ಅವನತಿಯತ್ತ ಭಾವನಾತ್ಮಕ ಸಂಬಂಧ : ಯಾಂತ್ರಿಕವಾಗುತ್ತಿರುವ ದೀಪಾವಳಿ ಆಚರಣೆ

[ಇಂದು, ಸಮಾಜ ಬೆಳಕಿನ ವೇಗದಲ್ಲಿ ಬದಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಹಬ್ಬಗಳ ಆಚರಣೆಗಳೂ ಬದಲಾಗುವುದು ಸಹಜ. ಆದರೆ ಭಾವನಾತ್ಮಕ ಬೆಸುಗೆಗಳು ಶಿಥಿಲವಾಗಿ, ಮಾನವೀಯ ಸಂಬಂಧಗಳು ಕಳಚುತ್ತ, ದೇಶವೇ ಒಂದು ದೊಡ್ಡ ವ್ಯವಹಾರವಾಗುತ್ತಿದೆ.  ಮುಂದಿನ ದಿನಗಳಲ್ಲಿ ಹಬ್ಬದ ಆಚರಣೆ ಸಂಪೂರ್ಣ ಯಾಂತ್ರಿಕವಾಗುವುದರಲ್ಲಿ ಅನುಮಾನ ಇಲ್ಲ. ಇದಕ್ಕೆ ಕಾರಣಗಳು ಏನು?   ಹಾಗಾಗದಂತೆ ನೋಡಿಕೊಳ್ಳುವ ಜವಾಬುದಾರಿ ಯಾರದು?] 

*** ವಿವೇಕ ಬೆಟ್ಕುಳಿ ***

ವರ್ಷದಿಂದ ವರ್ಷಕ್ಕೆ ಸಾಂಪ್ರದಾಯಿಕ ದೀಪಾವಳಿ ಹಬ್ಬದ ಆಚರಣೆಯ ಉತ್ಸಾಹ ಕಡಿಮೆಯಾಗುತ್ತಿರುವುದು. ೨೫-೩೦ ವರ್ಷದ ಹಿಂದಿನ ದೀಪಾವಳಿಯ ಆಚರಣೆ ಇಂದು ಇಲ್ಲವಾಗಿದೆ. ಮುಂಚಿನ ರೀತಿ ಹಬ್ಬದ ತಯಾರಿಯೂ ಇಲ್ಲವಾಗಿದೆ. ಬದಲಾದ ಕಾಲ ಘಟ್ಟದಲ್ಲಿ ಹಬ್ಬದ ಆಚರಣೆಯೂ ಬದಲಾಗುವುದು ಸಹಜ. ಆದರೆ ಇಷ್ಟೊಂದು ವೇಗವಾಗಿ ಆಗುತ್ತಿರುವ ಬದಲಾವಣೆಯನ್ನು ಮಾತ್ರ ಯಾರೂ ಉಹಿಸಿರಲಿಲ್ಲ. ಭಾವನಾತ್ಮಕ ಸಂಬಂಧಗಳ ಅಡಿಪಾಯದಂತೆ ಇದ್ದ ಭಾರತ ದೇಶ ಇಂದು ದಿನೇ ದಿನೇ ವ್ಯವಹಾರಿಕತೆ ಕಡೆ ಸಾಗುತ್ತಿರುವುದು. ಇಂದು ಭಾವನಾತ್ಮಕತೆ ಎನ್ನುವದನ್ನು ಮಂದಿರ, ಮಸೀದಿ ಚರ್ಚುಗಳ ಸ್ಥಾಪನೆಗಾಗಿ, ಚೀನಾ ಪಾಕಿಸ್ತಾನವನ್ನು ವಿರೋಧಿಸುವಾಗ, ಟಿವಿಯಲ್ಲಿ ಯುದ್ಧದ ಬಗ್ಗೆ ಕೇಳುವಾಗ, ಸೋಶಿಯಲ್ ಮೀಡಿಯಾದಲ್ಲಿ ಮನೆಯಲ್ಲಿ ಕುಳಿತು ಪ್ರತಿಕ್ರಿಯೆ ನೀಡುವಾಗ, ಜನರನ್ನು ಉದ್ರೇಕಗೊಳಿಸುವಂತಹ ಹೇಳಿಕೆಯನ್ನು ನೀಡುವಾಗ, ರಾಜಕೀಯದ ಪರ ವಿರೋಧ ಮಾಡುವಾಗ ಮಾತ್ರ ತೋರಿಕೆಗಾಗಿ ಕಾಣಿಸುತ್ತಿರುವೆವು. ಆದರೆ ಮನೆಯಲ್ಲಿ ಅಪ್ಪ-ಅಮ್ಮ, ಗಂಡ-ಹೆಂಡತಿ-ಮಕ್ಕಳು, ಅಜ್ಜ-ಅಜ್ಜಿ, ಅಣ್ಣ-ತಂಗಿ ಈ ಎಲ್ಲ ನೈಜ ಮನುಷ್ಯ ಸಂಬಂಧಗಳ ನಡುವಿನ ಸೂಕ್ಷ್ಮತೆ ದಿನೇ ದಿನೇ ಜಟಿಲವಾಗುತ್ತಿರುವುದು. ಅಕ್ಕ ಪಕ್ಕದ ಮನೆಯವರೊಂದಿಗೆ ನಮ್ಮ ಸಂವೇದನೆ ಕಡಿಮೆಯಾಗುತ್ತಿರುವುದು. ಎಲ್ಲ ಸಂಬಂಧಗಳ ನಡುವಿನ ಭಾವನೆಗಳು ಕೇವಲ ವ್ಯವಹಾರಿಕತೆಗೆ ಮಾತ್ರ ಸೀಮಿತವಾಗುತ್ತಿರುವುದು.  ಪರಿಣಾಮವಾಗಿ ಎಲ್ಲ ಹಬ್ಬಗಳೂ ಮೂಲ ಆಶಯವನ್ನು ಕಳೆದುಕೊಳ್ಳುತ್ತಿರುವುದು. ದೀಪಾವಳಿ ಹಬ್ಬದಂತಹ ಆಚರಣೆ ಕಳೆಗುಂದಲು ಅಥವಾ ಸಾಂಪ್ರದಾಯಿಕತೆಯಿಂದ ವಿಮುಖವಾಗಲು ಹತ್ತಾರು ಕಾರಣಗಳಿರಬಹುದು ಅದರಲ್ಲಿ ಪ್ರಮುಖವಾದವುಗಳನ್ನು ಈ ಕೆಳಗಿನಂತೆ ಗುರುತಿಸಬಹುದಾಗಿದೆ.

ಜಾಗತೀಕರಣದ ಪ್ರಭಾವ : ಜಾಗತೀರಕಣದ ಪ್ರಭಾವದಿಂದಾಗಿ ಇಂದು ಜಗತ್ತೇ ಒಂದು ಮಾರುಕಟ್ಟೆಯಾಗಿರುವುದು. ಈ ಮಾರುಕಟ್ಟೆಯಲ್ಲಿ ನಮಗೆ ಅಗತ್ಯವಿರುವ ಎಲ್ಲ ಬಗೆಯ ಸಾಮಗ್ರಿಗಳು ಎಲ್ಲ ಕಡೆ ಸಿಗಲು ಪ್ರಾರಂಭವಾಗಿದೆ.  ಇದರ ಸುಳಿಗೆ ಸಿಕ್ಕಿರುವ ನಮಗೆ ನಮ್ಮದೆಲ್ಲ ಕಳಪೆಯಾಗಿ ಕಾಣುತ್ತಿರುವುದು. ಬೇರೆ ಕಡೆಯ ಎಲ್ಲ ಸಾಮಗ್ರಿಗಳು ಉತ್ತಮವಾಗಿ ಕಾಣುತ್ತಿವೆ.  ಇದು ಕೇವಲ ವಸ್ತುಗಳಿಗೆ ಸೀಮತವಾಗಿಲ್ಲ. ಲವರ‍್ಸಡೇ, ಫ್ರೆಂಡ ಶೀಪ್ ಡೇ ಈ ರೀತಿಯ ಆಚರಣೆಗಳು ನಮ್ಮ ಸುತ್ತ ಮುತ್ತಲು ಈಗಾಗಲೇ ಪ್ರಾರಂಭವಾಗಿದೆ. ಇವುಗಳ ಬಗ್ಗೆ ನಮಗಿರುವ ಆಸಕ್ತಿ, ಉತ್ಸಾಹ ಸಾಂಪ್ರದಾಯಿಕ ಹಬ್ಬದ ಆಚರಣೆಯಲ್ಲಿ ಕಾಣುತ್ತಿಲ್ಲ. ಇಂತಹ ಆಚರಣೆಗಳ ಪರಿಣಾಮವಾಗಿ ದೊಡ್ಡ ಹಬ್ಬ ಎಂದೆ ಕರೆಸಿಕೊಳ್ಳುವ ದೀಪಾವಳಿ ಚಿಕ್ಕ ಹಬ್ಬವಾಗಿ ಪರಿವರ್ತಿತವಾಗುತ್ತಿದೆ.

ರಾಜಕೀಯ ದಾಳವಾದ ಧರ್ಮ : ಸ್ವಾತಂತ್ರ ನಂತರದ ವರ್ಷಗಳಲ್ಲಿ ಧರ್ಮ ರಾಜಕೀಯ ದಾಳವಾಗಿದೆ. ಧರ್ಮ ಕಾಲ ಕಾಲಕ್ಕೆ ತಕ್ಕಂತೆ ರಾಜಕೀಯವಾಗಿ ಅಧಿಕಾರಕ್ಕಾಗಿ ಚಲಾವಣೆಯಾಗುತ್ತಿರುವುದು. ಸಮಾಜಕ್ಕೆ ಬಿಡಿಸಲಾಗದ ನಶೆಯಂತೆ ಆಗಿರುವ ಧರ್ಮ ಇಂದು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗಡೆಹಲು ಪ್ರಾರಂಭಿಸಿದೆ. ಹಿಂದೆ ಹಬ್ಬಗಳು ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಧರ್ಮದವರಿಗೂ ಸಂಬಂಧಿಸಿತ್ತು. ನಾವು ಚಿಕ್ಕವರಿರುವಾಗ ಪಕ್ಕದ ಕೆಲ ಮುಸ್ಲಿಂ ಮನೆಯವರಿಗೆ ಗಣೇಶನ ಹಬ್ಬಕ್ಕೆ ಚಕ್ಕುಲಿ, ದೀಪಾವಳಿ ಹಬ್ಬಕ್ಕೆ ಕಡುಬುಕೊಡುವುದು ಪ್ರಥಮ ಆದ್ಯತೆಯಾಗಿತ್ತು. ಕರಾವಳಿಯ ಎಷ್ಟೋ ಮನೆಗಳಲ್ಲಿ ಕೊಟ್ಟೆರೊಟ್ಟಿಯನ್ನು ಬರುವ ಅನ್ಯ ಧರ್ಮದವರಿಗೆ ಕೊಡುವುದಕ್ಕಾಗಿಯೇ ಮಾಡುತ್ತಿದ್ದರು. ಹಾಗೇ ಬಕ್ರೀದ್ ವೇಳೆಯಲ್ಲಿ ಆ ಮನೆಯಿಂದ ಬರುವ ಕುರಿ ಮಾಂಸದ ಬಿರಿಯಾನಿ ಬಗ್ಗೆ ಆಸೆ ಇದ್ದೆ ಇರುತ್ತಿತ್ತು. ಇಂದು ಕಾಲ ಬದಲಾಗಿದೆ. ರಾಜಕೀಯದ ಸುಳಿಯಲ್ಲಿ ದಾಳಗಳಾದ ನಾವು ನಮ್ಮ ಹತ್ತಿರದ ಅನ್ಯೋನ ಸಂಬಂಧಗಳನ್ನು ಕಳೆದುಕೊಂಡಿರುವೆವು. 

ಹೆಣ್ಣು ಮಕ್ಕಳಿಗೆ ಸಮಾನವಾದ ಆಸ್ತಿಯ ಹಕ್ಕು : ಪಿತ್ರಾಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕು ಕಾನೂನು ಜಾರಿಯಾಯಿತು. ಈ ಕಾನೂನು ಮಹಿಳಾ ಸಬಲೀಕರಣ ಸಮಾನತೆ ದೃಷ್ಟಿಯಿಂದ ಅತಿ ಮುಖ್ಯವು ಆಗಿರುವುದು. ಆದರೆ ದುರಾದೃಷ್ಟದಿಂದ ಸಾವಿರಾರು ಅಣ್ಣತಮ್ಮಂದಿರಗೆ ಈ ಕಾನೂನು ಬಂದ ನಂತರ ಮದುವೆ ಆಗಿರುವ ಅಕ್ಕ ತಂಗಿಯರು ವೈರಿಗಳಾಗಿರುವರು. ಮುಂಚಿನಂತೆ ಅಕ್ಕ ಅಥವಾ ತಂಗಿಯ ಮನೆಗೆ ಹೋಗಿ ದೀಪಾವಳಿಗೆ ಬರಲು ಹೇಳುತ್ತಿಲ್ಲ. ತಾಯಿಯ ಮನೆಯ ಉಡುಗೊರೆ ಮಗಳಿಗೆ ಅಳಿಯನಿಗೆ ಸಿಗುತ್ತಿಲ್ಲ. ಇನ್ನೂ ಕೆಲವಡೆ ಆಸ್ತಿಯ ಚರ್ಚೆ ನಡೆಯದೆ ಇರುವಲ್ಲಿ ಅಣ್ಣತಮ್ಮಂದಿರು ಅಕ್ಕತಂಗಿಯರ ಬಗ್ಗೆ ಅತಿಯಾದ ಪ್ರೀತಿ ತೋರಿಸುತ್ತಿರುವರು. ಇದು ಸಹಜವಾದ ಪ್ರೀತಿಯೋ ಅಥವಾ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡದೇ ಇರಲಿ ಎಂದು ತೋರುವ ಪ್ರೀತಿಯೋ ಕಾಲವೇ ನಿರ್ಧರಿಸಬೇಕು. ಒಟ್ಟಾರೆ ಒಂದು ಕಡೆ ಸಮಾನ ಆಸ್ತಿಯ ಹಕ್ಕು ಮಹಿಳಾ ಸಬಲೀಕರಣದ ಹಿನ್ನಲೆಯಲ್ಲಿ ಮಹತ್ವಪೂರ್ಣ ಹೆಜ್ಜೆಯಾದರೆ ಇನ್ನೊಂದಡೆ ವ್ಯಾವಹಾರಿಕವಾದ ಜಗತ್ತಿನಲ್ಲಿ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವುದು.  ಈ ನಡುವೆ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಮಗಳು ಅಳಿಯ ಮನೆಗೆ ಬರುವುದು, ಅಣ್ಣತಮ್ಮಂದಿರು ಅಕ್ಕತಂಗಿಯರನ್ನು ಕರೆಯಲು ಹೋಗುವುದು ಇವೆಲ್ಲ ಇದೆ. ಆದರೆ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಇದರ ಪ್ರಮಾಣ ಕಡಿಮೆಯಾಗುತ್ತಿರುವುದು. 

ಚಿಕ್ಕ ಕುಟುಂಬದ ಕಡೆ ಹೆಚ್ಚುತ್ತಿರುವ ಯುವ ಜನರ ಒಲವು: ಹಿಂದೆ ದೊಡ್ಡ ದೊಡ್ಡ ಕುಟುಂಬಗಳಿಗೆ ಹೆಚ್ಚಿನ ಮಹತ್ವ ಇತ್ತು. ಇಂದಿನ ಪೀಳಿಗೆ ಚಿಕ್ಕ ಕುಟುಂಬದ ಕಡೆ ಹೆಚ್ಚಿನ ಒಲವು ತೋರುತ್ತಿರುವುದು.  ಗಂಡ ಹೆಂಡತಿ ಮಕ್ಕಳು, ಒಟ್ಟಾರೆ ೩-೪ ಜನರ, ಕುಟುಂಬದ ಕಡೆ ಸಮಾಜ ವರ್ಗಾವಣೆ ಆಗುತ್ತಿರುವುದು. ಮಗಳನ್ನು ಮದುವೆ ಮಾಡಿದ ತಂದೆ-ತಾಯಿ ತನ್ನ ಮಗಳು ಪ್ರತ್ಯೇಕವಾಗಿ ಇರಬೇಕು ಎಂದು ಕನಸು ಕಾಣುವರು. ಅದಕ್ಕಾಗಿ ಮಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ತಯಾರಾಗಿರುವರು. ಅದೇ ತಂದೆ-ತಾಯಿ ಮಗ ಮಾತ್ರ ಹೆಂಡತಿ ಮಕ್ಕಳೊಂದಿಗೆ ತನ್ನ ಮನೆಯಲ್ಲಿ ಇರಬೇಕು ಎಂದು ಬಯಸುವರು. ಈ ದ್ವಂದ್ವದ ಪರಿಣಾಮವಾಗಿ ಇಂದು ದಿನೇ ದಿನೇ ಸಂಬಂಧಗಳು ವ್ಯವಹಾರಿಕವಾಗುತ್ತಿರುವುದು. ಅವಿಭಕ್ತ ಕುಟುಂಬಗಳಲ್ಲಿ ಕಂಡು ಬರುತ್ತಿರುವ ದೀಪಾವಳಿಯ ಆಚರಣೆಯ ಸಂತೋಷ ಚಿಕ್ಕ ಕುಟುಂಬದಲ್ಲಿ ಕಂಡು ಬರುತ್ತಿಲ್ಲ. ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದರಲ್ಲಿಯೆ ಚಿಕ್ಕ ಕುಟುಂಬದ ಹಬ್ಬದ ಅಚರಣೆ ಮುಗಿಯುತ್ತಿರುವುದು. 

ದೃಶ್ಯ ಮಾಧ್ಯಮಗಳ ಪ್ರಭಾವ : ಎಡಬಿಡಂಗಿ ಖಾಸಗಿ ದೃಶ್ಯ ಮಾದ್ಯಮದ ಪ್ರಭಾವದಿಂದ ಇಂದು ದೀಪಾವಳಿಯ ಸಾಂಪ್ರದಾಯಿಕ ಆಚರಣೆ ಕುಲಗೆಟ್ಟು ಹೋಗುತ್ತಿರುವುದು. ಹಬ್ಬದ ದಿನ ಮನೆಮಂದಿಯೆಲ್ಲ ಬರುವ ವಿವಿಧ ಕಾರ್ಯಕ್ರಮಗಳನ್ನು ನೋಡುವುದರಲ್ಲಿಯೆ ಮಗ್ನರಾಗಿರುವರು. ಮನೆಯಲ್ಲಿ ಇರುವ ಕೆಲವೊಂದು ಹಿರಿಯರು ಮಾತ್ರ ಪೂಜೆ ಪುನಸ್ಕಾರ, ಸಂಪ್ರದಾಯ ಆಚರಣೆಗಳ ಕಡೆ ಗಮನ ನೀಡುತ್ತಿರುವರು. ಎಣ್ಣೆ ಸ್ನಾನ, ಗೋ ಪೂಜೆ, ಬಲಿ ಪೂಜೆ ಈ ಎಲ್ಲವನ್ನು ಹಿಂದಿನ ದಿನದಲ್ಲಿ ಗಳಿಗೆ ನೋಡಿ ಮಾಡಲಾಗುತ್ತಿತ್ತು. ಇಂದು ಟಿವಿಯ ಕಾರ್ಯಕ್ರಮದ ವೇಳಾಪಟ್ಟಿ ನೋಡಿ ಅಥವಾ ಕರಂಟ್ ಹೋದಾಗ ಮಾಡುವಂತೆ ಆಗಿರುವುದು ವಿಪರ್ಯಾಸವಾಗಿದೆ. 

ತಲಾ ಆದಾಯದಲ್ಲಿ ಏರಿಕೆ : ಇಂದು ಮನುಷ್ಯರ ತಲಾ ಆದಾಯದಲ್ಲಿ ಏರಿಕೆ ಆಗಿದೆ. ಆದಾಯದ ಏರಿಕೆ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಆತ್ಮವಿಶ್ವಾಸ ಇಂದು ಸಂಪ್ರದಾಯಕ್ಕೆ ತೀಲಾಂಜಲಿಗೂ ಕಾರಣವಾಗಿದೆ.  ಕೊಟ್ಟೆ ಕಡುಬು ಮಾಡಲು ಹಲಿಸಿನ ಎಲೆಯನ್ನು ಮನೆಯಲ್ಲಿ ಗಂಪಾಗಿ ಕುಳಿತು ಕೊಟ್ಟೆ ಮಾಡುವ ರೂಢಿ ಇತ್ತು. ಇಂದು ಅದು ಮಾರ್ಕೆಟಿನಿಂದ ಬರುತ್ತಿದೆ. ನೀರು ಕಾಸುವ ಹಂಡೆಗೆ ಹಿಂಡಲಿ ಕಾಯಿ ಕಟ್ಟುವುದು, ವಿವಿಧ ಬೇರನ್ನು ನೀರಿನಲ್ಲಿ ಹಾಕುವುದು ಇವೆಲ್ಲಾ ಆಗ ಮನೆ ಮಂದಿಗೆ ಒಂದು ಧಾರ್ಮಿಕ ಆಚರಣೆ ಆಗಿತ್ತು. ಇಂದು ಅದೊಂದು ಕೆಲಸ ಆಗಿದೆ. ಆದ್ದರಿಂದ ಪಟ್ಟಣದಲ್ಲಿ ದೊರೆಯುವ ಹಿಂಡಲಿಕಾಯಿ ಅಂಥ ವಿವಿಧ ಬೇರುಗಳು ಇಂದು ಮನೆಯ ಹಂಡೆ ಸೇರುತ್ತಿರುವುದು. ಆಕಾಶ ಬುಟ್ಟಿ ಮಾಡುವ ಪಕ್ಕದ ಮನೆಯ ವ್ಯಕ್ತಿಯ ಅಗತ್ಯ ಇಲ್ಲವಾಗಿದೆ. ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಆಕಾಶ ಬುಟ್ಟಿಗಳು ಸಿಗುವವು. ಆಕಾಶ ಬುಟ್ಟಿಯಲ್ಲಿ ಕುಳಿತು ಹಿರಿಯರಿಗೆ ದಾರಿತೋರಿಸುತ್ತಿದ್ದ ದೀಪಗಳು ಮರೆಯಾಗಿವೆ. ವಿದ್ಯುತ್ ದೀಪಗಳಿಂದ ಅಲಂಕೃತವಾದ ಆಕಾಶ ಬುಟ್ಟಿಗಳು ಎಲ್ಲ ಕಡೆ ಕಾಣಿಸುತ್ತಿರುವುದು. ನಮ್ಮ ಆದಾಯದಲ್ಲಿ ಆದ ಹೆಚ್ಚಳ ನಮಗೆ ಈ ರೀತಿಯ ಎಲ್ಲವನ್ನು ದುಡ್ಡಿನಿಂದಲೆ ತೆಗೆದುಕೊಳ್ಳಲು ಉತ್ತೇಜಿಸುತ್ತಿರುವುದನ್ನು ಕಾಣಬಹುದು. ಪರಿಣಾಮ, ಸಾಂಪ್ರದಾಯಿಕ ಆಚರಣೆಗೆ ತೀಲಾಂಜಲಿ ನೀಡುತ್ತಿರುವೆವು. 

ಮುಖ್ಯ ಉದ್ದೇಶ ಮರೆತ ಶಿಕ್ಷಣ ವ್ಯವಸ್ಥೆ: ಮಗುವನ್ನು ಉತ್ತಮ ನಾಗರಿಕನನ್ನಾಗಿ ಮಾಡುವುದೆ ಶಿಕ್ಷಣ ಎಂದು ನಾವು ಹೇಳುತ್ತಿರುವೆವು. ಆದರೆ ಶಿಕ್ಷಣ ಪಡೆಯುವುದೆ ದುಡ್ಡು ಸಂಪಾದನೆ ಮಾಡಲು ಎಂಬಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ ಅದಕ್ಕಾಗಿ ನಾವೆಲ್ಲ ಪ್ರಯತ್ನ ಪಡುತ್ತಿರುವೆವು. ಮಕ್ಕಳಲ್ಲಿ ಕ್ರೀಯಾಶೀಲತೆ, ವೈಜ್ಞಾನಿಕ ದೃಷ್ಟಿಕೋನ, ಪರಸ್ಪರ ಗೌರವ ಕೊಡುವಿಕೆ, ಧಾರ್ಮಿಕ ಸಾಮರಸ್ಯ ಇವುಗಳನ್ನು ಬೆಳೆಸುವಲ್ಲಿ ನಾವು ಸೋತಿರುವೆವು. ಪರಿಣಾಮವಾಗಿ ಶಿಕ್ಷಣದ ಪಡೆದವರೆ ವಿವಿಧ ಸಿದ್ದಾಂತಗಳ ಪ್ರತಿಪಾದಕರಾಗಿ ಧರ್ಮಾಂಧರಾಗಿ ವರ್ತಿಸುವುದನ್ನು ಕಾಣಬಹುದಾಗಿದೆ. ಈ ಕಾರಣದಿಂದ ಸಮುದಾಯದ ಪ್ರತಿಬಿಂಬದಂತೆ ಇರಬೇಕಾದ ಹಬ್ಬಗಳ ಆಚರಣೆ ಇಂದು ಪೋಲಿಸರ ರಕ್ಷಣೆಯಲ್ಲಿ ಆಚರಿಸುವಂತೆ ಆಗಿದೆ. ಇದರ ಪರಿಣಾಮದಿಂದ ಎಲ್ಲ ಹಬ್ಬಗಳನ್ನು ಭಯದಿಂದ ಯಾಂತ್ರಿಕವಾಗಿ ಆಚರಿಸುವ ಪರಿಸ್ಥಿತಿ ಬಂದಿರುವುದು.

ಸಮಾಜದ ತಳಹಂತಕ್ಕೆ ತಲುಪಿದ ವಿಭಿನ್ನವಾದಗಳು : ಅಂಬೇಡ್ಕರವಾದ, ಕಮ್ಯುನಿಸ್ಟವಾದ, ಆರ್.ಎಸ್.ಎಸ್ ವಾದ ಈ ಎಲ್ಲ ವಾದ-ಆಚರಣೆಗಳ ಬಗ್ಗೆ ತಿಳಿಯುವುದು ಮತ್ತು ಚರ್ಚಿಸುವುದು ಅಗತ್ಯ. ಆದರೆ, ಇಂದು ಈ ವಾದಗಳ ಪ್ರತಿಪಾದಕರು ಅಂಧರಾಗಿ ಚರ್ಚೆಯನ್ನು ಮೀರಿ ಹಿಂಸೆಗೆ ತಿರುಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಆಗಿದೆ. ವಿಭಿನ್ನ ವಾದಗಳ ಬಗ್ಗೆ ವಿಶಾಲವಾದ ದೃಷ್ಟಿಕೋನದಿಂದ ನೋಡದೆ ನಮ್ಮ ನಮ್ಮಲ್ಲಿ ಹೊಡೆದಾಡಿಕೊಂಡು ಸಾಯುತ್ತಿರುವೆವು. ಅನಾದಿ ಕಾಲದಿಂದ ಬಂದ ಸಂಪ್ರದಾಯದ ಆಚರಣೆ ಕಡ್ಡಾಯ ಎಂಬ ವಾದ ಒಂದು ಗುಂಪಿನದು, ಎಲ್ಲವನ್ನು ತಿರಸ್ಕರಿಸಬೇಕು ಎಂಬುದು ಇನ್ನೊಂದು ಕಡೆ ಈ ರೀತಿಯ ತಳಹಂತಕ್ಕೆ ತಲುಪಿರುವ ವಿಭಿನ್ನ ವಾದಗಳು ಹಬ್ಬದ ಆಚರಣೆಯ ಶೈಲಿಯ ಮೇಲೆ ಪರಿಣಾಮವನ್ನು ಬೀರಿರುವುದು. ಅದರಲ್ಲಿಯೂ, ವಿಭಿನ್ನ ಸಿದ್ದಾಂತಗಳು ಜಾತಿಯ ರೂಪ ಪಡೆದುಕೊಂಡು ಆಚರಣೆಗಳ ಮೇಲೆ ಪ್ರಭಾವ ಬೀರುತ್ತಿರುವುದು.

ಮೊಬೈಲ ಮಾಯಾಂಗನೆಯ ಸುಳಿಯಲ್ಲಿ : ಹಿಂದೆ ಹಬ್ಬ ಎಂದರೆ ಮನೆ ಮಂದಿಯೆಲ್ಲ ಒಟ್ಟಿಗೆ ಸೇರಿ ಆಚರಿಸುತ್ತ ಇದ್ದರು. ದೀಪಾವಳಿಗೆ ಬಂದಾಗ ಸಿಗುವ ಮನೆಯ ಎಲ್ಲ ಸದಸ್ಯರು, ಅಕ್ಕ ಪಕ್ಕದ ಮನೆಯ ಸ್ನೇಹಿತರು ಹೀಗೆ ಎಲ್ಲರೂ ಪರಸ್ಪರ ಒಟ್ಟಿಗೆ ಮಾತನಾಡುತ್ತಿದ್ದರು, ಊಟ ಮಾಡುತ್ತಿದ್ದರು. ಹಳ್ಳಿಯ ಜನರೆಲ್ಲ ಸೇರಿ ಕಾಯಿ ಇಟ್ಟು ಒಡೆಯುವ ಆಟ ಆಡುತ್ತಿದ್ದರು. ಯಾವಾಗಿನಿಂದ ಈ ಮೊಬೈಲ ಎಂಬ ಮಾಯಾವಿ ಎಲ್ಲರ ಕೈಗೆ ಬಂತೋ ಅಂದಿನಿಂದ ಹೆಚ್ಚಿನ ಜನರು ಹುಚ್ಚರಂತೆ ಆಗಿರುವರು. ಯಾರಿಗೂ ಯಾರನ್ನೂ ಭೇಟಿ ಮಾಡಲು ಮಾತನಾಡಲು ಟೈಮು ಇಲ್ಲ. ಒಂದೇ ಮನೆಯಲ್ಲಿ ಎಲ್ಲರು ಇದ್ದರೂ ಒಟ್ಟಿಗೆ ಕುಳಿತು ಊಟ ಮಾಡಲು ತಯಾರಿಲ್ಲ, ಮಾಡಿದರೂ ಒಂದು ಕೈಯಲ್ಲಿ ಮಾಯಾವಿ ಇದ್ದೇ ಇರುವುದು. ಅಕ್ಕ ಪಕ್ಕದ ಮನೆಯವರೊಂದಿಗೆ ಸಹ ದೀಪಾವಳಿ ಶುಭಾಶಯ ಸೋಶಿಯಲ್ ಮೀಡಿಯಾಗಳಲ್ಲೆ ಆಗುವುದು. ಪರ ಊರಿನಿಂದ ಬಂದ ಮಕ್ಕಳು ಮೊಮ್ಮಕ್ಕಳಿಗೆ ಮನೆಯಲ್ಲಿ ಮಾಡುವ ಪೂಜೆ, ಸಂಪ್ರದಾಯದ ಆಚರಣೆ ಇವೆಲ್ಲ ಪೋಟೋಕ್ಕಾಗಿ ಮಾತ್ರ ಬಹು ಮುಖ್ಯವಾಗಿರುವು. ಮನೆಯಲ್ಲಿ ಇರುವ ಹಿರಿಯ ಜೀವಿಗಳೊಂದಿಗೆ ಕುಳಿತು ಮಾತನಾಡುವ ವ್ಯವಧಾನವಿಲ್ಲವಾಗಿದೆ. ಹಬ್ಬದ ಆಚರಣೆಗಳೆಲ್ಲ ತೋರಿಕೆಗಾಗಿ ಆಚರಿಸುವಂತೆ ಆಗಿರುವುದು.

ಈ ರೀತಿಯ ಹಲವಾರು ಕಾರಣಗಳಿಂದ ದೀಪಾವಳಿ ಹಬ್ಬದ ಆಚರಣೆ ವರ್ಷದಿಂದ ವರ್ಷಕ್ಕೆ ಯಾಂತ್ರಿಕವಾದಂತೆ ಅನಿಸುತ್ತಿರುವುದು. ಇನ್ನೂ ಸಂಪೂರ್ಣವಾಗಿ ವ್ಯವಹಾರಿಕ ಆಗದ ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ದೀಪಾವಳಿ ಆಚರಣೆಗಳು ಕೆಲ ಮಟ್ಟಿಗೆ ಇರುವುದು, ಆದರೆ ಎಲ್ಲವನ್ನು ಆರ್ಥಿಕ ದೃಷ್ಟಿಯಿಂದ ನೋಡುವ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆ ಆಗದೆ ಇದ್ದರೆ ಮುಂದಿನ ದಿನಗಳಲ್ಲಿ ಹಬ್ಬದ ಆಚರಣೆ ಯಾಂತ್ರಿಕವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅದನ್ನು ಆಗದಂತೆ ನೋಡಿಕೊಳ್ಳುವ ಸವಾಲಿನ ಕೆಲಸ ನಮ್ಮ ನಿಮ್ಮ ಮೇಲಿದೆ   
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು  


ತಾಗುಲಿ : Deepavali, Human Relations, Vivek Betkuli

ನಮೋ ವಿಶ್ವನಾಥ ಅವರೇ, 
ಲೇಖನ ತುಂಬಾ ಚೆನ್ನಾಗಿದೆ. ನಮ್ಮಲ್ಲಿ ಅನೇಕರ ಮನದಲ್ಲಿದ್ದ ಮಾತುಗಳನ್ನು ನೀವು ಒಂದೆಡೆ ಸಂಗ್ರಹಿಸಿ ಆಕಾರ ಕೊಟ್ಟಿದ್ದೀರ. ಅದಕ್ಕೆ ಧನ್ಯವಾದಗಳು! 

ನೀವು ಹೇಳಿದ ಬಹುತೇಕ ವಿಷಯಗಳನ್ನು ಒಪ್ಪಿದೆ. ಆದರೆ ಕೆಲವು  ವಿಷಯಗಳಲ್ಲಿ ಸ್ವಲ್ಪ ಭಿನ್ನವಾಗಿ ಅನ್ನಿಸುತ್ತದೆ. ಹಾಗೂ ಕೆಲವು ಸಲಹೆಗಳು. 

೧. ಜಾಗತೀಕರಣ, ಅಂತರ್ಜಾಲ, ಮಾಹಿತಿ ವಿಸ್ಫೋಟ ಮತ್ತು social media ಗಳಿಂದ ಇತ್ತೀಚಿಗೆ ನಮ್ಮ-ನಮ್ಮ ಇತಿಹಾಸ, ಸಂಸ್ಕೃತಿ, ಭಾಷೆ, ಹಬ್ಬಗಳ ಬಗ್ಗೆ ಅರಿವು, ಹೆಮ್ಮೆ, ಅಭಿಮಾನ ಹೆಚ್ಚಾಗಿ ಕೆಲವರು ಇನ್ನೂ ಪೈಪೋಟಿಯಲ್ಲಿ ಇನ್ನೂ ವಿಜೃಂಭಣೆಯಿಂದ ಆಚರಿಸುತ್ತಿರುವರು!

೨. ಚಿಕ್ಕ ಕುಟುಂಬಗಳು ಹೆಚ್ಚಾಗಿವೆ ಒಪ್ಪಿದೆ. ಆದರೆ ಅದಕ್ಕೆ ಮೂಲ ಕಾರಣ ಕಡಿಮೆ ಮಕ್ಕಳಾಗುವುದು ಮತ್ತು ಹೊರ ನಗರ/ದೇಶಗಳಲ್ಲಿ ನೌಕರಿ ಅವಕಾಶ. ಹಾಗಂತ ದಾಯಾದಿಗಳಲ್ಲಿ, ಸೋದರರ ಮಧ್ಯೆ ಪ್ರೀತಿ ಕಡಿಮೆಯಾಗಿದೆ ಅಂತಿಲ್ಲ. ದೂರವಾಣಿ, ಅಂತರ್ಜಾಲಗಳಿಂದ ಇನ್ನೂ ಹತ್ತಿರವಾಗಿವೆ.  

೩. ಇನ್ನು ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ವಿಷಯ ಭೇದಭಾವ ಬಂದಿರುವುದು ನಾನು ಎಲ್ಲೂ ಕಂಡಿಲ್ಲ. ಇದೆಲ್ಲ ಹಳೆ ಕಾಲದ ಮಾತುಗಳಿರಬಹುದು, ಇಲ್ಲವೇ ಕೆಲ ಪರಿವಾರಗಲ್ಲಿ ಮಾತ್ರ ಇರಬಹುದು. ಇದನ್ನು generalize ಮಾಡಾಲಾಗದು.. 

೪. ಮುಸ್ಲಿಮರ ಮನೆಯಿಂದ ಕುರಿ ಮಾಂಸದ ಬಿರಿಯಾನಿ ವಿಷಯ ಮಾತಾಡದೆ ಇದ್ದಾರೆ ಒಳ್ಳೆಯದು. ನಮ್ಮಲ್ಲಿ ಅನೇಕ ಶಾಖಾಹಾರಿಗಳು ಇರುವರು. ಅಂಥವರಿಗೆ ಹಿಡಿಸುವುದಿಲ್ಲ. 

ಒಂದು ಸಲಹೆ:ಲೇಖನ ಬರೆದ ನಂತರ ಮುದ್ರಣ ಮಾಡುವ ಮೊದಲು ಅದರಲ್ಲಿ ಬರವಣಿಗೆ ತಪ್ಪುಗಳು (spelling/typing mistakes) ಇವೆಯೇ ಎಂದು ಒಮ್ಮೆ ನೋಡಿ, ಮತ್ತು ಮನೆಯವರಿಗೆ ತೋರಿಸಿ, ಅವರಿಗೂ check ಮಾಡಲು ಹೇಳುವುದು ಒಳ್ಳೆಯದು.  

ನಿಮ್ಮ ವಿಶಾಲ ದ್ರಿಷ್ಟಿಕೋನಕ್ಕೆ ನಮ್ಮ ನಮನ. ಹೀಗೆಯೇ ಬರೆಯುತ್ತಿರಿ, ನಾವು ಓದುತ್ತಿರುತ್ತೇವೆ.  :-)
ಧನ್ಯವಾದಗಳು!

In reply to by ಶ್ರುತಿ ಅನಂತರಾಮ್  (not verified)

ಈ ಲೇಖನ ನಾನು ವಾಸ ಮಾಡುತ್ತಿರುವ ಊರು ನನ್ನ ಆಸು ಪಾಸಿನಲ್ಲಿ ಆಗಿರುವ ಘಟನೆಗಳನ್ನು ನೆನೆಪಿಸಿಕೊಂಡು ಬರೆದಿರುವುದು. ಅದನ್ನು ಸಾವ೯ತ್ರಿಕ ಗೊಳಿಸುವ ಅಗತ್ಯವಿಲ್ಲ. ನೀವು ನೀಡಿರುವ ಸಲಹೆಯನ್ನು ಖಂಡಿತಾ ಸ್ವೀಕರಿಸುವೆನು. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಇದೇ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾ ಇರಿ.

Very nicely and clearly narrated, and is true to the point. Each paragraph exposes the bitter truth of the current world. Relationships have reduced to more like “quid pro quo” deals. Sanathana dharma is fading away its true identity and like you mentioned the organizations that must uplift the true ideologies of the way of living is becoming obscure. The transformation of natural resources into convenience for human settlement is playing a big role and we blindly consider it as our development. Truth be told we are losing the extremely important and treasured culture, which the outsiders who came to learn and live it have revered time and again. It’s really a shame that we don’t value and practice our way of life anymore, which is really our identity and shapes and polished us and our kin.

ವೆಂಕಟೇಶ (Via Whatsapp)
ನಿಮ್ಮ ಲೇಖನವನ್ನು ಕೊನೆ ತನಕ ಓದಿದೆ. ಕೃಪೆಮಾಡಿ ಇದಕ್ಕೆ ಪರಿಹಾರವನ್ನೂ  ಮುಂದಿನ ಲೇಖನದಲ್ಲಿ ತಿಳಿಸಿರಿ. 

ಎಲ್ಲಾ ಕಾಲದಲ್ಲೂ, ವೈಯಕ್ತಿಕ ಬೆಳವಣಿಗೆಯ ಪ್ರಕಾರ, ಉನ್ನತಿ ಅಥವಾ ಅಧೋಗತಿ ಆಗುತ್ತಲೇ ಇರುತ್ತದೆ. ಹೆಚ್ಚು ವಯಸ್ಸಾದ ಜನಕ್ಕೆ, ತಾವು ಸಂಸ್ಕೃತಿ ಉಳ್ಳವರು ಹಾಗೂ ಚಿಕ್ಕವರು ಹಾಳಾಗಿ ಹೋಗುತ್ತಿದ್ದಾರೆ ಎಂಬ ಭ್ರಮೆ ಇದೆ. 3000 ವರ್ಷಗಳ ಹಿಂದೆಯೂ, ಜನಗಳಿಗೆ ಇದೇ ರೀತಿಯ ಯೋಚನೆ ಇದ್ದಿದ್ದನ್ನು ಶಾಸನಗಳಲ್ಲಿ ಮತ್ತು ಬರವಣಿಗೆಯಲ್ಲಿ ನೋಡಬಹುದು. ಕಳೆದ 50 ವರ್ಷಗಳಿಂದ ಈಗ ನಡೆಯುತ್ತಿರುವ ನೈಸರ್ಗಿಕ ಧ್ವಂಸವನ್ನು ನೋಡಿದರೆ, ಇಂದಿನ ಹಿರಿಯರು ಬಹಳ ಸಂಸ್ಕೃತಿ ಉಳ್ಳವರು ಎಂದು ಹೇಳಲಾಗದು. ಹಾಗಾಗಿ ಯುವಕರಿಗೆ ಭಾಷಣ ಬಗೆಯುವ ಅಧಿಕಾರ ನಮಗಿಲ್ಲ.

This is the best of times & worst of times!
We live in interesting times.
🙏🏼🙏🏿🙏