ಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ

     ಸುಳ್ಳು, ಸತ್ಯ, ಕಾವ್ಯ, 
     ಮತ್ತು ನೇಮಿಚಂದ್ರ

ವಿಶ್ವೇಶ್ವರ ದೀಕ್ಷಿತ

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ, ವಾಮನಕ್ರಮಂ
ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ, ಹರನಂ ನರನೊತ್ತಿ ಗಂಟಲಂ
ಮೆಟ್ಟುಗೆ ಮೆಟ್ಟದಿರ್ಕೆ, ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿದರ್‌,
ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋ ಕವೀಂದ್ರರಾ!
- ನೇಮಿಚಂದ್ರ, ಲೀಲಾವತಿ ಪ್ರಬಂಧ

ಗಣ: ಅಕ್ಷರ,  ಜಾತಿ: ಕೃತಿ-೨೦,  ಮಟ್ಟು: ಉತ್ಪಲಮಾಲೆ ವೃತ್ತ
ಸೂತ್ರ: ಭ ರ ನ ಭ ಭ ರ ಲ ಗಂ (b | r | n | b | b | r | u-)

ಭ ರ  ನ ಭ  ಭ ರ  ಲ ಗಂ - ಸೂತ್ರದ ಅಕ್ಷರ ಗಣ,   ಕೃತಿ-೨೦ ಜಾತಿ:,  ಉತ್ಪಲಮಾಲೆ ವೃತ್ತ ಎನ್ನುವ ಮಟ್ಟಿನಲ್ಲಿರುವ‌ ಇದು ನೇಮಿಚಂದ್ರನ ಲೀಲಾವತಿ ಪ್ರಬಂಧದಲ್ಲಿ ಬರುವ ಒಂದು ಪದ್ಯ.

ನೇಮಿಚಂದ್ರ
ನೇಮಿಚಂದ್ರ ೧೨ನೆ ಶತಮಾನದ ಕೊನೆಯ ಅರ್ಧದಲ್ಲಿ ಜೀವಿಸಿದ್ದ ಒಬ್ಬ ಕವಿ. ಸವದತ್ತಿಯ ರಟ್ಟ ವಂಶದ ಲಕ್ಷ್ಮಣರಾಜನ ಆಶ್ರಯದಲ್ಲಿ, ಅಂದರೆ ೧೧೭೦ರ ಆಸುಪಾಸಿನಲ್ಲಿ, ಲೀಲಾವತಿ ಪ್ರಬಂಧ ಎನ್ನುವ ಹದಿನಾಲ್ಕು ಆಶ್ವಾಸಗಳುಳ್ಳ ಪ್ರೌಢ ಚಂಪೂ ಕಾವ್ಯವನ್ನು ರಚಿಸಿದ. ಶೃಂಗಾರ ರಸವೆ ಈ ಕಾವ್ಯದ ಕೇಂದ್ರ ಬಿಂದು.  ನೇಮಿನಾಥ ಪುರಾಣ ಎನ್ನುವುದು ಈತನ ಇನ್ನೊಂದು ಚಂಪೂ ಕಾವ್ಯ. 
ಮೊದಲೆನೆಯದಾಗಿ, ಹೀಗೆ, ಪಂಪ ರನ್ನರ ನಂತರ, ಅಳಿದು ಹೋಗುತ್ತಿದ್ದ ಚಂಪೂ ಕಾವ್ಯ ಪರಂಪರೆಯನ್ನು ಮತ್ತೆ ಪ್ರಚಲಗೊಳಿಸಿದ ಕೀರ್ತಿ ನೇಮಿಚಂದ್ರನಿಗೆ ಸಲ್ಲುತ್ತದೆ.

[ ಕೋತಿಗಳು (ಕಪಿಸಂತತಿ) ಸಮುದ್ರಕ್ಕೆ (ಕಡಲಂ) (ಸೇತುವೆ) ಕಟ್ಟಲಿ ಕಟ್ಟದೆ ಇರಲಿ, ವಾಮನನು ತನ್ನ (ಪಾದದಿಂದ) ಆವರಿಸಿ (ವಾಮನಕ್ರಮಂ) ಆಕಾಶವನ್ನು (ಮುಗಿಲು) (ಅವರಿಸಿ) ಮುಟ್ಟಲಿ ಮುಟ್ಟದೆ ಇರಲಿ, ಅರ್ಜುನನು (ನರ) ಶಿವನ ಗಂಟಲನ್ನು ಹಿಸುಕಿ (ಒತ್ತಿ ಗಂಟಲಂ) (ನೆಲಕ್ಕೆ ಬೀಳಿಸಿ ಕಾಲಿನಿಂದ) ತುಳಿಯಲಿ ತುಳಿಯದೆ ಇರಲಿ (ಮೆಟ್ಟುಗೆ ...) (ಆದರೆ) ನಮ್ಮ ಕವಿಗಳು ತಮ್ಮ ಕಾವ್ಯಗಳಲ್ಲಿ ಕಟ್ಟಿದರು (ರಾಮಾಯಣ), ಮುಟ್ಟಿದರು (ದಶಾವತಾರ), ಹಿಸುಕಿ ತುಳಿದರು (ಮೆಟ್ಟಿದರು) (ಮಹಾಭಾರತ) ಅಲ್ಲವೆ? ಓ! ನಮ್ಮ ಕವಿವರ್ಯರು ಎಂಥ (ಕಲ್ಪನಾ)ಶಕ್ತಿ ಸಾಮರ್ಥ್ಯ (ಅಳವಗ್ಗಳ) ಉಳ್ಳವರು!]

ಸತ್ಯ ಎಂದರೆ ಏನು?
ಕ᳒ಟ್ಟು᳴ಗೆ᳴|   ಕ᳒ಟ್ಟ᳴ದಿ᳒|ರ್ಕೆ᳴   ಕ᳴ಡ᳴|ಲಂ᳒   ಕ᳴ಪಿ᳴|ಸಂ᳒ತ᳴ತಿ᳴|,   ವಾ᳒ಮ᳴ನ᳒|ಕ್ರ᳴ಮಂ᳒|
ಮು᳒ಟ್ಟು᳴ಗೆ᳴|   ಮು᳒ಟ್ಟ᳴ದಿ᳒|ರ್ಕೆ᳴   ಮು᳴ಗಿ᳴|ಲಂ᳒,   ಹ᳴ರ᳴|ನಂ᳒   ನ᳴ರ᳴|ನೊ᳒ತ್ತಿ᳴   ಗಂ᳒|ಟ᳴ಲಂ᳒|
ಮೆ᳒ಟ್ಟು᳴ಗೆ᳴|   ಮೆ᳒ಟ್ಟ᳴ದಿ᳒|ರ್ಕೆ᳴,   ಕ᳴ವಿ᳴|ಗ᳒ಳ್‌   ಕೃ᳴ತಿ᳴|ಬಂ᳒ಧ᳴ದೊ᳴|ಳ᳒ಲ್ತೆ᳴   ಕ᳒|ಟ್ಟಿ᳴ದ᳒|ರ್‌,
ಮು᳒ಟ್ಟಿ᳴ದ᳴|ರೊ᳒ತ್ತಿ᳴   ಮೆ᳒|ಟ್ಟಿ᳴ದ᳴ರ᳴|ದೇ᳒ನ᳴ಳ᳴|ವ᳒ಗ್ಗ᳴ಳ᳴|ಮೋ᳒   ಕ᳴ವೀಂ᳒|ದ್ರ᳴ರಾ᳒|!

ಎರಡನೆಯದಾಗಿ, ಒಂದು ಮುಖ್ಯ ಪ್ರಶ್ನೆಯನ್ನು ಇಲ್ಲಿ ಕೇಳುತ್ತಿದ್ದಾನೆ ನೇಮಿಚಂದ್ರ. ಸತ್ಯ ಎಂದರೆ ಏನು? what is Truth? ಪ್ರತ್ಯಕ್ಷವಾಗಿ ನಿಷ್ಕರ್ಷಿಸಬಹುದಾದ ವಾಸ್ತವಿಕ ಸತ್ಯವೋ,  ಅಂತರ್ಗೋಚರ ಅನುಭವವೇದ್ಯ ಸತ್ಯವೋ? ವಸ್ತುನಿಷ್ಠ ವೈಜ್ಞಾನಿಕ ಸತ್ಯವೋ, ಅನುಭವನಿಷ್ಠ ಸಂವೇದ್ಯ ಕಾವ್ಯಸತ್ಯವೋ? Experimental truth or experiential truth?

ಕಟ್ಟುಗೆ ಕಟ್ಟದಿರ್ಕೆ : ಕಟ್ಟಲಿ ಕಟ್ಟದೆ ಇರಲಿ. ಏನು ಕಟ್ಟುವುದು? ಕಡಲಂ : ಸಮುದ್ರಕ್ಕೆ ಸೇತುವೆಯನ್ನು ಕಟ್ಟುವುದು.  ಯಾರು ಕಟ್ಟಿದರು? ಕಪಿಸಂತತಿ : ಕೋತಿಗಳು! ಎಲ್ಲಿ?! : ರಾಮಾಯಣದಲ್ಲಿ.

ಮುಟ್ಟುಗೆ ಮುಟ್ಟದಿರ್ಕೆ: ಮುಟ್ಟಲಿ, ಮುಟ್ಟದೆ ಇರಲಿ. ಏನು ಮುಟ್ಟುವುದು?   ಮುಗಿಲಂ : ಆಕಾಶವನ್ನು.  ಯಾರು?  ವಾಮನಕ್ರಮಂ : ಕುಳ್ಳ ವಾಮನ ಮುಗಿಲೆತ್ತರಕ್ಕೆ ಬೆಳೆದು ಬೆಳೆದು, ಮೊದಲನೆ ಹೆಜ್ಜೆಯಿಂದ ಭೂಮಿಯನ್ನು ಆಕ್ರಮಿಸಿ, ಎರಡನೆ ಹೆಜ್ಜೆಯಿಂದ ಆಕಾಶವನ್ನು ಆವರಿಸಿ, ಮೂರನೆಯ ಹೆಜ್ಜೆಯಿಂದ ಬಲಿಯನ್ನು ಪಾತಾಳಕ್ಕಿಳಿಸಿ ತ್ರಿವಿಕ್ರಮನಾದನಲ್ಲ! ಎಲ್ಲಿ? ದಶಾವತಾರದಲ್ಲಿ!

ಮೆಟ್ಟುಗೆ ಮೆಟ್ಟದಿರ್ಕೆ: ತುಳಿಯಲಿ ತುಳಿಯದೆ ಇರಲಿ. ಏನು ತುಳಿಯುವುದು? ಹರನಂ: ಶಿವನನ್ನು.  ಯಾರು? ಹೇಗೆ? ನರನೊತ್ತಿ ಗಂಟಲಂ : ಅರ್ಜುನನು ಶಿವನ ಗಂಟಲನ್ನು ಹಿಸುಕಿ. ಎಲ್ಲಿ? ಮಹಾಭಾರತದ ವನಪರ್ವದಲ್ಲಿ.

ಇದೆಲ್ಲ ಸಾಧ್ಯವೋ? ಸತ್ಯ ಎನಿಸಿಕೊಳ್ಳಬೇಕಾಗಿದ್ದರೆ ಸಾಧ್ಯವಾಗಿರಬೇಕಿಲ್ಲ, (ಸಂಭವನೀಯವಾಗಿದ್ದರೆ) ಸಾಧ್ಯವಾಗಬಹುದಾಗಿದ್ದರೆ ಸಾಕು; ಅಂದರೆ ಊಹೆಗೆ ನಿಲುಕಿ ಮನಸ್ಸಿನ ಕಣ್‌ ಮುಂದೆ ಮಿಂಚಿ ಪುಳಕವಾದರೆ ಅದು ಕಾವ್ಯಸತ್ಯ.

ಹಗ್ಗದಲ್ಲಿ ಹಾವನ್ನು ಮೊದಲ ಬಾರಿ ಕಂಡಾಗ ನಿಜ ಹಾವೇ ಎಂದು ಹೆದರಿಕೆ ಆಗುವದು ಸಹಜ. ಆದರೆ ಒಮ್ಮೆ ವಸ್ತುನಿಷ್ಠ ಸತ್ಯದ ಅರಿವಾದರೆ, ಮತ್ತೆ ಮತ್ತೆ ಹಗ್ಗದಲ್ಲಿ ಹಾವನ್ನು ಕಾಣುವುದು ಅಸಾಧ್ಯ ಮತ್ತು ಒಲ್ಲದ ಮಾತು. ಆದರೆ, ಕಾವ್ಯಸತ್ಯವನ್ನು ಮತ್ತೆ ಮತ್ತೆ ಅನುಭವಿಸಲು ಸಾಧ್ಯವೂ ಹೌದು ಮತ್ತು ಇಷ್ಟವೂ ಹೌದು. ಇದೇ ಕಾವ್ಯದ ಮಹತ್ವ.
ವಿರಹ-ಪ್ರೇಮಗಳ ರಸವನ್ನು ಹರಿಸಿ, ಸಂದೇಶ ಒಂದನ್ನು ಮುಟ್ಟಿಸುವಂತೆ, ಮುಗಿಲಲ್ಲಿ ಮನ ಬಂದಂತೆ ಹಾರಾಡುವ ಮೋಡ ಒಂದನ್ನು ಒಪ್ಪಿಸುವುದು ಸಾಧ್ಯವೆ? ಅಸಾಧ್ಯ! ಆದರೂ‌, ಕಾಳಿದಾಸನ ಮೇಘದೂತವನ್ನು  ಮತ್ತೆ ಮತ್ತೆ ಓದಬೇಕೆನಿಸುವುದಿಲ್ಲವೆ? ಮತ್ತೆ ಮತ್ತೆ ಓದಿ ಆನಂದಿಸುವುದಿಲ್ಲವೆ? ಅಷ್ಟೇ ಏಕೆ, ಎಷ್ಟು ಭಾಷೆಗಳಲ್ಲಿ ಈ ಮೇಘದೂತ ಹುಟ್ಟಿಕೊಂಡಿಲ್ಲ? ಕಾಳಿದಾಸನ ನಂತರ, ಇಂತಹ ಎಷ್ಟು ಇತರ ಕಾವ್ಯಗಳು ಹುಟ್ಟಿಕೊಂಡಿಲ್ಲ? ಹೀಗೆ, ಸಂದೇಶ-ಕಾವ್ಯ ಎನ್ನುವ ಒಂದು ಕಾವ್ಯ-ಪ್ರಕಾರವನ್ನೆ ಈ ಮೇಘದೂತ ಹುಟ್ಟು ಹಾಕಿಲ್ಲವೆ?

ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿದರ್‌,
ಮುಟ್ಟಿದರೊತ್ತಿ ಮೆಟ್ಟಿದರದೇನ್‌ ಅಳವಗ್ಗಳಮೋ ಕವೀಂದ್ರರಾ!
ಇಂಥ ಅಸಾಧ್ಯಗಳನ್ನಲ್ಲ ತಮ್ಮ ಕಾವ್ಯಗಳಲ್ಲಿ  ಸಾಧ್ಯಗೊಳಿಸಿ ಕಟ್ಟಿದರು, ಮುಟ್ಟಿದರು, ಮತ್ತು ಮೆಟ್ಟಿದರು. ನಮ್ಮ ಕವೀಂದ್ರರ ಕಲ್ಪನಾ ಶಕ್ತಿಗೆ ಮೇರೆ ಇದೆಯೆ?

ಈಗ ನೀವೇ ಹೇಳಿ ಯಾವುದು ಸತ್ಯ? ನೇಮಿಚಂದ್ರನಿಗೆ ಒಂದಿನಿತು ಸಂಶಯವೂ ಇಲ್ಲ!

ನಿಮ್ಮವನೆ ಆದ,
ವಿಶ್ವೇಶ್ವರ ದೀಕ್ಷಿತ


ಕನ್ನಡ ಕಲಿ, ಕನ್ನಡದ ಗುಟ್ಟು
ಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ
ಲೇಖನ: ವಿಶ್ವೇಶ್ವರ ದೀಕ್ಷಿತ
ಸಂಗೀತ: ಆಕಾಶ ದೀಕ್ಷಿತ
ಬಿತ್ತರಿಕೆ ೧೨ ಕಾಲ ೨೦೨೩, ಸಂಖ್ಯೆ ೦೨: ಬಿಕಾಸ ೧೨-೨೦೨೩-೦೨

Kannaḍa Kali, Kannaḍada Guṭṭu
Suḷḷu, Satya, Kāvya, mattu Nēmicandra
Lēkhana: Viśvēśvara Dīkṣita
Saṅgīta: Ākāśa Dīkṣita bittarike
Episode 12, Year 2023 No. 02 : BIKASA 12-2023-02


objective truth, poetic truth, Nemichandra, Secret of Kannada

ಏನಂತೀರಿ?

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.