ಕಲಸುಮೇಲೋಗರ

ಕಲಸುಮೇಲೋಗರ

ಬುಕ್ಕಾಂಬುಧಿ ಕೃಷ್ಣಮೂರ್ತಿ

🌴 ತೆಂಗಿನ ಮರದ ಕತೆಗಳು 🌴

ಐವತ್ತೈದು ವರ್ಷಗಳ ಹಿಂದೆ ನಾನು ಬೆಂಗಳೂರು ಮಹಾಬೋಧಿ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಮಾನ್ಯ ಬುದ್ಧರಖ್ಖಿತ ತೇರಾರವರು ಸ್ವಾಮೀಜಿಗಳಾಗಿದ್ದರು. ಆಶ್ರಮ ಸ್ಥಾಪಿತವಾದದ್ದು ೧೯೫೬ರಲ್ಲಿ. ಬಿ.ಎಮ್. ರಾವ್ ಎಂಬುವವರು ನಿವೃತ್ತ ಮಿಲಿಟರಿ ಅಧಿಕಾರಿ ಆಶ್ರಮದ ಮೂಲಭೂತ ಸದಸ್ಯರು. ಅವರು ಲಕ್ಷದ್ವೀಪದಿಂದ ಒಂದು ತೆಂಗಿನಮರದ ಸೊಸಿಯನ್ನು ತಂದುಕೊಟ್ಟರು. ಅದು ಬೆಳೆದು ದೊಡ್ಡದಾಗಿ ಫಲ ಬಿಡುವುದಕ್ಕೆ ಶುರುವಾಗಿತ್ತು. ಏನಿಲ್ಲೆಂದರೂ ಸುಮಾರು ನೂರಾ ಐವತ್ತು ಕಾಯಿಗಳು ಒಂದು ಗೊಂಚಲಿನಲ್ಲಿ! ಅದರ ಕಾಯಿ ಹೇಗಿತ್ತೆಂದರೆ, ೩-೪ ಕಾಯಿಗಳನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದು ಅಂತಹ ಗಾತ್ರ. ಅದರ ತೊಗಟೆಯನ್ನು ಮಚ್ಚಿನಿಂದಲ್ಲ, ಚಾಕುವಿನಿಂದ ನಿಧಾನವಾಗಿ ಸುಲಿಯಬೇಕು. ಒಳಗಡೆ ತೆಂಗಿನಕಾಯಿ ಗಾತ್ರ ಸುಮಾರು ಮುಕ್ಕಾಲು ಅಂಗುಲ, ನೀರು ಒಂದು ಚಮಚಕ್ಕಿಂತ ಹೆಚ್ಚಿಲ್ಲ. ಕಾಯಿ ರುಚಿ ಹೇಳಲಾರದಷ್ಟು. ಆಶ್ರಮದಲ್ಲಿ ಸೇವೆಮಾಡುತ್ತಿದ್ದ ಎಲ್ಲರಿಗೂ ಐದಾರು ಕಾಯಿಗಳನ್ನು ಸ್ವಾಮೀಜಿಯವರು ಕೊಟ್ಟರು.

ಆಶ್ರಮದ ಆವರಣದಲ್ಲಿ ಇನ್ನೊಂದು ಕಟ್ಟಡ ಕಟ್ಟಬೇಕಾದ ಪ್ರಸಂಗ ಬಂತು. ಆದರೆ ಆ ಜಾಗದಲ್ಲಿ ಈ ತೆಂಗಿನಮರ ಅಡ್ಡಲಾಗಿತ್ತು. ಸ್ವಾಮೀಜಿಗೆ ಆ ಮರವನ್ನು ನಾಶಗೊಳಿಸುವ ಮನಸ್ಸಿಲ್ಲ. ಆಶ್ರಮದ ಪಕ್ಕದಲ್ಲಿದ್ದ ಸೆಂಟ್ರಲ್ ಜೈಲ್ ಅಧಿಕಾರಿಗಳನ್ನು ಭೇಟಿಮಾಡಿ, ಕೆಲವಾರು ಮಾರ್ಪಾಡಾಗುತ್ತಿದ್ದ ಕೈದಿಗಳ ಸಹಾಯದಿಂದ ಆಷ್ಟು ದೊಡ್ಡ ಮರವನ್ನು ಬೇರೇ ಕಡೆಗೆ ಬದಲಾಯಿಸಿದರು. ಇದೊಂದು ಅದ್ಭುತಕಾರ್ಯ. ಸುಮಾರು ನೂರಾರು ಮಂದಿ ಕೈದಿಗಳು ಭಾಗಿಯಾಗಿದ್ದರು. ___😲👍😲___

ಮುತ್ತಾತನ ತಾತ
ನನ್ನ ಸಂಬಂಧಿಕರೊಬ್ಬರು ಅವರ ಹೆಸರು ಶಂಕರನಾರಾಯಣ. ಅವರು ISRO ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಒಂದು ಬಾರಿ ಆಫ಼ೀಸ್ ಆಫ಼ಸ್ ಕೆಲಸದ ಮೇಲೆ ಅಂಡಮಾನ್ಸ್ ದ್ವೀಪಕ್ಕೆ ಹೋಗಿ ವಾಪಸ್ ಬರುವಾಗ ನಾಲ್ಕೈದು ಸಿಪ್ಪೆ ತೆಂಗಿನಕಾಯಿಗಳನ್ನು ತಂದಿದ್ದರು. ಅಷ್ಟಕ್ಕೇ ಒಂದು ಗೋಣೀ ಚೀಲ ಭರ್ತಿಯಾಗಿತ್ತು!.

ಲಕ್ಷದ್ವೀಪದ ತೆಂಗಿನಕಾಯನ್ನು ಮರಿಮಗ ಎನ್ನುವುದಾದರೆ, ಅಂಡಮಾನ್ಸ್ ದ್ವೀಪದ ಕಾಯನ್ನು ಮುತ್ತಾತನ ತಾತ ಎನ್ನಬಹುದು! ಆ ಗಾತ್ರದ ಕಾಯಿ. ___🥥🌴🥥___

ಕಳ್ಳನ ಕರಾರು
ಬೆಂಗಳೂರು ಬಸವನಗುಡಿಯಲ್ಲಿ ಕರಣಿಕರ ಪಾಠಶಾಲೆಯ ಹತ್ತಿರ ನಮ್ಮ ಕಾಫ಼ೀಬೋರ್ಡ್ ನಿವೃತ್ತ ಅಧಿಕಾರಿಗಳೊಬ್ಬರ ಮನೆಯಿತ್ತು. ನಾವು ಆರೇಳು ಮಂದಿ ಸಹೋದ್ಯೋಗಿಗಳು ಶನಿವಾರ, ಭಾನುವಾರ ಇಸ್ಪೀಟ್ ಆಡಲು ಹೋಗುತ್ತಿದ್ದೆವು. ಅವರ ಮನೆ ಸಾಲಿನಲ್ಲಿ ಒಬ್ಬರ ಮನೆಯ ಮುಂದೆ ಒಂದು ತೆಂಗಿನಮರವಿತ್ತು. ಯಾರೂ ಇಲ್ಲದ ಸಮಯ ನೋಡಿಕೊಂಡು ಒಬ್ಬ ಕಳ್ಳ ಮರಹತ್ತಿ ತೆಂಗಿನಕಾಯಿಗಳನ್ನು ಕೀಳುವುದಕ್ಕೆ ಶುರುಮಾಡಿದ. ಶಬ್ದ ಕೇಳಿಸಿಕೊಂಡು ಪಕ್ಕದ ಮನೆಯವರು ಹೊರಗಡೆ ಬಂದರು. ಕೂಡಲೇ ನಾಲ್ಕೈದು ಜನಗಳು ಬಂದು ಸೇರಿದರು. ಕಳ್ಳ ಮರದ ಮೇಲಿದ್ದವನು ಕೆಳಗಿಳಿದು ಬಂದು ಅವರಿಗೆಲ್ಲ ಹೇಳಿದ, ಏನ್ ಸ್ವಾಮಿ, ಪೋಲೀಸರನ್ನು ಕರೆಸುತ್ತೀರಾ? ಈ ತರಹ ಕಳ್ಳತನಕ್ಕೆ ಒಂದುವಾರ ಜೈಲಿನಲ್ಲಿಡುತ್ತಾರೆ ಅಷ್ಟೆ. ನೀವೇನು ಇಪ್ಪತ್‌ನಾಲ್ಕು ಗಂಟೆಯೂ ಕಾವಲು ಕಾಯ್ತೀರಾ. ಇನ್ನೊಮ್ಮೆ ಬಂದು ಅಲ್ಲಿರುವ ನೂರು ಕಾಯಿಗಳನ್ನೂ ಒಯ್ಯುತ್ತೇನೆ. ಅದರ ಬದಲು ನಿಮ್ಮೆದುರಿಗೇ ಎಲ್ಲವನ್ನೂ ಕೆಳಗಿಳಿಸುತ್ತೇನೆ. ನೀವು ೭೫ ಕಾಯನ್ನು ತೆಗೆದುಕೊಳ್ಳಿ. ಇಪತ್ತೈದು ಕಾಯನ್ನು ತೆಗೆದುಕೊಳ್ಳುತ್ತೇನೆ ಎಂದ. ನೂರು ಕಾಯಿಗಳನ್ನು ಕಳೆದುಕೊಳ್ಳುವುದಕ್ಕಿಂತ, ಎಪತ್ತೈದು ಕಾಯನ್ನು ಉಳಿಸಿಕೊಳ್ಳುವುದು ಉತ್ತಮ ಎಂದು ಯೋಚಿಸಿ ಕಳ್ಳನ ಕರಾರಿಗೆ ಒಪ್ಪಿಕೊಂಡರಂತೆ!! ___😃😃😃___

ಅಕ್ಕಪಕ್ಕ
ನಮ್ಮ ಬುಕ್ಕಾಂಬುಧಿಯಲ್ಲಿ ವಾಸಿಸುತ್ತಿದ್ದ ನಾಗಪ್ಪಶಾಸ್ತ್ರಿಗಳು ತೆಂಗಿನ ಸೊಸಿಗಳನ್ನು ಮಾಡುತ್ತಿದ್ದರು. ಎರಡು ಸೊಸಿಗಳನ್ನು ತಂದು ಬೆಂಗಳೂರು ಜಯನಗರದಲ್ಲಿರುವ ನಮ್ಮ ಮನೆಯ ಮುಂಭಾಗದಲ್ಲಿ, ಅವರೇ ಗುಂಡಿ ತೋಡಿ ಸೊಸಿಗಳನ್ನು ನೆಟ್ಟಿದರು. ಯಾವ ಕೆಲಸವನ್ನೂ ಅವರು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವು ಐದಾರು ವರ್ಷಗಳ ನಂತರ ಮರವಾಗಿ ಬೆಳೆದು ಫಲ ಕೊಡುವುದಕ್ಕೆ ಶುರುವಾಯಿತು. ಒಳ್ಳೆ ಗಾತ್ರದ ಕಾಯಿಗಳು. ಅದರಲ್ಲಿ ಬೆಳೆದ ಕಾಯಿಗಳನ್ನು ಒಣಗಿಸಿ ಕೊಬ್ಬರಿ ಮಾಡಿ ನಮ್ಮ ನೆಂಟರಿಷ್ಟರಿಗೆಲ್ಲ ಹಂಚಿದೆವು.

ಮರ ಇನ್ನೂ ಎತ್ತರಕ್ಕೆ ಬೆಳೆದು ಅದರ ಸೋಗೆ, ಕಾಯಿಗಳು ಆಗಾಗ್ಗೆ ಕೆಳಗೆ ಬೀಳುವಾಗ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಆಗುತ್ತಿರುವುದು ಕಂಡುಬಂದಿದ್ದರಿಂದ ಎರಡು ಮರಗಳನ್ನೂ ತೆಗಿಸಬೇಕಾಯಿತು. ___😞😞😞___

ಕಳ್ಳ ಕುಡಿತ
ನನ್ನ ಹೆಂಡತಿಯ ತಮ್ಮ ಶಿವಸ್ವಾಮಿಗೆ ಬುಕ್ಕಾಂಬುಧಿಯಲ್ಲಿ ಒಂದು ತೆಂಗು, ಅಡಕೆಯ ತೋಟವಿತ್ತು. ಅವನನ್ನು ಎಲ್ಲರೂ ಸ್ವಾಮಿ ಎಂದೇ ಸಂಬೋಧಿಸುತ್ತಿದ್ದರು. ತೋಟ ತುಡಿಕೆಗಳಲ್ಲಿ ಕೆಲಸ ಮಾಡುವುದೆಂದರೆ ಅವನಿಗೆ ಬಹಳ ಹುಮ್ಮಸ್ಸು. ನಾಲ್ಕು ಆಳುಗಳ ಕೆಲಸವನ್ನು ಒಬ್ಬನೇ ಮಾಡುತ್ತಿದ್ದ. ಆಯಾಸ ಎನ್ನುವುದು ಅವನಿ ಗೊತ್ತಿಲ್ಲದ ಪದ.

ಸ್ವಾಮಿಗೆ ಇಸ್ಪೀಟಾಟದ ಹುಚ್ಚು. ಯಾರಾದರೂ ಆಟವಾಡಿದರೆಂದರೆ ಇನ್ನಿಲ್ಲದ ಕೋಪ. ಆಟ ಬಿಟ್ಟು ಎದ್ದೇ ಬಿಡುತ್ತಿದ್ದ. ಒಂದು ಸಲ ಅವನ ತೋಟದಲ್ಲಿ ಒಂದು ಎಳನೀರಿನ ಗೊನೆ ಅಕಸ್ಮಾತ್ತಾಗಿ ಕಳಚಿಬಿತ್ತು. ಏನಿಲ್ಲೆಂದರೂ ಆ ಗೊನೆಯಲ್ಲಿ ಎಪ್ಪತ್ತೈದು ಎಳನೀರುಗಳಿದ್ದವು. ಇನ್ನೊಬ್ಬರಿಗೂ ತಿಳಿಸದೆ, ಅವನೊಬ್ಬನೇ ದಿನಕ್ಕೆ ಐದು ಆರರಂತೆ ಎಲ್ಲವನ್ನೂ ಕುಡಿದು ಮುಗಿಸಿದ. ಅಂತಹ ದಢೂತಿ ಶರೀರ!___😋😋😋___

ಮುಠ್ಠಾಳ
ಒಬ್ಬ ಸುಸಂಸ್ಕೃತನೆನಿಸಿಕೊಂಡಿದ್ದ ಮನುಷ್ಯ, ಬೆಂಗಳೂರು ಕೃಷ್ಣರಾಜೇಂದ್ರ ಮಾರ್ಕೆಟ್ಟಿಗೆ ತೆಂಗಿನಕಾಯನ್ನು ಕೊಳ್ಳಲು ಹೋದ. ವಿಚಾರಿಸಿದಾಗ ಒಂದು ಕಾಯಿಗೆ ಎರಡು ರೂಪಾಯಿ ಎಂದು ತಿಳಿಯಿತು. ಇವನು ಒಂದೂವರೆ ರೂಪಾಯಿಗೆ ಕೇಳಿದ. ಅಂಗಡಿಯವನು ಏನ್ ಸ್ವಾಮಿ ನಾವು ಯಶವಂತಪುರದ ಹತ್ತಿರವಿರುವ ತೋಟಕ್ಕೆ ಹೋಗಿ ಕೊಂಡು ತರಬೇಕು. ಗಾಡಿ ಬಾಡಿಗೆ, ಅಂಗಡಿ ಬಾಡಿಗೆ, ಜೊತೆಗೆ ನಮ್ಮ ಜೀವನ. ನೀವು ತೋಟಕ್ಕೆ ಹೋದರೆ ಒಂದೂವರೆ ರೂಪಾಯಿಗೆ ಸಿಗಬಹುದು. ಹೌದಾ ಎಂದು ಹೇಳಿ ಹೊರಟೇಬಿಟ್ಟ, ಅದೂ ನಡೆದುಕೊಂಡು! ಅಲ್ಲಿಗೆ ಸೇರುವ ಹೊತ್ತಿಗೆ ತುಂಬಾ ಸುಸ್ತಾಯಿತು. ಆದರೂ ಒಂದು ಆಸೆ, ಒಂದೂವರೆ ರೂಪಾಯಿಗೆ ಸಿಗಬಹುದೆಂದು.

ತೋಟದ ಮಾಲಿಕ ತೋಟದ ಮುಂದೆಯೇ ಕುಳಿತಿದ್ದ. ಅವರು ಆಯಾಸದಿಂದ ಏದುಸಿರು ಬಿಡುತ್ತಿರುವುದನ್ನು ನೋಡಿ ಅಯ್ಯೋ ಎನಿಸಿತು. ತಕ್ಷಣ ಒಂದು ಎಳನೀರನ್ನು ಕೆತ್ತಿಕೊಟ್ಟು, ಕುಡಿದು ಸ್ವಲ್ಪ ಸುಧಾರಿಸಿಕೊಳ್ಳಿ ಬುದ್ದಿ ಎಂದ. ಸ್ವಲ್ಪ ಹೊತ್ತಿನ ನಂತರ ಎರಡು ತೆಂಗಿನಕಾಯನ್ನು ಕೊಟ್ಟು, ದೂರದಿಂದ ಬಂದಿದ್ದೀರಿ ತೆಗೆದುಕೊಂಡುಹೋಗಿ ಎಂದು ಹೇಳಿದ. ಹಾಗಾದರೆ ಇನ್ನೆರಡು ಕೊಡು ಎಂದು ಕೇಳಬೇಕೆ ಈ ಮುಠ್ಠಾಳ!___🤨🤨🤨___

ಬಾಯಿ ಬಡಾಯಿ
ಬೆಂಗಳೂರಿನಲ್ಲಿ ಶಾಸ್ತ್ರಿಗಳೊಬ್ಬರು ನನಗೆ ಬಹಳ ಪರಿಚಯಸ್ತರು. ಅವರು ನನಗೆ ಗುರುಗಳೂ ಆಗಿದ್ದರು. ದೂರದ ನೆಂಟರೂ ಕೂಡ. ಪ್ರತಿನಿತ್ಯ ಇಬ್ಬರೂ ಒಟ್ಟಿಗೆ ಇನ್ಸ್ಟಿಟ್ಯೂಟಿಗೆ ಹೋಗಿ ಒಟ್ಟಿಗೇ ಬರುತ್ತಿದ್ದೆವು. ಅವರ ಮನೆಯಮುಂದೆ ಒಂದು ತೆಂಗಿನಮರ ಇತ್ತು. ಚೆನ್ನಾಗಿ ಫಲ ಕೊಡುತ್ತಿತ್ತು. ಒಂದು ಸಲ ವಿಪರೀತ ಮಳೆ, ಗಾಳಿಯಿಂದಾಗಿ ಅನೇಕ ಮರಗಳು ಬಿದ್ದುಬಿಟ್ಟವು. ಶಾಸ್ತ್ರಿಗಳ ಮರವೂ ಉರುಳಿ ಕಾಂಪೌಂಡ್ ಮೇಲೆ ಮಲಗಿ ಬಿಟ್ಟಿತು. ಸುಮಾರು ನೂರು ಎಳನೀರುಗಳಿದ್ದ ಎರಡು ಗೊನೆಗಳು ನಿಂತರೆ ಕೈಗೆ ಸಿಗುವಂತೆ ನೇತಾಡುತ್ತಿದ್ದವು. ಅಕಸ್ಮಾತ್ ಅವರ ಮನೆಗೆ ನಾನು ಹೋದಾಗ, ಶಾಸ್ತ್ರಿಗಳು ಗೊನೆಗಳು ಹೇಗೆ ಬಿದ್ದುವು ಎಂದು ವರ್ಣನೆಮಾಡಿ ಹೇಳಿದರು. ಎಳನೀರುಗಳು ವರಾಂಡಾದಲ್ಲೇ ಇದ್ದುವು. ಎಲ್ಲರೂ ಬೇಜಾರಾಗುವಷ್ಟು ಕುಡಿದೆವು ಎಂದು ಹೆಮ್ಮೆಯಿಂದ ಹೇಳಿದರು. ನನಗೊಂದು ಎಳನೀರನ್ನು ಕೈ ಎತ್ತಿ ಕೊಡಲಿಲ್ಲ.ನನಗೂ ಒಂದು ಕೊಡಿ ಎಂದು ಕೇಳಲು ಮನಸ್ಸು ಹಿಂಜರಿಯಿತು! ___😶😶😶___

ಅದೇ ಕಾಯಿ!
ನನ್ನ ತಂಗಿಯ ಮಗಳು ಗಂಗಮ್ಮ ಮಗಳ ಮದುವೆ ಮಾಡಿದರು. ಅವರ ಸ್ನೇಹಿತರೊಬ್ಬರು ಲಲಿತಮ್ಮ ತೆಂಗಿನ ತೋಟ ಮಾಡಿದ್ದರು. ಮದುವೆಗೆ ಬೇಕಾಗುವಷ್ಟು ತೆಂಗಿನಕಾಯಿಗಳನ್ನು ಅವರು ಕೊಡುವುದಾಗಿ ತಿಳಿಸಿದರು.ಸಾಮಾನ್ಯವಾಗಿ ಮದುವೆಗಳಲ್ಲಿ ಎರಡು ಬಗೆಯ ತೆಂಗಿನಕಾಯಿಗಳನ್ನು ನಾವು ಕಾಣಬಹುದು. ಅವು ಅಡಿಗೆಗೆ ಬೇಕಾದ ದೊಡ್ಡ ಗಾತ್ರದ್ದು. ರಿಸೆಪ್‌ಶನ್‌ನಲ್ಲಿ ಪ್ಲಾಸ್ಟಿಕ್‌ಚೀಲದಲ್ಲಿ ಹಾಕಿ ಬಂದ ಅತಿಥಿಗಳಿಗೆಲ್ಲ ಕೊಡುವ ಕಾಯಿ. ಈ ಗಾತ್ರದ ಕಾಯನ್ನು ಜೇಬಿನಲ್ಲಿ ಇಟ್ಟುಕೊಳ್ಳಬಹುದು! ಕಾಯಿ ಮಾರಾಟಮಾಡುವ ಅಂಗಡಿಗಳಲ್ಲಿ ರಿಸೆಪ್‌ಶನ್ ಕಾಯಿ ಎಂದೇ ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ಅದರಂತೆ ನಾವೂ ಪ್ಲಾಸ್ಟಿಕ ಚೀಲಗಳನ್ನು ತಂದಿದ್ದೆವು. ಆದರೆ ಲಲಿತಮ್ಮ ಕೊಟ್ಟ ತೆಂಗಿನಕಾಯನ್ನು ನೋಡಿದಮೇಲೆ ಚೀಲಗಳನ್ನು ಬದಲಾಯಿಸಬೇಕಾಯಿತು. ಅವರು ಕೊಟ್ಟ ಕಾಯಿಯ ಗಾತ್ರ ಮಾಮೂಲು ರಿಸೆಪ್‌ಶನ್ ಕಾಯಿಯ ಮೂರರಷ್ಟು ದಪ್ಪವಾಗಿತ್ತು. ಅಡಿಗೆಗೂ ಅದೇ ಕಾಯಿ, ರಿಸೆಪ್‌ಶನ್‌ಗೂ ಅದೇ ಕಾಯಿ, ಹಸೆಯ ಮುಂದೆ ನಡೆಸುವ ಶಾಸ್ತ್ರಗಳಿಗೂ ಅದೇ ಕಾಯಿ. ರಿಸೆಪ್‌ಶನ್‌ಗೆ ಬಂದಿದ್ದ ಅತಿಥಿಗಳೆಲ್ಲರೂ ತೆಂಗಿನಕಾಯಿನ ಗಾತ್ರವನ್ನು ನೋಡಿ ಆಶ್ಚರ್ಯಪಟ್ಟರು.___😲😲😲___

ಕರೋ ನ?

ಕರೋನ ವ್ಯಾಧಿ ಏನೆನೆಲ್ಲ ಮಾಡಿಸುತ್ತೆ ಅನ್ನೋದು ಗೊತ್ತಾಗುವುದಿಲ್ಲ. ಮೊನ್ನೆ ಎಲ್ಲೋ ಒಂದು ಹಾಡು ಕೇಳಿದ್ದು ನೆನಪಿಗೆ ಬಂತು. ಭಾಗ್ಯಾದ ಲಕ್ಷ್ಮೀಬಾರಮ್ಮ ಹಾಡಿನ ಧಾಟಿಯಲ್ಲಿ, ಕರೋನ ಹೋಗಿಬೀಡಮ್ಮ, ಮತ್ತೊಮ್ಮೆ ಬಾರದಂತೆ ಹೋಗಿಬೀಡಮ್ಮಾ ಎಂದು!

ಸ್ಕೂಲು, ಕಾಲೇಜುಗಳಲ್ಲಿ ಕರೋನ ಆವಾಂತರದಿಂದಾಗಿ ಉಪಾಧ್ಯಾಯರುಗಳು ಪಾಠಪ್ರವಚನಗಳನ್ನು ಫ಼ೋನ್ ಮೂಲಕ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ಅದು ಎಷ್ಟರಮಟ್ಟಿಗೆ ಸಫಲವಾಗುತ್ತೋ ತಿಳಿಯದು. ಮೇಡಂ ಫ಼ೋನ್‌ನಲ್ಲಿ ದೆಹಲೀ ಮೆ ಕುತುಬ್‌ಮಿನಾರ್ ಹೈ ಎಂದು ಹೇಳಿದಳಂತೆ. ಹುಡುಗ ಅವನ ಪುಸ್ತಕದಲ್ಲಿ ಬರೆದನಂತೆ ದೆಹಲೀ ಮೆ ಕುತ್ತಾ ಬೀಮಾರ್ ಹೈ ಎಂದು! ___😞😞😞___

ನಾನು ಅಮೆರಿಕಾಕ್ಕೆ ಬರುವುದಕ್ಕೆ ಮುಂಚೆ (ಅಂದರೆ ಇಪ್ಪತ್ಮೂರು ವರ್ಷಗಳ ಹಿಂದೆ) ಬೆಂಗಳೂರಿನಲ್ಲಿ ಗೌರಿ-ಗಣೇಶ ವ್ರತಗಳನ್ನು ಮಾಡಿಸುವುದಕ್ಕೆ ಪುರೋಹಿತನಾಗಿ ಕೆಲವಾರು ಮನೆಗಳಿಗೆ ಹೋಗುತ್ತಿದ್ದೆ. ಸಾಮಾನ್ಯವಾಗಿ, ಅಂತಹ ವ್ರತಗಳಿಗೆ ಉಪಾಯನದಾನ ಎಂದು ಅಕ್ಕಿ, ಕಾಯಿ, ಹಣ್ಣು, ದಕ್ಷಿಣೆ ಕೊಡುತ್ತಾರೆ. ಮೊನ್ನೆ, ನಮ್ಮ ಆಫ಼ೀಸಿಗೆ ಒಬ್ಬ ದಂಪತಿಗಳು (ನನಗೆ ಪರಿಚಯಸ್ಥರು) ಬಂದಿದ್ದರು. ಗಣೇಶಪೂಜೆ ಮಾಡಿದೆವು ಎಂದು ಹೇಳಿ, ಆಂಬೊಡೆ, ಕೇಸರೀಭಾತ್ ಒಂದು ಚೀಲದಲ್ಲಿ ಹಾಕಿ ಕೊಟ್ಟರು. ಮನೆಗೆ ತಂದು ನೋಡಿದಾಗ ಅದರ ಜೊತೆ ದಕ್ಷಿಣೆ ಬದಲು ಒಂದು ಪ್ಯಾಕೆಟ್ ಮಾಸ್ಕ್ ಇತ್ತು! ___😷😷😷___

ಎಡವಟ್ಟು

ಕರೋನ ಆವಾಂತರ ಇರಲಿ ಬಿಡಲಿ, ಫ಼ೋನ್ ಬಳಕೆಯಿಂದ ಅನುಕೂಲವೂ ಉಂಟು, ಅನಾನುಕೂಲವೂ ಉಂಟು. ನಮ್ಮ ಸ್ನೇಹಿತರೊಬ್ಬರು, ಹೆಸರು ಶ್ರೀನಿವಾಸ ಮೂರ್ತಿ. ಅವರ ತಂಗಿ ಶಾರದ ಬೆಂಗಳೂರಿನಲ್ಲೇ ಇದ್ದಳು. ಅವರ ನೆಂಟರು ಅರಸೀಕೆರೆಯಿಂದ ಒಂದು ವರ್ತಮಾನ ಕಳುಹಿಸಿದ್ದರು. ಶಾರದಳನ್ನು ಕೂಡಲೇ ಕಳುಹಿಸಿ ಎಂದು. ಮೂರ್ತಿ ಇಂಗ್ಲಿಷ್ ಭಾಷೆಯಲ್ಲಿ ತಾನು ನಿಪುಣನೆಂದು ತಿಳಿದಿದ್ದ. ಅದೇ ಆದದ್ದು ತೊಡಕು. ಶಾರದಳನ್ನು ಕಳುಹಿಸಿ, ಟೆಲಿಗ್ರಾಮ್ ಕೊಟ್ಟ, ಅದು ಫ಼ೋನೋಗ್ರಾಮ್ ಮೂಲಕ "Sharada did start immediately". ಟೆಲಿಗ್ರಾಫ಼್ ಡಿಪಾರ್ಟ್‌ಮೆಂಟಿನವರು ಕೊಟ್ಟಿದ್ದ ಟೆಲಿಗ್ರಾಮ್ ಹೀಗೆ "Sharada died, start immediately". ಮೂರ್ತಿಯವರು ಡಿಪಾರ್ಟ್‌ಮೆಂಟಿಗೆ ದೂರು ಕೊಟ್ಟರು, ಎಷ್ಟು ಆಭಾಸವಾಯಿತು ನೋಡಿ ಎಂದು. ಅವರು ಇಂತಹ ವರ್ತಮಾನಗಳನ್ನು ಕೊಡುವಾಗ ಮುಖತಃ ಬಂದು ಕೊಡಬೇಕು, ಈಗಾಗಿರುವುದಕ್ಕೆ ನಾವು ಜವಾಬ್ದಾರರಲ್ಲ ಎಂದು ಸಲೀಸಾಗಿ ಹೇಳಿಬಿಟ್ಟರು! ___😵😵😵___

ನನಗೇ ಒಂದುಸಲ ಎಡವಟ್ಟಾಗಿತ್ತು. ನಾನು ಕಾಫ಼ೀಬೋರ್ಡಿನಲ್ಲಿ ಕೆಲಸಮಾಡುತ್ತಿದ್ದೆ. ಆಗಿದ್ದ ನನ್ನ ಪೂರ್ತಿ ಹೆಸರು ಬಿ. ವಿ. ಕೃಷ್ಣಮೂರ್ತಿ ಎಂದು. ಆದರೆ ನನ್ನನ್ನು ಎಲ್ಲರೂ, ಚೇರ್‌ಮನ್ ಮೊದಲುಗೊಂಡು, ಬಿವಿಕೆ ಎಂದು ಸಂಬೋಧಿಸುತ್ತಿದ್ದರು. ನನ್ನಂತೆಯೇ ನನ್ನ ಸಹೋದ್ಯೋಗಿಗಳೊಬ್ಬರು, ಅವರ ಹೆಸರು ಟಿ. ವಿ. ಕೇಶವಮೂರ್ತಿ. ಅವರನ್ನು ಟಿವಿಕೆ ಎಂದು ಕರೆಯುತ್ತಿದ್ದರು.

ಕೇಶವಮೂರ್ತಿಯವರು ಕೆಲಸದಿಂದ ನಿವೃತ್ತರಾದ ಮೂರು ವರ್ಷಗಳ ನಂತರ ತೀರಿಕೊಂಡರು. ಅವರ ತಮ್ಮ ಮಲ್ಲಾರಿರಾವ್ ಕೂಡಲೇ ಪೆನ್‌ಶನ್ ವಿಭಾಗಕ್ಕೆ ಫ಼ೋನ್‌ ಮೂಲಕ ತಿಳಿಸಿದರು "TVK expired this morning" ಎಂದು. ಅದನ್ನು ಕೇಳಿಸಿಕೊಂಡವರು "BVK expired this morning" ಎಂದು! ನಾನು ನಿವೃತ್ತನಾದ ಮೇಲೂ ಕಾಫ಼ೀಬೋರ್ಡ್ ಕ್ಲಬ್ಬಿಗೆ ಇಸ್ಪೀಟಾಡಲು ಹೋಗುತ್ತಿದ್ದೆ. ಹೋದಾಗ ಎಲ್ಲರೂ ನನ್ನ ಮುಖ ಮುಖ ನೋಡಿದರು! ಅಷ್ಟು ಹೊತ್ತಿಗೆ ಸರಿಯಾದ ವಿಷಯ ತಿಳಿದಿತ್ತು ಅನ್ನಿ. ___😕😕😕___

___________________

ತಾಗುಲಿ : Bukkambudhi Krishnamurthy, humor in life