ಮೊಬೈಲ್

ಮೊಬೈಲ್ ಮಾನವನ ಅಗತ್ಯವನ್ನು ಪೂರೈಸುವ ಒಂದು ವಸ್ತುವೆ ಅಥವಾ ಅನಿವಾರ್ಯವೆ? ಬೆಳಿಗ್ಗೆ ಎದ್ದು ಮುಂದಿನ ಕಾರ್ಯಕ್ರಮವನ್ನು ನಿಗದಿ ಮಾಡುವುದರಿಂದ ಹಿಡಿದು, ರಾತ್ರಿ ಆತ್ಮೀಯರಿಗೆ ಗುಡ್ನೈಟ್ ಮೇಸೆಜ್ ಕಳುಹಿಸುವರೆಗೂ ಮೊಬೈಲ್ ಅಗತ್ಯವಾಗಿದೆ. ಇಂದು ಎಲ್ಲಾ ಹಳ್ಳಿಗಳಲ್ಲಿಯೂ ಒಬ್ಬರೆ ಮಾತನಾಡುವವರು ಅಲ್ಲಲ್ಲಿ ಸಿಗುತ್ತಾರೆ. ವ್ಯತ್ಯಾಸ ಇಷ್ಟೇ - ಅವರನ್ನು ಯಾರೂ ಮಳ್ಳ, ಹುಚ್ಚ ಎಂದು ಪರಿಗಣಿಸುವುದಿಲ್ಲ. ನಮ್ಮ ಪರಿಸರದಲ್ಲಿ ಇದ್ದ ಗುಬ್ಬಿಯಂತಹ ಹಲವಾರು ಪಕ್ಷಿ, ಕೀಟಗಳು ಸಂಪರ್ಕ ಕ್ರಾಂತಿಯಿಂದ ಮರೆಯಾಗಿವೆ. ಅದರಂತೆ ಮಾನವನ ಮೇಲೂ ಹಲವಾರು ದುಷ್ಪಪರಿಣಾಮಗಳು ಆಗುತ್ತಾ ಇದ್ದರೂ, ಏನು ಕಾಣಿಸುತ್ತಿಲ್ಲವಾಗಿವೆ.


ಮೊಬೈಲ್

*** ವಿವೇಕ ಬೆಟ್ಕುಳಿ, ಕುಮಟಾ

ಮೊಬೈಲ್ ಎಂಬ ಪುಟ್ಟ ಯಂತ್ರದ ಸಹಾಯದಿಂದ ವಿದೇಶದಲ್ಲಿರುವ ಮಗಳು ಅಳಿಯನೊಂದಿಗೆ, ಪೇಟೆಗೆ ಹೋದ ಮಗನೊಂದಿಗೆ ಹೀಗೆ ನಮಗೆ ಹತ್ತಿರದ ಎಲ್ಲರೊಂದಿಗೆ ನಮಗೆ ಅಗತ್ಯವೆನಿಸಿದಾದ ನೇರವಾಗಿ ಅವರೊಂದಿಗೆ ಎಲ್ಲಿಯಾದರೂ ನಿಂತು ಮಾತನಾಡಲು ಇಂದು ಸಾಧ್ಯವಾಗಿರುವುದು. ಈ ರೀತಿಯ ಬದಲಾವಣೆ ಆಗುತ್ತದೆ ಎಂದು ಅದನ್ನು ಬಳಕೆ ಮಾಡುವ ಬಹುತೇಕ ಜನರಿಗೆ ಹಿಂದೆ ತಿಳಿದಿರಲಿಲ್ಲ. ಆದರೆ ಇಂದು ಸಾಧ್ಯವಾಗಿದೆ. ಹೌದು ಮೊಬೈಲ್ ಇಂದು ನಮ್ಮ ಜೀವನದಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದಿರುವುದು. ಮೊಬೈಲ್ ಮಾನವನ ಅಗತ್ಯವನ್ನು ಪೂರೈಸುವ ಒಂದು ವಸ್ತುವೆ ಅಥವಾ ಅನಿವಾರ್ಯವೆ? ಹತ್ತು ವರ್ಷದ ಹಿಂದೆ ಮೊಬೈಲ ಎಂಬುದು ಒಂದು ಅಗತ್ಯವಾಗಿತ್ತು, ಆದರೇ ಇಂದು ಅದು ಅಗತ್ಯವನ್ನು ಮೀರಿ ಅಗತ್ಯದ ಪೂರೈಕೆಗಾಗಿ ಇರುವ ಯಂತ್ರದ ದಾಸರಾಗಿರುವೆವು ಎಂಬುದು ನಿಜವಾಗಿದೆ.

ರಾಜರ ಕಾಲದಲ್ಲಿ ಸಂಪರ್ಕಕ್ಕಾಗಿ ಪಾರಿವಾಳವನ್ನು ಬಳಸುತ್ತಿದ್ದರು ಎಂಬುದನ್ನು ಪೌರಾಣಿಕ ಸಿನಿಮಾಗಳಲ್ಲಿ ನೋಡಿರುವೆವು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಸಂಪರ್ಕಕ್ಕಾಗಿ ವ್ಯಕ್ತಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪತ್ರ ತಲುಪಿಸುತ್ತಿದ್ದರು ಎಂಬುದನ್ನು ತಿಳಿದಿರುವೆವು. ಸ್ವಾತಂತ್ರ್ಯಾನಂತರ ಅಂಚೆ ಇಲಾಖೆ ಪ್ರಮುಖ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿರುವುದನ್ನು ಪತ್ರ, ಗ್ರೀಟಿಂಗ್ಸ್ ಬರೆದು ನಾವೇ ಕಂಡಿರುವೆವು. ತಕ್ಷಣದ ಸಂದೇಶಕ್ಕಾಗಿ ಆಗ ಅಂಚೆ ಇಲಾಖೆ ಟೆಲಿಗ್ರಾಂ ವ್ಯವಸ್ಥೆ ಇದ್ದು ತುಂಬಾ ಅನಿವಾರ್ಯತೆಯಲ್ಲಿ ಜನತೆ ಇದನ್ನು ಬಳಸುತ್ತಿದ್ದರು. ತದನಂತರ ಅಂದರೆ ಹತ್ತು ವರ್ಷದ ಹಿಂದೆ ಬೇರೆ ರಾಜ್ಯ ಅಥವಾ ದೇಶದವರೊಂದಿಗೆ ಮಾತನಾಡಬೇಕೆಂದರೆ ತಾಲ್ಲೂಕಾ ಕೇಂದ್ರಕ್ಕೆ ಹೋಗಿ ಟೇಲಿಪೋನ ಬೂತ್ ಮೂಲಕ ಮಾತನಾಡಬೇಕಾಗಿತ್ತು. ಒಂದೆರಡು ವರ್ಷದಲ್ಲಿ ಟೆಲಿಫೋನ್ ಬೂತ್ ಗ್ರಾಮ ಗ್ರಾಮದಲ್ಲಿ ತಲೆ ಎತ್ತಿತ್ತು. ಸಾಕಷ್ಟು ಜನಕ್ಕೆ ಉದ್ಯೋಗವನ್ನು ಕಲ್ಪಿಸಿತು. ೨೦೦೦ ದಶಕದಲ್ಲಿ ಟೋಲಿಪೋನ ಬೂತ್ ಬಿಜನೆಸ್ಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಆ ಸಂದರ್ಭದಲ್ಲಿ ಬೂತ್ನಲ್ಲಿ ಕಾರ್ಯನಿರ್ವಹಿಸುವ ಹುಡುಗಿ/ಹುಡುಗರಿಗೆ ಈ ಬಿಸನೆಸ್ ನೋಡಿಯೇ ಕೆಲವರ ನೆಂಟಸ್ತಿಕೆ ಆಗಿ ಮದುವೆಯಾಗಿರುವುದು ಇದೆ. ಯಾವಾಗ ೨೦೦೫ ರ ನಂತರ ಮೊಬೈಲ ಬಳಕೆ ಹೆಚ್ಚಾಯಿತೋ ಆಗ ಜನಸ್ನೇಹಿಯಾಗಲಾರಂಭಿಸಿತು. ಒಂದೊಂದೆ ಟೇಲಿಪೋನ ಬೂತ್ಗಳು ಮುಚ್ಚಲಾರಂಭಿಸಿದವು. ಇಂದು ಎಲ್ಲಾದರೂ ಟೇಲಿಪೋನ ಬೂತ್ ಒಂದು ಸಿಕ್ಕರೆ ಅದು ಮ್ಯೂಜಿಯಂನಲ್ಲಿ ಇಡುವಂತಹ ವಸ್ತುವೆ! ಟೆಲಿಗ್ರಾಂ ಅನ್ನುವುದು ಹೆಸರಿಲ್ಲದೆ ಹೋಗಿದೆ. ಅಂಚೆಯಣ್ಣನ ಕೆಲಸ ಕಡಿಮೆಯಾಗಿದೆ. ಅಂಚೆ ಇಲಾಖೆಯ ಕಾರ್ಯವೈಖರಿ ಬೇರೆ ರೂಪ ಪಡೆದುಕೊಂಡಿದೆ. ಇವೆಲ್ಲಾ ಬದಲಾವಣೆಗೆ ಕಾರಣ ಮೊಬೈಲ್. ಒಂದು ಕಂಪನಿಯ ಜಾಹೀರಾತಿನಂತೆ ದುನಿಯಾ ಮುಟ್ಠೀ ಮೇ ಹೈ ಎಂಬುದು ನಿಜವಾಗಿದೆ.

ಇಂದು ಏಡ್ಸಗಿಂತಲ್ಲೂ ವೇಗವಾಗಿ ಹರಡುತ್ತಿರುವ ಕಾಯಿಲೆ ಎಂದರೆ ಈ ಮೊಬೈಲ ಕಾಯಿಲೆ ಎಂದರೆ ತಪ್ಪಾಗಲಾರದು! ಇಂದಿನ ಯುವ ಪೀಳಿಗೆ ಒಂದು ದಿನ ಮೊಬೈಲೆ ಬಿಟ್ಟು ಇರಲು ಸಿದ್ಧರಿಲ್ಲ. ಓದುವಾಗ, ಬರೆಯುವಾಗ, ತಿನ್ನುವಾಗ, ಮಲಗುವಾಗ ಮೊಬೈಲ ಹತ್ತಿರವೇ ಇರಬೇಕು ಅಷ್ಟೊಂದು ಆತ್ಮೀಯವಾಗಿ ಬಿಟ್ಟಿದೆ. ಮೊಬೈಲ್ನಲ್ಲಿ ಕರೆನ್ಸಿ ಇಲ್ಲದೆ ವ್ಯಕ್ತಿ ನೀರಿಲ್ಲದ ಮೀನಿನಂತೆ ಹಾರಾಡುತ್ತಿರುವನು. ಶಾಲೆಗೆ ಹೋಗುವ ಮಕ್ಕಳಿಂದ ನಾಳೆ ನಾಡಿದ್ದು ಇಹಲೋಕ ತ್ಯಜಿಸುವ ಮಾತನಾಡುವಂತಹ ವ್ಯಕ್ತಿಗೆ ಮೊಬೈಲ ಇಂದು ಅನಿವಾರ್ಯವಾಗಿದೆ. ಇದು ಅಗತ್ಯ ಪೂರೈಸುವ ಒಂದು ಸಾಧನಕ್ಕಿಂತ, ಗಾಳಿ, ನೀರು, ಆಹಾರ, ಬಟ್ಟೆ ಈ ಗುಂಪಿಗೆ ಸೇರುವ ಅನಿವಾರ್ಯತೆಯ ಹಂತಕ್ಕೆ ತಲುಪಿದೆ. ನಮ್ಮ ಅಗತ್ಯ ಪೂರೈಸುವ ಒಂದು ವಸ್ತುವಿನ ಮೇಲೆ ಈ ರೀತಿಯ ಅವಲಂಬಿಸಿಕೊಂಡಿರುವ ನಾವು ಇದು ನಮಗೆ ನಾವೇ ತಗುಲಿಸಿಕೊಂಡಿರುವ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ!

ಸರ್ಕಾರಿ ನೌಕರಿಗೆ ಮೀಟಿಂಗ ನೋಟಿಸಿಗಾಗಿ, ಕಛೇರಿಯ ಅಂಕಿ ಸಂಖ್ಯೆ ತಿಳಿಯುವುದಕ್ಕಾಗಿ, ಮೇಲಾಧಿಕಾರಿಗಳ ಪ್ರವಾಸದ ಬಗ್ಗೆ ತಿಳಿಸುವುದಕ್ಕಾಗಿ, ಸಹಪಾಠಿಯ ಕಳ್ಳ ರಜೆಯ ಮಾಹಿತಿಯನ್ನು ಮುಟ್ಟಿಸುವುದಕ್ಕಾಗಿ ಮೊಬೈಲ ಅನಿವಾರ್ಯವಾದರೆ, ಯುವ ಸಮೂಹಕ್ಕೆ ತಮ್ಮ ಮನದ ಭಾವನೆಯನ್ನು ತಮ್ಮ ಇಷ್ಟದವರೊಂದಿಗೆ ಹಂಚಿಕೊಳ್ಳಲು, ತಿರುಗಾಡಲು ಹೋಗುವ ಸಮಯ, ಸ್ಥಳವನ್ನು ತಿಳಿಸಲು, ಎದುರಿಗೆ ಮಾತನಾಡಲು ಸಾಧ್ಯವಾಗದಂತಹ ವಿಷಯವನ್ನು ಮೆಸೇಜ್ ಮೂಲಕ ತಿಳಿಸಲು, ಇಷ್ಟದ ಹಾಡನ್ನು ಕೇಳುತ್ತಾ ಇರಲು, ವ್ಯವಹಾರಸ್ಥರಿಗೆ ತಮ್ಮ ವ್ಯವಹಾರವನ್ನು ಮಾಡಲು ಮತ್ತು ತಮ್ಮ ವ್ಯವಹಾರದ ಪ್ರತಿಷ್ಠೆಯನ್ನು ತೋರ್ಪಡಿಸಲು, ಸಾಮಾನ್ಯನಿಗೆ ದಿನನಿತ್ಯದ ಎಲ್ಲಾ ಕೊಡು ಕೊಳ್ಳುವ ವ್ಯವಹಾರದಲ್ಲಿಯೂ ಮೊಬೈಲ್ ಅನಿವಾರ್ಯವಾಗಿದೆ. ಒಟ್ಟಾರೆ ಬೆಳಿಗ್ಗೆ ಎದ್ದು ಮುಂದಿನ ಕಾರ್ಯಕ್ರಮವನ್ನು ನಿಗದಿ ಮಾಡುವುದರಿಂದ ಹಿಡಿದು, ರಾತ್ರಿ ಆತ್ಮೀಯರಿಗೆ ಗುಡ್ನೈಟ್ ಮೇಸೆಜ್ ಕಳುಹಿಸುವರೆಗೂ ಮೊಬೈಲ್ ಅಗತ್ಯವಾಗಿದೆ.

ಮೊಬೈಲ್ ಇಂದು ಕೇವಲ ಮಾತನಾಡುವ ವಸ್ತುವಾಗಿ ಇಲ್ಲ. ಬದಲಾಗಿ ಮನರಂಜನೆಯ ಪೆಟ್ಟಿಗೆಯಾಗಿ, ಆಟವಾಡುವ ವಸ್ತುವಾಗಿ, ಪತ್ರ ಬರೆದು ಓದುವ ಸಾಧನವಾಗಿ, ಬ್ಯಾಂಕ ವ್ಯವಹಾರವನ್ನು ಮಾಡುವ ಮತ್ತು ಟಿಕೇಟ ಬುಕಿಂಗ್ ಮಾಡುವ ಯಂತ್ರವಾಗಿ ಬದಲಾಗಿದೆ.

ಕಾಲಕಾಲಕ್ಕೆ ಮತ್ತು ಜನತೆಯ ಆಶೋತ್ತರಗಳಿಗೆ ತಕ್ಕಂತೆ ಮೊಬೈಲಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಹತ್ತು ಹಲವಾರು ಕಂಪನಿಗಳು ವಿವಿಧ ರೀತಿಯ ಕೊಡುಗೆಗಳ ಮುಖಾಂತರ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಕರೆ ಬಂದಾಗ ಮತ್ತು ಮೆಸೇಜ್ ಬಂದಾಗ ಎಚ್ಚರಿಸುವ ವಿವಿಧ ನಮೂನೆಯ ಶಬ್ದ ಹಾಡುಗಳು ಮೊಬೈಲನಲ್ಲಿವೆ.

ಮೊಬೈಲ ಇಂದು ದೇಶದಲ್ಲಿ ಹೆಚ್ಚು ವ್ಯಾಪಾರವಾಗುತ್ತಿರುವ ವಸ್ತುವಾಗಿದೆ. ದಿನದಿಂದ ದಿನಕ್ಕೆ ಇದರ ಮಾರುಕಟ್ಟೆ ವಿಸ್ತರಿಸುತ್ತಿದೆ. ಐದಾರು ವರ್ಷದ ಹಿಂದೆ ಒಂದು ಬಿಎಸ್ಎನ್ಎಲ್ ಸಿಮ್ ಕೊಳ್ಳಬೇಕೆಂದರೆ ತಿಂಗಳು ಮೊದಲೇ ಬುಕಿಂಗ್ ಮಾಡಬೇಕಾಗಿತ್ತು. ಕಛೇರಿಯಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿರಲಿಲ್ಲ. ಯಾವುದೋ ಪ್ರಭಾವ ಬೀರಿ ಸಿಮ್ ಪಡೆದುಕೊಳ್ಳುವ ಪ್ರಯತ್ನವು ಇರುತ್ತಿತ್ತು. ಆ ನಂತರವು ಅದು ಸಿಗುವುದು ಕಷ್ಟವಾಗಿತ್ತು. ಆದರೆ ಇಂದು ಹತ್ತಾರು ಕಂಪನಿಗಳು ಈ ಕ್ಷೇತ್ರವನ್ನು ಪ್ರವೇಶಿಸಿದ ಪರಿಣಾಮವಾಗಿ ಬೀದಿ ಬೀದಿಯಲ್ಲಿ ಸಿಮ್ ಮಾರಾಟ ಪ್ರಾರಂಭವಾಗಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಬೀದಿಯಲ್ಲಿ ತಾತ್ಕಾಲಿಕ ಶೆಡ್ಗಳ ಮೂಲಕ, ಸಂಚಾರಿ ಅಂಗಡಿಗಳ ಮೂಲಕ ಸಿಮ್ ಮಾರಾಟ ನಿರಂತರವಾಗಿದೆ. ತಮ್ಮ ಅಸ್ತಿತ್ವ ಕಾಯ್ದುಕೊಳ್ಳಲು ಬಿಎಸ್ಎನ್ಎಲ್ ಅವರು ಕೂಡ ಎಲ್ಲರಂತೆ ಬೀದಿಗಿಳಿದು ವ್ಯಾಪಾರ ಪ್ರಾರಂಭಿಸಿದ್ದಾರೆ. ಅವರು ಗ್ರಾಹಕರನ್ನು ಆಕರ್ಷಿಸುವ ರೀತಿ ಬದಲಾಗಿದೆ. ಜನಸಂದಣಿ ಇರುವ ಎಲ್ಲಾ ಪ್ರದೇಶದಲ್ಲಿ ಇಂದು ಮೊಬೈಲ್ ಅಂಗಡಿಗಳಿವೆ. ಹಳ್ಳಿ ಹಳ್ಳಿಗಳ ಅಂಗಡಿಯಲ್ಲಿ ಕರೆನ್ಸಿ ಸಿಗುತ್ತಿದೆ. ಎಲ್ಲಾ ಕಡೆ ದೊಡ್ಡ ದೊಡ್ಡ ವಿವಿಧ ಕಂಪನಿಗಳ ಜಾಹೀರಾತುಗಳಿವೆ. ಒಟ್ಟಾರೆ ಹೆಚ್ಚಿನ ಜನಕ್ಕೆ ಇದು ಉದ್ಯೋಗವನ್ನು ಕಲ್ಪಿಸಿರುವುದು. ಎಲ್ಲಾ ಕಂಪನಿಗಳು ಮಾರುಕಟ್ಟೆ ವಿಸ್ತರಣೆಗಾಗಿ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಮತ್ತು ಯುವ ಸಮೂಹವನ್ನು ಕೇಂದ್ರಿಕರಿಸಿರುವುದನ್ನು ಕಾಣಬಹುದಾಗಿದೆ.

ಹಿಂದೆ ಸಂಬಳ ಸಂದಾಯ ಆಗಿದೆ ಎಂಬುದನ್ನು ತಿಳಿಯಲು ಬ್ಯಾಂಕ ಹೋಗಿ ವಿಚಾರಿಸಬೇಕಾಗಿತ್ತು. ಇಲ್ಲ ಯಾರಾದರೂ ಪಟ್ಟಣಕ್ಕೆ ಹೋದ ಸಹಪಾಠಿಗಳಿಂದ ಕೇಳಿ ತಿಳಿಯಬೇಕಾಗಿತ್ತು. ಆದರೇ ಇಂದು ಹಣ ಖಾತೆಗೆ ಬಂದ ೧೦ ನಿಮಿಷದಲ್ಲಿ ಮೆಸೇಜ ಬರುವುದು. ಬೇರೆ ಬೇರೆ ಕಂಪನಿಗಳು ತಮ್ಮ ತಮ್ಮ ವ್ಯವಹಾರವನ್ನು ಕುದುರಿಸಲು ಮೊಬೈಲ ಮುಖಾಂತರ ಜಾಹೀರಾತು ನೀಡುತ್ತಿರುವುದನ್ನು ಕಾಣಬಹುದಾಗಿದೆ.

ಆರು ವರ್ಷದ ಹಿಂದಿನ ಮಾತು ಕುಮಟಾದ ಸರ್ಕಲ್ನಲ್ಲಿ ಹಳ್ಳಿಯಿಂದ ಬಂದ ಹೆಂಗಸರ ಗುಂಪೊಂದು ದಾರಿಯಲ್ಲಿ ಮೊಬೈಲನಲ್ಲಿ ಮಾತನಾಡುತ್ತಾ ನಿಂತಿರುವ ಒಬ್ಬ ಗುತ್ತಿಗೆದಾರರನ್ನು ನೋಡಿ "ಏ! ಅವನಿಗೆ ಮಳ್ಳ ಹಿಡಿದಿದೆ ನೋಡೇ, ತನ್ನಟ್ಟಕೆ ಮಾತಡದಿಂವ್. ಸಾವಕಾರನಂಗೆ ಕಾಣುತ್ತಿಯಾ ಪಾಪ!" ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಇನ್ನೂ ಮೊಬೈಲ್ ಬಳಕೆ ಪ್ರಾರಂಭವಾಗಿರಲಿಲ್ಲ. ಇಂದು ಎಲ್ಲಾ ಹಳ್ಳಿಗಳಲ್ಲಿಯೂ ಒಬ್ಬರೆ ಮಾತನಾಡುವವರು ಅಲ್ಲಲ್ಲಿ ಸಿಗುತ್ತಾರೆ. ವ್ಯತ್ಯಾಸ ಇಷ್ಟೇ - ಅವರನ್ನು ಯಾರೂ ಮಳ್ಳ, ಹುಚ್ಚ ಎಂದು ಪರಿಗಣಿಸುವುದಿಲ್ಲ. ನಿಜವಾಗಿ ಹುಚ್ಚನಾಗಿದ್ದರೂ ಆತನ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಮೊಬೈಲ ಬಳಕೆ ತಿಳಿಯದ ವ್ಯಕ್ತಿ ಅನಕ್ಷರಸ್ಥ, ಮೊಬೈಲ ಇಲ್ಲದ ಯವಕ/ಯುವತಿ ಹಳ್ಳಿ ಗುಗ್ಗು ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ.

ಎನ್ಡಿಎ ಸರ್ಕಾರ ಇದ್ದಾಗ ಪ್ರಮೋದ ಮಹಾಜನ ಸಂಪರ್ಕ ಕ್ರಾಂತಿಯ ಬಗ್ಗೆ ಕಂಡ ಕನಸು ಇಂದು ನನಸಾಗಿದೆ. ದುರಾದೃಷ್ಟವಶಾತ ಅವರು ನಮ್ಮೊಂದಿಗೆ ಇಲ್ಲ. ಆದರೆ ಸಂಪರ್ಕ ಕ್ರಾಂತಿಯ ಹೆಸರಿನಲ್ಲಿ ಅತಿ ದೊಡ್ಡ ಹಗರಣವನ್ನು ಮಾಡಿರುವ ಹಾಲಿ ಯುಪಿಎ ಸರ್ಕಾರದ ಎ. ರಾಜಾ ಮಾಜಿ ಮಂತ್ರಿಯಾಗಿ ನಮ್ಮೊಂದಿಗೆ ಇರುವರು. ಇದೂ ಕೂಡ ಮೊಬೈಲ್ ಕ್ರಾಂತ್ರಿಯ ಒಂದು ಆಯಾಮವೆ ಆಗಿರುವುದು.

ನಾವು ಬಳಸುತ್ತಿರುವ ಮೊಬೈಲ್, ಇಂಟರನೆಟ್, ರೇಡಿಯೋ, ಟಿವಿ ಇವೆಲ್ಲವು ತಂರಗಗಳ ಮೂಲಕವೇ ನಡೆಯುವುದು. ವಾತಾವರಣದಲ್ಲಿ ಈ ಮಾನವ ಸೃಷ್ಟಿತ ತರಂಗಗಳು ಹೆಚ್ಚಿದಂತೆ ಅದು ಪರಿಸರ ವಿವಿಧ ಜೀವಿಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಅದರಲ್ಲಿಯೂ ಮೊಬೈಲ್ ಕ್ರಾಂತಿ ಎಂದೂ ಪ್ರಾರಂಭವಾಯಿತೋ ಅಂದಿನಿಂದ ಹಳ್ಳಿ ಹಳ್ಳಿಗಳಲ್ಲಿ ಮೊಬೈಲ್ ಟವರ್ ತಲೆಎತ್ತಿತ್ತು. ಆ ನಂತರದಲ್ಲಿ ಗುಬ್ಬಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹಳ್ಳಿಗಳಲ್ಲಿ ಕಡಿಮೆಯಾದರೆ ಪಟ್ಟಣದಲ್ಲಿ ಗುಬ್ಬಿಯನ್ನು ಚಿತ್ರದಲ್ಲಿ ಮಾತ್ರ ನೋಡುವಂತಾಗಿದೆ. ನಮ್ಮ ಪರಿಸರದಲ್ಲಿ ಇದ್ದ ಗುಬ್ಬಿಯಂತಹ ಹಲವಾರು ಪಕ್ಷಿ, ಕೀಟಗಳು ಸಂಪರ್ಕ ಕ್ರಾಂತಿಯಿಂದ ಮರೆಯಾಗಿವೆ. ಅದರಂತೆ ಮಾನವನ ಮೇಲೂ ಹಲವಾರು ದುಷ್ಪಪರಿಣಾಮಗಳು ಆಗುತ್ತಾ ಇದ್ದರೂ, ಏನು ಕಾಣಿಸುತ್ತಿಲ್ಲವಾಗಿವೆ.

ಪ್ರಕೃತಿಯಲ್ಲಿ ನಮ್ಮ ರೀತಿಯಲ್ಲಿಯೆ ಬದುಕ ಬೇಕಾದ ಅನೇಕ ಜೀವ ಸಂಕುಲವನ್ನೆ ಆಧುನಿಕತೆಯ ಹೆಸರಿನಲ್ಲಿ ನಾಶ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂಬುದನ್ನು ನಾವು ನೆನಪಿರಿಸಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ಮೊಬೈಲ ನಮ್ಮನ್ನು ಎಲ್ಲಿ ತೆಗೆದುಕೊಂಡು ಹೋಗಿ ಮುಟ್ಟಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆ ಬಗ್ಗೆ ಈಗಲೇ ಚಿಂತಿಸದಿದ್ದರೆ ಮುಂದಿನ ಪರಿಸ್ಥಿತಿಯನ್ನು ಎದುರಿಸಲು ಕಷ್ಟವಾಗಬಹುದು. ಒಂದಾನು ವೇಳೆ ಒಂದು ದಿನದ ಮಟ್ಟಿಗೆ ಏನಾದರೂ ಸಂಪೂರ್ಣ ಮೊಬೈಲ್ ಸಂಪರ್ಕ ನಿಂತು ಹೋದರೆ ಅದರ ಪರಿಣಾಮ ಒಂದು ಹಂತದ ಪ್ರಳಯದಂತೆ ಇರುವುದು. ಮುಂದೆ ಅದನ್ನೆ ಪ್ರಳಯದ ಮುನ್ಸೂಚನೆ ಎಂದು ಕೊಳ್ಳಬಹುದು. ಪ್ರಕೃತಿಯ ಮೇಲೆ ಇದೇ ರೀತಿ ಮಾನವನ ದಬ್ಬಾಳಿಕೆ ನಡೆದರೆ ಪ್ರಕೃತಿಗೂ ತನ್ನನ್ನು ಸಮತೋಲನ ಮಾಡಿಕೊಳ್ಳುವ ವಿಧಾನ ತಿಳಿದಿದೆ ಎಂಬುದನ್ನು ನಾವು ಮರೆಯಬಾರದು.

ನಾವು ಆಧುನಿಕ ಯುಗದಲ್ಲಿ ಯಂತ್ರಗಳ ದಾಸರಾಗುವುದಕ್ಕಿಂತ ನಮ್ಮ ಅಂಕೆಯಲ್ಲಿ ಯಂತ್ರಗಳನ್ನು ಇರಿಸಿಕೊಂಡು ಮುಂದುವರೆಯುವುದನ್ನು ರೂಢಿಸಿಕೊಳ್ಳಬೇಕಾಗಿದೆ.


ತಾಗುಲಿ : Mobile, Vivek Betkuli

yes. 100%