ಮಹಾತ್ಮ ಗಾಂಧಿ: ಒಪ್ಪು - ತಪ್ಪು : ನಿಮ್ಮ ಏನಂತಿಗಳು

ಮಹಾತ್ಮ ಗಾಂಧಿ: ಒಪ್ಪು - ತಪ್ಪು : ನಿಮ್ಮ ಏನಂತಿಗಳು

*** ವಿಶ್ವೇಶ್ವರ ದೀಕ್ಷಿತ

ಗಾಂಧಿ  ಮಹಾತ್ಮನೆ? ಗಾಂಧಿ ಮಾಡಿದ್ದೆಲ್ಲ ಸರಿಯೆ? ನಾವು ಎಡವಿದೆವೆ? ಲಾಭ ಆದದ್ದು ಅಗುತ್ತಿರುವುದು ಯಾರಿಗೆ?
ಗಾಂಧಿ ಲೇಖನಕ್ಕೆ ಮತ್ತು ಗಾಂಧಿಯ ಬಗ್ಗೆ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ನೆಲೆಗಳಲ್ಲಿ ವಿಚಾರಪೂರ್ಣ ಏನಂತಿಗಳನ್ನು ನಿಖರ ನುಡಿಗಳಲ್ಲಿ ಹಂಚಿಕೊಂಡ ಕೆ.ಪಿ. ರವಿಕುಮಾರ್, ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ, ಶ್ರೀನಿವಾಸ ಭಟ್,  ಶ್ರೀನಿವಾಸ ಹೆಬ್ಬಾಳ, ಕೆ.ಟಿ. ಶೆಟ್ಟಿ,  ಸ್ಮಿತಾ,ಮತ್ತು ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಿದ ಎಲ್ಲ ಕನ್ನಡ ಕಲಿ ಓದುಗರಿಗೆ ನಮನಗಳು.
 

 

ಪೂರಕ ಓದಿಗೆ:  ಭಾಗ ೧ - ಗಾಂಧಿ ಜೀವನ         ಭಾಗ ೨ - ಗಾಂಧಿ ಸಾಧನೆ  

ಗಾಂ

ಧಿ ಲೇಖನಕ್ಕೆ ಮತ್ತು ಗಾಂಧಿಯ ಬಗ್ಗೆ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ನೆಲೆಗಳಲ್ಲಿ ವಿಚಾರಪೂರ್ಣ ಏನಂತಿಗಳನ್ನು ನಿಖರ ನುಡಿಗಳಲ್ಲಿ ಹಂಚಿಕೊಂಡ 
  ಕೆ.ಪಿ. ರವಿಕುಮಾರ್, ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ, ಶ್ರೀನಿವಾಸ ಭಟ್,  ಶ್ರೀನಿವಾಸ ಹೆಬ್ಬಾಳ, ಕೆ.ಟಿ. ಶೆಟ್ಟಿ,  ಸ್ಮಿತಾ,ಮತ್ತು ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಿದ ಎಲ್ಲ ಕನ್ನಡ ಕಲಿ ಓದುಗರಿಗೆ ನಮನಗಳು.

೧. ಸತ್ಯಾಸತ್ಯತೆ
ಗಾಂಧಿ ಲೇಖನಕ್ಕೆ ಪ್ರತಿಕ್ರಿಯೆಯಿಸುತ್ತ "ಮಾಹಿತಿ ಪೂರ್ಣ ಲೇಖನ, ಒಳ್ಳೆಯ ಲೇಖನ " ಎಂದು ಸ್ಮಿತಾ ಅವರಿಗೆ ಅನಿಸಿದರೆ,   ಕೆ. ಟಿ. ಶೆಟ್ಟಿ ಹೇಳುತ್ತಾರೆ, "ಕೆಲವು ಸತ್ಯ, ಕೆಲವು ಅರ್ಧ ಸತ್ಯ, ಇನ್ನು ಕೆಲವು ಪ್ರಶ್ನಾರ್ಥಕ ಸತ್ಯ."  ಆದರೂ, "ಒಟ್ಟಿನಲ್ಲಿ ಗಾಂಧಿ ಒಬ್ಬ  ಮಹಾತ್ಮನಾದ ಮಾನವ, ಮನುಕುಲಕ್ಕೊಂದು ಆದರ್ಶ!" ಎಂದು ಒಪ್ಪಿಕೊಳ್ಳುತ್ತಾರೆ.

ಶ್ರೀನಿವಾಸ ಭಟ್ಟರು ಗಾಂಧಿ‌ ಪ್ರಯೋಗಿಸಿದ  ಮೂರು ಪರಮಾಸ್ತ್ರಗಳನ್ನು ಗುರುತಿಸಿದ್ದರೆ‌, ಅದರಿಂದ "ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!" ಎಂದು ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಒತ್ತಿ ಹೇಳುತ್ತಾರೆ.

"ತುಂಬ ಸುಂದರ ನಿರೂಪಣೆ ಮತ್ತು ವ್ಯಾಖ್ಯಾನ. ಗಾಂಧೀಜಿಯವರ ಬಗ್ಗೆ ದೈವಿಕ ಭಾವ ಅಲ್ಲಗಳೆದರೂ ಅಭಿಮಾನ ತುಂಬಿಕೊಂಡಿದೆ. ಇಲ್ಲ ಇಲ್ಲ ಎಂದುಕೊಂಡೂ ರೋಚಕತೆಯೇ  ಹೆಚ್ಚು, ಮುಕ್ತ ಆಲೋಚನೆ ಕಡಿಮೆ"  ಎನ್ನುವುದು  ಶ್ರೀನಿವಾಸ ಹೆಬ್ಬಾಳರ ಅನಿಸಿಕೆ.

"ಲೇಖನ ಗಾಂಧಿಯವರ ತಾತ್ವಿಕ ಸೋಲುಗಳನ್ನು ದಾಖಲಿಸುವುದರಲ್ಲಿ ವಿಫಲವಾಗಿದೆ" ಎಂದು ವಿವರಿಸುತ್ತಾರೆ ಕೆ.ಪಿ. ರವಿಕುಮಾರ್.

೨. ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!
ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಹೀಗೆ ಹೇಳುತ್ತಾರೆ
"ಗಾಂಧಿ ಒಬ್ಬ ಮುಗ್ಧ, ಹೆಚ್ಚು ತಿಳಿಯದ, ಬಲಶಾಲಿಯಲ್ಲದ, ದುಷ್ಟ ಶಕ್ತಿಗಳಿಗೆ ಹೆದರುವ, ... ಹೀಗೆ, ಭಾರತದ ಇತರ ಎಲ್ಲ ಯುವಕರಂತೆಯೆ ಇದ್ದ. ನಮ್ಮ, ವೈಯಕ್ತಿಕ ಮತ್ತು ರಾಷ್ಟ್ರದ, ಹಿತಕ್ಕಾಗಿ ಗಾಂಧಿಯನ್ನು ಬಳಸಿಕೊಂಡೆವು (ಬಳಸಿಕೊಳ್ಳುತ್ತಿದ್ದೇವೆ.) 

"ಗಾಂಧಿಯಿಂದಲೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಇಲ್ಲದಿದ್ದರೆ ನಾವು ನಮ್ಮ (ವಸುಧೈವ ಕುಟುಂಬಕಂ, ಇತ್ಯಾದಿ) ಸ್ವಂತ ಬೋಧನೆಗಳನ್ನು ಅರ್ಥಮಾಡಿಕೊಳ್ಳದೆ ಗುಲಾಮರಾಗಿ ಬಳಲುತ್ತಿದ್ದೆವು.   ನಮ್ಮೆಲ್ಲರಂತೆ, ಗಾಂಧಿಯೂ ವಿದೇಶಿ ಪದವಿಯನ್ನು (ಕಾನೂನಿನಲ್ಲಿ) ಗಳಿಸಲು ಸಲಹೆ ಪಡೆದರು. ತಮ್ಮ ಸುಮಾರು ೧೭ನೇ ಎಳೆ ವಯಸ್ಸಿನಲ್ಲಿ , ಅವರ ತಾಯಿ ದೈನಂದಿನ ಪೂಜೆ ಮಾಡುವಾಗ ಹಾಡುತ್ತಿದ್ದ ಕೀರ್ತನೆಗಳನ್ನು  ಹೊರತುಪಡಿಸಿ, ಅವರಿಗೆ ಭಾರತದ ಬಗ್ಗೆ - ಭಗವದ್ಗೀತೆ ಅಥವಾ ಯಾವುದೇ ಮಹಾಕಾವ್ಯಗಳ ಬಗ್ಗೆ -  ಏನೂ ತಿಳಿದಿರಲಿಲ್ಲ.  ಎಲ್ಲರಂತೆ, ಮನೆಯಿಂದ ಹೊರಬಂದ ನಂತರ, ಜಗತ್ತನ್ನು ಎದುರಿಸಲು ಪ್ರಯತ್ನಿಸುತ್ತಿರುವಾಗ, ಇಂಗ್ಲೆಂಡ್‌ನಲ್ಲಿ ಕಂಡ ಕೆಲವು ಕ್ರಿಶ್ಚಿಯನ್ನರು, ಪಾದ್ರಿಗಳು  ಹಿಂದೂ ಧರ್ಮಗ್ರಂಥಗಳಲ್ಲಿ ಏನು ಹೇಳಲಾಗಿದೆ ಎಂದು ತಿಳಿದುಕೊಳ್ಳಲು ಸಹಜವಾಗಿ ಪ್ರಶ್ನಿಸಿದರು.   ಏನನ್ನೂ ಹೇಳಲು ಸಾಧ್ಯವಾಗದ ಗಾಂಧಿ ಆಘಾತಕ್ಕೊಳಗಾದರು. ಅದಕ್ಕೆ,  ಅವರು ಇಂಗ್ಲೆಂಡ್‌ನ ಪ್ರಮುಖ ವಕೀಲರಾದ ಸರ್ ಫಿರೋಜ್ ಶಾ ಮೆಹ್ತಾ ಅವರಂತಹ ಕೆಲವು ಭಾರತೀಯ ಸ್ನೇಹಿತರನ್ನು ಸಂಪರ್ಕಿಸಿದರು  ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡುವುದನ್ನು ಆರಂಭಿಸಿದರು.  ಸುಮಾರು ಒಂದು ವಾರ ಅಧ್ಯಯನ ಮಾಡಿದ ನಂತರ ನಮ್ಮ ಮಹಾಕಾವ್ಯಗಳ ಬಗ್ಗೆ ಹೇಳುವ ಭಗವದ್ಗೀತೆ ಎನ್ನುವ ಒಂದು ಸಂಕ್ಷಿಪ್ತ ಪಠ್ಯ ಇದೆ ಎಂದು ತಿಳಿಯಿತು. ಅವನ್ನು ತನ್ನ ಕ್ರಿಶ್ಚಿಯನ್ ಸ್ನೇಹಿತರೊಂದಿಗೆ ಚರ್ಚಿಸತೊಡಗಿದಾಗ ತನಗೆ ಎಷ್ಟು ತಿಳಿದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಗಾಂಧಿಯ ಕಾನೂನು ಮತ್ತಿತರ ಮಾನವೀಯ ಪಠ್ಯ ಪುಸ್ತಕಗಳ ಹೊರತಾದ ಕಲಿಕೆ ಪ್ರಾರಂಭವಾದ್ದು ಹೀಗೆ.

"ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಪ್ರಯಾಣಿಸುವಾಗ, ತನ್ನ ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲ್ಪಟ್ಟಾಗ  ಅನುಭವಿಸಿದ ನಿಜ ನೋವು ಗಾಂಧಿಯ ಪ್ರಪಂಚದ ದೃಷ್ಟಿಕೋನದ ಬದಲಾವಣೆಗೆ ಕ್ರಮೇಣ  ಕಾರಣವಾಯ್ತ;  ಅದೇ, ಅಂತಿಮವಾಗಿ,  ತಾಯಿ ಭಾರತಿಯ ಭವಿಷ್ಯವನ್ನು ಬದಲಾಯಿಸಿತು. 

"ಭಾರತವು ೧೮೫೭ ರಿಂದ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದರೂ, ಯಾವುದೇ ಸಂಘಟಿತ ಹೋರಾಟ ಇರಲಿಲ್ಲ.  ತಿಲಕ್, ಗೋಖಲೆ, ಸಾವರ್ಕರ್ ಅಥವಾ ಬೋಸ್ ಮತ್ತಿತರರ ಎಲ್ಲ ಹೋರಾಟಗಳು ಅಲ್ಪಕಾಲಿಕವಾಗಿದ್ದವು. ನಿಜವಾದ ಬಲಿಷ್ಠ ಮತ್ತು ಸಮರ್ಥ ನಾಯಕತ್ವ ಗಾಂಧಿಯವರಿಂದಲೇ ಲಭ್ಯವಾಯಿತು. ಬ್ರಿಟಿಷರನ್ನು ಅರಿತು ಮತ್ತು ಬ್ರಿಟಿಷರ ನೀತಿಗಳನ್ನು ಅರ್ಥಮಾಡಿಕೊಂಡಿದ್ದರಿಂದ ಪ್ರತಿ-ಹೋರಾಟವನ್ನು ನಡೆಸಲು ಗಾಂಧಿ ಶಕ್ತರಾಗಿದ್ದರು.  ಅದಕ್ಕಾಗಿ  ತಮ್ಮ ಜೀವನವನ್ನು ತ್ಯಾಗ ಮಾಡಿದರು. ಅವರ ಕೌಟುಂಬಿಕ ಜೀವನ ನಾಶವಾಯಿತು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿಲ್ಲ. ಸ್ವತಃ ಕಬ್ಬಿಣದ ಕಂಬಿಗಳ ಹಿಂದೆ ಅನೇಕ ಬಾರಿ  ದಿನಗಳೆದರು. 

"ಗಾಂಧಿಯ ಆದರ್ಶ ತತ್ವಗಳು,  ಸ್ವ- ನಂಬಿಕೆ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಸತ್ಯ ಮತ್ತು  ಸತ್ಯ ಮಾತ್ರ  ಗಾಂಧಿ ನಾಯಕತ್ವದ ದೊಡ್ಡ ಶಕ್ತಿಯಾಗಿದ್ದವು.  ಬ್ರಿಟಿಷ ಸರ್ಕಾರ  ಲೇಬರ್ ಪಕ್ಷಕ್ಕೆ ಸೇರಿದ್ದು, ವಿಶ್ವಯುದ್ಧದ ದುಷ್ಪರಿಣಾಮ, ಮತ್ತು ಬ್ರಿಟನ್‌ನ ಮೇಲೆ ಅದರ ಪ್ರಭಾವ ಇತ್ಯಾದಿಗಳು ನೆರವಾದರೂ, ಸ್ವಾತಂತ್ರ್ಯ ಪ್ರಾಪ್ತಿಯ  ಮಹಾ ಕಾರ್ಯದಲ್ಲಿ ಗಾಂಧಿಯದೇ ಪ್ರಮುಖ ಪಾತ್ರ.  ನಾನು ಗಾಂಧಿಯನ್ನು ಮಹಾತ್ಮ ಎಂದು ಕರೆಯುತ್ತೇನೆ;  ಬೇರೆಯವರು ಕರೆಯಲಿ ಬಿಡಲಿ, ನನಗದರ ಗೊಡವೆ ಇಲ್ಲ. "

೩. ಗಾಂಧಿಯ ಆಯುಧಗಳು
ಶ್ರೀನಿವಾಸ ಭಟ್ಟರು ಗಾಂಧಿಯವರ ಮೂರು ಮುಖ್ಯ ಆಯುಧಗಳನ್ನು ಹೀಗೆ ಗುರುತಿಸುತ್ತಾರೆ:
    ೧. ವಸುಧೈವ ಕುಟುಂಬಕಮ್
    ೨. ಒಂದು ಕೆನ್ನೆಗೆ ಹೊಡೆದರೆ ತೋರಿಸು ಇನ್ನೊಂದು ಕೆನ್ನೆಯನು
    ೩. ಸರ್ವ ಧರ್ಮ ಸಹಿಷ್ಣುವಿಕೆ
ಸಂಭಂದಪಟ್ಟ ಎಲ್ಲರೂ ಇವುಗಳಲ್ಲಿ ಸಮಾನ ನಂಬಿಕೆ ಇಟ್ಟಾಗ ಮಾತ್ರ ಉಪಯೋಗಿಸಲ್ಪಡಬಹುದಾದ ಅಸ್ತ್ರಗಳು. ಇಲ್ಲವಾದಲ್ಲಿ ದುರುಪಯೋಗಪಡಿಸಿಕೊಳ್ಳಲು ಸುವರ್ಣಾವಕಾಶ ಶತ್ರುಗಳಿಗೆ.

೪. ಲೇಖನ ಚೆನ್ನಾಗಿದೆ. ಆದರೆ,…
ಎನ್ನುತ್ತ, ಗಾಂಧಿ ಜೀವನದ ವೈರುಧ್ಯ, ಮಾಡಿದ ತಪ್ಪುಗಳು, ನಾವು ಎಡವಿದ್ದು ಎಲ್ಲಿ, ಯಾರಿಗೆ ಲಾಭ ಎನ್ನುವ ವಿಷಯಗಳಲ್ಲಿ ಗಮನೀಯ ಅಂಶಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ ಕೆ.ಪಿ. ರವಿಕುಮಾರ್:‌

"ಲೇಖನ ಚೆನ್ನಾಗಿದೆ. ಆದರೆ, ಗಾಂಧಿಯವರ ತಾತ್ವಿಕ ಸೋಲುಗಳನ್ನು ದಾಖಲಿಸುವುದರಲ್ಲಿ ವಿಫಲವಾಗಿದೆ. ದೇವಸ್ಥಾನದ ಒಳಗೆ ಪೂಜಿಸುವುದನ್ನು ಟೀಕಿಸುತ್ತಾ, ಹೊರಗೆ ಅವರಿಗೆ ಪೂಜನೀಯತೆ ತರುವುದಕ್ಕೆ ಬೇಕಾದ ಸಾಮಗ್ರಿಯನ್ನು ಯಥೇಚ್ಚವಾಗಿ ಒದಗಿಸಿದೆ.

೪.೧ ದೊಡ್ಡ ತಪ್ಪು
"ನನ್ನ ಪ್ರಕಾರ, ಮೂಲತಃ ನಾವು ಎಲ್ಲಾ ವಿಷಯಗಳಿಗೂ ಮಾರ್ಗದರ್ಶನ ಕೋರುತ್ತ ಗಾಂಧಿಯವರ ಕೈ ಹಿಡಿದು ನಡೆಯಲು ಆರಂಭಿಸಿದ್ದೇ ಮೊದಲನೆಯ ದೊಡ್ಡ ತಪ್ಪು. ಏಕೆಂದರೆ, ಅವರೇ ಒಪ್ಪಿಕೊಂಡಿರುವ ಹಾಗೆ ಅವರು ಒಬ್ಬ ಪ್ರಯೋಗಾತ್ಮಕ ವ್ಯಕ್ತಿ, ಇನ್ನೂ ಸತ್ಯದ ಪೂರ್ಣದರ್ಶನ ಆಗಿಲ್ಲದವರು. ಹಾಗಾಗಿ, ಒಬ್ಬ ವ್ಯಕ್ತಿಯ ಮಟ್ಟಿಗಾದರೆ ಅಂಥವರ ಕೈ ಹಿಡಿದು ನಡೆದರೆ ಆಗುವ ನಷ್ಟ ಹೇಗಾದರೂ ತೂಗಿಸಬಹುದು. ಆದರೆ, ಒಂದು ದೇಶ, ಅದರಲ್ಲೂ ಭಾರತದಂತಹ ವಿಚಾರಸಮೃದ್ಧ ದೇಶ, ಅಂತಹ ದುಸ್ಸಾಹಸ ಮಾಡಿದ್ದು ಸರ್ವಥಾ ಮಾನ್ಯವಲ್ಲ. ಗಾಂಧಿಯ ಯಾವ ತತ್ವ ಇಂದು ಜೀವಂತವಾಗಿದೆ ಎಂದು ವಿಚಾರಿಸಿದಾಗ, ಅವರ ವಿಚಾರಗಳ ಹಿಂದೆ ಅಡಗಿಕೊಂಡು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವವರನ್ನು ಎಲ್ಲೆಡೆಯೂ ಕಾಣುತ್ತೇವೆ.

೪.೨ ಜೀವನದಲ್ಲಿ ವೈರುಧ್ಯ
"ಡಿವಿಜಿಯವರ ’ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು’ ಎನ್ನುವುದರ ವೈರುಧ್ಯ ಗಾಂಧಿಯವರ ಜೀವನದಲ್ಲಿ ಕಾಣುತ್ತೇವೆ - ಯಾವ ವ್ಯಕ್ತಿ ತನ್ನ ಮಗನಿಗೇ ಸಾಧಾರಣ ಪಿತ ಕೂಡ ಆಗಲು ಸಾಧ್ಯವಾಗಲಿಲ್ಲವೋ, ಅವರನ್ನು ರಾಷ್ಟ್ರಕ್ಕೇ ಪಿತ ಎಂದು ಒಪ್ಪಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದಾಯಿತು. ಹತ್ತಾರು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ನಮ್ಮ ದೇಶಕ್ಕೆ ಅವರನ್ನು ಪೂರ್ಣಮನಸ್ಸಿನಿಂದ ’ರಾಷ್ಟ್ರಪಿತ’ ಎಂದು ಒಪ್ಪಿಕೊಳ್ಳಲು ಬಹಳ ಕಷ್ಟ. 

೪.೩ ನೆಹರೂ ಪಕ್ಷಪಾತ
"ಅವರು ಪಟೇಲ್, ಅಂಬೇಡ್ಕರ್, ಬೋಸ್ ಅಂತಹವರನ್ನು ಕಡೆಗಣಿಸಿ, ನೆಹರೂ ಅವರನ್ನು ತಲೆಯ ಮೇಲೆ ಹೊತ್ತು ಮೆರೆದಿದ್ದು ನಮ್ಮ ದೇಶದಲ್ಲಿ ಇಂದಿನವರೆಗೂ ಆಗಿರುವ ದುಷ್ಟಶಾಸನಗಳಿಗೆ ಮುನ್ನುಡಿಯೆಂದೇ ಭಾವಿಸಬೇಕು. 

೪.೪ ಅಹಿಂಸೆ ಮತ್ತು ಭಗವದ್ಗೀತೆ
"ನೀವು ನಿಮ್ಮ ಲೇಖನದಲ್ಲಿ ಅಹಿಂಸೆಯ ಬಗ್ಗೆ ಮಾತನಾಡಿದ್ದೀರಿ. ನಮ್ಮ ಸನಾತನ ಧರ್ಮದ ಅಹಿಂಸೆಯ ಕಲ್ಪನೆಗೆ ಹಾಗೂ ಗಾಂಧಿಯವರ ಅಹಿಂಸೆಯ ಕಲ್ಪನೆಗೆ ಸಂಬಂಧ ಕಲ್ಪಿಸಲೂ ಸಾಧ್ಯವಿಲ್ಲ. ಎಲ್ಲ ಸಂದರ್ಭಗಳಲ್ಲಿಯೂ ಅಹಿಂಸೆಯೇ ಪ್ರಧಾನ ಮಾರ್ಗವಾಗಿದ್ದಿದ್ದರೆ, ಭಗವಂತನ ಯಾವ ಅವತಾರದ ಅಗತ್ಯವೂ ಇರಲಿಲ್ಲ. ನನಗೆ ಸ್ವಲ್ಪವೂ ಅರ್ಥವಾಗದ ಒಂದು ವಿಷಯವೆಂದರೆ, ಅಹಿಂಸೆಯ ಬಗ್ಗೆ ವಿಚಿತ್ರ ಕಲ್ಪನೆ ಹೊಂದಿದ್ದ ಗಾಂಧಿಯವರಿಗೆ ’ಭಗವದ್ಗೀತೆ’ ಅತ್ಯಂತ ಹೃದಯಕ್ಕೆ ಹತ್ತಿರವಾದ ಪುಸ್ತಕವಾಗಿದ್ದುದು. ಎಲ್ಲರಿಗೂ ತಿಳಿದಿರುವ ಹಾಗೆ, ಅಜ್ಞಾನಕ್ಕೆ ಒಳಗಾಗಿ ’ಶಸ್ತ್ರತ್ಯಾಗ’ ಮಾಡಿದ್ದ ಅರ್ಜುನನಿಗೆ ತಪ್ಪಿನ ಮನವರಿಕೆ ಮಾಡಿಕೊಟ್ಟು ಮತ್ತೆ ’ಶಸ್ತ್ರಗ್ರಹಣ’ ಮಾಡುವ ಹಾಗೆ ಮಾಡಿದ ಭಗವಂತನ ಉಪದೇಶವೇ ಗೀತೆಯ ಸಾರ. ಎಲ್ಲಾ ಸಂದರ್ಭಗಳಲ್ಲಿಯೂ ಅಹಿಂಸೆಯ ತತ್ತ್ವವೇ ಪರಮಶ್ರೇಷ್ಠ, ಅದೇ ಗ್ರಾಹ್ಯ ಎಂದಿದ್ದರೆ ಗೀತೆಯ ತತ್ತ್ವವನ್ನು ಒಪ್ಪಲು ಸಾಧ್ಯವಿಲ್ಲ. ಇದು, ನಾನು ಮೇಲೆ ಹೇಳಿದ ಹಾಗೆ, ಒಬ್ಬ ಪ್ರಯೋಗಾತ್ಮಕ ವ್ಯಕ್ತಿಯ ಗೊಂದಲಮಯ ವಿಚಾರ. ಆ ಮನೋಧರ್ಮದವರನ್ನು ಸದಾಸರ್ವದಾ ಆಶ್ರಯಿಸುವುದೆಂದರೆ, ಒಬ್ಬ ಕಣ್ಣಿಲ್ಲದ ವ್ಯಕ್ತಿಯ ಕೈ ಹಿಡಿದು ದಾರಿ ಅರಸಿದಂತೆ ಎನ್ನುವುದು ನನ್ನ ವಿನಮ್ರ ಭಾವನೆ.

೪.೫ ಗಾಂಧಿ ಪ್ರಯೋಗದ ಪರಿಣಾಮ
"ನಾನು ಗಾಂಧಿಯವರ ಬಗ್ಗೆ ೧೯೮೩ ರಿಂದ ಕುತೂಹಲ ಬೆಳಸಿಕೊಂಡು ಹಲವಾರು ಪುಸ್ತಕಗಳನ್ನು ಓದಿದ್ದೇನೆ. ಒಬ್ಬ ವ್ಯಕ್ತಿಯಾಗಿ ಅವರ ಬಗ್ಗೆ ಬಹಳ ಆದರವಿದೆ. ಆದರೆ, ತನ್ನ ಪ್ರಯೋಗಾತ್ಮಕತೆಯನ್ನು ದೇಶದ ಭವಿಷ್ಯದ ವಿಷಯದಲ್ಲೂ ಅನಗತ್ಯವಾಗಿ ವಿಸ್ತರಿಸಿ, ದೇಶದ ಆಡಳಿತಾತ್ಮತೆ ಪರಿಪಕ್ವವಾಗುವುದಕ್ಕೆ ವಿಳಂಬವಾಗಲು ಕಾರಣರಾದ ಗಾಂಧಿಯವರ ಬಗ್ಗೆ ಅಸಮಾಧಾನವೂ ತುಂಬಾ ಇದೆ."
________
ಕನ್ನಡಕಲಿ, ಬಿತ್ತರಿಕೆ, ಜೂನ ೧, ೨೦೨೪
ಮಹಾತ್ಮ ಗಾಂಧಿ -  ಕಂತು ೩ : ಒಪ್ಪು - ತಪ್ಪು : ನಿಮ್ಮ ಏನಂತಿಗಳು


ತಾಗುಲಿ : Gandhi, Smitha Rangaswamy, K.T. Shetty, K.P. Ravikumar, H.R. Laxmivenkatesh, Srinivas Bhat, Vishweshwar Dixit

ಏನಂತೀರಿ?

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.