ಅಸ್ಥಿರವಾಗುತ್ತಿರುವ ಕುಟುಂಬ ವ್ಯವಸ್ಥೆ

[ದೇಶ ಅಭಿವೃದ್ಧಿ ಆದಂತೆ, ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆ ಶಿಥಿಲವಾಗಿ ಹಲವು ಸಂಪ್ರದಾಯಗಳು ಮೊಟಕುಗೊಂಡರೆ ಇನ್ನು ಕೆಲವು ಸಂಪೂರ‍್ಣ ಮಾಯವಾಗುವವು. ಇದು ಅನಿವಾರ್ಯವೆ? ಸಂಪ್ರದಾಯಗಳ ಉದ್ದೇಶಗಳನ್ನು ಅರಿತು ಮೂಲಭೂತ ಅಂಶಗಳನ್ನು ಉಳಿಸಿಕೊಂಡು, ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವೆ? ಈ ನಿಟ್ಟಿನಲ್ಲಿ, ಇಂಥ ಪರಿಸ್ಥಿತಿಗೆ ನಾವು ಬಂದು ಮುಟ್ಟಿರುವ ಕಾರಣಗಳನ್ನು ಕೆದಕಿ ನೋಡುವುದು ಅವಶ್ಯ.]

*** ವಿವೇಕ ಬೆಟ್ಕುಳಿ ***

ಇಡೀ ಜಗತ್ತಿಗೆ ಅವಿಭಕ್ತ ಕುಟುಂಬ ವ್ಯವಸ್ಥೆಯ ಮೌಲ್ಯ, ಪ್ರಯೋಜನಗಳ ಬಗ್ಗೆ ಮಾದರಿಯಾಗಿದ್ದ ನಮ್ಮ ದೇಶದ ಕುಟುಂಬ ವ್ಯವಸ್ಥೆಯ ಬುಡವೇ ಅಲುಗಾಡಲು ಪ್ರಾರಂಭವಾಗಿರುವುದು. ಜಾಗತೀಕರಣ ಯಾವ ದಿನದಿಂದ ಪ್ರಾರಂಭವಾಯತೋ ಅಂದಿನಿಂದ ನಿರಂತರವಾಗಿ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಬದಲಾಗುತ್ತಾ ಇರುವವು. ನಮ್ಮ ಕುಟುಂಬ ವ್ಯವಸ್ಥೆಯ ಶೈಲಿಯಲ್ಲಿ ನಿಧಾನವಾಗಿ ಪರಿವರ್ತನೆ ಆಗುತ್ತಿರುವುದು. ಇದರ ಪರಿಣಾಮವಾಗಿ ಹಬ್ಬಗಳ ಆಚರಣೆ ಸಹಾ ತನ್ನ ಮೂಲ ಅರ್ಥವನ್ನು ಕಳೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದೇ ರೀತಿಯಾಗಿ ದೇಶ ಅಭಿವೃದ್ಧಿ ಆದರೆ ಇನ್ನೂ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲಾ ಸಂಪ್ರದಾಯ ಆಚರಣೆಗಳನ್ನು ಬಿಟ್ಟು, ನಮ್ಮನ್ನು ನಾವು ಸಂಪೂರ್ಣ ಮರೆತು ಹೋಗುವ ಸಾಧ್ಯತೆ ಹೆಚ್ಚಾಗಿರುವುದು. ಬದಲಾವಣೆಯ ಗಾಳಿಯಲ್ಲಿ ನಮ್ಮ ಕುಟುಂಬ ವ್ಯವಸ್ಥೆ ಅಸ್ಥಿರವಾಗಲು ಕಾರಣಗಳೇನು ಎಂಬುದರ ಬಗ್ಗೆ ಕೆಳ ಕಾಣಿಸಿದ ಕೆಲವೊಂದು ಅಂಶಗಳನ್ನು ಗುರುತಿಸಬಹುದಾಗಿದೆ.

ಅರ್ಥ ಕಳೆದುಕೊಳ್ಳುತ್ತಿರುವ ಮದುವೆ
ಆಧುನಿಕಯುಗದಲ್ಲಿ ಮದುವೆಯ ಅರ್ಥೈಸುವಿಕೆ ಬದಲಾಗಿರುವುದು.ವಿದೇಶಗಳಲ್ಲಿನ ಆಚಾರ ವಿಚಾರದಂತೆ ಇಲ್ಲಿನ ಯುವಕಯುವತಿಯರು ಜೀವನವನ್ನು ನಡೆಸಲು ಇಷ್ಟಪಡುವರು. ನೂರಾರು ಸಂಸ್ಕೃತಿಯ ಮದುವೆಗಳು ನಮ್ಮ ದೇಶದಲ್ಲಿನಡೆಯುತ್ತಿತ್ತು. ಆದರೇ ಇಂದು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಎಲ್ಲಾ ಬಗೆಯ ಮದುವೆಗಳನ್ನು ಹೊರತು ಪಡಿಸಿ ಲಿವಿಂಗ ರಿಲೇಷನ್ ಎಂಬ ಕರಾರು ಸಂಬಂಧಗಳು ಹೆಚ್ಚಾಗುತ್ತಿರುವುದು. ಹಾಗೇ ಸ್ವತಂತ್ರವಾಗಿ ಬದುಕಲು ಇಷ್ಟಪಡುವ ಯುವ ಸಮೂಹ ಮದುವೆ ಎಂಬ ಸುಳಿಗೆ ಸಿಕ್ಕಲು ಇಷ್ಟಪಡುತ್ತಿಲ್ಲ. ಪರಿಣಾಮವಾಗಿ ನಮ್ಮ ಸಂಸ್ಕೃತಿಯ ಬಹು ಮುಖ್ಯ ಅಂಶವಾದ ಮದುವೆ ಎಂಬುದು ನಿಧಾನವಾಗಿ ಅರ್ಥ ಕಳೆದುಕೊಳ್ಳುತ್ತಿರುವುದು. ದುರಂತ ಎಂದರೆ, ವಿದೇಶದಲ್ಲಿ ನೆಲೆಸಿರುವ ಜನರು ಇಲ್ಲಿನ ಸಂಪ್ರದಾಯ ಅನುಸರಿಸುತ್ತಾ ಇರುವರು. ಆದರೆ ಇಲ್ಲೇ ಇರುವವರಿಗೆ ನೆಲದ ಸಂಪ್ರದಾಯ ಗೊಡ್ಡು ಸಂಪ್ರದಾಯದಂತೆ ಕಾಣುತ್ತಿರುವುದು. ಪರಿಣಾಮವಾಗಿ, ಹಬ್ಬದ ಸಮಯದಲ್ಲಿ ಮಾವನ ಮನೆಗೆ ಅಳಿಯ ಬರುವುದು ಈ ಎಲ್ಲಾ ಸಂಭ್ರಮಗಳು ದಿನೇ ದಿನೇ ಕಡಿಮೆಯಾಗುತ್ತಿರುವುದು.

ಮಕ್ಕಳ ಹುಟ್ಟುವಿಕೆ ಅನಿವಾರ್ಯವಲ್ಲ,ಆಯ್ಕೆ
ಹಿಂದೆ ಕುಟುಂಬದಲ್ಲಿ ಮಕ್ಕಳು ಇರಬೇಕು, ವಂಶ ವೃದ್ದಿಯಾಗಬೇಕು, ಮುಖ್ಯವಾಗಿ ಅದಕ್ಕಾಗಿಯೇ ಮದುವೆ ಮಹಿಳೆಯರು ಇರುವುದು ಎಂಬ ಭಾವನೆ ಇತ್ತು. ಇಂದು ಕಾಲ ಬದಲಾಗಿದೆ. ಮುಖ್ಯವಾಗಿ ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವರು. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಪಡೆಯುವುದು ಹಿಂದಿನಂತೆ ಮಹಿಳೆಯ ಕಡ್ಡಾಯ ಕರ್ತವ್ಯ ಆಗಿರದು; ಬದಲಾಗಿ ಮಹಿಳೆಯ ಆಯ್ಕೆ ಆಗಿದೆ. ಅಗತ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಯಾವ ಮಹಿಳೆಯೂ ಈ ವಿಚಾರದಲ್ಲಿ ತೆಗೆದುಕೊಳ್ಳಲ್ಲು ಸಿದ್ದಳಿಲ್ಲ. ಅಗತ್ಯ ಸಹಕಾರವು ಪುರುಷರಿಂದ ಸಿಗುತ್ತಿಲ್ಲ. ಅನಿವಾರ್ಯವಾಗಿ ಮಕ್ಕಳ ಸಂಖ್ಯೆ ಕುಟುಂಬದಲ್ಲಿ ಗಣನೀಯವಾಗಿ ಕಡಿಮೆ ಆಗುತ್ತಾ ಇರುವುದು. ಪರಿಣಾಮವಾಗಿ ಹಬ್ಬಗಳಲ್ಲಿ ಮನೆಯಲ್ಲಿ ಇರುತಿದ್ದ ಹತ್ತಾರು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

ಹೆಚ್ಚುತ್ತಿರುವ ವೃದ್ಧಾಶ್ರಮಗಳು
ದೇಶದಲ್ಲಿ ಶಿಕ್ಷಣಹೆಚ್ಚಾಗಿ ಆರ್ಥಿಕತೆ ಅಭಿವೃದ್ದಿ ಹೊಂದಿದಂತೆ ವೃದ್ಧಾಶ್ರಮಗಳ ಸಂಖ್ಯೆಯೂ ಹೆಚ್ಚಾಗುತಿರುವುದು. ಹಿಂದೆ ಜಿಲ್ಲೆಯಲ್ಲಿ ಒಂದೋ ಎರಡು ವೃದ್ಧಾಶ್ರಮಗಳು ಕಂಡು ಬರುತ್ತಿತ್ತು. ಆದರೇ ಇಂದು ಪ್ರತಿ ತಾಲ್ಲೂಕಿನಲ್ಲಿ ಹಾಗೂ ನಿಧಾನವಾಗಿ ಹಳ್ಳಿಹಳ್ಳಿಯಲ್ಲಿಯೂ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಾ ಇರುವುದು. ಅಂದರೆ ಕುಟುಂಬ ವ್ಯವಸ್ಥೆಯಲ್ಲಿ ಸಂಪ್ರದಾಯವನ್ನು ವರ್ಗಾಯಿಸಬೇಕಾದ ಬಹುಮುಖ್ಯ ವರ್ಗ ಇಂದು ವೃದ್ಧಾಶ್ರಮದಲ್ಲಿ ಇರುವುದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರು. ಅವಕಾಶಕ್ಕಾಗಿ ಮಕ್ಕಳು ಊರು ಬಿಟ್ಟರು. ಊರಿನಲ್ಲಿನ ಅಪ್ಪ ಅಮ್ಮನ್ನು ವೃದ್ಧಾಶ್ರಮದಲ್ಲಿ ಬಿಟ್ಟಿರುವರು. ಇಂದಿನ ಮಕ್ಕಳಿಗೆ ಹಳ್ಳಿಯಲ್ಲಿ ಇರುವ ಅಜ್ಜ-ಅಜ್ಜಿಮನೆ/ವ್ರದ್ಧಾಶ್ರಮ ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವುದು. ನಮ್ಮ ಸಮಾಜದ ಈ ಸ್ಥಿತಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಹೆಚ್ಚುತ್ತಿರುವ ವೃದ್ಧಾಶ್ರಮಗಳನ್ನು ಸಂಸ್ಕೃತಿಯ ನಾಶದ ಬಹುಮುಖ್ಯ ಅಂಶವಾಗಿ ಪರಿಗಣಿಸಬಹುದಾಗಿದೆ. ಮುದಿ ಜೀವಗಳು‌ ಹಬ್ಬವನ್ನು ಹಿಂದಿನ ನೆನಪಿನೊಂದಿಗೆ ಕಳೆಯುವಂತೆ ಆಗಿರುವುದು.

ಚಿಕ್ಕ ಕುಟುಂಬದತ್ತ ಒಲವು
ಸ್ವತಂತ್ರವಾಗಿ ಬದುಕುವ ಹಂಬಲ,ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಗುರಿ, ನೆಮ್ಮದಿಯ ಜೀವನದ ಕನಸು ಈ ಎಲ್ಲಾ ಕಾರಣಕ್ಕಾಗಿ ಇಂದಿನ ಜನ ಚಿಕ್ಕ ಕುಟುಂಬವನ್ನು ಬಯಸುವರು. ಹಳ್ಳಿ ಹಳ್ಳಿಗಳಲ್ಲಿ ಚಿಕ್ಕ ಕುಟುಂಬಗಳ ಸಂಖ್ಯೆ ದಿನೇ ದಿನೇ ಹೆಚ್ಚಾತ್ತಾ ಇರುವುದು. ಮನೆಗೆ ಬಂದ ಸೊಸೆಗೆ ಅತ್ತೆ-ಮಾವರ ಜೊತೆ ಹೊಂದಿಕೊಳ್ಳುವುದು ಕಷ್ಟ, ಗಂಡನಾದವನಿಗೆ ಹೆಂಡತಿಗೆ ಹೇಳುವುದು ಕಷ್ಟ. ಒಟ್ಟಾರೆ ಮದುವೆ ಆದ ಯವ ಜನರು ಅಪ್ಪ ಅಮ್ಮನಿಂದ ದೂರ ಇರಲು ಬಯಸುವರು. ಇಂತಹ ಸಂಧರ್ಭದಲ್ಲಿ ಹಬ್ಬಗಳ ವಿಜೃಂಭಣೆ ಎಂಬುದು ಸಹಾ ಮಕ್ಕಳು ಮೊಮ್ಮಕ್ಕಳು ಮನೆಗೆ ಬರುವುದರ ಮೇಲೆ ಅವಲಂಬಿತವಾಗಿರುವುದು.

ಉತ್ತಮ ಜೀವನವೆಂಬ ಮಾಯಾ ಕುದುರೆ
ಇಂದಿನ ಜನರಿಗೆ ತಾವುಇರುವ ಮನೆ, ಊರು, ಸಂಪ್ರದಾಯ, ಆಚರಣೆ ಇವೆಲ್ಲವೂ ಸರಿಯಾಗಿಲ್ಲ ಎಂಬ ಭಾವನೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದಲ್ಲೇ ಉತ್ತಮ ಜೀವನವೆಂಬ ಮಾಯಾ ಕುದುರೆಯ ಬೆನ್ನು ಹತ್ತಿರುವರು. ಉತ್ತಮ ಜೀವನ ಎಂಬುದು ಮುಖ್ಯವಾಗಿ ಆರ್ಥಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುವುದು. ಮನುಷ್ಯ ತಾನು ತನ್ನದು ಮಾತ್ರ ಎಂಬ ಮನಸ್ಥಿತಿಯಲ್ಲಿ ಇರುವ ಸಮಾಜದಲ್ಲಿ ಕುಟುಂಬ, ಸಮಾಜ ಈ ವ್ಯವಸ್ಥೆಗಳು ಸಹಜವಾಗಿ ಅರ್ಥ ಕಳೆದುಕೊಳ್ಳುತ್ತಿರುವುದು.

ಬದುಕಿಗೆ ಸೂಕ್ತ ಭರವಸೆ ನೀಡದ ಕೃಷಿ ಕ್ಷೇತ್ರ
ಹಳ್ಳಿಯಲ್ಲಿರುವ ಜನರಿಗೆ ಸಾಂಪ್ರದಾಯಿಕವಾಗಿ ಮಾಡುತ್ತಿದ್ದ ಕೃಷಿ, ಸಾಕುತ್ತಿದ್ದ ಪ್ರಾಣಿಗಳು ಹಿಂದೆ ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ ಇಂದು ಕೃಷಿ, ಮತ್ತು ಮನೆಯಲ್ಲಿರುವ ಹಸುಗಳು ಭಾರವಾಗಿ ಪರಿಣಮಿಸುತ್ತಿರುವುದು. ಬೇರೆ ಎಲ್ಲಾ ಕ್ಷೇತ್ರಗಳಂತೆ ಕೃಷಿಕ್ಷೇತ್ರ ಅಭಿವೃದ್ದಿಯಾಗಲಿಲ್ಲ ಅಥವಾ ಅದಕ್ಕೆ ಅಷ್ಟೊಂದು ಮಾನ್ಯತೆ ಸಿಗಲಿಲ್ಲ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಈ ಕೇತ್ರವನ್ನು ತೊರೆಯುವವರ ಸಂಖ್ಯೆ ಹೆಚ್ಚಾಯಿತು. ಸಮಾಜ-ಕುಟುಂಬ-ಕೃಷಿ-ಹಬ್ಬದ ಆಚರಣೆ ಇವೆಲ್ಲವೂ ಒಂದು ವಾಹನದ ನಾಲ್ಕು ಚಕ್ರದಂತೆ. ಆದರೆ ಅದರಲ್ಲಿನ ಒಂದು ಚಕ್ರವೇ ಸ್ಥಿರವಾಗಿಲ್ಲ. ಪರಿಣಾಮವಾಗಿ ಉಳಿದ ಮೂರು ಅಂಶಗಳ ಮೇಲೆ ಪರಿಣಾಮವನ್ನು ಕಾಣಬಹುದಾಗಿದೆ. ಆದ್ದರಿಂದ್ದಲೇ ಹಬ್ಬದಲ್ಲಿ ಬೇರೆಯವರ ಮನೆಗೆ ಹಸುವನ್ನು ಹುಡುಕಿ ಹೋಗಬೇಕಾದ ಸ್ಥಿತಿ ಇರುವುದು.

ಈ ರೀತಿಯಾದ ಹತ್ತು ಹಲವಾರು ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ನಮ್ಮ ಹಬ್ಬದ ಆಚರಣೆಗಳು ಬದಲಾಗುತ್ತಾ ಇರುವವು. ಆದ್ದರಿಂದ ಪ್ರತಿ ವರ್ಷ ಇದೇ ನಮ್ಮ ಕೊನೆಯ ಸಂಕ್ರಾಂತಿ, ಕೊನೆಯ ದೀಪಾವಳಿ, ಕೊನೆಯ ಯುಗಾದಿ ಎಂಬ ಭಾವನೆಯೊಂದಿಗೆ ಹಬ್ಬವನ್ನು ಅತ್ಯುತ್ತಮವಾಗಿ ಸಂಪ್ರದಾಯ ಬದ್ದವಾಗಿ ಆಚರಿಸಲು ಪ್ರಯತ್ನಿಸೋಣ.


ತಾಗುಲಿ: ಕೌಟುಂಬಿಕ ವ್ಯವಸ್ಥೆ, Family system, Vivek Betkuli

the actual situation is same every where. Even third world countries like India are facing the same problems≥