ಕನ್ನಡದ ಅಭಿವೃದ್ಧಿಗೆ ತೊಡಕಾಗಿರುವವರು ಯಾರು?


“ರಾಜ್ಯೋತ್ಸವ ದಿನವನ್ನು ನಾವು ತುಂಬಾ ಸಂಭ್ರಮದಿಂದ ಆಚರಿಸುವೆವು. ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವೆವು. ಈ ಆಚರಣೆಯ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯ ಸ್ಥಿತಿ ಎಲ್ಲಿಗೆ ತಲುಪಿದೆ. ಇದಕ್ಕೆ ಯಾರು ಕಾರಣ, ನಮ್ಮ ಭಾಷೆಯ ಏಳ್ಗೆಗೆ ಪರಿಹಾರವೇನು ಎಂದು ನಾವು ಗಂಭೀರವಾಗಿ ಚಿಂತಿಸಲು ಇದು ಸಕಾಲವಾಗಿರುವುದು."

*** ವಿವೇಕ ಬೆಟ್ಕುಳಿ

ತ್ತೆ ಕನ್ನಡ ರಾಜ್ಯೋತ್ಸವ ಬಂದಿದೆ. ನಮ್ಮ ಭಾಷೆಯ ಹೆಸರಿನಿಂದ ಒಂದಾದ ದಿನ ಎಂದು, ನಮ್ಮ ರಾಜ್ಯಕ್ಕೆ ಕನಾರ್ಟಕ ಎಂಬ ಹೆಸರು ಬಂದಿರುವ ದಿನ. ಈ ದಿನವನ್ನು ನಾವು ತುಂಬಾ ಸಂಭ್ರಮದಿಂದ ಆಚರಿಸುವೆವು. ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವೆವು. ಈ ಆಚರಣೆಯ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯ ಸ್ಥಿತಿ ಎಲ್ಲಿಗೆ ತಲುಪಿದೆ. ಇದಕ್ಕೆ ಯಾರು ಕಾರಣ, ನಮ್ಮ ಭಾಷೆಯ ಏಳ್ಗೆಗೆ ಪರಿಹಾರವೇನು ಎಂದು ನಾವು ಗಂಭೀರವಾಗಿ ಚಿಂತಿಸಲು ಇದು ಸಕಾಲವಾಗಿರುವುದು.
ನಮ್ಮ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ರಕ್ಷಿಸಲು ನಮ್ಮಲ್ಲಿ ಹಲವಾರು ಸಂಘಟನೆಗಳಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಕ್ಷಣಾ ವೇದಿಕೆಯ ಒಂದೆರಡು ಬಣಗಳು, ಜಯಕರ್ನಾಟಕ, ಕಸ್ತೂರಿ ಕರ್ನಾಟಕ ಹೀಗೆ ನೂರಾರು ಸಂಘ ಸಂಸ್ಥೆಗಳು ಕನ್ನಡದ ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲ ಅವುಗಳ ಸಾಧನೆಯ ಪಟ್ಟಿಯನ್ನು ಸಹಾ ಅಂತರ್ಜಾಲ, ವಿವಿಧ ಪತ್ರಿಕೆಗಳಲ್ಲಿ ಗಮನಿಸಬಹುದಾಗಿದೆ. ಇಷ್ಟಾದರೂ ಕನ್ನಡ ರಾಜ್ಯದಲ್ಲಿ ನಮ್ಮ ಭಾಷೆಯ ಸ್ಥಿತಿ ಹೇಗಿದೆ ಎಂಬುದನ್ನು ಈ ಕೆಳಕಂಡ ಅಂಶಗಳು ಸೂಚಿಸುವವು.

  • ರಾಜ್ಯದಲ್ಲಿ ಕನ್ನಡ ಸಿನಿಮಾಕ್ಕಿಂತ ಇತರ ಭಾಷೆಯ ಸಿನಿಮಾಗಳೇ ಹೆಚ್ಚು ಓಡುತ್ತವೆ ( ತೆರಿಗೆ ಇದ್ದರೂ ಸಹಾ)
  • ರಾಜ್ಯದಲ್ಲಿ ಪ್ರತಿ ವರ್ಷ ಇಂಗ್ಲೀಷ ಮಾಧ್ಯಮ ಶಾಲೆಗೆ ಹೋಗುವ ಪರಿಪಾಠ ಹೆಚ್ಚುತ್ತಿರುವುದು.
  • ಸಿನಿಮಾಗಳಲ್ಲಿನ ಮಾತು ಮತ್ತು ಹಾಡುಗಳಲ್ಲಿ ಬೇರೆ ಭಾಷೆಯ ಪದಗಳ ಬಳಕೆ ಹೆಚ್ಚಾಗುತ್ತಿದೆ.
  • ರಾಜ್ಯದ ಕನ್ನಡ ಶಾಲೆಯಲ್ಲಿ ಬೋಧಿಸುತ್ತಿರುವ ಶಿಕ್ಷಕರು ಮತ್ತು ಕನ್ನಡದ ಅನ್ನ ತಿನ್ನುತ್ತಿರುವ ಸರ್ಕಾರಿ ನೌಕರರಲ್ಲಿ ಹೆಚ್ಚಿನ ಜನರು ತಮ್ಮ ಮಕ್ಕಳನ್ನು ಇಂಗ್ಲೀಷ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿರುವರು.
  • ಕರ್ನಾಟಕದಲ್ಲಿ ಕೇವಲ ಕನ್ನಡ ಮಾತ್ರ ಕಲಿತರೆ ಉತ್ತಮ ಉದ್ಯೋಗ ಸಿಗಲು ಸಾಧ್ಯವೇ ಇಲ್ಲ. ಆದರೆ ಕನ್ನಡ ಬರದೆ ಇಂಗ್ಲೀಷ ಒಂದೇ ಬಂದರೂ ಉತ್ತಮ ಸಂಬಳದ ಉದ್ಯೋಗ ಇರುವುದು.
  • ಇನ್ನೂ ನಮ್ಮ ರಾಜ್ಯದಲ್ಲಿ ಜನಸಾಮಾನ್ಯರೆಲ್ಲರೂ ಅಂತರ್ಜಾಲದಲ್ಲಿ ಕನ್ನಡವನ್ನು ಬಳಸಲು ಒಂದೇ ರೀತಿಯಾದ ತಂತ್ರಾಂಶ ಇರುವುದಿಲ್ಲ (ರಾಜ್ಯ ಸರ್ಕಾರ ನುಡಿಯನ್ನು ಬಳಸಲು ಹೇಳಿ, ತನ್ನ ಅಂತರ್ಜಾಲದಲ್ಲಿ ಅದನ್ನು ಬಳಸುವಂತೆ ಇರುವುದಿಲ್ಲ.)

ಇಷ್ಟೊಂದು ದ್ವಂದ್ವಗಳಲ್ಲಿ ನಾವುಗಳು ಇರುವೆವು. ಅಷ್ಟೇ ಅಲ್ಲ ಈ ಮೇಲಿನ ಎಲ್ಲಾ ಅಂಶಗಳು ಹೆಚ್ಚಿಗೆ ಕಂಡು ಬರುವುದು ಮುಖ್ಯವಾಗಿ ರಾಜಧಾನಿ ಮತ್ತು ಗಡಿ ಜಿಲ್ಲೆಯ ತಾಲ್ಲೂಕುಗಳಲ್ಲಿ.
ಕನ್ನಡದ ಬಗ್ಗೆ ಇರುವ ಎಲ್ಲ ಸಂಘ ಸಂಸ್ಥೆಗಳ ಮುಖ್ಯ ಕಚೇರಿಗಳು ಇರುವುದು ಸಹಾ ರಾಜಧಾನಿಯಲ್ಲಿಯೆ. ನಮ್ಮ ಕನ್ನಡ ಸಂಘಟನೆಗಳ ಭಾಷಾ ಹೋರಾಟದ ಪರಿ ಇಂದು ಅವಲೋಕಿಸ ಬೇಕಾಗಿದೆ. ಇಂಗ್ಲೀಷ್ ಭಾಷೆಯ ಫಲಕಕ್ಕೆ ಕಪ್ಪು ಬಣ್ಣ ಬಳಿಯುವುದು, ಬೇರೆ ಭಾಷೆಯ ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿಯುಂಟು ಮಾಡುವುದು, ಕನ್ನಡವನ್ನೆ ಕಚೇರಿಯಲ್ಲಿ ಬಳಸಿ ಎಂದು ಸೂತ್ತೋಲೆ ಹೊರಡಿಸುವುದು, ದಾರಿ ದಾರಿಯಲ್ಲಿ ಭಾಷೆಗಾಗಿ ಲಬೋ ಲಬೋ ಎಂದು ಕೂಗುತ್ತಾ ಧರಣಿ, ರ‍್ಯಾಲಿ ಮಾಡುವ ಗುಂಪೊಂದಿದ್ದರೆ, ನಾಯಿ, ಕುರಿ ಎಮ್ಮೆಗಳನ್ನು ಇಟ್ಟುಕೊಂಡು ಧರಣಿ ಮಾಡುವ ಗುಂಪು ಇನ್ನೊಂದಡೆ ಇರುವುದು. ಹಾಗೇ ಬೈಕ್ ರ‍್ಯಾಲಿ, ಕಪ್ಪು ಬಟ್ಟೆ ಧರಿಸುವುದು, ಅನ್ಯ ಭಾಷೆಯ ಕಚೇರಿಗೆ ಮುತ್ತಿಗೆ ಇವೆಲ್ಲವೂ ಆಗಾಗ ನಡೆಯುತ್ತಲೆ ಇರುವವು. ನಮ್ಮ ಈ ತೆರನಾದ ಹೋರಾಟದಿಂದ ಕನ್ನಡ ಭಾಷೆಗೆ ಎಷ್ಟರ ಮಟ್ಟಿಗೆ ಅನೂಕೂಲವಾಗಿದೆ? ಈ ರೀತಿಯ ಹೋರಾಟ ತಾತ್ಕಾಲಿಕವಾಗಿ ಮಾತ್ರ ಪರಿಣಾಮ ಬೀರಿದರೂ ಇದರಿಂದ ಭಾಷೆಗೆ ದೀರ್ಘಕಾಲಿಕ ಪ್ರಯೋಜನ ಇದೆಯೆ ಎಂಬುದನ್ನು ಯೋಚಿಸಲು ಇದು ಸಕಾಲವಾಗಿದೆ.

ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಒಂದು ವ್ಯಕ್ತಿಯಲ್ಲಿ ತಾನಾಗಿಯೇ ಹುಟ್ಟಬೇಕು ವಿನಹ ಅದನ್ನು ಬಲವಂತದಿಂದ ತರಲು ಸಾಧ್ಯವಿಲ್ಲ. ಆದರೆ ನಾವು ಇತ್ತೀಚಿನ ದಿನಗಳಲ್ಲಿ ನಮ್ಮ ಭಾಷೆಯ ಬೆಳವಣಿಗೆಗೆ ಒತ್ತು ಕೊಡುವುದಕ್ಕಿಂತ ಹೆಚ್ಚಾಗಿ ನಮ್ಮ ಅದರ ಅಸ್ತಿತ್ವದ ಭಯದಿಂದ ಪ್ರತಿಕ್ರಿಯಿಸುತ್ತಿದ್ದೇವೆ. ಬದಲಾಗಿ, ನಾವುಗಳು ಭಾಷೆಯ ಅಭಿವೃದ್ಧಿಯ ಕುರಿತಂತೆ ದೀರ್ಘಕಾಲಿಕವಾದ ವ್ಯಾವಸ್ಥಿಕ ನೆಲೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ.

ರಾಜ್ಯದಲ್ಲಿ ಸುಮಾರು ೫೦ ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳಿವೆ. ನೈಜ ಕನ್ನಡ ಅಭಿಮಾನ, ಭಾಷೆಯ ಬೆಳವಣಿಗೆ ಆಗಬೇಕಾಗಿರುದು ಅಲ್ಲಿಯೆ. ಆದರೆ ದುರಾದೃಷ್ಟವಶಾತ್ ಅಲ್ಲಿ ಭಾಷೆಯ ಧ್ವಜವನ್ನು ಹಾರಿಸಬೇಕಾದ ಶಿಕ್ಷಕರೇ ಬೇರೆ ಭಾಷೆಯ ವ್ಯಾಮೋಹಕ್ಕೆ ಒಳಗಾಗಿರುವರು. ಸಾಮಾಜಿಕ ಪರಿಸ್ಥಿತಿ ಶಿಕ್ಷಕರನ್ನು ಆ ಸ್ಥಿತಿಗೆ ತಲುಪಿಸಿದರಲ್ಲಿ ಆಶ್ಚರ್ಯವೇನು ಇಲ್ಲ. ಆದರೆ ಈ ಬಗ್ಗೆ ನಮ್ಮ ಯಾವ ಸಂಘಟನೆಗಳು ಮಾತನಾಡದೆ ಇರುವುದು ಆಶ್ಚರ್ಯಕರವಾಗಿದೆ. ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ವ್ಯಕ್ತಿಗಳು, ನಮ್ಮ ಜನಪ್ರತಿನಿಧಿಗಳು ಇವರೆಲ್ಲರ ಮಕ್ಕಳು ಕಲಿಯುತ್ತಿರುವುದು ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲ್ಲಿ ಎಂಬುದು ಬಹಿರಂಗ ಸತ್ಯವಾಗಿದೆ. ಮುಖ್ಯ ಹೋರಾಟಗಾರರು, ಜನಪ್ರತಿನಿಧಿಗಳು ಈ ದ್ವಂದ್ವದಲ್ಲಿರುವ ಕಾರಣ ಅವರು ತಮ್ಮ ಹೆಸರು ಚಾಲನೆಯಲ್ಲಿ ಇರಲು ಮಾತ್ರ ಕನ್ನಡವನ್ನು ಬಳಸಿಕೊಳ್ಳುತ್ತಿರುವರು ವಿನಹ ಭಾಷೆಯ ಬೆಳವಣಿಗೆಯ ದೂರದೃಷ್ಟಿಯಿಂದಲ್ಲ. ಶಾಲೆ, ಸಿನಿಮಾ, ದೂರದರ್ಶನ, ರೇಡಿಯೋ ಇವುಗಳು ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅವುಗಳೂ ಕನ್ನಡ ಭಾಷೆಯನ್ನು ಬೆಳಸುವ ರೀತಿಯಲ್ಲಿ ಇರದೆ ಕೇವಲ ವ್ಯಾವಹಾರಿಕವಾಗಿ ಇರುವುದನ್ನು ಕಾಣಬಹುದಾಗಿದೆ.
ಕನ್ನಡದ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಒಂದೊಂದು ಸಂಘಸಂಸ್ಥೆಗಳು ಪ್ರತಿವರ್ಷ ತಲಾ ೧೦ ಸರ್ಕಾರಿ ಶಾಲೆಗಳ ಜವಬ್ದಾರಿ ತೆಗೆದುಕೊಂಡು ಅಗತ್ಯ ಕನ್ನಡ ಪುಸ್ತಕಗಳ ಸರಬರಾಜು, ಭಾಷಾ ಶಿಕ್ಷಕರ ನೇಮಕಗಳಲ್ಲಿ ಸಹಕರಿಸಿದರೆ ಮುಂದಿನ ೧೫ ವರ್ಷದ ನಂತರವಾದರೂ ಗುಣಮಟ್ಟದ ಒಂದು ಕನ್ನಡದ ಪೀಳಿಗೆ ಸೃಷ್ಟಿಯಾಗಲು ಸಾಧ್ಯವಿದೆ. ಕನ್ನಡ ಸಿನಿಮಾ, ಬರವಣಿಗೆಗಳಲ್ಲಿ ಹೆಚ್ಚು ಹೆಚ್ಚು ಗ್ರಾಂಥಿಕ ಭಾಷೆಗಳ ಬಳಕೆಯನ್ನು ಬಿಟ್ಟು ಜನಸಾಮಾನ್ಯರು ಸರಳವಾಗಿ ಉಚ್ಚರಿಸಬಹುದಾದ ಪದಗಳ ಬಳಕೆಯನ್ನು ರೂಢಿಗೊಳಿಸಬೇಕಾಗಿದೆ. ಸಿನಿಮಾದಲ್ಲಿಯಂತು ಹೆಚ್ಚು ಹೆಚ್ಚು ಗಮನ ನೀಡಿ ಹೊಸ ಹೊಸ ರೀತಿಯಲ್ಲಿ ಕನ್ನಡ ಪದಗಳನ್ನು ಬಳಸಲು ರೂಢಿಸಿಕೊಳ್ಳುವ ಅಗತ್ಯವಿದೆ. ಬೇರೆ ಭಾಷೆಗಳನ್ನು ದ್ವೇಷಿಸದೆ ಅವುಗಳ ಉತ್ತಮ ಅಂಶಗಳನ್ನು ನೋಡಿ ನಮ್ಮ ಭಾಷೆಯನ್ನು ಉತ್ತಮ ಪಡಿಸುವ ಹಿನ್ನಲೆಯಲ್ಲಿ ಚಿಂತಿಸುವುದು ನಮ್ಮ ಕನ್ನಡ ಸಂಘಟನೆಗಳ ಧ್ಯೇಯವಾಗಬೇಕಾಗಿದೆ. ಜನಸಾಮಾನ್ಯರಿಗೆ ಒಂದು, ಕನ್ನಡ ಪತ್ರಿಕೆಗಳಿಗೆ ಒಂದೊಂದು, ಸರ್ಕಾರಿ ಅಂತರ್ಜಾಲಕ್ಕೆ ಇನ್ನೊಂದು ಈ ರೀತಿಯ ವಿಭಿನ್ನ ಬಗೆಯ ಕನ್ನಡ ತಂತ್ರಾಂಶಗಳ ಬದಲಾಗಿ ಎಲ್ಲಾ ಕನ್ನಡಿಗರು ಸಾಮಾನ್ಯವಾಗಿ ಬಳಸಲು ಅನುಕೂಲವಾಗುವಂತೆ ಸಾಮಾನ್ಯವಾದ ತಂತ್ರಾಂಶದ ಬಳಕೆಯ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು.
ಗಡಿನಾಡ ತಾಲ್ಲೂಕಿನ ಶಾಲೆಗಳ ಬಗ್ಗೆ ಸರ್ಕಾರ, ಕನ್ನಡ ಪರ ಸಂಘಟನೆಗಳು ವಿಶೇಷವಾದ ಗಮನ ನೀಡಿ ಅವುಗಳ ಎಲ್ಲಾ ರೀತಿಯ ಅಭಿವೃದ್ಧಿಯ ಕಡೆ ಗಮನ ನೀಡುವ ಅಗತ್ಯವಿದೆ. ಈಗಿರುವ ಸ್ಥಿತಿಯೆ ಮುಂದುವರೆದರೆ ಶೀಘ್ರದಲ್ಲಿಯೆ ಗಡಿನಾಡ ಜಿಲ್ಲೆಗಳಲ್ಲಿ ಕನ್ನಡದ ಇತಿಹಾಸವನ್ನು ನೋಡಬೇಕಾದೀತು.

ಈ ಎಲ್ಲಾ ವಿಚಾರಗಳ ಬಗ್ಗೆ ಕರ್ನಾಟಕ ರಾಜ್ಯೋತ್ಸವದ ಆಚರಣೆಯ ಈ ಸಂದರ್ಭದಲ್ಲಿ ಗಂಭೀರವಾಗಿ ಚಿಂತಿಸಿ ಕಾರ್ಯಪ್ರವೃತ್ತರಾಗೋಣ. ಇದೆ ನಾವು ನೀವು ಕನ್ನಡಕ್ಕಾಗಿ ಮಾಡುವ ಚಿಕ್ಕ ಸೇವೆ.


ತಾಗುಲಿ : kannada development, Vivek Betkuli