[ಹೊಸ ವಿಷಾದನೀಯ ಸುದ್ದಿ: ಜುಲೈ ೨೨, ೧೩೮ರಂದು ಜನಿಸಿದ, ಕೆ.ಟಿ.ಗಟ್ಟಿ ಅವರು ಫೆಬ್ರುವರಿ ೧೯, ೨೦೨೪ರಂದು ಮಂಗಳೂರಿನಲ್ಲಿ ತಮ್ಮ ೮೫ನೆ ವಯಸ್ಸಿನಲ್ಲಿ ನಿಧನರಾದರು.]
ಕೆ.ಟಿ. ಗಟ್ಟಿ
ಕನ್ನಡದ ಬಂಗಾರ ಗಟ್ಟಿ
*** ವಿಶ್ವೇಶ್ವರ ದೀಕ್ಷಿತ
0:17 ಹುಟ್ಟು
ಕೆ.ಟಿ. ಗಟ್ಟಿ - ಸಾಹಿತಿ, ಭಾಷಾ ತಜ್ಞ, ಪ್ರಾಧ್ಯಾಪಕ, ಕೃಷಿಕ ಹೀಗೆ ವಿವಿಧ ರೂಪಗಳಲ್ಲಿ ತೋರಿಕೊಳ್ಳುತ್ತ ಜೀವನದಲ್ಲಿ ಹಂತ ಹಂತವಾಗಿ ಬೆಳೆದವರು. ಕಾಸರಗೋಡಿನ ಹತ್ತಿರದ ಕೂಡ್ಲು ಊರಲ್ಲಿ ೧೯೩೮ರಲ್ಲಿ ಜನನ. ಕಾಸರಗೋಡಿನ ಹೈಯರ ಎಲಿಮೆಂಟರಿ ಶಾಲೆಯಲ್ಲಿ ಓದು. ತಂದೆ ತಾಯಿಯರ ಪ್ರೇರಣೆ, ಯಕ್ಷಗಾನ, ನಾಟಕ, ಮತ್ತು ಬಹುಭಾಷಾ ವಾತಾವರಣ. ೧೮ನೇ ಕುಡಿ ವಯಸ್ಸಿನಲ್ಲೆ ಸಾಹಿತ್ಯದ ಮೊಳಕೆ ಒಡೆದಿತ್ತು. ಕಾಸಗೋಡಿನ ಕಿಡಿ ಕಯ್ಯಾರ ಕಿಞ್ಞಣ್ಣ ರೈ ಅವರ ಕನಸಾದ ಏಕೀಕರಣದ ಚಳುವಳಿ ಅವರನ್ನು ಸೆಳೆದಿತ್ತು. ಬರವಣಿಗೆ ಚಿಗುರಿತು, ಕರ್ನಾಟಕ ಹುಟ್ಟಿತು, ಆದರೆ ಕಾಸರಗೋಡು ಕೇರಳದಲ್ಲೇ ಉಳಿಯಿತು. ಕನಸು ನನಸಾಗಲಿಲ್ಲ.
1:09 ಶಿಕ್ಷಕ
ನಂತರ, ಕೇರಳ ವಿಶ್ವ ವಿದ್ಯಾಲಯದಲ್ಲಿ ಪದವಿ ಗಳಿಸಿದರು. ಬಿ. ಎಡ್. ಮುಗಿಸಿ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾದರು. ಮಣಿಪಾಲದ ಎಂ.ಐ.ಟಿ.ಯಲ್ಲಿ ಇಂಗ್ಲಿಷ್ ಕಲಿಸಿದರು. ಉಡುಪಿಯ ಟಿ.ಎಂ.ಪೈ. ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ಇಥಿಯೋಪಿಯಕ್ಕೆ ಪ್ರಯಾಣ. ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ ಇವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಗಳಿಸಿದರು.
1:44 ಸಾಹಿತಿ
ಗಟ್ಟಿ ಅವರ ಮೊತ್ತ ಮೊದಲ ಕಾದಂಬರಿ 'ಶಬ್ದಗಳು' ೧೯೭೬ರಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇದು ಎಷ್ಟು ಜನಪ್ರಿಯ ಆಯಿತೋ ಸುಧಾ ಜತೆಗಿನ ಸಂಬಂಧ ಅಷ್ಟೇ ಗಟ್ಟಿ ಆಯಿತು. ಮುಂದೆ ಇವರ ೧೪ ಕಾದಂಬರಿಗಳು ೨೮ ವರ್ಷಗಳ ಕಾಲ ಅವ್ಯಾಹತವಾಗಿ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದವು. ಸುಧಾ ಅಷ್ಟೇ ಅಲ್ಲ, ಅವರ ಇತರ ಕಾದಂಬರಿಗಳು ತುಷಾರ, ತರಂಗ, ಮಲ್ಲಿಗೆ, ಕರ್ಮವೀರ, ಪ್ರಜಾವಾಣಿ, ಕಾದಂಬರಿ, ಗೆಳತಿ, ಮತ್ತು ಮಂಗಳ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಮನೆ ಮಾತಾದವು. ಒಬ್ಬನೇ ಲೇಖಕನ ಇಷ್ಟೊಂದು ಕಾದಂಬರಿಗಳು ಇಷ್ಟೊಂದು ವರ್ಷಗಳ ಕಾಲ ಧಾರಾವಾಹಿಯಾಗಿ ಹರಿದುದು ಒಂದು ದಾಖಲೆ, ಗಟ್ಟಿ ಅವರ ಪ್ರತಿಭೆ ಜನಪ್ರಿಯತೆಗಳಿಗೆ ಸಾಕ್ಷಿ. ಕೆ.ಟಿ. ಗಟ್ಟಿ ಕನ್ನಡದ ಧಾರಾವಾಹಿ ಚಕ್ರವರ್ತಿ ಅಂದರೆ ಅತಿಶಯ ಅಲ್ಲ.
ಒಟ್ಟು ಪ್ರಕಟಿತವಾದ ಪುಸ್ತಕಗಳು ೧೦೦ಕ್ಕೂ ಹೆಚ್ಚು. ಅವುಗಳಲ್ಲಿ ೫೦ ಮೀರಿ ಕಾದಂಬರಿಗಳು; ೩ ಸಣ್ಣ ಕತೆಗಳ, ೪ ಪ್ರಬಂಧಗಳ, ಮತ್ತು ೩ ಕವಿತೆಗಳ ಸಂಕಲನಗಳು; ೧೮ ನಾಟಕಗಳು; ಮತ್ತು ಪ್ರವಾಸ ಕಥನಗಳು ಸೇರಿವೆ. ಕನ್ನಡ ಅಲ್ಲದೆ ತುಳು ಭಾಷೆಯಲ್ಲೂ ಕಾದಂಬರಿ ಬರೆದಿದ್ದಾರೆ.
3:12 ಭಾಷಾ ತಜ್ಞ
ಆಳ ಅಧ್ಯಯನ ಮತ್ತು ನುರಿತ ಶಿಕ್ಷಕರಾಗಿ ದುಡಿದ ಅನುಭವ ಸೇರಿ ಭಾಷಾ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವು ವಿದ್ಯಾರ್ಥಿಗಳಿಗೆ ಮತ್ತು ಪಂಡಿತರಿಗಷ್ಟೇ ಅಲ್ಲ, ತಂದೆ ತಾಯಿಗಳು ಮಕ್ಕಳಿಗೆ ವಿಷಯ-ವಿಧಾನಗಳೊಂದಿಗೆ ಭಾಷೆ ಕಲಿಸಲು ಉಪಯುಕ್ತವಾಗಿವೆ. ಇಂಗ್ಲಿಷ್-ಕನ್ನಡ ಬೈಲಿಂಗ್ವಲ್ ಮಕ್ಕಳಿಗೆ ಅವಶ್ಯವಾಗಿವೆ.
3:40 ಕೃಷಿಕ
ಅಂತೂ ನುಡಿ ನೆಲಗಳ ಕಂಪನ್ನು ಹರಡುತ್ತಿದ್ದ ಇವರಿಗೆ ನಾಡಿನ ಮಣ್ಣಿನ ವಾಸನೆ ಬಿಡಲೇ ಇಲ್ಲ. ೧೯೮೨ರಲ್ಲಿ ಇಥಿಯೋಪಿಯದಿಂದ ತಾಯ್ನಾಡಿಗೆ ಮರಳಿ ಬಂದರು. ಉಜಿರೆಯಲ್ಲಿ ಜಮೀನು ಕೊಂಡರು. ಉಳುಮೆಯಲ್ಲಿ ಮುಳುಗಿದರು. ಜೊತೆಗೆ ಅಕ್ಷರ ಗಿಡಗಳನ್ನು ಎಂದಿಲ್ಲದ ಅಕ್ಕರೆಯಿಂದ ಬೆಳೆಸತೊಡಗಿದರು.
4:04 ಪ್ರಶಸ್ತಿ-ಗೌರವ
ಕರ್ನಾಟಕ ಸಾಹಿತ್ಯ ಅಕಾಡಮಿ, ಸಾಹಿತ್ಯ ಸವ್ಯಸಾಚಿ (೨೦೧೧) ಪ್ರಶಸ್ತಿಗಳು; ಚದುರಂಗ ಮತ್ತು ಸಮಂತತೋ ನಾಟಕ ಪ್ರಶಸ್ತಿಗಳು. ದಕ್ಷಿಣ ಕನ್ನಡ ಜಿಲ್ಲಾ ೧೦ನೆಯ ಮತ್ತು ಕಾಸರಗೋಡಿನ ೨ನೆಯ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ.
ಕೆಲವು ಗಟ್ಟಿ ಕೃತಿಗಳು
ಕಾದಂಬರಿ(೫೦)+
ಶಬ್ದಗಳು (೧೯೭೬), ಸೌಮ್ಯ (೧೯೭೮), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ.
ಕಥಾ ಸಂಕಲನ
ಮನುಷ್ಯನ ವಾಸನೆ, ನೀಲಿ ಗುಲಾಬಿ, ಭೂಗತ, ವಿಶ್ವ ಸುಂದರಿ, ಹಾಗೂ ಪ್ರೀತಿ ಎಂಬ ಮಾಯೆ.
ವೈಚಾರಿಕ
ಮೂರನೆಯ ಧ್ವನಿ, ನಿನ್ನೆ ನಾಳೆಗಳ ನಡುವೆ, ನಮ್ಮ ಬದುಕಿನ ಪುಟಗಳು, ನಮ್ಮೊಳಗಿನ ಆಕಾಶ, ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ
ಕವಿತೆ
ಝೇಂಕಾರದ ಹಕ್ಕಿ (೧೯೯೪)
ಅನುವಾದ
ನನ್ನ ಪ್ರೇಮದ ಹುಡುಗಿ (೨೦೦೧)
ನಾಟಕ(೨೦+)
ನಾಟಕ, ಕೆಂಪು ಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿದೇವರ ಜುಗಾರಿ
ಮಕ್ಕಳ ನಾಟಕ (೩೦+)
ಪ್ರವಾಸಕಥನ
ನಿಸರ್ಗ ಕನ್ಯೆ ಅಂಡಮಾನ್.
ಪ್ರಬಂಧ
ಗುಳಿಗೆಗಳು.
ಆತ್ಮಕಥೆ
ತೀರ.
_______________________________
ಕನ್ನಡ ಕಲಿ ಬಿತ್ತರಿಕೆ ಏಪ್ರಿಲ್ ೩೦, ೨೦೨೨
ಕೆ.ಟಿ. ಗಟ್ಟಿ, ಕನ್ನಡದ ಬಂಗಾರ ಗಟ್ಟಿ
ತಾಗುಲಿ: ಕೆ.ಟಿ. ಗಟ್ಟಿ, K.T. Gatti, Kasaragodu
ಕೆ.ಟಿ.ಗಟ್ಟಿ ಅವರ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು. 🙏🏽
ಕೆ ಟಿ ಗಟ್ಟಿ ಇವರು ನನ್ನ ಮೆಚ್ಚಿನ ಲೇಖಕರು ....
ಕೆ.ಟಿ.ಗಟ್ಟಿ ಅವರ ಪರಿಚಯ…