸಿ ಹೊರಟು ಬಂದಿದ್ದೇನೆ. " ಕಣ್ಣೊರಸಿಕೊಂಡರು ಆತ.

"ಹೊರಟು ಬಂದಿರಲ್ಲ, ಎಲ್ಲ ಸರಿಹೋಗುತ್ತೆ. ನೀವು ಚಿಂತೆ ಮಾಡಬೇಡಿ" ಸಮಾಧಾನ ಹೇಳಿ "ನಿಮ್ಮ ಮಗನ ಹೆಸರೇನು? ನನಗೆ ಪರಿಚಯವಿದ್ದರೂ ಇರಬಹುದು" ಎಂದರು ಮಂಜು.

"ಕೇಶವ ಅಂತ. ನಿಮಗೆ ಪರಿಚಯವಿರಲಿಕ್ಕಿಲ್ಲ. ಯಾರೊಂದಿಗೂ ಬೆರೆಯುವವನಲ್ಲ. ಅಮೆರಿಕಾ ಸರಿಹೋಗಲಿಕ್ಕಿಲ್ಲ, ಇಲ್ಲೇ ಏನಾದ್ರೂ ಮಾಡಿಕೊಂಡಿರು" ಎಂದಿದ್ದೆ. ನಮ್ಮ ಕುಟುಂಬದಲ್ಲಿ ಯಾರೂ ಅವನ ಹಾಗೆ ಮನೆ ಬಿಟ್ಟು ದೂರ ಹೋದದ್ದಿಲ್ಲ. ಆದರೆ ಆತ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ. ಹೊರಟು ನಿಂತೇ ನನಗೆ ವಿಷಯ ತಿಳಿಸಿದ್ದು. ಕೊನೆಯ ಕ್ಷಣ ಅವನಿಗೆ ನಿರಾಸೆ ಮಾಡುವ ಮನಸ್ಸಾಗದೆ " ಒಳ್ಳೆಯದಾಗಲಿ" ಎಂದು ಹರಸಿಯೇ ಬೀಳ್ಕೊಟ್ಟಿದ್ದೆ. ನನ್ನಲ್ಲಿ ಮಾತೂ ಹೇಳದೆ ಪಾಸುಪೋರ್ಟು ವಿಸಾ ಮತ್ತು ಟಿಕೆಟು ಮಾಡಿಸಿದ್ದ ಎಂಬುದು ತಿಳಿದ ಮೇಲೆ ಅವನನ್ನು ಅವನ ಪಾಡಿಗೆ ಬಿಟ್ಟುಬಿಡುವುದೇ ಸರಿ ಎಂದನ್ನಿಸಿತ್ತು. ಕೊನೆಗಾಲದಲ್ಲಿ ಮಕ್ಕಳು ನೋಡಿಕೊಳ್ಳುತ್ತಾರೆ ಎಂಬುದು ನಮ್ಮ ನಂಬುಗೆ. ಆದರೆ ಪ್ರತಿಯೊಬ್ಬನ ವಿಚಾರದಲ್ಲೂ ಹಾಗೆಯೇ ಆಗಬೇಕೆಂದೇನೂ ಇಲ್ಲವಲ್ಲ, ನಮ್ಮ ಮಕ್ಕಳು ನಮ್ಮ ಬಳಿ ಇಲ್ಲದಿದ್ದರೆ ಬಳಿಯಿರುವವರನ್ನು ನಮ್ಮಮಕ್ಕಳು ಎಂದುಕೊಂಡರಾಯಿತೆಂದು ನನಗೆ ನಾನೇ ಸಮಾಧಾನ ಹೇಳಿಕೊಂಡಿದ್ದೆ" ಅಂದರಾತ.

"ನಿಮ್ಮಂತಹ ಹಿರಿಯರು ಹಾಗೆಲ್ಲ ಹೇಳಬಾರದು. ನಾನೂ ಅಮೆರಿಕಾದಲ್ಲಿರುವವನು. ಜೀವಮಾನದಲ್ಲಿ ಉನ್ನತ ಸಾಧನೆ ಮಾಡಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತೆ.. ಹಿರಿಯರನ್ನು ಕಡೆಗಣಿಸುವುದಕ್ಕಲ್ಲ. ನಿಮ್ಮ ಅಜ್ಜ ಊರು ಬಿಡಲಿಲ್ಲ, ನಿಮ್ಮಪ್ಪ ಬೆಂಗಳೂರು ನೋಡಲಿಲ್ಲ ನೀವು ಕರ್ನಾಟಕದೊಳಗೂ ಸುತ್ತಲಿಲ್ಲ. ನಿಮ್ಮ ಮಗ ನೋಡಿ, ಅಮೆರಿಕಕ್ಕೆ ಹೋಗಿದ್ದಾನೆ. ಏನೋ ದುರದೃಷ್ಟ. ಆರೋಗ್ಯ ಕೈಕೊಟ್ಟಿತು ಅನ್ನಿಸುತ್ತೆ. ಕೇಶವರೂ ನನ್ನಂತೆ ಏನೋ ಎಲ್ಲ ಮಹದಾಸೆ ಹೊತ್ತು ಹಠಪ್ರಯತ್ನದಿಂದ ಅಮೆರಿಕ ತಲುಪಿದ್ದಾರೆ. ಅವರನ್ನು ನೀವು ಹೀಗೆ ಆಕ್ಷೇಪಿಸಬಾರದು" ಎಂದರು ಮಂಜು.

"ಅರರೆ.. ಅಷ್ಟು ಹೇಳಿದ್ದಕ್ಕೇ ನೀವು ಕೋಪಗೊಂಡರೆ ಹೇಗೆ.. ನಿಮ್ಮ ದೃಷ್ಟಿಯಲ್ಲಿ ನೀವು ಸರಿ. ಆದರೆ ನಮ್ಮನೆಲೆಯಲ್ಲಿ ನಿಂತು ನೋಡಿ. ನಿಮ್ಮಪ್ಪ ಅಮ್ಮ ಪುಣ್ಯ ಮಾಡಿದ್ದಾರೆ. ಯಾವ ಸಮಸ್ಯೆಯೂ ಇಲ್ಲದೆ ನೀವು ಆಗಾಗ ಬಂದುಹೋಗ್ತಾ, ಅವರನ್ನೂ ನೋಡಿಕೊಳ್ಳುತ್ತಾ ಇದ್ದೀರಿ. ದೇವರು ಹಾಗೇ ಇಟ್ಟಿರಲಿ. ನನ್ನ ಕತೆಯೇ ಬೇರೆ. ಅಮೆರಿಕಾಕ್ಕೆ ಹೋಗಲಿ, ಬೇರೆಲ್ಲಿಗೂ ಹೋಗಲಿ, ನನ್ನ ಮುಪ್ಪಿನಲ್ಲಿ ಕೇಶವ ಬರುತ್ತಾನೆ, ನನ್ನ ಬಳಿ ಇರುತ್ತಾನೆ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೆ. ನಮ್ಮ ಕುಟುಂಬದಲ್ಲಿ ಇದುವರೆಗೆ ಹಾಗೆಯೇ ನಡೆದಿದೆ. ಅಮೆರಿಕಾಕ್ಕೆ ಕಾಲಿಟ್ಟಮೇಲೆ ಈ ಹತ್ತು ವರ್ಷಗಳಲ್ಲಿ ಆತ ಒಂದು ಬಾರಿಯೂ ಭಾರತಕ್ಕೆ ಭೇಟಿ ಕೊಡಲೇ ಇಲ್ಲ. ಎಲ್ಲಾದರೂ ಇರಲಿ, ಹೇಗಾದರೂ ಇರಲಿ, ಸುಖವಾಗಿರಲಿ ಎಂದು ಗಟ್ಟಿಮನಸ್ಸು ಮಾಡಿ ನಾನೂ ಸುಮ್ಮನಿದ್ದೆ. ಇದೀಗ ನೋಡಿ, ಅವನಿಗೆ ಹುಷಾರಿಲ್ಲವಂತೆ. ಯಾವ ಕಾಯಿಲೆ, ಹೇಗೆ ಬಂತು, ಯಾಕೆ ಬಂತು, ಚಿಕಿತ್ಸೆ ಇದೆಯಾ ಇಲ್ಲವಾ.. ಆತ ಒಂದೂ ನನಗೆ ಯಾವತ್ತೂ ಹೇಳಲೇ ಇಲ್ಲ. ಮೊನ್ನೆ ಅಮೆರಿಕಾದಿಂದ ಫೋನ್ ಮಾಡಿದ ವ್ಯಕ್ತಿ "ನಾನು ಉದ್ಯೋಗಕ್ಕೆ ಹೋಗುವವನು. ಹಾಸಿಗೆ ಹಿಡಿದ ಕೇಶವರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲ ನೀವು ಬನ್ನಿ" ಎಂದಷ್ಟೇ ಹೇಳಿದ್ದು. ಹಾಸಿಗೆ ಹಿಡಿದು ಮಲಗಿದ್ದಾನಂತೆ, ನಾನು ಹೇಳಬಾರದು.. ಅವನ ಆರೈಕೆ ಮಾಡುವ ಶಕ್ತಿ ಇದೆಯೆ ನನ್ನಲ್ಲಿ? "ಮದುವೆ ಮಾಡಿಕೊಳ್ಳು" ಅಂತ ನಾಲ್ಕಾರು ಬಾರಿ ಹೇಳಿದ್ದೆ. ಅದನ್ನೂ ಕೇಳಲಿಲ್ಲ. "ಅಮೆರಿಕಾದಲ್ಲೆಲ್ಲ ನಮ್ಮ ಭಾರತದ ಹಾಗೆ ಜೀವನಕ್ಕೊಬ್ಬಳು ಹೆಂಡತಿ ಎಂದು ಕಟ್ಟಿಕೊಳ್ಳುವ ಪರಿಪಾಠವಿಲ್ಲ" ಎಂದು ಧಿಮಾಕಿನ ಉತ್ತರ ನೀಡಿದ್ದ. ಈಗ ನೋಡಿ. ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಕೇಶವ ನನ್ನ ಮಗ, ಅವನ ಕಷ್ಟಕಾಲದಲ್ಲಿ ಅವನೊಂದಿಗೆ ಇರಲು ನಾನು ಕಟಿಬದ್ಧನೇ. ಅದರಲ್ಲಿ ಸಮಸ್ಯೆಯಿಲ್ಲ. ನನ್ನಿಂದ ಸಾಧ್ಯವಾದೀತೆ ಎನ್ನುವ ಚಿಂತೆ ಮಾತ್ರ. ಯಾರಿಂದಲಾದರೂ ಆರೈಕೆ ಮಾಡಿಸಿಕೊಳ್ಳುವ ವಯಸ್ಸು ನನ್ನದು" ಆತ ಮಾತು ಮುಂದರಿಸಲಾಗದೆ ಬಿಕ್ಕಿಬಿಕ್ಕಿ ಅತ್ತರು.

"ಕೇಶವರ ತಾಯಿಯನ್ನೂ ಕರೆದು ತರಬಹುದಿತ್ತು. ಅವರಿದ್ದರೆ ನಿಮಗೂ ಸಹಾಯವಾಗುತ್ತಿತ್ತು" ಅಂದರು ಮಂಜು.

"ಅವನ ಸ್ವಂತ ತಾಯಿ ಯಾವಾಗಲೋ ಹೊರಟುಹೋಗಿದ್ದಾಳೆ. ನನ್ನ ಎರಡನೇ ಮಡದಿಯನ್ನು ಒಂದು ದಿನವೂ ಆತ ಚೆನ್ನಾಗಿ ಮಾತಾಡಿಸಿದ್ದೇ ಇಲ್ಲ. ಅವಳದ್ದೇನೂ ತಪ್ಪಿರಲಿಲ್ಲ. ಹಾಗೆ ಹೇಳುವುದಿದ್ದರೆ ತಪ್ಪು ನನ್ನದ್ದೇ. ಅವನಿಗಿಂತ ಬರೇ ನಾಲ್ಕು ವರ್ಷ ಹಿರಿಯಳಾಕೆ. ಕೇಶವ ಎಂಟನೇ ತರಗತಿಯಲ್ಲಿರುವಾಗ ಅವನಮ್ಮ ತೀರಿ ಹೋದದ್ದು. ಅವಳಿಗೆ ಮೊದಲಿನಿಂದಲೂ ಏನೇನೋ ಆರೋಗ್ಯ ಸಮಸ್ಯೆಗಳು. ಕೊನೆಗೊಮ್ಮೆ ಸಾಯುವುದಕ್ಕೆ ಮಂಗನ ಕಾಯಿಲೆ ನೆಪ. ಅಪ್ಪ, ಅಮ್ಮ, ಬಂಧು ಬಳಗ ಸೇರಿ ನನ್ನನ್ನು ಮರುಮದುವೆಗೆ ಒಪ್ಪಿಸಿದರು. ನಲ್ವತ್ತರ ಹರೆಯದ ನನಗೆ ಹದಿನೆಂಟರ ಹುಡುಗಿಯನ್ನು ಮದುವೆ ಮಾಡಿಸಿದರು. ಅಲ್ಲಿಂದ ಕೇಶವ ಬದಲಾಗಿಹೋದ. ಬಡವರ ಮನೆಯ ಹೆಣ್ಣನ್ನು ಬಲವಂತವಾಗಿ ಒಪ್ಪಿಸಿದ್ರು ಅಂತ ಯಾರೋ ಹೇಳುವುದನ್ನು ಆತ ಕೇಳಿರಬೇಕು. ಅಲ್ಲಿಂದ ನನ್ನ ಮಾತುಗಳನ್ನು ಅಥವಾ ಮನೆಯ ಇತರ ಹಿರಿಯರ ಮಾತುಗಳನ್ನು ಆತ ಕಿವಿಗೆ ಹಾಕಿಕೊಳ್ಳುತ್ತಲೇ ಇರಲಿಲ್ಲ. ಸ್ವಂತ ಅಪ್ಪನನ್ನೂ ಧಿಕ್ಕರಿಸಿ ನಡೆಯುತ್ತಾನೆ ಎಂದಾಗಬಾರದೆಂದು ನಾನು ಆತ ಮಾಡಿದ್ದನ್ನೆಲ್ಲ ಒಪ್ಪಿಕೊಂಡೆ. ಈಗ ನೋಡಿ ಎಲ್ಲಿಗೆ ಬಂದಿದೆ.. ಸಣ್ಣ ಹುಡುಗನೇನೂ ಅಲ್ಲ. ವಯಸ್ಸು ನಲುವತ್ತು ಮೀರಿತು. ಅವನ ಜಾಗ್ರತೆ ಅವನು ಮಾಡಿಕೊಳ್ಳಬೇಕಿತ್ತು. ಮಾಡಿಕೊಳ್ಳಲಿಲ್ಲ. ಯಾವ ಕಾಯಿಲೆಯಾದರೂ ಅಮೆರಿಕದಲ್ಲಿ ಚಿಕಿತ್ಸೆಯಿದೆ ಅಂತಾರೆ. ಅನುಕೂಲವಿದ್ದ ನಮ್ಮ ದೇಶದ ಶ್ರೀಮಂತರು ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹಾರುತ್ತಾರೆ. ಅಲ್ಲೇ ಇರುವ ಕೇಶವನಿಗೆ ಚಿಕಿತ್ಸೆ ಸಿಗಲಿಲ್ಲವೇ? ನಾನು ಕತ್ತಲಲ್ಲಿ ನಡೆಯುತ್ತಿದ್ದೇನೋ ಎಂಬಂತೆ ಏನೂ ಮಾಹಿತಿ ಇಲ್ಲದೆ ಹೊರಟಿದ್ದೇನೆ. ಅವನಿಗಿರುವ ಕಾಯಿಲೆ ವಾಸಿಯಾಗುತ್ತದೆ ಎಂದೇ ನಂಬಿದ್ದೇನೆ. ಮೂರ್ನಾಲ್ಕು ತಿಂಗಳು ನಿಂತು ಅವನು ಗುಣಮುಖನಾದ ಮೇಲೆ ಊರಿಗೆ ಹಿಂದೆ ಬಂದರಾಯಿತು ಎಂದು ಎದೆಗಟ್ಟಿಮಾಡಿ ಹೊರಟಿದ್ದೇನೆ. ಇಷ್ಟಲ್ಲದೆ ಬೇರೇನನ್ನೂ ಯೋಚಿಸಲೂ ಹೆದರಿಕೆಯಾಗುತ್ತಿದೆ" ಅಂದರು ಗುರುಸಾರ್.

"ನಿಮ್ಮ ಕೇಶವರಿಗೆ ಏನೂ ಆಗುವುದಿಲ್ಲ. ಈ ವಯಸ್ಸಿನಲ್ಲಿ ನೀವು ಬೆಂಬಲವಾಗಿ ಬಂದದ್ದು ನೋಡಿಯೇ ಆತ ಸರಿಹೋಗುತ್ತಾರೆ ಎನ್ನುವುದು ನನ್ನ ನಂಬಿಕೆ" ಎಂದರು ಮಂಜು.

"ಅಪ್ಪ ಮಗನಾಗಿ ನಾವು ಹರಟಿದ್ದು ಕಡಿಮೆ. ಎಷ್ಟುಬೇಕೋ ಅಷ್ಟೇ ಮಾತು. ಹಾಗಾಗಿ ಅವನ ತಲೆಯಲ್ಲಿ ಏನೇನು ಯೋಚನೆಗಳಿದ್ದವು ಎನ್ನುವ ಯಾವ ನಿಖರ ಮಾಹಿತಿಯೂ ನನ್ನಲ್ಲಿಲ್ಲ. ಅವನ ವಯಸ್ಸಿನ ಹಲವು ಹುಡುಗರಲ್ಲಿ ಮುಕ್ತವಾಗಿ ಚರ್ಚಿಸುವ ಹಾಗೆ ನಾನು ಕೇಶವನ ವಿಚಾರಧಾರೆಗಳನ್ನು ಕೇಳಿ ಚರ್ಚಿಸಲಿಲ್ಲ. ಒಬ್ಬ ಅಧ್ಯಾಪಕನಾಗಿ ಇದನ್ನು ಒಬ್ಬ ಅಪ್ಪನ ಸೋಲು ಎಂದೇ ಪರಿಗಣಿಸಿದ್ದೇನೆ. ಈಗಲಾದರೂ ಅವನ ಬೇಕುಬೇಡಗಳನ್ನು ವಿವರವಾಗಿ ಚರ್ಚಿಸಿ ಅಪ್ಪನ ಹೊಣೆ ಹೊರಬೇಕು. ನನ್ನ ತಲೆತಿನ್ನುವ ವಿಚಾರಗಳನ್ನೆಲ್ಲ ಆತನೊಂದಿಗೆ ಹೇಳಬೇಕು. ಆತ ಹೇಳುವುದನ್ನೂ ಕೇಳಬೇಕು, ಅವನ ತಪ್ಪುಗಳಿಗೆ ಅವನನ್ನೆ ಹೊಣೆ ಮಾಡಿ ಗದರಿಸಬೇಕು. ತಪ್ಪು ನನ್ನದಾಗಿದ್ದರೆ ಪ್ರಾಮಾಣಿಕವಾಗಿ ಒಪ್ಪಿಕೊಂಡು ಮಾಫಿ ಕೇಳಬೇಕು - ಹೀಗೆಲ್ಲ ಅನ್ನಿಸುತ್ತಿದೆ.. ಯಾವುದಕ್ಕೆಲ್ಲ ಅವನ ಆರೋಗ್ಯ ಅವಕಾಶ ನೀಡುತ್ತದೆ ಗೊತ್ತಿಲ್ಲ. ಏನಿದ್ದರೂ ಅಪ್ಪನಿಲ್ಲದವರ ಹಾಗೆ ಆತ ಬದುಕಬಾರದು. ಮಗನಿದ್ದೂ ಮಗನಿಲ್ಲದ ನನ್ನ ನೋವಿಗೆ ಅಂತ್ಯ ಸಿಗಬೇಕು.." ಗುರುಸಾರ್ ದುಃಖದಲ್ಲಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡರು.

"ಸಾರ್, ಎಲ್ಲ ಸರಿಯಾಗುತ್ತೆ. ನೀವು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ" ಮಂಜು ಅವರ ಕೈ ಹಿಡಿದು ಸಮಾಧಾನಿಸಿದರು.

"ಹೆಚ್ಚುಕಡಿಮೆ ಕೇಶವನದ್ದೇ ವಯಸ್ಸು ನಿಮ್ಮದು. ಅವನಲ್ಲಿ ಕೇಳಬೇಕೆಂದಿದ್ದ ಹಲವಾರು ಪ್ರಶ್ನೆಗಳಿವೆ ನನ್ನಲ್ಲಿ. ಅವನಲ್ಲಿ ಕೇಳಲಾಗದೆ ಸೋತಿದ್ದೇನೆ. ಉತ್ತರಕ್ಕಾಗಿ ಹಂಬಲಿಸುತ್ತಿದ್ದೇನೆ. ಅವನ ಮತ್ತು ನನ್ನ ಜೀವನದಲ್ಲೂ ಮಹತ್ತರ ಬದಲಾವಣೆಗಳಾಗಬೇಕು. ಅಪ್ಪ ಮಗನಾಗಿ ನಮ್ಮ ಬದುಕು ಹೊಸದಾಗಿ ರೂಪಿಸಬೇಕು. ಅದಕ್ಕೆ ಅವನಲ್ಲಿ ನಾನು ನಿರಂತರ ಮಾತುಕತೆ ನಡೆಸಬೇಕು. ಎಲ್ಲಿಂದ ಶುರು ಮಾಡುವುದು ಹೇಗೆ ಶುರು ಮಾಡುವುದು ಎಂದೆಲ್ಲ ತಯಾರಿ ಆಗಲೇ ಆರಂಭಿಸಿದ್ದೇನೆ. ಜೀವನದಲ್ಲಿ ಆತ ಯಾವುದಕ್ಕೆಲ್ಲ ಮಹತ್ವ ನೀಡುತ್ತಾನೆ, ಯಾವ ವಿಷಯಗಳನ್ನು ಬದಲಾಯಿಸಿಕೊಳ್ಳಲು ಒಪ್ಪುತ್ತಾನೆ, ಆತ ಒಪ್ಪಿಕೊಳ್ಳದ ವಿಷಯಗಳಲ್ಲಿ ನಾನು ಹೇಗೆ ಬದಲಾಗಬಹುದು ಇತ್ಯಾದಿಗಳನ್ನು ಆಳವಾಗಿ ಯೋಚಿಸಿದ್ದೇನೆ. ನಾನೇ ಪ್ರಶ್ನೆ ಹಾಕಿ, ನಾನೇ ಅವನಾಗಿ ಉತ್ತರಿಸಲು ಪ್ರಯತ್ನ ಮಾಡಿ ಸೋತು ಹೋಗಿದ್ದೇನೆ. ನೀವು ಆಗುವುದಿಲ್ಲ ಅನ್ನಬಾರದು. ನನ್ನ ಮಗನ ಹಾಗೆ ನೀವು ನನ್ನಲ್ಲಿ ಮಾತಾಡಬೇಕು, ಜಗಳವಾಡಬೇಕು. ನಾನು ಸೋಲಬೇಕು, ನೀವು ಅಂದ್ರೆ ಅವನು ಗೆಲ್ಲಬೇಕು. ನನ್ನಲ್ಲಿ ಏನೇನು ಬದಲಾವಣೆ ನಿರೀಕ್ಷಿಸುತ್ತೀರಿ ಅದನ್ನು ನನ್ನ ಮುಖದ ಮೇಲೆ ಹೊಡೆದಂತೆ ಹೇಳಬೇಕು. ಕೈತಪ್ಪಿಹೋಗುತ್ತಿರುವ ಮಗನನ್ನು ಉಳಿಸಿ ಹಿಂದೆ ಪಡೆಯಲು ನನ್ನ ನಡೆ ಹೇಗಿರಬೇಕು ಎಂದು ನಾವು ವಿವರವಾಗಿ ಮಾತಾಡೋಣವಾ? ಹೇಗೂ ಸಮಯ ಇದೆ.. ನಡುವೆ ನಿದ್ದೆ ಬಂದರೆ ಹೇಳಿ.. ಅಲ್ಲಿಯೆ ನಿಲ್ಲಿಸಿ ಮತ್ತೆ ಎಚ್ಚರವಾದ ಮೇಲೆ ಮುಂದುವರೆಸುವಾ.." ಸೂಚಿಸಿದರು ಗುರು ಸಾರ್.

"ನೀವು ದಣಿದಿದ್ದೀರಿ ಸರ್. ಒಂದು ಗಂಟೆ ನಿದ್ದೆ ಮಾಡಿ. ಆಮೇಲೆ ಮಾತಾಡೋಣ" ಎಂದರು ಮಂಜು.

"ನನ್ನ ಮಗ ಹಠಮಾರಿ. ಸುಲಭದಲ್ಲಿ ಸೋಲೊಪ್ಪುವುದಿಲ್ಲ. ತನ್ನ ನಿಲುವು ಅಥವಾ ವಾದ ಸರಿಯಲ್ಲ ಎಂದು ಮನದಟ್ಟಾಗುವಾಗ ಎದುರಾಳಿಯ ನಿಲುವಿನಲ್ಲಿ ಲೋಪ ಹುಡುಕುವ ಪ್ರಯತ್ನ ಮಾಡುತ್ತಾನೆ. ಅವನಲ್ಲಿ ನಾವು ಲೋಪವಿಲ್ಲದೆ ಸಮರ್ಥವಾಗಿ ವಾದಿಸಬೇಕು. ಅವನ ನಿಲುವಿಗಿಂತ ನಾವು ಸೂಚಿಸುವ ನಿಲುವು ಹೇಗೆ ಹೆಚ್ಚು ಸೂಕ್ತ ಎಂದು ಮನದಟ್ಟಾದ ಕ್ಷಣದಲ್ಲಿ ಅದನ್ನು ಒಪ್ಪಿಕೊಳ್ಳುತ್ತಾನೆ. ಆತ ತನ್ನ ನಿಲುವನ್ನು ತಿದ್ದಿಕೊಳ್ಳುತ್ತಾನೆ ಎನ್ನುವುದಕ್ಕೆ ನನ್ನಲ್ಲಿ ಉದಾಹರಣೆಯಿದೆ. ಚಿಕ್ಕ ವಯಸ್ಸಿನ ಪೂರ್ಣಿಮಾಳನ್ನು ನಾನು ಮದುವೆಯಾಗಿದ್ದು ಆತನಿಗೆ ಇಷ್ಟವಾಗಿರಲಿಲ್ಲ ಅಂದೆನಲ್ಲ.. ಅದು ಆತ ಅಮೆರಿಕಾಕ್ಕೆ ಹೋಗುವವರೆಗೂ ಮುಂದುವರೆದಿತ್ತು. ಆದರೆ ಅಮೆರಿಕಾಕ್ಕೆ ಹೋದ ಆತ, ಅಲ್ಲಿಯ ಮದುವೆಗಳನ್ನು ಹತ್ತಿರದಿಂದ ನೋಡಿದ ಮೇಲೆ ಬದಲಾದ. ಅಲ್ಲಿ ನಲ್ವತ್ತರ ಮೇಲಿನ ವಯಸ್ಸಿನ ಗಂಡಸರು ಹದಿಹರೆಯದ ಹುಡುಗಿಯರನ್ನು ಮದುವೆಯಾಗುವುದು, ಐವತ್ತರ ಮೇಲಿನ ಹೆಂಗಸರು ತಮ್ಮ ಮಕ್ಕಳ ವಯಸ್ಸಿನ ಹುಡುಗರನ್ನು ಮದುವೆಯಾಗುವುದು - ಇವನ್ನೆಲ್ಲ ನೋಡಿದ ಆತನಿಗೆ ತಾನು ಆಪ್ಪ ಹಾಗೂ ಚಿಕ್ಕಮ್ಮನಲ್ಲಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂದು ಅನಿಸಿತ್ತು. ಒಮ್ಮೆ ಫೋನ್ ಮಾಡಿದಾಗ ನೇರವಾಗಿ "ಅಪ್ಪ ನಿಮ್ಮ ಮತ್ತು ಚಿಕ್ಕಮ್ಮನ ವಯಸ್ಸಿನ ಅಂತರ ನನಗೆ ತಂದಿದ್ದ ತಲೆನೋವು ಬರೇ ಅರ್ಥಹೀನವಾಗಿತ್ತು.. ಮದುವೆಯಲ್ಲಿ ಒಂದಿಷ್ಟು ಪ್ರೀತಿ, ನೆಮ್ಮದಿ ಮತ್ತು ಜವಾಬ್ದಾರಿ ನಿಭಾಯಿಸುವ ಮನಸ್ಸು ಇವಿಷ್ಟೇ ಮುಖ್ಯ ಅಂತ ಇಲ್ಲಿ ಬಂದಮೇಲೆ ಗೊತ್ತಾಯ್ತು" ಅಂದಿದ್ದ. ನನಗೇ ಆಶ್ಚರ್ಯವಾಗಿತ್ತು. ಪೂರ್ಣಿಮಾಳಂತೂ ಮಗ ಸರಿದಾರಿಗೆ ಬಂದ, ದೇವರು ದೊಡ್ಡವ ಅಂದಿದ್ದಳು. ಆಗಲೇ ನಾವು ಅವನಿಗೆ ಹೆಣ್ಣು ನೋಡಿ ಮದುವೆ ಮಾಡಿಸೋಣ ಅಂತಲೂ ಮಾತನಾಡಿಕೊಂಡಿದ್ದೆವು" ಅಂದರು ಗುರುಸಾರ್.

"ಮತ್ತೇನಾಯಿತು?" ಕುತೂಹಲದಿಂದ ಕೇಳಿದರು ಮಂಜು.

"ಅದೇ ಹೇಳಿದೆನಲ್ಲ.. ಅವನ ಯೋಚನಾಲಹರಿಯೇ ಹಾಗೆ. ಮುಂದಿನ ದಿನಗಳಲ್ಲಿ ಫೋನ್ ಮಾಡಿದಾಗ ಮದುವೆಯ ಮಾತೆತ್ತಿದೆವು. "ಜೀವನ ಪೂರ್ತಿ ಒಬ್ಬಳೊಂದಿಗೆ ಸಂಸಾರ ನಡೆಸುವುದೆಲ್ಲ ಅಲ್ಲಿ ಭಾರತದಲ್ಲಿ ಮಾತ್ರ. ಇಲ್ಲಿ ಗಂಡು ಹೆಣ್ಣು ಕೆಲವು ವರ್ಷ ಒಟ್ಟಿಗಿರುವುದು. ಆಕರ್ಷಣೆ ಕಡಿಮೆಯಾಗಿ ಇವಳಿಗಿಂತ ಇನ್ನೊಬ್ಬಳು ಚೆನ್ನ ಎನಿಸಿದರೆ ಇವಳನ್ನು ಬಿಟ್ಟು ಅವಳೊಡನೆ ಸಂಸಾರ" ಅಂದಿದ್ದ. ಮಕ್ಕಳು ಹೆತ್ತವರಲ್ಲಿ ಹೇಳುವ ಮಾತಾ ಅದು? ಭಾರತದಲ್ಲಿ ಮದುವೆ ಆಗಿ ಬಂದವರೆಲ್ಲ ಇಲ್ಲಿ "ಯಾಕಾಗಿ ಮದುವೆಯಾದೆವೋ ಎನ್ನುತ್ತಿದ್ದಾರೆ" ಅಂದ. ನಾವು ಪಟ್ಟು ಬಿಡಲಿಲ್ಲ. ಸರಿ ಸರಿ.. ಊರಿಗೆ ಬಾ.. ನೋಡೋಣ" ಅಂದಿದ್ದೆವು.. ಆತ ಬರಲೇ ಇಲ್ಲ. "ಬಿಡುವಿಲ್ಲ" ಅಂದ. ಬೆಂಗಳೂರಿನಲ್ಲಿ ಒಬ್ಬರು ಡಾಕ್ಟ್ರಿದ್ದಾರೆ. ಅವರ ಮಗಳು ಅಮೆರಿಕಾದಲ್ಲಿ ಪಿ ಹೆಚ್ ಡಿ ಮಾಡುತ್ತಿದ್ದಳು. ಅವರು ನೆಂಟಸ್ತಿಕೆಗೆ ನನ್ನನ್ನು ಸಂಪರ್ಕಿಸಿದ್ದರು. ಮಗ ನನ್ನ ಮಾತು ಕೇಳುವುದಿಲ್ಲ ಅನ್ನುವುದಾ ನಾನು? "ಬಿಡುವಿಲ್ಲದ ಕೆಲಸಗಳಲ್ಲಿ ಮಗ್ನನಾಗಿದ್ದಾನೆ, ಮದುವೆ ಮಾತುಗಳನ್ನು ತಳ್ಳಿ ಹಾಕುತ್ತಿದ್ದಾನೆ" ಎಂದೆ. ಕೊನೆಗೆ ನಾವೇ ಸಂಪರ್ಕಿಸುತ್ತೇವೆ ಅಂತ ಒಪ್ಪಿಗೆ ಪಡೆದು ಅವರೇ ಕೇಶವನನ್ನು ಸಂಪರ್ಕಿಸಿದರು. ಅಮೆರಿಕಾಕ್ಕೇ ಹೋಗಿ ಬಂದರು. ಹಿಂದೆ ಬಂದವರೇ ನನಗೆ ಫೋನ್ ಮಾಡಿ "ನೀವು ಮಗನ ಆಸೆ ಬಿಟ್ಟುಬಿಡಿ. ಆತ ನಿಮಗೆ ವಾಪಸ್ಸು ಸಿಗದಷ್ಟು ದೂರ ಹೋಗಿದ್ದಾನೆ" ಎಂದರು. "ಏನಾಯ್ತು ಸ್ವಲ್ಪ ಹೇಳಿ" ಎಂದೆ. "ಕ್ಷಮಿಸಿ, ಅವನ ಬಗೆಗೆ ಇನ್ನೇನೂ ಹೇಳುವುದಿಲ್ಲ. ಹೆಚ್ಚಿನ ಆಸೆ ಇಟ್ಟುಕೊಳ್ಳಬೇಡಿ ಅಂದಿದ್ದರು’’ ಅಂದರು ಗುರುಸಾರ್.

"ಡಾಕ್ಟ್ರು ಹಾಗೆ ಯಾಕೆ ಅಂದರು ಅಂತ ತಿಳಿದುಕೊಳ್ಳುವ ಪ್ರಯತ್ನವೇ ಮಾಡಲಿಲ್ಲವಾ ನೀವು?" ಕೇಳಿದರು ಮಂಜು.

"ಮಾಡದೆ ಹೇಗೆ ಬಿಡಲಿ? ವಾಪಸ್ಸು ಸಿಗದಷ್ಟು ದೂರ ಹೋಗಿದ್ದಾನೆ ಎಂದರೆ ಹೇಗೆ ಸಹಿಸಲಿ? ಅವರ ಬೆನ್ನು ಬಿದ್ದೆ. ಒತ್ತಾಯ ಮಾಡಿದೆ. ಕೊನೆಗೆ ಅವರು ಕೇಶವ ಅಲ್ಲೊಬ್ಬ ಮೆಕ್ಸಿಕೋ ಹುಡುಗನ ಜೊತೆ ಸೇಮ್ ಸೆಕ್ಸ್ ಸಂಬಂಧದಲ್ಲಿದ್ದಾನೆ. ಅವರು ಜೊತೆಯಲ್ಲಿ ಜೀವಿಸುತ್ತಿದ್ದಾರೆ ಎಂದರು. ನನಗೆ ಅಕಾಶವೇ ಮೈಮೇಲೆ ಬಿದ್ದ ಹಾಗಾಯಿತು. ಫೋನ್ ಮಾಡಿದಾಗ "ಅಪ್ಪ ಇದೆಲ್ಲ ಇಲ್ಲಿ ಸಾಮಾನ್ಯ" ಅಂದ.

“ಇದು ಪ್ರಕೃತಿ ನಿಯಮದ ವಿರುದ್ಧ, ವಿಶ್ವದ ಯಾವ ಮೂಲೆಯ ಹೆಣ್ಣನ್ನಾದ್ರೂ ನೀನು ಮದುವೆಯಾಗಿದ್ರೆ ನಾನು ತೆಪ್ಪಗೆ ಕೂರುತ್ತಿದ್ದೆ. ಇದನ್ನು ಒಪ್ಪಿಕೊಳ್ಳಲಾರೆ” ಎಂದೆ.

“ನನಗೊತ್ತು ಅಪ್ಪ. ನೀವು ಬೆಳೆದ ಸಂಸ್ಕಾರ ನಿಮ್ಮನ್ನು ಒಪ್ಪಿಕೊಳ್ಳಲು ಬಿಡುವುದಿಲ್ಲ. ಅಷ್ಟಕ್ಕೇ ಇದು ತಪ್ಪು ಅನ್ನಲಾಗುವುದಿಲ್ಲ. ಇವತ್ತು ಅಮೆರಿಕಾದ ಎಲ್ಲ ರಾಜ್ಯಗಳೂ ಸೇಮ್ ಸೆಕ್ಸ್ ಮದುವೆ ರಿಜಿಸ್ತ್ರಿ ಮಾಡಿಕೊಡುತ್ತವೆ. ಒಂದೆರಡು ವರ್ಷ ನಮ್ಮ ಹೊಂದಾಣಿಕೆ ಅರ್ಥಮಾಡಿಕೊಂಡು ಸೂಕ್ತ ಅನ್ನಿಸಿದರೆ ನಾವೂ ರಿಜಿಸ್ಟರ್ ಮದುವೆಯಾಗೋಣ ಎಂದುಕೊಂಡಿದ್ದೇವೆ. ನಿಮ್ಮಿಂದ ಮುಚ್ಚಿಡಲು ಪ್ರಯತ್ನಿಸಿದ್ದಲ್ಲ. ಈ ವಯಸ್ಸಿನಲ್ಲಿ ನಿಮ್ಮ ಮೇಲೆ ಸಾಂಸ್ಕೃತಿಕ ಪ್ರಹಾರ ಬೇಡ ಎಂದು ಸುಮ್ಮನಿದ್ದದ್ದು ನಾನು" ಎಂದ.

"ಪ್ರಣಯಕ್ಕೆ ನೈಸರ್ಗಿಕ ಮಾರ್ಗ ಇದ್ದಾಗಲೂ ಹುಚ್ಚಾಟಗಳು ಹೇಗೆ ಹುಟ್ಟಿಕೊಳ್ಳುತ್ತವೆ? ಕಾನೂನು ಪ್ರಕಾರ ಸಕ್ರಮ ಎನ್ನುವ ಭಂಡ ಸಮಜಾಯಿಶಿ ಬೇರೆ.." ಕೋಪದಿಂದ ನುಡಿದರು ಗುರುಸಾರ್.

"ಕಾನೂನು ಹಾಗಿದೆ.. ಎನ್ನುವುದು ಸತ್ಯ ಸರ್" ಎಂದರು ಮಂಜು.

"ನಮ್ಮ ಕಾನೂನುಗಳ ಮಾತು ಬಿಡಿ. ಮಾಡುವವರೂ ನಾವೆ. ಪಾಲಿಸುವವರೂ ನಾವೆ. ಮುರಿಯುವವರೂ ನಾವೆ. ಮಾನವ ಮಾಡುವ ಕಾನೂನುಗಳು ಪ್ರಕೃತಿನಿಯಮಗಳಿಗಿಂತ ಶ್ರೇಷ್ಠವಾ? ನನಗೆ ಕೋಪ ಬಂದಿತ್ತು. ನೀನು ಮಗ ಅಲ್ಲ ನಾನು ಅಪ್ಪ ಅಲ್ಲ.. ಇಲ್ಲಿಗೆ ಮುಗಿಯಿತು ಸಂಬಂಧ ಅಂದುಬಿಟ್ಟೆ" ಗಳಗಳನೆ ಅತ್ತರು ಗುರುಸಾರ್.

"ಮತ್ತೆ ಸಂಪರ್ಕವೇ ಇರಲಿಲ್ಲವಾ?" ಕೇಳಿದರು ಮಂಜು.

"ನಾನ್ಯಾಕೆ ಹಾಗೆ ಹೇಳಿದೆ ಅನ್ನಿಸುತ್ತಲೇ ಇತ್ತು ನನಗೆ. ಮೂರ್ನಾಲ್ಕು ತಿಂಗಳು ಅವನೂ ಫೋನ್ ಮಾಡಿರಲಿಲ್ಲ. ಮತ್ತೆ ಒಂದಿನ ಫೋನ್ ಮಾಡಿದ. "ಇವತ್ತು ಏನು ಹೇಳಲಿಕ್ಕೆ ಫೋನ್ ಮಾಡಿದ್ದು?" ಅಂತ ಕೋಪದಿಂದಲೇ ಕೇಳಿದೆ. "ವಿಶ್ವದ ನೂರಾ ಇಪ್ಪತ್ತು ಖ್ಯಾತ ಪ್ರೊಫೆಸರುಗಳ ಎದುರು ಮೊದಲ ಬಾರಿ ನಾನಿವತ್ತು ಪ್ರಬಂಧ ಮಂಡನೆ ಮಾಡಲಿದ್ದೇನೆ. ಯಾವ ಕಾಲಕ್ಕೂ ನನ್ನ ಏಳಿಗೆಯನ್ನೇ ಬಯಸಿದವರು ನೀವು. ನನ್ನ ಜೀವಮಾನದಲ್ಲಿ ಇವತ್ತು ಪ್ರಮುಖವಾದ ದಿನ. ಹೊರಟು ನಿಂತಿದ್ದೇನೆ ನಾನು.. ಅರ್ಜೆಂಟ್ ಒಂದು ಆಶೀರ್ವಾದ ಮಾಡಿ" ಅಂದ. "ಹುಚ್ಚ, ನನ್ನ ಆಶೀರ್ವಾದ ನಿನ್ನ ಮೇಲೆ ಸದಾ ಇದ್ದೇ ಇರುತ್ತದೆ. ನಿನ್ನಮ್ಮನನ್ನೂ ಒಂದು ಬಾರಿ ನೆನೆದು ಧೈರ್ಯ ಒಗ್ಗೂಡಿಸಿಕೊಳ್ಳು, ಒಳ್ಳೆಯದಾಗುತ್ತದೆ" ಅಂದೆ. "ಏನೇ ತಪ್ಪು ಮಾಡಲಿ, ಮಗ ಮಗನೇ ತಾನೇ?" ಪುನಃ ಅತ್ತರು ಗುರುಸಾರ್.

"ಎಲ್ಲರ ಜೀವನದಲ್ಲೂ ಕೆಲವು ಏರುಪೇರುಗಳಾಗುತ್ತವೆ. ನೀವೇನು ತಿಳಿಯದವರಲ್ಲ. ಕೊನೆತನಕ ಹೋರಾಡುತ್ತೇನೆ ಎನ್ನುವವ ಮಾತ್ರ ಸೈನಿಕ. ನಾನು ಗೆಲ್ಲತ್ತೇನೆ ಎನ್ನುವುದು ಬಿಟ್ಟು ಬೇರೇನನ್ನೂ ಚಿಂತಿಸದೆ ಇರುವುದಕ್ಕೆ ಆತನಿಗೆ ಮಾತ್ರ ಸಾಧ್ಯ. ನೀವು ಗೆಲ್ಲುತ್ತೀರಿ. ನಿಮಗೆ ಈಗ ವಿಶ್ರಾಂತಿ ಬೇಕು. ಬೇಕಿದ್ದರೆ ಟಾಯ್ಲೆಟ್ಟಿಗೆ ಹೋಗಿ ಬನ್ನಿ. ಆಮೇಲೆ ನಿಶ್ಚಿಂತೆಯಲ್ಲಿ ಮಲಗಿ" ಎಂದರು ಮಂಜು. ಶುಷ್ಕ ನಗೆ ಬೀರಿದ ಗುರುಸಾರ್ ಎದ್ದು ಟಾಯ್ಲೆಟ್ಟಿಗೆ ಹೋಗಿ ಬಂದರು. "ನೀವೂ ಸ್ವಲ್ಪ ಮಲಗಿ, ಆಗದಿಂದ ನನ್ನ ಪ್ರವಚನವೇ ಆಯಿತು, ನಿದ್ದೆಯಿಲ್ಲ ನಿಮಗೆ" ಎನ್ನುತ್ತ ಕಣ್ಮುಚ್ಚಿಕೊಂಡರು.

ಅವರನ್ನು ಮಲಗಲು ಹೇಳಿ ತಾನೂ ಸ್ವಲ್ಪ ವಿಶ್ರಾಂತಿ ಪಡೆಯುವ ಮಂಜುವಿನ ಪ್ರಯತ್ನ ಈ ಬಾರಿ ಫಲಕಾರಿಯಾಗಿತ್ತು. ಎಷ್ಟು ದಿನ ನಿದ್ದೆ ಕೆಟ್ಟಿದ್ದರೋ ದೇವರೇ ಬಲ್ಲ. ಪುಣ್ಯಾತ್ಮ ಗೊರಕೆ ಹೊಡೆವ ನಿದ್ದೆಗೆ ಜಾರಿದ್ದರು. ಮಂಜು ಮಾತ್ರ ಆಲೋಚನೆಗೆ ಬಿದ್ದು ನಿದ್ದೆಬಾರದೆ ಚಡಪಡಿಸಲಾರಂಭಿಸಿದ್ದರು. ಇನ್ನೆರಡು ಗಂಟೆಗಳಲ್ಲಿ ಅಮೆರಿಕಾ ತಲುಪುತ್ತೆ. ಅವರನ್ನೂ ವಿಮಾನ ನಿಲ್ದಾಣದಿಂದ ಹೊರಗೆ ಕರೆತಂದು ಹೀಗೆಯೇ ನಾಲ್ಕು ಸಾಂತ್ವನದ ಮಾತುಗಳನ್ನಾಡಿ ಟ್ಯಾಕ್ಸಿ ಮಾಡಿ ಮಗನ ವಿಳಾಸಕ್ಕೆ ಕಳುಹಿಸಿಕೊಟ್ಟರೆ ಅವರು ಮಗನ ಮನೆ ತಲುಪುತ್ತಾರೆ. ವಿಳಾಸ ಟೆಲಿಫೋನ್ ನಂಬರ ಸರಿ ಇದ್ದರೆ, ಭಾರತೀಯ ಸಂಜಾತ ಟಾಕ್ಸಿ ಡ್ರೈವರೊಬ್ಬನನ್ನು ಹುಡುಕಿ ಕೊಟ್ಟರೆ ಇದು ದೊಡ್ಡ ಸಮಸ್ಯೆಯಲ್ಲ. ಸಮಸ್ಯೆ ಮುಂದಿನದ್ದು. ಮನುಷ್ಯತ್ವದ ನೆಲೆಯಲ್ಲಿ ಮುಂದೆ ಏನಾದರೂ ಅವಶ್ಯಕತೆ ಇದ್ದರೆ ಫೋನ್ ಮಾಡಿ ಎಂದು ತನ್ನ ವಿಳಾಸ, ಟೆಲಿಫೋನ್ ನಂಬರ್ ಅವರ ಕೈಯಲ್ಲಿಡಬೇಕಾಗುತ್ತೆ ಎಂದು ಕೊಂಡರು. ಗುರುಸಾರ್ ಸ್ವಭಾವತಃ ಗಟ್ಟಿ ಮನಸ್ಸಿನ ಮನುಷ್ಯ. ವಿನಾಕಾರಣ ತನಗೆ ಸಮಸ್ಯೆ ತಂದೊಡ್ಡಲಾರರು. ಸ್ವಲ್ಪ ಸಮಸ್ಯೆಯಾಗಿದೆ ಬರಬಹುದಾ ಎಂದು ಅವರೆಲ್ಲಾದರೂ ಫೋನ್ ಮಾಡಿದರೆ ಅವರು ತೀವ್ರವಾದ ಸಮಸ್ಯೆಯಲ್ಲಿದ್ದಾರೆ ಎಂದೇ ಅರ್ಥ. ರಜೆ ಮುಗಿಸಿ ನೌಕರಿಗೆ ವಾಪಸಾಗುತ್ತಿರುವ ತಾನು ಇನ್ನು ಆರು ತಿಂಗಳು ಒಂದು ದಿನವೂ ರಜೆ ಹಾಕುವ ಪರಿಸ್ಥಿತಿಯಲ್ಲಿಲ್ಲ. ವಾರಾಂತ್ಯಗಳಲ್ಲೂ ದುಡಿಯಬೇಕಾದೀತು. ತನ್ನ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ ತೀರಾ ಅಗತ್ಯವಿದ್ದರೆ ಮಾತ್ರ ಫೋನ್ ಮಾಡಿ ಎಂದು ಸೂಚಿಸಬೇಕೇ? ಎನ್ನುವ ವಿಚಾರ ತಲೆಯಲ್ಲಿ ಹಾದು ಹೋಯಿತು. ವಾಸ್ತವ ಬದಿಗಿಟ್ಟು ಸೌಜನ್ಯಕ್ಕಾದರೂ "ಬೇಕಾದಾಗ ಫೋನ್ ಮಾಡಿ, ನಾನು ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ" ಎಂದಷ್ಟೇ ಹೇಳಿದರೆ ಸಾಕು ಎಂಬ ನಿರ್ಧಾರಕ್ಕೆ ಬಂದರು ಮಂಜು. ಆ ನಿರ್ಧಾರಕ್ಕೆ ಮನಸೋತು ಮಂಜುವಿನ ಮನಸ್ಸು ಕೂಡ ನಿದ್ದೆಗೆ ಜಾರಿತ್ತು.

***
"ಇನ್ನೇನು ವಿಮಾನ ಕೆಳಗೆ ಇಳಿಯಲಿದೆ, ಬೆಲ್ಟ್ ಕಟ್ಟಿಕೊಳ್ಳಿ, ಸೀಟುಗಳನ್ನು ನೇರವಾಗಿಸಿಕೊಳ್ಳಿ" ಎಂಬ ಸೂಚನೆ ಬಂದಾಗ ಲಗುಬಗೆಯಲ್ಲಿ ಸೀಟಿನಲ್ಲಿ ಸರಿಯಾಗಿ ಕುಳಿತ ಗುರುಸಾರ್ ಮಂಜುವನ್ನು ನೋಡಿ "ಇನ್ನು ಇಳಿಯುವ ಸಮಯ ಬಂತು.. ನನ್ನ ಮಗನಲ್ಲಿ ಹೇಗೆ ವ್ಯವಹರಿಸಬೇಕೆಂದು ನಿಮ್ಮ ಅಭಿಪ್ರಾಯ, ಸಲಹೆ ಹೇಳಲೇ ಇಲ್ಲ ನೀವು" ಎಂದು ಇದ್ದ ನಾಲ್ಕು ಹಲ್ಲುಗಳನ್ನು ಪ್ರದರ್ಶಿಸಿ ಮುಗ್ಧ ನಗೆ ನಕ್ಕರು.

"ಇಳಿದ ಮೇಲೂ ಸಮಯ ಇದೆ" ಎಂದು ನಕ್ಕರು ಮಂಜು.

ವಿಮಾನ ಲ್ಯಾಂಡ್ ಆಯಿತು. ಕಸ್ಟಂಸ್ ಮತ್ತು ಇಮಿಗ್ರೇಶನ್ ಮುಗಿಸಿ ಬ್ಯಾಗ್ ಪಡೆದು ಇಬ್ಬರೂ ಟ್ಯಾಕ್ಸಿ ಸ್ಟೇಂಡ್ ಬಳಿ ಬಂದರು.

“ಮಗ ಕೈಜಾರಿಹೋಗದ ಹಾಗೆ ಮಾತಿನಲ್ಲಿ ನಾನು ಏನು ಜಾಗರೂಕತೆ ವಹಿಸಬೇಕು.. ಅದನ್ನಾದರೂ ಹೇಳಿ" ಅಂಗಲಾಚಿದರು ಗುರು ಸಾರ್.

"ಸರ್, ನಿಮ್ಮ ಅನುಭವ ಹಿರಿದು. ನೀವು ನಿಮ್ಮ ಮಗನಲ್ಲಿ ಮಾತಾಡುವುದಕ್ಕೆ ಯಾರ ಸಲಹೆಯೂ ಅಗತ್ಯವಿಲ್ಲ. ಅವರ ಸುಖ, ಸಂತೋಷ, ಶ್ರೇಯಸ್ಸು ಬಿಟ್ಟು ಬೇರೇನೂ ನಿಮ್ಮ ಚಿಂತನೆಯಲ್ಲಿಲ್ಲ . ಇದನ್ನು ಅವರಿಗೆ ಇನ್ನೊಮ್ಮೆ ಸ್ಪಷ್ಟವಾಗಿ ಹೇಳಿ. ಪ್ರತಿಮಾತಿನಲ್ಲೂ ಅದೇ ಗುರಿ ಇರಲಿ. ನಿಮ್ಮ ಮಾತು ಇಷ್ಟವಾಗದಿದ್ದರೆ, ಸ್ವೀಕಾರ ಮಾಡದೆ ಇರುವುದು ಅವರಿಗೆ ಬಿಟ್ಟದ್ದು. ಇಷ್ಟು ದೂರ ಸಾಗಿಬಂದ ಮೇಲೆ ಅಳುಕಬಾರದು. ನಿಮ್ಮ ಅಭಿಪ್ರಾಯ ಹೇಳಿ. ಮುಂದೆ ದೇವರಿದ್ದಾನೆ" ಎಂದ ಮಂಜು ಟ್ಯಾಕ್ಸಿಯವನೊಬ್ಬನನ್ನು ಕರೆದು ನಿಲ್ಲಿಸಿದರು.

"ನೀವು ದೇವರನ್ನು ನಂಬುತ್ತೀರಾ? ಕೇಶವನಿಗೆ ದೊಡ್ಡ ನಂಬಿಕೆಯಿಲ್ಲ. ನಾನು ದೇವರನ್ನು ನಂಬುತ್ತೇನೆ. ಆದರೂ ನನಗೆ ಸರಿಹೊಂದುವಂಥ ಮಗನನ್ನೂ, ನನ್ನ ಮಗನಿಗೆ ಸರಿಹೊಂದುವಂಥ ಅಪ್ಪನನ್ನೂ ಕರುಣಿಸಬಹುದಿತ್ತು, ಆತ ಹಾಗೆ ಮಾಡಲಿಲ್ಲ ಎಂದೆನಿಸುತ್ತದೆ. ಒಮ್ಮೊಮ್ಮೆ ನಮ್ಮಿಬ್ಬರ ವಿಚಾರದಲ್ಲಿ ದೇವರೂ ಎಡವಿದ್ದಾನೆ ಅನಿಸುತ್ತದೆ ನನಗೆ. ನಿಮಗೇನನ್ನಿಸುತ್ತದೆ?" ಗುರುಸಾರ್ ಟ್ಯಾಕ್ಸಿಯಲ್ಲಿ ಕುಳಿತುಕೊಳ್ಳುತ್ತ ನುಡಿದರು.

"ಸರ್, ಎಲ್ಲ ಸರಿಹೋಗ್ತದೆ ಅಂದೆನಲ್ಲ.. ನಿಮ್ಮ ಆಗಮನವೇ ನಿಮ್ಮ ಮಗನಿಗೆ ಆನೆಬಲ ಕೊಡುತ್ತದೆ" ಎಂದರು ಮಂಜು.

"ನಿಮಗೆ ದೇವರ ಮೇಲೆ ಟೀಕೆ ಮಾಡಲು ಭಯ.. ನನಗೇನಿಲ್ಲ.." ನಗುತ್ತ ಕೈಬೀಸಿದರಾತ.

ಮಂಜು ಕೂಡ ಕೈಬೀಸಿದರು. ಜರ್ಝರಿತ ದೇಹದ ಸೇನಾನಿಯನ್ನು ಹೊತ್ತ ಟ್ಯಾಂಕರಿನಂತೆ ಟ್ಯಾಕ್ಸಿ ವೇಗ ಪಡೆಯುತ್ತ ಕ್ಷಣದಲ್ಲಿ ಕಣ್ಮರೆಯಾಯಿತು.
__________________
ತಾಗುಲಿ : Gopinath Rao