ಒನ್ನುಡಿ ರಾಮಾಯಣ

 


ಒನ್ನುಡಿ ರಾಮಾಯಣ

ಕರೋನಾ ದೂರ ಇರಲಿ, ಕರುಣೆ ಹರಿದು ಬರಲಿ
Distance Corona - Display Empathy

*** ವಿಶ್ವೇಶ್ವರ ದೀಕ್ಷಿತ

ರಾಮನವಮಿಯ ಪ್ರಯುಕ್ತ ಎಲ್ಲರಿಗೂ ಶುಭಾಶಯಗಳು! ದೈತ್ಯ ರಾವಣ ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿ ಹೇಗೆ ಬಂಧಿಸಿ ಇಟ್ಟಿದ್ದನೋ, ಹಾಗೆಯೆ, ಇಂದು ಕೋರೋನ ವೈರಾಣು ನಮ್ಮೆಲ್ಲರನ್ನೂ ನಮ್ಮ ನಮ್ಮ ಮನೆಯಲ್ಲೇ ಸೆರೆ ಹಿಡಿದಿದೆ. ಒಂದಲ್ಲ ಹತ್ತು ತಲೆ ಎತ್ತಿ (ಸ್ಟ್ರೇನ್ ಗಳು) ದೇಶ ದೇಶಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ರಾಮಬಾಣವನ್ನು ಹುಡುಕುತ್ತಿರುವ ವಿಜ್ಞಾನಿಗಳಿಗೂ, ರಾಮ ಸೇನೆಯಂತೆ ನಮ್ಮನ್ನು ಕಾಪಾಡಲು ಹೋರಾಡುತ್ತಿರುವ ಅಸಂಖ್ಯಾತ ನರ್ಸ ವೈದ್ಯರುಗಳಿಗೂ ನಮ್ಮ ನಮನ ಸಲ್ಲಿಸೋಣ. ಆಹಾರ ಮತ್ತು ಅವಶ್ಯಕ ವಸ್ತುಗಳನ್ನು ಪೂರೈಸುತ್ತಿರುವ ಎಲ್ಲ ಕೆಲಸಗಾರರಿಗೂ ಕೃತಜ್ಞತೆಗಳು. ಈಗ ನಮ್ಮ ಕೈಯಲ್ಲಿರುವ ಒಂದೇ ಒಂದು ಅಸ್ತ್ರ ಸೋಶಿಯಲ್ ಡಿಸ್ಟಾನ್ಸಿನ್ಗ್. ಇದಕ್ಕ ಮೈಯಂತರ ಅಥವ ಮೈ-ದೂರ ಅನ್ನೋಣ . ಯಾಕಂದ್ರೆ ಮೈ ದೂರ ಇದ್ದರೂ ಮನಸ್ಸು ಹತ್ತಿರ ಇರಲಿ. ವಾರಗಟ್ಟಲೆ ಮನೇಲಿ ಕೂತರೆ ಹುಚ್ಚು ಹಿಡಿಯುವುದು ಸಹಜ. ನಮ್ಮ ಸಮಾಧಾನ ಕಳಕೊಳ್ಳದೆ ಇರುವ ಪ್ರಯತ್ನ ಮಾಡೋಣ. ಮೈ ದೂರ ಅಷ್ಟೇ, ಅಕ್ಕರತೇ ಕಕ್ಕುಲತೆ ಅಲ್ಲ, ಮೈ ದೂರ ಅಷ್ಟೇ , ನಯ ವಿನಯ ಅಲ್ಲ, ಕೋರೋನಾ ದೂರ ಇರಲಿ, ಕರುಣೆ, ಅನುಕಂಪ ಹರಿದು ಬರಲಿ. ಈ ಕರೋನ ಮಾರಿಯನ್ನು ನಿಗ್ರಹಿಸಲೆಂದು ರಾಮನಲ್ಲಿ ಬೇಡಿಕೊಳ್ಳೋಣ; ಅಲ್ಲಿಯವರೆಗೆ, ಈ ಮನೆ-ಸೆರೆಯನ್ನು ತಾಳಿಕೊಳ್ಳುವ ಧೈರ್ಯ ಸ್ಥೈರ್ಯಗಳನ್ನು ತಾಯಿ ಸೀತೆ ನಮಗೆ ಕರುಣಿಸಲಿ.

ಏಕಶ್ಲೋಕೀ ರಾಮಾಯಣ

ಆದೌ ರಾಮತಪೋವನಾದಿ ಗಮನಂ ಹತ್ವಾಮೃಗಂ ಕಾಂಚನಂ
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ
ವಾಲೀನಿಗ್ರಹಣಂ ಸಮುದ್ರತರಣಂ ಲಂಕಾಪುರೀದಹನಂ
ಪಶ್ಚಾತ್ ರಾವಣ ಕುಂಭಕರ್ಣಹರಣಂ ಏತದ್ಧಿ ರಾಮಾಯಣಂ

ಒಂದೆ ಉಸುರಿನಲ್ಲಿ ರಾಮಾಯಣ

ದಶರಥನ ವರ ಮಗನ ಗಹನ ತಪ ವನ ಗಮನ,
ಗಡ ಕಪಟ ಚಂಚಲ ಕಸವರ ಕಮಲದ ಹನನ,
ಜನಕನ ಮಗಳ ಅಪಹರಣ, ಖಗವರನ ಮರಣ,
ಪಂಪನಗರದ ಚಂದ-ಗಳನ ಸಂಗಡ ವಚನ,
ಅಮರಪನ ಮಗ ಪಂಪನಗರದರಸನ ಹನನ,
ಜಲಚಯದ ತರಣ, ದಶಗಳನ ನಗರದ ದಹನ,
ಸಬಲ ದಶಗಳ ಗಟ-ಸರವಹಕರಣರ ಹನನ:
ದಶರಥನ ವರ ಮಗನ ಅಡಕವಹ ಕಥನ, ವಲ!
- (ಕನ್ನಡಕ್ಕೆ ವಿಶ್ವೇಶ್ವರ ದೀಕ್ಷಿತ)

ಇದರಲ್ಲಿ ಏನು ವಿಶೇಷ? ಒತ್ತಕ್ಷರಗಳು ಇಲ್ಲ; ಅ, ಅಂ ಸ್ವರಗಳು ಮಾತ್ರ ಇವೆ. ಎಲ್ಲ ಮೂಲ ಕನ್ನಡ ವ್ಯಂಜನಗಳು (ಙ, ಞ, ಷ ಮತ್ತು ಮಹಾಪ್ರಾಣಗಳನ್ನು ಹೊರತು ಪಡಿಸಿ) ಇವೆ. ಸರಿಯೆ? ಪಾನಕ ಕುಡಿದಷ್ಟು ಸರಾಗವಾಗಿದೆಯೆ? ನೀವೇ ಹೇಳಿ.

ಈ ಒನ್ನುಡಿಯ ಹಿನ್ನೆಲೆ, ಅರ್ಥ, ಪದಗಳ ಆಯ್ಕೆಗಳ ಬಗ್ಗೆ ನಡೆದ ಸಂವಾದ ಇಲ್ಲಿದೆ

ಹೊಯ್ಸಳ ಬಾಲವನದಲ್ಲಿ: https://www.facebook.com/sridhar.rajanna/videos/2927623393939991

ಕಸ್ತೂರಿ ಕಲ್ಚರಲ್ ಸೊಸೈಟಿ, ಕೆನಡಾ:  https://youtu.be/uoIgXCczbJs


ತಾಗುಲಿ : ರಾಮನವಮಿ Ramanavami ಕರೋನ ವೈರಾಣು Corona Virus