ಹುಡುಕಾಟ - ಮೇಡ್ ಇನ್ ಯು. ಎಸ್. ಎ.

“Young man! Nowadays, you shall find all the small little things and souvenirs being made in China. You shall find only US made babies here in USA! However, soon after their birth, they too wear Chinese nappies!”

ಚಡ್ಡಿ ಚೈನೀಸ್ ಆದರೂ ನುಡಿ ಕನ್ನಡವಾಗಲಿ ಎಂದು ನಮ್ಮ ಅಂಬೋಣ !


ಹುಡುಕಾಟ - ಮೇಡ್ ಇನ್ ಯು.ಎಸ್.ಎ

. *** ಎಸ್.ಎಂ. ಪೆಜತ್ತಾಯ, ಬೆಂಗಳೂರು

November 15, 2010

 

1999ನೇ ಇಸವಿಯಲ್ಲಿ ಸುಮಾರು 35ದಿವಸಗಳ ಕಾಲ ಅಮೆರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ   ನಾವು ಪ್ರವಾಸ ಮಾಡಿದೆವು. ಪೂರ್ವ ಮತ್ತು ಮತ್ತು ಪಶ್ಚಿಮ ಕರಾವಳಿಗಳಲ್ಲಿ  ಸುತ್ತಾಡುವಾಗ ಪ್ರತೀ  ಪ್ರವಾಸೀ ತಾಣದ  ಸೊವೆನೀರ್ ಅಥವಾ ಮೊಮೆಂಟೋ ಅಂಗಡಿಗಳಲ್ಲಿ  ಏನಾದರೂ ನೆನಪಿನ ವಸ್ತುಗಳನ್ನು ಕೊಳ್ಳುತ್ತಾ ಇದ್ದೆವು. ಅವುಗಳನ್ನು ಪರೀಕ್ಷಿಸಿ ನೋಡಿದಾಗ  ಅವುಗಳ ಮೇಲೆ  “ಮೇಡ್ ಇನ್ ಚೈನಾ” ಎಂದು ಬರೆದುದು ಕಾಣುತ್ತಾ ಇತ್ತು.

ಆಗಲೇ ಚೈನಾದಿಂದ ತರಿಸಿದ ಅಗ್ಗದ ನೆನಪಿನ ಕಾಣಿಕೆಗಳು ಯು.ಎಸ್.ಎ. ಯಲ್ಲಿ ಜನಪ್ರಿಯ ಆಗಿದ್ದುವು. ಅಮೇರಿಕಾದ ಹೆಮ್ಮೆಯ ಡಿಸ್ನೇ  ವರ್ಲ್ಡ್‌ನಲ್ಲೂ    ಅಧಿಕೃತವಾಗಿ ಮಾರಾಟಮಾಡುವ  ನೆನಪಿನ ಕಾಣಿಕೆಗಳ ಮೇಲೆ ಮೇಡ್  ಇನ್ ಚೈನಾ ಎಂಬ ಪದಗಳು ರಾರಾಜಿಸುತ್ತಾ ಇದ್ದುವು. ವಿಚಾರಿಸಲಾಗಿ, ಸಂಯುಕ್ತ ಸಂಸ್ಥಾನಗಳಲ್ಲಿ  ಉತ್ಪಾದನಾ ವೆಚ್ಚ  ತುಂಬಾ ಹೆಚ್ಚು . ಆದುದರಿಂದ,  ಚೈನಾ ದೇಶದಲ್ಲಿ ತಯಾರಾದ  ಅಗ್ಗದ ನೆನಪಿನ ಕಾಣಿಕೆಗಳೇ ಅಲ್ಲಿ ಬಿಕರಿಯಾಗುತ್ತವೆ ಅಂತ ತಿಳಿದು ಬಂತು. 

ನಾನು ಯಾವ ದೇಶಕ್ಕೆ ಹೋದರೂ ಅದೇ ದೇಶದಲ್ಲಿ ತಯಾರಾದ ಯಾವುದಾದರೂ ಚಿಕ್ಕ ಪುಟ್ಟ ವಸ್ತುಗಳನ್ನು ಖರೀದಿಸಿ ನೆನಪಿಗೋಸ್ಕರ ತಂದು ನನ್ನ ಸಂಗ್ರಹದಲ್ಲಿ ಇಟ್ಟು ಕೊಳ್ಳುತ್ತೇನೆ. ನನಗೆ ಅಮೆರಿಕಾಗೆ ಹೋದ ಮೇಲೆ ಅಲ್ಲಿ ತಯಾರಾದ ಏನಾದರೊಂದು ಪುಟ್ಟ ವಸ್ತುವನ್ನು ನೆನಪಿಗಾಗಿ ಕೊಳ್ಳಲೇ ಬೇಕೆನಿಸಿ ಹುಡುಕಾಡ ತೊಡಗಿದೆ.

ಕ್ಯಾಲಿಫೋರ್ನಿಯಾ ರಾಜ್ಯದ ಪ್ರವಾಸ ನಮ್ಮ  ಪ್ರವಾಸದ ಕೊನೆಯ ಹಂತವಾಗಿತ್ತು.  ಅಲ್ಲೂ  ದೊರಕುತ್ತಿದ್ದ ನೆನಪಿನ ಕಾಣಿಕೆಗಳು ಚೈನಾ ದೇಶದವೇ ಆಗಿದ್ದುವು. ರೆಡ್ ವುಡ್  ಟ್ರೀ ಫಾರೆಸ್ಟಿನಲ್ಲಿ  ಬಿದ್ದು ಹೋದ ದೈತ್ಯ   ಆಕಾರದ ರೆಡ್ ವುಡ್ ಮರದ ಕೊಂಬೆಗಳ  ತಿರುಳಿನಿಂದ ನಿರ್ಮಿತವಾದ ಚಿಕ್ಕ   ಚಿಕ್ಕ ಪೆಂಡೆಂಟ್‍ಗಳನ್ನು ನನ್ನ  ಹೆಂಡತಿ ಮಕ್ಕಳಿಗೆ ಕೊಂಡುಕೊಟ್ಟೆ.

ಆದರೆ, ನನ್ನ ಸಂಗ್ರಹಕ್ಕೆ  ಅಮೆರಿಕಾದ  ತಯಾರಿಕೆಯ ಒಂದು ವಸ್ತುವನ್ನು ಕೊಂಡುಕೊಳ್ಳುವುದೇ ದುಸ್ತರವಾಯಿತು.

ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ  ನನಗೊಂದು  ಅಮೆರಿಕಾದ  ದನಗಾಹಿಗಳು ಧರಿಸುವ ಅಗಲವಾದ ಸ್ಟೆಟ್ಸನ್ ಹ್ಯಾಟ್ ಸಿಗುವುದೋ? - ಎಂದು  ಹುಡುಕಾಡುತ್ತಾ ಒಂದು ದೊಡ್ದ ಹ್ಯಾಟ್ ಅಂಗಡಿಗೆ ಹೋದೆ. ಭಾರತಕ್ಕೆ ತಂದರೆ ಅಮೆರಿಕಾದ ಕೌ ಬಾಯ್ ಹ್ಯಾಟ್  ನಿಜಕ್ಕೂ ಒಂದು ಅಪೂರ್ವ ವಸ್ತು. ರೈತನಾದ ನನಗೆ ಅದು ನಿತ್ಯ ಧರಿಸಲು ಉಪಯೋಗ ಆಗುವ ವಸ್ತು. ಅದಲ್ಲದೇ, ಕೌಬಾಯ್ ಹ್ಯಾಟ್ ಧರಿಸಬೇಕೆಂಬುವುದು ನನ್ನ ಬಾಲ್ಯದಿಂದಲೂ ನಾನು  ಕಂಡುಕೊಂಡಿದ್ದ ಒಂದು ಕನಸು!

ತುಂಬಾ ಉಮೇದಿನಿಂದ ಆ ಅಂಗಡಿಯೊಳಗೆ  ಓಡಾಡಿ ಹುಡುಕಾಡಿದೆ. ಕೊನೆಗೂ ನನ್ನ ಸೈಜಿನ ಒಂದು ಬ್ರೌನ್ ಕಲರಿನ ಸ್ಟೆಟ್ಸನ್ (https://stetson.com/collections/hats) ಸಿಕ್ಕಿತು.  ಅದರ ಕ್ರೌನ್ ಭಾಗಕ್ಕೆ  ಸುತ್ತಿದ್ದ ಅಲಂಕಾರಿಕ  ಬ್ಯಾಂಡಿನಲ್ಲಿ  ಒಂದು ಕಡೆ ಆರು  ಕೆಂಪು ನಕ್ಷತ್ರಗಳ  ಮಾರ್ಕ್ ಇತ್ತು.  ಕುತೂಹಲದಿಂದ ಆ ಅಂಗಡಿಯ  ಭೀಮಕಾಯದ ಟೆಕ್ಸನ್ ಯಜಮಾನನನ್ನು ಈ ಕೆಂಪು ನಕ್ಷತ್ರಗಳ ಬಗ್ಗೆ ಕೇಳಿದೆ. ಅದಕ್ಕೆ ಅವರು "ಈ ನಕ್ಷತ್ರಗಳ ಅರ್ಥ ಏನೆಂದರೆ, ಈ ಹ್ಯಾಟ್ ತಯಾರಿಸಲು ಆರು ಬೀವರ್ ಪ್ರಾಣಿಗಳ  ಫರ್‍ಅನ್ನು  ಉಪಯೋಗಿಸಲಾಗಿದೆ !”  ಎಂದರು.

 

ಈ ಮಾತುಗಳನ್ನು ಕೇಳಿಸಿಕೊಂಡ ನನ್ನ ಹಿರೇ ಮಗಳು  “ ಅಪ್ಪಾ!  ಹಿಂಸೆಯ  ಪ್ರತೀಕವಾದ  ಈ ಹ್ಯಾಟ್ ನಿಮಗೆ  ಬೇಡವೇ ಬೇಡ! ” ಅಂದಳು. ಮಗಳ ಅಹಿಂಸಾ ತತ್ವಕ್ಕೆ ತಾತ್ಕಾಲಿಕವಾಗಿ ಯಾದರೂ ನಾನು ಮಣಿಯಲೇ ಬೇಕಾಯಿತು! ಅವಳ  ಕಿರುಚಾಟಕ್ಕೆ ಮಣಿದು ನನ್ನ ಕೌ ಬಾಯ್ ಹ್ಯಾಟಿನ ಆಸೆಯನ್ನೂ ಆ ಅಂಗಡಿಯಲ್ಲೇ ತೊರೆದು  ಈಚೆಗೆ ಬಂದೆ!

ನಮ್ಮ  ಅಮೆರಿಕಾ  ಪ್ರವಾಸದ ಕೊನೆಯ ಹಂತದಲ್ಲಿ ಸ್ಯಾನ್ ಡಿಯಾಗೋ ಶಹರದ ಒಂದು ಕ್ಯೂರಿಯೋ ಶಾಪ್ ಹೊಕ್ಕೆವು.  ಆ ಅಂಗಡಿಯ ಮಾಲಕಿ ಒಬ್ಬ ಹಿರೇ ಪ್ರಾಯದ ಅಮೆರಿಕನ್ ಮಹಿಳೆ.  ನಗು ನಗುತ್ತಾ ನಮ್ಮನ್ನು ಸ್ವಾಗತಿಸಿದರು. ಕುಶಲ ಮಾತುಕತೆ ಆದ ಮೇಲೆ  ತಾನೂ ಹಿಂದೊಮ್ಮೆ ಭಾರತಕ್ಕೆ ಬಂದಿದ್ದೆ. ನಿಮ್ಮ ಬೆಂಗಳೂರು ತುಂಬಾ ಸುಂದರ ನಗರ  ಅಂತ ಅಂದರು. ಆ ಅಂಗಡಿಗಳಲ್ಲಿ ನಮಗೆ ಬೇಕಾದ  ಚಿಕ್ಕ ಪುಟ್ಟ ವಸ್ತುಗಳನ್ನು ಖರೀದಿಸಿದೆವು.

ಅಂಗಡಿಯ ಮಾಲಕಿಯೊಂದಿಗೆ ನಾನು ನನಗೆ ಭಾರತಕ್ಕೆ ಕೊಂಡೊಯ್ಯಲು ಅಮೆರಿಕಾದಲ್ಲೇ ತಯಾರಾದ ಒಂದು ಮೊಮೆಂಟೋ ಬೇಕು  - ಎಂಬ ಬೇಡಿಕೆ ಮುಂದಿಟ್ಟೆ. ಅಷ್ಟು ಹೇಳಿದ ಕೂಡಲೇ ಆಕೆಗೆ ನನ್ನ ಕಳಕಳಿ ಅರ್ಥವಾದಂತೆ ಕಂಡಿತು. ತನ್ನ ಪುಟ್ಟ ಅಂಗಡಿಯನ್ನು ಒಮ್ಮೆ ಜಾಲಾಡಿ ನೋಡಿದರು. ಅಲ್ಲಿ ಹೆಚ್ಚಾಗಿ  ಚೈನಾದಲ್ಲಿ ತಯಾರಾದ ವಸ್ತುಗಳೇ  ಇದ್ದುವು. ಒಂದೆರಡು ಕೊರಿಯಾದಲ್ಲಿ ತಯಾರಾದ ಚಂದದ ವಸ್ತುಗಳೂ  ಇದ್ದುವು. ತನ್ನ ಅಂಗಡಿಯಲ್ಲಿ ನಮಗೆ ಬೇಕಾದ “ಮೇಡ್ ಇನ್ ಯು. ಎಸ್. ಎ.” ಮಾರ್ಕ್ ಉಳ್ಳ ಯಾವ ವಸ್ತುವೂ ಸಿಗುತ್ತಾ ಇಲ್ಲ  ಎಂಬ ವಿಚಾರ ಆಕೆಗೆ  ಅರಿವಾದಾಗ ಆ ಸ್ವಾಭಿಮಾನಿ ಮಹಿಳೆಯ ಮುಖಕ್ಕೇ ರಕ್ತ ನುಗ್ಗಿದಂತೆ ಕಂಡು ಬಂತು.

ಕೊನೆಗೆ  “ಸ್ಸಾರಿ! ನಮ್ಮದೇಶದಲ್ಲಿ ತಯಾರಾದ  ಒಂದು ಪುಟ್ಟ ಕ್ಯೂಯೋವೂ  ನನ್ನ   ಅಂಗಡಿಯ್ಯಲ್ಲಿ ಇಲ್ಲ . ಹಾಗೆ ಹೇಳಲು  ನನಗೆ  ನಾಚಿಕೆ ಆಗುತ್ತಿದೆ !”  ಅಂದರು.

ನಾವು ಅವರಿಗೆ ತ್ಯಾಂಕ್ಸ್ ಹೇಳಿ ಹೊರಡುತ್ತಿರುವಾಗ ಆಕೆ  “ ಒಂದು ನಿಮಿಷ ನಿಲ್ಲಿ! ” – ಅನ್ನುತ್ತಾ ತನ್ನ ಹ್ಯಾಂಡ್ ಬ್ಯಾಗ್ ಜಾಲಾಡ ಹತ್ತಿದರು. “ಇಲ್ಲಿದೆ! ನೋಡಿ! ಅಮೇರಿಕದ  ಹೆಮ್ಮೆಯ ಪುಟ್ಟ ಪ್ರತೀಕ!”  ಅನ್ನುತ್ತಾ  ಒಂದು ಚಿಕ್ಕ   ಪ್ಯಾಕೆಟ್ ತನ್ನ ಕೌಂಟರ್‍ನ ಮೇಲೆ ಇಟ್ಟರು. ಅದು ಪ್ರಖ್ಯಾತ  ಅಮೆರಿಕನ್  ಓಲ್ಡ್ ಟೈಮರ್ ನೈಫ್ ಕಂಪೆನಿಯ  ತಯಾರಿಕೆಯ  ಒಂದು ಪುಟ್ಟ ಪಾಕೆಟ್ ನೈಫ್!

“ಇದನ್ನು ನೋಡಿ. ಇದಕ್ಕೆ  ‘ಲೈಫ್ ಟೈಮ್ ಗ್ಯಾರಂಟಿ’ ಇದೆ. ಇದನ್ನು ಹರಿತ ಗೊಳಿಸಬೇಕಾಗಿಲ್ಲ. ಇದು ಸುಮಾರು  ಹತ್ತು ದಶಕಗಳಿಂದ ಅಮೆರಿಕಾದವರಿಂದಲೇ  ನಿರ್ಮಿಸಲ್ಪಡುತ್ತಿದೆ. ಇದು ನಂಬಲರ್ಹವಾದ ಅಮೆರಿಕನ್ ಚಾಕು ಕಂಪೆನಿಯವರ ಹೆಮ್ಮೆಯ ತಯಾರಿಕೆ. ಇದನ್ನು ನಾನು  ಒಂದು ವಾರದ ಹಿಂದೆ  ಮೈಲ್ ಡೆಲಿವರಿಯ ಮೂಲಕ ತರಿಸಿಕೊಂಡೆ. ಇದರ ಬೆಲೆ ಇಪ್ಪತ್ತು ಡಾಲರ್.  ನಿಮಗೆ ಇದನ್ನು ಹತ್ತು ಡಾಲರಿಗೆ  ಕೊಡುತ್ತಾ ಇದ್ದೇನೆ. ದಯವಿಟ್ಟು ತೆಗೆದುಕೊಳ್ಳಿ! ” ಅಂದರು.

ನಾನು ಸಂಕೋಚ ಪಡುತ್ತಾ  “ಲೇಡಿ! ಇದು ನಿಮ್ಮ ಪರ್ಸನಲ್ ಐಟಮ್.  ಇದನ್ನು ತಾವು ನನಗೆ ಕೊಡುವುದಿದ್ದರೆ,  ಇದಕ್ಕೆ ಇಪ್ಪತ್ತು ಡಾಲರ್ ಕೊಟ್ಟು ಕೊಳ್ಳುತ್ತೇನೆ.  ದಯವಿಟ್ಟು ತಪ್ಪು ತಿಳಿಯ ಬೇಡಿರಿ” ಎಂದು ಹೇಳಿದೆ.

ಅದಕ್ಕೆ ಆ ಮಹಿಳೆ   “ ಯಂಗ್ ಮ್ಯಾನ್! ಇಲ್ಲಿ ನೋಡು! ಒಬ್ಬ  ದೇಶಾಭಿಮಾನಿ ಅಮೆರಿಕನ್ ಮಹಿಳೆ ಇದನ್ನು  ನಿನಗೆ ಹತ್ತು ದಾಲರಿನ  ಡಿಸ್ಕೌಂಟ್  ಕೊಟ್ಟು  ಕೊಡುತ್ತಾ ಇದ್ದಾಳೆ! ಬೇಡ  ಎನ್ನಬೇಡ. ಪ್ಲೀಸ್!” ಅಂದರು.

ಆ ಪುಟ್ಟ ಚೂರಿಯನ್ನು ನಾನು ಹತ್ತು ಡಾಲರ್ ಕೊಟ್ಟು ಕೊಂಡೆ. ಆಕೆಗೆ ಸಮಾಧಾನ ಆದಂತೆ ಕಂಡಿತು. ನನಗೂ ಒಂದು ಅಮೂಲ್ಯ ಅಮೇರಿಕನ್  ವಸ್ತು ಕೊಂಡ ಸಂತೋಷ ಅಂದು ಉಂಟಾಯಿತು. ಆಕೆ ನಿಟ್ಟುಸಿರು ಧೀರ್ಘವಾಗಿ ಬಿಡುತ್ತಾ “Young man! Nowadays, you shall find all the small little things and souvenirs being made in China. You shall find only US made babies here in USA!  However, soon after their birth, they too wear Chinese nappies!”  ಅಂದರು. ಆಕೆಯ ಮಾತು ಸರಿ ಅಂತ ನನಗೂ ಅನ್ನಿಸಿತು.

ನಾನು ಹತ್ತು ವರುಷಗಳ ನಂತರ ಇಂದಿಗೂ ಆ ಪುಟ್ಟ ಚೂರಿಯನ್ನು ಬಳಸುತ್ತಾ ಇದ್ದೇನೆ. ಅದರ ಬ್ಲೇಡನ್ನು ನಾನು  ಇದುವರೆಗೆ  ಮಸೆದು ಹರಿತ ಮಾಡಿಲ್ಲ.  ಅದನ್ನು ನಾನು ಇಂದಿಗೂ ನನ್ನ ಬಳಿ ಜಾಗ್ರತೆಯಾಗಿ  ಇರಿಸಿಕೊಂಡಿದ್ದೇನೆ.  ಅದರ ಬಾಕ್ಸ್ ಮತ್ತು ಗ್ಯಾರಂಟೀ  ಲೆಟರ್ ನನ್ನ ಬಳಿಯೇ ಇವೆ.  ಹೌದು! ಈ  ಚಾಕು ನಮ್ಮ ಅಜ್ಜನ ಕಾಲದ  ಓಲ್ಡ್ ಟೈಮರ್  ಚಾಕುವಿನಂತೆಯೇ ನಂಬಿಕೆಗೆ ಅರ್ಹವಾಗಿದೆ.

“ಲೈಪ್ ಟೈಮ್ ಗ್ಯಾರಂಟೀಡ್! ಈ ಚಾಕು  ನಿಮ್ಮ  ಮುಂದಿನ ಪೀಳಿಗೆಗೆ ಸೇರುವುದು.” ಎಂದು ಅದರ ಗ್ಯಾರಂಟೀ ಕಾರ್ಡಿನ ಮೇಲೆ ಮುದ್ರಿಸಿದ್ದಾರೆ. ಅದು ಸತ್ಯ    ಎಂದು ನನಗೆ ಅನ್ನಿಸುತ್ತಿದೆ.  ಈ ಚೂರಿ ತಯಾಯಾರಿಸಿದ    ಓಲ್ಡ್ ಟೈಮರ್  ನೈಫ್  ಕಂಪೆನಿಯವರಿಗೆ  ನಾನು  ಎಂದಿಗೂ ಆಭಾರಿ. 

http://www.amazon.com/Schrade-Timer-Bruin-Knife-Lockback/dp/B000IE3ZMS

ಆದರೂ, ಒಂದು ದುಃಖದ ಸಂಗತಿ: ಸಂಯುಕ್ತ ಸಂಸ್ಥಾನಗಳಲ್ಲಿ  ಈ ಅತ್ಯು ತ್ತಮ ಚೂರಿಗಳ  “ತಯಾರಿಕೆಯ  ಬೆಲೆ”  ಮಿತಿಮೀರಿ ಏರಿದ್ದರಿಂದ,  ಬೆಲೆ ಏರಿಕೆಯ  ಬೇಗೆ ತಾಳಲಾರದೆ  ಪ್ರಖ್ಯಾತ ಓಲ್ಡ್ ಟೈಮರ್ ನೈಫ್ ಕಂಪೆನಿಯು 2003 ರಲ್ಲಿ  ಶಾಶ್ವತವಾಗಿ  ಬಾಗಿಲು ಹಾಕಿತಂತೆ! ಈಗ ಇನ್ನಾರೋ, ಅದೇ ಬ್ರಾಂಡ್ ಹೆಸರಿನಲ್ಲಿ  ಇವೇ ಡಿಸೈನಿನ ಚೂರಿಗಳನ್ನು  ಚೈನಾದಲ್ಲಿ  ಆರ್ಡರ್ ಕೊಟ್ಟು  ತಯಾರು ಮಾಡಿಸಿ, ಅಮೆರಿಕಾದಲ್ಲಿ  ಮಾರುತ್ತಾ ಇದ್ದಾರಂತೆ. ಆದರೆ, ಈ  ನವೀನ  ಚೂರಿಗಳ ಬೆಲೆ ಯೂ  ಕಡಿಮೆ. ಹಾಗೆಯೇ! ಅವುಗಳ  ಕಾರ್ಯಕ್ಷಮತೆ, ತಾಳಿಕೆ  ಮತ್ತು ಬಾಳಿಕೆಗಳೂ ಕಡಿಮೆ.

ಇಂದಿಗೆ ಜಗದ್ವಿಖ್ಯಾತ ಓಲ್ಡ್ ಟೈಮರ್  ಚೂರಿಗಳ ಹೆಸರು ಮತ್ತು ಹಲವು  ಸ್ಯಾಂಪಲುಗಳು ಮಾತ್ರ  ಉಳಿದಿವೆ. ಇಂದು 2003ನೇ ಇಸವಿಗೆ ಮೊದಲು ತಯಾರಾದ ಓಲ್ಡ್ ಟೈಮರ್ ಚೂರಿಗಳು ಬೆಲೆಬಾಳುವ  “ಕಲೆಕ್ಟರ್ಸ್  ಐಟಮ್ಸ್” ಎಂದು ಪರಿಗಣಿಸಲ್ಪಟ್ಟಿವೆ.


ತಾಗುಲಿ :  S.M.Pejattaya, Made In USA