ನಾಡ ಹಬ್ಬ

ಕನ್ನಡದ ಗುಟ್ಟು

ನಾಡ ಹಬ್ಬ

ವಿಶ್ವೇಶ್ವರ ದೀಕ್ಷಿತ

ಸಮಸ್ತ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯಗಳು, ದೀಪಾವಳಿಯ ಶುಭಾಶಯಗಳು, ದಸರೆಯ ಶುಭಾಶಯಗಳು, ವಿಜಯದಶಮಿಯ ಶುಭಾಶಯಗಳು, ಬನ್ನಿ ಹಬ್ಬದ ಶುಭಾಶಯಗಳು. ಮೇಲಾಗಿ, ಪ್ರಸ್ತುತ ವಿಷಯವಾದ ನಾಡ ಹಬ್ಬದ ಶುಭಾಶಯಗಳು!
ರಾಜ್ಯೋತ್ಸವ, ದೀಪಾವಳಿ, ದಸರೆ ಎಲ್ಲರಿಗೂ ಗೊತ್ತು. ನಾಡ ಹಬ್ಬ ಎಲ್ಲಿಂದ ಬಂತು?

ಕನ್ನಡದಿಂದ ಕರ್ನಾಟಕ
ಒಂದು ಕಾಲದಲ್ಲಿ, ಕಾವೇರಿಯಿಂದ ಗೋದಾವರಿಯ ವರೆಗೂ ವಿಸ್ತರಿಕೊಂಡು, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳಿಗೆ ತವರಾಗಿದ್ದ ಕನ್ನಡ ನಾಡು, ೬೫ ವರ್ಷಗಳ ಹಿಂದೆ ಅಷ್ಟೆ, ತುಂಡು ತುಂಡಾಗಿತ್ತು. ಕನ್ನಡಿಗರು ಮುಂಬೈ ಮದ್ರಾಸು ಪ್ರಾಂತಗಳಲ್ಲಿ ಮತ್ತು ಹೈದರಾಬಾದ್ ಮೈಸೂರು ಮತ್ತಿತರ ಚಿಕ್ಕ ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದರು. ಹೀಗೆ, ನೆಲೆಹೀನರಾದ ಕನ್ನಡಿಗರು ತಮ್ಮ ಸಂಸ್ಕೃತಿ - ನಡೆ ನುಡಿ - ಗಳನ್ನು ಉಳಿಸಿಕೊಂಡು ಬಂದದ್ದೆ ಆಶ್ಚರ್ಯ ಮತ್ತು ಕನ್ನಡ ಸಂಸ್ಕೃತಿಯ ಗಟ್ಟಿತನದ ಸ್ಪಷ್ಟ ನಿದರ್ಶನ. ಮುಂದೆ ಒಂದು ದಿನ ನಾವೆಲ್ಲ ಒಂದೇ ನಾಡಿನಲ್ಲಿ, ಒಂದಾಗಿ ಬಾಳುತ್ತೇವೆ ಎನ್ನುವ ಅವರ ಎದೆಯಾಳದ ಆಸೆಯ ಕಿಡಿ ಎಂದೂ ಆರಿರಲಿಲ್ಲ. ಅದು ಭುಗಿಲೆದ್ದು ಎಲ್ಲ ಕನ್ನಡಿಗರನ್ನು ಒಂದು ಅಖಂಡ ನಾಡಿನಲ್ಲಿ ಒಂದುಗೂಡಿಸಲು ಕರ್ನಾಟಕ ಏಕೀಕರಣದ ಹೋರಾಟ ಪ್ರಾರಂಭವಾಯಿತು. ಕರ್ನಾಟಕ ಏಕೀಕರಣ ಹೋರಾಟ ಸುಲಭವಾಗಿರಲಿಲ್ಲ. ಈ ಹೋರಾಟದ ಮುಂದಾಳು ಆಲೂರು ವೆಂಕಟರಾಯರು. ನಂತರ, ಕನ್ನಡ ಕುಲಪುರೋಹಿತ ಎಂದು ಹೆಸರಾದರು. ಕನ್ನಡ ನುಡಿಯ ಉಳಿವಿಗಾಗಿ ಧಾರವಾಡದಲ್ಲಿ ರಾ. ಹ. ದೇಶಪಾಂಡೆ ಹುಟ್ಟು ಹಾಕಿದ ಕರ್ನಾಟಕ ವಿದ್ಯಾವರ್ಧಕ ಸಂಘ ಹೋರಾಟಕ್ಕೆ ಮುಂದಾಯಿತು. ಇದರಿಂದ ಸ್ಫೂರ್ತಿಗೊಂಡು ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗೆಯ ಕನ್ನಡ ಸಂಘ, ಮತ್ತಿತರ ಸಂಸ್ಥೆಗಳು ಹುಟ್ಟಿಕೊಂಡವು. ಬಾಸೆಲ್ ಮಿಷನ್ನಿನ ರೆವ್. ಝೀಗ್ಲರ್, ರೆವ್. ಕಿಟೆಲ್ ಅಂಥವರು ಈ ಹೋರಾಟದಲ್ಲಿ ಭಾಗವಹಿಸಿದರು. ಕನ್ನಡಿಗರ ಕೊರಳಾಗಿ ಹುಯಿಲಗೋಳ ನಾರಾಯಣರಾವ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂದು ದನಿಗೊಟ್ಟರು. ಕಾಳಿಂಗರಾಯರು ಅದನ್ನು ತಮ್ಮ ಕಂಚಿನ ಕಂಠದಲ್ಲಿ ಹಾಡಿದರು. ೧೯೫೬ ನವಂಬರ ೧ ರಂದು, ಕನ್ನಡಿಗರ ಆಸೆಯ ಕೂಸಾಗಿ, ಅಖಂಡ ನಾಡಾಗಿ ಕರ್ನಾಟಕ ರಾಜ್ಯ ಹುಟ್ಟಿತು.

ನಾಡು ಒಂದು : ನಿಲುವು ಹಲವು
ಕರ್ನಾಟಕ ಭೌಗೋಳಿಕವಾಗಿ ಒಂದಾದರೂ ಕನ್ನಡಿಗರನ್ನು ಒಂದಾಗಿಸುವುದು ಇನ್ನೂ ಕಠಿಣವಾಗಿತ್ತು. ಅದಕ್ಕೆ ಏನು ಮಾಡಬೇಕು ಎನ್ನುವ ಚಿಂತೆ ಈ ಧುರೀಣರನ್ನು ಮೊದಲಿನಿಂದಲೂ ಕಾಡತೊಡಗಿತ್ತು ಮುಂಬೈ ಪ್ರಾಂತದಲ್ಲಿ ಜನರನ್ನು ಒಗ್ಗೂಡಿಸಲು ಗಣೇಶೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲು ಪ್ರಾರಂಭಿಸಿದರು. ಹೀಗೆ ಕನ್ನಡಿಗರು ಏನನ್ನು ಆಚರಿಸಬಹುದು?

ನಾಡಹಬ್ಬ
ನವರಾತ್ರಿ ವಿಜಯದಶಮಿ ದಸರೆಗಳಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡಿಗರ ಬಲಿಷ್ಠ ಸಾಮ್ರಾಜ್ಯ ವಿಜಯನಗರದಲ್ಲಿ ಇದನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಮಹಾನವಮಿ ಅಥವಾ ಬನ್ನಿ ಹಬ್ಬ ಎಂದು ಕರೆಯುತ್ತಿದ್ದರು. ವಿಜಯನಗರದ ಅರಸು ಜನತೆ ಸಾಮಂತ ರಾಜರು ಒಂದೆಡೆ ಸೇರುತ್ತಿದ್ದರು. ಆ ಜಾಗ ಬನ್ನಿ ದಿಬ್ಬ ಅಥವಾ ಮಾನೌಮಿ ದಿಬ್ಬ ಎಂದು ಹಂಪಿಯಲ್ಲಿ ಇನ್ನೂ ಇದೆ. ಒಬ್ಬರಿಗೊಬ್ಬರು ಬನ್ನಿ ಕೊಡುತ್ತ "ಬನ್ನಿ ತಗೊಂಡು ಚೆನ್ನಾಗಿರಿ" ಎಂದು ಒಗ್ಗಟ್ಟು ಪ್ರದರ್ಶಿಸುವ ಆಚರಣೆ ರಾಜ್ಯದ ತುಂಬಾ ನಡೆಯುತ್ತ ಇತ್ತು. ಇದೇ ಮಾದರಿಯಲ್ಲಿ ಮೈಸೂರು ದಸರೆ ಮತ್ತು ಮೆರವಣಿಗೆ ಪ್ರಾರಂಭವಾಗಿತ್ತು. ಕರ್ನಾಟಕ ಹುಟ್ಟುವ ಮುಂಚೆಯೇ ಧಾರವಾಡದಲ್ಲಿ ಬೇಂದ್ರೆ ಸ್ಥಾಪಿಸಿದ 'ಗೆಳೆಯರ ಗುಂಪು' ಎಂದು ಒಂದು ಸಾಹಿತಿಗಳ ಬಳಗ ಇತ್ತು. ಅದರಲ್ಲಿ ಜಿ ಬಿ ಜೋಶಿ ಬೆಟಗೇರಿ ಕೃಷ್ಣಶರ್ಮ ಮುಂತಾದ ಸಾಹಿತಿಗಳು ಸೇರಿದ್ದರು. 'ನಾಡಹಬ್ಬ' ಎನ್ನುವ ಪದ ಹುಟ್ಟಿದ್ದು ಈ ಗೆಳೆಯರ ಗುಂಪಿನಲ್ಲಿ!

ಧಾರವಾಡದ ವಿದ್ಯಾವರಣ
ವೈಯಕ್ತಿಕವಾಗಿ ಹೇಳುವುದಾದರೆ ನಾನು ಬೆಳೆದದ್ದು ಧಾರವಾಡದಲ್ಲಿ. ಓದಿದ್ದು ಬಾಸೆಲ್ ಮಿಷನ್ ಹೈಸ್ಕೂಲ್ ಮತ್ತು ಕಿಟಲ್ ಕಾಲೇಜುಗಳಲ್ಲಿ. ನಮ್ಮ ಮನೆ ಹಿಂದೆ ಬೆಟಗೇರಿ ಕೃಷ್ಣಶರ್ಮರ ಮನೆ. ಸಾಯಂಕಾಲ ನಡೆದುಕೊಂಡು ಹೋಗುತ್ತಿದ್ದದ್ದು ಸಾಧನಕೇರಿಗೆ. ಅಲ್ಲಿ ಬೇಂದ್ರೆ ಮನೆ.

“ಮರಿದುಂಬಿಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್” ಎಂದು ಆದಿಕವಿ ಪಂಪ ಹೇಳಿದ್ದಾನೆ ಇಂತಹ ಕನ್ನಡನಾಡಿನಲ್ಲಿ ಹುಟ್ಟಿ ಧಾರವಾಡದ ವಿದ್ಯಾವರಣದಲ್ಲಿ ಬೆಳೆದದ್ದು ನನ್ನ ಭಾಗ್ಯ.

ಇಂಥದ್ದೆನ್ನೆಲ್ಲ ನೆನಪಿಸಿಕೊಂಡರೆ, ಯಾರಿಗೇ ಆಗಲಿ, ಕನ್ನಡ ಪ್ರೀತಿ ಒಮ್ಮೆಲೇ ಉಕ್ಕಿ ಬರುತ್ತದೆ.

ಬನ್ನಿ ಬನ್ನಿ
ಒಳಿತನ್ನೆಲ್ಲ ತಮ್ಮದಾಗಿಸಿಕೊಳ್ಳುವುದು ಕನ್ನಡಿಗರ ಜಾಯಮಾನ. ಇಂದು, ಕರ್ನಾಟಕ ಅಭಿವೃದ್ಧಿಗೊಂಡಿರುವ ರಾಜ್ಯ. ಬೇರೆ ಕಡೆಯಿಂದ ಜನರು ಹೆಚ್ಚು ಹೆಚ್ಚಾಗಿ ವಲಸೆ ಬರುತ್ತಿದ್ದಾರೆ. ಅವರೆಲ್ಲ ಕನ್ನಡಿಗರು ಆಗಲಿ ಎಂದು ಆಶಿಸೋಣ. ನೋಡಿ, ನಾವು ಆಚರಿಸುವುದು ನಾಡ ಹಬ್ಬ. ಅದೆ 'ಬನ್ನಿ' ಹಬ್ಬ. ಆದ್ದರಿಂದ ನಾವು ಎಲ್ಲರಿಗೂ ಹೇಳುವುದು 'ಬನ್ನಿ ಬನ್ನಿ' ಎಂದೆ. ಕನ್ನಡ ನಾಡಿನಲ್ಲಿ ಬೆಳೆಯುವುದು ಬನ್ನಿ ಮರ ಮಾತ್ರ, 'ಹೋಗಿ' ಮರ ಕನ್ನಡಿಗರ ಕನಸಿನಲ್ಲೂ ಬೆಳೆಯದು.

ದಕ್ಷಿಣ ಕ್ಯಾಲಿಫೋರ್ನಿಯದ ಕರ್ನಾಟಕ ಸಾಂಸ್ಕೃತಿಕ ಸಂಘ, ಅಮೆರಿಕದ ಇತರ ಕನ್ನಡ ಕೂಟಗಳ ಸಹಯೋಗದಲ್ಲಿ, ಎಲ್ಲ ಕನ್ನಡಿಗರನ್ನು ಒಂದು ಗೂಡಿಸುತ್ತ, ಇಂದು, ದಸರಾ ದೀಪಾವಳಿ ರಾಜ್ಯೋತ್ಸವ ಮಕ್ಕಳ ದಿನ ಬೊಂಬೆ ಹಬ್ಬ ಎಲ್ಲವನ್ನೂ ಸೇರಿಸಿ ನಾಡಹಬ್ಬ ಎಂದು ಪುನರ್ ವ್ಯಾಖ್ಯಾನಿಸಿ, ಕೋವಿಡ್ ನ ಸಂಕಟ ಪರಿಸ್ಥಿತಿಯಲ್ಲೂ, ವ್ಹರ್ಚುವಲ್ ಆಗಿ ಆಚರಿಸುತ್ತಿದೆ. ಅಭಿನಂದನೆಗಳು. ಮತ್ತೊಮ್ಮೆ ಎಲ್ಲ ಕನ್ನಡಿಗರಿಗೂ ನಾಡ ಹಬ್ಬದ ಶುಭಾಶಯಗಳು!

---------
naadahabba

kannada kali, kannadada guttu, bittarike 4, 2020-3, navambar 2020


ತಾಗುಲಿ : secret of kannada, nada habba, rajyotsava, karnataka unification, vishweshwar dixit