(ಇ + ಅ)ಷ್ಟು = ಎಷ್ಟು?
ಮೂಲ ಸಂಸ್ಕೃತವೋ ಕನ್ನಡವೋ?
ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ
*** ವಿಶ್ವೇಶ್ವರ ದೀಕ್ಷಿತ
[ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ?
ಕಿಟ್ಟೆಲ್ ಕೋಶದಲ್ಲಿ ೧೨ನೆ ಶತಮಾನದ ಶಬ್ದಮಣಿದರ್ಪಣ ಮತ್ತು ಬಸವಪುರಾಣಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಕವಿರಾಜ ಮಾರ್ಗ, ಪಂಪ, ಮತ್ತು ರನ್ನರಲ್ಲಿ ಈ ಪದಗಳ ಪ್ರಯೋಗ ನನಗೆ ಕಾಣಲಿಲ್ಲ.
ಗಮನಿಸಿ : (ಹಳ)ಕನ್ನಡದಲ್ಲಿ [ಅ|ಇ|ಎ]ನಿತು ಇವುಗಳಿಗೆ ಸಮಾನಾರ್ಥಕ ಪದಗಳು. ಆಡು ನುಡಿಯಲ್ಲಿ [ಅ|ಇ][ಟ।ಟು], [ಆ।ಈ|ಏ][ಟು।ಸು], ಮತ್ತು ಅಟ್ಟು ಇವೆ.
ಇದಕ್ಕೆ ಏನಾದರೂ ಸುಲಭ ವಿವರಣೆ ಇದ್ದರೆ ನನಗೆ ಹೊಳೆಯುತ್ತಿಲ್ಲ. ]
ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ? ಈ ಪ್ರಶ್ನೆ ಪಂಡಿತರಿಗೆ ವಿದ್ವಾಂಸರಿಗೆ ಅಷ್ಟೇ ಅಲ್ಲ; ಕನ್ನಡ ಬಲ್ಲ ಎಲ್ಲರೂ ಉತ್ತರಿಸಬಹುದು; ನಮ್ಮ ನಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದು. ಒಟ್ಟಾರೆ ಸೇರಿ ಒಂದು ತಿಳುವಳಿಕೆ ಹೊಳೆಯಬಹುದು. ಕೂಡಲೇ ನಿಮ್ಮ ಒಂದು ಏನಂತಿಯನ್ನು kannadakali @ kannadakali.com ಗೆ ರವಾನಿಸಿ.
ಅಷ್ಟಿಷ್ಟು ಅಂದರೆ ಎಷ್ಟು?
ಇಲ್ಲಿ, ನಾವು ಪಾಕಸೂತ್ರವನ್ನು ಚರ್ಚಿಸುತ್ತಿಲ್ಲ. ಕನ್ನಡ ಕಲಿ ಒಂದು ನಿಜವಾದ ಅಡುಗೆ ಮನೆ ಆಗಿದ್ದರೆ, "ರುಚಿಗೆ ತಕ್ಕಷ್ಟು" ಎಂದು ಸುಲಭವಾಗಿ ಉತ್ತರಿಸಬಹುದಾಗಿತ್ತು.
ಕನ್ನಡ ಅಡುಗೆಗೆ ಇನ್ಗ್ರೀಡಿಯೆಂಟು ಗಳು ಅಂದರೆ ವರ್ಣ, ಅಕ್ಷರ, ಮತ್ತು ಪದಗಳು; ಅವನ್ನು ಜೋಡಿಸಲು ಒಂದು ಸಾಮಾನ್ಯ ವ್ಯಾಕರಣ. ಇವೆಲ್ಲ ಕಾಲಾನುಕ್ರಮದಲ್ಲಿ ಬದಲಾಗುತ್ತಲೇ ಇವೆ. ಅಂದರೆ, ಕೆಲವು ವರ್ಣಗಳು ಹೊಸದಾಗಿ ಸೇರಿಕೊಂಡಿವೆ ಮತ್ತೆ ಕೆಲವನ್ನು ತೆಗೆದು ಹಾಕಲಾಗಿದೆ. ಉದಾಹರಣೆಗೆ, ಮಹಾಪ್ರಾಣಗಳು, ವಿಸರ್ಗ, ಋ ಸಂಸ್ಕೃತದಿಂದ ಬಂದವು. ಷಕಟ ರೇಫ ಱ ಮತ್ತು ರಳ(ೞ) ಶತಮಾನಗಳ ಹಿಂದೆಯೇ ಮಾಯವಾದವು. ೠ ಅನ್ನು ಇತ್ತೀಚೆಗೆ ತೆಗೆದುಹಾಕಲಾಗಿದೆ. ಹೊಸ ಪದಗಳು ಬಂದು ಸೇರುತ್ತಲೆ ಇವೆ; ಹಾಗೆಯೆ ಅನೇಕ ಪದಗಳು ರೂಢಿ ತಪ್ಪಿ ಭೂತ ಕಾಲದಲ್ಲಿ ಹುಗಿದು ಹೋಗುತ್ತವೆ.
ಹಳಗನ್ನಡದಿಂದ ಹೊಸಗನ್ನಡಕ್ಕೆ ವ್ಯಾಕರಣ ಕೂಡ ಕ್ರಮೇಣ ಬದಲಾಗಿದೆ.
ಸಶೇಷ ಕನ್ನಡದ ವಿಶೇಷ
ಸಶೇಷ ಅಂದರೆ remainder. ಸಶೇಷ ಭಾಗಾಕಾರ ಅಂದರೆ division with remainder. ಇಲ್ಲಿ ಸ ಶ ಷ ಈ ಮೂರೂ ಸಂಘರ್ಷ ವ್ಯಂಜನಗಳು ಕ್ರಮವಾಗಿ ಇವೆ. ಮೂರನೆಯದಾದ, ಷಟ್ಕದ ಷ ಎಂದು ಸಾಮಾನ್ಯವಾಗಿ ಹೇಳುವ, ಷ ಕಾರ, ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಸಂಸ್ಕೃತದಿಂದ ಕನ್ನಡಕ್ಕೆ ಬಂತು ಉದಾಹರಣೆಗೆ, ಎಲ್ಲ ಕನ್ನಡಿಗರಿಗೂ ಪರಿಚಿತ ಇರುವ ಕವಿರಾಜ ಮಾರ್ಗದ ಕಂದ ಪದ್ಯ :
ಕಾವೇರಿಯಿಂದಮಾ ಗೋ-
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು -
ಧಾ ವಳಯ ವಿಲೀನ ವಿಶದ ವಿಷಯ ವಿಶೇಷಂ
ಇಲ್ಲಿ ಕೂಡ, ಕೊನೆಯ ಎರಡು ಸಾಲುಗಳಲ್ಲಿ ಈ ಮೂರೂ ವ್ಯಂಜನಗಳು ಇವೆ (ವಸುಧಾ ವಳಯ ವಿಲೀನ ವಿಶದ ವಿಷಯ ವಿಶೇಷಂ). ಇಲ್ಲಿನ ವಿಶೇಷ ಏನು ಎಂದರೆ ಷ ಕಾರ ಉಳ್ಳ ಪದಗಳೆಲ್ಲ ಸಂಸ್ಕೃತ ಪದಗಳು, ಎಂದರೆ ತತ್ಸಮ ಪದಗಳು.
"ಅದರಲ್ಲೇನು ವಿಶೇಷ, ಷ ಕಾರ ಇರುವ ಪದಗಳೆಲ್ಲ ಸಂಸ್ಕೃತ ಪದಗಳೆ!" ಎಂದು ನೀವು ಅನ್ನಬಹುದು.
ಸರಿ, ನೀವು ಹೇಳುವುದು ಸತ್ಯಕ್ಕೆ ದೂರವಲ್ಲ. ಈ ಪದ್ಯ ಅಷ್ಟೇ ಅಲ್ಲ, ವಿಶದ ವಿಷಯ ಆದ ಇಡಿ ಕನ್ನಡದಲ್ಲಿ ಷ ಕಾರ ನೂರಕ್ಕೆ ೯೯.೯೯೯೯೯ ಸಂಸ್ಕೃತದಿಂದ ನೇರವಾಗಿ ಬಂದ ಪದ, ಅಂದರೆ, ತತ್ಸಮಗಳಲ್ಲೇ ಕಾಣುವುದು. ಹಾಗಾದರೆ, ಉಳಿದ (ನೂರಕ್ಕೆ) ೦.೦೦೦೦೧ ಪದಗಳು ಯಾವವು?
ಅವು ಅಷ್ಟು, ಇಷ್ಟು, ಮತ್ತು ಎಷ್ಟು.
ಇವುಗಳ ಹುಟ್ಟು ಏನು? ಯಾವ ಭಾಷೆಯಿಂದ ಬಂದವು? ಯಾವ ಶತಮಾನದಲ್ಲಿ ಬಳಕೆಗೆ ಬಂದವು?
ಇತಿಹಾಸ
ಈ ಪದಗಳಿಗೆ ೧೨ನೆ ಶತಮಾನದ ಕೇಶಿರಾಜನ ಶಬ್ದಮಣಿದರ್ಪಣ ಮತ್ತು ಬಸವ ಪುರಾಣಗಳನ್ನು ಕಿಟ್ಟೆಲ್ ಕೋಶದಲ್ಲಿ ಉಲ್ಲೇಖಿಸಲಾಗಿದೆ. ಅವಕ್ಕೂ ಮುಂಚಿನ, ಕವಿರಾಜ ಮಾರ್ಗ, ರನ್ನ, ಪಂಪರಲ್ಲಿ ಈ ಪದಗಳ ಪ್ರಯೋಗ ನನಗೆ ಕಾಣಲಿಲ್ಲ.
ಬದಲಾಗಿ ಸಮಾನಾರ್ಥಕ ಅನಿತು, ಇನಿತು, ಮತ್ತು ಎನಿತು ಬಳಕೆಯಲ್ಲಿ ಇದ್ದವು. ಇವು ಹೊಸಗನ್ನಡದಲ್ಲಿ ಇಲ್ಲ. ( [ಅ|ಇ| ಎ]ನಿತುಗಳು ಕೆಲವು ಕವಿಗಳಿಗೆ ಮಾತ್ರ ಸೀಮಿತ! ಅನ್ನಿ ) ಅಷ್ಟು, ಇಷ್ಟು,ಮತ್ತು ಎಷ್ಟು ಇವುಗಳನ್ನು ಹತ್ತಿಕ್ಕಿ ಹಾಕಿವೆ. ಅನಿತು, ಇನಿತು, ಮತ್ತು ಎನಿತು ಗಳು ಕ್ರಮೇಣ ಹಿಂಜರಿದು ಈಗ ಹೊಸಗನ್ನಡದಲ್ಲಿ ಅಷ್ಟು, ಇಷ್ಟು, ಮತ್ತು ಎಷ್ಟು ಉಳಿದುಕೊಂಡಿವೆ. ಆಡು ನುಡಿಯಲ್ಲಿ [ಅ|ಇ][ಟ।ಟು], [ಆ।ಈ|ಏ][ಟು।ಸು], ಮತ್ತು ಅಟ್ಟು ಆಗಿವೆ.
ಹಾಗಿದ್ದರೆ ಅಷ್ಟು, ಇಷ್ಟು, ಮತ್ತು ಎಷ್ಟು ಗಳ ಹುಟ್ಟು ಏನು, ಹೇಗೆ?
ವಾದ ೧: ಸಂಸ್ಕೃತದಿಂದ ಕನ್ನಡಕ್ಕೆ ಬಂದವು
ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು; ಹಾಗೆಂದು, ಅಷ್ಟು, ಇಷ್ಟು, ಮತ್ತು ಎಷ್ಟು ಗಳು ಕೂಡ ಸಂಸ್ಕೃತದಿಂದ ಬಂದ ಪದಗಳು. ಆಡು ಮಾತಿನ [ಅ|ಇ][ಟ।ಟು], [ಏ][ಟು।ಸು] ಗಳು ಅಪಭ್ರಂಶಗಳು.
ಈ ವಾದ ತಪ್ಪು. ಯಾಕೆಂದರೆ ಸಂಸ್ಕೃತದಲ್ಲಿ ಅಷ್ಟು, ಇಷ್ಟು, ಮತ್ತು ಎಷ್ಟು ಗಳ ಮೂಲ ಪದಗಳು ಯಾವವು? ಸಂಸ್ಕೃತದ ಕತಿ, ಕಿಯತ್, ಏತಾವತ್ ಗಳು ಎಷ್ಟು, ಅಷ್ಟು, ಇಷ್ಟು ಗಳಿಗೆ ತತ್ಸಮ ಆಗಲಾರವು.
ವಾದ ೨: ಷ ಕಾರ ದೇಸಿ ವರ್ಣ
ಸದ್ಯ ನಮ್ಮ ತಿಳುವಳಿಕೆಯಂತೆ "ಷ ಕಾರ ದೇಸಿ ವರ್ಣ ಅಲ್ಲ. ಮೂಲ ಕನ್ನಡದಲ್ಲಿ ಇಲ್ಲ. ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು." ಇದು ತಪ್ಪೇ? ಅಷ್ಟು,+ಇಷ್ಟು= ಎಷ್ಟು? ಪ್ರಶ್ನೆಯನ್ನು ಉತ್ತರಿಸಲು, ಈ ಒಪ್ಪಿಕೊಂಡ ಮಾತನ್ನು ಶಂಕಿಸಬೇಕಾದೀತು. ಷಕಾರ ದೇಸಿ ಕನ್ನಡಲ್ಲಿ ಇತ್ತು ಎಂದು ಹೇಳಲು ಒಂದು ತೊಂದರೆ ಇದೆ. ಈ ವಾದ ಸರಿ ಇದ್ದರೆ, ಷ ಕಾರ ಉಳ್ಳ ಕನ್ನಡ ಪದಗಳು ಹೇರಳ ಆಗಿ ಇರಬೇಕಿತ್ತು. ಹಾಗಿಲ್ಲವಲ್ಲ! ಆದ್ದರಿಂದ ಈ ವಾದವನ್ನು ಒಪ್ಪಿಕೊಳ್ಳುವುದು ಕಠಿಣ.
ವಾದ ೩: ಅಚ್ಚ ಕನ್ನಡ ಪದಗಳು
ಅಷ್ಟು, ಇಷ್ಟು, ಎಷ್ಟು ಈ ಮೂರು ಪದಗಳು ಅಚ್ಚ ಕನ್ನಡ ಪದಗಳು.
ಇದು ಸರಿಯಲ್ಲ. ಷ ಕಾರ ಸಂಸ್ಕೃತದಿಂದ ಬಂದ್ದದ್ದು ಎಂದು ಒಪ್ಪಿಕೊಂಡ ಮೇಲೆ, ಸಂಸ್ಕೃತದ ಷ ಕಾರ ಉಳ್ಳ ಅಷ್ಟು, ಇಷ್ಟು, ಎಷ್ಟು ಗಳು ಅಚ್ಚ ಕನ್ನಡ ಆಗಲು ಸಾಧ್ಯವಿಲ್ಲ.
ಒಂದು ಊಹೆ (conjecture):
ಒಂದು ಊಹೆ, conjecture ಅನ್ನಿ. ಅಷ್ಟು, ಇಷ್ಟು, ಎಷ್ಟು ಈ ಮೂರು ಪದಗಳು ಅಚ್ಚ ಕನ್ನಡ ಪದಗಳು ಅಲ್ಲದಿದ್ದರೂ ಕನ್ನಡ ಮೂಲದ ಪದಗಳು.
ನಾವು ಈಗ ಆಡುಮಾತು ಎಂದು ತಿಳಿದಿರುವ [ಅ|ಇ][ಟ।ಟು], [ಆ।ಈ|ಏ][ಟು।ಸು] ಗಳೇ ಮೂಲ ಕನ್ನಡ ಪದಗಳು. ಕನ್ನಡ ಬಾಯಲ್ಲಿ, ಆಸು, ಆಟು, ಅಟು ಗಳು ಮಿಳಿತಗೊಂಡು ಅಸ್ಟು ಆಯಿತು. ಹೀಗೆಯೇ, ಇಸ್ಟು, ಎಸ್ಟು ಹುಟ್ಟಿದವು. ಆಡುಮಾತನ್ನು ಅಸಡ್ಡೆಯಿಂದ ನೋಡುವುದು ಇಂದಿಗೂ ಇದೆ.
ಅಂದಿನ ಗ್ರಂಥಗಳೆಲ್ಲ ಸಂಸ್ಕೃತಮಯವಾಗಿದ್ದವು. ಆಗ ಲೇಖಕರು ಮತ್ತು ಪಂಡಿತರು, (ಸಂಸ್ಕೃತ ವ್ಯಾಮೋಹದಿಂದ) ಅಸ್ಟು ಇಸ್ಟು ಎಸ್ಟು ಗಳ ಸ ಕಾರವನ್ನು ಷ ಕಾರಕ್ಕೆ ಸಂಸ್ಕೃತೀಕರಿಸಿ, ಅಷ್ಟು ಇಷ್ಟು ಎಷ್ಟು ಮಾಡಿದರು. ಇದನ್ನು ಸಮರ್ಥಿಸಲು, ಕವಿರಾಜ ಮಾರ್ಗಕ್ಕಿಂತ ಹಿಂದಿನ ಆಕರಗಳನ್ನು ಹುಡುಕಬೇಕು.
ಏನ್‌ಅಂತೀರಿ
ಅಷ್ಟು + ಇಷ್ಟು = ಎಷ್ಟು? ಸದ್ಯ, ನನಗಿದು ಕುತೂಹಲದ ಪ್ರಶ್ನೆ ಆಗಿ ಉಳಿದಿದೆ. ಇದಕ್ಕೆ ಏನಾದರೂ ಸುಲಭ ವಿವರಣೆ ಇದ್ದರೆ ನನಗೆ ತೋಚುತ್ತಿಲ್ಲ.
ಕೂಡಲೇ ಒಂದು ನಿಮ್ಮ ಏನಂತಿಯನ್ನು ಕನ್ನಡ ಕಲಿಗೆ ರವಾನಿಸಿ
ನಿಮ್ಮವನೇ ಆದ ವಿಶ್ವೇಶ್ವರ ದೀಕ್ಷಿತ
ಸಂಗೀತ: ಆಕಾಶ ದೀಕ್ಷಿತ
ಕನ್ನಡ ಕಲಿ, ಕನ್ನಡದ ಗುಟ್ಟು
ಬಿತ್ತರಿಕೆ ೧೦ ಕಾಲ ೨೦೨೧, ಸಂಖ್ಯೆ ೦೫ : ಬಿಕಾಸ ೧೦-೨೦೨೧-೦೫
ತಾಗುಲಿ: ಷಕಾರ, ವಿಶ್ವೇಶ್ವರ ದೀಕ್ಷಿತ, Origin of Sha, etymology of aShTu iShtu eShTu, Vishweshwar DIxit
ತುಂಬಾ ಕುತೂಹಲಕರವಾದ ವಿಷಯ! ಧನ್ಯವಾದಾಗಳು!
ಒಂದೇ ಒಂದು ಸಂದೇಹ: 'ದೇಸೀ' ಮತ್ತು 'ಅಚ್ಚ' ಕನ್ನಡಗಳಿಗೆ ವ್ಯತ್ಯಾಸವೇನು?
ನಿಮ್ಮ ಊಹೆಯು ಬಲವತ್ತರವಾದದ್ದೆಂದು ನನ್ನ ಅಭಿಪ್ರಾಯ
ರೀ ಸ್ವಾಮಿ ದೀಕ್ಷಿತರೇ
ಷಕಾರ ಎಲ್ಲಿಂದಾದರೂ ಬರಲಿ ನಿಮಗೇನ್ರೀ ನಷ್ಟ?
ನಾಲ್ಕಕ್ಷರ ಹೆಚ್ಚಾದರೆ ಆಗಲಿ ಕನ್ನಡಕ್ಕೇನು ಕಷ್ಟ?
ಶ್ಲೇಷ ಕ್ಲೇಷ ಕ್ಲೀಷೆಗಳ ದೋಷವೆಷ್ಟಿದ್ದರೂ ನಮ್ಮ ನುಡಿ ಶ್ರೇಷ್ಠ
ಪರಭಾಷೆಗಳು ಮೈಲಿಗೆ ಅನ್ನುವದು ವ್ಯರ್ಥ ಮಡಿಯ ಕಾಷ್ಠ
ಇಷ್ಟಕ್ಕೂ ಇದು ಸಂಸ್ಕೃತ, ಇಂಗ್ಲೀಷಿನಂತಲ್ಲ ಅನಿಷ್ಟ
ವಿವೇಕದಿಂದ ಬಳಸಿ ಬೆಳೆಸೋಣ ಆಗುವದಿಲ್ಲ ಭ್ರಷ್ಟ
ರವಷ್ಟು ವ್ಯಂಜನ ಮೇಲಿಷ್ಟು ಶರ್ಕರಾಪಿಷ್ಟ ವ್ಯಾಕರಣ ವಿಶಿಷ್ಟ
ಶಬ್ದಗಳ ಮೇಲೋಗರ ಮಾಡಿದರೆ ಪೌಷ್ಟಿಕ ಕನ್ನಡದ ನಾಷ್ಟ
ದಿನವೂ ಭಕ್ಷಿಸಿದರೆ ಕನ್ನಡಾಂಬೆಯೂ ಧಷ್ಟಪುಷ್ಟ
ಇದು ನನ್ನ ಖಚಿತ ಅಭಿಪ್ರಾಯ ಅಗದೀ ಸ್ಪಷ್ಟ
ನೀವು ಎರಡನೇ ವಾದಕ್ಕೆ ಕೊಟ್ಟ ಆಕ್ಷೇಪವನ್ನು ನಿಮ್ಮದೇ ಕೊನೆಯ ಊಹೆಗೂ ಕೊಡಬಹುದಲ್ಲವೇ? ಈಟು ಏಟುಗಳು ಆಡುಮಾತಿನಲ್ಲಿ ಇಸ್ಟು ಎಸ್ಟುಗಳಾಗಲು ಸಾಧ್ಯವಾದರೆ ಅಂಥ ಬೇರೆ ಉದಾಹರಣೆಗಳೂ ಇರಬೇಕಲ್ಲ? ಸಕಾರವನ್ನು ಸೇರಿಸಿಕೊಂಡು ಮಾರ್ಪಟ್ಟ ಮೂಲ ಕನ್ನಡದ ಆಡುನುಡಿಗಳು ಬೇರೆ ಯಾವವಿವೆ?
ಬಹಳ ಚೆನ್ನಾಗಿದೆ
ತುಂಬಾ ಕುತೂಹಲಕರವಾದ ವಿಷಯ! …