ನಮ್ಮ ನಡುವಿದ್ದ ನಾಡೋಜ

ನಮ್ಮ ನಡುವಿದ್ದ ನಾಡೋಜ

[ ಇಂದು, ಡಿಸೆಂಬರ ೨೮, ಕನ್ನಡದ ಹೊಸ ಬೆಳಕು ಮೂಡಿದ ದಿನ. ಶ್ರೀನಿವಾಸ ಎಂಬ ಒಬ್ಬ ಹಳ್ಳಿಯ ಬಡ ಹುಡುಗ, ಹುಟ್ಟಿದ ದಿನ. ಎಲ್ಲ ಕಷ್ಟಗಳನ್ನೂ ಮೀರಿ, ತನ್ನ ಕಲಿಯುವ ಉತ್ಕಟತೆ, ಪುಸ್ತಕ ಪ್ರೇಮ, ಮತ್ತು ಹೊಸತನದ ಹಂಬಲಗಳಿಂದ ಒಬ್ಬ ಉತ್ಕೃಷ್ಟ ಸಂಶೋಧಕನಾಗಿ, ಸಂಶೋಧನೆಗೇ ಒಂದು ಹೊಸ ಆಯಾಮವನ್ನು ಜೋಡಿಸಿ, ನಾಡೋಜನಾಗಿ ಬೆಳೆದು ನಿಂತ ಕತೆ ಇದು. ಕನ್ನಡ ಕಲಿಗಳಿಗಷ್ಟೆ ಅಲ್ಲ,ಎಲ್ಲರಿಗೂ ಸ್ಫೂರ್ತಿ ನೀಡುವ,ಡಾ. ಶ್ರೀನಿವಾಸ ಹಾವನೂರರನ್ನು ಇದಕ್ಕಿಂತ ಹತ್ತಿರವಾಗಿ ಕಂಡು ಹೇಳಿದ ಕತೆ ನಿಮಗೆ ಬೇರೆ ಎಲ್ಲಿಯೂ ಸಿಗದು. – ಸಂ.]

Shrinivas Havanur

*** ಸಂಜಯ ಹಾವನೂರ

ಬಾಲ್ಯ ಮತ್ತು ವಿದ್ಯಾರ್ಥಿ ಜೀವನ
ನಾಡೋಜ ಡಾ ಶ್ರೀನಿವಾಸ ಹಾವನೂರರ ಜನ್ಮ 1927 ಡಿಸೆಂಬರ 28ರಂದು ಹಾವನೂರ ಹಳ್ಳಿಯಲ್ಲಿ ಆಯಿತು. ಬಾಲ್ಯವೆಲ್ಲ ಬಡತನದ ಕಷ್ಟದಲ್ಲಿ ಕಳೆದು ಹೋಯಿತು. ಹಾವನೂರಿನ ಗಾವಂಠಿ ಶಾಲೆಯಲ್ಲಿ ಪ್ರಾಥಮಿಕ ಮುಗಿಸಿ ಮುಂದೆ ಹಾವೇರಿ ಧಾರವಾಡಗಳಲ್ಲಿ ಓದು ಮುಂದುವರೆಸಿದರು. ಫೀಸು ಪುಸ್ತಕಗಳಿರಲಿ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ. ಅಪರಿಚಿತರ ಮನೆಗಳಲ್ಲಿ ವಾರಾನ್ನ, ಒಪ್ಪತ್ತಿನ ತಂಗಳೂಟ, ಅದರ ಉಪಕಾರವೆಂದು ಊಟ ಹಾಕಿದವರ ಮನೆಗೆಲಸ. ಇಂಥ ನಿಕೃಷ್ಟ ಬದುಕಿನ ದಿನಚರಿಯಲ್ಲೂ ವಿದ್ಯಾರ್ಜನೆಯ ಛಲ ಬಿಡಲಿಲ್ಲ. ಹಾವೇರಿಯಲ್ಲಿ ಫೀಸು ಕಟ್ಟಲಿಲ್ಲವೆಂದು ಶಾಲೆಯಿಂದ ಹೊರಗೆ ಹಾಕಿದಾಗ ಹೆಡ್ಮಾಸ್ತರರ ಕಣ್ಣು ತಪ್ಪಿಸಿ ಕ್ಲಾಸರೂಮಿನ ಹೊರಗೆ ಕಿಟಕಿಯ ಕೆಳಗೆ ಕೂತು ಮೂರು ತಿಂಗಳು ಪಾಠ ಕಲಿತರು. ಕಾಲೇಜಿನ ಹಂತದಲ್ಲಿ ಪರಿಸ್ಥಿತಿ ತುಸು ಸುಧಾರಿಸಿತು. ಅಲ್ಲಿಯ ಕರ್ನಾಟಕ ಸಂಘದ ಗ್ರಂಥಾಲಯದ ಉಸ್ತುವಾರಿಯೊಡನೆ ಮೊದಲ ನೌಕರಿಯನ್ನು ಆರಂಭಿಸಿದರು. ಅವರ ಮುಖ್ಯ ಕೆಲಸ ದಿನವೂ ಪುಸ್ತಕಗಳ ಧೂಳು ಹೊಡೆದು ಜೋಡಿಸಿ ಇಡುವುದು. ಪಗಾರ ಕನಿಷ್ಠ, ಆದರೆ ಅದಕ್ಕಿಂತ ಮುಖ್ಯವಾಗಿ ಉಚಿತ ಪುಸ್ತಕ ಭಂಡಾರ ಅವರಿಗೆ ದೊರಕಿದ ಹೆಚ್ಚಿನ ಸೌಲಭ್ಯವಾಗಿತ್ತು. ಬಾಲ್ಯದಲ್ಲಿ ಅಂಟಿದ ಓದಿನ ಗೀಳು ಕೊನೆಯ ವರೆಗೂ ಅವರನ್ನು ಬಿಡಲಿಲ್ಲ.

ದಿಗ್ಗಜರ ಸಂಗಡ
ಧಾರವಾಡದಲ್ಲಿ ಸಹಜವಾಗಿಯೇ ಬೇಂದ್ರೆ, ಶ್ರೀರಂಗ, ಶಂಬಾ ಜೋಶಿಯಂಥ ದಿಗ್ಗಜರನ್ನು ಹತ್ತಿರದಿಂದ ಕಾಣುವ ಅವಕಾಶ ದೊರೆಯಿತು. ಆದರೆ ಅವರ ಮೇಲೆ ವಿಶೇಷ ಪ್ರಭಾವ ಬೀರಿದವರು ಡಾ. ರಂ ಶ್ರೀ ಮುಗಳಿಯವರು. ಆಗ ಅವರು ಸಾಂಗಲಿಯ ವಿಲಿಂಗಡನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಒಮ್ಮೆ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಂಶೋಧನೆಗಳ ಮೇಲೆ ಅವರು ನೀಡಿದ ಉಪನ್ಯಾಸ ಶ್ರೀಹಾ ಅವರ ಮೇಲೆ ಅಚ್ಚಳಿಯದ ಪರಿಣಾಮ ಬೀರಿತು. ಕನ್ನಡ ಕಲಿತರೆ ಅವರಲ್ಲಿಯೇ ಕಲಿಯಬೇಕು ಎಂದು ದೃಢ ನಿಶ್ಚಯ ಮಾಡಿಕೊಂಡರು. ಅವರಿವರನ್ನು ಬೇಡಿ ಒಂದಿಷ್ಟು ರೂಪಾಯಿಗಳನ್ನು ಒಟ್ಟು ಮಾಡಿಕೊಂಡು ನೆಟ್ಟಗೆ ಸಾಂಗಲಿಗೆ ಹೋದರು. ಜೇಬಿನಲ್ಲಿದ್ದ 196 ರೂಪಾಯಿಗಳನ್ನು ಮುಗಳಿಯವರಿಗೆ ಒಪ್ಪಿಸಿ “ಇದು ಬಿಟ್ಟರೆ ನನ್ನಲ್ಲಿ ಇನ್ನೇನೂ ಇಲ್ಲ. ನಿಮ್ಮನ್ನು ನಂಬಿಕೊಂಡು ಬಂದಿದ್ದೇನೆ. ನನ್ನನ್ನು ವಿದ್ಯಾವಂತನನ್ನಾಗಿ ಮಾಡುವ ಭಾರ ನಿಮ್ಮದೇ” ಎಂದು ಬೇಡಿಕೊಂಡರು ಯುವಕನ ಶ್ರದ್ಧೆಯನ್ನು ನೋಡಿ ಮುಗಳಿಯವರಿಗೂ ಹೃದಯ ತುಂಬಿ ಬಂತು. ತಮ್ಮಿಂದ ಆಗುವ ಎಲ್ಲ ಸಹಾಯವನ್ನೂ ನೀಡಿ ಅವರನ್ನು ಓದಿಸಿದರು.

ಸೃಜನಶೀಲ ಲೇಖಕನಾಗಿ
ಪದವಿಯ ನಂತರ ಶ್ರೀಹಾ 50ರ ದಶಕದಲ್ಲಿ ಧಾರವಾಡಕ್ಕೆ ಬಂದು ನೆಲೆಸಿದರು. ಬರವಣಿಗೆಯ ಹವ್ಯಾಸ ಹೈಸ್ಕೂಲಿನಲ್ಲಿಯೇ ಆರಂಭವಾಗಿತ್ತು. ಮುಂಬಯಿಯಲ್ಲಿ ಕೆಲವು ಕಾಲ “ನುಡಿ” ಎಂಬ ಪತ್ರಿಕೆಯನ್ನು ನಡೆಸಿದ್ದರು. ಆರಂಭದಲ್ಲಿ ಅವರು ಹೆಸರು ಮಾಡಿದ್ದು ಸೃಜನಶೀಲ ಲೇಖಕನೆಂದು. ಅವರ “ಕಾಗೆಗೆ ಹೇಳಿದ ಕಥೆ” ಎಂಬ ಕಥಾಸಂಕಲನಕ್ಕೆ ರಾಜ್ಯ ಪ್ರಶಸ್ತಿಯೂ ದೊರೆತಿತ್ತು. ರೀಡರ್ಸ್‌ ಡೈಜೆಸ್ಟ್‌ ಪತ್ರಿಕೆಯಲ್ಲಿ ಜನಪ್ರಿಯವಾಗಿದ್ದ ಪುಸ್ತಕ ಸಂಗ್ರಹ ಎಂಬ ಸಾಹಿತ್ಯ ಪ್ರಕಾರವನ್ನು ಕಸ್ತೂರಿಯ ಮೂಲಕ ಪರಿಚಯಿಸಿದರು. 1956ರಲ್ಲಿ ಕಸ್ತೂರಿ ಮಾಸ ಪತ್ರಿಕೆ ಆರಂಭವಾದಾಗಿನಿಂದ ಪ್ರತಿ ಸಂಚಿಕೆಯಲ್ಲಿ ಲೇಖನ ಅಥವಾ ಪುಸ್ತಕ ಸಂಗ್ರಹ ಇದ್ದೇ ಇರುತ್ತಿತ್ತು. ಅವರ ಪತ್ನಿ ಭಾರತಿ ಹಾವನೂರರಿಗೆ ನಾಟಕದಲ್ಲಿ ವಿಶೇಷ ಆಸಕ್ತಿ. ಪತಿ ಪತ್ನಿಯರು ಧಾರವಾಡದಲ್ಲಿ ಕರ್ನಾಟಕ ಕಲೋದ್ಧಾರಕ ಸಂಘವೆಂಬ ಹವ್ಯಾಸಿ ನಾಟಕ ತಂಡವನ್ನು ಕಟ್ಟಿ ಎಷ್ಟೋ ಯುವ ಕಲಾಕಾರರನ್ನು ತಯಾರು ಮಾಡಿದರು. ನಾಟಕಗಳ ರೂಪಾಂತರ, ನಿರ್ದೇಶನ, ಅಭಿನಯ ಎಲ್ಲದರಲ್ಲೂ ಶ್ರೀಹಾ ಸೈ ಎನಿಸಿಕೊಂಡರು.

ಜನ್ಮಜಾತ ಸಂಶೋಧಕ
ಆದರೆ ಕಥೆಗಾರ, ಲೇಖಕ, ನಾಟಕಕಾರ ಇದಾವುದೂ ನಿಜವಾದ ಶ್ರೀನಿವಾಸ ಹಾವನೂರ ಆಗಿರಲಿಲ್ಲ. ಅವರೊಬ್ಬ ಜನ್ಮಜಾತ ಸಂಶೋಧಕ, ಆಜನ್ಮ ವಿದ್ಯಾರ್ಥಿ. ಸರಕಾರಿ ನೌಕರಿ ಮತ್ತು ಇತರ ಚಟುವಟುಕೆಗಳ ನಡುವೆಯೂ ಓದು ಮುಂದುವರೆಸಿ ಗ್ರಂಥಾಲಯ ವಿಜ್ಞಾನ ಮತ್ತು ಎಂ.ಎ. ಪದವಿಗಳನ್ನು ಗಳಿಸಿದರು. ಕೊನೆಗೊಂದು ದಿನ ತಾವು ಕೆಲಸ ಮಾಡುತ್ತಿದ್ದ ಸೇಲ್ಸ ಟ್ಯಾಕ್ಸ ಖಾತೆಗೂ ಶರಣು ಹೊಡೆದು ಮುಂಬಯಿಯ ಟಾಟಾ ವಿಜ್ಞಾನ ಸಂಸ್ಥೆಯ ಗ್ರಂಥಾಲಯದಲ್ಲಿ ಹೊಸ ವೃತ್ತಿಯನ್ನು ಆರಂಭಿಸಿದರು. ರಂ ಶ್ರೀ ಮುಗಳಿಯವರಲ್ಲಿ ಮತ್ತೆ ವ್ಯಾಸಂಗ ಮುಂದುವರೆಸಿ ಡಾಕ್ಟರೇಟ್‌ ಅನ್ವೇಷಣೆಯಲ್ಲಿ ತೊಡಗಿದರು.

1974ರಲ್ಲಿ ಪ್ರಕಟವಾದ ಅವರ ʼಹೊಸಗನ್ನಡದ ಅರುಣೋದಯʼ ಕನ್ನಡದ ಸಂಶೋಧನಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಎಂದು ವಿಮರ್ಶಕರು ಹೊಗಳಿದ್ದಾರೆ. ಕನ್ನಡದಲ್ಲಿ ಪಿಎಚ್‌ಡಿ ಪ್ರಬಂಧಗಳು ಪ್ರಕಟವಾಗುವುದು ವಿರಳ, ಎರಡನೇ ಮುದ್ರಣ ಕಾಣುವುದು ಇನ್ನೂ ಅಪರೂಪ. ಶ್ರೀಹಾ ಅವರ ಅರುಣೋದಯ ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿದೆ. ಈ ಮನ್ನಣೆಗೆ ಮೊದಲ ಕಾರಣ ಅದರ ವಿಷಯವ್ಯಾಪ್ತಿ. ಒಂದು ಶತಮಾನದುದ್ದಕ್ಕೂ ಕನ್ನಡ ಭಾಷೆ ಬೆಳೆದು ಬಂದ ಬಗೆಯನ್ನು ಅದು ದಾಖಲಿಸುತ್ತದೆ. ಯಾವುದೊಂದು ಸಾಹಿತ್ಯ ಪ್ರಕಾರ, ಪರಂಪರೆ ಅಥವಾ ಅರಸುತನಕ್ಕೆ ಸೀಮಿತವಾಗದೇ ಕಾವೇರಿಯಿಂದಮಾ ಗೋದಾವರಿಯ ವರೆಗೆ ನಾಡಿನಲ್ಲಿ ನಡೆದದ್ದೆಲ್ಲದರ ಚಿತ್ರಣ ಅದರಲ್ಲಿದೆ. ಅಪಾರ ಮಾಹಿತಿಯನ್ನು ಸಂಗ್ರಹಿಸಿದ್ದು ಮಾತ್ರವಲ್ಲ ಅದನ್ನು ಕ್ರೋಢೀಕರಿಸಿ ವ್ಯವಸ್ಥಿತವಾಗಿ ನಿರೂಪಿಸಿದ ರೀತಿ ಸಂಶೋಧಕರೆನ್ನಿಸಿಕೊಳ್ಳುವವರಿಗೆಲ್ಲ ಮಾರ್ಗದರ್ಶಿಯಾಗಿದೆ.

ಸಂಶೋಧನೆಗೆ ಮೂರನೆಯ ಆಯಾಮ
ಇತಿಹಾಸ ಸಂಶೋಧಕರು ಇಂದು ಮೂರು ಆಕರಗಳನ್ನು ಅನುಸರಿಸುತ್ತಾರೆ. ಮೊದಲ ಎರಡು, ಸಾಂಪ್ರದಾಯಿಕ ಸಂಶೋಧನಾ ಮಾಧ್ಯಮಗಳು, ಅಂದರೆ ಶಿಲಾಶಾಸನಗಳು ಮತ್ತು ಪ್ರಾಚೀನ ಹಸ್ತಪ್ರತಿಗಳು. ಮೂರನೆಯದು ಅಧಿಕೃತ ದಾಖಲೆಗಳು, ಪ್ರಕಟಣೆಗಳನ್ನು ಆಧರಿಸಿದ್ದು. 1970ರ ವರೆಗೆ ಈ ಪುಸ್ತಕಾಧಾರಿತ ಸಂಶೋಧನೆ ಕನ್ನಡದಲ್ಲಿ ವ್ಯಾಪಕವಾಗಿರಲಿಲ್ಲ. ಮುದ್ರಣಯುಗ ಆರಂಭವಾದದ್ದೇ 19ನೆಯ ಶತಮಾನದಲ್ಲಿ. ಅಂದಿನ ಪ್ರಕಟಣೆಗಳನ್ನು ಪ್ರಾಸಂಗಿಕವಾಗಿ ಉಲ್ಲೇಖಿಸುತ್ತಿದ್ದರೇ ಹೊರತು ಅವುಗಳನ್ನು ಆಧಾರವಾಗಿಟ್ಟುಕೊಂಡು ಚರಿತ್ರೆಯನ್ನು ಚಿತ್ರಿಸುವ ವ್ಯವಸ್ಥಿತ ಯತ್ನಗಳಾಗಿರಲಿಲ್ಲ. ಮುದ್ರಿತ, ಅಧಿಕೃತ ದಾಖಲೆಗಳನ್ನು ಆಧರಿಸಿದ ಇತಿಹಾಸ ಸಂಶೋಧನೆ ಎಂಬ ಮೂರನೆಯ ಆಯಾಮವನ್ನು ಕನ್ನಡಕ್ಕೆ ಜೋಡಿಸಿದ ಶ್ರೇಯಸ್ಸು ಡಾ. ಶ್ರೀನಿವಾಸ ಹಾವನೂರರಿಗೆ ಸಲ್ಲುತ್ತದೆ. 19ನೆಯ ಶತಮಾನ, ಯಾವ ಬೆಳವಣಿಗೆಯೂ ಕನ್ನಡದ ಮಟ್ಟಿಗೆ ಕಾಣದ ಕತ್ತಲೆಯ ಕಾಲ ಎಂಬ ತಪ್ಪು ಕಲ್ಪನೆ ಇತ್ತೀಚಿನ ವರೆಗೂ ವ್ಯಾಪಕವಾಗಿತ್ತು. ವಾಸ್ತವವಾಗಿ ಅದೊಂದು ಸಂಕ್ರಮಣದ ಕಾಲ. ಕನ್ನಡದಲ್ಲಿ ಮುದ್ರಣ ಆರಂಭವಾದ ಯುಗ, ಭಾಷೆಯ ಶಾಸ್ತ್ರೀಯ ಅಧ್ಯಯನಕ್ಕೆ ಮಿಶನರಿಗಳಿಂದ ನಾಂದಿ, ಶಬ್ದಕೋಶದಿಂದ ಹಿಡಿದು ಹಲವಾರು ಶಾಸ್ತ್ರೀಯ ಪ್ರಕಟಣೆಗಳು – ಏನೆಲ್ಲ ಹೊಸ ಬೆಳವಣಿಗೆಗಳಾಗಿದ್ದವು. ಶಿಲಾಶಾಸನ, ತಾಳವಾಲೆಗಳು ಕಂಡಿಲ್ಲವೆಂದು ಇಡೀ ಶತಮಾನವನ್ನು ಕಡೆಗಾಣಿಸುವುದು ಸರಿಯಲ್ಲ. ಅದು ಅಂಧಕಾರದ ಯುಗವಲ್ಲ, ಅರುಣೋದಯದ ಸಂಧಿಕಾಲ ಎಂದು ಸಿದ್ಧ ಮಾಡಿದರು.

ಡಾಕ್ಟರೇಟ್‌ ಸಿಕ್ಕ ಮಾತ್ರಕ್ಕೆ ಅವರ ಸಂಶೋಧನೆಯ ಹುಮ್ಮಸ್ಸು ಕುಗ್ಗಲಿಲ್ಲ. ಬದಲಿಗೆ ಇಮ್ಮಡಿಸಿತು. 19ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಮಿಶನರಿಗಳು ಕನ್ನಡ ಕಲಿತಿದ್ದಲ್ಲದೇ ಇಲ್ಲಿನ ಅಪೂರ್ವವಾದ ದಾಖಲೆ ಕೃತಿಗಳನ್ನು ಸಂಗ್ರಹಿಸಿ ಯುರೋಪಿನ ತಮ್ಮ ಸಂಸ್ಥೆಗಳಿಗೆ ಕಳಿಸಿದ್ದರು ಎಂಬ ವಿಷಯ ಗಮನಕ್ಕೆ ಬಂದಿತ್ತು. ಮೂಲರೂಪದಲ್ಲಿ ಅವುಗಳನ್ನು ಅಭ್ಯಸಿಸುವ ಹಂಬಲದಿಂದ ಸ್ವಂತ ಖರ್ಚಿನಲ್ಲಿ ಆ ದೇಶದ ಗ್ರಂಥಾಲಯಗಳಿಗೆ ಹಲವು ಬಾರಿ ಭೆಟ್ಟಿ ಕೊಟ್ಟರು. ಬರುವಾಗ ಸೂಟಕೇಸುಗಳ ತುಂಬ ಬರೀ ಕಾಗದ ಪತ್ರಗಳು, ದಾಖಲೆಗಳು. ನಾಡಿನ ಬಗ್ಗೆ ಅಲ್ಲಿಯ ವರೆಗೆ ಗೊತ್ತಿಲ್ಲದ ವಿಷಯಗಳನ್ನು ವಿವರಿಸುವ ನೂರಾರು ಲೇಖನಗಳನ್ನು ಬರೆದರು. 81ರ ಇಳಿ ವಯಸ್ಸಿನಲ್ಲಿ, ತೀವ್ರ ಕಾಯಿಲೆಯಿಂದ ಚೇತರಿಸಿಕೊಂಡವರು ಒಬ್ಬರೇ ಇಂಗ್ಲಂಡ್‌ ಮತ್ತು ಯುರೋಪಿನ ಬಾಸೆಲ್‌ ಮಿಶನ್‌ಗಳಿಗೆ ಕೊನೆಯ ಭೆಟ್ಟಿ ಕೊಟ್ಟರು. ದಿನಕ್ಕೆ ಹನ್ನೆರಡು ಗಂಟೆ ಸತತ ತಮ್ಮ ಮಿಶನರಿಗಳ ಅಧ್ಯಯನದಲ್ಲಿ ತೊಡಗಿರುತ್ತಿದ್ದ ಈ ಭಾರತೀಯನ ಬಗ್ಗೆ ಅಲ್ಲಿನ ವಿದ್ವಾಂಸರಿಗೂ ಆಶ್ಚರ್ಯ, ಆದರ.

ಕನ್ನಡಕ್ಕೆ ಹೊಸತನ ತಂದರು
ಏನಾದರೂ ಹೊಸತನ್ನು ಹುಡುಕುವುದು, ಕನ್ನಡಕ್ಕೇ ವಿಶಿಷ್ಟವಾದ ಪ್ರಯೋಗಗಳನ್ನು ಮಾಡುವುದು ಶ್ರೀಹಾ ಅವರ ಸಂಶೋಧನೆಗಳ ವೈಖರಿಯಾಗಿತ್ತು. ಕಾದಂ-ಕಥನವೆಂಬ ಹೊಸ ತಂತ್ರವನ್ನು ಕನ್ನಡಕ್ಕೆ ತಂದವರು. ಸಂಶೋಧನೆ ಅಂದರೆ ಹೊಸತಿನ ವ್ಯವಸ್ಥಿತ ಅನ್ವೇಷಣೆ, ಈಗಾಗಲೇ ಗೊತ್ತಿದ್ದುದರ ಸಮೀಕ್ಷೆ ಅಥವಾ ವಿಮರ್ಶೆಗಳ ಚರ್ವಿತ ಚರ್ವಣವಲ್ಲ ಎಂದು ನಿಷ್ಠುರವಾಗಿ ವ್ಯಾಖ್ಯಾನಿಸುತ್ತಿದ್ದರು. 1843ರಲ್ಲಿ ಆರಂಭವಾದ ಮಂಗಳೂರು ಸಮಾಚಾರ ಕನ್ನಡದ ಪ್ರಥಮ ಪತ್ರಿಕೆ ಎಂದು ಆಧಾರಪೂರ್ವಕ ಸಿದ್ಧ ಮಾಡಿದರು. 1970ರ ದಶಕದಲ್ಲಿ ಭಾರತದಲ್ಲಿ ಗಣಕಗಳ ಬಳಕೆ ಆರಂಭವಾಯಿತು. ಟಾಟಾ ಸಂಶೋಧನಾ ಕೇಂದ್ರದಲ್ಲಿದ್ದ ಶ್ರೀಹಾ ಅವರಿಗೆ ವಿದೇಶಗಳಲ್ಲಿ ಭಾಷಾ ಶಾಸ್ತ್ರದ ಅಧ್ಯಯನಕ್ಕೆ ಕಂಪ್ಯೂಟರುಗಳನ್ನು ಹೇಗೆ ಬಳಸುತ್ತಾರೆ ಎಂದು ತಿಳಿದಿತ್ತು. ಕನ್ನಡದಲ್ಲಿ ಅದು ಸಾಧ್ಯವಿಲ್ಲವೇ ಎಂದು ಚಿಂತಿಸಿದರು. ಆಗ ಇದ್ದದ್ದು ಮೇನ್‌ ಫ್ರೇಮ್‌ ಮಾದರಿಯ ಬೃಹತ್‌ ಯಂತ್ರಗಳು ಮಾತ್ರ, ಕನ್ನಡವಿರಲಿ ಇಂಗ್ಲೀಷನ್ನು ಬರೆಯುವ ತಂತ್ರಾಂಶವೂ ಆಗ ಇರಲಿಲ್ಲ. ಟಾಟಾ ಸಂಸ್ಥೆಯ ಕನ್ನಡಿಗರ ಸಹಾಯದಿಂದ ಕನ್ನಡ ಶಬ್ದಗಳನ್ನು ನೇರವಾಗಿ ಕಂಪ್ಯೂಟರಿಗೆ ಉಣಬಡಿಸಿದರು. ದೇವರ ದಾಸೀಮಯ್ಯ, ಹರಿದಾಸರ ಉಗಾಭೋಗಗಳು, ಮುದ್ದಣ, ಬೇಂದ್ರೆ ಮುಂತಾದವರ ಕೃತಿಗಳ ಶಬ್ದಸೂಚಿಗಳನ್ನು ಸಂಪಾದಿಸಿ ಗಣಕಗಳ ಸಹಾಯದಿಂದ ವಿಶ್ಲೇಷಣೆ ಮಾಡಿದರು.

ಕನ್ನಡವೆ ಜೀವನ
1980ರ ಆದಿಯಲ್ಲಿ ಟಾಟಾ ಸಂಸ್ಥೆಗೂ ರಾಜೀನಾಮೆ ನೀಡಿ ಪೂರ್ತಿ ಕನ್ನಡದ ಕಾಯಕದಲ್ಲಿ ತೊಡಗಿದರು. ಮಂಗಳೂರು ಮುಂಬಯಿ ವಿಶ್ವವಿದ್ಯಾಲಯಗಳಲ್ಲಿ ಅದೇ ಆರಂಭವಾಗಿದ್ದ ಕನ್ನಡ ವಿಭಾಗಗಳ ಮುಖ್ಯಸ್ಥರಾಗಿ, ಶಿಷ್ಯರನ್ನು ತಯಾರು ಮಾಡಿದ್ದಲ್ಲದೇ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಸಂಶೋಧನಾ ವಿಧಾನಗಳ ಕುರಿತು ಅವರು ಆಯೋಜಿಸುತ್ತಿದ್ದ ಕಮ್ಮಟಗಳನ್ನು ಶಿಷ್ಯಂದಿರು ಈಗಲೂ ಸ್ಮರಿಸುತ್ತಾರೆ. 70ರ ಇಳಿ ವಯಸ್ಸಿನಲ್ಲಿ ಸಮಗ್ರ ದಾಸ ಸಾಹಿತ್ಯವೆಂಬ ಬೃಹತ್‌ ಯೋಜನೆಯನ್ನು ಕೈಗೆತ್ತಿಕೊಂಡರು. ಸುಮಾರು 150 ದಾಸರ 16000 ಹಾಡುಗಳನ್ನು ಸಂಗ್ರಹಿಸಿ ಪರಿಷ್ಕರಿಸಿ 55 ಸಂಪುಟಗಳಲ್ಲಿ ಪ್ರಕಟವಾಗಿವೆ. ಹಾಡುಗಳ ಸಂಗ್ರಹ ಮಾತ್ರವಲ್ಲ, ದಾಸ ಸಾಹಿತ್ಯದ ಸಮಗ್ರ ವಿಷಯ ಸೂಚಿಯೂ ಯೋಜನೆಯ ಭಾಗವಾಗಿದೆ. ಹರಿದಾಸರಿಗೆ ಪ್ರಿಯವಾದ ಸುಮಾರು 80 ವಿಷಯಗಳನ್ನು ಗುರುತಿಸಿ ಪ್ರತಿಯೊಂದು ಪದದಲ್ಲಿಯೂ ಅದಕ್ಕೆ ಅನ್ವಯಿಸುವ ವಿಷಯಗಳ ಟ್ಯಾಗ್‌ ಜೋಡಿಸಲಾಗಿದೆ. ಉದಾಹರಣೆಗೆ ತಿರುಪತಿ ತಿಮ್ಮಪ್ಪ ಅಥವಾ ರಾಘವೇಂದ್ರ ಸಾಮಿಗಳನ್ನು ವರ್ಣಿಸುವ ಹಾಡುಗಳು ನಿಮಗೆ ಬೇಕೆಂದರೆ, ಬೇರೆ ಬೇರೆ ದಾಸರುಗಳಿಂದ ರಚಿತವಾದ ಅಂಥ ಎಲ್ಲ ಹಾಡುಗಳನ್ನು ವಿಷಯಸೂಚಿಯಿಂದ ತಕ್ಷಣ ಪಡೆದುಕೊಳ್ಳಬಹುದು.

ನಮ್ಮನ್ನು ಅಗಲಿಸಿ ಅಗಲಿದ ನಾಡೋಜ
ಒಬ್ಬ ಲೇಖಕನಾಗಿ ಶ್ರೀಹಾ ಅಪಾರವಾದ ವಿಷಯ ವೈವಿಧ್ಯವನ್ನು ಸಾಧಿಸಿದ್ದರು. ವಿವಿಧ ಕಾವ್ಯನಾಮಗಳಲ್ಲಿ ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ಹಿರಿಯ ಸಾಹಿತ್ಯಿಕರ ಜೀವನ, ಸಾಧನೆಗಳು, ಇತಿಹಾಸ, ಸಾಹಿತ್ಯ, ಪತ್ರಿಕೋದ್ಯಮ, ಸಂಶೋಧನೆ, ಲಲಿತ ಪ್ರಬಂಧಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಸಂಕಲನಗಳು ಪ್ರಕಟವಾಗಿವೆ. ಇಂಥ ಅಪರೂಪದ ವಿದ್ವಾಂಸರಿಗೆ ನಾಡೋಜ ಪ್ರಶಸ್ತಿ ದೊರೆತದ್ದು ಅತ್ಯಂತ ಯಥಾರ್ಥವಾದ ಗೌರವ. ತಮ್ಮ ಜೀವಿತದ ಕೊನೆಯ ದಿನದ ವರೆಗೂ ಒಂದಲ್ಲ ಒಂದು ವಿಷಯದ ಅಧ್ಯಯನದಲ್ಲಿ ತೊಡಗಿದ್ದು 2010ರ ಎಪ್ರಿಲ್‌ನಲ್ಲಿ ಹೃದಯಾಘಾತದಿಂದ ನಿಧನರಾದರು.


ತಾಗುಲಿ: ಶ್ರೀನಿವಾಸ ಹಾವನೂರ, Srinivas Havanur, Kannada Researcher

ನಾನು ಅವರ ಕೊನೆಯಹಂತದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅವರ ಸಹೋದ್ಯೋಗಿ ಆಗಿದ್ದೆ. ಅದು ನನಗೆ ಅಮೂಲ್ಯ ನೆನಪುಗಳನ್ನು ನೀಡಿವೆ. ಇಂದು ಅವರ ಹುಟ್ಟಿದ ದಿನ ಎಂಬುದು ಮರೆತುಹೋಗಿತ್ತು. ನೆನಪಿಸಿದ್ದಕ್ಕೆ ಧನ್ಯವಾದಗಳು

ಶ್ರೀಹಾ ಅವರ ಕನ್ನಡ ಪ್ರೇಮ ಮತ್ತು ಸಂಶೋಧನೆಯ ಆಸಕ್ತಿಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. ಓದಿ ಪುಳಕಿತಗೊಂಡೆ!
ಲೇಖಕರಿಗೆ ಮತ್ತು ಪ್ರಕಾಶಕರಿಗೆ ಧನ್ಯವಾದಗಳು.