ಟಕಟಕ ಜೋಕುಗಳು Knock-Knock Jokes

ಟಕಟಕ ಜೋಕು, ಇನ್ನೂ ಬೇಕು !    
ನಾಕ್-ನಾಕು ಜೋಕು, ಬೇಕೇ ಬೇಕು !

Kannada Knock-knock Jokes

¾ ವಿಶ್ವೇಶ್ವರ ದೀಕ್ಷಿತ

ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ.  ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಲ್ಲವು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ನ್ಯಾಶನಲ್‌ ಪಬ್ಲಿಕ್‌ ರೇಡಿಯೋದ ಲೇಖನವನ್ನು ಓದಿ.    
[https://www.npr.org/sections/npr-history-dept/2015/03/03/389865887/the-…]

ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "knock-knock Jokes" ಅಂತ ಗೂಗಲಿಸಿದರೆ ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes]

ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ.

ಇಲ್ಲಿನ ಕೆಲವು ಜೋಕುಗಳು, ಕನ್ನಡ ಕಲಿ ಮ್ಯಗ್‌ಝೀನ್‌ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬,  ಪುಟ ೫ರಲ್ಲಿ ಪ್ರಕಟವಾಗಿದ್ದವು [https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-…])

ಕಂತು ೧

ಟಕ-ಟಕ, ಟಕ್    
   ಯಾರು ಅಲ್ಲಿ?    
ಮಂಗಲಾ.    
   ಮಂಗಲಾ ಯಾರು?    
ಲಾಯರು ನಾನು, ಮಂಗ ನೀನು. ಲಗೂನ ತಗೀ ಬಾಗಿಲ!

ಟಕ-ಟಕ, ಟಕ್    
   ಯಾರು ಅದು?    
ಸುಮ ನಾ    
   ಸುಮನಾ ಯಾರು?    
ಸುಮ ನಾ; ನೀ ಯಾರು ನನಗೇನು ಗೊತ್ತು?

ಟಕ-ಟಕ, ಟಕ್    
   ಯಾರು ಅಲ್ಲಿ?    
ನಾಥ.    
   ನಾತ ಯಾರು?    
ತಯಾರು ಇದ್ರೆ ಬಾಗಿಲ ತೆಗೆದು ಮೂಸು.

ಟಕ-ಟಕ, ಟಕ್    
   ಯಾರು ಅದು?    
ಉಪ್ಪು ಕಾರ.    
   ಉಪ್ಪು ಕಾರ ಯಾರು?    
ಉಪಕಾರ ಮಾಡಿ ಬಾಗಿಲ ತೆಗೀಯೆ ಮಾರಾಯತಿ!

ಟಕ-ಟಕ, ಟಕ್    
   ಯಾರು ಅದು?    
ಮಾಲು.    
   ಯಾರು ಮಾಲು?    
ತಲೆಗೆ ಸುತ್ತಿಕೊಳ್ಳುವುದು.

ಟಕ-ಟಕ, ಟಕ್    
   ಯಾರು ಅಲ್ಲಿ?    
ಕುಮಾಯಿ.    
   ಯಾರು ಕುಮಾಯಿ?    
ಪಂಢರಪುರದ ವಿಠ್ಠಲ ರುಕುಮಾಯಿ!

ಟಕ-ಟಕ, ಟಕ್    
   ಯಾರು ಅಲ್ಲಿ?    
ಪೈ.    
   ಯಾರು ಪೈ?    
ಲಕ ಲಕ ಹೊಳೀತಿರೋ ಬೆಳ್ಳೀ  ಪೈ.

ಟಕ-ಟಕ, ಟಕ್    
   ಯಾರು ಅದು?    
ಜಿನ.    
   ಯಾರು ಜಿನ?    
ಬರಬಾರದ ರೋಗ ರುಜಿನ.

 

ಕಂತು ೨

ಟಕ-ಟಕ, ಟಕ್     
    ಯಾರು ಅಲ್ಲಿ?    
ದ್ರಾಕ್ಷಿ.    
    ಯಾರು ದ್ರಾಕ್ಷಿ?    
ಕೊಳ್ಳಾಗಿನ ರುದ್ರಾಕ್ಷಿ ಸರ!‌

ಟಕ-ಟಕ, ಟಕ್     
    ಯಾರು ಅದು?    
ಮಾರಿ.    
    ಯಾ ಮಾರಿ?    
ಸೈಬರ್‌ ಕಳ್ಳಿ!

ಟಕ-ಟಕ, ಟಕ್    
    ಯಾರು ಅಲ್ಲಿ?    
ಒತ್ತು.    
    ಯಾ ಒತ್ತು?    
ಯಾವತ್ತು ಆದರೆ ಏನು? ಇವತ್ತೇ!

ಟಕ-ಟಕ, ಟಕ್     
    ಯಾರು ಅದು?    
ದನ.    
    ಯಾರೋ ದನ?    
ಅಳುತ್ತ ಕೂತಿರೋ ರೋದನ!

ಟಕ-ಟಕ, ಟಕ್    
    ಯಾರು ಅದು?    
ಮಿನಿ.    
    ಯಾ ಮಿನಿ?    
ರಾತ್ರಿ ಬರುವವಳು!

ಟಕ-ಟಕ, ಟಕ್     
    ಯಾರು ಅಲ್ಲಿ?    
ಮತ್ತ.    
    ಮತ್ ಯಾರು?    
ಮತ್ಯಾರು? ನಾನೇ!!

ಟಕ-ಟಕ, ಟಕ್     
    ಯಾರು ಅದು?    
ಹತ್ತ.    
    ಹತ್ ಯಾರು?    
ಹೌದು, ಹತ್ಯಾರು, ಇರೀತೀನಿ ಹುಷಾರು!!

ಟಕ-ಟಕ, ಟಕ್      
    ಯಾರು ಅದು?    
ನಾ.    
    ನಾ ಯಾರು?    
ನಾಯರು, ನಾ ಗೋವಿಂದ ನಾಯರು, ನೀ ಯಾರು?


ಕನ್ನಡಕಲಿ, ಬಿತ್ತರಿಕೆ, ಸಪ್ಟಂಬರ ೨೭, ೨೦೨೪      
Kannada Kali Bittarike September 27, 2024    
ಟಕಟಕ ಜೋಕು : ಇನ್ನೂ ಬೇಕು    
ನಾಕ್-ನಾಕು ಜೋಕು : ಬೇಕೇ ಬೇಕು    
ಜೋಕು ನಿರೂಪಕರು: ಗಗನ ಗೂಗ್ಲೆ ಮತ್ತು ಸಪ್ನಾ ಗೂಗ್ಲೆ

ತಾಗುಲಿ knock-knock Jokes

ಏನಂತೀರಿ?

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.