ಗಾಂಧಿ ಸಾಧಿಸಿದ್ದಾದರೂ ಏನು?

ಗಾಂಧಿ ಸಾಧಿಸಿದ್ದಾದರೂ ಏನು?

*** ವಿಶ್ವೇಶ್ವರ ದೀಕ್ಷಿತ

ಗಾಂಧಿಯನ್ನು ಕೆಲವರು ದೇವತೆಯಂತೆ ಪೂಜಿಸುವವರಾದರೆ ಇನ್ನು ಹಲವರು ಕ್ಷುಲ್ಲಕ ಕಾರಣಗಳಿಗಾಗಿ ಅವರ ಎಲ್ಲ ತತ್ವಗಳನ್ನು ಅನಾದರಣೆಯಿಂದ ನೋಡುವವರಿದ್ದಾರೆ. ಈ ಇಬ್ಬರೂ ಗಾಂಧಿಯನ್ನು ಅರಿತುಕೊಂಡಿಲ್ಲ.

 

ಪೂರಕ ಓದಿಗೆ:  ಭಾಗ ೧ - ಗಾಂಧಿ ಜೀವನ 
 

ದೊ ನೋಡಿ, ನಿಜವಾಗಿಯೂ ಒಂದು ಗಾಂಧಿ ಗುಡಿಯನ್ನು ಕಟ್ಟಿದ್ದಾರೆ[1]. ತಮಿಳುನಾಡಿನ ಎರೋಡು ಜಿಲ್ಲೆಯ ಸಲಂಗಪಾಳಯದಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಗಾಂಧಿಗೆ ಪೂಜೆ, ಆರತಿ, ಮತ್ತು ಪ್ರಸಾದ. ಇದ್ದ ಕಡವರನ್ನೆಲ್ಲ ಇಲ್ಲೈ ಇಲ್ಲೈ ಎಂದು ಬೀದಿಗೆ ದಬ್ಬಿ, ಒಲ್ಲದವನಿಗೆ ಪೂಜೆ ಮಾಡುವ ಈ ಸಲ್ಲದ ಪರಿ ಎಂಥದು? ಗಾಂಧಿ ಇನ್ನೂ ಬದುಕಿದ್ದರೆ ಇದನ್ನು ಕಂಡು ತಾವೇ ನೇಣು ಹಾಕಿಕೊಳ್ಳುತ್ತಿದ್ದರೋ ಏನೋ!  ಗಾಂಧಿಯ ಜೀವನಕ್ಕೆ, ತತ್ವಗಳಿಗೆ, ನಡತೆಗೆ, ಮತ್ತು ಆದರ್ಶಗಳಿಗೆ ಇದೊಂದು ಅಪಚಾರ. 

 

 

"ಗಾಂಧಿಯ ಜೀವನದ ಆದರ್ಶಗಳು ನಮಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಗಾಂಧಿ ದೇವತೆ, ನಾವು ಹುಲು ಮಾನವರು" ಎಂದು ಸೋಲನ್ನು ಒಪ್ಪಿಕೊಳ್ಳುತ್ತ, ಇಲ್ಲವೆ ಚಾಣಾಕ್ಷತೆಯಿಂದ, ಮನುಷ್ಯತ್ವದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೆ ಗಾಂಧಿಯನ್ನು ದೈವೀಕರಿಸುವುದು. ಗಾಂಧಿ ಈಗ ಹಳಸಿದ ಹಾಲು. ಬೆಕ್ಕು ಮುಟ್ಟದು. ಚೆಲ್ಲಲು ಆಗದು. ಅದಕ್ಕೆ ಗುಡಿ ಎನ್ನುವ ತಂಗಳು ಪೆಟ್ಟಿಗೆಯಲ್ಲಿ ಕೂಡಿ ಹಾಕಿದರಾಯಿತು!  ರಾಮ ಬುದ್ಧರ ಗತಿಯೂ ಇದೆ ಆಗಿದೆ. ಸಹಸ್ರಮಾನಗಳಿಂದ ನಡೆದುಕೊಂಡ ಬಂದ ಭಾರತೀಯ ಪದ್ಧತಿಯೆ ಇದು! 

ಗಾಂಧಿಗೆ ನೊಬೆಲ್ ಪಾರಿತೋಷಕ ಕೊಡಲಿಲ್ಲ ಎಂದು ಹಲವರು ಹಂಬಲಿಸಿ ಕೊರಗುತ್ತಿದ್ದರೆ, ನೋಬೆಲ್ ಕಮಿಟಿ ತಮ್ಮ ತಪ್ಪಿಗಾಗಿ ಒಳಗೇ ತಳಮಳಿಸುತ್ತಿದೆಯೆ? ಆಕಸ್ಮಾತ್ತಾಗಿ ತಪ್ಪಾಗಿದೆ ಎನ್ನುವ ಹೇಳಿಕೆ ಬಂದರೂ ನಂಬಲು ಅಸಾಧ್ಯ. ಗಾಂಧಿಯ ಹೆಸರು, ಇನ್ನೂ ಜೀವಂತವಾಗಿ ಇದ್ದಾಗ,  ಒಮ್ಮೆ ಅಂತೂ ಸಾಯುವ ಕೆಲ ದಿನಗಳ ಮುಂಚೆ, ಐದು ಬಾರಿ ನೊಬೆಲ್ ಕಮಿಟಿಯ ಮುಂದೆ ಬಂದಿತ್ತು. ಪ್ರತಿ ಬಾರಿಯೂ, "ಗಾಂಧಿ ನಿಜವಾದ ರಾಜಕಾರಣಿಯೂ ಅಲ್ಲ, ಸಮಾಜ ಸೇವಕನೂ ಅಲ್ಲ" ಎಂದು ಪ್ರಶಸ್ತಿಯನ್ನು ಕಮಿಟಿ ನಿರಾಕರಿಸಿತು. ಕಮಿಟಿಯ ಆ ನಿಲುವಿನಲ್ಲಿ ಈಗಲೂ ಬದಲಾವಣೆ ಆಗಿಲ್ಲ. ಆದರೂ ಏನು ಪ್ರಯೋಜನ? ಸತ್ತವರಿಗೆ ನೋಬೆಲ್ ಪ್ರಶಸ್ತಿ ಕೊಡುವುದಂತೂ ಇಲ್ಲ. ಕೊಟ್ಟರೂ ಈಗ ಅದಕ್ಕೆ ಏನು ಬೆಲೆ? ೧೯೪೮ರಲ್ಲಿ ಗಾಂಧಿ ತೀರಿದ ನಂತರ ನೊಬೆಲ್ ಕಮಿಟಿ ಆ  ವರ್ಷ "ಅರ್ಹರಾದವರು ಯಾರೂ ಬದುಕಿಲ್ಲ" ಎಂದು ಯಾರಿಗೂ ಪ್ರಶಸ್ತಿಯನ್ನು ಕೊಡಲಿಲ್ಲ. ಅದೆ ಅವರು ಗಾಂಧಿಗೆ ತೋರಿದ ಮರ್ಯಾದೆ ಎಂದುಕೊಂಡಿದ್ದಾರೆ. ಬೇರೆಯವರಿಗೆ ಪ್ರಶಸ್ತಿ ಕೊಡದೆ ಮಾಡಿದ ಅವಮರ್ಯಾದೆ ತಮಗೆ ಹೇಗೆ ಮರ್ಯಾದೆ ಆಗುತ್ತದೆ ಎಂದು ಗಾಂಧಿಯೆ ಇವರನ್ನು ಪ್ರಶ್ನಿಸುತ್ತಿದ್ದರು. ನೆನಪಿಸಿಕೊಳ್ಳಿ, ರಿಚರ್ಡ್ ಅಟೆನ್‌ಬರೋಗೆ ಗಾಂಧಿ ಚಿತ್ರ ನಿರ್ಮಿಸಲು ಸ್ಫೂರ್ತಿ ಕೊಟ್ಟ ಗಾಂಧಿಯ ಈ ನುಡಿ, "ಬೇರೆಯವರ ಅವಮಾನದಲ್ಲಿ ತನ್ನ ಸನ್ಮಾನ ಇದೆ ಎನ್ನುವ ಮನುಷ್ಯನ ನಡತೆ ನನಗೆ ಒಂದು ಬಿಡಿಸದ ರಹಸ್ಯ." ಇನ್ನು ಮೇಲೆ, ನೊಬೆಲ್ ಕಮಿಟಿ ತನ್ನ ಸಂವಿಧಾನವನ್ನು ಬದಲಿಸಿ ಗಾಂಧಿಗೆ ಮರಣೋತ್ತರ ಪ್ರಶಸ್ತಿಯನ್ನು ಕೊಟ್ಟರೆ ಅದಕ್ಕಿಂತ ಹೆಚ್ಚಿನ ಅವಮಾನ ಗಾಂಧಿಗೆ ಇಲ್ಲ, ನೊಬೆಲ್ ಕಮಿಟಿಗೆ ಇಲ್ಲ. ಎಲ್ಲ ಪ್ರಶಸ್ತಿಗಳನ್ನು ಮೀರಿ ನಿಂತ ಗಾಂಧಿಗೆ ಇಂಥ ಯಾವ ಮರ್ಯಾದೆಗಳೂ ಬೇಕಿಲ್ಲ. ಪ್ರಶಸ್ತಿ ಕೊಟ್ಟಿದ್ದರೆ ಅದರ ಘನತೆ ಹೆಚ್ಚುತ್ತಿತ್ತು. ಅದಕ್ಕೆ, ನೊಬೆಲ್ ಕಮಿಟಿ, ಒಂದು ರೀತಿಯಿಂದ, ಪ್ರಶಸ್ತಿ ಕೊಟ್ಟು ಗಾಂಧಿಗೆ ಅವಮಾನ ಮಾಡಲಿಲ್ಲವಲ್ಲ ಎಂದುಕೊಳ್ಳಬೇಕು. ಗಾಂಧಿಯನ್ನು ನಿಜವಾಗಿ ಅರ್ಥ ಮಾಡಿಕೊಂಡು ಇದಕ್ಕಾಗಿ ಕೊರಗುವುದನ್ನು ನಿಲ್ಲಿಸಬೇಕು. 

ಗಾಂಧಿಯ ಸಾಧನೆ ಆದರ್ಶಗಳ  ತಪ್ಪು ತಿಳುವಳಿಕೆಗಳೆ ಈ ಆಭಾಸಗಳಿಗೆ ಕಾರಣ. ಗಾಂಧಿಯನ್ನು ತಿಳಿದುಕೊಂಡವರು ಇದ್ದಾರೆ. "ಬದಲಾವಣೆಗೆ ಅಹಿಂಸಾತ್ಮಕವಾದ ಹೊಸ ಮಾರ್ಗವನ್ನೆ ತೊರಿಸಿಕೊಟ್ಟ ಗಾಂಧಿಗೆ ಸಲ್ಲಿಸಿದ ಮನ್ನಣೆ ಎಂದು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ" ಎಂದು ನೊಬೆಲ್ ಪುರಸ್ಕಾರದ ಸಮಯದಲ್ಲಿ ದಲಾಯಿ ಲಾಮ ಹೇಳಿದ್ದು. "ಮನುಕುಲದ ವಿಕಾಸವಾಗಬೇಕಾದರೆ ಗಾಂಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗಾಂಧಿಯನ್ನು ಕಡೆಗಣಿಸುವುದೆ ನಮ್ಮ ವಿಪತ್ತು" ಎಂದು ಮಾರ್ಟಿನ್ ಲೂಥರ್ ಕಿಂಗ್‌ಗೆ ತಿಳಿದಿತ್ತು. ಮೇರಿ ಕಿಂಗ್ ಬರೆಯುತ್ತಾಳೆ[2], "ಗಾಂಧಿ ಎಂಟು ಘೋರ ಸಂಘರ್ಷಗಳ ಪುರೋಗಾಮಿಯಾಗಿದ್ದರು: ಕುಲಾಧಾರಿತ ಸಾಮಾಜಿಕ ವ್ಯವಸ್ಥೆಗಳ ವಿರುದ್ಧ, ವಸಾಹತುಶಾಹಿ ವಿರುದ್ಧ, ಜಾತಿಪದ್ಧತಿಯ ವಿರುದ್ಧ, ಆರ್ಥಿಕ (ಬಡವರ) ಶೋಷಣೆಯ ವಿರುದ್ಧ, ಧಾರ್ಮಿಕ ಅಥವ ಜನಾಂಗೀಯ ಪರಮಾಧಿಕಾರದ ವಿರುದ್ಧ, ಹೆಂಗಸರ ಸಮಾನತೆಗಾಗಿ, ಪ್ರಜಾರಾಜ್ಯಕ್ಕಾಗಿ, ಮತ್ತು ಅಹಿಂಸಾ ಮಾರ್ಗಗಳಿಗಾಗಿ." ಮೇರಿ ಕಿಂಗ್ ಗುರುತಿಸಿರುವ ಈ ಸಂಘರ್ಷಗಳು ಈಗಲೂ ನಡೆಯುತ್ತಿವೆ. ಎಲ್ಲಿಯ ವರೆಗೆ ಅಸತ್ಯ, ಅಸಮಾನತೆ, ಹಿಂಸೆ, ಬಲವಂತ ಅನಿಕೇತತೆ, ಮತ್ತು ರಾಜಕೀಯ, ಆರ್ಥಿಕ, ಸಾಮಾಜಿಕ ಶೋಷಣೆಗಳು ಹಿಂಗವೊ ಅಲ್ಲಿಯ ವರೆಗೆ ಗಾಂಧಿ ಹಾಕಿಕೊಟ್ಟ ಮಾರ್ಗ ಆದರ್ಶಗಳು ಪ್ರಸ್ತುತವಾಗಿರುತ್ತವೆ.

ಗಾಂಧೀಜಿ ಇಂದಿಗೂ ಪ್ರಸ್ತುತ ಎಂದು ಮನದಟ್ಟು ಮಾಡಿಕೊಡುತ್ತ ಶ್ರೀ ಕೆ.ಎಸ್. ದೇಶಪಾಂಡೆಯವರು ಗಾಂಧೀಜಿಯ ಕ್ರಾಂತಿಕಾರಕ ಹಿನ್ನೆಲೆಯಲ್ಲಿ ಅವರ ಸಾಧನೆಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ[3]:

  • ಅ) ಸಾಮ್ರಾಟ್ ಅಶೋಕನ ತರುವಾಯ ಪ್ರಪಂಚದ ಇತಿಹಾಸದಲ್ಲೆ ಸತ್ಯ ಅಹಿಂಸೆಗಳ ಭದ್ರ ನೆಲೆಗಟ್ಟಿನ ಮೇಲೆ, ಜೀವನದ ಎಲ್ಲ ಮಹತ್ವದ ಕ್ಷೇತ್ರಗಳಲ್ಲಿ, ಅದರಲ್ಲೂ, ರಾಜಕೀಯ ರಂಗದಲ್ಲಿ ಒಂದು ಮಹಾಕ್ರಾಂತಿಯನ್ನೆ ಜರುಗಿಸಿದರು.
  • ಆ) ರಾಜಕಾರಣವನ್ನು ಧಾರ್ಮಿಕ, ನೈತಿಕ ಮಟ್ಟಕ್ಕೇರಿಸಿ ಪವಿತ್ರಗೊಳಿಸುವದರ ಜೊತೆಗೆ, ಜೀವನದ ಪ್ರತಿ ರಂಗಕ್ಕೂ ನೈತಿಕ, ಆಧ್ಯಾತ್ಮಿಕ, ಸದಭಿರುಚಿಯ ಅಡಿಪಾಯ ಅವಶ್ಯವೆಂದು ಪ್ರತಿಪಾದಿಸಿ, ಸರ್ವರೂ ಸಪ್ತ ಮಹಾಪಾತಕಗಳಿಂದ ಸ್ವತಂತ್ರರಾಗಿರಬೇಕೆಂದು ಪ್ರತಿಪಾದಿಸಿ, ಅಂಥ ಆದರ್ಶ ನಮ್ಮ ಮುಂದೆ ಇಟ್ಟರು.
  • ಇ) ಅನೇಕ ಸಂವತ್ಸರಗಳಿಂದ ಪರಕೀಯರ ಶೋಷಣೆಗಳಿಗಾಗಿ ತಮ್ಮ ಅಂತಃಸತ್ವವನ್ನೇ ಕಳೆದುಕೊಂಡಿದ್ದ ಭಾರತೀಯರ ಹೃದಯದಲ್ಲಿ ದೇಶಪ್ರೇಮ, ಆತ್ಮಾಭಿಮಾನ, ಅಭಯದ ಕಿಡಿಯನ್ನು ಹೊತ್ತಿಸಿ ತಾವೆಲ್ಲ ಒಂದೇ ಒಂದು ರಾಷ್ಟ್ರದ ಪ್ರಜೆಯೆಂಬ ಮಾನಸಿಕ ಐಕ್ಯತೆಯ ವರ ದಯಪಾಲಿಸಿದರು. ತನ್ಮೂಲಕ ಹಲವಾರು ಭಾಷೆ, ಭಿನ್ನಾಭಿನ್ನ ಮತ, ಸಹಸ್ರಾರು ಆಚಾರ-ವಿಚಾರಗಳಿಂದ ಹೋಳುಹೋಳಾಗಿದ್ದ ಭಾರತೀಯರನ್ನು ಒಂದಾಗಿ ಬೆಸೆದರು. 
  • ಈ) ಬಡಬಗ್ಗರು, ದೀನ ದಲಿತರು, ಸಮಾಜದ ಅತ್ಯಂತ ಕೆಳಗಿನ ಅಂತಸ್ತಿನಲ್ಲಿದ್ದವರೊಂಡನೆ ಸ್ವತಃ ತಾವು ತಾದಾತ್ಮ್ಯ ಹೊಂದಿ, ದೇಶದ ಎಲ್ಲ ಅಂತಸ್ತಿನ ಪ್ರಜೆಗಳು ಸ್ವಾತಂತ್ರ್ಯ, ಸಮತೆ, ಸಾಕಷ್ಟು ಆರ್ಥಿಕ ಬಲದಿಂದೊಡಗೂಡಿದ ಜೀವನ, ಹಾಗೂ ಬಂಧುತ್ವ ಅನುಭವಿಸಿದಾಗಲೇ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆಂದು ನಮ್ಮನ್ನೆಲ್ಲ ಉದ್ದೀಪಿಸಿದರು. 
  • ಉ) ಸ್ವದೇಶಿ, ಸ್ವಾವಲಂಬನೆ, ಶರೀರ ಶ್ರಮ, ವೃತ್ತಿ ಗೌರವ, ಮೊದಲಾದ ಮೂಲಭೂತ ಪಾಠಗಳನ್ನು ನಮಗೆ ಕಲಿಸಿ ಈ ತತ್ವಗಳ ಆಧಾರದ ಮೇಲೆ ಜೀವನ ನಡೆಸುವದೇ ದೇವರ ಆರಾಧನೆ ಕೈಕೊಂಡಂತೆ ಎಂಬ ಕರ್ಮಯೋಗದ ಮಾರ್ಗವನ್ನು ನಮ್ಮ ಮುಂದಿಟ್ಟರು; ಮುಂದಾಗಿ ಅವರು ನಮಗೆ ಸಂತೋಷ, ಸೌಖ್ಯ ಪ್ರಾಪ್ತವಾಗುವದು, ವಸ್ತು ಸಂಗ್ರಹದಿಂದಲ್ಲ, ಹೆಮ್ಮೆಯಿಂದ ಶ್ರದ್ಧೆಯಿಂದ ಕೈಕೊಂಡ ಕೆಲಸದಿಂದ ಎಂದು ಖಾತ್ರಿ ಮಾಡಿ ಕೊಟ್ಟರು. 
  • ಊ) ಜನಸೇವೆಯೇ ಜನಾರ್ದನ ಸೇವೆಯಾದುದರಿಂದ ಎಲ್ಲರೂ ಸ್ವಬಾಂಧವರ, ಶ್ರೀಸಾಮಾನ್ಯರ, ಸೇವೆಯಲ್ಲಿ ಪರೋಪಕಾರ ಬುದ್ಧಿಯಿಂದ ತೊಡಗಬೇಕೆಂದು ಬೋಧಿಸಿ, ಸ್ವತಃ ತಾವೇ ಜೀವನದುದ್ದಕ್ಕೂ, ಯಾವುದೇ ಫಲಾಪೇಕ್ಷೆಯಿಲ್ಲದೆ ತ್ಯಾಗದ ಪರಾಕಾಷ್ಠೆ ಮೆರೆದು, ಲೋಕ ಸೇವೆಯಲ್ಲಿ ತಮ್ಮ ಜೀವನವನ್ನು ಶ್ರೀಗಂಧದಂತೆ ತೇಯ್ದುಕೊಂಡರು. 
  • ಎ) ಸರ್ವ ಧರ್ಮ ಸಮಭಾವದ ದಿವ್ಯ ಪಾಠ ನಮಗೆ ಕಲಿಸಿ, "ವಸುಧೈವ ಕುಟುಂಬಕಮ್" ಮಂತ್ರ ಬೋಧಿಸಿ, ನಾವೆಲ್ಲ ಒಂದೇ ದೇವರ ಮಕ್ಕಳೆಂಬ ಮಾತನ್ನು ಮನದಟ್ಟಾಗಿ ಮಾಡಿಕೊಟ್ಟರು. 
  • ಏ) ಭರತಖಂಡದ ಸ್ವಾತಂತ್ರ್ಯದ ರೂವಾರಿಯಾಗಿ, ಪರದಾಸ್ಯದಲ್ಲಿ ತೊಳಲಾಡುತ್ತಿದ್ದ ಏಶಿಯ, ಆಫ್ರಿಕ, ಲ್ಯಾಟಿನ್ ಅಮೇರಿಕೆಯಲ್ಲಿಯ ನೂರಾರು ರಾಷ್ಟ್ರಗಳ ಸ್ವಾತಂತ್ರ್ಯ ಸೂರ್ಯೋದಯದ ನಾಂದೀ ಹಾಡಿದರು. 
  • ಐ) ದ್ವೇಷ ದಹಕ, ಪ್ರೇಮ ಪ್ರವರ್ಧಕ ಎಂಬ ತತ್ವ ನಮಗೆಲ್ಲ ಉಪದೇಶಿಸಿ, ಸ್ವತಃ ತಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಿದರು. 
  • ಒ) ಇವಕ್ಕೆಲ್ಲ ಮಿಗಿಲಾಗಿ ಒಬ್ಬ ಶ್ರೀಸಾಮಾನ್ಯ, ಕಠೋರ ತಪಸ್ಸು ಗೈದು, ತನ್ನನ್ನೇ ತಾನು ಕಡೆದುಕೊಂಡು, ಶ್ರೇಷ್ಠ ಮಾನವನಾಗಿ ಊರ್ಜಿತಗೊಂಡು, ಒಂದು ದೇಶದ ಇತಿಹಾಸವನ್ನು ಬದಲಿಸುವ ಶಕ್ತಿ ಪಡೆದುಕೊಂಡು, ವಿಶ್ವಮಾನವನಾಗಿ ಕಂಗೊಳಿಸಲು, ಸಾಧ್ಯ ಎಂಬುದನ್ನು ತಮ್ಮ ಉದಾಹರಣೆಯಿಂದ ಪ್ರದರ್ಶಿಸಿದರು. 
  • ಓ) ವ್ಯಕ್ತಿ ವ್ಯಕ್ತಿಗಳ ನಡುವಣ ಭಿನ್ನಾಭಿಪ್ರಾಯ, ರಾಷ್ಟ್ರ ರಾಷ್ಟ್ರಗಳ ನಡುವಣ ಮತಭೇದ, ಕಲಹ, ನಿವಾರಿಸಿಕೊಳ್ಳಲು ಹಿಂಸೆ, ಯುದ್ಧ ಒಂದೇ ಮಾರ್ಗವಲ್ಲ; ಹಿಂಜರಿಯುವದು ಅಥವಾ ಶರಣಗತರಾಗುವದು ಉಚಿತ ಮಾರ್ಗಗಳಲ್ಲ. ಇವಕ್ಕೆಲ್ಲ ಉನ್ನತವಾದುದು ಶ್ರೇಷ್ಠವಾದುದು ಮಾನವನ ಅಂತಸ್ತಿಗೆ ಅನುಗುಣುವಾದ ಸೌಹಾರ್ದದ ಸಮೃದ್ಧಿ ಹೊಂದಿದ ಆಧ್ಯಾತ್ಮಿಕ ಮಾರ್ಗ ರಾಜಮಾರ್ಗವಾಗಿ ನಮ್ಮನ್ನು ಸ್ವಾಗತಿಸುತ್ತಿದೆ. ಆ ಮಾರ್ಗವನ್ನು ಅನುಸರಿಸೋಣ ಎಂದು ಹೇಳಿ, ತಾವು ಸ್ವತಃ ಆ ಮಾರ್ಗದ ಮೇಲೆ ಕ್ರಮಿಸಿ ಮೇಲ್ಪಂಕ್ತಿ ಹಾಕಿ, ಮಹರ್ಷಿ ಶ್ರೀ ಅರವಿಂದರ ದಿವ್ಯ ಜೀವನದ (ಲೈಫ್ ಡಿವೈನ್) ಆದರ್ಶ ನಮ್ಮ ಮುಂದಿಟ್ಟರು. 

"ಪ್ರಪಂಚದ ಮೊಗಸಾಲೆಯುದ್ದಕ್ಕೆ ನಾವು ಕಣ್ಣಾಡಿಸಿದಾಗ ಬುದ್ಧ, ಏಸು, ಬಸವ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಇವರ ತರುವಾಯ ನಮಗೆ ಎಲ್ಲ ದೃಷ್ಟಿಯಿಂದ ಎತ್ತರವಾಗಿ ಕಂಗೊಳಿಸುವ ಮಹನೀಯರೆಂದರೆ ಗಾಂಧೀಜಿ ಎಂಬುದು ಖಚಿತವಾಗುತ್ತದೆ." 

ಕೊನೆಯದಾಗಿ ಗಾಂಧಿ ಹೇಳಿದ್ದು ಏನು? "ನನ್ನ ಜೀವನವೆ ನನ್ನ ಸಂದೇಶ."  ಗಾಂಧಿಯ ಈ ಒಂದು ಮಾತನ್ನು ಅರ್ಥ ಮಾಡಿಕೊಂಡರೆ ಸಾಕು.  ಗಾಂಧಿಯ ಬಗ್ಗೆ ರೋಚಕ ಕತೆ ಕಟ್ಟುವುದಾಗಲಿ, ತಾತ್ವಿಕವಾಗಿ ವಿಶ್ಲೇಷಿಸುವುದಾಗಲಿ, ಬೌದ್ಧಿಕ ಚೌಕಟ್ಟಿನಲ್ಲಿ ಹಿಡಿದಿಡುವುದಾಗಲಿ ಬೇಕಿಲ್ಲ. ಪ್ರಶಸ್ತಿಗಳಿಗೆ ಬೆಲೆ ಇಲ್ಲ. ಗುಡಿಯಲ್ಲಿ ಕೂಡಿಸಿ ಮಂಗಳಾರತಿ ಮಾಡುವುದಂತೂ ಖಂಡಿತ ಹೊಲ್ಲ.
___________________

[1] http://thatskannada.oneindia.in/news/2007/10/18/video-temple-dedicated-to-gandhi.html
[2] ಮಹಾತ್ಮ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜು., ಯುನೆಸ್ಕೊ ೧೯೮೮
[3] ಪ್ರೊ. ಕೃಷ್ಣ ಶ್ರೀಪಾದ ದೇಶಪಾಂಡೆ, ಗಾಂಧೀಜಿ ಎಂದೆಂದಿಗೂ ಪ್ರಸ್ತುತ, ರಾ.ಹ.ದೇ. ಸಾಂಸ್ಕೃತಿಕ ಕೇಂದ್ರ, ಮಾಳಮಡ್ಡಿ, ಧಾರವಾಡ, ೨೦೦೪

 


ತಾಗುಲಿ : Gandhi, Prof. S.K. Deshapande,  Vishweshwar Dixit

Gandhi did not want to become any thing-including Mahatma. Like any other youth of India, he was innocent, ignorant, not well built and afraid of evil spirits, etc etc. We are using for our gains individually and in the national interest. Because of him-or his instance alone we Got independence to our country. Otherwise we would have suffered as slaves with out understanding our own teachings. (Vasudhaiva kutumbakam) Like any one in our country, he also advised to pursue the foreign degree in law of course. At the tender age of 17 or so he did not know any thing about india neither BhagavadGita or any Epics, except hearing the hymes his mother used to sing while performing Daily poojas. Like every one faces when he or she try to face the world after leaving home, At England he came across some christians, clergy, who questioned him tried to know what is said in Hindu scriptures. He was shocked and not able to say anything. So he consulted some Indian friends like Sir Phiroz shaw Mehta a leading advocate in England, and stared visiting libraries. After studying for a week or so so learnt that there is one concise text-Bhagawadgita which tells about our Epics. He could discuss with his christian friends, and this made him to understand how much is unknown to him. The learning started apart from his Text books of law and humanity etc;
The real pain he experienced while travelling in South African train, when he was driven out from his compartment. That was the beginning which changed his vision of the world and ultimately he changed the destiny of his mother India. Although India was fighting against the British rule from 1857, there was no organised fight. Later all the so called fights were short-lived whether Tilak, Gokhale, Savarkar or Bose and others. But the real strong and sound leader ship was available from Gandhi alone. Because he was knowing what for he is fingering and the British policies were understood and he was able to counter fight and for that he sacrificed his life and his family life was ruined, Children never got good education, and lots of metal torchures were experienced. His ideals principles and self belief and above all truth and truth alone was his great strength of his leadership. Finally the circumstances like change of Government to Labour Party and the ill effects of world war and its impact on Britain etc helped to gain Independence. Any way he was the forerunner in this great act. I call him Mahatma and don't bother any one calls him or not.

ಗಾಂಧಿಯವರ ಮೂರು ಮುಖ್ಯ ಆಯುಧಗಳು:
೧. ವಸುದೈವ ಕುಟುಂಬಕಮ್
೨. ಒಂದು ಕೆನ್ನೆಗೆ ಹೊಡೆದರೆ ತೋರಿಸು ಇನ್ನೊಂದು ಕೆನ್ನೆಯನು
೩. ಸರ್ವ ಧರ್ಮ ಸಹಿಷ್ಣುವಿಕೆ
ಸಂಭಂದಪಟ್ಟ ಎಲ್ಲರೂ ಇವುಗಳಲ್ಲಿ ಸಮಾನ ನಂಬಿಕೆ ಇಟ್ಟಾಗ ಮಾತ್ರ ಉಪಯೋಗಿಸಲ್ಪಡಬಹುದಾದ ಅಸ್ತ್ರ. ಇಲ್ಲವಾದಲ್ಲಿ ದುರುಪಯೋಗಪಡಿಸಿಕೊಳ್ಳಲು ಸುವರ್ಣಾವಕಾಶ ಶತ್ರುಗಳಿಗೆ.

ಲೇಖನ ಚೆನ್ನಾಗಿದೆ. ಆದರೆ, ಗಾಂಧಿಯವರ ತಾತ್ವಿಕ ಸೋಲುಗಳನ್ನು ದಾಖಲಿಸುವುದರಲ್ಲಿ ವಿಫಲವಾಗಿದೆ. ದೇವಸ್ಥಾನದ ಒಳಗೆ ಪೂಜಿಸುವುದನ್ನು ಟೀಕಿಸುತ್ತಾ, ಹೊರಗೆ ಅವರಿಗೆ ಪೂಜನೀಯತೆ ತರುವುದಕ್ಕೆ ಬೇಕಾದ ಸಾಮಗ್ರಿಯನ್ನು ಯಥೇಚ್ಚವಾಗಿ ಒದಗಿಸಿದೆ.

ನನ್ನ ಪ್ರಕಾರ, ಮೂಲತಃ ನಾವು ಎಲ್ಲಾ ವಿಷಯಗಳಿಗೂ ಮಾರ್ಗದರ್ಶನ ಕೋರುತ್ತ ಗಾಂಧಿಯವರ ಕೈ ಹಿಡಿದು ನೆಡೆಯಲು ಆರಂಭಿಸಿದ್ದೇ ಮೊದಲನೆಯ ದೊಡ್ಡ ತಪ್ಪು. ಏಕೆಂದರೆ, ಅವರೇ ಒಪ್ಪಿಕೊಂಡಿರುವ ಹಾಗೆ ಅವರು ಒಬ್ಬ ಪ್ರಯೋಗಾತ್ಮಕ ವ್ಯಕ್ತಿ, ಇನ್ನೂ ಸತ್ಯದ ಪೂರ್ಣದರ್ಶನ ಆಗಿಲ್ಲದವರು. ಹಾಗಾಗಿ, ಒಬ್ಬ ವ್ಯಕ್ತಿಯ ಮಟ್ಟಿಗಾದರೆ ಅಂಥವರ ಕೈ ಹಿಡಿದು ನಡೆದರೆ ಆಗುವ ನಷ್ಟ ಹೇಗಾದರೂ ತೂಗಿಸಬಹುದು. ಆದರೆ, ಒಂದು ದೇಶ, ಅದರಲ್ಲೂ ಭಾರತದಂತಹ ವಿಚಾರಸಮೃದ್ಧ ದೇಶ, ಅಂತಹ ದುಸ್ಸಾಹಸ ಮಾಡಿದ್ದು ಸರ್ವಥಾ ಮಾನ್ಯವಲ್ಲ. ಗಾಂಧಿಯ ಯಾವ ತತ್ವ ಇಂದು ಜೀವಂತವಾಗಿದೆ ಎಂದು ವಿಚಾರಿಸಿದಾಗ, ಅವರ ವಿಚಾರಗಳ ಹಿಂದೆ ಅಡಗಿಕೊಂಡು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವವರನ್ನು ಎಲ್ಲೆಡೆಯೂ ಕಾಣುತ್ತೇವೆ. ಡಿವಿಜಿಯವರ ’ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು’ ಎನ್ನುವುದರ ವೈರುಧ್ಯ ಗಾಂಧಿಯವರ ಜೀವನದಲ್ಲಿ ಕಾಣುತ್ತೇವೆ - ಯಾವ ವ್ಯಕ್ತಿ ತನ್ನ ಮಗನಿಗೇ ಸಾಧಾರಣ ಪಿತ ಕೂಡ ಆಗಲು ಸಾಧ್ಯವಾಗಲಿಲ್ಲವೋ, ಅವರನ್ನು ರಾಷ್ಟ್ರಕ್ಕೇ ಪಿತ ಎಂದು ಒಪ್ಪಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದಾಯಿತು. ಹತ್ತಾರು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ನಮ್ಮ ದೇಶಕ್ಕೆ ಅವರನ್ನು ಪೂರ್ಣಮನಸ್ಸಿನಿಂದ ’ರಾಷ್ಟ್ರಪಿತ’ ಎಂದು ಒಪ್ಪಿಕೊಳ್ಳಲು ಬಹಳ ಕಷ್ಟ. ಅವರು ಪಟೇಲ್, ಅಂಬೇಡ್ಕರ್, ಬೋಸ್ ಅಂತಹವರನ್ನು ಕಡೆಗಣಿಸಿ, ನೆಹರೂ ಅವರನ್ನು ತಲೆಯ ಮೇಲೆ ಹೊತ್ತು ಮೆರೆದಿದ್ದು ನಮ್ಮ ದೇಶದಲ್ಲಿ ಇಂದಿನವರೆಗೂ ಆಗಿರುವ ದುಷ್ಟಶಾಸನಗಳಿಗೆ ಮುನ್ನುಡಿಯೆಂದೇ ಭಾವಿಸಬೇಕು. ನೀವು ನಿಮ್ಮ ಲೇಖನದಲ್ಲಿ ಅಹಿಂಸೆಯ ಬಗ್ಗೆ ಮಾತನಾಡಿದ್ದೀರಿ. ನಮ್ಮ ಸನಾತನ ಧರ್ಮದ ಅಹಿಂಸೆಯ ಕಲ್ಪನೆಗೆ ಹಾಗೂ ಗಾಂಧಿಯವರ ಅಹಿಂಸೆಯ ಕಲ್ಪನೆಗೆ ಸಂಬಂಧ ಕಲ್ಪಿಸಲೂ ಸಾಧ್ಯವಿಲ್ಲ. ಎಲ್ಲ ಸಂದರ್ಭಗಳಲ್ಲಿಯೂ ಅಹಿಂಸೆಯೇ ಪ್ರಧಾನ ಮಾರ್ಗವಾಗಿದ್ದಿದ್ದರೆ, ಭಗವಂತನ ಯಾವ ಅವತಾರದ ಅಗತ್ಯವೂ ಇರಲಿಲ್ಲ. ನನಗೆ ಸ್ವಲ್ಪವೂ ಅರ್ಥವಾಗದ ಒಂದು ವಿಷಯವೆಂದರೆ, ಅಹಿಂಸೆಯ ಬಗ್ಗೆ ವಿಚಿತ್ರ ಕಲ್ಪನೆ ಹೊಂದಿದ್ದ ಗಾಂಧಿಯವರಿಗೆ ’ಭಗವದ್ಗೀತೆ’ ಅತ್ಯಂತ ಹೃದಯಕ್ಕೆ ಹತ್ತಿರವಾದ ಪುಸ್ತಕವಾಗಿದ್ದುದು. ಎಲ್ಲರಿಗೂ ತಿಳಿದಿರುವ ಹಾಗೆ, ಅಜ್ಞಾನಕ್ಕೆ ಒಳಗಾಗಿ ’ಶಸ್ತ್ರತ್ಯಾಗ’ ಮಾಡಿದ್ದ ಅರ್ಜುನನಿಗೆ ತಪ್ಪಿನ ಮನವರಿಕೆ ಮಾಡಿಕೊಟ್ಟು ಮತ್ತೆ ’ಶಸ್ತ್ರಗ್ರಹಣ’ ಮಾಡುವ ಹಾಗೆ ಮಾಡಿದ ಭಗವಂತನ ಉಪದೇಶವೇ ಗೀತೆಯ ಸಾರ. ಎಲ್ಲಾ ಸಂದರ್ಭಗಳಲ್ಲಿಯೂ ಅಹಿಂಸೆಯ ತತ್ತ್ವವೇ ಪರಮಶ್ರೇಷ್ಟ, ಅದೇ ಗ್ರಾಹ್ಯ ಎಂದಿದ್ದರೆ ಗೀತೆಯ ತತ್ತ್ವವನ್ನು ಒಪ್ಪಲು ಸಾಧ್ಯವಿಲ್ಲ. ಇದು, ನಾನು ಮೇಲೆ ಹೇಳಿದ ಹಾಗೆ, ಒಬ್ಬ ಪ್ರಯೋಗಾತ್ಮಕ ವ್ಯಕ್ತಿಯ ಗೊಂದಲಮಯ ವಿಚಾರ. ಆ ಮನೋಧರ್ಮದವರನ್ನು ಸದಾಸರ್ವದಾ ಆಶ್ರಯಿಸುವುದೆಂದರೆ, ಒಬ್ಬ ಕಣ್ಣಿಲ್ಲದ ವ್ಯಕ್ತಿಯ ಕೈ ಹಿಡಿದು ದಾರಿ ಅರಸಿದಂತೆ ಎನ್ನುವುದು ನನ್ನ ವಿನಮ್ರ ಭಾವನೆ.

ನಾನು ಗಾಂಧಿಯವರ ಬಗ್ಗೆ 1983 ರಿಂದ ಕುತೂಹಲ ಬೆಳಸಿಕೊಂಡು ಹಲವಾರು ಪುಸ್ತಕಗಳನ್ನು ಓದಿದ್ದೇನೆ. ಒಬ್ಬ ವ್ಯಕ್ತಿಯಾಗಿ ಅವರ ಬಗ್ಗೆ ಬಹಳ ಆದರವಿದೆ. ಆದರೆ, ತನ್ನ ಪ್ರಯೋಗಾತ್ಮಕತೆಯನ್ನು ದೇಶದ ಭವಿಷ್ಯದ ವಿಷಯದಲ್ಲೂ ಆನಗತ್ಯವಾಗಿ ವಿಸ್ತರಿಸಿ, ದೇಶದ ಆಡಳಿತಾತ್ಮತೆ ಪರಿಪಕ್ವವಾಗುವುದಕ್ಕೆ ವಿಳಂಬವಾಗಲು ಕಾರಣರಾದ ಗಾಂಧಿಯವರ ಬಗ್ಗೆ ಅಸಮಾಧಾನವೂ ತುಂಬಾ ಇದೆ.

ಏನಂತೀರಿ?

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.