ಅನೇಕದಂತಾಲಂಕಾರ

ಅಸಾಧ್ಯವನ್ನು ಸಾಧ್ಯಗೊಳಿಸುವುದೆ ಕನ್ನಡ

ಅನೇಕದಂತಾಲಂಕಾರ

*** ವಿಶ್ವೇಶ್ವರ ದೀಕ್ಷಿತ

ಡೊಂಕು ಸೊಂಡೆಯ, ದೊಡ್ಡ ಮೈಯ, ಕೋಟಿ ದಿನಪರ ಹೊಳಪಿನವನೆ, ನನ್ನೊಳಿತು‌ ಗೆಯ್ಮೆಗಳ ಎಲ್ಲ ತೊಡಕುಗಳನಳಿಸು ಅನವರತ. ಮೊನ್ನೆ ತಾನೆ, ಈ ಕಂನುಡಿಯನ್ನು, ಗಣೇಶ ಚೌತಿಯ ಸಂದರ್ಭದಲ್ಲಿ, ನಿಮ್ಮೆಲ್ಲರ ಜೊತೆಗೆ ಹಂಚಿಕೊಂಡಿದ್ದೆ ( https://www.youtube.com/watch?v=eEgWpDFaHH4 ) ಇದು ಎಲ್ಲರಿಗೂ ಪರಿಚಿತ, ಅಂತರ್ಗತ ಆಗಿರುವ ಸಂಸ್ಕೃತದ "ವಕ್ರತುಂಡ ಮಹಾಕಾಯ" ಶ್ಲೋಕದ ಕನ್ನಡ ಅನುವಾದ. ಮಕ್ಕಳಿಗೋಸ್ಕರ ಮಾಡಿದ್ದು. ಅದನ್ನು "ಸರಸ ಸಾಹಿತ್ಯ ಸಲ್ಲಾಪ" ಅನ್ನುವ ವಾಟ್ಸಪ್ ಗುಂಪಿಗೂ ಹಾಕಿದ್ದೆ. ಅದನ್ನು ಮೆಚ್ಚಿದ ಯಶವಂತ ಗಡ್ಡಿ ಅವರು "ಅಗಜಾನನ ಪದ್ಮಾರ್ಕಂ" ಅನ್ನುವ ಶ್ಲೋಕವನ್ನು ಕನ್ನಡಿಸಿದ್ದೀರಾ ಅನ್ನುವ ನಿರ್ಮಲ ಪ್ರಶ್ನೆ ಕೇಳಿದರು. ~Yash Gaddi Very nice, sir👌👌👌 ಅಗಜಾನನ ಮಾಡಿದ್ದರೆ ಶೇರ್ ಮಾಡಿ [ಅಂತ]

ಅಗಜಾನನ ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಶಂ
ಅನೇಕದಂ ತಂ ಭಕ್ತಾನಾಂ ಏಕದಂತಮುಪಾಸ್ಮಹೇ.

ಇದೂ ಕೂಡ ಪ್ರಸಿದ್ದ ಶ್ಲೋಕ. ಇದರಲ್ಲಿ, ಸಂಸ್ಕೃತಕ್ಕೇ ವಿಶೇಷ ಎನಿಸುವ ಪದ ಚಮತ್ಕಾರ ತುಂಬಿದೆ. ಮೊದಲ ಪದವನ್ನು ತೆಗೆದುಕೊಳ್ಳಿ. ಅ+ಗಜಾನನ ಎಂದರೆ ಗಜಾನನ ಅಲ್ಲದವನು ಎಂದು ಅರ್ಥ. ಗಜ+ಆನನ ಅಂದರೆ ಆನೆ ಮುಖದವ, ಆ ಸಾಕ್ಷಾತ್ ಗಜಾನನನಿಗೇ ಗಜಾನನ ಅಲ್ಲದವ ಎಂದರೆ? ಅದು ಹೇಗೆ ಸಾಧ್ಯ? ಹೀಗೆ ಶುರು ಅಗುತ್ತದೆ, ತಲೆ ಸೊಂಡೆ ಹೊಟ್ಟೆ ಕೆರೆತ!

ಇಷ್ಟಕ್ಕೆ ಮುಗಿಯಲಿಲ್ಲ. ಎರಡನೆ ಸಾಲಿನ, ಮೊದಲ ಪದ ಅನೇಕದಂ ಅಂದರೆ, ಮೇಲು ನೋಟಕ್ಕೆ ಅರ್ಥ ಇಲ್ಲದ್ದು ಅನಿಸುತ್ತದೆ. ಆಮೇಲೆ ಎರಡನೆ ಪದ ತಂ ನೋಡಿದಾಗ ಅದೂ ಹಾಗೇ. ಆದರೆ ಸಾಮಾನ್ಯವಾಗಿ ರಾಗವಾಗಿ ಶ್ಲೋಕ ಹೇಳುವಂತೆ, “ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಹೇ” ಎರಡನ್ನೂ ಸೇರಿಸಿ ಅನೇಕದಂತಂ ಅಂದಾಗ ದಂತಂ ಅನ್ನುವ ಪರಿಚಿತ ಪದ ಕೇಳುತ್ತದೆ. ಆಹಾ! ಯಾವನೋ ಹಿಂದಿನ ಕಾಲದ ದಡ್ಡ ಶಿಖಾಮಣಿ ತಾಳೆ ಗರಿಯಲ್ಲಿ ಅನೇಕದಂ ತಂ ಅಂತ ತಪ್ಪಾಗಿ ಬಿಡಿಸಿ ಬರೆದಿದ್ದಾನೆ; ಹಾಗೇ ಎಲ್ಲರೂ, ಗೊತ್ತಲ್ಲ ನಾವು ಕನ್ನಡಿಗರು, ಕುರಿಗಳ ತರಹ ಶತಮಾನಗಳಿಂದ ಹೇಳುತ್ತ ಬಂದಿದ್ದೇವೆ. ಜಗತ್ತಿನ ಏನೋ ಒಂದು ಗುಟ್ಟು ಕಂಡು ಹಿಡಿದ ಜಾಣನ ಹಾಗೆ ಕುಣಿಯ ಬೇಕು ಎನಿಸುವ ಆನಂದ.

ಆದರೆ ಅನೇಕ ದಂತಂ ಅಂದರೆ ಬಹಳ ಕೋರೆ ಹಲ್ಲುಗಳು ಉಳ್ಳವ. ಗಣೇಶನಿಗೆ ಇರುವುದು ಒಂದೆ ಕೋರೆ, ಎರಡನೆಯದು ಮುರಿದು ಹೋಗಿದೆ. ಇದೇನಪ್ಪ ಆಂತ ಮತ್ತೆ ತಲೆ ಕೆರೆತ ಶುರು! ನಾಲ್ಕನೆಯ ಪದ ನೋಡಿ – ಏಕದಂತಂ – ಉಪಾಸ್ಮಹೇ. ಇವನಿಗೂ ಗೊತ್ತು ಗಣೇಶನಿಗೆ ಒಂದೇ ಕೋರೆ ಅಂತ. ಮತ್ತೆ ಯಾಕೆ ಅನೇಕದಂತಂ ಅಂದ? ಇದೆ ಮಜಾ.

ಇಲ್ಲಿ ಅನೇಕ ದಂ ತಂ ಅಂತ ಮೂರು ಪದಗಳಾಗಿ ಬಿಡಿಸಿ ಬರೆದರೆ

ಅನೇಕ=ಬಹಳ ದಂ=ಕೊಡುವವ, ತಂ = ನಿನ್ನನ್ನು.

ಅಂದರೆ, ಬೇಡಿದ್ದನ್ನು ಬಹಳಷ್ಟು ಅಥವ ಅನೇಕ ವರಗಳನ್ನು ಕೊಡುವವ.

ಹಾಗೆಯೆ, ( (ಅ+ಗ) + ಜಾ) + ಆನನ ಎಂದು ಸರಿಯಾಗಿ ಕಂಸ ಅಧಿಕ ಚಿಹ್ನೆಗಳನ್ನು ಹಾಕಿದರೆ, ಗ=ಚಲಿಸುವುದು, ಅಗ=ಚಲಿಸಲಾರದವ, ಪರ್ವತ, ಜಾ=ಅವನಿಗೆ ಹುಟ್ಟಿದವಳು, ಮಗಳು ಪಾರ್ವತಿ, ಆನನ=ಮುಖ, ಅಮ್ಮ ಪಾರ್ವತಿಯ ಮುಖ!

ಅಂದರೆ, ಪಾರ್ವತಿಯ ಮುಖ ಕಮಲಕ್ಕೆ ಸೂರ್ಯನಂತೆ ಇರುವ ಆನೆ ಮುಖದವನನ್ನು, (ಬೇಡಿದ್ದನ್ನು) ಬಹುವಾಗಿ ಅನೇಕ ವರಗಳನ್ನು ಕೊಡುವ ಒಂದೆ ಕೋರೆ ಉಳ್ಳವನನ್ನು, ಅಂದರೆ ಗಣೇಶನನ್ನು, ಹಗಲಿರುಳೂ ಪೂಜಿಸುತ್ತೇನೆ. ಇದು ಈ ಶ್ಲೋಕದ ಅರ್ಥ! ಅಬ್ಬ, ಗಣೇಶನ ಜೊತೆಗೆ, ಸಂಸ್ಕೃತದ ಕಬ್ಬಿನ ರಸವನ್ನು ಫ್ರೀಝ ಮಾಡಿ ಇಟ್ಟಿರುವಂತಿರುವ ಈ ಶ್ಲೋಕವನ್ನು ರಚಿಸಿದ ಕಬ್ಬಿಗನನ್ನೂ ಪೂಜಿಸಬೇಕು ಎಂದು ಅನಿಸುವುದು ಖಚಿತ.

ಅನೇಕದಂತಾಲಂಕಾರ ಇಲ್ಲಿನ, ಅಗಜಾನನ, ಅನೇಕದಂ ತಂ ಇವುಗಳಿಗೆ “ಶ್ಲೇಷಸಂಧಿ-ಶ್ಲೇಷಾಲಂಕಾರ” ಅನ್ನಬಹುದೇನೋ. ಅಂದರೆ ಎರಡು/ಹೆಚ್ಚು ಅಪಾರ್ಥವಲ್ಲದ ಅರ್ಥ ಬರುವಂತೆ ಎರಡು/ಹೆಚ್ಚು ರೀತಿಯಲ್ಲಿ ಕೂಡಿಸ/ಬಿಡಿಸಬಹುದಾದ ಸಂಧಿ, ವಿಸಂಧಿ, ಸಮಾಸಗಳಿಂದ ಆದ “ಶಬ್ದಾರ್ಥಾಲಂಕಾರ.” ಮುಂದುವರೆದು, ಇಂಥ ಅರ್ಥಗಳು ಸಂದರ್ಭಕ್ಕೆ ಹೊಂದಬಹುದು ಹೊಂದದಿರಬಹುದು.

ಅಂತೂ ಸಂಧಿ, ವಿಸಂಧಿ, ಶ್ಲೇಷೆ, ವಿರೋಧ, ವಿರೋಧಾಭಾಸಗಳಿಂದ ಮುದ ನೀಡುವ ಈ ಅಲಂಕಾರಕ್ಕೆ, ಸರಳ ಮಾತಿನಲ್ಲಿ “ಅನೇಕದಂತಾಲಂಕಾರಅನ್ನೋಣ!

ಇಂಪಾಸಿಬಲ್ ಚಾಲೆಂಜು

ಅದಕ್ಕೆ, ಯಶವಂತರಿಗೆ ಹೇಳಿದೆ ಅನೇಕದಂತಾಲಂಕಾರದ ಅಗಜಾನನ ಶ್ಲೋಕವನ್ನು ಅದೆ ಚಮತ್ಕಾರಕ ರೀತಿಯಲ್ಲಿ ಭಾಷಾಂತರಿಸುವುದು ಬಹಳ ಚಾಲೆಂಜಿಂಗು.” ಮುಂದುವರೆದು “ಇಂಪಾಸಿಬಲ್” ಅಂತ ಘೋಷಿಸಿದೆ. “ಆದರೂ ಎಲ್ಲರೂ ಸೇರಿ ಒಂದು ಸಾಮೂಹಿಕ ಫನ್‌ ಪ್ರೊಜೆಕ್ಟ್‌ ಮಾಡಿ, ಫಲಿತಾಂಶ ಏನೇ ಇರಲಿ, ಸಂತೋಷ ಪಡಬಹುದು, ರೆಡೀ ನಾ?” ಅಂದೆ.

~ Vishweshwar Dixit
ಓ ಹೋ! ಚಾಲೆಂಜಿಂಗ ಕಿಂತ ಇಂಪಾಸಿಬಲ್! ಅನಬೇಕು. ಆದರೂ ... ನೀವು ಮತ್ತಿತರ ಸಸಾಸ ಸಾಹಸಿಗರು ಕೈ ಕೂಡಿಸಿ ಪ್ರಯತ್ನಿದರೆ ಒಂದು ಸಾಮೂಹಿಕ ಫನ್ ಪ್ರೋಜೆಕ್ಟ್ ಆಗಬಹುದು. ಬೇರೆ ರೀತಿಯಲ್ಲಿ ಮೂಡಿ ಬಂದರೂ ಸಂತೋಷಿಸಬಹುದು. ರೆಡೀ ನಾ?

ಆಯತು, ಇಲ್ಲಿಗೇ ಮುಗಿಯಿತು ಎಲ್ಲ ಫನ್‌ ಅಂದುಕೊಂಡಿರಾ? ಸರಕ್‌ ಅಂತ ಯಶವಂತ ಒಂದು ಸಾಲು ಹಾಕೇ ಬಿಟ್ಟರು. “ಅಗಮಗಳ ನೀರಜ ಮೊಗನಳಿಪ ಮಗ ಸೂರಜ ಗಜಮೊಗನಂ....” ನೀರಜ ಸೂರಜ ಅಂತೆಲ್ಲ ಹೇಳಿ ಎಲ್ಲರನ್ನೂ ಬೆಳತನಕ ಎಚ್ಚರ ಕೂಡಿಸಿ ಬಿಟ್ಟರು!

~Yash Gaddi Why not!!!!
ಶುರು ಹಚ್ಕಳ್ಳಿ! 😀
ಅಗಮಗಳ ನೀರಜ ಮೊಗನಳಿಪ ಮಗ ಸೂರಜ ಗಜಮೊಗನಂ....

ಗಣೇಶ ಒಲಿಯುವನೆ?

ಉಪಾಯ ಇಲ್ಲದೆ, ಶ್ರೀನಿವಾಸರು‌, ಅಸಾಧ್ಯ ಎಂದು ಹೇಳುತ್ತಲೆ, ಎಂದಿನಂತೆ ತಮ್ಮ ಛಂದದಲ್ಲಿ, [ ಅಲುಗದರಸನಕುವರಿಯ ಮೊಗ ನೇಸರನ ಕಂಡ ತಾವರೆ, ಆನೆಮೊಗದ ಕಂದನ ಕಾಣುತೆ! ತನ್ನ ನೆನೆವವರ ಬಹುಬಯಕೆ ಸಲಿಪ ಒಂದು ಕೋರೆದಾಡೆಯವನಿವನಂ ಆರಾಧಿಪೆ ನಾ ಬೆಳಗೂ, ಬೈಗೂ! ] (ಬೈಗೂ ಬೆಳಗೂ) ಹಾಡಿ ಹಾಡಿ ಗಣೇಶನನ್ನು ಆರಾಧಿಸತೊಡಗಿದರು.

      ~ ಶ್ರೀನಿವಾಸ
      ಸಂಸ್ಕೃತದಲ್ಲಿರುವಷ್ಟೇ ಪದಗಳನ್ನು ಬಳಸಿ ಆ ಅರ್ಥ ಹೊಮ್ಮಿಸುವುದು ಅಸಾಧ್ಯವೇ ಸರಿ. ನನ್ನರಿವಿನ ಮಿತಿಯಲ್ಲಿ ಅನುವಾದಿಸಲು ಹೀಗೆ ಪ್ರಯತ್ನಿಸಿದ್ದೇನೆ.
     ೧ ಅಲುಗದರಸನ ಕುವರಿಯ ಮೊಗ
     ನೇಸರನ ಕಂಡ ತಾವರೆ,
     ಆನೆಮೊಗದ ಕಂದನ ಕಾಣುತೆ!
     ತನ್ನ ನೆನೆವವರ ಬಹುಬಯಕೆ ಸಲಿಪ
     ಒಂದು ಕೋರೆದಾಡೆಯವನಿವನಂ
     ಆರಾಧಿಪೆ ನಾ ಬೆಳಗೂ, ಬೈಗೂ!

ಹಲವೊಂದು ಚಮತ್ಕಾರ

ಆಗ, ಗಣೇಶ, ಶ್ರೀನಿವಾಸ ಅವರಿಗೆ, ಕೂಡಲೆ ಒಲಿದು ಹಲವೊಂದು ಚಮತ್ಕಾರಗಳನ್ನು ನುಡಿಸಿದ:

     ~ ಶ್ರೀನಿವಾಸ 9/11/2021]
     ೨. ಬಿಳಿತರಳೆ ಮೊಗವರಳೆ ಕರಿಮೊಗನ ಕಂಡು
     ನೇಸರನರಳಿಸುವ ತಾವರೆಯಂದದಲಿ,
     ಹಲವೊಂದು ಬೇಡಿಕೆಗಳ ಸಲಿಪ ಒಂದು
     ಕೋರೆದಾಡೆಯವನಂ ಆರಾಧಿಪೆ ನಾ ಹಗಲಿರುಳೂ!

ಇಲ್ಲಿ, ಬಿಳಿ ತರಳೆ – ಕರಿಮೊಗ ಮತ್ತು ಹಲವೊಂದು ವಿರೋಧಾಭಾಸಕ ಪ್ರಯೋಗಗಳನ್ನು ಗಮನಿಸಿ. ಮೇಲಾಗಿ, ನೇಸರನರಳಿಸುವ ಪದ ನೋಡಿ. ಇಲ್ಲಿದೆ ಶ್ಲೇಷಸಂಧಿ-ಶ್ಲೇಷಾಲಂಕಾರ: ನೇಸರನು+ಅರಳಿಸುವ ತಾವರೆ ಅಂದರೆ ಸರಿ; ಆದರೆ ನೇಸರ+ನರಳಿಸುವ ತಾವರೆ ವಿರೋಧ ಮತ್ತು ಅಪಾರ್ಥ!

ಹೊರೆ, ತೊಂದರೆ ದೂರಿಸು

ಬೆಳಗಾಯಿತು.. “ಅಗಜಾನನ ದಂಥ ಶಬ್ದಚಮತ್ಕಾರದ ಸಂಸ್ಕೃತ ಸಮಸ್ಯಾಶ್ಲೋಕವನ್ನು ಕನ್ನಡೀಕರಿಸುವ ಸಾಹಸವನ್ನು ಬದಿಗಿಟ್ಟು —” ಎಂದು ವಿನಾಯಕ ಹುಣಸೇಕೊಪ್ಪ ಎಲ್ಲರನ್ನೂ ತಮ್ಮ ಸೆಳೆಯುವ ನಗುವಿನಿಂದ ಎಚ್ಚರಿಸಿದರು.

     ~ Vinayaka Hunasekoppa
     ರವಿಯೆಡೆಗೆ ಮೊಗಮಾಡಿ, ಅರಳುವಾ ತಾವರೆಯ
     ಮೊಗದವಳ ಮಗನಾಗಿ, ಗಿರಿಸುತೆಯ ಬೆಳಕಾಗಿ
     ಸೆಳೆಯುವಾ ನಗುವಾಗಿ, ಭಕುತರಿಗೆ ಸೆರೆಯಾಗಿ
     ಹಗಲಿರುಳು ಕಾಯುತಲಿ, ಬಗೆಬಗೆಯ ವರ ಕೊಡುವ
     ಒಂಟಿದಂತದ ಒಡೆಯ, ಆನೆಮೊಗ ಗಣಪನ
     ಬೇಡೋಣ ಪೊರೆಯೆಂದು, ತೊಂದರೆಗಳ ದೂರಿಸಿ

ಹೀಗೆ ವಿನಾಯಕರು ಮುಂದಿರುವ ಚಾಲೆಂಜನ್ನು ಮತ್ತೆ ನೆನಪಿಸಿದಾಗ, “ಇದು ಕನ್ನಡಕ್ಕೆ ಹಾಕಿದ ಸವಾಲು!”, ಏನಾದರೂ ಬರೆಯಲೇ ಬೇಕು ಎನ್ನುವ ಛಲ ಹುಟ್ಟಿತು. ಅವರ ಬೇಡಿಕೆಯಂತೆ ಗಣೇಶ ತೊಂದರೆಗಳನ್ನೆಲ್ಲ ದೂರ ಮಾಡಿದಾಗ ನೆಪ ಬೇಕೆ? ತಡ ಏಕೆ?

ಸಾವಿರದುರುವ ವರ ಕೊಡುವ

ಆಗ ನನಗೆ ಹೊಳೆದದ್ದು ಹೀಗಿದೆ.

~ Vishweshwar Dixit
ಮೂಲಕ್ಕಿಂತ ಸ್ವಲ್ಪ ಬೇರೆ ಆಗಿದೆ. ಉದಾರವಾಗಿ ಲಂಬ ಆಗಿದೆ. ಸುಮ್ಮನೆ ಹಟ ಹಿಡಿದು ಬರೆದದ್ದು. ಒಮ್ಮೆ ಓದಿ. ತಪ್ಪೆನಿಸಿದರೆ, ಹೇಗಿದ್ದರೂ ಸಾಮೂಹಿಕ ಪ್ರೋಜೆಕ್ಟ್, ಈ ಮಣ್ಣು ಗಣಪನ ಗಣಕ ನುಡಿಯನ್ನು ಮೊಬೈಲಲ್ಲೆ ತೀಡಿ ತಿದ್ದಿರಿ.

ಎನ್ನುವ ಮುನ್ನುಡಿಯೊಂದಿಗೆ:

     ಅಮಲೆ ಮಲೆ ಮಗಳ ಅಮಲ ಮುಖ
     ಕಮಲ ಮಲರವನು ಅರಳಿಸುವ
     ನೇಸರನ ತೆರನ ಜಗ ಬೆಳಗುತಿರುವ,
     ಬಿಳಿ ಮೈಯ ಕರಿ ಕೆಸರ ಮಗನ,
     ಕೆಂಪನೆಯ ಕರಿ ಮುಖದವನ,
     ಸಾವಿರದುರುವ ವರ ಕೊಡುವ ಕೊಡದ
     ಹೊಟ್ಟೆಯಲಿ ಲೋಕ ಹೊತ್ತಿರುವ
     ಹೊತ್ತಿರದ ಸಾವಿರದ ಸಾವಿ ವರ
     ಗಣಪನನು ನೆನೆಯುವೆನು ನಾನು
     ಅನುದಿನವು ಹಗಲಿರುಳು ಸತತ

ಇಲ್ಲಿ xಮಲೆ xಮಲ ಪದಗಳ ಆಟದೊಂದಿಗೆ ಗಮನಿಸಬೇಕಾದ ಚಮತ್ಕಾರ ಎನಿಸುವ ಅಂಶಗಳು:

  1. ಬಿಳಿ ಮೈಯ ಕರಿ ಕೆಸರ : ಹಿಮವನ್ನು ಹೊದ್ದುಕೊಂಡಿರುವ ಪರ್ವತರಾಜನ ಮೈ ಬಿಳಿದು. ಅವನ ಮಗಳು ಪಾರ್ವತಿಯ ಮೈ ಕೂಡ ಬಿಳಿ. ಅವಳ ಬಿಳಿ ಮೈಯಿಂದ ಬಂದ ಕರಿ ಮಣ್ಣು-ಕೆಸರಿನಿಂದ ಹುಟ್ಟಿದ ಅವಳ ಮಗ;
  2. ಕೆಂಪನೆಯ ಕರಿ ಮುಖದವನ : ಕೆಂಪು-ಕರಿ ವಿರೋಧಾಭಾಸ; ಕೆಂಪನೆಯ (ಸಿಂದೂರ) ಬಣ್ಣದ ಕರಿ=ಆನೆ ಮುಖದವ (ಕಪ್ಪು ಮುಖದವ ಅಲ್ಲ)
  3. ಸಾವಿರದುರುವ :
    • a. ಇದು ಸಾವು+ಇರದ +ಉರುವ.
      • i. ಉರುವ=ಇರುವ : ಇರದ ಮತ್ತು ಇರುವ ಎರಡರ ಉಪಯೋಗ ವಿರೋಧಾಭಾಸ/ಗೊಂದಲ ಹುಟ್ಟಿಸುತ್ತದೆ.
      • ii. ಉರುವ=ಶ್ರೇಷ್ಠ : ಸಾವು ಇರದ ಶ್ರೇಷ್ಠ ವರಗಳನ್ನು (endless, that can be used ininitely, superior boons) ಕೊಡುವ
    • b. ಸಾವಿರದಿ +ಉರುವ ವರ ಕೊಡುವ ಎಂದರೆ ಸಾವಿರ ಗಟ್ಟಲೆ/ಸಾವಿರಾರು ವರ ಕೊಡುವ
  4. ವರ ಕೊಡುವ ಕೊಡದ : ವಿರೋಧಾಭಾಸ; ವರ(boon) ಕೊಡುವ (granting), ವರ (superior) ಕೊಡದ(pot) ಹೊಟ್ಟೆಯಲಿ
  5. ಹೊತ್ತಿರುವ ಹೊತ್ತಿರದ : ವಿರೋಧಾಭಾಸ; ಹೊತ್ತಿರುವ=carrying, ಹೊತ್ತಿರದ=ಹೊತ್ತು+ಇರದ = ಕಾಲಾತೀತ
  6. ಸಾವಿರದ : ಸಾವು ಇರದ eternal
  7. ಸಾವಿ ವರ : ಅ) ಸಾವಿ=ಸ್ವಾಮಿ, ಒಡೆಯ; ವರ=ಶ್ರೇಷ್ಠ ಆ) ಸಾವಿವರ = ಸ+ಅವಿವರ ವಿವರಣೆ ಇಲ್ಲದವ indescribable
  8. ಅನುದಿನವು ಹಗಲಿರುಳು ಸತತ : ಪದಗಳು ಅತಿರಿಕ್ತ (redundant) ಆಗಿಲ್ಲ; every day, day and night, continuously ಎಂದು ಮೂರೂ ಪದಗಳು ಅವಶ್ಯ ಆಗಿವೆ.

ವಿಪರ್ಯಾಸ ಎಂದರೆ, ಇದನ್ನು ಅರಗಿಸಿಕೊಳ್ಳುವುದು ಸಂಸ್ಕೃತಕ್ಕಿಂತ ಕಠಿನ ಆಯ್ತು ಅಂದರು ಶ್ರೀಧರ ರಾಜಣ್ಣ.

     ~ Sridhar Rajanna
      Ironically this Kannada verse is tougher to understand than the Samskrita Shloka😊

ಪದಗಳು “ರೂಢಿ”ಗೆ ಬರುವುದು ಬಳಕೆಯಿಂದ ಮಾತ್ರ. ಸಾಮಾನ್ಯವಾಗಿ ಬಳಕೆ ಆಗುವುದು ʼರೂಢಿʼಯಲ್ಲಿ ಇದ್ದರೆ ಮಾತ್ರ. It’s a catch-22 problem! ಅಂತ ವಿನಾಯಕರು ಸಮಝಾಯಿಷಿ ನೀಡಿದರು!

ವರ್ಣಾಲಂಕಾರ

ಗಣಪನ ಬಣ್ಣನೆ ಇಷ್ಟಕ್ಕೆ ನಿಲ್ಲಲಿಲ್ಲ. ಸುಮನಾ ನಂಜುಂಡಾಚಾರರ ಕುಂಚದಿಂದ ಮಣ್ಣ ಗಣಪ ಶುದ್ಧ ಬಣ್ಣ ಗಣಪ ಆದ.

     ~ Sumna Nanjundachar
     ಹಸಿರು ಬೆಟ್ಟದರಸನ ಕೆಂಪು ತಾವರೆ ಮುಖದ ಕುವರಿಯ
     ಕರಿ ಮೈಯ ಬಿಳಿ ಒಂಟಿ ದಂತ ಹೊನ್ನ ಬಣ್ಣದ ಪಾತ್ರೆಯಂತೆ
     ಹೊಳೆವ ಹೊಟ್ಟೆಯ ಮಗನ ಬೇಡುವೆವು ನಾವು
     ಕೊಡು ನೀಲ ಆಕಾಶದಷ್ಟು ವರವ ನಮಗೆಂದು

ವಿಜಯ ಕುಮಾರರು ಇದಕ್ಕೆ “ವರ್ಣಾಲಂಕಾರ” ಎಂದು ಕರೆದರು. ಹೌದು, ಇದು ಅಕ್ಷರಶ ಭೂಷಣವೂ ಸರಿ, ಶಬ್ದಾಲಂಕಾರವೂ ಸರಿ!

ಹಲಕೋರೆ

ಕೊನೆಯಲ್ಲಿ, ಎಲ್ಲರ ಪ್ರಯತ್ನಗಳಿಂದ ಮೂಡಿದ ಗಣಪನಿಗೆ ಮತ್ತೆ ಬಾ ಎನ್ನುತ್ತ, ಯಶವಂತ ಗಡ್ಡಿ ಒಲ್ಲದ ಮನಸ್ಸಿನಿಂದ ಬೀಳ್‌ ಕೊಟ್ಟರು

     ~ Yash Gaddi
     ಕರಿಮೊಗದವ ನಲ್ಲ ನೇಸರ ನಲಿಪ ನಳಿನ ಕದಂಪಿನ
     ಗಿರಿಜಾ ಕಂದ ಸಿಂದೂರ ವರ್ಣದ ವಾರಣ ವದನ!
     ನಿರುತ ಪೂಜಿಪೆ ಹಲಕೋರೆಯವನ ಕರುಣದಿಂ
     ಭಕ್ತರಿಗೆ ವರಗಳನೀವ ಏಕಕೋರೆದಾಡೆಯವನ!

ಯಶವಂತರ ಈ ಪದ್ಯದಲ್ಲಿ ಗಮನಿಸಬೇಕಾದ ಚಮತ್ಕಾರಗಳು:

  1. ಕರಿಮೊಗದವ ನಲ್ಲ : (ಶ್ಲೇಷ ದ್ವಂದ್ವ ಸಂಧಿ) ಈ ಪದಗಳನ್ನು ಕರಿಮೊಗದವನಲ್ಲ ಎಂದು ಕೂಡಿಸಿ, ಬೇರೆ ರೀತಿಯಲ್ಲಿ ಬಿಡಿಸಬಹುದು
    • ಕರಿ ಮೊಗದವನು ಅಲ್ಲ, true 3.
    • ಕರಿಮೊಗದವನು ಅಲ್ಲ. false 4.
  2. ಹಲಕೋರೆ-ಏಕಕೋರೆ: ಇದೊಂದು ವಿರೋಧಾಭಾಸ. “ಹಲವು (ಬಗೆಯಿಂದ) ಕೋರಲು ಎಂದು ಕರುಣೆಯಿಂದ ಭಕ್ತರಿಗೆ ವರಗಳನ್ನು ಕೊಡುವ ಏಕ ಕೋರೆದಾಡೆಯ ಉಳ್ಳವನನ್ನು ನಿರುತ ಪೂಜಿಸುವೆ” ಎಂದು ಅರ್ಥೈಸಿಕೋಳಬೇಕು.

ಸಸಾಸಿಗರನ್ನು ಚಾಲೆಂಜ ಮಾಡಿದ್ರೆ ಹೀಗೇ ಆಗೋದು. ಕನ್ನಡವನ್ನೆ ಚಾಲೆಂಜ ಮಾಡ್ದ ಹಾಗೆ! Never challenge Kannada. ಅಸಾಧ್ಯವನ್ನು ಸಾಧ್ಯಗೊಳಿಸುವುದೇ ಕನ್ನಡ! ಗಣೆಶನಿಗೆ ಎಲ್ಲವೂ ಗೊತ್ತು, ಇದು ಕನ್ನಡದ ಗುಟ್ಟು.

ನಿಮ್ಮವನೇ ಆದ,

ವಿಶ್ವೇಶ್ವರ ದೀಕ್ಷಿತ

ಸಂಗೀತ: ಆಕಾಶ ದೀಕ್ಷಿತ

ಬಿತ್ತರಿಕೆ 09 ಕಾಲ ೨೦೨೧, ಸಂಖ್ಯೆ 0೪ : ಬಿಕಾಸ 09-೨೦೨೧-04

ತಾಗುಲಿ : Clever Sanskrit Poetry, Kannada Experiment, Sarasa Sahitya Sallapa, Vishweshwar Dixit, Yashavant Gaddi, Srinivasa, Vinayaka Hunasekoppa, Sridhar Rajanna, Sumana Nanjundachar, Vijay Kumar H.G.