ಅ ಆ ಇ ಈ ಕನ್ನಡ ಕಲಿ - ಕೆಸಿಎಗೆ ಶುಭ ಹೇಳಿ

ಬೆಂಗಳೂರಿನಂಥ ಪ್ರದೇಶಗಳಲ್ಲಿ ಕನ್ನಡ ಕಲಿಕೆ ತರಗತಿಗಳನ್ನು ನಡೆಸುವುದು ಅಕಾಡೆಮಿಗಳಿಗೇ ಕಷ್ಟವಾಗಿರುವ ಸಂದರ್ಭದಲ್ಲಿ ಸೀಮೆಯಾಚೆ ಕನ್ನಡ ಕಲಿಸಲು ಮುಂದಾಗಿರುವ ಕೆಸಿಎಗೆ, ಅಭಿನಂದನೆ - ಶುಭಾಶಯ
 

ಅ ಆ ಇ ಈ ಕನ್ನಡ ಕಲಿ - ಕೆಸಿಎಗೆ ಶುಭ ಹೇಳಿ


as published on thatskannada.com  on April 2001  https://thatskannada.oneindia.com/nri/article/2001/kannada.html

ಕ್ಯಾಲಿಫೋರ್ನಿಯಾ : ಇದನ್ನು ಭಾಷಾ ದಾಸೋಹ ಅಂದರೆ ಸರಿಯಾದೀತು. ಕನ್ನಡ ಬರದವರಿಗೆ ಕನ್ನಡ ಕಲಿಸಲು ಹೊರಡುವ ಮೂಲಕ ಕನ್ನಡ ಸಾಂಸ್ಕೃತಿಕ ಒಕ್ಕೂಟ (ಕೆಸಿಎ) ಸೀಮೆಯಾಚೆ ಕನ್ನಡ ಪರಿಮಳವನ್ನು ಅರ್ಥಪೂರ್ಣವಾಗಿ ಪಸರಿಸಲು ಹೊರಟಿದೆ. ಇದರಿಂದಾಗಿ ಕನ್ನಡಿಗರು ಇತರ ಭಾಷೆಗಳನ್ನು ಕಲಿಯುತ್ತಾರೆಯೇ ಹೊರತು ಇತರರಿಗೆ ಕನ್ನಡವನ್ನು ಕಲಿಸುವುದಿಲ್ಲ ಅನ್ನುವ ಆರೋಪಕ್ಕೊಂದು ಅಪವಾದ ಇದೆಯೆಂದಾಯಿತು. ಅದಕ್ಕಾಗಿ ಒಕ್ಕೂಟದ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು, ಅಭಿನಂದನೆಗಳು.

ಡೈಮನ್‌ ಬಾರ್‌ ಪ್ರದೇಶದಲ್ಲಿ ಕೆಸಿಎ ಕನ್ನಡ ತರಗತಿಗಳು ಶುರುವಾಗುವುದು ಏಪ್ರಿಲ್‌ 1 ರಿಂದ . ಶ್ರೀನಿವಾಸ್‌ ಭಟ್‌ ಅವರು ತರಗತಿಗಳ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಕವಿತಾ ಕೊಟ್ರಪ್ಪ ಆತಿಥ್ಯ ವಹಿಸಿದ್ದ, ತರಗತಿಗಳನ್ನು ಪ್ರಾರಂಭಿಸುವ ಮುನ್ನಿನ ಸಭೆಯಲ್ಲಿ 6 ಕುಟುಂಬಗಳು ಉತ್ಸಾಹದಿಂದ ಭಾಗವಹಿಸಿದ್ದವು. ಸ್ಯಾನ್‌ ಗ್ಯಾಬ್ರಿಯಲ್‌ ವ್ಯಾಲಿ ಮತ್ತು ಸುತ್ತು ಮುತ್ತಲಿನ ಮಂದಿ ತರಗತಿಗಳಿಗೆ ಎಲ್ಲ ರೀತಿಯ ಬೆಂಬಲ ಸೂಚಿಸಿದ್ದಾರೆ.

ಈಗಾಗಲೇ 8 ರಿಂದ 13 ರ ವಯೋಮಾನದ 10 ಮಕ್ಕಳು ಕನ್ನಡ ಕಲಿಕೆಗೆ ಉತ್ಸಾಹದಿಂದ ಮುಂದೆ ಬಂದಿವೆ. ನೀವು ಅಥವಾ ನಿಮ್ಮ ಮಕ್ಕಳು ತರಗತಿಗಳಿಗೆ ಹೆಸರನ್ನು ಇನ್ನೂ ನೋಂದಾಯಿಸದಿದ್ದಲ್ಲಿ ಕೂಡಲೇ ಮುಂದಾಗಿ. ನೋಂದಾವಣೆಗಾಗಿ [email protected]ವಿಳಾಸ ಅಥವಾ ದೂರವಾಣಿ ಸಂಖ್ಯೆ 909-623-3185 ಸಂಪರ್ಕಿಸಬಹುದು.

ಕನ್ನಡ ಕಲಿಸುವ ಈ ಯಜ್ಞದಲ್ಲಿ ಹವಿಸ್ಸನ್ನು ಸಲ್ಲಿಸಲು ನಿಮಗೂ ಅವಕಾಶವಿದೆ. ಇಷ್ಟ ಪಟ್ಟಲ್ಲಿ ನಿಮ್ಮ ವಾಸ ಸ್ಥಳದ ಪ್ರದೇಶದಲ್ಲಿ ಕನ್ನಡ ಕಲಿಕೆಯ ತರಗತಿಗಳನ್ನು ನೀವೇ ಪ್ರಾರಂಭಿಸಬಹುದು. ನೆರವಿಗೆ ಕೆಸಿಎ ಸಿದ್ಧ.

ಕೆಸಿಎ ನಡೆಸುತ್ತಿರುವ ಕನ್ನಡ ಕಲಿಕೆಯ ಕಾರ್ಯಕ್ರಮ ಅನೇಕ ದೃಷ್ಟಿಗಳಿಂದ ಮುಖ್ಯವಾದುದು. ನಾಡಿನೊಳಗೇ, ಬೆಂಗಳೂರಿನಂಥ ಪ್ರದೇಶಗಳಲ್ಲಿ ಇಂಥ ತರಗತಿಗಳನ್ನು ನಡೆಸುವುದು ಅಕಾಡೆಮಿಗಳಿಗೇ ಕಷ್ಟವಾಗಿರುವ ಸಂದರ್ಭದಲ್ಲಿ ಕೆಸಿಎ ಸೀಮೆಯಾಚೆ ಕನ್ನಡ ಕಲಿಸುವ ಕೆಲಸಕ್ಕೆ ಮುಂದಾಗಿದೆ. ಆ ಕಾರಣದಿಂದಲೇ ಅದು ಭಾಷಾ ದಾಸೋಹ ಅನ್ನಿಸಿಕೊಳ್ಳುತ್ತದೆ. ಕೆಸಿಎಗೆ ಮತ್ತೊಮ್ಮೆ ಅಭಿನಂದನೆ ಹಾಗೂ ಶುಭಾಶಯ .

(ಇನ್ಫೋ ವಾರ್ತೆ)

ತಾಗುಲಿ :  about, archive, KCA, thatskannada

ತಾಗುಲಿ