ಕನ್ನಡದ ಗುಟ್ಟು : ಅಲ್ಲ- ಇಲ್ಲ

ಕನ್ನಡದ ಗುಟ್ಟು

ಅಲ್ಲ- ಇಲ್ಲ

ವಿಶ್ವೇಶ್ವರ ದೀಕ್ಷಿತ


[ಕನ್ನಡ ಕಲಿಗಳೆ, ನಮೋ!]

ಇಂದಿನ ಮಕ್ಕಳು ಮೊದಲು ಕಲಿಯುವುದು "NO" .

"Johny, drink your milk.", "NO."

"Is that candy in your mouth?" "NO."

ಹೀಗೆ ಕನ್ನಡದಲ್ಲಿ ಎಲ್ಲದಕ್ಕೂ ಇಲ್ಲ ಅನ್ನಲಾಗುವುದಿಲ್ಲ. ಆಗ ಅಲ್ಲ ಸರಿಯಾದ ಪದ.

ಇಲ್ಲವೆಂಬುದು ಅಭಾವ

ಇಲ್ಲ ಎನ್ನುವುದು ಇರುವಿಕೆ ಅಥವಾ ಸ್ಥಿತಿಯನ್ನು ನಿರಾಕರಿಸುವ ಪದ. "ಇಲ್ಲವೆಂಬುದು ಅಭಾವ" ಅಂತ ಅಮರಕೋಶದ ಮೇಲಿನ ಕನ್ನಡ ಟೀಕಾಗ್ರಂಥದಲ್ಲಿ ಹೇಳಿದೆ.

"ಮುಡಿಯಲ್ಲಿ ಹೂ ಇಲ್ಲ." ಇಲ್ಲಿ ಮುಡಿಯಲ್ಲಿ ಹೂವಿನ ಇರುವಿಕೆಯನ್ನು ನಿರಾಕರಿಸಿದೆ. ಅಂದರೆ, ಅದರ ಅಭಾವವನ್ನು ಹೇಳಿದೆ. ಹೂ ಇಲ್ಲ ಅಂದರೆ ಇಲ್ಲ; ಬೇರೆ ಏನೋ ಇದೆ ಎಂದು ಪರೋಕ್ಷವಾಗಿ ನಿರ್ಣಯಿಸಲು ಆಗದು.

ಇನ್ನು ಕೆಲವು ಉದಾಹರಣೆಗಳನ್ನು ನೋಡಿ:

"ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ" ಅಂತ ಪುರಂದರ ದಾಸರು ಹೇಳಿದ್ದಾರೆ. ದೂತರಲ್ಲಿ ದಯೆಯ ಅಭಾವ ಎಂದು ಅರ್ಥ.

"ಭೂಮಿ ಚಪ್ಪಟೆ ಇಲ್ಲ." ಇಲ್ಲಿ ಚಪ್ಪಟೆ ಇರುವ ಸ್ಥಿತಿಯ ನಿರಾಕರಣೆ.

" ಅವನು ಹೋಗುವುದಿಲ್ಲ." ಇಲ್ಲಿ ಹೋಗುವ ಸ್ಥಿತಿಯ ಅಭಾವ.

ಅಲ್ಲವೆಂಬುದು ಅಸಮಾನ

ಅಲ್ಲ ನಕಾರ ಸೂಚಕ ಪದ. ಒಂದು ವಸ್ತು, ವ್ಯಕ್ತಿ, ಅಥವಾ ವಿಚಾರದ ಸ್ವಭಾವವನ್ನು ನಿರಾಕರಿಸುವ , ಅಥವಾ ಸ್ವಭಾವದಲ್ಲಿ ವ್ಯತ್ಯಾಸವನ್ನು ಪರೋಕ್ಷವಾಗಿ ಸೂಚಿಸುವ, ಅಥವಾ ಅವುಗಳಲ್ಲಿನ ಸರಿಸಮತೆಯನ್ನು (equivalance) ನಿರಾಕರಿಸುವ ಪದ. ಅಂದರೆ ಅಸಮಾನತೆಯನ್ನು ಸಾರುವ ಪದ.

ಉದಾಹರಣೆಗೆ,

ಇದು ಹೂ ಅಲ್ಲ. ಇಲ್ಲಿ ಆ ಒಂದು ವಸ್ತುವಿನ ಹೂ-ತ್ವವನ್ನು ನಿರಾಕರಿಸಿದೆ . ವಸ್ತು ಇದೆ, ಆದರೆ ಅದು ಬೇರೆ ಏನೋ ಎಂದು ಪರೋಕ್ಷವಾಗಿ ಸೂಚಿಸಿದೆ. ಮೇಲಾಗಿ, ಇದು ಇಂದ ನಿರ್ದೇಶಿತ ವಸ್ತು ಮತ್ತು ಹೂಗಳಲ್ಲಿನ ಸರಿಸಮತೆಯನ್ನು equivalence ನಿರಾಕರಿಸಿದೆ: ಇದು ≢ ಹೂ.

"ಕರುಣಾಂಬುಗಳು ಇವು ಅಲ್ಲ" ಅಂತ ಬಸವಪುರಾಣದಲ್ಲಿ ಬರುತ್ತದೆ. ಇಲ್ಲಿ, ಇವು ಮತ್ತು ಕರುಣಾಂಬುಗಳ ಸರಿಸಮತ್ವವನ್ನು ನಿರಾಕರಿಸಲಾಗಿದೆ. ಅಂದರೆ ಇವು ಮೊಸಳೆ ಕಣ್ಣೀರು ಅಂತ ಸೂಚ್ಯಾರ್ಥ.

ಇಲ್ಲ-ಅಲ್ಲ ಕನ್ನಡ ಸೂತ್ರ

ಸಂಸ್ಕೃತದಲ್ಲಿ ಅಥವಾ ಯಾವುದೆ ಸಂಸ್ಕೃತ ಜನ್ಯ ಭಾಷೆಯಲ್ಲಿಇಲ್ಲ ಅಲ್ಲ ಎಂದು ಪ್ರತ್ಯೇಕ ಪದಗಳು ಇಲ್ಲ. ಇಂಥ ಸೂಕ್ಷ್ಮ ಭೇದ, ಕನ್ನಡದ ವೈಶಿಷ್ಟ್ಯ. ಆದ್ದರಿಂದ ಅಮರಕೋಶದ ಟೀಕಾಕಾರ ಇಲ್ಲವೆಂಬುದು ಅಭಾವ ಅಂತ ಅಷ್ಟಕ್ಕೆ ನಿಲ್ಲಿಸಿ ಬಿಟ್ಟಿದ್ದಾನೆ. ಕನ್ನಡದ ಮಟ್ಟಿಗೆ ಇಲ್ಲವೆಂಬುದು ಅಭಾವ ಒಂದು ಅಪೂರ್ಣ ಸೂತ್ರ. ಕನ್ನಡಕ್ಕೆ ಪೂರ್ಣ ಸೂತ್ರವನ್ನು ಹೀಗೆ ಹೇಳಬಹುದು.

ಕನ್ನಡ ಸೂತ್ರ: ಇಲ್ಲವೆಂಬುದು ಅಭಾವ Λ ; ಅಲ್ಲವೆಂಬುದು ಅಸಮಾನ ≢

No-Not

ಇನ್ನು, ಇಲ್ಲ ಅಲ್ಲ ಗಳನ್ನು ಇಂಗ್ಲಿಷಿನ no, not ಗಳಿಗೆ ಹೋಲಿಸಬಹುದು.

"Is there a book on the table?" ಇದಕ್ಕೆ "No, there is no book on the table" ಅಂತ ಉತ್ತರಿಸಬಹುದು.

"Is the item on the table a book?" ಇದಕ್ಕೆ "No, it is not a book" ಅಂತ ಹೇಳಬಹುದು.

ಇಲ್ಲಿ no ಮತ್ತು not ಗಳನ್ನೂ ಒಂದೇ ವಾಕ್ಯದಲ್ಲಿ ಉಪಯೋಸಿದ್ದನ್ನು ಗಮನಿಸಿ.

ಕನ್ನಡದಲ್ಲಿ,

         "ಮೇಜಿನ ಮೇಲಿರುವ ವಸ್ತು ಪುಸ್ತಕವೇ?" ಎನ್ನುವ ಪ್ರಶ್ನೆಗೆ

              ☒  "ಇಲ್ಲ, ಅದು ಪುಸ್ತಕ ಅಲ್ಲ" ಎನ್ನುವುದಕ್ಕಿಂತ

              ☑  "ಅಲ್ಲ, ಅದು ಪುಸ್ತಕ ಅಲ್ಲ" ಎನ್ನುವುದೆ ಸಮಂಜಸ.

ಹಾಗೆಯೆ,

             “ಮೇಜಿನ ಮೇಲೆ ಪುಸ್ತಕ ಇದೆಯೆ?” ಎನ್ನುವ ಪ್ರಶ್ನೆಗೆ,

                    ☑ “ಇಲ್ಲ, ಮೇಜಿನ ಮೇಲೆ ಪುಸ್ತಕ ಇಲ್ಲ” ಎನ್ನುವುದೆ ಸೂಕ್ತ ಉತ್ತರ.

ಕೊನೆಯ ಉದಾಹರಣೆ ಗೀತೆಯ ಒಂದು ಶ್ಲೋಕ :

                     ನಾಸತೋ ವಿದ್ಯತೇ ಭಾವಃ

                           ನಾಭಾವೋ ವಿದ್ಯತೇ ಸತಃ

                    ಉಭಯೋರಪಿ ದೃಷ್ಟೋಽನ್ತಃ

                          ತ್ವನಯೋಸ್ತತ್ವದರ್ಶಿಭಿಃ        [೨-೧೬]

ಇದನ್ನು ಕನ್ನಡದಲ್ಲಿ ಹೀಗೆ ಹೇಳಬಹುದು:

                   ದಿಟವು ಅಲ್ಲದಕಿಲ್ಲ ಇರವು,

                         ಇರವು ಇಲ್ಲದುದಲ್ಲ ದಿಟವು;

                  ದಿಟ ಇರವುಗಳ ನೈಜವನ್ನು

                         ತಿಳಿದಿಹರು ತಿಳಿದವರು ಅದನ್ನು.

ಸಂಸ್ಕೃತ ಶ್ಲೋಕದಲ್ಲಿ ನ ಮತ್ತು ಅ ಪ್ರತ್ಯಯಗಳ, ಮತ್ತು ಕನ್ನಡದಲ್ಲಿ ಇಲ್ಲ-ಅಲ್ಲ ಪದಗಳ ಉಪಯೋಗವನ್ನು ಗಮನಿಸಿ.

ಸುಲಭ ಯಾಂತ್ರಿಕ ನಿಯಮ

ಈಗ ನೀವು ಕೇಳಬಹುದು

ಎರಡು ಅಕ್ಷರಗಳ, ಸ್ವಭಾವ ಸಿದ್ದ ಅನ್ನಿಸುವ, ಈ ಎರಡು ತೀರ ಸಾಮಾನ್ಯವಾದ ಪದಗಳನ್ನು ಉಪಯೋಗಿಸಲು ಇಷ್ಟೆಲ್ಲ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇದೆಯೆ?

ಇದಕ್ಕೆ ಸರಿಯಾದ ಉತ್ತರ – ಇಲ್ಲ.

ಈ ವಾಕ್ಯಗಳನ್ನು ಗಮನಿಸಿ:

        (೧) ಆ ಹೂವು ಗುಲಾಬಿ ಅಲ್ಲ.

        (೨) ಆ ಹೂವು ಗುಲಾಬಿ ಇಲ್ಲ.

ಎರಡೂ ವಾಕ್ಯಗಳು ಸರಿ, ಆದರೆ ಬೇರೆ ಬೇರೆ ಅರ್ಥ ಕೊಡುತ್ತಿವೆ.

ಮೊದಲನೆಯ ವಾಕ್ಯದಲ್ಲಿ, ಅದು ಗುಲಾಬಿ ಹೂ ಅಂದರೆ rose ಅಲ್ಲ; ಬೇರೆ ಜಾತಿಯ ಹೂ, ಮಲ್ಲಿಗೆ ಆಗಿರಬಹುದು ಎಂದು ಅರ್ಥ.

ಎರಡನೆಯ ವಾಕ್ಯದಲ್ಲಿ, ಆ ಹೂವು ಗುಲಾಬಿ ಬಣ್ಣದ್ದಲ್ಲ; ಅದು Roseಏ ಇರಲಿ, Rhododendronಏ ಇರಲಿ. ಅದರ ಬಣ್ಣ ಮಾತ್ರ ಗುಲಾಬಿ ಅಲ್ಲ ಅಂತ ಅರ್ಥ.

ಮೂರನೆಯ ವಾಕ್ಯ ಗಮನಿಸಿ:

      (೩) ಆ ಹೂವು ಅರಳಿಲ್ಲ

ಅಂದರೆ ಮೊದಲ ವಾಕ್ಯದಲ್ಲಿ ಗುಲಾಬಿ ಒಂದು ನಾಮಪದ (noun); ಎರಡನೆಯ ವಾಕ್ಯದಲ್ಲಿ ಅದು ಗುಣಪದ (adjective) ಆಗಿದೆ. ಮೂರನೆಯ ವಾಕ್ಯದಲ್ಲಿ ಇಲ್ಲ ಪದ ಕ್ರಿಯಾಪದಕ್ಕೆ (verb) ಅಂಟಿಕೊಂಡಿದೆ.

ಆದ್ದರಿಂದ, ಎರಡು ನಾಮಪದಗಳ ಸರಿಸಮತೆಯನ್ನು(equivalence) ನಿರಾಕರಿಸಲು ಅಲ್ಲ, ವಿಶೇಷಣವನ್ನು ಅಥವ ಕ್ರಿಯಾಪದವನ್ನು ನಿರಾಕರಿಸಲು ಇಲ್ಲ ಉಪಯೋಗಿಸುವುದು ಸೂಕ್ತ. ಇದೆ ಸುಲಭ ನಿಯಮ.

ಈ ನಿಯಮವನ್ನು, ನಿಮ್ಮದೆ ಆದ ಅಲ್ಲ-ಇಲ್ಲ ವಾಕ್ಯಗಳ ಒರೆಗೆ ಹಚ್ಚಿ ಖಚಿತಪಡಿಸಿಕೊಳ್ಳಿ.

ಮೆದುಳು ತಿಂಡಿ (Brain Teaser)

ನಿಮಗೊಂದು ಪುಟ್ಟ ಮೆದುಳು ತಿಂಡಿ (ಬ್ರೈನ್ ಫುಡ್ ಅಥವ ಬ್ರೈನ್ ಟೀಸರ್)

     "ಇಲ್ಲವೆಂದರೆ ಇಪ್ಪುದೆ?"

      "ಅಲ್ಲವೆಂದರೆ ಅಪ್ಪುದೆ?"

ಇಲ್ಲಿ,

     ೧. ಇಲ್ಲ - ಇಪ್ಪುದು ಮತ್ತು ಅಲ್ಲ - ಅಪ್ಪುದು ವಿರುದ್ಧಾರ್ಥಕ ಪದಗಳೆ ?

     ೨. ಈ ಪ್ರಶ್ನೆಗಳಿಗೆ ಇಲ್ಲ, ಅಲ್ಲ, ಇಪ್ಪುದು, ಅಪ್ಪುದು ಗಳಲ್ಲಿ ಸಮಂಜಸ ಉತ್ತರಗಳು ಯಾವವು?

ನಿಮ್ಮವನೆ ಆದ,

ವಿಶ್ವೇಶ್ವರ ದೀಕ್ಷಿತ, ಕನ್ನಡ ಕಲಿ , ಕನ್ನಡದ ಗುಟ್ಟು ಬಿತ್ತರಿಕೆ ೧, ೨೦೧೯-೦೧.

ಪ್ರಾರಂಭಿಕ ಸಂಗೀತ : ಆಕಾಶ

© Vishweshwar Dixit 2019; Secret of Kannada : Alla-Illa Episode 1, January 2019


ತಾಗುಲಿ : Secret of Kannada, No-Not, Vishweshwar Dixit