ಬದುಕು - ಬಾಳು

ಕನ್ನಡದ ಗುಟ್ಟು

ಬದುಕು - ಬಾಳು

— ವಿಶ್ವೇಶ್ವರ ದೀಕ್ಷಿತ

ಅಸ್ತಿತ್ವ ಒಂದಾದರೆ ಇನ್ನೊಂದು ಅನುಭೋಗ. ಸಾಯದೆ ಇರುವುದು ಒಂದಾದರೆ ಪ್ರಪಂಚದಲ್ಲಿ ಸುಖ ದುಃಖಗಳನ್ನು ಉಣ್ಣುತ್ತ ಇರುವುದು ಇನ್ನೊಂದು. ಈ ಪದಗಳನ್ನು ಕೇವಲ ಇರುವುದು ಮತ್ತು ತೊಡಗಿಸಿಕೊಂಡು ಇರುವುದು ಈ ಎರಡೂ ಅರ್ಥಗಳಲ್ಲಿ ಉಪಯೋಗಿಸಬಹುದಾದರೂ ಸೂಕ್ಷ್ಮ ಅರ್ಥ ಒಳದನಿಗಳನ್ನು ಗಮನಿಸಿ ಉಪಯೋಗಿಸಿದರೆ ಭಾಷೆಯ ಬಲ ಹೆಚ್ಚುತ್ತದೆ.

ಬದುಕು ಅನಿವಾರ್ಯ
ಒಂದು ಕಡೆ ಹುಟ್ಟು, ಇನ್ನೊಂದು ಕಡೆ ಸಾವು. ಹುಟ್ಟಿದ ಕ್ಷಣ ಉಸಿರಾಟ ಪ್ರಾರಂಭ. ಉಸಿರಾಡುತ್ತ ಜೀವ ಹಿಡಿದುಕೊಂಡು ಇದ್ದರೆ ಬದುಕಿದ್ದೀರಿ. ಅಂತೆ, ಹುಟ್ಟು ಸಾವುಗಳ ಮಧ್ಯದ ನಿರಂತರ ಕಾಲವೆ ಬದುಕು. ಸಾಯುವ ವರೆಗೂ ಬದುಕು ಅನಿವಾರ್ಯ. ನಿಮ್ಮಿಷ್ಟ ಅಲ್ಲ.

ಬಾಳು
ಪ್ರಪಂಚದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಮಾಡಿದ್ದುಣ್ಣುವ ಮಹರಾಯನಾಗಿ ಇರುವುದು ಬಾಳು. ಗೃಹಸ್ಥ ಜೀವನ ಎನ್ನುವ ಅರ್ಥವೂ ಇದೆ. ಅಂದರೆ, ಸಂಬಂಧಗಳನ್ನು ಬೆಳಸಿ ಸಂಸಾರದಲ್ಲಿ ಸ್ವೇಚ್ಛೆಯಿಂದ ತೊಡಗಿರುವುದು ಬಾಳು. ಇದು ನಿಮ್ಮ ಇಷ್ಟ.

ಬಾಳು ಯಾವಾಗಲೋ ಪ್ರಾರಂಭವಾಗಿ ಯಾವಾಗಲೋ ನಿಲ್ಲಬಹುದು. ಕೆಲ ಕಾಲ ನಿಂತರೂ ಮತ್ತೆ ಪ್ರಾರಂಭಿಸಬಹುದು, ಒಂದು ಕೆಲಸದಿಂದ ನಿವೃತ್ತಿ ಹೊಂದಿ, ಬೇಸತ್ತ ಮೇಲೆ, ಇನ್ನೊಂದನ್ನು ಪ್ರಾರಂಭಿಸಿದ ಹಾಗೆ.

"ಮುದುಕನ ಬಾಳು ತೀರಿದ ಮೇಲೆ ಬದುಕಿದ್ದು ಫಲವೇನು?" ಎನ್ನುವ ಒಂದೇ ವಾಕ್ಯದಲ್ಲಿ ಬದುಕು ಮತ್ತು ಬಾಳು ಎರಡೂ ಪದಗಳನ್ನು ಉಪಯೋಗಿಸಿದ್ದನ್ನು ಗಮನಿಸಿ. ಈ ಪದಗಳನ್ನು ಆಡಲು ಬದಲಾಯಿಸಿ ಹೇಳಲಾಗುವುದಿಲ್ಲ. "ಮುದುಕನ ಬದುಕು ತೀರಿದ ಮೇಲೆ ಬಾಳಿ ಫಲವೇನು?" ಎಂದರೆ ಕಾಲ ನಿಯಮ ಉಲ್ಲಂಘನೆಯಿಂದ ಅಸಂಭದ್ಧ ಎನಿಸುತ್ತದೆ.
ಈ ಮಾತಿನಲ್ಲಿ ಎರಡು ಮುಖ್ಯ ಅಂಶಗಳು ಎದ್ದು ಕಾಣುತ್ತವೆ. ಒಂದು, ಬದುಕು ಮತ್ತು ಬಾಳು ಪದಗಳಿಗೆ ಬೇರೆ ಅರ್ಥಗಳಿವೆ. ಎರಡು, ಬಾಳು ಮುಗಿದರೂ ಸಾಯುವ ವರೆಗೂ ಬದುಕು ಮುಂದುವರೆಯುತ್ತದೆ ಎನ್ನುವ ಪೂರ್ವ ಗ್ರಹಿಕೆ (presumption)ಇದೆ.

ಒಬ್ಬನೆ ಬದುಕಿರಬಹುದು. ಪ್ರಪಂಚಕ್ಕೂ ಬಾಳಿಗೂ ನಿಕಟ ಸಂಬಂಧ ಇರುವಾಗ ಯಾರ, ಯಾವುದರ ಸಂಬಂಧ ಇಲ್ಲದೆ ಪ್ರಪಂಚದಿಂದ ದೂರವಾಗಿ ಬಾಳಬಹುದೆ?

ಬಾಳು != ಬದುಕು
ಈ ವಾಕ್ಯಗಳನ್ನು ನೋಡಿ :
    ಮನವಿಲ್ಲದ ಬಾಳ್ವಿಕೆಗಿಂತ ಸಾವೆ ಲೇಸು.
    ಮದುವೆಯಾಗಿ ಸುಖವಾಗಿ ಬಾಳಿದರು.
    ಹಣ್ಣು ಮುದುಕ ಹಾಸಿಗೆ ಹಿಡಿದುಕೊಂಡೆ ಐದು ವರ್ಷ ಬದುಕಿದ.

ಇವುಗಳಲ್ಲಿ ಬಾಳು-ಬದುಕುಗಳನ್ನು ಬದಲಾಯಿಸಿದರೆ ಅಗುವ ಹಾಸ್ಯ, ಅಪಾರ್ಥ, (ಸೂಕ್ಷ್ಮ) ಅರ್ಥ ಭೇದಗಳನ್ನು ಗಮನಿಸಿ.

ಬದುಕು ಜಟಕಾ ಬಂಡಿ. ಇಲ್ಲಿ ಬಾಳು ಜಟಕಾ ಬಂಡಿ ಎನ್ನಲಾಗುವುದಿಲ್ಲ. ಪ್ರಪಂಚ , ಸಂಸಾರ, ಸಂಬಂಧಗಳಿಗೆ ಅಂಟಿಕೊಂಡ ಬಾಳು ಬರಿ ಮಾಯೆ. ಅದು ಹುಸಿ ಎಂದ ಮೇಲೆ ಅದರ ಪ್ರಸ್ತಾಪವೆ ಸಲ್ಲದು. ಹುಟ್ಟು ಸಾವುಗಳ ಮಧ್ಯ ಏನು ಮಾಡಬಲ್ಲಿ ಎನ್ನುವುದು ಸಂಪೂರ್ಣ ವಿಧಿಯ ಕೈಯಲ್ಲಿದೆ ಎನ್ನುವ ತಾತ್ವಿಕ ನೆಲೆಯಲ್ಲಿ ಇದನ್ನು ಹೇಳಿದ್ದಾರೆ ಮಾನ್ಯ ಡಿ. ವಿ. ಗುಂಡಪ್ಪನವರು.

ಬದು (ಬದುವು), ಬಾಳ್ತೆ, ಬಾಳ್ಕೆ, ಬಾಳ್ವೆ, ಬಾಳುವೆ, ಬಾಳ್ವಿಕೆ, ಬಾಳುವಿಕೆ
ಬದು (ಬದುವು) ಎನ್ನುವ ಪದವನ್ನು ನೋಡಿ. ಹೊಲ ಗದ್ದೆಗಳಲ್ಲಿ ನೀರು ಹಿಡಿಯಲು ಮಣ್ಣು ಎತ್ತರಿಸಿ ಕಟ್ಟಿದ ತಡೆ ಅಥವ ಕಟ್ಟೆ. ಬದುವಿನಲ್ಲಿ ನೀರು ಹಿಡಿದಿಟ್ಟಂತೆ ಮೈಯಲ್ಲಿ ಜೀವ ಹಿಡಿದುಕೊಂಡು ಇರುವುದು ಬದುಕು. ಆ ನೀರು, ಸುಮ್ಮನೆ ಬತ್ತಿ ಹೋಗದೆ, ಬಳಕೆಯಾಗಿ ಬೆಳೆ ಕೊಡುವಂತೆ ಪ್ರಯೋಜನಕಾರಿಯಾದರೆ ಅದು ಬಾಳು. ಬದುವಿಗೂ ಬದುಕಿಗೂ ಪದಹುಟ್ಟ (etymological) ಸಂಬಂಧ ಇಲ್ಲದಿದ್ದರೂ ಇದೊಂದು ಸೂಕ್ತ ಹೋಲಿಕೆ.

ಬಾಳ್ತೆ, ಬಾಳ್ಕೆ, ಬಾಳ್ವೆ, ಬಾಳುವೆ, ಬಾಳ್ವಿಕೆ, ಬಾಳುವಿಕೆ - ಇವು ಜೀವನದ ಶೈಲಿ, ಸ್ಥಿತಿ, ಏಳ್ಗೆ ಗಳನ್ನು ಸೂಚಿಸುತ್ತವೆ. ಲಾಭ, ಪ್ರಯೋಜನ ಎನ್ನುವ ಅರ್ಥಗಳೂ ಇವೆ. ಅಂದರೆ ಬದುಕಿನಿಂದ ಲಾಭ ಅಥವಾ ಪ್ರಯೋಜನ ಆದರೆ ಅದು ಬಾಳ್ತೆ. ಲಾಭ ನಿಮಗಾದರೆ ಒಳ್ಳೆಯದೆ. ಬೇರೆಯವರಿಗೂ ಅದರೆ ಇನ್ನೂ ಚೆನ್ನು.

ದೀರ್ಘ ಆಯುಷ್ಯದ ಗುಟ್ಟು!
ಬಾಳಿಕೆ - ವಸ್ತು ಬಾಳಿಕೆ ಬರುತ್ತದೆ ಅಂದರೆ ಬಹು ಕಾಲ ತಾಳುತ್ತದೆ, ವಸ್ತು ಉಪಯೋಗಕಾರಿ ಆಗಿದೆ ಎಂದು ಅರ್ಥ. ಹಾಗಾದರೆ, ಪ್ರಯೋಜನಕಾರಿಯಾಗಿ ಹೊಂದಿಕೊಂಡು ಬಾಳುವೆ ಮಾಡಿದರೆ ಬಾಳಿಕೆ ಖಚಿತ. “ತಾಳಿದವನು ಬಾಳ್ಯಾನು” ಎನ್ನುವುದು ಗಾದೆ ಮಾತು. ಜೊತೆಗೆ, ಬಾಳಿದವನು ತಾಳ್ಯಾನು ಎಂದೂ ಹೇಳಬಹುದು. ಪ್ರಯೋಜನಕಾರಿ ಬಾಳುವೆ - ಇದೆ ದೀರ್ಘ ಆಯುಷ್ಯದ ಗುಟ್ಟು!

ಬದುಕು ಮುಗಿದರೂ ಬಾಳಬಹುದು
“ಬದುಕಿ ಮುದುಕನಾಗು ಬಾಳಿ ಬಂಗಾರವಾಗು." ಬರಿ ಬದುಕಿದ್ದರೆ ಕಾಲ ಜರೆಯುತ್ತದೆ, ವಯಸ್ಸು ಏರುತ್ತದೆ, ಮುದುಕು ತಾನಾಗಿಯೆ ಸೇರಿಕೊಳ್ಳುತ್ತದೆ. ಪ್ರಪಂಚದಲ್ಲಿ ಮುಳುಗಿ, ಬೇರೆಯವರಿಗ ಬೇಕಾದಾಗ, ಬದುಕು ತಾನೇ ಬಂಗಾರವಾಗುತ್ತದೆ. ಬಾಳಲು ಬದುಕಿರಬೇಕು, ಬರಿ ಬದುಕಿರಲು ಬಾಳಬೇಕಿಲ್ಲ. ಒಂದು ರೀತಿಯಲ್ಲಿ ಬದುಕು ಮುಗಿದರೂ ಬಾಳಿರಬಹುದು. ಇದೆ ಬಾಳಿಕೆ- ಬದುಕಿದ್ದಾಗ ನಡೆಸಿದ ಬಾಳುವೆಯ ಕರ್ಮಗಳ ಅನುಸಾರ ತೀರಿಕೊಂಡ ಮೇಲೂ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದು ನಿಮ್ಮ ಉನ್ನತ ವಿಚಾರ ಆಚಾರಗಳಿಂದ ಆದರ್ಶವಾಗಿ, ಅವರನ್ನು ಪ್ರಭಾವಿಸುತ್ತ, ಅವರ ಜೀವನದಲ್ಲಿ ಬೆರೆತು ‘ಬಾಳ’ಬಹುದು. ರಾಮ, ಕೃಷ್ಣ, ಶಂಕರ, ಬುದ್ಧ, ಬಸವ, ಗಾಂಧಿ, ಅರಿಸ್ಟಾಟಲ್, ಗೆಲೆಲಿಯೊ, ಆರ್ಯಭಟ, ಡಾರ್ವಿನ್, ಐನ್ ಸ್ಟೈನ್, ಅಶೋಕ, ವಿಶ್ವೇಶ್ವರಯ್ಯ, ಪುರಂದರ ದಾಸ ಹೀಗೆ ಬದುಕು ಮುಗಿದರೂ ಬಾಳುತ್ತಿರುವ ಮಹನೀಯರ ಉದಾಹರಣೆಗಳು ಅಗಣಿತ.

ಅಂತೂ ಕನ್ನಡಿಗರಾಗಿ ಹುಟ್ಟಿದ ಮೇಲೆ ಕನ್ನಡಿಗರಾಗಿ ಬಾಳುವಿರೊ ಬದುಕುವಿರೊ ನೀವೇ ನಿರ್ಧರಿಸಿ!


ಕನ್ನಡ ಕಲಿ, ಕನ್ನಡದ ಗುಟ್ಟು ಬದುಕು – ಬಾಳು
ಸಂಗೀತ: ಆಕಾಶ ದೀಕ್ಷಿತ
Episode 5, Year 2020 No 4, Dec 2020


ತಾಗುಲಿ : Life and Living, Vishweshwar Dixit